ಒಳಮೀಸಲಾತಿ ದತ್ತಾಂಶ ಸಮೀಕ್ಷೆಯಲ್ಲಿ ಉಪಜಾತಿಗಳ ದಾಖಲೀಕರಣ ಮುಕ್ತವಾಗಿರಲಿ

ಪರಿಶಿಷ್ಟ ಜಾತಿಗಳಿಗೆ ಸಾಂವಿಧಾನಿಕವಾಗಿ ಅಲೆಮಾರಿ, ಅರೆ ಅಲೆಮಾರಿ, ವಿಮುಕ್ತ ಜಾತಿ ಅಥವಾ ಅಧಿಸೂಚಿತವಲ್ಲದ ಪದಗಳು ಅಪಥ್ಯವಾದವು. ಈ ಪದಗಳಿಗೆ ಆಸ್ಪದ ನೀಡದೆ ತೆಲಂಗಾಣ ಮಾದರಿಯಲ್ಲಿ ಸೂಕ್ಷ್ಮ ಜಾತಿಗಳನ್ನು ಗುರುತಿಸಬೇಕಿದೆ. ಈಗಾಗಲೇ, ಕೆಲವರು ಸಮೀಕ್ಷೆಯಲ್ಲಿ ಸ್ವಜನ ಪಕ್ಷಪಾತ ನಡೆಯಬಹುದೆಂಬ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಈ ಸಮಸ್ಯೆಗೂ ಆಯೋಗ ಉತ್ತರಿಸಲು ಸಶಕ್ತವಾಗಬೇಕಿದೆ.
ಕಾಂತರಾಜು ಆಯೋಗದ ಮೇಲಿನ ಒಂದಷ್ಟು ಪೂರಕ ಚರ್ಚೆಗಳು
ಕಾಂತರಾಜು ಆಯೋಗದ ಗಜಗರ್ಭದಿಂದ ಒಂದೊಂದಾಗಿ ಅಂಕಿ-ಅಂಶಗಳ ಸ್ಥೂಲ ಸ್ವರೂಪಗಳು ಹೊರ ಬರುತ್ತಿವೆ. ಕೆಲವು ಸಮುದಾಯಗಳು ಕೇವಲ ಜಾತಿ ಅಂಕಿ-ಅಂಶಗಳಿಗೆ ಬೆನ್ನತ್ತಿವೆ. ಅದರೊಳಗಿರುವ ಗುಣಾತ್ಮಕ ಅಂಶಗಳ ಬಗ್ಗೆ ಬಲಿಷ್ಠ ಸಮುದಾಯಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಇದೆಲ್ಲವೂ ಸಹಜವಾಗಿಯೇ ಕೆಲವು ಜನರ ಆಕ್ರೋಶವೆನ್ನಬಹುದು. ರಾಜ್ಯದ ಸಾಮಾಜಿಕ ವಾಸ್ತವಗಳನ್ನು ಕನ್ನಡಿಯ ಹಿಂಭಾಗದಿಂದ ನೋಡಿದವರಿಗೆ ಸತ್ಯಾಂಶದ ಅರಿವು ಮೂಡದು. ಹಿಂದುಳಿದ ಆಯೋಗ ಸಮೀಕ್ಷೆ ಪೂರ್ವದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಅಂಶಗಳಿಗೆ ಸಂಬಂಧಿಸಿದ 54 ಮಾನದಂಡಗಳನ್ನು (Parameters) ಅಖೈರು ಮಾಡಲಾಗಿತ್ತು. ಸಮೀಕ್ಷೆಗಾಗಿ ಗುರುತಿಸಿ ಪಟ್ಟಿಮಾಡಿದ್ದ ಜಾತಿ/ಸಮುದಾಯಗಳು 1,351. ಸಮೀಕ್ಷೆಯಲ್ಲಿ 1,821 ಜಾತಿ/ಸಮುದಾಯಗಳು ಗುರುತಿಸಲ್ಪಟ್ಟವು. ಅವುಗಳ ಪೈಕಿ ಇಲ್ಲಿಯ ತನಕ ಹೆಸರಿಗೆ ಬಾರದ 398 ಜಾತಿ/ಸಮುದಾಯಗಳಿವೆ. ಪತ್ತೆಯಾಗಿರುವ ಉಳಿದ 82 ಜಾತಿ/ಸಮುದಾಯಗಳು ಭಾರತದ ಇತರ ರಾಜ್ಯದವು. ಬಹುತೇಕರು ವಲಸೆಗಾರರು. ಹಾಗೆಯೇ 101 ಪರಿಶಿಷ್ಟ ಜಾತಿಗಳಲ್ಲಿ ಅಂತರ್ಗತವಾಗಿರುವ 79 ಉಪ ಸಮುದಾಯಗಳು (Internally merged Sub-castes of the Castes) ಮತ್ತು 50 ಪಂಗಡಗಳಲ್ಲಿ 51 ಅಂತರ್ಗತವಾಗಿರುವ ಉಪ ಪಂಗಡಗಳೂ (Internally merged Sub-tribes of the Tribes) ಸೇರಿವೆ. 1.35 ಲಕ್ಷ ಸಮೀಕ್ಷೆದಾರರು 1,35,35,773 ಮನೆಗಳಿಗೆ ಭೇಟಿ ನೀಡಿ ಮಾಹಿತಿಗಳನ್ನು ಪ್ರಶ್ನಾವಳಿ ಮೂಲ ಕ್ರೋಡೀಕರಿಸಿದ್ದಾರೆ. ಈ ಮೂಲಕ ಸಾದರಗೊಂಡಿರುವ ಪ್ರಜಾಸಂಖ್ಯೆ 5,98,14,942 ಆಗಿದೆ.
