ಪ್ರಜೆಗಳು ಪ್ರಜಾಪ್ರಭುತ್ವದ ಎಷ್ಟನೇ ಅಂಗ?
ಈ ದೇಶದ ಪ್ರಜಾಪ್ರಭುತ್ವದಲ್ಲಿ ‘ಪ್ರಜೆ’ಯೆಂದರೆ ಯಾವ ರೀತಿಯ ಅಧಿಕಾರ, ಪ್ರಭಾವ, ವರ್ಚಸ್ಸು ಇಲ್ಲದವನು. ಆದ್ದರಿಂದ ಈ ದೇಶದ ಪ್ರಜಾಪ್ರಭುತ್ವವು ಬರಿಯ ಪ್ರಜೆಗಳ ಹೊರತಾಗಿ ಇನ್ನುಳಿದ ಎಲ್ಲರ ರಕ್ಷಣೆಯನ್ನು ಮಾಡುವಂತಿದೆ. ಕ್ರಿಮಿನಲ್ ಕಾನೂನಂತೂ ನೌಕರರೂ ಸೇರಿದಂತೆ ಸರಕಾರೀ ಭಾಗಿದಾರರಿಗೆ ಎಲ್ಲ ರೀತಿಯ ರಕ್ಷಣೆಯನ್ನು ನೀಡಿದೆ. ಅದನ್ನು ಮೀರಿಯೂ ಯಾವನಾದರೂ ಸಿಕ್ಕಿಬಿದ್ದರೆ ಅದು ಆತನ ಗ್ರಹಚಾರ. ಬಹುತೇಕ ನಿರ್ಧಾರಗಳೆಲ್ಲವೂ ರಾಜಕೀಯವಾದ್ದರಿಂದ ಮತ್ತು ಅವಕ್ಕೊಂದು ‘ಮೌಲ್ಯ’ ನಿಗದಿಗೊಳ್ಳುವುದರಿಂದ ಕೊನೆಗುಳಿಯುವುದು ಯಾರ ನೆರವೂ ಇಲ್ಲದ ಅನಾಥರು ಮಾತ್ರ.
ಫೆಬ್ರವರಿ 2020ರ ದಿಲ್ಲಿ ಹಿಂಸಾಕೃತ್ಯಗಳ ಸಂಚಿನ ಆರೋಪದ ಮೇಲೆ ದಿಲ್ಲಿಯ ಜೆಎನ್ಯುವಿನ ಸಂಶೋಧನಾ ವಿದ್ಯಾರ್ಥಿ ಉಮರ್ ಖಾಲಿದ್ ಕಳೆದ ಸುಮಾರು ಮೂರು ವರ್ಷಗಳಿಂದ (ಸೆಪ್ಟಂಬರ್ 2020) ಅಕ್ರಮ ಚಟುವಟಿಕೆಗಳ ನಿರ್ಬಂಧದ ಕಾಯ್ದೆಯಡಿ ದಸ್ತಗಿರಿಯಾಗಿ ಜೈಲಿನಲ್ಲಿದ್ದಾರೆ. ಈಶಾನ್ಯ ದಿಲ್ಲಿಯ ಮತೀಯ ಗಲಭೆಯ ಸಂಬಂಧ ಖಾಲಿದ್ ಮತ್ತು ಹಲವು ಪ್ರಮುಖ ಸಂಘಟನೆಗಳ ಸಕ್ರಿಯ ಕಾರ್ಯಕರ್ತರೂ ಸೇರಿದಂತೆ 59 ಇತರರು ಆರೋಪಿಗಳು. ಇದಕ್ಕಿನ್ನೂ ಮೋಕ್ಷ ಸಿಕ್ಕಿಲ್ಲ. ತನಿಖಾ ಸಂಸ್ಥೆಗಳು ಮತ್ತು ನ್ಯಾಯಾಲಯಗಳು ವಿಚಾರಣೆಗೆ ತಮ್ಮದೇ ಆದ ಅವಧಿಯನ್ನು ವಿಲಂಬಿತ ಏಕತಾಳದಲ್ಲಿ ವಿಸ್ತರಿಸುತ್ತಿದ್ದಾರೆ. ಈ ಆರೋಪಿ-(ಅಪರಾಧಿ ಅಲ್ಲ)-ವಿಚಾರಣೆಯಾಗದೆ ಸೆರೆವಾಸ ಅನುಭವಿಸುವುದು ನಮ್ಮ ನ್ಯಾಯಾಂಗ ವ್ಯವಸ್ಥೆಯ ಕ್ರೂರ ವ್ಯಂಗ್ಯ. ಹಾಗೆ ನೋಡಿದರೆ ಕ್ರಿಮಿನಲ್ ಪ್ರಕರಣಗಳಲ್ಲಿ ನಮ್ಮ ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಗಳೆರಡೂ ಗೌರವಸ್ಥರಿಗೂ, ನಿರಪರಾಧಿಗಳಿಗೂ ನರಕ ಸದೃಶ. ತಪ್ಪಿತಸ್ಥನೆಂದು ಘೋಷಣೆಯಾದರೆ ಶಿಕ್ಷೆ ಬಂಧನದ ಆರಂಭದ ವರೆಗೂ ವಿಸ್ತರಿಸುತ್ತದೆ. ಆದರೆ ಆತ ನಿರಪರಾಧಿಯೆಂದು ಘೋಷಿತವಾದರೆ? ಜೈಲಿನಲ್ಲಿ ಕಳೆ, ಕೊಳೆತ ಆಯುಷ್ಯವನ್ನು ಯಾರು ಮರಳಿ ನೀಡುತ್ತಾರೆ? ಆದ್ದರಿಂದ ಮೇಲ್ನೋಟಕ್ಕೆ ಒಬ್ಬ ವ್ಯಕ್ತಿಯ ವಿರುದ್ಧ ಶಿಕ್ಷೆಯ ಸಾಧ್ಯತೆಯಿರುವ ಪ್ರಕರಣವಿದೆಯೆಂದಾದಲ್ಲಿ ಆತನನ್ನು ಬಂಧನದಲ್ಲಿರಿಸುವ ಮತ್ತು ಇತರ ಸಂದರ್ಭಗಳಲ್ಲಿ ಆತ ವಿಚಾರಣೆಯನ್ನೆದುರಿಸುವ ಖಾತ್ರಿಯನ್ನು ಪಡೆಯುವ ಜಾಮೀನಿನ ಮೇಲೆ ತಾತ್ಕಾಲಿಕವಾಗಿ ಬಂಧಮುಕ್ತವಾಗಿಸ ಲಾಗುವುದು. ಪ್ರಾಯಃ ಜಾಮೀನಿನ ಕಲ್ಪನೆಯ ಮೂಲ ಇದು.
