ಸಾವಿನ ಸುದ್ದಿಯಲ್ಲಿ ನಗಬೇಡ!

Update: 2025-04-20 08:39 IST
ಸಾವಿನ ಸುದ್ದಿಯಲ್ಲಿ ನಗಬೇಡ!
  • whatsapp icon

ಆಘಾತಕಾರಿ ಅಥವಾ ಅಸಾಮಾನ್ಯ ಘಟನೆಗಳ ಕಡೆಗೆ ಆಕರ್ಷಿತರಾಗುವುದು ಮನುಷ್ಯನ ಸಹಜ ಗುಣ. ವಾಹಿನಿಗಳು ಈ ಮನೋವಿಜ್ಞಾನವನ್ನು ಬಳಸಿಕೊಂಡೇ ಇಂತಹ ವಿಷಯಗಳನ್ನು ಮತ್ತೆ ಮತ್ತೆ ತೋರಿಸುತ್ತವೆ. ಒಟ್ಟಾರೆ, ವಾಣಿಜ್ಯ ಲಾಭ, ಸ್ಪರ್ಧೆ ಮತ್ತು ಜನರ ಗಮನ ಸೆಳೆಯುವ ಉದ್ದೇಶವೇ ಈ ರೀತಿಯ ವಿಷಯಗಳನ್ನು ಪ್ರತಿದಿನ ತೋರಿಸಲು ಮುಖ್ಯ ಕಾರಣಗಳಾಗಿವೆ. ಆದರೆ, ಇದರಿಂದ ಸಮಾಜದ ಮಾನಸಿಕ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು ಎಂಬುದನ್ನು ಪರಿಗಣಿಸದಿರುವುದು ಮಾತ್ರ ಬಹುದೊಡ್ಡ ದುರಂತ.

ಕನ್ನಡದ ಖಾಸಗಿ ಚಾನೆಲ್ ಒಂದರಲ್ಲಿ ನನಗೊಬ್ಬ ಕಿರಿಯ ಗೆಳೆಯರಿದ್ದಾರೆ. ಒಂದು ಕಾಲದ ಕವಿ, ಬಹುಮಾನಿತ ಕಥೆಗಾರ. ಕಾಲೇಜು ದಿನಗಳಲ್ಲಿ ಕನ್ನಡ ಸಂಘದ ವಿದ್ಯಾರ್ಥಿ ಸಂಘಟಕ. ಪತ್ರಿಕೋದ್ಯಮ ಪದವಿ ಮುಗಿಸಿ ಯಾವಾಗ ಟಿ.ವಿ.ಗೆ ಹೋದನೋ ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ತೀರಾ ಇತ್ತೀಚೆಗೆ ಆ ಚಾನೆಲ್‌ನಲ್ಲಿ ದಿನಕ್ಕೆ ಎರಡು ಸಲ ಕಾಣಿಸಿಕೊಳ್ಳುತ್ತಾನೆ. ಸ್ಪಷ್ಟ ಭಾಷೆ, ಒಳ್ಳೆಯ ನಿರೂಪಣೆ ಮೃದು ಮಧುರಭಾವದ ಚುರುಕಿನ ಆ ಯುವಕನ ಸ್ವರ ಎರಡು ಬಾರಿಯೂ ಇದ್ದಕ್ಕಿದ್ದಂತೆ ಕೃತಕವಾಗುತ್ತದೆ, ಕರ್ಕಶವಾಗುತ್ತದೆ. ಯಾವ ಮಗ್ಗುಲಲ್ಲಿ ನೋಡಿದರೂ ಅವನ ಮುಖದ ಮುಗ್ಧತೆಗೂ ಆ ವಿಕಾರ ಸ್ವರಕ್ಕೂ ಹೊಂದಾಣಿಕೆಯಾಗುವುದೇ ಇಲ್ಲ. ಅವನಲ್ಲ ಅನಿಸುತ್ತದೆ.

ಅರ್ಧಗಂಟೆಯ ವಾರ್ತಾವಾಚನದಲ್ಲಿ ಐದಾರು ಹೆಣಗಳ ಬಗ್ಗೆ ಮಾತನಾಡುತ್ತಾನೆ, ಹೆಂಡತಿಯನ್ನು ಗಂಡ ಸಾಯಿಸಿದ್ದು, ಅಪ್ಪನನ್ನು ಮಗ ಕೊಂದದ್ದು, ಪ್ರೇಮಿಗಳು ಊರು ಬಿಟ್ಟು ಹೋಗಿ ಎಲ್ಲೋ ಆತ್ಮಹತ್ಯೆ ಮಾಡಿಕೊಂಡದ್ದು, ಮತ್ತೊಬ್ಬ ಇನ್ಯಾರನ್ನು ಕೊಚ್ಚಿ ಕೊಚ್ಚಿ ಸಾಯಿಸಿದ್ದು ಇತ್ಯಾದಿ ವಿವರಗಳನ್ನು ಅಸಹನೀಯವಾಗುವ ರೀತಿಯಲ್ಲಿ ಘೀಳಿಟ್ಟು ನಿರ್ಗಮಿಸುತ್ತಾನೆ.

