ಚುನಾವಣೆ: ಭ್ರಷ್ಟಾಚಾರ, ಜಾತೀಯತೆ ಇತ್ಯಾದಿ...

ಇತ್ತೀಚಿನ ದಶಕಗಳಲ್ಲಿ ಸಂಸತ್ ಮತ್ತು ವಿಧಾನ ಮಂಡಲಗಳಿಗೆ ಸೇವಾ ಮನೋಭಾವದ ಸಾಮಾಜಿಕ ಕಾರ್ಯಕರ್ತರು, ಹೆಚ್ಚು ಓದಿದ ವಿದ್ಯಾವಂತರು ಮತ್ತು ಪ್ರಾಮಾಣಿಕರು ಆಯ್ಕೆಯಾಗುತ್ತಿಲ್ಲ. ಹಣಬಲ, ಜಾತಿಬಲ ಮತ್ತು ಧರ್ಮ ಬಲ ಇರುವ ಧರ್ಮಾಂಧರು ಆಯ್ಕೆಯಾಗುತ್ತಿದ್ದಾರೆ. ಗೆದ್ದ ಮೇಲೆ ಹಣ ಮಾಡುವುದು, ಸಮಾಜದ ಸ್ವಾಸ್ಥ್ಯ ಕೆಡಿಸುವುದು ಅವರ ನಿತ್ಯ ಕಾಯಕವಾಗಿದೆ. ಬಿಜೆಪಿಯೂ ಸೇರಿದಂತೆ ಯಾವ ಪಕ್ಷವೂ ಸಂಖ್ಯಾಬಲ ಇಲ್ಲದ ಅತ್ಯಲ್ಪ ಸಮುದಾಯದವರಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಳ್ಳುವ ಬದ್ಧತೆ ತೋರುತ್ತಿಲ್ಲ. ಹಣಬಲ, ಜಾತಿಬಲ ಪ್ರಜಾಪ್ರಭುತ್ವವನ್ನು ನಿಯಂತ್ರಿಸುವ ಪ್ರಬಲ ಅಸ್ತ್ರಗಳಾಗಿವೆ. ಚುನಾವಣಾ ಭ್ರಷ್ಟಾಚಾರ, ಜಾತೀಯತೆಗೆ ಕಡಿವಾಣ ಬೀಳಬೇಕು.

Update: 2024-03-09 04:52 GMT

ಭಾರತ ದೇಶವು ಸಂಸದೀಯ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿದೆ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ನಿರ್ಣಯ ಅರಿಯಲು ಚುನಾವಣೆ ನಡೆಸುವುದು ಅನಿವಾರ್ಯ. ಭಾರತದಲ್ಲಿ ೧೯೫೨ರಿಂದ ಲೋಕಸಭೆ, ವಿಧಾನಸಭೆ, ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳನ್ನು ನಡೆಸುತ್ತಾ ಬರಲಾಗಿದೆ. ಆರಂಭದ ಎರಡು ಮೂರು ದಶಕಗಳ ವರೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಪ್ರಾಬಲ್ಯ ಹೊಂದಿತ್ತು. ಸಮಾಜವಾದಿಗಳು, ಕಮ್ಯುನಿಸ್ಟರು ಸೇರಿದಂತೆ ಹಲವಾರು ಪಕ್ಷಗಳು ಮತ್ತವರ ಉಮೇದುವಾರರು ಚುನಾವಣಾ ಕಣದಲ್ಲಿ ಇರುತ್ತಿದ್ದರಾದರೂ ಗೆಲುವು ಮತ್ತು ಅಧಿಕಾರ ಕಾಂಗ್ರೆಸ್ ಅಭ್ಯರ್ಥಿಗಳಿಗೆ ನಿಶ್ಚಿತವಾಗಿತ್ತು.ವ್ಯಕ್ತಿಗತ ವರ್ಚಸ್ಸಿನಿಂದ ಕೆಲವರು ಗೆಲ್ಲುತ್ತಿದ್ದರು. ಆದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿ ಗೆಲ್ಲುವುದು ಕಷ್ಟ ಎಂಬ ಮನೋಭಾವ ಎಲ್ಲೆಡೆ ಸ್ಥಾಪಿತವಾಗಿತ್ತು. ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿ ಬಹುತೇಕ ಮತಕ್ಷೇತ್ರಗಳಲ್ಲಿ ಮೇಲ್ಜಾತಿಯವರಿಗೆ ಟಿಕೆಟ್ ನೀಡುತ್ತಿದ್ದರು. ಅವರು ಶ್ರಮವಿಲ್ಲದೆ, ಹಣ ಖರ್ಚು ಮಾಡದೆ ಗೆಲುವು ಸಾಧಿಸುತ್ತಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ, ಮೇಲ್ಜಾತಿಯ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದ ಮುಸ್ಲಿಮ್ ಮತ್ತು ಹಿಂದುಳಿದ ಸಮುದಾಯಗಳ ನಾಯಕರು ಚುನಾವಣಾ ರಾಜಕೀಯದಲ್ಲಿ ಯಶಸ್ಸು ಗಳಿಸುತ್ತಿದ್ದರು. ಎಪ್ಪತ್ತರ ದಶಕದವರೆಗೆ ಜಾತಿಬಲವಿಲ್ಲದ ಸಮುದಾಯದವರು ರಾಜಕೀಯ ಪ್ರಾತಿನಿಧ್ಯ ಪಡೆದದ್ದು ವಿರಳ.