ಒಬ್ಬೊಬ್ಬ ದಸ್ತಗಿರಿಯಾದವರ ಕಥೆಯೂ ಒಂದೊಂದು ಥರ. ಈ ನೆಲದ ನ್ಯಾಯ ಪದ್ಧತಿಯಲ್ಲಿ ಸಾವಿರ ಅಪರಾಧಿಗಳು ಶಿಕ್ಷೆಯಿಂದ ಪಾರಾದರೂ ಒಬ್ಬ ನಿರಪರಾಧಿಯು ಶಿಕ್ಷೆಗೆ ಗುರಿಯಾಗಬಾರದೆಂಬ ನೀತಿಯಿದೆ. ಆದರೆ ಭಾರತೀಕರಣವು ರಾಜಕೀಯ ಮೇಲಾಟಕ್ಕಷ್ಟೇ ಉಳಿದು ಇಂದು ಸರಕಾರದ ಕೆಲವು ವಿಚಿತ್ರ ಕಾನೂನುಗಳಲ್ಲಿ ಭಾರತೀಯ ನ್ಯಾಯಪದ್ಧತಿಗೆ ವ್ಯತಿರಿಕ್ತವಾಗಿ ಆರೋಪಿಯೇ ತಾನು ಮೇಲ್ನೋಟಕ್ಕೆ ನಿರಪರಾಧಿಯೆಂದು ಸಾಬೀತು ಮಾಡಬೇಕಾದ ದಮನಕಾರೀ ತಿರುವುಮುರುವು ವ್ಯವಸ್ಥೆಯಿದೆ. ಫ್ರೆಂಚ್ ನ್ಯಾಯಾಂಗ ಪದ್ಧತಿಯಲ್ಲಿ ಈ ವ್ಯವಸ್ಥೆಯಿತ್ತು. ಈಗ ಅದು ವಿಶ್ವವ್ಯಾಪಿಯಾಗಿದೆ. ಇವಲ್ಲದೆ ಹೋದರೆ ಅಪರಾಧಗಳನ್ನು ಸಾಬೀತುಪಡಿಸುವುದು ಹೇಗೆಂಬ ನೆಪಗಳನ್ನು ಸರಕಾರದ ಎಲ್ಲ ಅಂಗಗಳು ತಂದೊಡ್ಡುತ್ತವೆ. ಉಮರ್ ಖಾಲಿದ್ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳು ಖಾಲಿದ್ಗೆ ಜಾಮೀನನ್ನು ನಿರಾಕರಿಸಿವೆ. ವಿಶೇಷವೆಂದರೆ ಅವು ಪರಿಗಣಿಸಿದ ಕೆಲವು ಸಂಗತಿಗಳಾದರೂ ಸಾರ್ವತ್ರಿಕ ಸಂಗತಿಗಳು: ಇನ್ಕ್ವಿಲಾಬಿ ಸಲಾಮೀ (ಕ್ರಾಂತಿಗೆ ವಂದನೆ), ಕ್ರಾಂತಿಕಾರೀ ಇಸ್ತಿಕ್ಬಾಲ್ (ಕ್ರಾಂತಿಕಾರೀ ಸ್ವಾಗತ) ಇವು ಹಿಂಸೆಯ ಮಾಪಕಗಳಾಗಿ ಗೋಚರಿಸಿದವು. ಇವನ್ನು ಆಧರಿಸಿದರೆ ಭಗತ್ಸಿಂಗ್, ರಾಜಗುರು, ಸುಖದೇವ್ ಮಾತ್ರವಲ್ಲ, ಈ ದೇಶದ ಬಹುತೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷರು ಶಿಕ್ಷಿಸಿದ್ದು ಸಮರ್ಥನೀಯವಾಗುತ್ತದೆ. ದೇಶದ್ರೋಹದಂತಹ ಆಪಾದನೆಯನ್ನು ಮಾಡಬೇಕಾದರೆ ಎಷ್ಟು ಕಠಿಣ ವಿಧಿವಿಧಾನಗಳನ್ನು ಅನುಸರಿಸಬೇಕೆಂಬುದನ್ನು ಸರ್ವೋಚ್ಚ ನ್ಯಾಯಾಲಯವು ದಶಕಗಳಿಂದಲೇ ಹೇಳುತ್ತ ಬಂದರೂ ಅವು ಅನುಷ್ಠಾನದಲ್ಲಿ ವಿಫಲವಾಗಿದೆ. (ಬ್ರಿಟಿಷರಿಂದ ಬಂದ ಈ ಕಾಯಿಲೆಯನ್ನು ಉಳಿಸಿಕೊಳ್ಳಲು ಕಾನೂನು ಆಯೋಗದ ಶಿಫಾರಸಿನೊಂದಿಗೆ ಕೇಂದ್ರ ಸರಕಾರವು ಶತಪ್ರಯತ್ನ ಮಾಡುತ್ತಿದೆ!.)