ಒಂದೆರಡು ಶಿಬಿರಗಳಲ್ಲಿ ಅವನಿಗೆ ಗ್ರಾಮೀಣ ಪತ್ರಿಕೋದ್ಯಮದ ಬಗ್ಗೆ ಪಾಠ ಮಾಡಿದ್ದೆ. ಪತ್ರಕರ್ತರು ಹಳ್ಳಿಗಳನ್ನು ನೋಡಬೇಕಾದ ಕ್ರಮ, ದಾರಿ, ಅಗತ್ಯಗಳ ಬಗ್ಗೆ ಹೇಳಿದ್ದೆ. ನಿಜವಾದ ಪತ್ರಕರ್ತರಿಗೆ ವಸ್ತುಗಳಿರುವುದು ನಗರಗಳಲ್ಲಲ್ಲ, ಹಳ್ಳಿಗಳಲ್ಲಿ. ಪತ್ರಕರ್ತರು ಹಳ್ಳಿಗಳಿಗೆ ಬರೀ ಹೆಣ ಹುಡುಕಿಕೊಂಡು ಬರುವುದಲ್ಲ ಎಂದು ಅವನ ಒಳಗಣ್ಣನ್ನು ತೆರೆದಿದ್ದೆ. ನಾನೇನು ಪತ್ರಿಕೋದ್ಯಮವನ್ನು ಶಾಸ್ತ್ರೀಯವಾಗಿ ವಿಶ್ವವಿದ್ಯಾನಿಲಯದಲ್ಲಿ ಓದಿದವನಲ್ಲ, ಆದರೂ ಪ್ರಭಾವಿತನಾಗಿ ನನ್ನಲ್ಲಿ ಲೆಕ್ಕಕ್ಕಿಂತ ಸ್ವಲ್ಪ ಜಾಸ್ತಿಯೇ ಆತ ಗೌರವವನ್ನು ಹೊಂದಿದ್ದ.ಆಗಾಗ ಫೋನಾಯಿಸಿ ಮಾತನಾಡುತ್ತಿದ್ದ.

ಇತ್ತೀಚಿನ ಒಂದು ಕೌಟುಂಬಿಕ ಕಾರ್ಯಕ್ರಮದಲ್ಲಿ ನನ್ನ ಸಮ್ಮುಖದಲ್ಲಿ ಎದುರು ಬದುರಾದರೂ ಮಾತನಾಡದೆ ತಲೆ ತಪ್ಪಿಸಿಕೊಂಡೇ ಓಡಾಡಿದ್ದ. ನಾನು ಪ್ರಯತ್ನ ಪಟ್ಟರೂ ಆತ ಸಮ್ಮುಖಕ್ಕೆ ಸಿಗಲಿಲ್ಲ. ಮುಖದಲ್ಲೂ ಹಳೆಯ ಲವಲವಿಕೆ ಇರಲಿಲ್ಲ. ವಾರ ಕಳೆದ ಮೇಲೆ ಮುಖಕ್ಕೆ ಮುಖ ಕೊಡಲಾರದ ಅವನ ಪಲಾಯನದ ಉದ್ದೇಶ ಸ್ಪಷ್ಟವಾಯಿತು. ಆ ಹುಡುಗ ನೈತಿಕವಾಗಿ ತುಂಬಾ ಕುಸಿದು ಹೋಗಿದ್ದ. ಹಾಗಂತ ಯಾರದ್ದೋ ಪರ ಸುದ್ದಿ ಪ್ರಕಟಿಸಲು ಆತ ಹಣ ಪಡೆದಿರಲಿಲ್ಲ, ಬೇರೆ ಯಾವುದೇ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿರಲಿಲ್ಲ. ಅವನ ಮನಸ್ಸಿನ ಸಂಕಟಕ್ಕೆ ಕಾರಣ ಒಂದೇ.

