ಸಾಹಿತ್ಯ(ದ) ಸಂತೆಯಲ್ಲಿ

Update: 2024-08-08 05:42 GMT

ಕಾಲವನ್ನು ಮೀರಿದ ಚಿಂತನೆಗಳು ಮಾತ್ರ ಭವಿಷ್ಯದಲ್ಲಿ ಗುರುತಾಗುತ್ತವೆಂಬುದಕ್ಕೆ ಕಳೆದ ಸುಮಾರು ಸಾವಿರ ವರ್ಷಕ್ಕೂ ಮಿಕ್ಕಿದ ಅಗಾಧ ಸಾಹಿತ್ಯ ಸೃಷ್ಟಿಯಲ್ಲಿ ಉಳಿದ ಸಾಹಿತ್ಯ ಎಷ್ಟೆಂದು ಪರಿಗಣಿಸಿದರೆ ಅರ್ಥವಾದೀತು. ಈಗ ಉಳಿದಿರುವ ಸಾಹಿತ್ಯವಷ್ಟೇ ರಚನೆಯಾಗಿತ್ತೆಂದು ನಂಬಿಕೊಂಡರೆ ಅದು ದಡ್ಡತನವಾದೀತು. ಹೊಳೆದ ತಾರೆಗಳಿಷ್ಟೇ. ಉಳಿದವು ಆಕಾಶವಲ್ಲ; ತಮ್ಮ ತಮ್ಮ ಕಾಲದಲ್ಲಿ ಮಿಂಚಿ ಮರೆಯಾಗಿರಬೇಕೆಂದು ಊಹಿಸಿದರೆ ಸರಿ. ಅವಕ್ಕೆ ಉಲ್ಕೆಗಳೆಂದಾದರೂ ಕರೆಯಿರಿ; ಬೇರೆ ಏನನ್ನಾದರೂ ಹೆಸರಿಡಿ. ಅರ್ಥ ಒಂದೇ.

ಸಾಹಿತ್ಯ ಮನುಷ್ಯನ ಅತ್ಯದ್ಭುತ ಯೋಚನೆ ಮತ್ತು ಯೋಜನೆಗಳಲ್ಲೊಂದು. ಅಂತರಂಗವನ್ನು ಕಾಡಬಲ್ಲ, ಸಮಾಜವನ್ನು ಪ್ರಭಾವಿಸಬಲ್ಲ ಮಾಧ್ಯಮ. ಸಾವಿರಾರು ವರ್ಷಗಳಿಂದ ಹರಿದು ಬಂದ ಈ ವಾಹಿನಿ ಸಮಾಜದ ಇತರ ಕ್ಷೇತ್ರಗಳಲ್ಲಿ ನಡೆಯುವ ವಂಚನೆ ಮತ್ತಿತರ ಕೃತ್ರಿಮಗಳನ್ನು ನಿವಾರಿಸಬಲ್ಲ, ಇಲ್ಲವೇ ಶಮನಗೊಳಿಸಬಲ್ಲ ಶಕ್ತಿಯನ್ನು ಹೊಂದಿದೆಯೆಂದು ನಂಬಲಾಗಿದೆ. ಆದರೆ ಆಧುನಿಕ ಕಾಲದಲ್ಲಿ ಧರ್ಮ, ದೇವರುಗಳಂತೆ ಜನವಂಚನೆಯ ಶಕ್ತಿಯನ್ನು ಹಬ್ಬಿಸುತ್ತಿದೆ; ಕುರುಡುನಾಯಿ ಸಂತೆಗೆ ಬಂದು ಏನನ್ನು ಕಂಡಿತೋ ಅದನ್ನು ನಾವು ಸಾಹಿತ್ಯದಲ್ಲೂ ಕಾಣಬಹುದೆಂಬ ಅಪಥ್ಯ ಸತ್ಯವನ್ನು ಬಿಂಬಿಸುತ್ತಿದೆ. ಸಾಹಿತ್ಯವು ಏಕಾಂತದಿಂದ ಲೋಕಾಂತದವರೆಗೆ (ಎಂಬ ಕ್ಲೀಶೆಯ ಮಾತಿನಿಂದ) ದುಃಖದಿಂದ ಹಾಸ್ಯದವರೆಗೂ ಚಾಚಿದೆ ಎನ್ನಬಹುದು; ಆದರೆ ಅಪಹಾಸ್ಯಕ್ಕೆ ಗುರಿಯಾಗಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ.