ಖಾಲಿದ್ರ ತೀರ್ಪುಗಳು ಬಂದು ವರ್ಷವೇ ಆಗಿದೆ. ಈ ತೀರ್ಪುಗಳು ಸರಿಯೇ ತಪ್ಪೇ ಎಂದು ಪ್ರಕರಣವು ಇತ್ಯರ್ಥಕ್ಕೆ ಸರ್ವೋಚ್ಚ ನ್ಯಾಯಾಲಯದ ಮುಂದಿರುವಾಗ ನಿರ್ಧರಿಸಲಾಗದು. ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಉಮರ್ ಖಾಲಿದ್ ಸರ್ವೋಚ್ಚ ನ್ಯಾಯಾಲಯಕ್ಕೆ ಜಾಮೀನಿಗಾಗಿ ಮೊರೆ ಹೋದರು. ಈ ಪ್ರಕರಣವು ಅನೇಕ ವಿಚಾರಣಾ ದಿನಾಂಕಗಳನ್ನು ದಾಟಿ ಕೊನೆಗೂ ಜುಲೈ 12, 2023ರಂದು ನ್ಯಾಯಾಲಯದ ಮುಂದೆ ಬಂದಿತು- ಪ್ರಯಾಸಪೂರ್ವಕವಾಗಿ. ಅದನ್ನು ಜುಲೈ 14ರಂದು ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯ ಬಯಸಿತು. ಆದರೆ ಆ ದಿನ ದಿಲ್ಲಿ ಪೋಲಿಸರು ತಮ್ಮ ಆಕ್ಷೇಪಣಾ ಪ್ರಮಾಣಪತ್ರ ಸಲ್ಲಿಕೆಗೆ ಇನ್ನಷ್ಟು ಅವಧಿಯನ್ನು ಯಾಚಿಸಿದರಂತೆ. ಎರಡು ವರ್ಷಗಳಲ್ಲಿ ತಾವೇನು ಹೇಳಬೇಕೆಂಬ ನಿಲುವು ಘನೀಭವಿಸಿ ಅವನ್ನು ಈಗಾಗಲೇ ಎರಡು ನ್ಯಾಯಾಲಯಗಳಲ್ಲಿ ಸಲ್ಲಿಸಿ ಜಾಮೀನು ತಿರಸ್ಕೃತವಾಗುವಂತೆ ಯಶಸ್ವಿಯಾಗಿ ಪ್ರಯತ್ನಿಸಿದ ಪೊಲೀಸರು ಈಗ ಮತ್ತೆ ಅವಧಿಯನ್ನು ಯಾಚಿಸುತ್ತಾರೆಂದರೆ ಅದೆಂತಹ ಕುರುಡು ಆಡಳಿತ? ಅಂಧ ನ್ಯಾಯ? ಖಾಲಿದ್ ಪರ ವಕೀಲರು ಈ ಬಗ್ಗೆ ತಮ್ಮ ಆಕ್ಷೇಪಣೆಯನ್ನು ವ್ಯಕ್ತಪಡಿಸಿದರಾದರೂ, ನ್ಯಾಯಾಲಯವು ತನ್ನ ಅತೃಪ್ತಿಯನ್ನು ಸೂಚಿಸಿ ನೀವು ಇಂದೇ ಸಿದ್ಧರಾಗಿರಬೇಕಾಗಿತ್ತು ಎಂದು ಹೇಳಿತಾದರೂ ಸರಕಾರಿ ವಕೀಲರು ಆರೋಪ ಪಟ್ಟಿಯು ಸಾವಿರಾರು ಪುಟಗಳಷ್ಟು ವಿಸ್ತೃತವಾಗಿದ್ದು ಅವನ್ನು ತನಗೆ ಈಗ ಎರಡು ದಿನಗಳ ಹಿಂದಷ್ಟೇ ನೀಡಲಾಯಿತೆಂದು ಸಬೂಬು ಹೇಳಿದರು. ಅಂತಿಮವಾಗಿ ನ್ಯಾಯದ ಸಮತೋಲ ತಕ್ಕಡಿಯು ಅಭಿಯೋಜನೆಯ ಪರ ವಾಲಿತು. ನ್ಯಾಯಾಲಯವು ಪ್ರಕರಣವನ್ನು ಜುಲೈ 24ಕ್ಕೆ ಮುಂದೂಡಿತು. ಆರೋಪಿಯ ಪರ ವಕೀಲರು ಅಂದು ಬಹಳಷ್ಟು ಪ್ರಕರಣಗಳು ನಿಗದಿಯಾಗಿರುತ್ತವೆಂದು ಹೇಳಿದಾಗ ನ್ಯಾಯಾಲಯವು ಆದಿನ ಪರಿಸ್ಥಿತಿ ಹೇಗಿರುತ್ತದೆಯೆಂದು ತಾವು ನಿರ್ಧರಿಸುವುದಾಗಿ ತಿಳಿಸಿತು. ವಿಷಾದಕರ ವ್ಯಂಗ್ಯವೆಂದರೆ ನ್ಯಾಯಮೂರ್ತಿಗಳು ಈ ಪ್ರಕರಣವನ್ನು ತೀರ್ಮಾನಿಸಲು ನಮಗೆ ಬೇಕಾಗುವುದು ‘1-2 ಮಿನಿಟುಗಳು’ ಎಂದದ್ದು.