ಇದರಲ್ಲಿ ಮುಸ್ಲಿಮರನ್ನು ಒಳಗೊಂಡಂತೆ ಹಿಂದುಳಿದವರು 4,16,30,153 ಜನರಿದ್ದಾರೆ. ಒಟ್ಟಿನಲ್ಲಿ 1.08 ಕೋಟಿಯಷ್ಟು ಪರಿಶಿಷ್ಟ ಜಾತಿಗಳು; 40 ಲಕ್ಷದಷ್ಟು ಪರಿಶಿಷ್ಟ ಪಂಗಡದವರು. 2,53,954 ಜನರು ತಮ್ಮ ಜಾತಿಗಳನ್ನು ಬಹಿರಂಗಪಡಿಸದವರು, 1,34,319 ಜನರು ಜಾತಿಯನ್ನು ಪರಿಚಯಿಸಲು ಇಚ್ಛಿಸದವರು. ಹಾಗೂ 1,94,003 ಜನರಿಗೆ ತಮ್ಮ ಸಮುದಾಯಗಳ/ ಜಾತಿ ಪರಿಚಯವಿಲ್ಲದವರಿದ್ದಾರೆ. ಇಷ್ಟೆಲ್ಲ ಸ್ವಾರಸ್ಯಕರ ಅಂಶಗಳು ಬರಬೇಕಿದ್ದರೆ ಅಲ್ಲೊಂದು ಸಾಂಘಿಕ ಪ್ರಯತ್ನ ನಡೆದಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಅನೇಕ ಟೀಕಾಕಾರರು ಹೇಳುವಂತೆ ಆಧಾರ್ ಅಥವಾ ಚುನಾವಣಾ ಪಟ್ಟಿಗಳ ಮೂಲಕ ಸಮೀಕ್ಷೆ ಮಾಡಿರುವ ಸಾಧ್ಯತೆಗಳು ಎಲ್ಲಿಯೂ ಕಾಣುತ್ತಿಲ್ಲ. 2011 ಜನಗಣತಿಯ ಆಧರಿಸಿ ಸಾಂಖ್ಯಿಕ ಇಲಾಖೆ 2015ಕ್ಕೆ ಅಂದಾಜಿಸಿರುವ ಜನಸಂಖ್ಯೆ 6,50,85,916 ಆಗಿದ್ದು; ಇವರಲ್ಲಿ ವಿವಿಧ ಕಾರಣಗಳಿಗೆ ಸಮೀಕ್ಷೆಯಲ್ಲಿ ಮೂಡದವರು 52,70,974 ಮಂದಿ. ಇವರಲ್ಲಿ ಬಹುತೇಕರು ನಗರವಾಸಿಗಳು ಮತ್ತು ಅತ್ಯಲ್ಪರು ಗ್ರಾಮೀಣರಿದ್ದಾರೆ. ಆದರೆ ಹಿಂದುಳಿದ ವರ್ಗಗಳ ಆಯೋಗದ ಅಂದಾಜಿನ ಪ್ರಕಾರ 40 ಲಕ್ಷಕ್ಕಿಂತ ಕಡಿಮೆಯಿದ್ದಾರೆ. 2011 ಜನಗಣತಿ ಪ್ರಕಾರ ಮುಸ್ಲಿಮರು 78,93,065 ಜನರಿದ್ದರು; ಆದರೆ ಸಮೀಕ್ಷೆಯಲ್ಲಿ 99 ಉಪ ಸಮುದಾಯಗಳು ಪರಿಚಯವಾಗಿದ್ದು; ಅವುಗಳಲ್ಲಿ 76.99 ಲಕ್ಷ ಜನರು ದಾಖಲಾಗಿದ್ದಾರೆ. 57 ಕ್ರೈಸ್ತ ಉಪ ಸಮುದಾಯಗಳು ಸಹ ಪರಿಚಯವಾಗಿವೆ. ಇಲ್ಲಿಯೂ 2015ರ ಅಂದಾಜಿನ ಪ್ರಜಾ ಲೆಕ್ಕಕ್ಕಿಂತ ಕಡಿಮೆ ಇದ್ದಾರೆ. ಒಟ್ಟಾರೆ ಮುಸ್ಲಿಮರನ್ನು ಬೊಟ್ಟುಮಾಡಿ ಟೀಕಿಸಲು ಸಮೀಕ್ಷೆ ಅಸ್ತ್ರವಾಗಿದೆ ಅಷ್ಟೇ. ವಿವಿಧ ಕಾಲಘಟ್ಟಗಳಲ್ಲಿ ಹಿಂದೂ ಸಮಾಜದ ಜಾತಿಗಳಿಂದ ಮತಾಂತರವಾದವರಾಗಿದ್ದಾರೆ. 1951ರಿಂದ 2011 ತನಕ ಎಲ್ಲಾ ಧರ್ಮೀಯರ ಮಕ್ಕಳಿರುವವರ ಫಲವತ್ತತೆ ಇಳಿಮುಖವಾಗಿದೆ. ಕಾಂತರಾಜು ಆಯೋಗದಲ್ಲಿ ಬರಿ ಕುರುಬರೇ ತುಂಬಿದ್ದರೆಂಬ ಪುಕಾರುಗಳಿವೆ. ಅಲ್ಲಿದ್ದವರ ಪೈಕಿ ಅಧ್ಯಕ್ಷರು ಮಾತ್ರ ಕುರುಬರು, ಸದಸ್ಯರ ಪೈಕಿ ಕೆ.