ನಮ್ಮದೇ ಸಂಸ್ಕೃತಿಯ ಒಳ ಹೊರಗೆ...

ನಮ್ಮ ಸಂಸ್ಕೃತಿಯೆಂದು ನಾವು ಹೆಸರಿಸುವಾಗಲೆಲ್ಲ ಹೌದೇ? ಇದು ಸಂಸ್ಕೃತಿಯಾದರೆ ನಾವು ನೋಡುತ್ತಿರುವುದೇನು ಎಂಬ ಪ್ರಶ್ನೆ ಮತ್ತೆ ಮತ್ತೆ ಹುಟ್ಟಿಕೊಳ್ಳುತ್ತದೆ. ಕೊನೆಗೂ ಸರದಿಯ ಸಾಲಿನಲ್ಲಿ ನಿಲ್ಲಲಾಗದವನು ಅನುಸರಿಸುವ ಸಂಸ್ಕೃತಿ ಯಾವುದು ಎಂಬುದನ್ನು ಹುಡುಕಬೇಕಾಗುತ್ತದೆ. ಮುಂದೆ ದೀಪಾವಳಿ ಬರಲಿದೆ. ಆಗಲೂ ಇದೇ ಗೊಂದಲಾಸುರನ ಒಡ್ಡೋಲಗ; ಸಿಡಿಮದ್ದಿನ ಸದ್ದು. ಎಲ್ಲ ಹಬ್ಬಗಳನ್ನೂ ಬಲಿಯಾಗಲಿರುವ ಅಭಯರುಚಿ-ಅಭಯಮತಿಗಳು ಅನಿವಾರ್ಯವಾಗಿ ನೋಡಲೇಬೇಕು.

Update: 2023-11-09 04:03 GMT

ದಸರಾ ಎಂಬುದು ಕರ್ನಾಟಕದ ನಾಡಹಬ್ಬವೆಂದು ಗುರುತಿಸಿಕೊಂಡಿದೆ. ದೇಶದಲ್ಲೇ ದಸರಾ ಎಲ್ಲಕಡೆ ವಿವಿಧ ರೂಪಗಳಲ್ಲಿ ಆಚರಿಸಲಾಗುತ್ತಿರುವ ಒಂದು ಸಾಂಸ್ಕೃತಿಕವೆಂದು ಕರೆಯಲಾಗುವ ಸಮಾರಂಭ. ದಿಲ್ಲಿಯ ರಾಮಲೀಲಾ, ಬಂಗಾಳದ ದಶರಾತ್ರಿಗಳು, ಮೈಸೂರಿನ ಅಂಬಾರಿ ಮೆರವಣಿಗೆ ಹೀಗೆ ಎಲ್ಲಕಡೆ ಜನರು ಒಂದಲ್ಲ ಒಂದು ರೀತಿಯಲ್ಲಿ ಜಾತಿ-ಮತ-ಧರ್ಮಗಳ ಕಟ್ಟಿಲ್ಲದೆ ಸಂಭ್ರಮಿಸುವ ಸಂದರ್ಭ.

ನಾನಿರುವ ಕೊಡಗಿನಲ್ಲೂ ದಸರಾ ಬಹಳ ವಿಜೃಂಭಣೆಯಿಂದ, ಮುಖ್ಯವಾಗಿ ಎರಡು ಕೇಂದ್ರ-ಮಡಿಕೇರಿ ಮತ್ತು ಗೋಣಿಕೊಪ್ಪಗಳಲ್ಲಿ ಜಿಲ್ಲೆಯ ಒಳ-ಹೊರಗಿನಿಂದ ಸಾವಿರಾರು ಮಂದಿಯನ್ನು ಆಕರ್ಷಿಸುತ್ತದೆ. ಮೊದಲ 9 ದಿನಗಳಲ್ಲಿ ಕರಗ ಮತ್ತಿತರ ಧಾರ್ಮಿಕ ನಡವಳಿಕೆಗಳಲ್ಲದೆ ‘ಸಾಂಸ್ಕೃತಿಕ’ವೆಂಬ ಅಂಕಿತ ನಾಮದ ಸಭೆ-ಸಮಾರಂಭಗಳು ನಡೆಯುತ್ತವೆ. ಕೊನೆಯ ಅಂದರೆ ದಶಮಿಯ ದಿನ ಮಡಿಕೇರಿಯಲ್ಲಿ, ಹತ್ತೂ ನಗರದೇವತೆಗಳ ಹೆಸರಿನಲ್ಲಿ ಸ್ಥಾಪನೆಗೊಂಡ ದಸರಾ ಮಂಟಪಗಳು ವಿವಿಧ ದೇವದೇವತೆಗಳ ಯಾವುದಾದರೊಂದು ಪ್ರಸಂಗಗಳ ಪ್ರದರ್ಶನವನ್ನು ವಿದ್ಯುದ್ದೀಪಗಳಿಂದ ಝಗಮಗಿಸುವ ಕಣ್ಣು ಕೋರೈಸುವ, ಕಿವಿಗಡಚಿಕ್ಕುವ ಕೆಲವು ನಿಮಿಷಗಳ ಕಾಲ ನೀಡುತ್ತವೆ. ಇವುಗಳಲ್ಲೊಂದೊಂದೂ ಲಕ್ಷಾನುಗಟ್ಟಲೆ ರೂಪಾಯಿಯ ವೆಚ್ಚದವುಗಳು. ಇವುಗಳಿಗಾಗಿ ಭಾರೀ ಗಾತ್ರದ ಮಂಟಪಗಳನ್ನು ರಚಿಸಿ ಅದನ್ನು ಟ್ರ್ಯಾಕ್ಟರುಗಳಲ್ಲಿ ಬಂಧಿಸಿ ಜೊತೆಗೆ ಬೇರೇನೂ ಕೇಳದಷ್ಟು ಸದ್ದಿನ ಹಿಮ್ಮೇಳವನ್ನು ಕೊಟ್ಟು ರಾತ್ರಿಯಿಡೀ ಸಂಚರಿಸುತ್ತವೆ. ಅವುಗಳನ್ನು ಪರೀಕ್ಷಕರ ಒಂದು ತಂಡವು ಸಂದರ್ಶಿಸಿ ಮರುದಿನ ತೀರ್ಪು ನೀಡಿ ಪ್ರಥಮ, ದ್ವಿತೀಯ ಮತ್ತು ತೃತೀಯ ಎಂಬಂತೆ ಬಹುಮಾನಗಳನ್ನು ನೀಡುತ್ತವೆ. ಈ ಒಟ್ಟು ಚಟುವಟಿಕೆಗಳಿಗೆ ರಾಜ್ಯ ಸರಕಾರವು ಕೋಟಿಗಟ್ಟಲೆ ಅನುದಾನವನ್ನು ಕೊಡುತ್ತದೆ.

