ಕೊಡಗು ಜಿಲ್ಲೆಯಲ್ಲಿ 14 ಕೋಟಿ ರೂ. ತೆರಿಗೆ ಬಾಕಿ

ಸಾಂದರ್ಭಿಕ ಚಿತ್ರ
ಮಡಿಕೇರಿ : ಕೊಡಗು ಜಿಲ್ಲೆಯ 103 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎಪ್ರಿಲ್ 1ರವರೆಗೆ 14 ಕೋಟಿ 91 ಲಕ್ಷ ರೂ. ತೆರಿಗೆ ಸಂಗ್ರಹವಾಗಿದ್ದು, ಇನ್ನೂ 14 ಕೋಟಿ 3 ಲಕ್ಷ ರೂ. ತೆರಿಗೆ ಸಂಗ್ರಹವಾಗಬೇಕಾಗಿದೆ.
2024-25ನೇ ಸಾಲಿನಲ್ಲಿ ಕೊಡಗು ಜಿಲ್ಲೆಯ 103 ಗ್ರಾಪಂಗಳಿಂದ 15 ಕೋಟಿ 52 ಲಕ್ಷ ರೂ. ತೆರಿಗೆ ಸಂಗ್ರಹ ಗುರಿ ಹೊಂದಲಾಗಿತ್ತು. ಅದಲ್ಲದೆ ಕಳೆದ ಸಾಲಿನಲ್ಲಿ ಸಂಗ್ರಹವಾಗಲು ಬಾಕಿ ಉಳಿದ 13 ಕೋಟಿ 49 ಲಕ್ಷ ರೂ. ಸೇರಿ 2024 ಮತ್ತು 2025ನೇ ಸಾಲಿನಲ್ಲಿ ಒಟ್ಟು ಕೊಡಗು ಜಿಲ್ಲೆಯ ಗ್ರಾಪಂ ವ್ಯಾಪ್ತಿಯಲ್ಲಿ 29 ಕೋಟಿ ರೂ. ಒಂದು ಲಕ್ಷ ರೂ. ಒಟ್ಟು ತೆರಿಗೆ ಸಂಗ್ರಹವಾಗಬೇಕಾಗಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ 14 ಕೋಟಿ 91 ಲಕ್ಷ ರೂ. ಮಾತ್ರ ಸಂಗ್ರಹವಾಗಿದ್ದು, ಇನ್ನೂ 14 ಕೋಟಿ 3 ಲಕ್ಷ ರೂ. ತೆರಿಗೆ ಸಂಗ್ರಹವಾಗಬೇಕಿದೆ.
ರಾಜ್ಯಾದ್ಯಂತ ಗ್ರಾಪಂ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹಿಸಲು ಜೂ.30ರವರೆಗೆ ವಿಶೇಷ ಅಭಿಯಾನ ನಡೆಸಲಾಗುತ್ತಿದೆ. ಕೊಡಗು ಗ್ರಾಪಂ ವ್ಯಾಪ್ತಿಯಲ್ಲಿ ಎ.1ರವರೆಗೆ ಶೇ.96ರಷ್ಟು ತೆರಿಗೆ ಸಂಗ್ರಹವಾಗಿದ್ದು, ತೆರಿಗೆ ಸಂಗ್ರಹದಲ್ಲಿ ಕೊಡಗು ರಾಜ್ಯದಲ್ಲಿ ಎಂಟನೇ ಸ್ಥಾನ ಪಡೆದಿದೆ.