ಯಾವುದೇ ವಿಚಾರ ಅಥವಾ ಭಾವವು ತನ್ನ ಕಾಲದ, ಸಮಾಜದ ಚೌಕಟ್ಟಿನೊಳಗೆ ಅಚ್ಚುಕಟ್ಟಾಗಿ ನೆಲೆಗೊಳ್ಳಬಯಸುತ್ತದೆ. ಸಾಮಾಜಿಕ ಒಳಿತು-ಕೆಡುಕುಗಳು, ಸೋಲು-ಗೆಲುವುಗಳು, ಸಿಹಿ-ಕಹಿಗಳು, ಸುಖ-ದುಃಖಗಳು ಕಲೆಯಲ್ಲಿ ಅದರಲ್ಲೂ ಅದರ ಲಿಖಿತರೂಪವಾದ ಸಾಹಿತ್ಯದಲ್ಲಿ ಪ್ರತಿಫಲನಗೊಳ್ಳುವುದು ಇದೇ ಕಾರಣಕ್ಕೆ. ಎಲ್ಲ ಕಲೆಗಳಲ್ಲೂ ಸಾಹಿತ್ಯವೇ ಮೇಲುಗೈ ಸಾಧಿಸಿದ್ದರೆ ಅದು ಕನಿಷ್ಠ, ವಾಚಕವಾಗಿ ತನ್ನ ಭೌತಿಕ ಸ್ವರೂಪದಿಂದ, ಸ್ಮತಿಯಲ್ಲಿ ದೀರ್ಘಕಾಲೀನ ಉಳಿವಿನಿಂದ ಮತ್ತು ಇತರ ಮಾಧ್ಯಮಗಳಿಂದ ಮಾತ್ರವಲ್ಲ ನೆನಪಿನಿಂದ ಉಳಿಯಬಲ್ಲ ಸಾಧ್ಯತೆ ಇತರ ಕಲಾಪ್ರಕಾರಗಳಿಗಿಂತ ಹೆಚ್ಚಿರುವುದರಿಂದ. ಹೀಗಿದ್ದೂ ತನ್ನ ಸಾಮಾಜಿಕ ಪ್ರೇರಣೆಗಳು ಮಾತ್ರವಲ್ಲ, ಸಾಮಾಜಿಕ ಒತ್ತಡಗಳನ್ನೂ ಸಹಿಸಿಕೊಂಡೇ ಸಾಹಿತ್ಯ ರಚನೆ ಮತ್ತು ಅದರ ಪ್ರಸಾರ ನಡೆಯಬೇಕಾಗುತ್ತದೆ. ಕಾಲಾನುಕಾಲಕ್ಕೆ ಸಮಾಜದ ಹಾದಿಗಳು ಬದಲಾಗುತ್ತಿದ್ದಂತೆ ಮುಖ್ಯವಾಹಿನಿಯ ಸಾಹಿತ್ಯ ಅದಕ್ಕನುಗುಣವಾಗಿ ಹರಿಯಬೇಕಾಗುತ್ತದೆ. ಕಾಲವನ್ನು ಮೀರಿದ ಚಿಂತನೆಗಳು ಮಾತ್ರ ಭವಿಷ್ಯದಲ್ಲಿ ಗುರುತಾಗುತ್ತವೆಂಬುದಕ್ಕೆ ಕಳೆದ ಸುಮಾರು ಸಾವಿರ ವರ್ಷಕ್ಕೂ ಮಿಕ್ಕಿದ ಅಗಾಧ ಸಾಹಿತ್ಯ ಸೃಷ್ಟಿಯಲ್ಲಿ ಉಳಿದ ಸಾಹಿತ್ಯ ಎಷ್ಟೆಂದು ಪರಿಗಣಿಸಿದರೆ ಅರ್ಥವಾದೀತು. ಈಗ ಉಳಿದಿರುವ ಸಾಹಿತ್ಯವಷ್ಟೇ ರಚನೆಯಾಗಿತ್ತೆಂದು ನಂಬಿಕೊಂಡರೆ ಅದು ದಡ್ಡತನವಾದೀತು. ಹೊಳೆದ ತಾರೆಗಳಿಷ್ಟೇ. ಉಳಿದವು ಆಕಾಶವಲ್ಲ; ತಮ್ಮ ತಮ್ಮ ಕಾಲದಲ್ಲಿ ಮಿಂಚಿ ಮರೆಯಾಗಿರಬೇಕೆಂದು ಊಹಿಸಿದರೆ ಸರಿ. ಅವಕ್ಕೆ ಉಲ್ಕೆಗಳೆಂದಾದರೂ ಕರೆಯಿರಿ; ಬೇರೆ ಏನನ್ನಾದರೂ ಹೆಸರಿಡಿ. ಅರ್ಥ ಒಂದೇ.