ಇವು ಉತ್ಸವದ ಒಂದಂಗವಾದರೆ ಸರಕಾರವೇ ಕೆಲವು ಕಟ್ಟುಪಾಡುಗಳನ್ನು ವಿಧಿಸುತ್ತದೆ. ದಶಮಿಯ ದಿನದಂದು ಮದ್ಯದ ಮಳಿಗೆಗಳನ್ನು ಮುಚ್ಚಿಸುವ, ಮದ್ಯಪಾನವನ್ನು ನಿಷೇಧಿಸುವ, ಪ್ರಯಾಣಿಕರ, ಪ್ರವಾಸಿಗರ ಆಗಮನ-ನಿರ್ಗಮನಗಳನ್ನು ನಿಯಂತ್ರಿಸುವ ಆದೇಶಗಳನ್ನು ಹೊರಡಿಸುತ್ತದೆ. ಆದರೆ ಸಂಜೆಯಾಯಿತೆಂದರೆ ಸುಮಾರು 40 ಸಾವಿರ ಜನಸಂಖ್ಯೆಯ ಮಡಿಕೇರಿಯ ಕಿರಿದಾದ ರಸ್ತೆಗಳಲ್ಲಿ ಜನರು ಮತ್ತು ಪೊಲೀಸರು ಕಿಕ್ಕಿರಿದು ಸೇರುತ್ತಾರೆ. ಸಾಕಷ್ಟು ಜನರು ಉತ್ಸಾಹದ ಅಮಲಿನಲ್ಲಿರುತ್ತಾರೆ; ಇನ್ನನೇಕರು ಮದ್ಯದ ಮತ್ತಿನಲ್ಲಿರುತ್ತಾರೆ. ರಸ್ತೆನಡೆಯುವುದೇ ಕಷ್ಟವೆಂದನ್ನಿಸುತ್ತದೆ. ಕಿಡಿಗೇಡಿಗಳಿಗೂ ವಸಂತಕಾಲ. ಇವುಗಳನ್ನು ಊಹಿಸಿದ ಮರ್ಯಾದಸ್ತರು ಮತ್ತು ಕೌಟುಂಬಿಕರು ತಮ್ಮತಮ್ಮ ಮನೆಗಳಲ್ಲೇ ಉಳಿಯುತ್ತಾರೆ. ಸರಕಾರಕ್ಕೆ ಇವೆಲ್ಲ ಗೊತ್ತಿಲ್ಲವೆಂದಲ್ಲ. ಆದರೆ ಜನರ ಅಭಿಪ್ರಾಯವೇ ಚುನಾವಣೆಗಳಂತೆ ಅಂತಿಮವಾಗಿರುವುದರಿಂದ ಅವರು ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬಂತೆಯೋ ಒಂದು ಕೈಯಲ್ಲಿ ಚಿವುಟಿ ಇನ್ನೊಂದು ಕೈಯಲ್ಲಿ ಸಮಾಧಾನಮಾಡುವಂತೆಯೋ ನಡೆದುಕೊಳ್ಳುತ್ತಾರೆ.