ತೆರಿಗೆ ಪಾವತಿಸಲು ನಿರ್ಲಕ್ಷ್ಯ :
ಕೊಡಗಿನಲ್ಲಿ ಪ್ರಸಕ್ತ ಸಾಲಿನಲ್ಲಿ ತೆರಿಗೆ ಪಾವತಿಸಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ,ಸಿಬ್ಬಂದಿ ವರ್ಗ, ಕಂದಾಯ ವಸೂಲಿಗಾರರು ಹಾಗೂ ಆಡಳಿತ ಮಂಡಳಿ ಎಷ್ಟೇ ಜಾಗೃತಿ ಮೂಡಿಸಿದರೂ ಸಾರ್ವಜನಿಕರು ಕಂದಾಯ ಪಾವತಿಸಲು ಮುಂದಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಜಿಲ್ಲೆಯ ಬಹುತೇಕ ಗ್ರಾಪಂಗಳಲ್ಲಿ 5ರಿಂದ 10 ವರ್ಷಗಳ ಕಾಲ ತೆರಿಗೆ ಪಾವತಿಸದ ಬಹುತೇಕರು ಇದ್ದಾರೆ. ಮತ್ತೊಂದೆಡೆ ತೆರಿಗೆ ಪಾವತಿಸದ ಮನೆಯವರ ನೀರಿನ ಸಂಪರ್ಕ ಹಾಗೂ ಇನ್ನಿತರ ಸೇವೆಗಳನ್ನು ಕಡಿತಗೊಳಿಸಲು ಮುಂದಾದರೆ ಸ್ಥಳೀಯ ವಾರ್ಡಿನ ಗ್ರಾಪಂ ಸದಸ್ಯರು ರಾಜಕೀಯ ಪ್ರಭಾವ ಬೀರುತ್ತಿತ್ತಾರೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ.
ಅದಲ್ಲದೆ ವರ್ಷಗಟ್ಟಲೆ ಅಂಗಡಿಗಳ ಪರವಾನಿಗೆ ನವೀಕರಣಗೊಳಿಸದೆ ಕಾರ್ಯ ನಿರ್ವಹಿಸುತ್ತಿರುವ ಹಲವು ಅಂಗಡಿ-ಮುಂಗಟ್ಟುಗಳೂ ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತೆರಿಗೆ ಹಣವನ್ನು ಗ್ರಾಪಂ ಅಭಿವೃದ್ಧಿಗೆ ಬಳಸಲಾಗುತ್ತದೆ. ಗ್ರಾಪಂ ವ್ಯಾಪ್ತಿಯಲ್ಲಿ ವಿದ್ಯುತ್ ದೀಪ, ಸಿಬ್ಬಂದಿ ವೇತನ, ಕುಡಿಯುವ ನೀರು,ಮತ್ತು ನೈರ್ಮಲ್ಯ ಹಾಗೂ ಕಚೇರಿ ನಿರ್ವಹಣೆಗೆ ಬಳಸಲಾಗುತ್ತದೆ.
ವಿಶೇಷವೇನೆಂದರೆ ಗ್ರಾಪಂ ಸದಸ್ಯರೆ ಬಹುತೇಕ ಕಡೆಗಳಲ್ಲಿ ತೆರಿಗೆ ಹಣವನ್ನು ವಾರ್ಷಿಕವಾಗಿ ಪಾವತಿಸದೆ ಗ್ರಾಪಂ ಚುನಾವಣೆಯ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸಲು ಕಂದಾಯ ಪಾವತಿಯ ರಶೀದಿ ಬೇಕಾದ ಕಾರಣದಿಂದ ಒಂದೇ ಕಂತಿನಲ್ಲಿ ಕಂದಾಯ ಪಾವತಿಸುವ ಘಟನೆಗಳೂ ಜಿಲ್ಲೆಯಲ್ಲಿ ವರದಿಯಾಗಿತ್ತು.
ಕೊಡಗು ಜಿಲ್ಲೆಯ ಗ್ರಾಪಂ ವ್ಯಾಪ್ತಿಯಲ್ಲಿ ರೆಸಾರ್ಟ್, ಹೋಮ್ ಸ್ಟೇ, ಹೊಟೇಲ್ ರೆಸ್ಟೋರೆಂಟ್ ಗಳು ಕಾರ್ಯ ನಿರ್ವಹಿಸುತ್ತಿದೆ. ಸರಿಯಾದ ಅವಧಿಗೆ ಇವುಗಳಿಂದ ತೆರಿಗೆ ಸಂಗ್ರಹಿಸಲು ಆಯಾ ಗ್ರಾಪಂ ಆಸಕ್ತಿ ವಹಿಸಿದರೆ ಜಿಲ್ಲೆಯಲ್ಲಿ ತೆರಿಗೆ ಸಂಗ್ರಹದಲ್ಲಿ ಗುರಿ ಸಾಧಿಸಬಹುದಾಗಿದೆ ಎಂಬ ಅಭಿಪ್ರಾಯಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.