ತಾನು ಇರಬಾರದ ಜಾಗದಲ್ಲಿದ್ದೇನೆ, ಮತಿಕೆಟ್ಟ ಮಾಧ್ಯಮ ತನ್ನ ನೈತಿಕತೆ- ಜೀವಂತಿಕೆಯನ್ನು ದಿನಾ ನಾಶಪಡಿಸುತ್ತಿದೆ, ಇಲ್ಲಿ ಇದ್ದಷ್ಟು ದಿವಸ ತಾನು ಇಂಚು ಇಂಚಾಗಿ ಸಾಯುತ್ತಿದ್ದೇನೆ ಎಂಬ ಹತಾಶೆ ಅವನನ್ನು ಆವರಿಸಿದೆ. ತಾನಲ್ಲಿ ಪ್ರತಿದಿನ ಹೆಣ ಲೆಕ್ಕ ಮಾಡಲಿರುವವನಲ್ಲ ಎಂಬ ಸಂಕಟ ಕಳೆದ ಒಂದೆರಡು ತಿಂಗಳಿಂದ ಆತನನ್ನು ಕಾಡತೊಡಗಿದೆ. ಮಾನಸಿಕವಾಗಿ ಆತ ಕುಗ್ಗಿ ಹೋಗಿದ್ದಾನೆ. ಈ ಕಾರಣಕ್ಕಾಗಿಯೇ ಆ ಹುಡುಗ ಹಿತವಾಸಿಗಳ ಸಮ್ಮುಖದಲ್ಲಿ ನಿಂತು ಮಾತನಾಡುವ ಸ್ಥೈರ್ಯವನ್ನು ಕಳೆದುಕೊಂಡಂತಿದೆ.

ಒಂದು ಚಂದದ ಕಥೆಯನ್ನು ಹೇಳಿ ಮತ್ತೆ ಈ ಹುಡುಗನನ್ನು ಮತ್ತು ಹುಡುಗ ಪ್ರತಿನಿಧಿಸುವ ವಿಷಯವನ್ನು ಮುಂದಕ್ಕೆ ಒಯ್ಯುವೆ. ಅಮಾವಾಸ್ಯೆಯ ಮಧ್ಯರಾತ್ರಿ ದುರ್ಗಮ ಕಗ್ಗಾಡಿನ ನಡುವೆ ಒಬ್ಬರು ಕಾರು ಓಡಿಸುತ್ತಿದ್ದರಂತೆ. ಇದ್ದಕ್ಕಿದ್ದಾಗಿ ಕಾರು ನಿಂತಿತು, ಹಾಳಾಯಿತು. ದಾರಿ ದೀಪಗಳಿಲ್ಲ, ಕೈಯಲ್ಲಿ ಬೆಳಕಿಗೆ ಪರ್ಯಾಯಗಳಿಲ್ಲ, ಮೊಬೈಲ್ ಇಲ್ಲದಿರುವ ಕಾಲವದು. ಪೂರ್ವಾನುಭವದ ಹಿನ್ನೆಲೆಯಲ್ಲಿ ಒಂದಷ್ಟು ಹೊತ್ತು ಕತ್ತಲೆಯಲ್ಲಿ ಪ್ರಯತ್ನಿಸಿ ಕೊನೆಗೆ ಬಾನೆಟ್ ಎತ್ತಿ ನೋಡಿದರು. ಅವರಿಗೆ ಆ ಕ್ಷಣಕ್ಕೆ ರಿಪೇರಿಗೆಂದು ಬರೀ ಒಂದು ಹ್ಯಾಮರ್ ಬೇಕಾಗಿತ್ತು. ಕೈಯಲ್ಲಿ ಅದು ಇರಲಿಲ್ಲ. ಸುತ್ತಮುತ್ತ ಯಾವ ಮನೆಯೂ ಕಾಣಿಸಲಿಲ್ಲ. ದೂರ ಬಹುದೂರದಲ್ಲಿ ಬಯಲ ನಡುವಿನ ಒಂದು ಪುಟ್ಟ ಗುಡಿಸಲು, ಅಲ್ಲಿಂದ ಒಂದು ಮಿಣುಮಿಣುಕು ಬೆಳಕು ಕಾಣಿಸುತ್ತಿತ್ತು. ಅಲ್ಲಿ ಮನುಷ್ಯರಿರಬೇಕು, ಅಲ್ಲಿಗೆ ಹೋಗಿ ಕೇಳಿ ಒಂದು ಸುತ್ತಿಗೆ ಪಡೆದು ತರುತ್ತೇನೆ ಎಂದು ಯೋಚಿಸಿದ ಆಗುಂತಕ ಕತ್ತಲೆಗೆ ಕುರುಡಿಕೊಂಡು ಎದ್ದು ಬಿದ್ದು ಬಯಲ ದಾರಿಯಲ್ಲಿ ನಡೆಯುವಾಗ ಯೋಚಿಸಲಾರಂಭಿಸುತ್ತಾನೆ. ನಾನೀಗ ಆ ಮನೆಯ ಬಾಗಿಲು ಬಡಿಯುತ್ತೇನೆ, ಆಗ ಒಳಗಡೆಯಿಂದ ಧಡೂತಿ ಮನುಷ್ಯನೊಬ್ಬ ಬಾಗಿಲು ತೆರೆದು ಹೊರಗಡೆ ಧಾವಿಸುತ್ತಾನೆ, ನನ್ನನ್ನು ಅಸಹನೀಯವಾಗಿ ದೃಷ್ಟಿಸಿ, ಮೇಲಿಂದ ಮೇಲೆ ಪ್ರಶ್ನಿಸುತ್ತಾನೆ, ಅವ ಕೇಳಬಹುದಾದ ಪ್ರಶ್ನೆಗಳಿಗೆ ನಾನು ಹೀಗೆಯೇ ಉತ್ತರಿಸಬೇಕೆಂದು ಯೋಚಿಸುತ್ತಾ ಆ ಆಗುಂತಕ ಮನೆ ಮುಂದೆ ನಿಂತು ಟಕ ಟಕ ಎಂದು ಬಾಗಿಲು ಬಡಿಯುತ್ತಾನೆ.