ಎನ್. ಲಿಂಗಪ್ಪ ನಿವೃತ್ತ ಕೆಎಎಸ್‌ಅಧಿಕಾರಿ- ಉಪ್ಪಾರ, ಧರ್ಮರಾಜ್ ಈಡಿಗ, ಸಮಾಜಶಾಸ್ತ್ರಜ್ಞ ಡಾ. ಗುರುಲಿಂಗಯ್ಯ ಕಾಡು ಗೊಲ್ಲ, ವಕೀಲ ಗೋಪಾಲ್ ಮಡಿವಾಳ ಮತ್ತು ಶರಣಪ್ಪ ಮಾಣೇಗಾರ ಕಬ್ಬಲಿಗ (ಬೆಸ್ತ). ಮುಂದುವರಿದು ಭಾಜಪ- ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಅಂದರೆ ಯಡಿಯೂರಪ್ಪ ಅವರ ಎರಡನೆಯ ಅವಧಿಯಲ್ಲಿ ಅಧ್ಯಕ್ಷರು ಬಂಟ ಸಮುದಾಯದವರು, ಸದಸ್ಯರ ಪೈಕಿ ಇಬ್ಬರು ಈಡಿಗರು, ಒಬ್ಬರು ಮೊಗವೀರ, ಒಬ್ಬರು ಕುರುಬ ಮತ್ತು ಇನ್ನೊಬ್ಬರು ಉತ್ತರ ಕನ್ನಡದ ನಾಯಕರು. ಮತ್ತೊಂದು ಕುತೂಹಲದ ಸಂಗತಿ ಏನೆಂದರೆ ಕಾಂತರಾಜು ಆಯೋಗದ ಕ್ರೋಡೀಕೃತ ದತ್ತಾಂಶಗಳನ್ನು ಮೀಸಲಾತಿ ಹಂಚಿಕೆಗಾಗಿ ಪ್ರವರ್ಗವಾರು ಪರಿಸ್ಕರಿಸಿದ ಸಮಿತಿ ಇದಾಗಿದೆ. ಸಮೀಕ್ಷೆಯ ತಪ್ಪುನೆಪ್ಪುಗಳ ಮೇಲೆ ಬೈಯುವವರು ಇವರೆಲ್ಲರನ್ನು ಸಾರಾಸಗಟಾಗಿ ಸೇರಿಸಿ ವಾಮಾಗೋಚರವಾಗಿ ನಿಂದಿಸುವುದು ಅತ್ಯಂತ ಸೂಕ್ತ ವಿಚಾರವೆನ್ನಬಹುದು.
ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ಮುಂದಡಿ ಆಯಾಮಗಳ ಆಶಯಗಳು
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ದತ್ತಾಂಶಗಳಿಗಾಗಿ ಈ ವರದಿಗಾಗಿ ಚಾತಕ ಪಕ್ಷಿಯಂತೆ ಕಾದಿದ್ದರೂ ಪರಿಶಿಷ್ಟರಲ್ಲಿ ಈ ಬಗ್ಗೆ ಆಶಾದಾಯಕವಾದ ತೃಪ್ತಿ ಕಾಣುತ್ತಿಲ್ಲ. ಅದರಲ್ಲೂ ಬಲಗೈ ಮತ್ತು ಎಡಗೈ ಸಮುದಾಯಗಳ ಸಂಖ್ಯಾಬಲ ಸದಾಶಿವ ಆಯೋಗದ ಆಸುಪಾಸಿನಲ್ಲಿದೆ. ಈಗಾಗಲೇ, ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ಸ್ವತಂತ್ರ ಸಮೀಕ್ಷೆಗೆ ಪೂರ್ವ ಸಿದ್ಧತೆ ಮಾಡಿಕೊಂಡಿದೆ. ಸಮೀಕ್ಷಾ ಮಾರ್ಗ ಅಥವಾ ವಿಧಾನದ ಬಗ್ಗೆ ಅನೇಕರಿಗೆ ಗೊಂದಲವಿದೆ. ಈ ಸಮೀಕ್ಷೆಯು ಹಿಂದಿನ ಎಲ್ಲಾ ಸಮೀಕ್ಷೆಗಳಿಗಿಂತ ವಿಭಿನ್ನವಾಗಿ ನಡೆಯಬೇಕಿದೆ. ಏಕೆಂದರೆ, ಜಾತಿಗಳ ಸಂಖ್ಯಾಬಲದ ಯಾದವಿ ಕಲಹ ನಿಲ್ಲಬೇಕಾದರೆ ಸಮೀಕ್ಷೆಯ ಫಲಿತಾಂಶವನ್ನು ಅತ್ಯಂತ ವೈಜ್ಞಾನಿಕವಾಗಿ ಮತ್ತು ಕರಾರುವಾಕ್ಕಾಗಿ ಜನರ ಮುಂದಿಡುವ ಹೊಣೆಗಾರಿಕೆ ಆಯೋಗದ್ದಾಗಿದೆ. ಕಾಂತರಾಜು ಆಯೋಗದ ಸಮೀಕ್ಷೆ ಬಗ್ಗೆ ಮೂಡಿರುವ ಅನುಮಾನ, ಸಂಶಯ, ಅಪನಂಬಿಕೆಗಳು ದಾಸ್ ಆಯೋಗದಲ್ಲಿಯೂ ಮೇಳೈಸಿದರೆ ಅಧೋಗತಿಯಂತೂ ಶತಸಿದ್ಧ. ಇದೆಲ್ಲವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಚಳಕ ಅನ್ನುವವರಿಗೇನು ಕೊರತೆಯಿರದು. ಹಾಗಾಗಿ ಸರಕಾರ ಸಹ ಎಚ್ಚರಿಕೆ ಹೆಜ್ಜೆಗಳನ್ನಿಡಬೇಕಿದೆ.