ತೆರಿಗೆ ಡಿಜಿಟಲ್ ಪೇ
ಗ್ರಾಪಂ ತೆರಿಗೆ ವಸೂಲಿಗೂ ಡಿಜಿಟಲ್ ಸೇವೆ ಆರಂಭಿಸಲಾಗಿದೆ. ತೆರಿಗೆ ಪಾವತಿದಾರರು ಪಂಚಾಯತ್‌ಗೆ ಭೇಟಿ ನೀಡದೆ, ಇರುವ ಸ್ಥಳದಿಂದಲೇ ಡಿಜಿಟಲ್ ಸೇವೆಯ ಮೂಲಕ ಕಂದಾಯ ಪಾವತಿ ಮಾಡುವ ಅವಕಾಶ ನೀಡಲಾಗಿದೆ. ಸರಕಾರದ ಅಧಿಕೃತ ವೆಬ್‌ಸೈಟ್ https.\\bsk.Karnataka.gov.in ಭೇಟಿ ನೀಡಿ ನಿಮ್ಮ ಆಸ್ತಿಯ ತೆರಿಗೆ ಎಷ್ಟು ರೂ. ಬಾಕಿ ಇದೆ ಎಂದು ತಿಳಿದು ಆನ್‌ಲೈನ್ ಮೂಲಕವೇ ಫೋನ್ ಪೇ ಅಥವಾ ಗೂಗಲ್ ಪೇ ಮುಖಾಂತರ ತೆರಿಗೆ ಪಾವತಿಸುವ ಅವಕಾಶ ಇದೆ.
ಗ್ರಾಮಾಡಳಿತದಲ್ಲಿ ತೆರಿಗೆ ಸಂಗ್ರಹ ದೊಡ್ಡ ಸವಾಲಾಗಿದೆ. ಪ್ರಸಕ್ತ ಸಾಲಿನಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹ ಗುರಿ ಸದ್ಯದಲ್ಲೇ ತಲುಪುತ್ತೇವೆ. ಆದರೆ, ಕಳೆದ 5-10 ವರ್ಷಗಳಿಂದ ನೀರಿನ ದರ ಮತ್ತು ತೆರಿಗೆ ಬಾಕಿ ಉಳಿದಿರುವ ಹಣ ಸಂಗ್ರಹಿಸುವುದು ದೊಡ್ಡ ಸವಾಲಿನ ಕೆಲಸವಾಗಿದೆ. 5ರಿಂದ 10 ಸಾವಿರ ರೂ. ಬಾಕಿ ಉಳಿದಿರುವವರು ಒಂದೇ ಬಾರಿ 10 ಸಾವಿರ ರೂ. ಪಾವತಿ ಮಾಡುವುದಿಲ್ಲ. ಅವರಿಗೆ ಜಾಗೃತಿ ಮೂಡಿಸಿ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಚುನಾಯಿತ ಜನಪ್ರತಿನಿಧಿಗಳ ಸಹಕಾರವನ್ನೂ ಪಡೆಯಲಾಗುತ್ತದೆ. ಜೂ.30ರೊಳಗೆ ತೆರಿಗೆ ಪಾವತಿಸುವವರಿಗೆ ಶೇ.5ರಷ್ಟು ವಿನಾಯಿತಿಯನ್ನೂ ನೀಡಲಾಗುತ್ತಿದೆ.
-ಶೇಖರ್, ತಾಪಂ ಕಾರ್ಯ ನಿರ್ವಹಣಾಧಿಕಾರಿ, ಮಡಿಕೇರಿ