ಅಲ್ಲಮ ಎಂದೋ ‘‘ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ಶ್ರಮ ನೋಡಾ’’ ಎಂದಿದ್ದಾನೆ. ಒಂದೆರಡು ನಿಮಿಷಗಳ ನಿರ್ಧಾರಕ್ಕೆ ಇಷ್ಟು ದೀರ್ಘಾವಧಿಯ ವಿಳಂಬವೇಕೆ? ಇದಕ್ಕೆ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಮರ್ಪಕ ಉತ್ತರಗಳಿಲ್ಲ; ನೆಪಗಳಷ್ಟೇ ಇವೆ. ಬಂಧನವು ಅಗತ್ಯವೂ ಅಲ್ಲ, ಅನಿವಾರ್ಯವಾದಲ್ಲಿ ಮಾತ್ರ ಜಾಮೀನನ್ನು ನಿರಾಕರಿಸುವುದು ನ್ಯಾಯಾಂಗಕ್ಕೆ ಘನತೆ ತರುವ ವಿಚಾರ. ದುರದೃಷ್ಟವೆಂದರೆ ನಮ್ಮ ನ್ಯಾಯಾಂಗವು ಅಶಕ್ತರಿಗೆ ನ್ಯಾಯವನ್ನೊದಗಿಸುವಲ್ಲಿ ಬಹಳಷ್ಟು ಹಿಂದುಳಿದಿವೆ. ಸಾಕಷ್ಟು ವೆಚ್ಚದಲ್ಲಿ ಹಿರಿಯ ವಕೀಲರನ್ನು ನೇಮಿಸಿ, ಪೊಲೀಸರೂ, ಅಭಿಯೋಜನೆಯೂ ಕೆಲವೊಮ್ಮ ಶಾಮೀಲಾಗಿ ಜಾಮೀನು ಪಡೆಯುವ ವಿಧಾನವನ್ನು ಶಕ್ತರಷ್ಟೇ ಬಲ್ಲರು ಮತ್ತು ಪ್ರಯೋಗಿಸಬಲ್ಲರು. ಆರ್ನಬ್ ಕುರಿತ ಜಾಮೀನು ನಡುರಾತ್ರಿಯೂ ತೀರ್ಮಾನವಾಗುತ್ತದೆ. ಈಚೆಗೆ ತೀಸ್ಟಾ ಸೆಟಲ್ವಾಡ್ ಪ್ರಕರಣದಲ್ಲೂ ರಾತ್ರಿಯೇ ಜಾಮೀನಿನ ಆದೇಶವಾಯಿತು. ಇಂತಹ ತ್ವರಿತ ನ್ಯಾಯದಾನಗಳು ಅರ್ಥಹೀನವಾಗುವುದೇ ಇನ್ನುಳಿದ ಪ್ರಕರಣಗಳಲ್ಲಿ ಆಗುವ ಅನಗತ್ಯ ವಿಳಂಬದಲ್ಲಿ. ಜಾಮೀನಿನ ನಿರ್ಧಾರದಲ್ಲಿ ವಿವರವಾದ ಕಾರಣಗಳು ಬೇಕಾಗಿಲ್ಲ; ಎಲ್ಲ ಸಾಕ್ಷಗಳ ವರದಿ ಬೇಕಿಲ್ಲ. ಕೆಲವು ಪ್ರಶ್ನೆಗಳು ಮಾತ್ರ ಮುಖ್ಯವಾಗುತ್ತವೆ: ಮೇಲ್ನೋಟದ ಪ್ರಕರಣವಿದೆಯೇ? ಶಿಕ್ಷೆಯಾಗುವ ಸಾಧ್ಯತೆಯೆಷ್ಟು? ಮತ್ತು ಅದರ ಅವಧಿಯೇನು? ಒಂದು ವೇಳೆ ಪ್ರಕರಣದಲ್ಲಿ ಸ್ಥೂಲ ಸತ್ಯವಿದ್ದರೂ ಆರೋಪಿಯ ಸ್ಥಾನಮಾನವೇನು? ಆತ ಸಾಕ್ಷ್ಯವನ್ನು