ಮೈಕ್ರೋ ಫೈನಾನ್ಸ್ ಕಿರುಕುಳ: ಸರಕಾರಗಳು ಸಮಸ್ಯೆಯ ಮೂಲವನ್ನು ಅರಿಯಲಿ
ಜನರ ಸಾಮಾಜಿಕ ಹಾಗೂ ಆರ್ಥಿಕ ಜೀವನವನ್ನು ಹಸನುಗೊಳಿಸುವಂತಹ ಪೂರಕ ಕ್ರಮಗಳನ್ನು ಸರಕಾರಗಳು ಕಂಡುಕೊಳ್ಳದೆ ಹೋದರೆ, ಇಂದು ಒಂದು ತಿಂಗಳ ಮಗುವನ್ನು ವಸೂಲಿಗಾರರು ಮನೆಯಿಂದ ಹೊರಹಾಕಿದಂತೆ, ಮುಂದೊಂದು ದಿನ ಆರ್ಥಿಕ ಸಮಸ್ಯೆಗೆ ಜರ್ಜರಿತವಾಗಿ ಹೆರುವ ಕೈಗಳೇ ಮಗುವಿನ ಪ್ರಾಣವನ್ನು ಚಿವುಟಿಬಿಡಬಹುದೇನೋ!;

‘ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ’ ಎಂಬುದೊಂದು ಜನಪ್ರಿಯ ನಾಣ್ಣುಡಿ. ಇದು ಸಾಲ ಕೇಳುವವರಿಗೆ, ಕೊಡುವ ಸಾಮರ್ಥ್ಯ ಇರುವ ಸ್ನೇಹಿತರಿದ್ದು, ಸಂಕಷ್ಟ ಎದುರಾಗಿ ಸಾಲ ತೀರಿಸದೆ ಹೋದಲ್ಲಿ ಸ್ನೇಹಕ್ಕೆ ಧಕ್ಕೆ ಉಂಟಾಗುತ್ತದೆ ಎಂಬುದನ್ನು ಸೂಚ್ಯವಾಗಿ ತಿಳಿಸುವುದು. ಪ್ರಶ್ನೆ ಇಲ್ಲಿ, ಒಂದೊಮ್ಮೆ ಸಾಲ ಕೇಳುವವನ/ಳ ಸ್ನೇಹಿತರ ಇಡೀ ಗುಂಪಿಗೇ ಸಾಲದ ಅವಶ್ಯಕತೆ ಇದ್ದಲ್ಲಿ ದಾರಿ ಯಾವುದು? ಸಾಲದ ಅವಶ್ಯಕತೆ ಇರುವ ಇಂತಹ ಗುಂಪುಗಳ ಸಂಖ್ಯೆ ಹೆಚ್ಚಲು ಕಾರಣವೇನು? ಎಂಬುದು.
ದೇಶದ ಬಹುಪಾಲು ಜನರು ಜೀವನ ನಿರ್ವಹಣೆಗಾಗಿ ಒಂದಲ್ಲಾ ಒಂದು ಸಮಯದಲ್ಲಿ ಸಾಲಕ್ಕಾಗಿ ಕೈಗಳನ್ನು ಚಾಚುತ್ತಾರೆ ಎಂಬುದನ್ನು ಖಚಿತವಾಗಿ ಅರಿತಿರುವ ಮೈಕ್ರೋ ಫೈನಾನ್ಸ್ ಕಂಪೆನಿಗಳು ಇಂದು ದೇಶದ ಉದ್ದಗಲಕ್ಕೂ ನಾಯಿಕೊಡೆಗಳಂತೆ ತಲೆಎತ್ತಿವೆ. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿನ ಸ್ತ್ರೀ ಶಕ್ತಿ ಗುಂಪುಗಳು, ಸ್ವಸಹಾಯ ಗುಂಪುಗಳು, ಬ್ಯಾಂಕುಗಳ ನೂರಾರು ಷರತ್ತು ಹಾಗೂ ನಿಯಮಗಳಿಂದ ಬೇಸತ್ತು ಸಾಲಕ್ಕಾಗಿ ಕಾಯುತ್ತ ಕುಳಿತಿರುವ ಕೈಗಳೇ ಇವುಗಳ ಟಾರ್ಗೆಟ್ ಹಾಗೂ ಬಂಡವಾಳ!
