ಜಿಎಸ್‌ಟಿ ಮಹಾ ವಂಚನೆ!

Update: 2024-12-08 04:48 GMT

ಜಿಎಸ್‌ಟಿ ಪದ್ಧತಿಯಲ್ಲಿ ತೆರಿಗೆ ವಂಚನೆಗೆ ಅವಕಾಶವೇ ಇಲ್ಲ ಎಂದು ಮೊದಲಿಗೆ ಆಡಳಿತಾರೂಢ ಬಿಜೆಪಿ ಪ್ರತಿಪಾದಿಸಿತ್ತು. ಅದರ ಬೆಂಬಲಿಗರೂ ಅದನ್ನೇ ವ್ಯಾಪಕವಾಗಿ ಪ್ರಚಾರ ಮಾಡಿದ್ದರು. ಆದರೆ, ಕೇಂದ್ರೀಕೃತ ತೆರಿಗೆ ಪಾವತಿ ಪದ್ಧತಿಯಲ್ಲೂ ಲೋಪದೋಷಗಳಿರುವುದು ದಿನಗಳೆದಂತೆ ಬಯಲಿಗೆ ಬರುತ್ತಿದ್ದು, ಈ ಹಿಂದಿನ ಮೌಲ್ಯವರ್ಧಿತ ತೆರಿಗೆ ಪದ್ಧತಿಗಿಂತ ಹಾಲಿ ಜಿಎಸ್‌ಟಿ ಪದ್ಧತಿಯೇ ತೆರಿಗೆ ವಂಚಕರ ಪಾಲಿಗೆ ಸ್ವರ್ಗವಾಗಿ ಪರಿಣಮಿಸಿದೆ.

ವಾಣಿಜ್ಯ ತೆರಿಗೆ ವಂಚನೆ ತಡೆ ಹಾಗೂ ತೆರಿಗೆ ಪಾವತಿ ಸರಳೀಕರಣದ ಆಶಯದೊಂದಿಗೆ ಜುಲೈ 1, 2017ರಂದು ಜಾರಿಗೆ ಬಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿ, ಜಾರಿಯಾದ ಕೇವಲ 7 ವರ್ಷಗಳಲ್ಲೇ ತೆರಿಗೆ ವಂಚಕರ ಪಾಲಿಗೆ ಸ್ವರ್ಗವಾಗಿ ಬದಲಾಗಿದೆ. ಒಂದು ಕಡೆ ಜಿಎಸ್‌ಟಿ ಸಂಗ್ರಹ ವರ್ಷದಿಂದ ವರ್ಷಕ್ಕೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದರೆ, ಮತ್ತೊಂದೆಡೆ ತೆರಿಗೆ ವಂಚನೆ ಪ್ರಮಾಣವೂ ಆಘಾತಕಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಾ ಸಾಗಿದೆ. ಜಿಎಸ್‌ಟಿ ಪದ್ಧತಿ ಜಾರಿಗೆ ಬಂದ 2017-18ನೇ ಸಾಲಿನಲ್ಲಿ ಕೇವಲ ರೂ. 7,879 ಕೋಟಿಯಷ್ಟಿದ್ದ ಜಿಎಸ್‌ಟಿ ವಂಚನೆ ಪ್ರಮಾಣ, 2023-24ನೇ ಸಾಲಿನ ಹೊತ್ತಿಗೆ 2.01 ಲಕ್ಷ ಕೋಟಿಗೆ ಏರಿಕೆಯಾಗಿದೆ. ಅರ್ಥಾತ್, ಸುಮಾರು 30 ಪಟ್ಟು ಏರಿಕೆಯಾಗಿದೆ!