ಆಧುನಿಕ ಸಾಹಿತ್ಯದಲ್ಲಿ ತಂತ್ರಜ್ಞಾನದಡಿ ತಿಪ್ಪೆಗಟ್ಟುತ್ತಿರುವ ಸಾಹಿತ್ಯವೆಷ್ಟು, ಹೆಪ್ಪುಗಟ್ಟುತ್ತಿರುವ ಸಾಹಿತ್ಯವೆಷ್ಟು ಎಂದು ಈಗಲೇ ಮೌಲ್ಯನಿರ್ಣಯವನ್ನು ಮಾಡುವುದು ತಪ್ಪಾದೀತು. ಸಾಮಾಜಿಕ ಸ್ಥಿತಿ-ಗತಿಯನ್ನು ತೊರೆದು ಸಾಹಿತ್ಯ ಬದುಕಿ ಉಳಿಯಲಾರದು; ಸಾಹಿತಿಗಳಂತೂ ಖಂಡಿತಾ ಉಸಿರಾಡಲಾರರು. ಸಮಾಜದ ಅರ್ಥವ್ಯವಸ್ಥೆಯು ಹೇಗೆ ಸಿರಿವಂತಿಕೆಯ ಗೋಪುರದ ತುತ್ತತುದಿಯನ್ನು ಹೇಗಾದರೂ ತಲುಪುವಂತೆ ಪ್ರೇರೇಪಿಸುತ್ತದೆಯೋ ಅದೇ ರೀತಿ ಸಾಹಿತ್ಯದ ಎತ್ತರವನ್ನು ಅಳೆಯುವಂತೆ ಬರಹಗಾರರನ್ನು ಪ್ರೇರೇಪಿಸುತ್ತದೆ. ಅದಾನಿ-ಅಂಬಾನಿಯವರ ಕಾಲದಲ್ಲಿ ನಾವು ಬರಹಗಾರರು ಬದುಕಿದ್ದೆವು ಎಂಬುದು ಸತ್ಯವಾದರೂ ನಮ್ಮ ಕಾಲದಲ್ಲಿ ಅವರು ಮತ್ತು ಅವರಂತಹ ಸಿರಿವಂತರು ಬದುಕಿದ್ದರು ಎಂಬುದನ್ನು ಸ್ಥಾಪಿಸಲು ಬರಹಗಾರರು ಹೆಣಗಾಡಬೇಕು. ಅರ್ಥಸ್ಥಿತಿ ಮತ್ತು ಸಾಹಿತ್ಯದ ಅರ್ಥಸ್ಥಿತಿ ಸಮಾನಾಂತರವಾದ ಅಥವಾ ಪರಸ್ಪರರನ್ನು ಮೀರಿಸುವ ಬಹುಮಹಡಿ ಕಟ್ಟಡಗಳನ್ನು ಯೋಜಿಸುತ್ತವೆ. ಕೊನೆಗೂ ಈ ಲಕ್ಷ್ಮೀ-ಸರಸ್ವತಿ ಕಾದಾಟದಲ್ಲಿ ಯಾರು ಮತ್ತು ಯಾವುದು ದೀರ್ಘಕಾಲೀನ ಎಂಬುದಕ್ಕೆ ಕಾಲವೇ ಉತ್ತರಕೊಡುತ್ತದೆ. ಆದರೆ ಇವೆರಡರ ಓಟವನ್ನು ದೂರದಿಂದ ನಿಂತು ನೋಡುವ ಹಾದಿಹೋಕ ವಿಸ್ಮಯದಿಂದ ಕಾಣುತ್ತಾನೋ, ಅನುಭವಿಸುತ್ತಾನೋ ಅಥವಾ ಭಾಷ್ಯಕಾರನಾಗಿ ನಿರೂಪಿಸುತ್ತಾನೋ ಎಂಬುದು ಫಲಿತಾಂಶ ಮತ್ತು ಪರಿಣಾಮದಿಂದ ಶೋಧವಾಗುವ ಕಾಲಮಾನದ ಸತ್ಯ.

ಸಮಕಾಲೀನವಾಗಿ ನೋಡಿದ, ಕೇಳಿದ ಕೆಲವು ವಾಸ್ತವ ಮತ್ತು ಕಾಲ್ಪನಿಕ ಮಾತುಗಳನ್ನು ಹೀಗೆ ದಾಖಲಿಸಬಹುದೇನೋ?

1. ‘‘ಎಷ್ಟು ಚೆನ್ನಾಗಿದೆ ಈ ಅನುವಾದ! ಅದ್ಭುತವಾಗಿದೆ. ಮೂಲದಂತೆಯೇ ಓದಿಸಿಕೊಂಡು ಹೋಗುತ್ತದೆ.’’ ‘‘ಮೂಲ ಓದಿದ್ದೀರಾ?’’ ‘‘ಇಲ್ಲ. ಇಷ್ಟೊಳ್ಳೆ ಅನುವಾದ ಇರಬೇಕಾದರೆ ಮೂಲ ಯಾರಿಗೆ ಬೇಕ್ರೀ?’’ ‘‘ಸರಿ.... ಆದ್ರೂ... ಮೂಲ ಓದಿದ್ದೀರಾ?’’ ‘‘ಇಲ್ಲ. ’’ ‘‘ಸರಿ.’’ (ಇದು ಅನುವಾದದ ಕುರಿತ ವಿಮರ್ಶೆ.)