ಕರ್ನಾಟಕದಲ್ಲಿ ೧೯೭೨ರ ಚುನಾವಣೆಯಲ್ಲಿ ದೇವರಾಜ ಅರಸು ಅವರು ಮೊದಲ ಬಾರಿಗೆ ಚುನಾವಣಾ ರಾಜಕಾರಣದಲ್ಲಿನ ಜಾತಿ ಪ್ರಾಬಲ್ಯ ಮುರಿದರು. ಹಣಬಲ, ಜಾತಿ ಬಲ ಇಲ್ಲದ ಕೇವಲ ವಿದ್ಯಾಬಲ ಮತ್ತು ಸಂಘಟನಾ ಸಾಮರ್ಥ್ಯ ಇರುವ ಯುವಕರಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡರು. ಅರಸು ಕೃಪೆಯಿಂದ ಟಿಕೆಟ್ ಪಡೆದು ರಾಜಕಾರಣದಲ್ಲಿ ನೆಲೆ ನಿಂತ ಬಂಗಾರಪ್ಪ, ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್ ಮುಂತಾದವರು ಎತ್ತರಕ್ಕೆ ಬೆಳೆದರು. ಬಂಗಾರಪ್ಪ ಹೊರತುಪಡಿಸಿ ಉಳಿದವರು ಅರಸು ಮಾದರಿ ರಾಜಕಾರಣ ಮಾಡಲೇ ಇಲ್ಲ. ತಮ್ಮ ಕುರ್ಚಿ ಭದ್ರಪಡಿಸಿಕೊಳ್ಳುವತ್ತ ಗಮನ ಕೇಂದ್ರೀಕರಿಸಿದರು. ೮೦ರ ದಶಕದ ಹೊತ್ತಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಜೋರಾಗಿದ್ದರಿಂದ ಸಮಾಜವಾದಿ ಕಮ್ಯುನಿಸ್ಟ್ ವೇಷದಲ್ಲಿ ಮೇಲುಜಾತಿಯ ಹಲವು ಯುವಕರು ಚುನಾವಣಾ ರಾಜಕಾರಣಕ್ಕೆ ಧುಮುಕಿ ಯಶಸ್ವಿಯಾದರು. ಜನತಾ ಪರಿವಾರದ ಹಿರಿಯ ಮುಖಂಡ ರಾಮಕೃಷ್ಣ ಹೆಗಡೆಯವರು ಅರಸು ಮಾದರಿಯಲ್ಲೇ ಯುವ ಪಡೆ ಕಟ್ಟಿದರು. ಆದರೆ ಅದು ಮೇಲುಜಾತಿಯ ಯುವಕರಿಗೆ ಹೆಚ್ಚು ಅವಕಾಶ ನೀಡಿತ್ತು. ಲಿಂಗಾಯತ ಮತ್ತು ಒಕ್ಕಲಿಗ ಮೇಲುಸ್ತುವಾರಿಯ ದಲಿತ, ಹಿಂದುಳಿದ ಮತ್ತು ಮುಸ್ಲಿಮ್ ಸಮುದಾಯದ ಹಲವರು ಮುಂಚೂಣಿಗೆ ಬಂದರು. ಅರಸು ಬೆಳೆಸಿದ ಕೆಲವರು ಮುಂದುವರಿದರು. ಆದರೆ ಅರಸು ಮಾದರಿಯ ಜಾತಿಬಲ ಇಲ್ಲದವರ ಪಡೆಗೆ ಯಾರೂ ಬಲ ನೀಡಲಿಲ್ಲ. ಈ ಹೊತ್ತಿನ ರಾಜಕಾರಣದಲ್ಲಿ ಜನತಾ ಪರಿವಾರದ ಪಳಿಯುಳಿಕೆಗಳೇ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ನಲ್ಲಿ ಕ್ರಿಯಾಶೀಲವಾಗಿದ್ದಾರೆ. ಜಾತಿ ಬಲದೊಂದಿಗೆ ಹಣಬಲ ಚುನಾವಣಾ ರಾಜಕಾರಣದ ಮೊದಲ ಆದ್ಯತೆಯಾಗಿದೆ.