ಈ ಬಾರಿ ಹೀಗಾಯಿತು: ಧ್ವನಿವರ್ಧಕಗಳನ್ನು ಸಂಯೋಜನೆಗೊಂಡ, ಬಹಳ ಸದ್ದು ಮಾಡುವ, ‘ಡಿಜೆ’ ಎಂದು ಸಾಮಾನ್ಯರು ಅರ್ಥಮಾಡುವ ಅನರ್ಥ ವ್ಯವಸ್ಥೆಯನ್ನು ಮೊದಲೇ ಊಹಿಸಿದ ಒಬ್ಬರು ದಸರಾ ಆರಂಭಿಸುವ ಮೊದಲೇ ಪತ್ರಿಕಾಗೋಷ್ಠಿಯನ್ನು ಕರೆದು ಪರಿಸರ ಮಾಲಿನ್ಯದ ಅನೇಕ ಮುಖಗಳಲ್ಲಿ ಒಂದಾದ ಧ್ವನಿಗೆ ಸರ್ವೋಚ್ಚ ನ್ಯಾಯಾಲಯವು ಹೇರಿದ ಮಿತಿಯನ್ನು ಸರಕಾರದ, ಸ್ಥಳೀಯ ಆಡಳಿತದ, ಮತ್ತು ಸಮಾರಂಭಗಳ ವ್ಯವಸ್ಥಾಪಕರ ಗಮನಕ್ಕೆ ತಂದು ಇದನ್ನು ಉಲ್ಲಂಘಿಸಿದರೆ ತಾವು ಸಾರ್ವಜನಿಕ ಹಿತಾಸಕ್ತಿಯ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆಂದು ಎಚ್ಚರಿಸಿದರು. ಸಂಬಂಧಿಸಿದ ಅಧಿಕಾರಿಗಳು ಇದನ್ನು ನುಂಗುವಂತೆಯೂ ಇಲ್ಲ, ಉಗುಳುವಂತೆಯೂ ಇಲ್ಲ; ಒಟ್ಟಿನಲ್ಲಿ ಬಾಯಲ್ಲಿಟ್ಟ ಬಿಸಿತುಪ್ಪದಂತೆ ಅನುಭವಿಸಿದರು. ಕಾನೂನಿನ ಉಲ್ಲಂಘನೆಯಲ್ಲಿ ಮೊದಲ ಸಾಲಿನ ಅಗ್ರಗಣ್ಯರು ಈ ಸದ್ದನ್ನು ಮಾಡಿಯೇ ಮಾಡುತ್ತೇವೆಂದು ಪಣತೊಟ್ಟಂತೆ ಸಂಬಂಧಿಸಿದವರನ್ನು ಹುರಿದುಂಬಿಸಿದರು. ಪರಿಣಾಮವಾಗಿ ಕಾನೂನು ಕಾಲಡಿಗೆ ಸಿಕ್ಕಿ ಸತ್ತಿತು. ಸದ್ದು ಎಲ್ಲರ ಕಿವಿತಮ್ಮಟೆ ಹರಿಯುವಂತೆ ತುಂಬಿತು. ಕಲ್ಲಿನ ಕಿವುಡರಷ್ಟೇ ಅದೃಷ್ಟಶಾಲಿಗಳು. ಅವರಿಗೇನೂ ಕೇಳದು. ರಾತ್ರಿಯಿಡೀ ಇದನ್ನು ಅನುಭವಿಸಿ ಸಂತಸಗೊಂಡ ಮಂದಿ ಬೆಳಗ್ಗೆ ನಿದ್ರೆಗೆ ಸರಿಯುವ ಹೊತ್ತಿನಲ್ಲಿ ಸ್ಥಳೀಯ ಆಡಳಿತ ಎಚ್ಚೆತ್ತಿತು. ದಶಮಂಟಪಗಳ ವಿರುದ್ಧವೂ ಕಾಟಾಚಾರಕ್ಕೆ ಮೊಕದ್ದಮೆಗಳನ್ನು ನೋಂದಾಯಿಸಿತು. (ಹೀಗೆ ವರದಿಯಾಗಿದೆ!) ಮುಂದೇನು ಎಂದು ಪ್ರಶ್ನೆ ಹಾಕಬಹುದು. ಏನೂ ಇಲ್ಲವೆಂಬ ಸಿದ್ಧ ಉತ್ತರ ಆಡಳಿತಕ್ಕಿದೆ. ಸಾರ್ವಜನಿಕರ ನೆನಪು ಕ್ಷೀಣ. ದೀಪಾವಳಿಯ ಹೊತ್ತಿಗೆ ಇದೆಲ್ಲವನ್ನೂ ಮರೆತು ಮತ್ತೆ ಹೊಸ ಸದ್ದಿಗೆ ಕಾಯುತ್ತಾರೆ.

ಇದು ಈ ಒಂದು ಸ್ಥಳದ ಕಥೆಯಲ್ಲ. ಇಂತಹ ಸಂಭ್ರಮದ ಅವಶೇಷಗಳು ಎಲ್ಲೆಲ್ಲೂ ಇವೆ.