ದೈನಂದಿನ ಜೀವನದಲ್ಲಿ ಎದುರಾಗುವ ಅನಿರೀಕ್ಷಿತ ಸಮಸ್ಯೆಗೆ ತಕ್ಷಣ ಬೇಕಿರುವ ಆರ್ಥಿಕ ನೆರವಿಗೆ ಈ ಕಂಪೆನಿಗಳು ಸಾಲವನ್ನು ಸುಲಭವಾಗಿ ಕೊಡುತ್ತವೆ. ಯಾವುದೇ ಭದ್ರತೆ ಪಡೆಯದೆ ಕೇವಲ ಆದಾಯವನ್ನು ಮಾತ್ರ ಪರಿಗಣಿಸಿ ಈ ಮೈಕ್ರೋ ಫೈನಾನ್ಸ್ ಕಂಪೆನಿಗಳು ಸಾಲಗಳನ್ನು ನೀಡಿ, ಸಂಕಷ್ಟದಲ್ಲಿರುವವರನ್ನು ತಮ್ಮ ಸಾಲದ ಕೂಪಕ್ಕೆ ಬೀಳಿಸಿಕೊಳ್ಳುತ್ತವೆ. ತೆಗೆದುಕೊಂಡ ಸಾಲದ ಮೊತ್ತವನ್ನು ನಿಗದಿತ ಸಮಯದಲ್ಲಿ ಇಂತಿಷ್ಟು ಕಂತುಗಳಲ್ಲಿ ತೀರಿಸಬೇಕು. ತಪ್ಪಿದ್ದಲ್ಲಿ ಬಡ್ಡಿ ಚಕ್ರಬಡ್ಡಿ ಸುಳಿಗೆ ಸಿಲುಕಬೇಕು! ಸಾಲದ ಸುಳಿಗೆ ಸಿಕ್ಕಿ ಹೊರಬರುವವರ ಸಂಖ್ಯೆ ವಿರಳವೇ! ಒಂದರ ಮೇಲೊಂದು ಮರುಕಳಿಸುವ ಸಂಕಷ್ಟಗಳ ಅಲೆಗಳ ಹೊಡೆತಕ್ಕೆ ಅಸಲು ತೀರಿಸಲಾಗದೆ, ಬಡ್ಡಿಯನ್ನೂ ಕಟ್ಟಲಾಗದೆ ಬಿದ್ದ ಕೂಪದಲ್ಲೇ ಅಡಗಿರುವ ಶೂಲದ ಇರಿತಕ್ಕೆ ಪ್ರಾಣವನ್ನು ತೆರುವ ಸಂಖ್ಯೆಯೇ ಹೆಚ್ಚು! ಇತ್ತೀಚೆಗೆ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪೆನಿಗಳ ಸಾಲದ ಕಿರುಕುಳಕ್ಕೆ ಬಲಿಯಾದ ಹಲವಾರು ಆತ್ಮಹತ್ಯೆ ಪ್ರಕರಣಗಳು ಇದಕ್ಕೆ ಕನ್ನಡಿ!