೧೯೮೩, ೧೯೮೫ರಲ್ಲಿ ಕಾಂಗ್ರೆಸ್ ವಿರೋಧಿ ಅಲೆಯಲ್ಲಿ ಮೇಲು ಜಾತಿಯ ಹಲವರು ಹೊಸದಾಗಿ ರಾಜಕಾರಣಕ್ಕೆ ಸೇರ್ಪಡೆಯಾದರು. ಅಷ್ಟು ಮಾತ್ರವಲ್ಲ ಕೆಲವರು ಮುಖ್ಯಮಂತ್ರಿ ಹುದ್ದೆಗೇರಿದರು. ಅರಸು ಕಾಲದ ಬಂಗಾರಪ್ಪ, ವೀರಪ್ಪ ಮೊಯ್ಲಿ, ಧರಂಸಿಂಗ್ರಂತಹ ಹಿಂದುಳಿದ ಸಮುದಾಯದ ನಾಯಕರು ಮುಖ್ಯಮಂತ್ರಿಯಾದರು. ಆದರೆ ಅದೇ ಬ್ಯಾಚ್ನ ದಲಿತ ಸಮುದಾಯದವರು ಮುಖ್ಯಮಂತ್ರಿ ಆಗಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಿರಿತನ ಮತ್ತು ಅರ್ಹತೆ ಇದ್ದಾಗಲೂ ಅವರು ಸಿಎಂ ಹುದ್ದೆಗೆ ಏರಲಿಲ್ಲ. ಇದು ಬಸವನಾಡಿನ ಬಹು ದೊಡ್ಡ ಸಾಮಾಜಿಕ ವ್ಯಂಗ್ಯ. ೧೯೮೯ರಲ್ಲಿ ವೀರೇಂದ್ರ ಪಾಟೀಲ್ ನೇತೃತ್ವದ ಕಾಂಗ್ರೆಸ್ ಬಂಪರ್ ಬೆಳೆ ತೆಗೆಯಿತು. ಆ ಚುನಾವಣೆಯಲ್ಲಿ ೧೭೮ ಶಾಸಕರು ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದರು. ಮಾತ್ರವಲ್ಲ, ಹಣಬಲ, ಜಾತಿಬಲ ಇಲ್ಲದ ಹೊಸಬರು ಕಾಂಗ್ರೆಸ್ ನಾಮಬಲದಿಂದ ಶಾಸಕರಾಗಿದ್ದರು. ಪೂರ್ಣ ಪ್ರಮಾಣದ ಕಾಂಗ್ರೆಸ್ ಕಾರ್ಯಕರ್ತರು ಶಾಸಕರಾಗಿದ್ದರು. ಮುಸ್ಲಿಮ್, ಹಿಂದುಳಿದ ಸಮುದಾಯದ ಹೆಚ್ಚು ಶಾಸಕರು ಆ ಚುನಾವಣೆಯಲ್ಲಿ ಗೆದ್ದಿದ್ದರು. ನಂತರದ ಚುನಾವಣೆಗಳಲ್ಲಿ ಗೆದ್ದವರೇ ಗೆಲ್ಲತೊಡಗಿದರು. ಹೊಸಬರೆಂದರೆ; ಮಗ, ಅಳಿಯ, ಅಣ್ಣ-ತಮ್ಮ ಮಾನದಂಡದ ಮೇಲೆ ಟಿಕೆಟ್ ನೀಡುವ ಪರಿಪಾಠ ಜಾಸ್ತಿಯಾಯಿತು. ಈ ಮಾತು ಕಾಂಗ್ರೆಸ್ಗೆ ಮಾತ್ರವಲ್ಲ ಎಲ್ಲಾ ಪಕ್ಷಗಳಿಗೂ ಅನ್ವಯಿಸುತ್ತದೆ. ೭೦-೮೦ರ ದಶಕದಲ್ಲಿ ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಗೂಂಡಾ ಸಂಸ್ಕೃತಿ ವಿರುದ್ಧ ಸಿಡಿದೆದ್ದ ಬಹುಪಾಲು ಜನತಾ ಪರಿವಾರದ ನಾಯಕರು ಈಗ ಎಲ್ಲವೂ ಅವರೇ ಆಗಿದ್ದಾರೆ. ಲಾಲು ಪ್ರಸಾದ್ ಯಾದವ್, ಮುಲಾಯಂಸಿಂಗ್ ಯಾದವ್, ದಕ್ಷಿಣದ ಕರುಣಾನಿಧಿ, ದೇವೇಗೌಡ ಕುಟುಂಬ ಕಾಂಗ್ರೆಸ್ ಪಕ್ಷದ ಎಲ್ಲಾ ಅತಿರೇಕಗಳನ್ನು ಮೀರಿ ನಿಂತಿದ್ದಾರೆ.