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಿಎಸ್‌ಟಿ ಪದ್ಧತಿಯನ್ನು ಜಾರಿಗೊಳಿಸಿದಾಗ ತೆರಿಗೆ ವಂಚನೆಗೆ ಅಂತ್ಯ ಹಾಡುವ ಕ್ರಾಂತಿಕಾರಿ ಪದ್ಧತಿ ಎಂದೇ ಜಿಎಸ್‌ಟಿ ಪದ್ಧತಿಯನ್ನು ಹಾಡಿ ಹೊಗಳಿತ್ತು. ವಾಸ್ತವವಾಗಿ ಜಿಎಸ್‌ಟಿ ಪದ್ಧತಿಯನ್ನು ಅಳವಡಿಸಿಕೊಂಡಿರುವ ಬಹುತೇಕ ದೇಶಗಳು ಈ ಉದ್ದೇಶದಲ್ಲಿ ಸಫಲವಾಗಿವೆ. ಆದರೆ, ಭಾರತದಲ್ಲಿ ಮಾತ್ರ ಈ ಹಿಂದಿನ ಮೌಲ್ಯವರ್ಧಿತ ತೆರಿಗೆ ಪದ್ಧತಿಗಿಂತ ಹೆಚ್ಚು ಪ್ರಮಾಣದಲ್ಲಿ ವಾಣಿಜ್ಯ ತೆರಿಗೆ ವಂಚನೆಯಾಗತೊಡಗಿದೆ. ಅದಕ್ಕೆ ಕಾರಣ, ದೋಷಪೂರಿತ ಜಿಎಸ್‌ಟಿ ಪದ್ಧತಿ ಮತ್ತು ದುಬಾರಿ ತೆರಿಗೆ ಹಂತಗಳನ್ನು ಹೊಂದಿರುವ ಜಿಎಸ್‌ಟಿ ಸಂಗ್ರಹ ವ್ಯವಸ್ಥೆ.

ಇಡೀ ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ ಜಿಎಸ್‌ಟಿ ಪದ್ಧತಿಯನ್ನು ಪರಿಚಯಿಸಿದ ಫ್ರಾನ್ಸ್‌ನಲ್ಲಿ ಕನಿಷ್ಠ ಜಿಎಸ್‌ಟಿ ಪ್ರಮಾಣ ಶೇ. 2.1ರಷ್ಟಿದ್ದರೆ, ಗರಿಷ್ಠ ಜಿಎಸ್‌ಟಿ ಪ್ರಮಾಣ ಶೇ. 20ರಷ್ಟಿದೆ. ಆದರೆ, ಭಾರತದಲ್ಲಿ ಜಿಎಸ್‌ಟಿಯ ಕನಿಷ್ಠ ಪ್ರಮಾಣ ಶೇ. 5ರಷ್ಟಿದ್ದರೆ, ಗರಿಷ್ಠ ಪ್ರಮಾಣ ಶೇ. 28ರಷ್ಟಿದೆ. ಹೀಗಾಗಿಯೇ ಜಿಎಸ್‌ಟಿ ವಂಚನೆ ಪ್ರಮಾಣ ಬಹುಶಃ ಇಡೀ ವಿಶ್ವದಲ್ಲಿ ಭಾರತದಲ್ಲೇ ಅತ್ಯಧಿಕವಾಗಿದೆ.

ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿರುವ ಜಿಎಸ್‌ಟಿ ವಂಚನೆ

ಜುಲೈ 1, 2017ರಂದು ಜಿಎಸ್‌ಟಿ ಪದ್ಧತಿ ಜಾರಿಗೆ ಬಂದಾಗ, ವಾಣಿಜ್ಯ ತೆರಿಗೆ ವಂಚನೆ ತಹಬಂದಿಗೆ ಬರಲಿದೆ ಎಂದೇ ಬಹುತೇಕ ಆರ್ಥಿಕ ತಜ್ಞರು ಅಂದಾಜಿಸಿದ್ದರು. ಆಡಳಿತಾರೂಢ ಬಿಜೆಪಿ ಬೆಂಬಲಿಗರು ಕೂಡಾ, ಜಿಎಸ್‌ಟಿ ಪದ್ಧತಿಯಿಂದ ವಾಣಿಜ್ಯ ತೆರಿಗೆ ವಂಚನೆ ಬಹುತೇಕ ಮೂಲೋತ್ಪಾಟನೆ ಆಗಿದೆ ಎಂದೇ ಪ್ರಚಾರ ಮಾಡುತ್ತಾ ಬರುತ್ತಿದ್ದಾರೆ. ಆದರೆ, ಕೇಂದ್ರ ಸರಕಾರದ ದತ್ತಾಂಶಗಳೇ ಇಂತಹ ಅಂದಾಜು ಮತ್ತು ವಾದಗಳನ್ನು ಬುಡಮೇಲಾಗಿಸಿದೆ. ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ಮಹಾ ನಿರ್ದೇಶನಾಲಯದ ಅಂಕಿ-ಅಂಶಗಳ ಪ್ರಕಾರ, ಜಿಎಸ್‌ಟಿ ಪದ್ಧತಿ ಜಾರಿಗೆ ಬಂದ 2017-18ನೇ ಸಾಲಿನಲ್ಲಿ ರೂ. 7,879 ಕೋಟಿ, 2018-19ನೇ ಸಾಲಿನಲ್ಲಿ ರೂ. 17,319 ಕೋಟಿ, 2019-20ನೇ ಸಾಲಿನಲ್ಲಿ ರೂ. 21,739 ಕೋಟಿ, 2020-21ನೇ ಸಾಲಿನಲ್ಲಿ ರೂ. 31,098 ಕೋಟಿ, 2021-22ನೇ ಸಾಲಿನಲ್ಲಿ ರೂ. 50,325 ಕೋಟಿ, 2022-23ನೇ ಸಾಲಿನಲ್ಲಿ ರೂ. 1.01 ಲಕ್ಷ ಕೋಟಿ ಹಾಗೂ 2023-24ನೇ ಸಾಲಿನಲ್ಲಿ ರೂ. 2.01 ಲಕ್ಷ ಕೋಟಿ ಮೊತ್ತದ ಜಿಎಸ್‌ಟಿ ವಂಚನೆಯಾಗಿದೆ.

ಜಿಎಸ್‌ಟಿ ಪದ್ಧತಿ ಜಾರಿಯಾದಾಗಿನಿಂದ ಮಹಾರಾಷ್ಟ್ರದಲ್ಲಿ ಅತ್ಯಧಿಕ ಪ್ರಮಾಣದ ಜಿಎಸ್‌ಟಿ ವಂಚನೆ ವರದಿಯಾಗಿದ್ದು, ಇಲ್ಲಿಯವರೆಗೆ ಮಹಾರಾಷ್ಟ್ರವೊಂದರಲ್ಲೇ ರೂ. 60,059 ಕೋಟಿ ಮೊತ್ತದ ಜಿಎಸ್‌ಟಿ ವಂಚನೆ ನಡೆದಿದೆ. ನಂತರದ ಸ್ಥಾನದಲ್ಲಿರುವ ಕರ್ನಾಟಕದಲ್ಲಿ ಇಲ್ಲಿಯವರೆಗೆ ರೂ. 40,507 ಕೋಟಿ ಮೊತ್ತದ ಜಿಎಸ್‌ಟಿ ವಂಚನೆಯಾಗಿದೆ. ಆನಂತರದ ಸ್ಥಾನಗಳಲ್ಲಿರುವ ಗುಜರಾತ್, ದಿಲ್ಲಿ, ಹರ್ಯಾಣದಲ್ಲಿ ಕ್ರಮವಾಗಿ ರೂ. 26,156 ಕೋಟಿ, ರೂ. 24,217 ಕೋಟಿ ಮತ್ತು ರೂ. 22,712 ಕೋಟಿ ಮೊತ್ತದ ಜಿಎಸ್‌ಟಿ ವಂಚಿಸಲಾಗಿದೆ. ಈ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಲಕ್ಷದ್ವೀಪದಲ್ಲಿ ಈವರೆಗೆ ಯಾವುದೇ ಬಗೆಯ ಜಿಎಸ್‌ಟಿ ವಂಚನೆ ಪ್ರಕರಣ ವರದಿಯಾಗಿಲ್ಲ. ಮತ್ತೂ ಕುತೂಹಲಕರ ಸಂಗತಿಯೆಂದರೆ, ಅತ್ಯಧಿಕ ಪ್ರಮಾಣದ ಜಿಎಸ್‌ಟಿ ವಂಚನೆ ವರದಿಯಾಗಿರುವ ಮೊದಲ ಹತ್ತು ರಾಜ್ಯಗಳ ಪೈಕಿ ಐದು ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಸರಕಾರಗಳೇ ಇರುವುದು!