ಆದುದರಿಂದ, ನ್ಯಾಯಮೂರ್ತಿ ದಾಸ್ ಆಯೋಗ ಬಹು ಇಲಾಖೆಗಳ ಸಮನ್ವಯಗಳಿಂದ ಕೂಡಿದ ಕಾರ್ಯಾಚರಣೆಗಳ ಮೂಲಕ ವಿಕೇಂದ್ರೀಕೃತ ಮಾದರಿಯಲ್ಲಿ ಸಾಮೂಹಿಕ ಹೊಣೆಗಾರಿಕೆ ಅಡಿ ಸಮೀಕ್ಷೆ ನಿರ್ವಹಿಸಬೇಕಿದೆ. ಈಗಾಗಲೇ ವಿವಾದಿತ ಆದಿ ದ್ರಾವಿಡ, ಆದಿ ಕರ್ನಾಟಕ ಮತ್ತು ಆದಿ ಆಂಧ್ರ ಜಾತಿಗಳ ಎಡಗೈ ಮತ್ತು ಬಲಗೈ ಸಮುದಾಯಗಳ ಜನರು ಈ ಸಮೀಕ್ಷೆಯಲ್ಲಿ ತಮ್ಮ ಮೂಲ ಜಾತಿಗಳಡಿ ಗುರುತಿಸಿಕೊಳ್ಳಲು ಬಯಸುತ್ತಿರುವುದು ಸ್ವಾಗತಾರ್ಹ ಸಾಮಾಜಿಕ ಬೆಳವಣಿಗೆ ಆಗಿದೆ.
ಅನೇಕ ಉಪಜಾತಿಗಳ ಅಸ್ಮಿತೆಗಳು ಈ ಸಮೀಕ್ಷೆಯಲ್ಲಿ ಧ್ವಂಸವಾಗಬಾರದು. ಅವುಗಳಿಗೆ ಸಾಮಾಜಿಕ ಸ್ತರದಲ್ಲಿ ಅಗತ್ಯ ಸ್ಥಾನಮಾನ ನೀಡಬೇಕಾದ ಅನಿವಾರ್ಯತೆಗಳಿವೆ. 2001ರಲ್ಲಿ 17 ಅಸ್ಪಶ್ಯ ಹಿನ್ನೆಲೆಯ ಪರಿಶಿಷ್ಟ ಜಾತಿಗಳನ್ನು ಕೇರಳ ರಾಜ್ಯದಲ್ಲಿ ಅಸ್ತಿತ್ವದಲ್ಲಿಲ್ಲವೆಂದು ಸಂಸತ್ತಿನ ಅನುಮೋದನೆ ಪಡೆದು ಪಟ್ಟಿಯಿಂದ ಕೈಬಿಡಲಾಗಿದೆ. ಅಂತಹ ಪ್ರಮೇಯಗಳು ರಾಜ್ಯದಲ್ಲಿ ಏನಾದರೂ ಸಂಭವಿಸಿದರೆ, ಬಹುತೇಕ ಉಪಜಾತಿಗಳು ಭವಿಷ್ಯದಲ್ಲಿ ಅತ್ತ ಹಿಂದುಳಿದವರೂ ಆಗದೆ; ಇತ್ತ ಸವರ್ಣೀಯರೂ ಆಗದೆ ನಶಿಸುತ್ತವೆ. ಆದುದರಿಂದ ಆಯೋಗ ಇಂತಹ ಸೂಕ್ಷ್ಮ ಜಾತಿಗಳನ್ನು ಗುರುತಿಸಲು ವಿಶೇಷ ಕಾಳಜಿ ತೋರಬೇಕಿದೆ. ಕಳೆದ ಸದಾಶಿವ ಆಯೋಗದ ಸಮೀಕ್ಷೆ ಸಂದರ್ಭದಲ್ಲಿ ಒಂದು ನೈಜ ಘಟನೆ ಹೆಗ್ಗಡದೇವನ ಕೋಟೆ ತಾಲೂಕಿನ ಗ್ರಾಮದಲ್ಲಿ ನಡೆಯಿತು. ಏನೆಂದರೆ, ಸಮೀಕ್ಷೆಗೆ ಒಳಪಟ್ಟಿದ್ದ ಕುಟುಂಬವರೆಲ್ಲರೂ ದಕ್ಕಲಿಗರಾಗಿದ್ದರು. ಸಮೀಕ್ಷೆದಾರ ಅವರೆಲ್ಲರನ್ನು ‘ಆದಿ ಕರ್ನಾಟಕ’ ಎಂದು ನಮೂದಿಸಿದ್ದ, ಈ ಸುದ್ದಿ ತಿಳಿದ ಕೂಡಲೇ ತಾಲೂಕಿನ ದಂಡಾಧಿಕಾರಿಗಳು ಈ ತಪ್ಪನ್ನು ಸರಿಪಡಿಸಲು ಹೊಸ ಸಮೀಕ್ಷೆ ಮಾಡಿಸಿದರೆಂಬ ಮಾಹಿತಿಗಳಿವೆ. ಆದುದರಿಂದ, ಸಮೀಕ್ಷಾದಾರರಿಗೆ ಜಾತಿಗಳ ಬಗ್ಗೆ ಆಯೋಗ ಸ್ಥೂಲ ಪರಿಚಯ ಮಾಡಬೇಕಿದೆ. ಜೊತೆಗೆ ಅವರಿಗೆ ಪರಿಪೂರ್ಣ ತರಬೇತಿ ನೀಡಬೇಕು. ಹತ್ತಾರು ಅಣಕು ಸಮೀಕ್ಷೆಗಳನ್ನು ಅವರಿಂದ ಮಾಡಿಸಿ, ಪ್ರಶ್ನೆಗಳನ್ನು ಕೇಳುವ ವಿಧಾನ ಮತ್ತು ಮನೆಗಳ ಮಾಹಿತಿದಾರರ ಜೊತೆ ವರ್ತಿಸುವ ಮನೋಧರ್ಮಗಳನ್ನು ಪ್ರಾಯೋಗಿಕವಾಗಿ ತಿದ್ದಿ ಹೇಳಿದಾಗ ಮಾತ್ರ ಆಯೋಗ ಬಯಸಿದಂತಹ ದತ್ತಾಂಶಗಳು ಸಿಗಬಹುದು.