ದೇಶದಲ್ಲಿ ಇರುವ ಮೈಕ್ರೋ ಫೈನಾನ್ಸ್ ಕಂಪೆನಿಗಳ ಸಂಖ್ಯೆ ೧೯೪. ಇವುಗಳು ನೀಡಿರುವ ಸಾಲದ ಖಾತೆಗಳ ಸಂಖ್ಯೆ ೧೪.೬ ಕೋಟಿ ಹಾಗೂ ನೀಡಿರುವ ಮೊತ್ತ ೪.೦೮ ಲಕ್ಷ ಕೋಟಿ ರೂ.! ನಮ್ಮ ರಾಜ್ಯದಲ್ಲಿ ೩೧ ಮೈಕ್ರೋ ಫೈನಾನ್ಸ್ ಕಂಪೆನಿಗಳು ನೀಡಿರುವ ಕಿರುಸಾಲದ ಖಾತೆಗಳ ಸಂಖ್ಯೆ ೧.೦೯ ಕೋಟಿ ಹಾಗೂ ನೀಡಿರುವ ಕಿರುಸಾಲದ ಒಟ್ಟು ಮೊತ್ತ ೫೯,೩೫೭.೭೬ ಕೋಟಿ ರೂ. (ಇವು ಕೇವಲ ನೋಂದಾಯಿತ ಕಂಪೆನಿಗಳಿಗೆ ಸಂಬಂಧಿಸಿದಂತೆ) ಆರ್‌ಬಿಐ ಅಡಿಯಲ್ಲಿ ನೇರವಾಗಿ ಬರುವ ಈ ಮೈಕ್ರೋ ಫೈನಾನ್ಸ್ ಕಂಪೆನಿಗಳು ಸಾಲ ನೀಡುವ ಹಾಗೂ ವಸೂಲಾತಿಯ ಎಲ್ಲಾ ನಿಯಮಗಳನ್ನು ಈಗಾಗಲೇ ಗಾಳಿಗೆ ತೂರಿವೆ! ಸಾಲ ವಸೂಲಾತಿಗಾಗಿ ಗೂಂಡಾಗಳ ಪಡೆಯನ್ನು ರಚಿಸಿಕೊಂಡು ಸಾಲಗಾರರ ಬೆನ್ನೇರಿ ರಕ್ತಪಿಪಾಸುಗಳಂತೆ ಕಾಡುತ್ತಾರೆ. ಇತ್ತೀಚೆಗೆ ಈ ಕಂಪೆನಿಗಳು ನೀಡಿರುವ ಅಮಾನವೀಯ ಕಿರುಕುಳದ ಬಗ್ಗೆ ರಾಜ್ಯದಾದ್ಯಂತ ದೂರುಗಳು ಕೇಳಿಬಂದವು. ಇವುಗಳ ಕಾಟದಿಂದ ಬೇಸತ್ತು ಪ್ರತಿಭಟನೆಯ ಧ್ವನಿ ಗಟ್ಟಿಯಾದ ಬೆನ್ನಲ್ಲೇ ಮಾನ್ಯ ಮುಖ್ಯಮಂತ್ರಿಯವರು ಉನ್ನತ ಮಟ್ಟದ ಸಭೆ ಕರೆದರು. ಸುಗ್ರೀವಾಜ್ಞೆ ಮೂಲಕ ಸಾಲ ವಸೂಲಾತಿ ನಿಯಮಗಳನ್ನು ಸರಿಯಾಗಿ ಪಾಲಿಸದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ನಿರ್ಣಯದ ವರದಿಯು ಹೊರಬಿದ್ದಿತು.
ಬೆಳಗಾವಿಯಲ್ಲಿ ಈ ಕಂಪೆನಿಗಳ ಸಾಲ ವಸೂಲಿಗಾರರು ಒಂದು ತಿಂಗಳ ಕೂಸಿನ ಆರ್ಥನಾದವನ್ನೂ ಆಲಿಸದೆ, ಬಾಣಂತಿಯನ್ನು ಕೈಗೂಸಿನೊಂದಿಗೆ ಮನೆಯಿಂದ ಹೊರದಬ್ಬಿ ಮನೆಗೆ ಬೀಗ ಜಡಿದರು. ಇಂತಹ ಹೃದಯಹೀನ, ಅಮಾನವೀಯ ವರ್ತನೆಗೆ ಕಡಿವಾಣ ಹಾಕಲೇಬೇಕು. ಇದಕ್ಕೆ ಸೂಕ್ತ ನಿಯಮಗಳನ್ನು ರೂಪಿಸಲೇಬೇಕು. ಇದು ಅತೀ ಅವಶ್ಯಕ. ಆದರೆ, ಇಷ್ಟಕ್ಕೇ ಸಮಸ್ಯೆಗೆ ಪರಿಹಾರ ಸಿಕ್ಕಿದಂತೆಯೇ?