2. ‘‘1950ರಿಂದ 90ರ ವರೆಗಿನ ಅವಧಿ ಹಿಂದಿ ಸಿನೆಮಾ ಸಂಗೀತದ ಸುವರ್ಣ ಕಾಲ. ಈಗ ಅಂತಹ ಹಾಡುಗಳೇ ಬರೋದಿಲ್ಲ. ಅದೇನ್ರೀ.. ತಲತ್ ಮಹಮೂದ್, ರಫಿ, ಮುಕೇಶ್, ಮನ್ನಾಡೇ, ಕಿಶೋರ್ ಕುಮಾರ್, ಲತಾ, ಆಶಾ ಹೀಗೆ ಹತ್ತಾರು ಹೆಸರು... ಹಳೆಯ ಸಿನೆಮಾಗಳು ಒಳ್ಳೆಯ ಕಥಾವಸ್ತುವನ್ನು ಹೊಂದಿದ್ದವು... ಅಭಿನಯವೂ ಉತ್ತಮವಾಗಿದ್ದವು... ಕೆಲವು ನ್ಯೂ ವೇವ್ ಸಿನೆಮಾಗಳೂ ಬಂದಿದ್ದವು..ಎಲ್ಲವೂ ಚೆನ್ನಾಗಿದ್ದವು... ಈಗಿನಂತಲ್ಲ... ಓಲ್ಡ್ ಈಸ್ ಗೋಲ್ಡ್...’’ ‘‘ನಮ್ಮ ಸಾಹಿತ್ಯ?’’ ‘‘ನಾನು ಕಡಿಮೆ ಓದೋದು... ಬರವಣಿಗೆ ನಡುವೆ ಓದೋದಕ್ಕೆ ಸಮಯ ಸಿಗೋದೇ ಇಲ್ಲ.. ಇದ್ರೂ ನಮ್ಮ ಕೆಲವು ಸ್ನೇಹಿತರ ಸಾಹಿತ್ಯ ಅಷ್ಟೇ ಓದ್ತೇನೆ.. ಈಗ ಬರೋವಷ್ಟು ಒಳ್ಳೆಯ ಸಾಹಿತ್ಯ ಕನ್ನಡ ಸಾಹಿತ್ಯದ ಇತಿಹಾಸದಲ್ಲೇ ಬಂದಿಲ್ಲ ಅನ್ಸುತ್ತೆ...’’ ‘‘ಹಳೆಯ ಸಾಹಿತ್ಯ... ಪಂಪ, ರನ್ನ, ಕುಮಾರವ್ಯಾಸ... ಈಚೆಗಿನ ಕುವೆಂಪು, ಬೇಂದ್ರೆ, ಕಾರಂತ..? ಹೋಗಲಿ, ಲಂಕೇಶ್, ಕಾರ್ನಾಡ್, ಅನಂತಮೂರ್ತಿ, ಭೈರಪ್ಪ..?’’ ‘‘ನಾನು ಹಳೆಯದನ್ನು ಓದೋದಿಲ್ರೀ.. ಲಂಕೇಶ್... ಪರವಾಗಿಲ್ಲ.. ಇಷ್ಟಕ್ಕೂ ಅವನ್ನೆಲ್ಲ ಓದಿ ಏನಾಗ್ಬೇಕಾಗಿದೆ?’’ ‘‘ಸರಿ’’. (ಇದು ಸಿನೆಮಾವನ್ನು ಹೋಲಿಸಿ ಹಳೆಯ-ಹೊಸ, ಸಾಹಿತ್ಯದ ಕುರಿತು ಚರ್ಚೆ.)

3. ‘‘ಅವ್ರನ್ನು ಗ್ರೇಟ್‌ರೈಟರ್ ಅಂದ್ರಲ್ಲ, ಯಾಕೆ?’’ ‘‘ಅವ್ರಿಗೆ ಬಂದ ಪ್ರಶಸ್ತಿ ನೋಡ್ರೀ.. ಸುಮ್ನೆ ಬರುತ್ತಾ?’’ ‘‘ಅವ್ರ ರೈಟಿಂಗ್ಸ್‌ನಲ್ಲಿ ಏನು ವಿಶೇಷ?’’ ‘‘ನಾನು ಡಿಟೈಲ್ ಆಗಿ ಓದಿಲ್ಲ... ಆದ್ರೂ ಅವ್ರಿಗೆ ಬಂದ ಅವಾರ್ಡ್ ನೋಡಿಯೇ ಅವ್ರೊಬ್ಬ ಗ್ರೇಟ್‌ರೈಟರ್ ಅಂತ ಹೇಳ್ಬೌದು..’’ ‘‘ಸರಿ’’. (ಇದು ಶ್ರೇಷ್ಠತೆಯ ಅಳತೆಗೋಲಿನ ಕುರಿತು.)