ಜಿಎಸ್‌ಟಿಯನ್ನು ಹೇಗೆ ವಂಚಿಸಲಾಗುತ್ತಿದೆ?

ಜಿಎಸ್‌ಟಿ ಪದ್ಧತಿಯಲ್ಲಿ ತೆರಿಗೆ ವಂಚನೆಗೆ ಅವಕಾಶವೇ ಇಲ್ಲ ಎಂದು ಮೊದಲಿಗೆ ಆಡಳಿತಾರೂಢ ಬಿಜೆಪಿ ಪ್ರತಿಪಾದಿಸಿತ್ತು. ಅದರ ಬೆಂಬಲಿಗರೂ ಅದನ್ನೇ ವ್ಯಾಪಕವಾಗಿ ಪ್ರಚಾರ ಮಾಡಿದ್ದರು. ಆದರೆ, ಕೇಂದ್ರೀಕೃತ ತೆರಿಗೆ ಪಾವತಿ ಪದ್ಧತಿಯಲ್ಲೂ ಲೋಪದೋಷಗಳಿರುವುದು ದಿನಗಳೆದಂತೆ ಬಯಲಿಗೆ ಬರುತ್ತಿದ್ದು, ಈ ಹಿಂದಿನ ಮೌಲ್ಯವರ್ಧಿತ ತೆರಿಗೆ ಪದ್ಧತಿಗಿಂತ ಹಾಲಿ ಜಿಎಸ್‌ಟಿ ಪದ್ಧತಿಯೇ ತೆರಿಗೆ ವಂಚಕರ ಪಾಲಿಗೆ ಸ್ವರ್ಗವಾಗಿ ಪರಿಣಮಿಸಿದೆ.

ಜಿಎಸ್‌ಟಿ ವಂಚನೆಗೆ ವಂಚಕ ಉದ್ಯಮಿಗಳು ಎರಡು ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಮೊದಲನೆಯದು, ನಕಲಿ ಕಂಪೆನಿಯಿಂದ ಇನ್ವಾಯ್ಸ್‌ಗಳನ್ನು ಪಡೆದುಕೊಂಡು, ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯುವುದು. ಎರಡನೆಯದು, ಕೊಂಚ ಸಂಕೀರ್ಣ ಮತ್ತು ನಾಜೂಕಿನದ್ದಾಗಿದ್ದರೂ, ತೆರಿಗೆ ವಂಚನೆಗೆ ರಾಜಮಾರ್ಗವನ್ನೇ ತೆರೆದಿಟ್ಟಿದೆ. ವಂಚಕ ಉದ್ಯಮಿಗಳು ಸರಣಿ ನಕಲಿ ಕಂಪೆನಿಗಳಿಗೆ ಜಿಎಸ್‌ಟಿ ನೋಂದಣಿ ಪ್ರಮಾಣ ಪತ್ರ ಪಡೆದಿದ್ದು, ಈ ನಕಲಿ ಕಂಪೆನಿಗಳಿಗೆ ವೃತ್ತಾಕಾರವಾಗಿ ಒಂದರ ನಂತರ ಒಂದರಂತೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ವರ್ಗಾಯಿಸುತ್ತವೆ. ಹೀಗೆ ಮಾಡುವುದರಿಂದ, ವಂಚಕ ಉದ್ಯಮಿಗಳು ಅತ್ಯಧಿಕ ಪ್ರಮಾಣದ ವಹಿವಾಟು ಪ್ರದರ್ಶಿಸಲು ಸಾಧ್ಯವಾಗಿ, ಬ್ಯಾಂಕ್ ಸಾಲಗಳನ್ನು ಪಡೆಯಲು ನೆರವಾಗುತ್ತಿದೆ. ಇದೇ ವೇಳೆ ಜಿಎಸ್‌ಟಿ ವಂಚಿಸಲೂ ಸಾಧ್ಯವಾಗುತ್ತಿದೆ.