ಅಕಸ್ಮಾತ್ ಕಾಟಾಚಾರಕ್ಕೆ ಯಾರಾದರೂ ಪ್ರಶ್ನಾವಳಿಗಳನ್ನು ತುಂಬಿದರೂ ಸಹ ಕೊನೆಗೆ ಬೈಗುಳ ತಿನ್ನುವವರು ಈ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಅದರ ಇಲಾಖೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಆಗುತ್ತಾರೆ. ಇಂತಹ ಬೈದಾಟಗಳಿಗೆ ಆಸ್ಪದವಿಲ್ಲದಂತಹ ಒಂದು ನಿರ್ಮಲ ವಾತಾವರಣದಲ್ಲಿ ಉದ್ದೇಶಿತ ಸಮೀಕ್ಷೆ ನಡೆಯಬೇಕೆನ್ನುವುದು ಅನೇಕರ ಅಭಿಮತಗಳಾಗಿವೆ. ಒಳ ಮೀಸಲಾತಿ ಹೋರಾಟ ಎಪ್ರಿಲ್ 2025ರಲ್ಲಿ ಹುಟ್ಟಿದ ಚಳವಳಿಯಲ್ಲ. ಅದಕ್ಕೊಂದು ಸುದೀರ್ಘ ಹೋರಾಟದ ಮೈಲಿಗಲ್ಲಿದೆ. ಇದರ ಸಾಕಾರಕ್ಕಾಗಿ 30 ವರ್ಷಗಳಿಂದ ಬೆವರು ಸುರಿಸಿದವರಿದ್ದಾರೆ. ಇದನ್ನು ಸಾಂಘೀಕರಿಸಲು ಹತ್ತಾರು ಬಗೆಯ ವಿಭಿನ್ನ ಶೈಲಿಯ ಹೋರಾಟಗಳಾಗಿವೆ. ಬೆತ್ತಲೆ ಮೆರವಣಿಗೆ, ಪಂಜಿನ ಮೆರವಣಿಗೆ, ಅನೇಕ ಪಾದಯಾತ್ರೆಗಳು, ಸಹಸ್ರಾರು ಸಭೆಗಳು ಮತ್ತು ಮಂಥನ ಕ್ರಿಯೆಗಳು ಅತ್ಯಂತ ಶ್ಲಾಘನೀಯವಾಗಿ ನಡೆದು ಚಾರಿತ್ರಿಕವಾಗಿ ದಾಖಲಾಗಿವೆ. ಈ ಪ್ರಕ್ರಿಯೆಗಳಿಂದ ಯಾರೊಬ್ಬರ ಮನಸ್ಸು ನೋಯಿಸದಂತೆ ಪ್ರಜಾಪ್ರಭುತದಲ್ಲಿ ನಂಬಿಕೆಯಿಟ್ಟು ರಕ್ತರಹಿತ ಚಳವಳಿ ಸ್ವರೂಪದಲ್ಲಿ ಈ ಹಂತಕ್ಕೆ ಬಂದುನಿಂತಿದೆ. ಈ ಚಳವಳಿಯಲ್ಲಿ ವ್ಯಕ್ತಿಗಳು ಕೇವಲ ಪಾತ್ರಧಾರಿಗಳಷ್ಟೇ; ಅದರೆ ವಂಚಿತ ಸಮುದಾಯಗಳು ಮಾತ್ರ ಅದರ ಅಂತರಾತ್ಮದ ಕೂಗುಗಳಾಗಿವೆ. ಈ ಚಳವಳಿಯು ಯಾವುದೇ ವ್ಯಕ್ತಿ ಅಥವಾ ಆತನ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅವಹೇಳನ ಮಾಡುವ ಇರಾದೆಗಳನ್ನು ಹೊಂದಿರಲಿಲ್ಲ. ಕೆಲವರಿಂದ ಪರಿಸ್ಥಿತಿಯ ದುರುಪಯೋಗವಾಗಿರುವ ಕಾರಣ ಒಂದಷ್ಟು ಆಕ್ರೋಶಗಳು ವಿನಿಮಯವಾಗಿವೆ. ಇವುಗಳಿಂದ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಬಾರದೆಂಬ ಬಹುಮತದ ಅಭಿಮತಗಳಾಗಿವೆ. ಈ ಇಂಬಿನಲ್ಲಿ ‘‘ಅಂಬೇಡ್ಕರ್‌ವಾದದ ಒಳ ಮೀಸಲಾತಿ ಹೋರಾಟವು ಬ್ರಾಹ್ಮಣ್ಯದ ತೆಕ್ಕೆಗೆ ಜಾರದಂತೆ ಜಾಗೃತಿವಹಿಸುವುದು ಎಲ್ಲಾ ಹೋರಾಟಗಾರರ ಆದ್ಯ ಕರ್ತವ್ಯವಾಗಿದೆ’’ ಎಂದು ಶೋಷಿತರ ಚಿಂತಕ ಪ್ರೊ. ಸಿ.ಕೆ. ಮಹೇಶ್‌ಅಭಿಮತಿಸುತ್ತಾರೆ. ಇವರ ಸಾಲಿನಲ್ಲಿ ಹಲವಾರು ಜನರಿದ್ದಾರೆ.