4. ‘‘ಶ್ರೀಯುತರ ಈ ಕೃತಿಗೆ ಪ್ರಶಸ್ತಿ ಬಂದಿದೆ. ಅಭಿನಂದನಾ ಭಾಷಣ ಮಾಡುವ ಅವಕಾಶ ನನಗಿದೆ. ತೀರ್ಪುಗಾರರಾಗಿ ನಾವು ಇದನ್ನು ಯಾಕೆ ಮೆಚ್ಚಿಕೊಂಡೆವು ಎಂಬುದನ್ನು ಹೇಳಲು ನನಗೆ ತುಂಬಾ ಸಂತೋಷ, ಹೆಮ್ಮೆ ಅನ್ನಿಸುತ್ತದೆ..’’ ‘‘ನೀವೇ ಅದಕ್ಕೆ ಮುನ್ನುಡಿ ಬರೆದಿದ್ದೀರಂತಲ್ಲ..?’’ ‘‘ಹೌದು. ಆದರೆ ಅದಕ್ಕಾಗಿ ನಾನು ಅವರ ಪರವಾಗಿ ತೀರ್ಪು ನೀಡಿದ್ದೇನೆಂದು ನೀವು ಭಾವಿಸಬಾರದು. ಹಿ ಡಿಸರ್ವ್ಟ್‌.’’. (ಇದು ಪ್ರಶಸ್ತಿ ನೀಡಿದ ಬಳಿಕ ತೀರ್ಪುಗಾರರ ನುಡಿ ಮತ್ತು ಸಭಿಕರ ಸಂಶಯಕ್ಕೆ ರಕ್ಷಣಾತ್ಮಕ ಉತ್ತರ.)

5. ‘‘ಟಾಪ್‌ಟೆನ್‌ನಲ್ಲಿ ಈ ವಾರ ನನ್ನ ಕೃತಿಯೂ ಇದೆ...’’ ‘‘ಕಂಗ್ರಾಟ್ಸ್! ಎಷ್ಟು ಪ್ರತಿ ಮಾರಾಟವಾಗಿದೆ?’’ ‘‘ಟಾಪ್‌ಟೆನ್‌ನಲ್ಲಿ ಮೊದಲ ಸ್ಥಾನ ಬಂದಿರುವ ಕೃತಿ 10 ಕಾಪಿ ಸೇಲಾಗಿದ್ಯಂತೆ.. ನಂದು 10ನೇ ಸ್ಥಾನದಲ್ಲಿದೆ... ಒಂದಾದರೂ ಸೇಲಾಗಿರ್ಬೇಕಲ್ಲ..!’’ (ಇದು ಟಾಪ್‌ಟೆನ್ ಕುರಿತ ಮಾಹಿತಿ.)

6. ‘‘ನಿಮ್ಮ ಕೃತಿಗೆ ಈ ಬಾರಿ ಅವಾರ್ಡ್ ಬಂತಲ್ಲ.. ಏನು ಅದೃಷ್ಟ ಕಣ್ರೀ ನಿಮ್ಮದು.. ಹೌದು. ನಾನು ಅರ್ಜಿ ಹಾಕಿರ್ಲಿಲ್ಲ.. ಆದ್ರೂ ಕೊಟ್ರು ನೋಡಿ..’’ ‘‘ಅವಾರ್ಡ್ ಸಮಿತಿ ಅಧ್ಯಕ್ಷರು ನಿಮ್ಮವರೇ ಅಲ್ವ?’’ ‘‘ಹಾಗೇನಿಲ್ಲ... ಅವ್ರ ನಮ್ ಮೇಷ್ಟ್ರು.. ನಾನು ಏನ್ ಬರೆದರೂ ಅವ್ರಿಗೆ ಕಳಿಸ್ತೇನೆ... ಆದ್ರೂ ಅವ್ರ ನಾನು ಅವ್ರ ಫೇವರಿಟ್ ಅಂತ ಅವಾರ್ಡ್ ಕೊಟ್ಟಿಲ್ಲ... ಅವ್ರ ಬಹಳ ವಸ್ತುನಿಷ್ಠರು..’’ (ಇದು ಅವಾರ್ಡ್ ಬಂದ ಬಗ್ಗೆ.)

7. ಅಭಿನಂದನಾ ಸಮಾರಂಭದಲ್ಲಿ ಕೇಳಿದ್ದು: ‘‘ಇವರು ನಿಜವಾದ ಕವಿ’’. ಹಾಗಾದರೆ ನಿಜವಲ್ಲದ ಕವಿ ಯಾರು? ‘‘ಇದು ನಿಜವಾದ ಕವನ’’. ಕವನ ಅಥವಾ ಕವನವಲ್ಲ ಎಂಬ ಆಯ್ಕೆಯಿದೆ; ಆದರೆ ನಿಜದ ಮತ್ತು ನಿಜವಲ್ಲದ ಕವನ ಯಾವುದು?

8. ಸಾಮಾಜಿಕ ಜಾಲತಾಣದಲ್ಲಿ ಹಿರಿಯ, ಜನಪ್ರಿಯ ಲೇಖಕರೊಬ್ಬರು: ‘‘ನನ್ನ ಈ ಕೃತಿಯ ಬಗ್ಗೆ ಶ್ರೀಯುತರು ಬರೆದ ವಿಮರ್ಶೆ ಓದಿ. ನನ್ನ ಕೃತಿಯ ಬಗ್ಗೆ ಬರೆದಿದ್ದಾರೆಂದು ಹೇಳುತ್ತಿಲ್ಲ; ಅವರ ಗ್ರಹಿಕೆ, ಒಳನೋಟ ಮತ್ತು ವಸ್ತುನಿಷ್ಠೆ ನಿಜಕ್ಕೂ ವಿಶಿಷ್ಟವಾದದ್ದು’’.

9. ಕೊನೆಯ ಮೊಳೆಯೆಂದರೆ- ‘‘ಇದು ಓದಲೇಬೇಕಾದ ಕೃತಿ’’.

ಸಮಾಜದ ವ್ಯವಹಾರಗಳು ಅರ್ಥಶಾಸ್ತ್ರದ ನಿಯಮದಂತೆ ಪೂರೈಕೆ-ಬೇಡಿಕೆಗಳನ್ನಾಧರಿಸಿದೆ. ನಮ್ಮ ಸಮಾಜ ಇಂದು ಮಾರುಕಟ್ಟೆಯ ನಿಯಮನಿಯಂತ್ರಿತವಾಗಿದೆ. ಖಾಸಗಿಯಾಗಿರಬೇಕಾದ್ದು ಈಗ ಬೀದಿಯಲ್ಲಿ ಮೆರವಣಿಗೆ ಹೋಗುತ್ತಿದೆ. ಹಿಂದೆಲ್ಲ ದಿನಚರಿಯೆಂದರೆ ಒಬ್ಬರ ಖಾಸಗಿ ಸ್ವತ್ತು. ಅದು ಪರರಿಗಲ್ಲ-ಕನಿಷ್ಠ ಬರೆದವನ ಜೀವ(ನ)ಪರ್ಯಂತ. ಆದರೆ ಈಗ ಮಲಗುವ ಮನೆಯಿಂದ ಅಡುಗೆಮನೆ, ಕೊನೆಗೆ ಸ್ನಾನದ-ತ್ಯಾಜ್ಯದ ಮನೆಯೂ ಬಹಿರಂಗವಾಗುತ್ತಿದೆ. ಏಕೆಂದರೆ ತನ್ನನ್ನು ತಾನು ಮಾರುಕಟ್ಟೆಯ ನಿಯಮಕ್ಕೆ ಒಳಪಡಿಸಿಕೊಳ್ಳದಿದ್ದರೆ ತಾನು ಹಿಂದುಳಿದುಬಿಡಬೇಕಾಗುತ್ತದೆಯೆಂಬ ಭಯವು ಅತ್ಯಂತ ಸಂವೇದನಾಶೀಲರನ್ನೂ ಕಾಡುತ್ತಿದೆ. ಹಿಂದುಳಿದರೂ ಸರಿ, ತನ್ನ ಖಾಸಗಿತನವನ್ನು ಕಾಯ್ದುಕೊಳ್ಳಬೇಕೆನ್ನುವ ಹಪಹಪಿಕೆಯ ಬದಲು ತಾನು ವರ್ತಮಾನದಿಂದ ಭೂತಕ್ಕೆ ಸರಿಯುತ್ತೇನೆಂಬ ಭಯ. ಕಿಂದರಿಜೋಗಿಯ ಕರೆಗೆ ಓಗೊಟ್ಟು ಎಲ್ಲರೂ ಹೋದಾಗ ಕುಂಟಹುಡುಗನೊಬ್ಬ ಮಾತ್ರ ಉಳಿದಂತಾಗಿದೆ ಅಪರೂಪಕ್ಕೊಬ್ಬೊಬ್ಬರ ಸ್ಥಿತಿ. ತಾನು ಅಪಾಯದಿಂದ ಪಾರಾಗಿದ್ದೇನೆ ಎಂಬ ತಿಳಿವಳಿಕೆ ಬರುವುದು ಕಾಲಾಂತರದಲ್ಲಿ-ಅಲ್ಲಿಯ ವರೆಗೆ ಕಾಯುವ ತಾಳ್ಮೆಯಿದ್ದರೆ. ಸದ್ಯ ಎಳೆಯಎಲೆಗಳಿಂದ ಒಣಗಿ ಬೀಳುವ ಎಲೆಗಳ ವರೆಗೆ ಯಾರಿಗೂ ವ್ಯವಧಾನವಿಲ್ಲ.