ಏನಿದು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್?

ಜಿಎಸ್‌ಟಿ ತೆರಿಗೆ ಪದ್ಧತಿ ವ್ಯಾಪ್ತಿಗೆ ತಯಾರಕರು ಹಾಗೂ ವಿವಿಧ ಹಂತದ ಮಾರಾಟಗಾರರು ಬರುತ್ತಾರೆ. ತಯಾರಿಕಾ ಸಂಸ್ಥೆಗಳು ಉತ್ಪಾದಿಸುವ ಉತ್ಪನ್ನಗಳನ್ನು ಮೊದಲ ಹಂತದ ಮಾರಾಟಗಾರರು (ಸಗಟು ಮಾರಾಟಗಾರರು) ಅಥವಾ ತಮ್ಮ ಉತ್ಪನ್ನಗಳಿಗೆ ಕಚ್ಚಾ ವಸ್ತುಗಳನ್ನು ಬಳಸುವ ಎರಡನೇ ಹಂತದ ತಯಾರಿಕಾ ಸಂಸ್ಥೆಗಳು ಖರೀದಿಸುತ್ತವೆ. ಇಂತಹ ಮಾರಾಟ ಅಥವಾ ಎರಡನೇ ಹಂತದ ತಯಾರಿಕಾ ಸಂಸ್ಥೆಗಳು, ತಾವು ಅಂತಿಮವಾಗಿ ಮಾರಾಟ ಮಾಡುವ ತಮ್ಮ ಉತ್ಪನ್ನಗಳಿಗೆ ತೆರಬೇಕಾದ ತೆರಿಗೆ ಪ್ರಮಾಣದಲ್ಲಿ ತಾವು ಮೂಲ ಉತ್ಪನ್ನಕ್ಕೆ ಪಾವತಿಸಿದ ತೆರಿಗೆಯನ್ನು ಕಳೆದು, ಉಳಿದ ತೆರಿಗೆಯನ್ನು ಪಾವತಿಸುವ ಅವಕಾಶ ನೀಡುವುದಕ್ಕೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಎಂದು ಕರೆಯಲಾಗುತ್ತದೆ.

ಉದಾಹರಣೆಗೆ, ಯಾವುದಾದರೂ ತಯಾರಿಕಾ ಸಂಸ್ಥೆಯೊಂದು ತಮ್ಮ ಉತ್ಪನ್ನಕ್ಕೆ 450 ರೂ. ತೆರಿಗೆ ಪಾವತಿಸಬೇಕು ಎಂದಿಟ್ಟುಕೊಳ್ಳಿ. ಆದರೆ, ಅದಕ್ಕೂ ಮುನ್ನ ತನ್ನ ಉತ್ಪನ್ನ ತಯಾರಿಕೆಗೆ ಖರೀದಿಸಲಾದ ಕಚ್ಚಾವಸ್ತುವಿಗೆ 300 ರೂ. ತೆರಿಗೆ ಪಾವತಿಸಿದ್ದರೆ, ಅಂತಹ ತಯಾರಿಕಾ ಸಂಸ್ಥೆ, ತಾನು ಮೂಲ ಕಚ್ಚಾವಸ್ತು ಖರೀದಿಗೆ ಪಾವತಿಸಿರುವ 300 ರೂ. ತೆರಿಗೆಯನ್ನು ಕಳೆದು, ಉಳಿದ 150 ರೂ. ಮಾತ್ರ ಪಾವತಿಸಬೇಕಾಗುತ್ತದೆ. ಇದರಿಂದ ತಯಾರಿಕಾ ಸಂಸ್ಥೆಗೆ ತಾನು ಕಚ್ಚಾವಸ್ತುವಿನ ಖರೀದಿಗೆ ಮಾಡಿದ್ದ 300 ರೂ. ತೆರಿಗೆ ಉಳಿತಾಯವಾಗುತ್ತದೆ. ಸದ್ಯ ಈ ನಿಯಮವೇ ವಂಚಕ ಉದ್ಯಮಿಗಳ ಪಾಲಿಗೆ ವಂಚನೆಯ ರಾಜಮಾರ್ಗವನ್ನು ತೆರೆದಿಟ್ಟಿರುವುದು.