ಹತ್ತಾರು ಸಲ ಬಾಗಿಲು ಬಡಿದಾಗ ಒಳಗಡೆಯಿಂದ ಸಾಯಲು ಬಿದ್ದ ಸಣಕಲು ದೇಹದ ಮುದುಕನೊಬ್ಬ ಕೆಮ್ಮುತ್ತಾ ಕ್ಯಾಕರಿಸುತ್ತಾ ಎದ್ದು ನೆಟ್ಟಗೆ ನಿಲ್ಲಲಾರದ ಸ್ಥಿತಿಯಲ್ಲಿ ಬಾಗಿಲು ತೆರೆಯುತ್ತಾನೆ. ಏನೂ ಮಾತನಾಡದೆ ನಿಂತ ಆ ಅಜ್ಜನನ್ನು ನೋಡಿ ಇದ್ದಕ್ಕಿದ್ದನಂತೆ ಈ ಆಗುಂತಕ ನಿನ್ನ ಹ್ಯಾಮರ್ ಯಾರಿಗೆ ಬೇಕು? ಅದು ಚಿನ್ನದ್ದೋ? ಬೆಳ್ಳಿಯದ್ದೋ ಎಂದು ಪ್ರಶ್ನಿಸಲು ಆರಂಭಿಸುತ್ತಾನೆ.

ಯಾವ ಪ್ರಶ್ನೆಯನ್ನು ಕೇಳದ ಸಹಾಯಕ್ಕೆ ನಿಲ್ಲಬಹುದಾಗಿದ್ದ ಮುದುಕನನ್ನು ತಾರಾಮಾರ ಸಿಟ್ಟಿನಿಂದ ಕೆಣಕುವ ಹಾಗೆ ಪ್ರಶ್ನಿಸಲಾರಾಂಭಿಸುತ್ತಾನೆ. ಈಗ ನೀವು ಯೋಚಿಸಬೇಕು. ಆ ದಾರಿಯಲ್ಲಿ ನಡೆಯುತ್ತಾ ನಡೆಯುತ್ತಾ ಋಣಾತ್ಮಕವಾಗಿ ಯೋಚಿಸುತ್ತಾ ಆಗುಂತಕನ ಮನಸ್ಥಿತಿ- ಭಾವಾಂಶ ಯಾಕೆ ಬದಲಾಯಿತು ಎಂಬುದನ್ನು. ಕೆಟ್ಟದ್ದನ್ನೇ ಯೋಚನೆ ಮಾಡಿದರೆ, ಕೆಟ್ಟದ್ದನ್ನೇ ನೋಡಿದರೆ, ಕೆಟ್ಟದ್ದನ್ನೇ ಕೇಳಿದರೆ ಮನಸ್ಸು ಏನಾಗಬಹುದು ಅದೇ ಈಗ ಆಗಲಾರಂಭಿಸಿದೆ ಎನ್ನುವ ಸತ್ಯ ಈ ಕಥೆಯದು. ಭಾಗಶಃ ನಮ್ಮ ಮನಸ್ಸನ್ನು ಈ ಹಂತಕ್ಕೆ ತಂದಿಟ್ಟ ಅಪಕೀರ್ತಿಯ ಸಾಧ್ಯತೆ ನಾವು ನಿತ್ಯ ಅವಲಂಬಿಸಿರುವ ಮಾಧ್ಯಮಗಳದ್ದು. ಆದರೆ ಈ ಬಾರಿ ಸಮಸ್ಯೆ ಅಂಟಿದ್ದು ಬರೀ ಟಿ.ವಿ. ನೋಡುಗನಿಗಷ್ಟೇ ಅಲ್ಲ, ಅದನ್ನು ಹೇಳುವವನಿಗೂ!