ನಾಶಮಾಡಲು ಅಥವಾ ಪ್ರಭಾವಿಸಲು ಶಕ್ತನೇ? ಆತನನ್ನು ಬಂಧನದಲ್ಲಿಡುವ ಅಗತ್ಯವಿದೆಯೇ? ಆತ ವಿಚಾರಣೆಯನ್ನು ಎದುರಿಸಲು ಅಲಭ್ಯನೇ? ಆತ ಈಗಾಗಲೇ ಅನುಭವಿಸಿದ ಬಂಧನದ ಅವಧಿಯೇನು? ತನಿಖೆಯು ಪೂರ್ಣವಾಗಿದೆಯೇ? ಇಂತಹ ಹತ್ತು ಹಲವು ಪ್ರಶ್ನೆಗಳನ್ನು ನ್ಯಾಯಾಲಯಗಳು ದಿನನಿತ್ಯ ಎದುರಿಸುವುದರಿಂದ ಅವಕ್ಕೆ ಯಾವುದೇ ಪ್ರಕರಣವನ್ನು ನಿರ್ಮೋಹವಾಗಿ ತೀರ್ಮಾನಿಸುವ ಸಾಮರ್ಥ್ಯವಿರುತ್ತದೆ. ಆದ್ದರಿಂದ ಜುಲೈ 24ರಂದು ಖಾಲಿದ್ ಹಣೆಬರಹವು ನಿರ್ಧಾರವಾಗುತ್ತದೆಂದು ಆಶಿಸಬಹುದಷ್ಟೇ ಹೊರತು ವಿಶ್ವಾಸವಿಡಲಾಗದು. ಇದು ಖಾಲಿದ್ ಒಬ್ಬನ ಪ್ರಶ್ನೆಯಲ್ಲ. ದೇಶದ ಕಾರಾಗೃಹಗಳಲ್ಲಿ ಕೊಳೆಯುತ್ತಿರುವ ಅಸಂಖ್ಯ (ಏಕೆಂದರೆ ನಮ್ಮ ಸರಕಾರೀ ದಾಖಲೆಗಳಲ್ಲಿ ಸರಿಯಾದ ಅಂಕಿ-ಅಂಶಗಳಿಲ್ಲ.) ಆರೋಪಿಗಳ ಪ್ರಶ್ನೆ. ತಪ್ಪುಮಾಡಿದ್ದಾರೆಂದು ತೀರ್ಮಾನವಾದ ಅಪರಾಧಿಗಳು ಪ್ರಭಾವಿಗಳಾದರೆ ಅವರಿಗೆ ಗಾಂಧಿ, ಸ್ವಾತಂತ್ರ್ಯದ, ಗಣರಾಜ್ಯದ, ರಾಜ್ಯೋತ್ಸವಗಳ ನೆಪದಲ್ಲಿ ಬಿಡುಗಡೆಯ ಭಾಗ್ಯ ಲಭ್ಯವಾಗುತ್ತದೆ. ಅವರು ಬಿಡುಗಡೆಯಾದಾಗ ಅವರಿಗೆ ಶೌರ್ಯಪದಕ ಲಭಿಸಿದ ಯೋಧರಿಗೂ ಸಿಕ್ಕದ, ಪ್ರಶಸ್ತಿ ವಿಜೇತ ಕಲಾವಿದರಿಗೂ ಸಿಗದ, ಆರತಿಯ, ಸಿಹಿ ಉಣಿಸುವ, ವೀರೋಚಿತ ಸ್ವಾಗತ ಸಿಗುತ್ತದೆ. ಅವರು ಬಂಧನದಲ್ಲಿದ್ದದ್ದು ರಾಷ್ಟ್ರಸೇವೆಯೆಂದು ಪರಿಗಣನೆಯಾಗಿ ಮುಂದೊಂದು ದಿನ ಅವರಿಗೆ ತಾಮ್ರಪತ್ರ, ಮಾಸಾಶನ ಮಾತ್ರವಲ್ಲ, ಪದ್ಮ ಪ್ರಶಸ್ತಿ ಬಂದರೂ ಆಶ್ಚರ್ಯವಿಲ್ಲ. ರಾಜಕೀಯದಲ್ಲಂತೂ ಅವರಿಗೆ ಅಗ್ರ ಸ್ಥಾನ. ಇದಕ್ಕೆ ಯಾರು ಹೊಣೆ? ಇಲ್ಲೇ ಪ್ರಜೆಗಳ ಮೌಲ್ಯಮಾಪನವಾಗ ಬೇಕಾದದ್ದು.