ದೋಷಪೂರಿತ ಜಿಎಸ್‌ಟಿ ಪದ್ಧತಿ

ಜುಲೈ 1, 2017ರ ಮಧ್ಯರಾತ್ರಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ತರಾತುರಿಯಲ್ಲಿ ಜಿಎಸ್‌ಟಿ ಪದ್ಧತಿಯನ್ನು ಜಾರಿಗೊಳಿಸಿತು. ಆದರೆ, ಅದಕ್ಕೆ ಸೂಕ್ತ ತಯಾರಿ ಮಾಡಿಕೊಳ್ಳದೆ, ಜಿಎಸ್‌ಟಿ ಪದ್ಧತಿ ಸರಳ ಮತ್ತು ಉದ್ಯಮ ಸ್ನೇಹಿ ಎಂದು ಬಿಂಬಿಸಲು ಆನ್ ಲೈನ್ ಜಿಎಸ್‌ಟಿ ನೋಂದಣಿಗೆ ಅವಕಾಶ ಮಾಡಿಕೊಟ್ಟಿತು. ಈ ದೋಷಪೂರಿತ ಅವಕಾಶವನ್ನು ಬಳಸಿಕೊಂಡ ವಂಚಕ ಉದ್ಯಮಿಗಳು, ಸಗಟು ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್‌ಗಳನ್ನು ಸಲ್ಲಿಸಿ, ತಮ್ಮ ನಕಲಿ ಕಂಪೆನಿಗಳಿಗೆ ಜಿಎಸ್‌ಟಿ ನೋಂದಣಿ ಪ್ರಮಾಣ ಪತ್ರ ಪಡೆದುಕೊಂಡರು. ಮೌಲ್ಯವರ್ಧಿತ ತೆರಿಗೆ ಪದ್ಧತಿಯಿದ್ದಾಗ, ತೆರಿಗೆ ನೋಂದಣಿ ಪ್ರಮಾಣ ಪತ್ರ ನೀಡುವುದಕ್ಕೂ ಮುನ್ನ ಭೌತಿಕ ಸ್ಥಳ ಪರಿಶೀಲನೆ ಕಡ್ಡಾಯವಾಗಿತ್ತು. ಆದರೆ, ತನ್ನನ್ನು ತಾನು ಉದ್ಯಮಿ ಸ್ನೇಹಿ ಎಂದು ಬಿಂಬಿಸಿಕೊಳ್ಳುವ ಭರದಲ್ಲಿ ಜಿಎಸ್‌ಟಿ ನೋಂದಣಿ ಪ್ರಮಾಣ ಪತ್ರಗಳನ್ನು ಆನ್ ಲೈನ್‌ನಲ್ಲೇ ವಿತರಿಸಿತ್ತು ಕೇಂದ್ರ ಬಿಜೆಪಿ ಸರಕಾರ. ಸದ್ಯ ಈ ದೋಷಪೂರಿತ ಜಿಎಸ್‌ಟಿ ನೋಂದಣಿ ಪ್ರಮಾಣ ಪತ್ರಗಳ ಹಂಚಿಕೆಯಿಂದಾಗಿಯೇ ದಾಖಲೆ ಪ್ರಮಾಣದ ತೆರಿಗೆ ವಂಚನೆಯೂ ಆಗುತ್ತಿರುವುದು.