ಮಾರುಕಟ್ಟೆಯ ಬಹುಮುಖ್ಯ ತಂತ್ರವೆಂದರೆ ಜಾಹೀರಾತು. ಯಾವೊಂದು ವಸ್ತುವೂ ಮಾರಾಟವಾಗಬೇಕಾದರೆ ಅದರ ಗುಣಾಂಶ-ಋಣಾಂಶಗಳನ್ನು ನಿರ್ಧರಿಸುವ ಪ್ರಾಧಿಕಾರವು ಅದನ್ನು ಬಹಿರಂಗಗೊಳಿಸಬೇಕು. ಜನರಿಗೆ ಅದು ತಲುಪಬೇಕು; ಅರ್ಥವಾಗಬೇಕು. ಆದರೆ ಈ ಪ್ರಾಧಿಕಾರಗಳು ನಮ್ಮ ಸೆನ್ಸಾರ್‌ಮಂಡಳಿಗಳಂತೆ ಹಲವಾರು ನಿಯಮಗಳಿಗೊಳಪಟ್ಟು, (ಉಲ್ಲಂಘಿತ ವಿಚಾರಗಳನ್ನು ಗಮನಿಸಬೇಕಾದರೆ ಸೂಕ್ಷ್ಮದರ್ಶಕವೇ ಬೇಕು-ಶೇರು ಅರ್ಜಿಗಳ ನಿಯಮಾವಳಿಗಳಂತೆ!) ಅವಕ್ಕೆ ಹೇಗೋ ಅದನ್ನು ಮಾರುಕಟ್ಟೆಗೆ ಬಿಡುಗಡೆಯಾಗುವ ಅವಕಾಶವನ್ನು ಮಾಡಿಕೊಡುತ್ತವೆ. ಈ ಶರ್ತಗಳು, ಜಾಗ್ರತೆಗಳು, ಎಚ್ಚರಿಕೆಗಳು ಜನರಿಗೆ ತಲುಪುವ ಮೊದಲೇ ಮಾರಾಟಕ್ಕಿರುವ ವಸ್ತು ಜನರನ್ನು ತಲುಪುತ್ತದೆ. ಮಾರಾಟದ ವೇಗವೆಷ್ಟಿರುತ್ತದೆಂದರೆ ಸತ್ಯ ತಿಳಿಯುವ ಮೊದಲೇ ಅದು ಒಳ್ಳೆಯದೋ ಅಲ್ಲವೋ ಎಂಬುದನ್ನು ಜಾಹೀರಾತುಗಳು ನಿರ್ಧರಿಸುತ್ತವೆ. ಜನರು ಈ ಕಿಂದರಿಜೋಗಿತನಕ್ಕೆ ಬಲಿಯಾಗುತ್ತಾರೆ. ರಾಜಕೀಯದಲ್ಲೂ ಅಷ್ಟೇ; ಯಾವ ಸುದ್ದಿ ತಮಗೆ ವಿರುದ್ಧವಾಗುತ್ತದೆಯೋ ಅದಕ್ಕೆ ಪ್ರತಿಯಾಗಿ-ಕೆಲವೊಮ್ಮ ಪ್ರತೀಕಾರವಾಗಿ ಜಾಹೀರಾತುಗಳು ಸುದ್ದಿಗಳೆಂಬಂತೆಯೇ- ಮುಖಪುಟದಲ್ಲೂ- (ಮೂಲೆಯಲ್ಲೆಲ್ಲೋ ‘ಜಾಹೀರಾತು’ ಎಂಬ ಪುಟ್ಟ ನಾಮಫಲಕಗಳೊಂದಿಗೆ) ಪ್ರಕಟವಾಗಿ ಜನರನ್ನು ವಂಚಿಸುತ್ತವೆ. ರಾಜಕಾರಣಿಗಳ ಮಡಿಲಮಕ್ಕಳಂತಿರುವ ಮಾಧ್ಯಮಗಳು ಈ ಜನವಂಚನೆಯಲ್ಲಿ ಪಾಲುದಾರರಾಗಲು ಹೇಸುವುದಿಲ್ಲ. ಕ್ರೀಡಾಕ್ಷೇತ್ರಗಳಲ್ಲೂ ಇದೇ ಜಾಯಮಾನ. ಜಾಹೀರಾತೇ ಕ್ರೀಡಾಪಟುವೊಬ್ಬನ ಜ್ಯೇಷ್ಠತೆ-ಶ್ರೇಷ್ಠತೆಗಳನ್ನು ನಿರ್ಣಯಿಸುವ ಕಾಲವನ್ನು ನಾವು ತಲುಪಿದ್ದೇವೆ.