ಮೊದಲ ಹಂತದಲ್ಲಿ ಪೊಲೀಸರು. ಅವರು ಸರಕಾರದಿಂದ ಅಂದರೆ ಆಳುವ ರಾಜಕಾರಣಿಗಳಿಂದ ಪ್ರಭಾವಿತರು. ತಮ್ಮ ಆತ್ಮಗಳನ್ನು, ಪ್ರಜ್ಞೆಗಳನ್ನು ಉದ್ಯೋಗಕ್ಕೆ ಸೇರುವಾಗಲೇ ಮೇಲಧಿಕಾರದ ‘ಸೇಫ್ ಡಿಪಾಸಿಟ್ ಲಾಕರ್’ನಲ್ಲಿ ಅಡವಿಟ್ಟಂತಿರುವ ಮಂದಿಯಿಂದ ಕಾನೂನಿನ, ಅಧಿಕಾರದ ಹೆಸರಿನಲ್ಲಿ ನಿಷ್ಕರುಣೆಯ ಹೊರತು ಇನ್ನೇನನ್ನು ನಿರೀಕ್ಷಿಸಬಹುದು? ಭಾರತೀಯ ಸಾಕ್ಷ ಸಂಹಿತೆಯಲ್ಲಿ ಪೊಲೀಸರ ಮುಂದೆ ನೀಡಿದ ಹೇಳಿಕೆಗೆ ಸಾಕ್ಷಿಯು ಸಹಿಮಾಡುವಂತಿಲ್ಲವೆಂಬ ನಿಯಮವಿರುವುದರಿಂದ ಅವರು ಬೇಕಾದ್ದನ್ನು ಬರೆದುಕೊಳ್ಳಬಹುದಲ್ಲವೇ? ಇದರ ಮಾರಕ ಪರಿಣಾಮಗಳು ಅಭಿವ್ಯಕ್ತಿಗೊಳ್ಳುವುದು ನ್ಯಾಯಾಲಯಗಳಲ್ಲಿ-ವಿಚಾರಣೆಯ ಕಾಲಕ್ಕೆ. ಎರಡನೆಯ ಹಂತದಲ್ಲಿ ಅಭಿಯೋಜನೆಗಳಿರುತ್ತವೆ. ಅವರೂ ಪ್ರಭಾವಕ್ಕೆ ಸುಲಭ ತುತ್ತುಗಳು. ಅಭಿಯೋಜನಾ ದಾಖಲೆಗಳನ್ನು ಬೇಕಾದಂತೆ ಪರಿವರ್ತಿಸಬಲ್ಲ ಅಧಿಕಾರ, ಸಾಮರ್ಥ್ಯ ಅವರಿಗಿರುತ್ತದೆ. ರಾಜಕಾರಣವಂತೂ ಪಕ್ಷಬಾಂಧವರ ರಕ್ಷಣೆಗಾಗಿ ಕಾನೂನನ್ನು ಅನುಸರಿಸುತ್ತವೆಯೇ ಹೊರತು ಜನಹಿತಕ್ಕಲ್ಲ. ಅಪರೂಪಕ್ಕೆ ಪ್ರಬಲ ರಾಜಕೀಯ ಗುದ್ದಾಟ ನಡೆದಾಗ ಮಾತ್ರ ಸರಕಾರಗಳು ‘ತಮ್ಮವರನ್ನು’ ತಕ್ಷೀರಿಗೆ ಗುರಿಪಡಿಸಲು ಅರೆಮನಸ್ಸಿನಿಂದ ಒಪ್ಪುತ್ತವೆ. ಈಗಂತೂ ಸರಕಾರದ ‘ಸ್ವಾಯತ್ತ’ ಸಂಸ್ಥೆಗಳಾದ ಸಿಬಿಐ, ಈಡಿ, ಎನ್ಐಎ, ಐಟಿ, ಮುಂತಾದ ಏಜೆನ್ಸಿಗಳನ್ನು ರಾಜಕೀಯ ವಿರೋಧಿಗಳನ್ನು ಮಣಿಸಲು ಬಳಸುತ್ತಿರುವುದು ಬಹಿರಂಗವಾಗಿದೆ. ಅಸ್ಸಾಮಿನ ಈಗಿನ ಮುಖ್ಯಮಂತ್ರಿಗಳು ಭಾಜಪವನ್ನು ಸೇರುವ ಮೂಲಕ ಅನೇಕ ಆರೋಪಗಳ ಅಗ್ನಿಪರೀಕ್ಷೆಯಿಂದ ಪಾರಾದರು. ಈಗ ಮಹಾರಾಷ್ಟ್ರದಲ್ಲಿ ಈ.ಡಿ.ಯಿಂದ ಬಂಧಿತರಾಗಿದ್ದ, ಪ್ರಧಾನಿಯಿಂದಲೇ 70 ಸಾವಿರ ಕೋಟಿ ರೂ. ಹಗರಣದ ರೂವಾರಿಯೆನಿಸಿಕೊಂಡಿದ್ದ ಅಜಿತ್ ಪವಾರ್ ಅಲ್ಲಿನ ಈಗಿನ ಭಾಜಪ-ಶಿವಸೇನೆ (ಶಿಂದೆ) ಸರಕಾರವನ್ನು ಸೇರುವ ಮೂಲಕ ಪ್ರಾಮಾಣಿಕರಾದರು; ಪುನೀತರಾದರು; ದೇಶಭಕ್ತರಾದರು. ಈ ದೇಶ ಮತ್ತು ರಾಜ್ಯಗಳನ್ನು ಗಮನಿಸಿದರೆ ಪ್ರತೀ ಸರಕಾರವೂ ತನ್ನ ಪಕ್ಷದ ಧುರೀಣರ, ಸದಸ್ಯರ, ಹಿತೈಷಿಗಳ, ಕಾರ್ಯಕರ್ತರ ಘನಘೋರ ಅಪರಾಧಗಳನ್ನು ಮೊದಲ ಹಂತದಲ್ಲಿ ಹತ್ತಿಕ್ಕಲಾಗದಿದ್ದರೆ, ಎರಡನೆಯ ಹಂತದಲ್ಲಿ ಅಭಿಯೋಜನೆಯನ್ನು ಹಿಂದೆ ಪಡೆದುಕೊಳ್ಳುವುದರ ಮೂಲಕ ಸಮಾಧಿಮಾಡುತ್ತದೆ. ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆಪಾದನೆಯಿರುವ ಫೆಡರೇಷನ್ ಅಧ್ಯಕ್ಷ ಬ್ರಿಜ್ಭೂಷಣ್ ಒಬ್ಬ ಸಂಸದನಾಗಿರುವುದರಿಂದ ಮಾತ್ರವಲ್ಲ ಆಡಳಿತ ಪಕ್ಷರಾಜಕೀಯಕ್ಕೆ ಅನಿವಾರ್ಯ ಅಂಗವಾಗಿರುವುದರಿಂದ ಒಂದು ದಿನವೂ ಜೈಲು ಸೇರದೆ ಉಳಿದಿದ್ದಾನೆ. ಇನ್ನುಳಿದಂತೆ ಅಧಿಕಾರಿಗಳು ಕಾರ್ಯಾಂಗದ ಭಾಗ ಮಾತ್ರವಲ್ಲ, ಸ್ವತಃ ಕಾರ್ಯಾಂಗವೇ ಆಗಿರುವುದರಿಂದ ಅವರಿಂದ ಯಾವುದೇ ಲೋಪಗಳಾದರೂ ಕೊನೆಗೆ ಅವು ಸಾರ್ವಜನಿಕ ಬೊಕ್ಕಸದಿಂದ ಪಾವತಿಯಾಗುತ್ತವೆ. (ಅಪರೂಪಕ್ಕೊಮ್ಮೊಮ್ಮೆ ಅವರು ಹೊಣೆಯಾಗುವುದುಂಟು!) ನ್ಯಾಯನಿರ್ಣಯಗಳಲ್ಲಿ ಸರಕಾರದ ವೆಚ್ಚದಲ್ಲೇ ಸಾಕಷ್ಟು ಮುಫತ್ತಾದ ಸವಲತ್ತುಗಳು ದೊರಕುತ್ತವೆ. ಲಂಚ ಸ್ವೀಕರಿಸಿ ಭೂಮಂಜೂರಾತಿ ನಡೆದಲ್ಲಿ ಅದು ಇನ್ಯಾವಾಗಲೋ ರದ್ದಾಗಬಹುದು; ಪ್ರಜೆ ಭೂಹೀನನಾಗಬಹುದು; ಆದರೆ ಈ ಅಕ್ರಮ ಮಂಜೂರಾತಿಗೆ ಕಾರಣವಾದ ಅಧಿಕಾರಿಗಳು ಮೂತಿಯನ್ನು ಒರೆಸಿಕೊಂಡು ಪಾರಾಗುತ್ತಾರೆ. ಸಂವಿಧಾನ/ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವೆಂಬ ಹೆಗ್ಗಳಿಕೆಯ ಮಾಧ್ಯಮವು ಈ ದೇಶದಲ್ಲಿ ಅತ್ಯಂತ ಹೆಚ್ಚು ಅಧಿಕೃತ ಮತ್ತು ಅನಧಿಕೃತ ಬಿಟ್ಟಿಭಾಗ್ಯಗಳನ್ನು ಅನುಭವಿಸುತ್ತಿರುವ ಅಂಗ. ಕಾನೂನಿನಡಿ ಅವರಿಗೆ ಇತರರಿಗಿಂತ ಹೆಚ್ಚು ಸೌಲಭ್ಯಗಳು ಇಲ್ಲವೆಂದು ನ್ಯಾಯಾಲಯಗಳು ಪುಟಗಟ್ಟಲೆ ಬರೆದರೂ ಅವರಿನ್ನೂ ಆಡಳಿತದ ಮಾತ್ರವಲ್ಲ, ನ್ಯಾಯಾಂಗದ ನೀಲಿಗಣ್ಣಿನ ಹುಡುಗರಾಗಿಯೇ ಉಳಿದಿದ್ದಾರೆ. ಅತೀ ನೀಚ ಪತ್ರಕರ್ತನೂ ಅತ್ಯುತ್ತಮ ನಾಗರಿಕನಿಗಿಂತ ಹೆಚ್ಚು ಅನುಕೂಲದಲ್ಲಿದ್ದಾನೆ. ಪ್ರಚಾರವೇ ಅಸ್ತಿತ್ವದಲ್ಲಿಲ್ಲದ ಸತ್ಯದ ಮುಖವಾದ್ದರಿಂದ ನಮ್ಮ ರಾಜಕಾರಣಿಗಳು ಮತ್ತು ಸಾರ್ವಜನಿಕ ಜೀವನದ ಪ್ರತಿಷ್ಠಿತರು ಪಕ್ಷಭೇದ ಮರೆತು ಪತ್ರಕರ್ತರನ್ನು ಓಲೈಸುವುದು ಅನಿವಾರ್ಯ. ಆರ್ನಬ್ ಒಂದು ಉದಾಹರಣೆ ಮತ್ತು ಇತರರಿಗೆ ಪಾಠ.