ಕರ್ನಾಟಕದಲ್ಲಿ ೧೯೯೯ರ ಸಾರ್ವತ್ರಿಕ ಚುನಾವಣೆಯವರೆಗೂ ಹಣಬಲದ ಪ್ರಭಾವ ಅಷ್ಟಾಗಿರಲಿಲ್ಲ. ಟಿಕೆಟ್ ನೀಡುವಾಗ ಪಕ್ಷದ ಕಾರ್ಯಕರ್ತರಿಗೇ ಮೊದಲ ಆದ್ಯತೆ ನೀಡುತ್ತಿದ್ದರು. ಜಾತಿಯನ್ನು ಗೆಲುವಿನ ಮಾನದಂಡವನ್ನಾಗಿ ಪರಿಗಣಿಸಿದರೂ, ಸಾಮಾಜಿಕ ನ್ಯಾಯದ ಕಾರಣಕ್ಕೆ ಮುಸ್ಲಿಮರು, ಹಿಂದುಳಿದವರಿಗೆ ಅವಕಾಶ ಕಲ್ಪಿಸುತ್ತಿದ್ದರು. ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ಪ್ರವರ್ಧಮಾನಕ್ಕೆ ಬರತೊಡಗಿದಂತೆ ಕಾಂಗ್ರೆಸ್ ಪಕ್ಷವೂ ಸೇರಿದಂತೆ ಎಲ್ಲ ಪಕ್ಷಗಳು ಮುಸ್ಲಿಮ್ ಸಮುದಾಯದವರ ಉಮೇದುವಾರಿಕೆಯನ್ನು ನಿರಾಕರಿಸಲಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬಂದಿದ್ದೇ ೨೦೦೪ರ ಸಾರ್ವತ್ರಿಕ ಚುನಾವಣೆಯ ನಂತರ. ಹಣಬಲ, ಜಾತಿಬಲ ಹಾಗೂ ಧರ್ಮದ ಬಲವನ್ನಾಧರಿಸಿ ಟಿಕೆಟ್ ನೀಡುವ ಪ್ರವೃತ್ತಿಗೆ ಶಕ್ತಿ ಪ್ರಾಪ್ತವಾಗಿದ್ದೇ ಆಗ. ೨೦೦೪ರಲ್ಲಿ ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳದಿಂದ ೫೮ ಶಾಸಕರು ಗೆದ್ದಿದ್ದರು. ಆಗ ದೇವೇಗೌಡರು ಒಂದು ರಾಜ್ಯಸಭಾ ಸ್ಥಾನಕ್ಕೆ ರಾಮಸ್ವಾಮಿ ಎಂಬ ಹೆಸರಿನ ತಮಿಳುನಾಡಿನ ವ್ಯಾಪಾರಿಯನ್ನು ಅಭ್ಯರ್ಥಿಯನ್ನಾಗಿಸಿದರು. ಪಕ್ಷದೊಳಗೆ ತೀವ್ರ ವಿರೋಧ ವ್ಯಕ್ತವಾದರೂ ಹಣ ಬಲದ ರಾಮಸ್ವಾಮಿ ರಾಜ್ಯಸಭಾ ಸದಸ್ಯರಾದರು. ಕೇರಳದ ರಾಜೀವ್ ಚಂದ್ರಶೇಖರ್ ರಾಜ್ಯಸಭಾ ಸದಸ್ಯರಾದದ್ದು ಹಣಬಲದಿಂದ. ಅವರಿಗೆ ಶಾಸಕರ ಬಲ ನೀಡುವ ಮೂಲಕ ಬೆಂಬಲಿಸಿದ್ದು ದೇವೇಗೌಡರೇ.

ನಂತರದ ದಿನಗಳಲ್ಲಿ ಕರ್ನಾಟಕ ರಾಜಕಾರಣದಲ್ಲಿ ಹಣಬಲ ಉಳ್ಳವರ ಕೈ ಮೇಲಾಗತೊಡಗಿತು. ಕುಪೇಂದ್ರ ರೆಡ್ಡಿ, ರಾಜೀವ್ ಚಂದ್ರಶೇಖರ್, ಪ್ರಭಾಕರ ಕೋರೆಯಂತಹವರು ಹಣಬಲ ಮಾತ್ರದಿಂದಲೇ ರಾಜ್ಯಸಭಾ ಸದಸ್ಯರಾಗುವುದು ಸಹಜವೆನಿಸತೊಡಗಿತು. ೨೦೦೪ರ ಚುನಾವಣೆಯಲ್ಲಿ ಹಣಬಲದ ಗಣಿಗಾರಿಕೆ ಮಂದಿ ಹೆಚ್ಚು ಸಂಖ್ಯೆಯಲ್ಲಿ ವಿಧಾನಸಭೆ, ವಿಧಾನ ಪರಿಷತ್, ರಾಜ್ಯಸಭೆ, ಲೋಕಸಭೆ ಪ್ರವೇಶಿಸತೊಡಗಿದರು. ಅಪಾರ ಹಣಬಲದ ಎಂ.ಬಿ. ಪಾಟೀಲ್ ೧೯೯೯ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು. ನಂತರದ ಚುನಾವಣಾ ರಾಜಕಾರಣದಲ್ಲಿ ಎಂ.ಬಿ. ಪಾಟೀಲ್, ಶಾಮನೂರು ಶಿವಶಂಕರಪ್ಪ, ಕೆ.ಜೆ. ಜಾರ್ಜ್ ಮುಂತಾದವರು ಹಣಬಲದ ಕಾರಣಕ್ಕೆ ಮುಂಚೂಣಿಗೆ ಬಂದರು. ಡಿ.