ದಸರಾ ಮುಗಿದ ಮರುದಿನ ನಗರವು ಕಸದ ಸ್ಮಶಾನ- ಕುರುಕ್ಷೇತ್ರದಂತಿರುತ್ತದೆ. ಯಾರೋ ಒಬ್ಬರು ರಸ್ತೆಯಲ್ಲಿ ನಡೆದು ‘ಕಸರಾ’ ಎಂದರು. ಅವರು ‘ಕಸರಾಶಿ’ಯನ್ನು ನೆನಪಿಸುವ ಪದವನ್ನು ಸಂಶೋಧಿಸಿದ್ದರು! ಮುಂದಿನ ಒಂದು ವರ್ಷಕ್ಕೆ ಬೇಕಾದಷ್ಟು ಕಸದ ಬೆಟ್ಟವೇ ಸೃಷ್ಟಿಯಾಗಿತ್ತು. ಇದನ್ನು ಸ್ವಚ್ಛಗೊಳಿಸಲು ಕೇಂದ್ರ ಸರಕಾರದ ಸ್ವಚ್ಛತಾ ಆಂದೋಲನವೇ ನಡೆಯಬೇಕಿತ್ತೇನೋ? ಆದರೆ ನಗರಸಭೆಯ ಅದೃಷ್ಟಕ್ಕೆ ಒಂದೆರಡು ಭಾರೀ ಮಳೆ ಸುರಿದು ಪ್ರಕೃತಿಯೇ ಈ ಕೊಳೆಯನ್ನು ಕೊಚ್ಚಿಕೊಂಡು ಹೋಗಿ ಅನಿಷ್ಟವನ್ನು ನಿವಾರಿಸಿತು.

ಹೋಗಲಿ, ಈ ಸಂದರ್ಭದಲ್ಲಿ ಕಿಕ್ಕಿರಿದು ಸೇರಿದ ಜನಸಂದಣಿಯಿಂದಾಗಿ ನಗರದ, ಜಲ್ಲೆಯ ವಸತಿ ಗೃಹಗಳು, ವಿಶ್ರಾಂತಿಧಾಮಗಳು, ಗೃಹೋಪಚಾರಗಳು ಕೂಡಾ ಕಿಕ್ಕಿರಿದು ಉಕ್ಕಿತೆಂದು ತಿಳಿಯಬೇಕೆಂದರೆ ಅಲ್ಲಿ ವಿಚಿತ್ರವಾದ ಫಲಿತಾಂಶ. ಸರಿ ಸುಮಾರು ಶೇ. 50 ಅಷ್ಟೇ ತುಂಬಿವೆ. ಇವನ್ನು ಇತ್ಯಾತ್ಮಕವಾಗಿ ಹೀಗೆ ಹೇಳಿದರೂ ಸುಮಾರು ಶೇ. 50 ಖಾಲಿಯೆಂದರೆ ಅವರಪಾಡನ್ನು ನೆನೆಯಬೇಕು. ಸಂಜೆ ಬಂದರು; ರಾತ್ರಿ ನೆರೆದರು, ಮೆರೆದರು; ಬೆಳಗ್ಗೆ ಸಿಕ್ಕಸಿಕ್ಕಲ್ಲಿ ಮಲಗಿದರೋ ಅಥವಾ ಬಸ್, ಕಾರು ಹತ್ತಿಹೋದರೋ ಅಂತೂ ತಂಗಲಿಲ್ಲ. ಸಂಭ್ರಮದ ದಸರಾದ ಆನಂತರ ಉಳಿದದ್ದು ಕೆಟ್ಟ ವಾಸನೆ ಮತ್ತು ಆತಂಕ; ಭಯ.