ಇವರಲ್ಲದೆ ಏನು ಮಾಡಿಯೂ, ಏನು ಮಾತನಾಡಿಯೂ ದಕ್ಕಿಸಿಕೊಳ್ಳುವವರು ನಮ್ಮ ಸಂತಶ್ರೇಷ್ಠರು. ‘ಧರ್ಮ ಸಂಸತ್’ನಲ್ಲಿ ಈ ಸಾಧುಗಳು ಆಡಿದ ಮಾತುಗಳನ್ನು ಶ್ರೀಸಾಮಾನ್ಯನೊಬ್ಬನಾಡಿದ್ದರೆ ಆತ ಇಷ್ಟು ಹೊತ್ತಿಗೆ ಕಂಬಿಯ ಹಿಂದೆ ಕೆಲವು ವರ್ಷಗಳನ್ನು ಕಳೆಯಬೇಕಿತ್ತು. ಓಯಸಿಸ್ಗಳ ಹಾಗೆ ಅಪವಾದಗಳಿದ್ದರೆ ಅವರು ಪ್ರಾತಃಸ್ಮರಣೀಯರು!
ನಮ್ಮ ನ್ಯಾಯಾಂಗಕ್ಕೆ ಇವೆಲ್ಲ ಗೊತ್ತಾಗುವುದಿಲ್ಲವೇ? ಆದರೆ ಅವರಿಗೂ ನಿವೃತ್ತಿಯಿದೆ. ಭವಿಷ್ಯ ಸುಭದ್ರವಾಗಿರಬೇಕು. ಆದ್ದರಿಂದ ಅವೂ ನಿಯಮಬದ್ಧವಾಗಿರುತ್ತವೆಯೇ ಹೊರತು ಸ್ವಯಿಚ್ಛೆಯಿಂದ ಯಾವ ಸುಧಾರಣೆಯನ್ನೂ ಅಪೇಕ್ಷಿಸುವುದಿಲ್ಲ. ನ್ಯಾಯದೇವತೆ ಹೆಳವನ ಹೆಗಲ ಮೇಲೆ ಕುಳಿತ ಕುರುಡನಂತಿದೆ. ಅದೀಗ ಧೃತರಾಷ್ಟ್ರನೋ, ಗಾಂಧಾರಿಯೋ ಎಂಬುದು ಸ್ಪಷ್ಟವಾಗಿ ಗೊತ್ತಾಗಿಲ್ಲ. ‘ನ್ಯಾಯಾಲಯ ನಿಂದನೆ’ಯ ಕಾಯ್ದೆ ರದ್ದಾದರೆ ಗೊತ್ತಾಗಬಹುದು.
ಇವನ್ನೆಲ್ಲ ಪರಿಗಣಿಸಿದರೆ ಈ ದೇಶದ ಪ್ರಜಾಪ್ರಭುತ್ವದಲ್ಲಿ ‘ಪ್ರಜೆ’ಯೆಂದರೆ ಯಾವ ರೀತಿಯ ಅಧಿಕಾರ, ಪ್ರಭಾವ, ವರ್ಚಸ್ಸು ಇಲ್ಲದವನು. ಆದ್ದರಿಂದ ಈ ದೇಶದ ಪ್ರಜಾಪ್ರಭುತ್ವವು ಬರಿಯ ಪ್ರಜೆಗಳ ಹೊರತಾಗಿ ಇನ್ನುಳಿದ ಎಲ್ಲರ ರಕ್ಷಣೆಯನ್ನು ಮಾಡುವಂತಿದೆ. ಕ್ರಿಮಿನಲ್ ಕಾನೂನಂತೂ ನೌಕರರೂ ಸೇರಿದಂತೆ ಸರಕಾರೀ ಭಾಗಿದಾರರಿಗೆ ಎಲ್ಲ ರೀತಿಯ ರಕ್ಷಣೆಯನ್ನು ನೀಡಿದೆ. ಅದನ್ನು ಮೀರಿಯೂ ಯಾವನಾದರೂ ಸಿಕ್ಕಿಬಿದ್ದರೆ ಅದು ಆತನ ಗ್ರಹಚಾರ. ಬಹುತೇಕ ನಿರ್ಧಾರಗಳೆಲ್ಲವೂ ರಾಜಕೀಯವಾದ್ದರಿಂದ ಮತ್ತು ಅವಕ್ಕೊಂದು ‘ಮೌಲ್ಯ’ ನಿಗದಿಗೊಳ್ಳುವುದರಿಂದ ಕೊನೆಗುಳಿಯುವುದು ಯಾರ ನೆರವೂ ಇಲ್ಲದ ಅನಾಥರು ಮಾತ್ರ.
ಆದ್ದರಿಂದ ನಮ್ಮಲ್ಲಿರುವುದು ಪ್ರಜೆಗಳಿಗಿಲ್ಲದ ‘ಪ್ರಜಾಪ್ರಭುತ್ವ’! ಪ್ರಜೆಗಳು ಅಂದರೆ ಬದುಕುಳಿದ ಮತ್ತು ಇನ್ನೂ ನಿರ್ವಂಶವಾಗದ ತಪ್ಪಿಗಾಗಿ ಉಳಿದಿರುವ ‘ಚಾವಟಿಯೇಟಿಗೆ ಅಚ್ಚುಮೆಚ್ಚಿನ ವಸ್ತು’!