ಕೆ. ಶಿವಕುಮಾರ್ ಜಾತಿ ಬಲದಿಂದಾಗಿ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲೇ ಪ್ರಭಾವಿಯಾಗಿದ್ದರು. ಧರಂ ಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ದೇವೇಗೌಡರು ಷರತ್ತು ವಿಧಿಸಿದ್ದರಿಂದ ಡಿ.ಕೆ. ಶಿವಕುಮಾರ್ ಅವರು ಒಂದೆರಡು ವರ್ಷ ನೇಪಥ್ಯಕ್ಕೆ ಸರಿದಿದ್ದರು. ಈಗ ಅವರು ಹಣಬಲ-ಜಾತಿಬಲದೊಂದಿಗೆ ದೊಡ್ಡ ಹುದ್ದೆ ಪಡೆಯಲು ತಯಾರಾಗಿ ಕೂತಿದ್ದಾರೆ. ೧೯೮೩ರ ಚುನಾವಣೆಯಲ್ಲಿ ಕೇವಲ ಕ್ರಿಯಾಶೀಲತೆ, ವಿಶ್ವಾಸಾರ್ಹತೆ ಮತ್ತು ಜನಬಲವನ್ನು ಅವಲಂಬಿಸಿ ಲೋಕದಳ ಪಕ್ಷದ ಟಿಕೆಟ್ ಪಡೆದು ಶಾಸಕರಾಗಿದ್ದ ಸಿದ್ದರಾಮಯ್ಯನವರು ಎಲ್ಲ ಬಲಗಳ ಮೇಲೆ ಹಿಡಿತ ಸಾಧಿಸಿ ರಾಜಕಾರಣದಲ್ಲಿ ನಾಯಕರಾಗಿ ಮುಂದುವರಿದಿದ್ದಾರೆ.

ಬಿಜೆಪಿಯ ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೋರಾಟದ ಮೂಲಕ ರಾಜಕಾರಣದಲ್ಲಿ ಬೆಳೆದು ನಿಂತವರು. ಹಣಬಲ, ಜಾತಿಬಲದ ಬೆಂಬಲ ಇಲ್ಲದೆ ಶಾಸಕರಾಗಿ, ಬಿಜೆಪಿ ಮುಖಂಡರಾಗಿ ಸದ್ದು ಮಾಡಿದವರು. ೨೦೦೮ರಲ್ಲಿ ದುರಂತ ನಾಯಕನಾಗಿ ಹೊರಹೊಮ್ಮಿದಾಗಲೇ ಜಾತಿಬಲ ನೆರವಿಗೆ ಬಂದದ್ದು. ಮುಖ್ಯಮಂತ್ರಿ ಆಗುವವರೆಗೂ ಹಣಬಲವನ್ನು ದೊಡ್ಡ ಬಲವೆಂದು ಅವರು ಭಾವಿಸಿರಲಿಲ್ಲ. ದುರಂತದ ಸಂಗತಿ ಎಂದರೆ ೨೦೦೮ರ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ಸಂಖ್ಯೆ ೧೧೦ಕ್ಕೆ ಏರಲು ಬಳ್ಳಾರಿ ರೆಡ್ಡಿ ಸಹೋದರರ ಹಣಬಲವೂ ಕಾರಣವಾಗಿತ್ತು. ಮುಖ್ಯಮಂತ್ರಿಯಾದ ಮೇಲೆ ಯಡಿಯೂರಪ್ಪನವರಿಗೆ ಹಣಬಲದ ಮಹತ್ವ ಮನವರಿಕೆಯಾಗಿ ‘ಲೂಟಿ’ಗೆ ನಿಂತರು. ರೆಡ್ಡಿ ಸಹೋದರರು ಗಣಿಗಾರಿಕೆ ಮಾಡಿ ಸಾವಿರಾರು ಕೋಟಿಗೆ ಒಡೆಯರಾಗಿದ್ದರು. ಅವರೊಂದಿಗೆ ಹಣ ಮಾಡುವಲ್ಲಿ ಪೈಪೋಟಿಗೆ ಇಳಿದು ‘ಭ್ರಷ್ಟ’ ಎಂಬ ಅಪಖ್ಯಾತಿಗೆ ಒಳಗಾದರು. ಕರ್ನಾಟಕದ ರಾಜಕಾರಣ ಕಲುಷಿತಗೊಂಡಿದ್ದೇ ರೆಡ್ಡಿ ಸಹೋದರರ ಕಳ್ಳ ಹಣದಿಂದ. ರಾಜಕೀಯದ ಗಂಧಗಾಳಿ ಇಲ್ಲದ ತೆಲುಗು ಸಿನೆಮಾ ಶೈಲಿಯ ಪುಡಿ ರೌಡಿಗಳಾಗಿದ್ದ ಜನಾರ್ದನ ರೆಡ್ಡಿ, ಸೋಮಶೇಖರ ರೆಡ್ಡಿ, ಕರುಣಾಕರ ರೆಡ್ಡಿ ಗಣಿಗಳ್ಳತನದಿಂದ ಜನನಾಯಕ ಪಟ್ಟ ಅಲಂಕರಿಸಿದರು. ಅವರ ಚೇಲಾಚಮಚಗಳಾಗಿದ್ದ ಬಿ. ಶ್ರೀರಾಮುಲು, ಬಿ. ನಾಗೇಂದ್ರ ಮುಂತಾದವರು ಶಾಸಕರಾದರು. ನೋಡನೋಡುತ್ತಿದ್ದಂತೆ ರೆಡ್ಡಿ ಸಹೋದರರು ಕರ್ನಾಟಕ ರಾಜಕಾರಣದ ಕೇಂದ್ರಕ್ಕೆ ಬಂದರು. ಬಿಜೆಪಿ ಮತ್ತು ಯಡಿಯೂರಪ್ಪ ಅವರನ್ನು ನಿಯಂತ್ರಿಸತೊಡಗಿದರು. ರೆಡ್ಡಿ ಸಹೋದರರ ಉರವಣಿಗೆ, ಬಾಲ ಬಡುಕರ ಅಟ್ಟಹಾಸ, ಯಡಿಯೂರಪ್ಪನವರ ಭ್ರಷ್ಟಾಚಾರಕ್ಕೆ ನಾಡಿನ ಜನತೆಯೇ ತಕ್ಕ ಪಾಠ ಕಲಿಸಿದರು.