ಪರಿಶಿಷ್ಟ ಜಾತಿಗಳಿಗೆ ಸಾಂವಿಧಾನಿಕವಾಗಿ ಅಲೆಮಾರಿ, ಅರೆ ಅಲೆಮಾರಿ, ವಿಮುಕ್ತ ಜಾತಿ ಅಥವಾ ಅಧಿಸೂಚಿತವಲ್ಲದ ಪದಗಳು ಅಪಥ್ಯವಾದವು. ಈ ಪದಗಳಿಗೆ ಆಸ್ಪದ ನೀಡದೆ ತೆಲಂಗಾಣ ಮಾದರಿಯಲ್ಲಿ ಸೂಕ್ಷ್ಮ ಜಾತಿಗಳನ್ನು ಗುರುತಿಸಬೇಕಿದೆ. ಈಗಾಗಲೇ, ಕೆಲವರು ಸಮೀಕ್ಷೆಯಲ್ಲಿ ಸ್ವಜನ ಪಕ್ಷಪಾತ ನಡೆಯಬಹುದೆಂಬ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಈ ಸಮಸ್ಯೆಗೂ ಆಯೋಗ ಉತ್ತರಿಸಲು ಸಶಕ್ತವಾಗಬೇಕಿದೆ. ಅದರಲ್ಲೂ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಇತರ ನಗರಗಳಲ್ಲಿರುವ ಪರಿಶಿಷ್ಟ ಜಾತಿಗಳನ್ನು ಗುರುತಿಸಲು ಮೊಹಲ್ಲಾವಾರು ಸಮೀಕ್ಷೆಗೂ ಮುನ್ನಾ ಪರಿಶಿಷ್ಟ ಜಾತಿಗಳ ಜನರಿರುವ ಸಾಂಪ್ರದಾಯಿಕ ಪ್ರದೇಶಗಳನ್ನು ಅಖೈರು ಮಾಡಿಕೊಳ್ಳಬೇಕು.
ಗ್ರಾಮೀಣ ಪ್ರದೇಶಗಳಲ್ಲಿಯೂ ಸಣ್ಣಪುಟ್ಟ ಜಾತಿಗಳ ಇರುವಿಕೆಯನ್ನು ಪತ್ತೆಮಾಡಿ ಅವುಗಳ ಸ್ವಮ್ಮಿನವರ ಸಾಮಾಜಿಕ ನಕಾಶೆಯನ್ನು ಪ್ರತೀ ಗ್ರಾಮ ಪಂಚಾಯತ್‌ನಿಂದ ಸಮೀಕ್ಷೆಗೂ ಮುನ್ನಾ ತಯಾರಿ ಮಾಡಿರಬೇಕು. ಹಾಗೆಯೇ ಸಮೀಕ್ಷೆಯಲ್ಲಿ ಅಪಭ್ರಂಶವಾಗಿ ಪರಿಶಿಷ್ಟ ಜಾತಿ, ದಲಿತ, ಹರಿಜನ ಮತ್ತು ಅಸ್ಪಶ್ಯ ಪದಗಳ ಮೂಲಕ ಜನರನ್ನು ಗುರುತಿಸುವ ವೈಯಕ್ತಿಕ ವಾಡಿಕೆಯನ್ನು ಸಾರಾಸಗಟಾಗಿ ಮುಂದುವರಿಸಬಾರದೆಂದು ಸಮೀಕ್ಷೆದಾರರಿಗೆ ಈ ಬಗ್ಗೆ ಸೂಚನೆಗಳು ಆಯೋಗದಿಂದ ಹೋಗಬೇಕು. ಸಮೀಕ್ಷೆ ಮಾಡುವ ಮನೆಯ ಮುಂದೆ ಸಮೀಕ್ಷೆ ಮಾಡುವವರ ಹಾಜರಿ ಗುರುತಿನ ಚೀಟಿಯೊಂದನ್ನು ಅನುಕ್ರಮವಾಗಿ ಅಂಟಿಸಬೇಕು. ಮಾಹಿತಿದಾರರಿಗೆ ಸ್ವೀಕೃತಿ ಪತ್ರವನ್ನು ಸಹ ನೀಡಬೇಕು. ಇವೆರಡೂ ಆಯೋಗದ ನಡೆಯನ್ನು ಗರಿಷ್ಠ ರೀತಿಯಲ್ಲಿ ಪುಷ್ಟೀಕರಿಸುತ್ತದೆ. ಮುಖ್ಯ ಸಮೀಕ್ಷಾದಾರರ ಜೊತೆ ಸಹಾಯಕರನ್ನು ಸಹ ಈ ಕಾರ್ಯಕ್ಕೆ ನಿಯೋಜಿಸಬೇಕು.