ಧರ್ಮ, ಮತಾಚರಣೆ, ಆಚಾರಗಳು ಮನೆಯೊಳಗಿರಬೇಕಾದ್ದು. ದೇವದೇವತೆಗಳು ಬೀದಿಗಿಳಿದರೆಂದರೆ ಗೊಂದಲಕ್ಕೆ, ಹಗರಣಗಳಿಗೆ, ಅನಿಷ್ಟಗಳಿಗೆ ಮಣೆಹಾಕಿದಂತೆ. ಅವನ್ನು ಜಾತ್ರೆಗಳಂತೆ ನಡೆಸಿದರೆ ಅದು ಊರಿನ ಹಬ್ಬವಾಗುತ್ತದೆ. ಇನ್ನು ಕೆಲವೆಡೆ ಇಂತಹ ಜಾತ್ರೆಗಳಲ್ಲಿ ಇತರ ಧರ್ಮದವರು ಭಾಗವಹಿಸಬಾರದು, ವ್ಯವಹಾರ-ವ್ಯಾಪಾರವನ್ನಂತೂ ಮಾಡಲೇ ಕೂಡದು ಎಂದು ಇರಾನಿನ ಖೊಮೇನಿಯನ್ನೂ ನಾಚಿಸುವಂತೆ ಫರ್ಮಾನು ನೀಡಲಾಗುತ್ತದೆ. ಹಬ್ಬ-ಹರಿದಿನಗಳು ಸಮಾಜದ ಎಲ್ಲರಿಗೂ ಸೇರಿದ್ದು. ಅಲ್ಲಿ ಜಾತಿ-ಮತ-ಧರ್ಮಗಳ ಕಟ್ಟಿಲ್ಲ, ಬಿಕ್ಕಟ್ಟಂತೂ ಇರಲೇಬಾರದು ಎಂಬುದನ್ನು ಮರೆತು ಇದನ್ನು ಸ್ವಂತ ಪ್ರತಿಷ್ಠೆಗೆ, ಗುಂಪುಗಾರಿಕೆಗೆ, ಗೂಂಡಾಗಿರಿಗೆ ಬಳಸಲಾಗುತ್ತದೆ. ನಮ್ಮ ದೇವಮಂದಿರಗಳು ಇವನ್ನೆಲ್ಲ ಸಹಿಸಿ ಸಹಿಸಿ ಅಲ್ಲಿನ ದೇವರೂ ಕಿವುಡ-ಮೂಕನಾಗಿದ್ದಾನೆ. ಸಾರ್ವಜನಿಕವಾಗಿ ನಡೆಯುವ ಇವನ್ನು ಧಾರ್ಮಿಕವೆನ್ನಬೇಕೇ, ಸಾಮಾಜಿಕವೆನ್ನಬೇಕೇ, ಸಾಂಸ್ಕೃತಿಕವೆನ್ನಬೇಕೇ? ಇವು ಸದಾಚಾರ-ದುರಾಚಾರಗಳಲ್ಲಿ ಯಾವುದಕ್ಕೆ ಹೊಂದುತ್ತದೆ? ಇಂತಹ ಪ್ರಶ್ನೆಗಳು ಪ್ರತೀ ವರ್ಷ ಉದ್ಭವಿಸುತ್ತವೆ. ಉತ್ತರಿಸುವವರಿಲ್ಲದೆ, ಉತ್ತರಿಸಿದರೂ ಅದು ಅರಣ್ಯ ರೋದನವಾಗುವುದರಲ್ಲೇ ಸತ್ತುಹೋಗುತ್ತವೆ. ರಾಜಕಾರಣಿಗಳು ಮಹಾನ್ ಸಾಧಕರು. ಸಮಯದ ಬಗ್ಗೆಯಂತೂ ಎಲ್ಲಿಲ್ಲದ ಎಗ್ಗಿಲ್ಲದ ಸಾಧಕರು. ಇದನ್ನು ‘ಸಮಯಸಾಧಕತನ’ವೆಂದರೆ ಅವರನ್ನು ಅಪಮಾನಿಸಿದಂತಾಗುತ್ತದೆ. ಆದ್ದರಿಂದ ಈ ಪದ ಬೇಡ.

ಹೀಗೆ ಧರ್ಮದ ಹೆಸರಿನಲ್ಲಿ, ಜಾತಿ-ಮತಗಳ ಹೆಸರಿನಲ್ಲಿ ನಡೆಯುವ ಕುರುಡು ಆಚರಣೆಗಳನ್ನು ನಮ್ಮ ಮಾಧ್ಯಮಗಳು ‘ಶ್ರದ್ಧಾಭಕ್ತಿ’ಯೆಂದು ವರ್ಣಿಸುತ್ತವೆ. ಅಘೋರಿತನದ ಗದ್ದಲವನ್ನು ‘ಕಲರವ’ವೆನ್ನುತ್ತಾರೆ. ಉನ್ಮಾದವನ್ನು ಉಲ್ಲಾಸ-ಉತ್ಸಾಹವೆನ್ನುತ್ತಾರೆ. ಒಟ್ಟಿನಲ್ಲಿ ಎಲ್ಲರಿಗೂ ಅಂತಲ್ಲ, ಸ್ಥಾಪಿತ ಹಿತಾಸಕ್ತಿಗಳಿಗೆ ಸಂತೋಷವಾಗಬೇಕು; ಅದು ಮುಖ್ಯ.

ಇವನ್ನೆಲ್ಲ ಸ್ಥಳೀಯವಾಗಿ ಬಹಿರಂಗವಾಗಿ ಹೇಳುವುದಕ್ಕೆ ಭವಿಗಳು ಹೆದರುತ್ತಾರೆ. ಏಕೆಂದರೆ ಇಂತಹ ಸಂದರ್ಭಗಳ ನಿರುದ್ಯೋಗಿ ಫಲಾನುಭವಿಗಳು ವೇದಿಕೆಯಲ್ಲಿರುತ್ತಾರೆ. ಹಣವಿರುವುದೇ ಚಲಾವಣೆಗೆ; ಅದರಲ್ಲೂ ಸರಕಾರದ ಹಣವಾದರೆ ಅದಿರುವುದೇ ಕರಿದು ಕಪ್ಪಾಗುವುದಕ್ಕೆ.