ಮೊನ್ನೆ ಮೊನ್ನೆ ಲೋಹಿಯಾ ಪ್ರಕಾಶನದ ಹಿರಿಯರಾದ ಚನ್ನಬಸವಣ್ಣ ಅವರಿಗೆ ಒಂದು ಮೆಸೇಜ್ ಕಳಿಸಬೇಕಾಗಿತ್ತು, ‘‘ಸರ್ ನಿಮ್ಮಲ್ಲಿ ವಾಟ್ಸ್‌ಆ್ಯಪ್ ಇಲ್ವಾ’’ ಎಂದೆ. ‘‘ಇಲ್ಲ ಇಲ್ಲ ನಾನದನ್ನು ಬಳಸೋದೇ ಇಲ್ಲ’’ ಎಂದಾಗ, ‘‘ಒಳ್ಳೆ ಕೆಲಸ ಅಷ್ಟರಮಟ್ಟಿಗೆ ನೀವು ಕ್ಷೇಮ ಸುರಕ್ಷಿತ’’ ಎಂದೆ. ಬಳಸದೆ ಇರುವುದು ಬಹಳ ಒಳ್ಳೆಯದು ಎಂದಾಗ ಅವರು ಹೇಳಿದ ಉತ್ತರವಿದು. ‘‘ನಿಮ್ಮ ಹಾಗೆಯೇ ಹೇಳುವವರು ದಿನಕ್ಕೆ ಹತ್ತು ಮಂದಿ ಸಿಗುತ್ತಾರೆ ಆದರೆ ನಿಜವಾಗಿ ಬಳಸದಿರುವವರು ಒಬ್ಬರೂ ಇಲ್ಲ, ಹೇಳುವವರು ಆಚರಿಸುವುದಿಲ್ಲ ಅದೇ ಸಮಸ್ಯೆ’’ ಎಂದರು ಅಣ್ಣ.

ಹೌದಲ್ಲ ನಾವು ಎಷ್ಟು ಮಂದಿ ಮಾಧ್ಯಮಗಳ ಅನಗತ್ಯ ಅನವಶ್ಯಕ ಭಾಗಗಳಿಗೆ ಮುಖ ಕೊಟ್ಟು ನೆಮ್ಮದಿಯ ಬದುಕನ್ನು ಕಟ್ಟಿಕೊಂಡಿದ್ದೇವೆ? ಕಿವಿ ಇದ್ದು ಕಿವುಡರಾಗುವ, ಬಾಯಿಯಿದ್ದೂ ಮೂಗರಾಗುವ ಪರಿಸ್ಥಿತಿ ದಿನೇ ದಿನೇ ನಮ್ಮನ್ನು ಆವರಿಸುತ್ತಿದೆ. ಭೀಕರ ಅಪಘಾತದಲ್ಲಿ ಆಗ ತಾನೇ ಸತ್ತು ಹೋದ ಗಂಡ, ಅಪ್ಪ ಮಗನ ಹೆಣದ ಪಕ್ಕದಲ್ಲಿ ಅಳುವ ಪತ್ನಿಯ ತಾಯಿಯ, ಮಗಳ ಮುಖದ ಹತ್ತಿರ ಕ್ಯಾಮರಾ ಇಡುವ ಕ್ರೂರತೆ ನಮ್ಮ ಮಾಧ್ಯಮಗಳಿಗೆ ಹೇಗೆ ಸಾಧ್ಯವಾಗುತ್ತದೆ ಎನ್ನುವುದು ನನಗಿನ್ನೂ ಅರ್ಥವಾಗಿಲ್ಲ, ಅದೇ ತಾಯಿ, ಅದೇ ಪತ್ನಿ, ಅದೇ ತಂಗಿ ತನ್ನವರೂ ಕೂಡ ಆಗಿದ್ದರೆ ಈ ದೃಶ್ಯವನ್ನು ಅರಗಿಸಿಕೊಳ್ಳುವುದಕ್ಕೆ ಅವನಿಗೆ ಸಾಧ್ಯವಾ ಎನ್ನುವ ಪ್ರಶ್ನೆಯನ್ನು ನಾವು ಕೇಳಬೇಕು.