ಜೆಡಿಎಸ್ ಮೂಲಕ ರಾಜಕೀಯ ಜೀವನ ಆರಂಭಿಸಿದ ಅನಿಲ್ ಲಾಡ್, ಸಂತೋಷ್ ಲಾಡ್, ತುಕಾರಾಂ ಮುಂತಾದವರು ಹಣಬಲದಿಂದ ರಾಜಕೀಯದಲ್ಲಿ ಖಾಯಂ ಆಗಿ ನೆಲೆ ನಿಂತಿದ್ದಾರೆ. ತತ್ವ ಸಿದ್ಧಾಂತ ಮಾತ್ರವಲ್ಲ, ಸಂಸದೀಯ ಪ್ರಜಾಪ್ರಭುತ್ವದ ಬಗ್ಗೆಯೂ ಗೌರವ ಇಲ್ಲದವರು ಹಣಬಲದಿಂದ ಗೆಲ್ಲುತ್ತಾರೆ ಮತ್ತು ಅಧಿಕಾರ ಹಿಡಿಯುತ್ತಾರೆ. ಇಳಕಲ್ ಮೂಲದ ಶಿವರಾಜ ತಂಗಡಗಿ ಗ್ರಾನೈಟ್ ವ್ಯಾಪಾರದಲ್ಲಿ ಹಣ ಮಾಡಿ ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ರಾಜಕೀಯ ನೆಲೆ ಕಂಡುಕೊಂಡಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ದುಡ್ಡಿನ ಮೂಲಕವೇ ರಾಜಕಾರಣದಲ್ಲಿ ಈಗಲೂ ಮುಂದುವರಿದಿದ್ದಾರೆ. ಯಾವುದೇ ತತ್ವ ಸಿದ್ಧಾಂತ, ಆದರ್ಶಗಳಲ್ಲಿ ನಂಬಿಕೆ ಇಲ್ಲ. ಹಣೆಗೆ ಕುಂಕುಮ ಹಚ್ಚಿಕೊಂಡು, ಕೈಗೆ ದಾರಗಳನ್ನು ಕಟ್ಟಿಕೊಂಡು ಥೇಟ್ ಆರೆಸ್ಸೆಸ್ ಕಾರ್ಯಕರ್ತನಂತೆ ಕಾಣಿಸಿಕೊಳ್ಳುವ ಶಿವರಾಜ ತಂಗಡಗಿ ಅವರು ಸಮಾಜವಾದಿ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿ. ಇದಕ್ಕಿಂತ ರಾಜಕೀಯ ದುರಂತ ಬೇರೊಂದಿಲ್ಲ. ರೆಡ್ಡಿ ಸಹೋದರರಿಗೂ ಈ ಶಿವರಾಜ ತಂಗಡಗಿಗೂ ಬಹಳ ವಿಷಯದಲ್ಲಿ ಸಾಮ್ಯತೆ ಇದೆ.

ಬಳ್ಳಾರಿಯ ಗಣಿಗಳ್ಳರ ವಿರುದ್ಧ ವೀರೋಚಿತ ಹೋರಾಟ ರೂಪಿಸಿ ಯಶಸ್ವಿಯಾಗಿದ್ದ ಸಿದ್ದರಾಮಯ್ಯನವರು ತಕ್ಕಮಟ್ಟಿಗೆ ಅವರ ಉಪಟಳ ತಗ್ಗಿಸಿದ್ದರು. ಆದರೆ ಗಣಿಗಳ್ಳರು ಶುರುಮಾಡಿದ ದುಬಾರಿ ಚುನಾವಣಾ ಸಂಸ್ಕೃತಿ ಮತ್ತಷ್ಟು ವೇಗದಲ್ಲಿ ಮುಂದುವರಿದಿದೆ. ಕಾಂಗ್ರೆಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಅಪ್ಪಟ ಕಾರ್ಯಕರ್ತರ ಸಂತತಿ ಕುಸಿಯುತ್ತಿದೆ. ತತ್ವ ಸಿದ್ಧಾಂತಕ್ಕಿಂತಲೂ ಹಣಬಲ, ಜಾತಿಬಲ ಮತ್ತು ಮಾಧ್ಯಮಬಲ ಹೊಂದಿರುವವರು ಮಹಾನ್ ನಾಯಕರಾಗುತ್ತಿದ್ದಾರೆ.