ರಾಜ್ಯಗಳಿಗೂ ನಷ್ಟ

ಯಾವುದೇ ಸರಕು ಅಥವಾ ಸೇವೆಯ ಮೇಲೆ ವಿಧಿಸಲಾಗುತ್ತಿರುವ ಜಿಎಸ್‌ಟಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡಕ್ಕೂ ಸಮಾನ ಪಾಲನ್ನು ನಿಗದಿಗೊಳಿಸಲಾಗಿದೆ. ಜಿಎಸ್‌ಟಿಯಲ್ಲಿ ರಾಜ್ಯ ತೆರಿಗೆ, ಕೇಂದ್ರ ತೆರಿಗೆ, ಅಬಕಾರಿ ಸುಂಕ ಹಾಗೂ ಸೇವಾ ಸುಂಕಗಳನ್ನೆಲ್ಲ ವಿಲೀನಗೊಳಿಸಿರುವುದರಿಂದ, ಜಿಎಸ್‌ಟಿ ವಂಚನೆ ಪ್ರಮಾಣ ಎಷ್ಟು ಹೆಚ್ಚಳವಾಗುತ್ತದೊ, ಅದರ ಅರ್ಧದಷ್ಟು ನಷ್ಟ ರಾಜ್ಯ ಸರಕಾರಗಳಿಗೂ ಆಗುತ್ತಿದೆ. ಉದಾಹರಣೆಗೆ, ಜಿಎಸ್‌ಟಿ ವಂಚನೆ ಪ್ರಮಾಣದಲ್ಲಿ ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಜಿಎಸ್‌ಟಿ ಪದ್ಧತಿ ಜಾರಿಯಾದಂದಿನಿಂದ ಇಲ್ಲಿಯವರೆಗೆ 60,059 ಕೋಟಿ ರೂ. ವಂಚನೆಯಾಗಿದೆ. ಈ ಪೈಕಿ ಮಹಾರಾಷ್ಟ್ರ ರಾಜ್ಯಕ್ಕೆ ವಂಚನೆ ಪ್ರಮಾಣದ ಅರ್ಧದಷ್ಟು, ಅರ್ಥಾತ್ 30,059.50 ಕೋಟಿ ರೂ. ನಷ್ಟ ಉಂಟಾಗಿದೆ.

ಜಿಎಸ್‌ಟಿ ಸಂಗ್ರಹದಲ್ಲಿ ದಾಖಲೆಯ ಏರಿಕೆ

ಜಿಎಸ್‌ಟಿ ವಂಚನೆ ಪ್ರಮಾಣದಷ್ಟೇ ಜಿಎಸ್‌ಟಿ ಸಂಗ್ರಹವೂ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಜಿಎಸ್‌ಟಿ ಪದ್ಧತಿ ಜಾರಿಯಾದ 2017-18ನೇ ಸಾಲಿನಲ್ಲಿ 7.19 ಲಕ್ಷ ಕೋಟಿ ರೂ.ನಷ್ಟಿದ್ದ ಜಿಎಸ್‌ಟಿ ಸಂಗ್ರಹ, 2018-19ರಲ್ಲಿ 11.77 ಲಕ್ಷ ಕೋಟಿ ರೂ., 2019-20ರಲ್ಲಿ 12.22 ಲಕ್ಷ ಕೋಟಿ ರೂ. 2020-21ರಲ್ಲಿ 11.36 ಲಕ್ಷ ಕೋಟಿ ರೂ., 2021-22ರಲ್ಲಿ 14.76 ಲಕ್ಷ ಕೋಟಿ ರೂ., 2022-23ರಲ್ಲಿ 18.10 ಲಕ್ಷ ಕೋಟಿ ರೂ. ಹಾಗೂ 2023-24ರಲ್ಲಿ 20.18 ಲಕ್ಷ ಕೋಟಿ ರೂ.ಗೆ ತಲುಪಿದೆ. ಅಂದರೆ, 2017ರಿಂದ 2024ರವರೆಗೆ ಜಿಎಸ್‌ಟಿ ಸಂಗ್ರಹ ಪ್ರಮಾಣ ಸರಿಸುಮಾರು ಮೂರು ಪಟ್ಟು ಅಧಿಕವಾಗಿದೆ. ಹಾಗೆಯೇ, ಜಿಎಸ್‌ಟಿ ವಂಚನೆಯೂ 30 ಪಟ್ಟು ಹೆಚ್ಚಾಗಿದೆ. ಅದಕ್ಕೆ ಕಾರಣ ದುಬಾರಿ ಪ್ರಮಾಣದ ಜಿಎಸ್‌ಟಿ ತೆರಿಗೆ ಹಂತಗಳು.