ಮಧ್ಯಾಹ್ನದ ಉಚಿತ ಬಿಸಿಯೂಟ ಉಂಡು ಅಸ್ವಸ್ಥಗೊಂಡ ನಾಲ್ಕೈದು ಮಕ್ಕಳು ಮಲಗಿರುವ ಬೆಡ್ಡಿಗೆ ಕ್ಯಾಮರಾ ಇಡುವ ಅದೇ ವಾಹಿನಿಗಳು ಹಳ್ಳಿಯಲ್ಲಿ ಬಿಸಿಯೂಟ ಮೊಟ್ಟೆ ಉಣ್ಣುವ ಬಡಪಾಯಿ ಗ್ರಾಮೀಣ ಮಕ್ಕಳ ದೈಹಿಕ ಆರೋಗ್ಯ ಸುಧಾರಣೆಯ ಬಗ್ಗೆ ವಿಶೇಷ ಕಾರ್ಯಕ್ರಮ ಮಾಡಿದ್ದನ್ನು ನಾನು ಈವರೆಗೆ ನೋಡೇ ಇಲ್ಲ. ಸರಕಾರಿ ಬಸ್ಸಿನ ಉಚಿತ ಪ್ರಯಾಣ ಯೋಜನೆಯಲ್ಲಿ ಪತ್ನಿಯೊಬ್ಬಳು ಬಸ್ಸು ಹತ್ತಿ ದಿನಾ ತೀರ್ಥ ಯಾತ್ರೆ ಮಾಡುತ್ತಾಳೆ ಎಂದು ಕೊರಗುವ ಗಂಡನ ಪರ ನಿಂತು ಕೊರೆಯುವ ವಾಹಿನಿಗಳು ಆ ಯೋಜನೆಯಿಂದ ಗ್ರಾಮೀಣ ಕೂಲಿಕಾರ ಹೆಣ್ಮಕ್ಕಳಿಗೆ ಆಗಿರುವ ಪ್ರಯೋಜನದ ಪಟ್ಟಿ ಈವರೆಗೆ ಮಾಡಲೇ ಇಲ್ಲ.

ದಿನಾ ಇಂಥ ಅಸತ್ಯ, ಅಸಹಜ, ಕ್ರೂರತೆ, ಅಸಹನೀಯ, ಅನಗತ್ಯ, ಅಮಾನವೀಯತೆ, ಅಪಥ್ಯದ ಸಂಗತಿಗಳೊಂದಿಗೇ ಒಳಗೊಳ್ಳುವುದು, ಮಾತನಾಡುವುದರಿಂದ ಅದು ತನ್ನೊಳಗೆ ಮತ್ತು ಸಮಾಜದ ಮೇಲೆ ಬೀರಬಹುದಾದ ಮಾನಸಿಕ ಪರಿಣಾಮದ ಬಗ್ಗೆ ಆ ವರದಿಗಾರನಿಗೂ ಗೊತ್ತಿದೆ, ಅದಕ್ಕೆ ಅಕ್ಷರ ನುಡಿರೂಪ ಕೊಡುವ ಸಹಸಂಪಾದಕನಿಗೆ, ಅದನ್ನೇ ಓದುವ ವಾಚಕನಿಗೆ, ಇವರನ್ನೆಲ್ಲ ನಿರ್ದೇಶಿಸುವ ಸಂಪಾದಕನಿಗೆ.. ಎಲ್ಲರಿಗೂ ಗೊತ್ತಿದೆ. ಆದರೆ ಆ ರೂಕ್ಷ ಮಾನಸಿಕತೆಗಿಂತ ಅವನ ಕುಟುಂಬ ಕಾಯುವ ಆದಾಯ ಆರ್ಥಿಕತೆ ಅವನಿಗೆ ಮುಖ್ಯವಾಗುತ್ತದೆ. ಇಂತಹ ಕಡೆಯಿಂದ ಕಳಚಿಕೊಳ್ಳಲಾಗದ, ಈ ಸ್ಥಿತಿಯನ್ನು ಸಮತೋಲನಕ್ಕೆ ತರಲಾಗದ ಗೊಂದಲದಲ್ಲಿ ವ್ಯಾಕುಲತೆ ಅಸ್ಥಿರತೆ ಕಾಡುತ್ತದೆ.