ಚುನಾವಣಾ ಬಾಂಡ್ಗಳ ಮೇಲೆ ಸುಪ್ರೀಂ ಕೋರ್ಟ್ ನಿಷೇಧ ಹೇರಿ ಆದೇಶ ಹೊರಡಿಸಿದ್ದು ಕಾರ್ಪೊರೇಟ್ ಭ್ರಷ್ಟಾಚಾರವನ್ನು ನಿಯಂತ್ರಿಸಲು ಸಹಾಯವಾಗುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರಗಾಮಿ ಹುನ್ನಾರಗಳನ್ನು ವಿಫಲಗೊಳಿಸುತ್ತದೆ. ಆದರೆ ಚುನಾವಣೆ ವ್ಯವಸ್ಥೆಯೊಳಗೆ ಅಂತರ್ಗತವಾಗಿರುವ ಹಣದ ಪ್ರಾಬಲ್ಯ ತಗ್ಗಿಸಿದರೆ ಅಭಿವೃದ್ಧಿಗೆ ತೊಡಕಾಗಿರುವ ಭ್ರಷ್ಟಾಚಾರವನ್ನು ನಿಯಂತ್ರಿಸಬಹುದು. ಚುನಾವಣೆಗಳೇ ರಾಜಕೀಯ ಭ್ರಷ್ಟಾಚಾರದ ಮೂಲವಾಗಿದೆ. ಲೋಕಸಭಾ, ವಿಧಾನಸಭಾ, ವಿಧಾನ ಪರಿಷತ್ತು ಯಾವುದೇ ಚುನಾವಣೆ ಇರಲಿ ಅಭ್ಯರ್ಥಿಯಾಗುವವರಿಗೆ ಪಕ್ಷದ ಮುಖಂಡರು ಕೇಳುವ ಮೊದಲ ಪ್ರಶ್ನೆ ‘‘ಎಷ್ಟು ಕೋಟಿ ರೂ. ಖರ್ಚು ಮಾಡ್ತೀರಾ?’’ ಎಂದು. ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳ ವಿಧಾನ ಪರಿಷತ್ತು ಚುನಾವಣೆಯಲ್ಲಿ ಒಂದು ಮತಕ್ಕೆ ೫ರಿಂದ ೧೦ ಸಾವಿರ ರೂ. ನೀಡುವವರು ಮಾತ್ರ ಗೆಲ್ಲುತ್ತಾರೆ. ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ ೧೦ರಿಂದ ಗರಿಷ್ಠ ೧೦೦ ಕೋಟಿ ರೂ. ಖರ್ಚು ಮಾಡಿದವರು ಶಾಸಕರಾಗಿದ್ದಾರೆ. ಅಷ್ಟು ಹಣ ಕಳೆದುಕೊಂಡವರು ಸಂಪಾದಿಸುವುದು ಸರಕಾರದ ಅಭಿವೃದ್ಧಿ ಯೋಜನೆಗಳಲ್ಲಿ. ಮಂತ್ರಿಯಾದವರು ಅಧಿಕಾರಿಗಳ ವರ್ಗಾವಣೆಯಲ್ಲಿ ಹಣ ಮಾಡುತ್ತಾರೆ. ಭ್ರಷ್ಟಾಚಾರದ ವಿಷವರ್ತುಲ ಎಲ್ಲೆಡೆ ಕ್ರಿಯಾಶೀಲವಾಗಿದ್ದರಿಂದ ಇಡೀ ವ್ಯವಸ್ಥೆಯೇ ಭ್ರಷ್ಟಗೊಳ್ಳುತ್ತದೆ. ಜಾತಿಬಲ, ಹಣಬಲದ ಜೊತೆಗೆ ಧರ್ಮದ ಬಲವೂ ಇರಬೇಕು.