ಇವೆಲ್ಲ ನಮ್ಮ-ನಮ್ಮದೇ ಸಂಸ್ಕೃತಿಯ ಭಾಗ. ಪ್ರಾಯಃ ವಿಶ್ವದಲ್ಲಿ ಭಾರತದಷ್ಟು ಆತ್ಮಕೇಂದ್ರಿತ ದೇಶ ಬೇರೊಂದಿಲ್ಲವೆಂದು ಅನ್ನಿಸುತ್ತಿದೆ. ನಮ್ಮದೆಲ್ಲವೂ ಸರಿ ಮತ್ತು ನಮಗನ್ನಿಸಿದ್ದರ ವಿರುದ್ಧವಾದದ್ದೆಲ್ಲವೂ ತಪ್ಪು ಅಥವಾ ನಾವು ಹೇಳುವುದಷ್ಟೇ ಸತ್ಯ ಮತ್ತು ಇತರರು ನಮ್ಮ ಬಗ್ಗೆ ಮಾಡುವ ಟೀಕೆಗಳೆಲ್ಲವೂ ಸುಳ್ಳು ಎಂಬ ನೇರಾನೇರ ವಾದವು ಹುಟ್ಟಿಕೊಂಡಿದೆ. ದೇಶಾಭಿಮಾನವಿದ್ದರೆ ಸಾಲದು, ಆಳುವ ಸರಕಾರದ ಮತ್ತು ಅದನ್ನು ಮುನ್ನಡೆಸುವ ರಾಜಕಾರಣಿಗಳ ಕುರಿತು ಅಂಧಾಭಿಮಾನ ಬೇಕೆಂಬಷ್ಟರ ಮಟ್ಟಿಗೆ ಸರಕಾರದ ಮಾನವ ಯಂತ್ರೋಪಕರಣಗಳು ಪ್ರಜೆಗಳನ್ನು ಒತ್ತಾಯಿಸುತ್ತಿವೆ. ಇವುಗಳೆಲ್ಲವನ್ನು ಸಮರ್ಥಿಸಲು ಭಾರತೀಯ ಸಂಸ್ಕೃತಿಯೆಂಬ ಒಂದು ದೊಡ್ಡ ವೇದಿಕೆಯನ್ನು ಸೃಷ್ಟಿಸಲಾಗಿದೆ. ಅಲ್ಲಿ ಇಂತಹ ಸಂದರ್ಭಗಳನ್ನು ಸೃಷ್ಟಿಸಲಾಗುತ್ತದೆ. ಕುಣಿದು ಕುಪ್ಪಳಿಸುವವರೆಲ್ಲರೂ ಸುಸಂಸ್ಕೃತರು ಹಾಗೂ ಮಿತಿಮೀರಿದ ದೇಶಭಕ್ತರು ಎಂಬ ವಾದ ವಿಜೃಂಭಿಸುತ್ತಿದೆ. ನಾವು ಶ್ರೇಷ್ಠರಾದರೆ ಸಂತೋಷ. ಅದನ್ನು ಇತರರ ನಾಲಿಗೆಯಲ್ಲಿ ಕೇಳಿದರೆ, ಲೇಖನಿಯಲ್ಲಿ ಓದಿದರೆ ಸಂತೋಷ. ಯಾರಾದರೂ ಟೀಕಿಸಿದರೆ ಅದು ನಮ್ಮ ಸಂಸ್ಕೃತಿಗೆ ಎಸಗುವ ಅಪಚಾರ ಎಂಬ ಬಹುಮತ ಪ್ರಚಾರ ನಡೆಯುತ್ತದೆ. ಇಂತಹ ಟೀಕೆಗಳು ಮುಂದೆಂದೂ ಬಾರದಂತೆ ಎಚ್ಚರಿಕೆ ಅಥವಾ ನಿದ್ರೆಯನ್ನು ವಹಿಸಲಾಗುತ್ತದೆ.