ಪ್ರತಿದಿನ ಆತ ಉಣ್ಣುವ ಅನ್ನ ಹುಟ್ಟಬೇಕಾದರೆ ದಿನಾ ಈ ರೀತಿ ರಕ್ತ ಹೆಣಗಳ ಜೊತೆಗೆ ಮಾತನಾಡಲೇ ಬೇಕಾಗುತ್ತದೆ.ಉರಿಯುವ ಮನೆಯ ಚಿತ್ರ ತೆಗೆಯುವ ಮುಂಚೆ ಒಂದು ಚೆಂಬು ನೀರು ಹಾಕುವ ಮನೋಪ್ರವೃತ್ತಿ ಬೆಳೆಸಿಕೊಳ್ಳಬೇಕು ಎನ್ನುವ ಚಿತ್ತ ಎಲ್ಲರದ್ದೂ ಹೌದು.

ಎಷ್ಟೋ ಬಾರಿ ಇಂತಹ ಘಟನೆಗಳು ತೀವ್ರ ಭಾವನಾತ್ಮಕವಾಗಿರುವುದರಿಂದ, ಜನರ ಕುತೂಹಲ ಮತ್ತು ಗಮನವನ್ನು ಸುಲಭವಾಗಿ ಸೆಳೆಯುತ್ತವೆ. ಇದು ವಾಹಿನಿಗಳ ಟಿಆರ್‌ಪಿ (ಟೆಲಿವಿಷನ್ ರೇಟಿಂಗ್ ಪಾಯಿಂಟ್) ಹೆಚ್ಚಿಸಲು ಸಹಾಯ ಮಾಡುತ್ತದೆ. ಋಣಾತ್ಮಕ ಘಟನೆಗಳೇ ನಮ್ಮಲ್ಲಿ ಸಾಮಾನ್ಯವಾಗಿ ತುರ್ತು ಮತ್ತು ಪ್ರಾಮುಖ್ಯತೆಯ ಸುದ್ದಿಯಾಗಿ ಪರಿಗಣಿಸಲ್ಪಡುತ್ತವೆ. ಇವು ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ, ವಾಹಿನಿಗಳು ಇವುಗಳನ್ನು ಒತ್ತಿ ಒತ್ತಿ ತೋರಿಸುತ್ತವೆ.

ತೀವ್ರ ಸ್ಪರ್ಧಾತ್ಮಕ ಮಾಧ್ಯಮ ಜಗತ್ತಿನಲ್ಲಿ, ಪ್ರತೀ ವಾಹಿನಿಯು ಇತರರಿಗಿಂತ ಮೊದಲು ಸುದ್ದಿಯನ್ನು ತಲುಪಿಸಲು ಒತ್ತಡವನ್ನು ಎದುರಿಸುತ್ತವೆ. ಇಂತಹ ಸಂವೇದನಾಶೀಲ ವಿಷಯಗಳು ತ್ವರಿತವಾಗಿ ಜನರ ಗಮನ ಸೆಳೆಯುವುದರಿಂದ, ಅವುಗಳನ್ನೇ ಆಗಾಗ ತೋರಿಸಲಾಗುತ್ತದೆ. ಜಾಹೀರಾತುದಾರರಿಂದಲೇ ಆದಾಯವನ್ನು ಅವಲಂಬಿಸಿರುವ ವಾಹಿನಿಗಳು ಹೆಚ್ಚಿನ ವೀಕ್ಷಕರನ್ನು ಸೆಳೆಯಲು ಇಂತಹ ರೋಚಕ ಮತ್ತು ಭಾವನಾತ್ಮಕ ವಿಷಯಗಳನ್ನು ಆಯ್ಕೆ ಮಾಡುತ್ತವೆ. ಕೆಲವು ವಾಹಿನಿಗಳು ಈ ಘಟನೆಗಳನ್ನು ತೋರಿಸುವುದರ ಮೂಲಕ ಸಮಾಜದಲ್ಲಿ ಜಾಗೃತಿ, ಅರಿವು ಮೂಡಿಸಲು ಪ್ರಯತ್ನಿಸುತ್ತೇವೆ ಎಂದು ವಾದಿಸಬಹುದು. ಆದರೆ, ಇದನ್ನು ಸೂಕ್ಷ್ಮವಾಗಿ ವಿಜೃಂಭಿಸದೆ, ವೈಭವೀಕರಿಸದೆ ಜವಾಬ್ದಾರಿಯಿಂದ ಮಾಡದಿದ್ದರೆ, ಇದು ಮತ್ತೆ ಮತ್ತೆ ಭಯ ಮತ್ತು ಆತಂಕವನ್ನೇ ಹೆಚ್ಚಿಸಬಹುದು. ಆಘಾತಕಾರಿ ಅಥವಾ ಅಸಾಮಾನ್ಯ ಘಟನೆಗಳ ಕಡೆಗೆ ಆಕರ್ಷಿತರಾಗುವುದು ಮನುಷ್ಯನ ಸಹಜ ಗುಣ. ವಾಹಿನಿಗಳು ಈ ಮನೋವಿಜ್ಞಾನವನ್ನು ಬಳಸಿಕೊಂಡೇ ಇಂತಹ ವಿಷಯಗಳನ್ನು ಮತ್ತೆ ಮತ್ತೆ ತೋರಿಸುತ್ತವೆ. ಒಟ್ಟಾರೆ, ವಾಣಿಜ್ಯ ಲಾಭ, ಸ್ಪರ್ಧೆ ಮತ್ತು ಜನರ ಗಮನ ಸೆಳೆಯುವ ಉದ್ದೇಶವೇ ಈ ರೀತಿಯ ವಿಷಯಗಳನ್ನು ಪ್ರತಿದಿನ ತೋರಿಸಲು ಮುಖ್ಯ ಕಾರಣಗಳಾಗಿವೆ. ಆದರೆ, ಇದರಿಂದ ಸಮಾಜದ ಮಾನಸಿಕ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು ಎಂಬುದನ್ನು ಪರಿಗಣಿಸದಿರುವುದು ಮಾತ್ರ ಬಹುದೊಡ್ಡ ದುರಂತ. ಹಾಗಂತ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗಬಾರದು, ಪ್ರಗತಿಗಾಮಿ ಜೀವಪರ ನಿಲುವಿನ ಎಷ್ಟೋ ಚಾನೆಲ್‌ಗಳು, ಸಂಪಾದಕ-ವರದಿಗಾರರು ಇನ್ನೂ ಇದ್ದಾರೆ ಎಂಬುವುದು, ಅಷ್ಟರಮಟ್ಟಿಗೆ ಕನ್ನಡದಲ್ಲಿ ಸಾಂಸ್ಕೃತಿಕ ಜೀವಂತಿಕೆ ಇದೆ ಎನ್ನುವುದು ಅಭಿಮಾನದ ಸಂಗತಿ.