ತೆರಿಗೆ ಪ್ರಮಾಣ ಹೆಚ್ಚಿದ್ದಷ್ಟೂ ತೆರಿಗೆ ವಂಚನೆ ಪ್ರಮಾಣವೂ ಅಧಿಕವೇ ಆಗಿರುತ್ತದೆ. ಭಾರತದಲ್ಲಿ ಜಾರಿಯಲ್ಲಿರುವ ನಾಲ್ಕು ಹಂತದ ಜಿಎಸ್‌ಟಿ ದುಬಾರಿ ತೆರಿಗೆ ದರಗಳನ್ನು ಹೊಂದಿರುವುದರಿಂದಲೇ ವರ್ಷದಿಂದ ವರ್ಷಕ್ಕೆ ಜಿಎಸ್‌ಟಿ ಸಂಗ್ರಹ ಮತ್ತು ಜಿಎಸ್‌ಟಿ ವಂಚನೆಗಳೆರಡೂ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು.

ತೆರಿಗೆ ಪದ್ಧತಿಯ ಸರಳೀಕರಣವೆಂದರೆ, ಪಾವತಿ ವ್ಯವಸ್ಥೆಯನ್ನು ಸರಳಗೊಳಿಸಿ, ದುಬಾರಿ ತೆರಿಗೆ ದರಗಳನ್ನು ವಿಧಿಸುವುದಲ್ಲ. ಬದಲಿಗೆ, ಸರಳ ತೆರಿಗೆ ಹಂತಗಳನ್ನು ಜಾರಿಗೊಳಿಸಿ, ಜನರ ವೆಚ್ಚ ಸಾಮರ್ಥ್ಯವನ್ನು ಹೆಚ್ಚಿಸುವುದು. ಅತ್ಯಂತ ಕಡಿಮೆ ಪ್ರಮಾಣದ ವಾಣಿಜ್ಯ ತೆರಿಗೆ ಹೊಂದಿರುವ ಸಿಂಗಾಪುರ ಸುಸ್ಥಿರ ಆರ್ಥಿಕತೆ ಹೊಂದಿರುವುದೇ ಈ ಮಾತಿಗೆ ನಿದರ್ಶನ.

ಇನ್ನಾದರೂ, ದೋಷಪೂರಿತ ಜಿಎಸ್‌ಟಿ ಪದ್ಧತಿಯ ಬಗ್ಗೆ ಮರು ಚಿಂತನೆ ನಡೆಯಬೇಕಿದೆ. ಭಾರತದಂತಹ ಒಕ್ಕೂಟ ವ್ಯವಸ್ಥೆಯನ್ನು ಹೊಂದಿರುವ ದೇಶಕ್ಕೆ ಮಾರಕವಾಗಿ ಪರಿಣಮಿಸಿರುವ ಜಿಎಸ್‌ಟಿ ಪದ್ಧತಿಯಿಂದ ಹೊರ ಬಂದು, ರಾಜ್ಯಗಳ ಆರ್ಥಿಕ ಸ್ವಾಯತ್ತತೆಗೆ ಪೂರಕವಾಗಿರುವ ವ್ಯಾಟ್ ಪದ್ಧತಿಗೆ ಮರಳುವ ಕುರಿತು ಗಂಭೀರವಾಗಿ ಆಲೋಚಿಸಬೇಕಿದೆ. ಇಲ್ಲವಾದರೆ, ಜಿಎಸ್‌ಟಿ ಪದ್ಧತಿ ತೆರಿಗೆ ವಂಚಕರ ಪಾಲಿಗೆ ಸ್ವರ್ಗವಾಗಿ, ದೇಶದ ಸಮಗ್ರ ಅಭಿವೃದ್ಧಿಗೆ ಮಾರಕವಾಗುವುದರಲ್ಲಿ ಸಂಶಯವೇ ಇಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಸದಾನಂದ ಗಂಗನಬೀಡು

contributor

Similar News

ಅತಿಶಯಕಾರರು