ಕಳೆದ ಎರಡು ದಶಕಗಳ ಚುನಾವಣಾ ಫಲಿತಾಂಶಗಳ ಅಂಕಿ ಅಂಶಗಳನ್ನು ಗಮನಿಸಿ. ಕರ್ನಾಟಕದಲ್ಲಿ ಲಿಂಗಾಯತ, ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳು ಎಲ್ಲ ಪಕ್ಷಗಳಿಂದಲೂ ಹೆಚ್ಚು ಸಂಖ್ಯೆಯಲ್ಲಿ ಗೆದ್ದು ಬರುತ್ತಾರೆ. ಹಿಂದುಳಿದ ಸಮುದಾಯದ ಹಣಬಲ ಉಳ್ಳವರು ಮಾತ್ರ ಆಯ್ಕೆಯಾಗುತ್ತಾರೆ. ಹಣಬಲವುಳ್ಳ ದಲಿತ ಅಭ್ಯರ್ಥಿಗೆ ಟಿಕೆಟ್ ನೀಡಲಾಗುತ್ತದೆ. ಮಧ್ಯಮ ವರ್ಗದ ವಿದ್ಯಾವಂತರಿಗೆ ರಾಜಕೀಯ ಪ್ರವೇಶ ಸಾಧ್ಯವಾಗುತ್ತಿಲ್ಲ. ಆಯಾ ಜನಸಂಖ್ಯೆಗೆ ಅನುಗುಣವಾಗಿ ಶಾಸಕರು, ಸಂಸದರು ಗೆಲ್ಲುತ್ತಿಲ್ಲ. ೨೦೧೪, ೨೦೧೯ರ ಲೋಕಸಭಾ ಚುನಾವಣೆಗಳಲ್ಲಿ ಕುರುಬ, ಮುಸ್ಲಿಮ್ ಸಮುದಾಯದ ಸಂಸದರು ಆಯ್ಕೆಯಾಗಿಲ್ಲ. ಹಾಗೆ ನೋಡಿದರೆ; ೨೦೧೪ರಲ್ಲಿ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ೨೦೦೪ರಿಂದ ೨೦೧೯ರವರೆಗಿನ ಲೋಕಸಭಾ ಚುನಾವಣೆಗಳಲ್ಲಿ ಲಿಂಗಾಯತ, ಒಕ್ಕಲಿಗ ಸಂಸದರ ಸಂಖ್ಯೆ ಹೆಚ್ಚಾಗುತ್ತಿದೆ. ಮುಸ್ಲಿಮರು ಸೇರಿದಂತೆ ಹಿಂದುಳಿದವರ ಸಂಖ್ಯೆ ಕ್ಷೀಣಿಸುತ್ತಿದೆ. ಕಾಂಗ್ರೆಸ್ ಪಕ್ಷವೂ ಮುಸ್ಲಿಮ್-ಹಿಂದುಳಿದವರಿಗೆ ಲೋಕಸಭಾ ಟಿಕೆಟ್ ನೀಡಲು ಹಿಂದೇಟು ಹಾಕುತ್ತಿದೆ. ೨೦೦೪ರಿಂದ ನಡೆದ ಎಲ್ಲಾ ಲೋಕಸಭಾ ಚುನಾವಣೆಯಲ್ಲಿ ಬ್ರಾಹ್ಮಣ ಸಮುದಾಯದ ಮೂರು ಜನ ನಿರಂತರವಾಗಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾರೆ. ನಿರ್ಮಲಾ ಸೀತಾರಾಮನ್, ರಾಜೀವ್ ಚಂದ್ರಶೇಖರ್ ರಾಜ್ಯಸಭೆಗೆ ಹೋಗುತ್ತಿದ್ದರು.

ಇತ್ತೀಚಿನ ದಶಕಗಳಲ್ಲಿ ಸಂಸತ್ ಮತ್ತು ವಿಧಾನ ಮಂಡಲಗಳಿಗೆ ಸೇವಾ ಮನೋಭಾವದ ಸಾಮಾಜಿಕ ಕಾರ್ಯಕರ್ತರು, ಹೆಚ್ಚು ಓದಿದ ವಿದ್ಯಾವಂತರು ಮತ್ತು ಪ್ರಾಮಾಣಿಕರು ಆಯ್ಕೆಯಾಗುತ್ತಿಲ್ಲ. ಹಣಬಲ, ಜಾತಿಬಲ ಮತ್ತು ಧರ್ಮ ಬಲ ಇರುವ ಧರ್ಮಾಂಧರು ಆಯ್ಕೆಯಾಗುತ್ತಿದ್ದಾರೆ. ಗೆದ್ದ ಮೇಲೆ ಹಣ ಮಾಡುವುದು, ಸಮಾಜದ ಸ್ವಾಸ್ಥ್ಯ ಕೆಡಿಸುವುದು ಅವರ ನಿತ್ಯ ಕಾಯಕವಾಗಿದೆ. ಬಿಜೆಪಿಯೂ ಸೇರಿದಂತೆ ಯಾವ ಪಕ್ಷವೂ ಸಂಖ್ಯಾಬಲ ಇಲ್ಲದ ಅತ್ಯಲ್ಪ ಸಮುದಾಯದವರಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಳ್ಳುವ ಬದ್ಧತೆ ತೋರುತ್ತಿಲ್ಲ. ಹಣಬಲ, ಜಾತಿಬಲ ಪ್ರಜಾಪ್ರಭುತ್ವವನ್ನು ನಿಯಂತ್ರಿಸುವ ಪ್ರಬಲ ಅಸ್ತ್ರಗಳಾಗಿವೆ. ಚುನಾವಣಾ ಭ್ರಷ್ಟಾಚಾರ, ಜಾತೀಯತೆಗೆ ಕಡಿವಾಣ ಬೀಳಬೇಕು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News

ಸಂವಿಧಾನ -75