ಇತ್ತೀಚೆಗೆ ಮಾಧ್ಯಮಕ್ಕೆ ಸಂಬಂಧಿಸಿದ ರಾಷ್ಟ್ರೀಯ ವಿಚಾರಗೋಷ್ಠಿಯೊಂದದರಲ್ಲಿ ಭಾಗವಹಿಸಿದ್ದ ಕನ್ನಡ ವಾಹಿನಿಯ ಸಂಪಾದಕರೊಬ್ಬರನ್ನು ವಿದ್ಯಾರ್ಥಿಯೊಬ್ಬ ಪ್ರಶ್ನಿಸಿದ್ದ. ‘‘ಇವೆಲ್ಲವನ್ನು ನಿಯಂತ್ರಿಸುವುದು ಹೇಗೆ?’’-ಎಂಬ ಅವನ ಸಜ್ಜನ ಪ್ರಶ್ನೆಗೆ ಆ ಸಂಪಾದಕರು ಕೊಟ್ಟ ಉತ್ತರ ತುಂಬಾ ಕಳಪೆಯೂ, ಬೇಜವಾಬ್ದಾರಿದ್ದೂ ಆಗಿತ್ತು.‘‘ನಿಮ್ಮ ಕೈಯಲ್ಲಿ ರಿಮೋಟ್ ಇಲ್ಲವೇ, ನಿಮ್ಮ ಟಿವಿಯಲ್ಲಿ ಚಂದನ ಚಾನೆಲ್ ಇಲ್ಲವೇ- ಅದನ್ನೇ ಹಾಕಿ’’ ಎಂದು. ಅಂಗೈಯಲ್ಲಿ ಇರುವ ನವಮಾಧ್ಯಮಗಳಲ್ಲಿ ಕ್ಷಣ ಕ್ಷಣದ ಸುದ್ದಿ, ಬೆಳವಣಿಗೆಗಳು ಲಭ್ಯವಾಗುವ ಈ ದಿನಮಾನದಲ್ಲಿ ಬರೀ ಒಂದು ಚಾನೆಲ್‌ನ್ನು ಬದಲಾಯಿಸುವುದಲ್ಲ, ಬದ್ಧತೆ ಸತ್ಯಕ್ಕೆ ಹತ್ತಿರವಿಲ್ಲದ ಕೆಲವು ಖಾಸಗಿ ವಾರ್ತಾವಾಹಿನಿಗಳನ್ನು ಇಲ್ಲಿಯ ಜನ ಧಿಕ್ಕರಿಸುವ ದಿನ ಬಹಳ ದೂರವಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ನರೇಂದ್ರ ರೈ ದೇರ್ಲ

contributor

Similar News

ಹೊಣೆಗಾರಿಕೆ