ಭಾರತೀಯ ಸಂಸ್ಕೃತಿಯ ಕುರಿತು ಬೇಕಷ್ಟು ವ್ಯಾಖ್ಯಾನಗಳಿವೆ. ದಿನನಿತ್ಯ ಸಭೆ-ಸಮಾರಂಭಗಳಲ್ಲಿ ಪ್ರವಚನ-ಭಾಷಣ-ಉಪನ್ಯಾಸಗಳು ನಡೆಯುತ್ತವೆ. ಇವೆಲ್ಲ ಮೌಖಿಕವಾದರೆ, ಈ ಕುರಿತು ಅವೆಷ್ಟು ಕೃತಿಗಳು ಬಂದವೋ ಗೊತ್ತಿಲ್ಲ. ಆದರೆ ಬಹುತೇಕ ಹೆಚ್ಚಿನ ಕೃತಿಗಳು ಇವೆಲ್ಲವನ್ನೂ ಆದರ್ಶವೆಂದು ವೈಭವೀಕರಿಸಿ ವಾಸ್ತವಕ್ಕೆ ಬೆನ್ನುಹಾಕುತ್ತವೆ. ನಾವು, ನಮ್ಮ ಧರ್ಮ, ಆಚಾರ ವಿಚಾರಗಳು ಇತರರಿಗಿಂತ ಶ್ರೇಷ್ಠರು ಎಂಬುದನ್ನು ಸಾಬೀತುಪಡಿಸಲು ಹೊರಟ ‘ಕಾರವಾನ್’ನಂತಿವೆ. ಭೂಮಿಯಲ್ಲಿ (-ಇದನ್ನು ನಾವು ನಮ್ಮ ಅನುಕೂಲಕ್ಕೆ ಜಗತ್ತಿನಲ್ಲಿ ಎನ್ನುತ್ತೇವೆ) ನಾವೇ ಭಗವಂತನ ಮೆಚ್ಚಿನ ಶಿಶುಗಳು ಎಂದು ಹೇಳುವುದು ರೂಢಿಯಾಗಿದೆ. ನನ್ನ ಆಪ್ತರೊಬ್ಬರು ಭಾರತ ವಿಶ್ವದಲ್ಲೇ ಶ್ರೇಷ್ಠವಾದ ಭೂಮಿಯಾದ್ದರಿಂದ ಇಲ್ಲೇ ಭಗವಂತನು ಹತ್ತವತಾರವೆತ್ತಲು ಸಾಧ್ಯವಾಯಿತು ಎನ್ನುತ್ತಿರುತ್ತಾರೆ. ಅದು ಈಗಿನ ಭಾರತವೋ ಅಫ್ಘಾನಿಸ್ತಾನವೆಂದು ಕರೆಸಿಕೊಳ್ಳುವ ಗಾಂಧಾರದಿಂದ ಇಂಡೋನೇಶ್ಯ-ಬಾಲಿ ದ್ವೀಪದ ವರೆಗೆ ವಿಸ್ತರಿಸಿದ ಅಖಂಡ ಭಾರತವೋ ಎಂದು ಕೇಳಿದರೆ ಅವರು ಸ್ವಲ್ಪ ಗಲಿಬಿಲಿಗೊಳ್ಳುತ್ತಾರೆ. ನಮ್ಮಲ್ಲೇ ಹೆಚ್ಚು ಬಾರಿ ಧರ್ಮಗ್ಲಾನಿಯಾಗುತ್ತಿರುವುದರಿಂದ ಭಗವಂತನಿಗೆ ಬೇರೆಡೆ ಗಮನಕೊಡಲು ಬಿಡುವಿಲ್ಲವೆಂದೂ ಆತನು ಆಗಾಗ ಇಲ್ಲೇ ಹುಟ್ಟಿ ಸಾಯಬೇಕಾಗುತ್ತದೆಂದೂ ಹೇಳಿದರೆ ಅವರು ಅಸಂತೋಷ-ಅಸಮಾಧಾನಗಳಿಂದ ಮಾತು-ಕತೆ ನಿಲ್ಲಿಸುತ್ತಾರೆ.

ಒಂದು ಹಂತದಲ್ಲಿ ಇವು ಜೀವನ ವಿಧಾನಕ್ಕಿಂತಲೂ ಹೆಚ್ಚಾಗಿ ಸಾಮೂಹಿಕ ಆಚಾರ-ವಿಚಾರಗಳ ಘೋಷಣೆಗೇ ಸೀಮಿತವಾದಂತಿದೆ. ಎಲ್ಲೇ ಇರು, ಹೇಗೇ ಇರು, ದೇಶಪ್ರೇಮವನ್ನು ಮಾತನಾಡು ಎಂಬಲ್ಲಿಗೆ ನಮ್ಮ ಜೀವನ ಸುಧಾರಣೆಗೊಂಡಿದೆ. ವಿದೇಶಗಳಿಗೆ ಹೋಗಿ ಅಲ್ಲಿನ ಪ್ರಜೆಗಳಾಗಲು ಹೆಣಗುವವರು ಕೂಡಾ ತನ್ನ ಹುಟ್ಟೂರು, ಜನ್ಮಭೂಮಿ ವಿಶ್ವಶ್ರೇಷ್ಠ ಎಂದೆಲ್ಲ ಬಡಬಡಿಸುತ್ತಿರುತ್ತಾರೆ. ಮರಳಲು ಮಾತ್ರ ಒಪ್ಪುವುದಿಲ್ಲ. ಸಾಂಸ್ಕೃತಿಕ ಶೈಥಿಲ್ಯವನ್ನು ಅಲಕ್ಷಿಸಿ ಊರಿನ ಜನ ಹೇಗೆ ನಾಗರಿಕರಾಗಿ ಬದಲಾಗುತ್ತಿದ್ದಾರೆ ಎಂಬುದನ್ನು ಅಂತರ್ಜಾಲದಲ್ಲಿ ನೋಡಿ ಸಂತೋಷಪಡುವವರೇ ಹೆಚ್ಚು.

ನಮ್ಮ ಎಲ್ಲ ಗ್ರಾಮೀಣ ಚಟುವಟಿಕೆಗಳನ್ನು ಮಾರುಕಟ್ಟೆಗಿಳಿಸಿ ಮಾರಲು ನಮ್ಮ ನಾಯಕರು ಸಿದ್ಧರಾಗಿದ್ದಾರೆ. ಯಕ್ಷಗಾನ ಬಿಡಿ, ಭೂತಾರಾಧನೆ, ಕಂಬಳದಂತಹ ಜಾನಪದ ಚಟುವಟಿಕೆಗಳು ಈಗ ನಗರಗಳತ್ತ ಮುಖಮಾಡಿವೆ ಮಾತ್ರವಲ್ಲ, ಅವನ್ನು ರಾಜಕೀಯ ಪ್ರತಿಷ್ಠೆಗೆ ಉಪಯೋಗಿಸಲಾಗುತ್ತಿದೆ. ಯಕ್ಷಗಾನದಲ್ಲಿ ಕಲೆಯ ಹೆಸರಿನಲ್ಲಿ ರಾಜಕೀಯ ನುಸುಳಿ ಬಹಳ ವರ್ಷಗಳೇ ಆದವು. ದ್ವಂದ್ವಾರ್ಥಗಳನ್ನು ಹೇಳಿ ಒಂದು ವರ್ಗದ ಜನರನ್ನು ರಂಜಿಸುವ ಪುರಾಣಪಾತ್ರಗಳು ಯಕ್ಷಗಾನದ ಹೆಸರಿನಲ್ಲಿ ನಡೆದಾಡುತ್ತಿವೆ. ಕಲೆಯ ಈ ವಸ್ತ್ರಾಪಹರಣವನ್ನು ನೋಡಿಯೂ ನೋಡದಂತೆ ಯಕ್ಷಗಾನದ ಭೀಷ್ಮ-ದ್ರೋಣಾದಿಗಳು ಸುಮ್ಮನಿದ್ದರೆ ಎಂತಹ ಕಲೆಯೂ ಟೈಟಾನಿಕ್ ನೌಕೆಯಂತೆ ಮುಳುಗಲು ಹೆಚ್ಚು ಕಾಲ ಬೇಕಾಗದು.