ಇವೆಲ್ಲವೂ ತೀರ ಪ್ರಾಪಂಚಿಕ ಲೌಕಿಕಗಳಿಗೆ ಮೀಸಲಾಗಿದೆಯೆಂದೂ ನಮ್ಮ ಸಂವೇದನೆಗೆ ಹೊರತಾದದ್ದೆಂದೂ ತಿಳಿದರೆ ನಿರಾಶೆಯಾಗುತ್ತದೆ. ಸಂವೇದನಾಶೀಲ ಸಾಹಿತ್ಯ ಪ್ರಪಂಚದಲ್ಲಿ ಇವು ಢಾಳಾಗಿ ಬಹುಪಾಲು ಲಜ್ಜಾಹೀನವಾಗಿ ಪ್ರದರ್ಶನವಾಗುತ್ತಿವೆ. ಇಂದು ಸಾಹಿತ್ಯ ಕ್ಷೇತ್ರದಲ್ಲಿ ವೃತ್ತಿ/ಪ್ರವೃತ್ತಿಪರವಾಗಿ ದುಡಿಯುವ ಬಹಳಷ್ಟು ಮಂದಿ-ಹಿರಿಯರು ಮತ್ತು ಕಿರಿಯರು ತಮ್ಮ ಕೃತಿಗಳನ್ನು ಮಾರುಕಟ್ಟೆಯ ಸರಕೆಂದು ಭಾವಿಸಿದಂತಿದೆ. ಇಂದು ಪ್ರತಿಯೊಬ್ಬರಿಗೂ ಹೇಗಾದರೂ ಪ್ರಚಾರದಲ್ಲಿರುವ ಮತ್ತು ಆ ಮೂಲಕ ತಾನು ಜನಪ್ರಿಯನೆನಿಸಿಕೊಳ್ಳುವ ಆಸೆ. ಮಾರಾಟದ ಸಂಖ್ಯೆಗೂ ಮೌಲ್ಯಕ್ಕೂ ಸಂಬಂಧವೇ ಇಲ್ಲವೆನ್ನುವ ಕಾಲವಿತ್ತು. ಮಾರಾಟವಾಗದಿದ್ದಾಗ ತಾನೇ ತಲೆಹೊರೆಯಲ್ಲಿ ಮನೆಮನೆ ಅಲೆದ ಗಳಗನಾಥರಂತಹ ಶ್ರೇಷ್ಠ ಲೇಖಕರೆಷ್ಟೋ! ಈ ಬಗ್ಗೆ ಕಾರಂತರಂಥವರು ಸತ್ಯ ಹೇಳಿದ್ದಾರೆ. ಮಾಸ್ತಿ, ಕುವೆಂಪು ಮತ್ತು ಆನಂತರದ ಅನೇಕ ಲೇಖಕರು ತಾವೇ ಪುಸ್ತಕಗಳನ್ನು ಮುದ್ರಿಸಿ ಮಾರಾಟಮಾಡುವ ಕಷ್ಟವನ್ನು ಅನುಭವಿಸಿದ್ದಾರೆ. ಆದರೆ ಇಂದು ಲೇಖಕರು ಮತ್ತು ಪ್ರಕಾಶಕರು ಸೇರಿ ಒಂದು ಸಾಹಿತ್ಯ ಮಾಫಿಯಾವನ್ನು ಹುಟ್ಟುಹಾಕಿದಂತಿದೆ. ಇಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯದ ದಿನಗಳಿವೆ; ಆದರೆ ಪುಸ್ತಕ ಬಿಡುಗಡೆಯ ಕಾರ್ಯಕ್ರಮಗಳಿಲ್ಲದ ದಿನವಿಲ್ಲ. ಅಲ್ಲಿ ಅದೇ ಮುಖಗಳು- ಪಾತ್ರ ಮಾತ್ರ ಭಿನ್ನ; ಅದಲುಬದಲು. ನಿಸಾರ್ ಅಹಮದ್ ಹೇಳಿದ ‘‘ಅದರ ಬಾಲ ಇದು ಮತ್ತು ಇದರ ಬಾಲ ಅದು...’’. ಸಾಹಿತ್ಯನೆಪದಲ್ಲಿ ನಿತ್ಯಸತ್ಯ. ಆದರೆ ಕುರಿಗಳು ಓದುಗರು. ಈ ವ್ಯೆಹದ ಜೇಡರಬಲೆ ಅನೂಹ್ಯವಾದದ್ದು. ಸುಮಾರಾಗಿ ಕೃತಿಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ಮಾರಾಟಗೊಳ್ಳುವುದು ಮದುವೆ ಸಮಾರಂಭಗಳಲ್ಲಿ ಉಡುಗೊರೆಯಂತೆ ಶಕ್ತಿಮೀರಿದ ಒಂದು ಸಮೂಹಸನ್ನಿಯಾಗುತ್ತಿದೆ. ಇದು ಹಣಮಾಡುವ ದಂಧೆಯೇ ಅಥವಾ ಪ್ರಚಾರದ ಮೂಲಕ ಜನಪ್ರಿಯರಾಗುವ ನೆಲ-ಜಲವನ್ನು ಗುರುತಿಸಲಾಗದ ಮಯಮಂಟಪವೇ? ಪುಸ್ತಕಗಳಿಗಿರುವುದು ಬೆಲೆಯೇ ಮೌಲ್ಯವೇ?

ಸಾಹಿತ್ಯದ ಉದ್ದೇಶವನ್ನು ಮರೆತು ಈ ಅತಿಯನ್ನು ಅನುಸರಿಸಿದರೆೆ ಅದು ಆರ್ಥಿಕತೆಯ ಕೂಸಾದ ಕೈಗಾರಿಕೆಗೆ ತುತ್ತಾದ ನಮ್ಮ ಪರಿಸರದಂತೆ ದುರಂತದಲ್ಲಿ ಕೊನೆಗೊಳ್ಳುವುದು ಅನಿವಾರ್ಯವೇನೋ?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಬಾಲಸುಬ್ರಮಣ್ಯ ಕಂಜರ್ಪಣೆ

contributor

Similar News