ಇತ್ತೀಚೆಗೆ ಕೆಲವರು ಒಳ ಮೀಸಲಾತಿ ಜಾರಿ ಆಗುವ ತನಕ ಭಡ್ತಿ ತಡೆಯುವ ಬಗ್ಗೆ ಅರಣ್ಯರೋದನ ಆರಂಭಿಸಿದ್ದಾರೆಂಬ ಚರ್ಚೆಗಳು ನಾಡಿನಾದ್ಯಂತ ನಡೆಯುತ್ತಿವೆ. ಅದರ ಬೇಗುದಿಯ ಉರಿಯಿಂದ ಹೊಲೆಯ-ಮಾದಿಗರ ನಡುವೆ ಉಳಿದಿದ್ದ ಕನಿಷ್ಠ ಸಾಮಾಜಿಕ ಸಾಮರಸ್ಯದ ಪರದೆ ಹರಿಯುತ್ತಿದೆ ಎಂಬ ಉಭಯತ್ರರ ಅಂತರಂಗದ ಧ್ವನಿಗಳಾಗಿವೆ. ಮತ್ತೊಂದೆಡೆ, ಸರಕಾರಿ ನೌಕರರ ಸಂಘಗಳು ಸಾಂವಿಧಾನಿಕವಾಗಿ ಒಳ ಮೀಸಲಾತಿ ಜಾರಿಗೆ ತಮ್ಮ ಸಹಮತವಿದೆ ಎಂದು ಮಾನಸಿಕವಾಗಿ ಉದ್ಘೋಷಿಸಿವೆ. ಆದರೆ ನೌಕರರಿಗೆ ಸ್ವಾಭಾವಿಕವಾಗಿ ಸಿಗುವ ಭಡ್ತಿ ನಿಲ್ಲಿಸುವುದು ಎಲ್ಲಾ ವರ್ಗದ ನೌಕರರ ಹಕ್ಕು ಹರಣವಾದಂತೆ ಎಂದು ಅವುಗಳು ಸರಕಾರದ ಮುಂದೆ ವಾದಿಸುತ್ತಿವೆ. ಇದೊಂದು ಧರ್ಮಸಂಕಟದ ದುಸ್ತರವಾದ ಆಡಳಿತಾತ್ಮಕ ಬಿಕ್ಕಟ್ಟನ್ನು ಎದುರಿಸಿದಂತಾಗಿದೆ. ಒಳ ಮೀಸಲಾತಿ ಹೋರಾಟ ಭಡ್ತಿ ದೃಷ್ಟಿಯಿಂದ ಹುಟ್ಟಿದ ಹೋರಾಟವಲ್ಲ. ಅದರ ಮಜಭೂತತೆ ಭಿನ್ನ ಆಯಾಮಗಳಲ್ಲಿ ಪಸರಿಸಿದೆ. ಈ ಹಿಂದೆ, ಒಳ ಮೀಸಲಾತಿ ಹೋರಾಟ ಬೆಂಬಲಿಸಿದ ಅನೇಕ ಅಧಿಕಾರಿಗಳಿಗೆ ಇನ್ನಿಲ್ಲದ ಕಿರುಕುಳ ನೀಡಿರುವುದು ಇತ್ತೀಚಿನವರಿಗೆ ಮನದಟ್ಟಾದಂತಿಲ್ಲ. ಹಾಗೆಯೇ ಒಳ ಮೀಸಲಾತಿ ಜಾರಿಯ ಅಂಚಿನಲ್ಲಿ ಮಾದಿಗ ಮಂತ್ರಿಗಳು ಮತ್ತು ಶಾಸಕರನ್ನು ಬೊಟ್ಟುಮಾಡಿ ಸಾರ್ವಜನಿಕವಾಗಿ ಇಕ್ಕಟ್ಟಿಗೆ ಸಿಲುಕಿಸಿ ಅವರನ್ನು ತೇಜೋವಧೆ ಮಾಡುವುದು ಎಷ್ಟು ಸರಿ ಎಂಬ ವಾದ ಮಂಡಿಸುವ ಮಾದಿಗರಿಗೇನು ಕಡಿಮೆಯಿಲ್ಲ. ಇದಕ್ಕಾಗಿಯೇ ಯಾರಿಂದಾದರೂ ಗುಪ್ತ ಫರ್ಮಾನು ಹೊರಡಿಸಲಾಗಿದೆಯೇ ಎಂಬ ಅನುಮಾನದ ಹುತ್ತಗಳು ಸಹ ಬೆಳೆಯಲಾರಂಭಿಸಿವೆ. ಆ ರೀತಿ ಮಾಡುವವರು ನೀಡುವ ಹತ್ತಾರು ಬಗೆಯ ಸಮರ್ಥನೆಗಳಿಗೆ ಕೊರತೆಯಿಲ್ಲ. ಸದ್ಯಕ್ಕೆ ಅವರೆಲ್ಲರೂ ಸಮೀಕ್ಷೆಯಲ್ಲಿ ಪಾತ್ರಧಾರಿಗಳಾಗಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಒಟ್ಟಾರೆ, ಒಳ ಮೀಸಲಾತಿ ದತ್ತಾಂಶಗಳ ಕ್ರೋಡೀಕರಣಕ್ಕಾಗಿ ನಿಯೋಜಿತ ಸಮೀಕ್ಷೆ ಕಾರ್ಯಗಳು ಶಾಸನಬದ್ಧ ಕಾರ್ಯಗಳಾಗಿವೆ. ಈ ಹಿಂದೆ, ನ್ಯಾಯಮೂರ್ತಿ ಸದಾಶಿವ ಆಯೋಗದ ವಿರುದ್ಧ ಮಂಡಿತವಾದ ಸರಣಿ ಆರೋಪಗಳಿಂದ ನ್ಯಾಯಮೂರ್ತಿ ದಾಸ್ ಆಯೋಗವು ವಿಮುಕ್ತಿಹೊಂದಬೇಕಿದೆ. ಸಮೀಕ್ಷೆಯಲ್ಲಿ ಒಂದಷ್ಟು ತಪ್ಪುಗಳಾದರೂ ಒಳ ಮೀಸಲಾತಿಯ ಉದ್ದೇಶ ಈಡೇರಿಕೆಗೆ ಅಡ್ಡಿ ಆತಂಕಗಳು ಎದುರಾಗುತ್ತವೆ. ಬಹುಶಃ ರಾಜ್ಯದಲ್ಲಿ ಒಳ ಮೀಸಲಾತಿ ಆರಂಭದ ಕಾಲಘಟ್ಟಗಳಲ್ಲಿ ಒಂದೆರಡು ಮಾದಿಗರ ಸಂಘಟನೆಗಳಿದ್ದವು. 1990ರ ತರುವಾಯ ಹೊರಬಂದ ಸಂಘಟನೆಗಳು ಆಳಿಗೊಂದರಂತೆ ಹುಟ್ಟಿವೆ. ಒಳಮೀಸಲಾತಿ ಆಶಯ ಈಡೇರಿದ ಮೇಲೆ ಅವುಗಳೆಲ್ಲವೂ ಮಾದಿಗ ಮತ್ತು ಅದರ ಉಪ ಸಮುದಾಯಗಳನ್ನು ಕಾಡುತ್ತಿರುವ ಜ್ವಲಂತ ಸಾಮಾಜಿಕ ಸಮಸ್ಯೆಗಳನ್ನು ಹಿಮ್ಮೆಟ್ಟಿಸಲು ಸ್ವಮ್ಮಿನ ಅಂತಃಕರಣ ಶೋಧನೆಯ ರಥ ಯಾತ್ರೆ ಕೈಗೊಂಡಾಗ ಮಾತ್ರ ಒಳ ಮೀಸಲಾತಿ ಸಾರ್ಥಕತೆ ಸಾಧಿಸಲು ಸಾಧ್ಯವಿದೆ. ಜೊತೆಗೆ ಭವಿಷ್ಯದ ಸಮಸ್ಯೆಗಳಿಗೆ ಉತ್ತರಾದಿತ್ವ ಪ್ರತಿಪಾದಿಸಲು ಸಾಧ್ಯವಾಗುತ್ತದೆ.
ಸಮಾಜ ಕಲ್ಯಾಣ ಇಲಾಖೆ ಮೂಲಕ 1995-96ರಲ್ಲಿ ನಡೆದ ಸಮೀಕ್ಷೆಯ ಫಲಿತಾಂಶಗಳು ಕಸದ ಬುಟ್ಟಿಗೆ ಹೋದಂತೆ ನ್ಯಾಯಮೂರ್ತಿ ದಾಸ್ ಆಯೋಗದ ಸಮೀಕ್ಷಾ ದತ್ತಾಂಶಗಳು ಮೂಲೆಗುಂಪಾಗದಿರಲೆಂದು ಆಶಿಸೋಣ. ಎಲ್ಲಾ ಉಪಜಾತಿಗಳು ಮುಕ್ತವಾಗಿ ಸಮೀಕ್ಷೆಯಲ್ಲಿ ಭಾಗವಹಿಸಿ ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಧಾರಣಮಾಡಲು ಮುಂದಾಗಲೆಂದು ಆಶಿಸೋಣ.