ಇವೆಲ್ಲ ನಮ್ಮದೇ ಸಂಸ್ಕೃತಿಯ ತುಣುಕುಗಳು. ನಾವು ಸಾಮಾನ್ಯವಾಗಿ ಒಂದು ವರ್ಗದ, ಒಂದು ಭೌಗೋಳಿಕ ಮಿತಿಯ, ಅಥವಾ ಒಂದು ಜಾತಿ-ಮತ-ಧರ್ಮದ ಜನರನ್ನು ಒಟ್ಟಾಗಿ ‘ಇವರು ಉದಾರಿಗಳು, ಸಹನಾಶೀಲರು, ದಯಾಳುಗಳು’ ಇನ್ನೇನೋ ಹೇಳಿ ಸಾಮಾನ್ಯೀಕರಿಸುತ್ತೇವೆ. ಅದು ಹೌದೇ ಎಂದು ಪ್ರಶ್ನೆ ಮಾಡುವವನನ್ನು ಧರ್ಮದ್ರೋಹಿಯೆನ್ನುತ್ತೇವೆ. (ಧರ್ಮದ ಬದಿಗೆ, ಜಾತಿ, ಮತ, ಕೋಮು, ಜನಾಂಗ, ಸಮಾಜ, ದೇಶ- ಇಂತಹ ಯಾವುದೇ ಪದವನ್ನು ಬಳಸಬಹುದು!) ಇಂತಹ ವಾತಾವರಣದಲ್ಲಿ ತಾಯಿಯ ಗರ್ಭದಿಂದ ಹೊರಬಂದ ಮಗು ಮತ್ತೆ ತಾಯಿಯ ಗರ್ಭವನ್ನು ಸೇರದು. ಅದು ಸುಶಿಕ್ಷಿತನಾಗಿ ಬೆಳೆಯಬೇಕು ಅಥವಾ ಕೇಡಿನ ಉಗ್ರಾಣವಾಗಬೇಕು, ಇಲ್ಲವೇ ನಿರುಪದ್ರವಿ, ನಿರುಪಯುಕ್ತ ಅದೃಷ್ಟದ ಒಂದಂಕಿಯ ಆಟವಾಗಬೇಕು.

ನಮ್ಮ ಸಂಸ್ಕೃತಿಯೆಂದು ನಾವು ಹೆಸರಿಸುವಾಗಲೆಲ್ಲ ಹೌದೇ? ಇದು ಸಂಸ್ಕೃತಿಯಾದರೆ ನಾವು ನೋಡುತ್ತಿರುವುದೇನು ಎಂಬ ಪ್ರಶ್ನೆ ಮತ್ತೆ ಮತ್ತೆ ಹುಟ್ಟಿಕೊಳ್ಳುತ್ತದೆ. ಕೊನೆಗೂ ಸರದಿಯ ಸಾಲಿನಲ್ಲಿ ನಿಲ್ಲಲಾಗದವನು ಅನುಸರಿಸುವ ಸಂಸ್ಕೃತಿ ಯಾವುದು ಎಂಬುದನ್ನು ಹುಡುಕಬೇಕಾಗುತ್ತದೆ. ಮುಂದೆ ದೀಪಾವಳಿ ಬರಲಿದೆ. ಆಗಲೂ ಇದೇ ಗೊಂದಲಾಸುರನ ಒಡ್ಡೋಲಗ; ಸಿಡಿಮದ್ದಿನ ಸದ್ದು. ಎಲ್ಲ ಹಬ್ಬಗಳನ್ನೂ ಬಲಿಯಾಗಲಿರುವ ಅಭಯರುಚಿ-ಅಭಯಮತಿಗಳು ಅನಿವಾರ್ಯವಾಗಿ ನೋಡಲೇಬೇಕು.

Writer - ವಾರ್ತಾಭಾರತಿ

contributor

Editor - Safwan

contributor

Byline - ಬಾಲಸುಬ್ರಮಣ್ಯ ಕಂಜರ್ಪಣೆ

contributor

Similar News

ಮೌನದ ಬಲ