ಇಂದು ಜನಸಾಮಾನ್ಯರು ಯಾತಕ್ಕಾಗಿ ಸಾಲಕ್ಕೆ ಕೈ ಒಡ್ಡುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಕಾರಣ ಹಾಗೂ ಪರಿಹಾರವನ್ನು ಕಂಡುಕೊಳ್ಳದಿದ್ದರೆ ಕೇವಲ ವಸೂಲಿಗಾರರ ಮೇಲೆ ಏರುವ ಕಟ್ಟುಪಾಡುಗಳು, ನಿಯಮಗಳು ಬಡಜನರನ್ನು ಸಾಲದ ಸುಳಿಯಿಂದ ಬಿಡುಗಡೆ ನೀಡಲಾರವು!
ಒಮ್ಮೆ ಸಾವಿರಾರು ಮಂದಿ ಸಾಲ ತೆಗೆದುಕೊಂಡ ಕಾರಣಗಳನ್ನು ಗಮನಿಸಿ ನೋಡಿದರೆ, ಇಂದು ಮನುಷ್ಯನಿಗೆ ಅತ್ಯಾವಶ್ಯಕ ಏನು ಎಂಬುದನ್ನು ತಿಳಿಸುತ್ತದೆ. ಮಕ್ಕಳ ಶಿಕ್ಷಣಕ್ಕೆಂದು, ಮನೆಯ ಸದಸ್ಯರಲ್ಲೊಬ್ಬರಿಗೆ ಆರೋಗ್ಯ ಕೆಟ್ಟಿತೆಂದು, ಮನೆ ಕಟ್ಟಲೆಂದು, ಉದ್ಯೋಗದ ಖಾತ್ರಿಗೆಂದು, ಕೃಷಿಗೆ, ಹೈನುಗಾರಿಕೆಗೆಂದು... ಇವೇ ಬಹುತೇಕರನ್ನು ಸಾಲದ ಹೊಸ್ತಿಲಿನಲ್ಲಿ ನಿಲ್ಲಿಸಿದ್ದು!
ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗ ಇವುಗಳು ಈ ಭೂಮಿಯ ಮೇಲೆ ಪ್ರತಿಯೊಬ್ಬ ಮನುಷ್ಯನಿಗೆ ಸಿಗಲೇಬೇಕಾದ ಮೂಲಭೂತ ಹಕ್ಕುಗಳು. ಇದನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೆ ಖಾತ್ರಿ ಪಡಿಸಬೇಕಾದುದು ಸರಕಾರಗಳ ಆದ್ಯ ಕರ್ತವ್ಯ. ಇದನ್ನು ಬಿಟ್ಟು ಶಿಕ್ಷಣ ಹಾಗೂ ಆರೋಗ್ಯವನ್ನು ಮಾರಾಟದ ವಸ್ತುವನ್ನಾಗಿಸಿ, ದುಡಿಯುವ ಕೈಗಳನ್ನು ಕೈಕಟ್ಟಿ ಕೂರುವಂತೆ ಮಾಡಿ, ಇರಲೊಂದು ಸೂರಿಲ್ಲದೆ ದುಡಿಮೆಯ ಅರ್ಧ ಭಾಗಕ್ಕಿಂತಲೂ ಹೆಚ್ಚು ಮನೆ ಬಾಡಿಗೆ ಕಟ್ಟಬೇಕಾದ ಪರಿಸ್ಥಿತಿಯಲ್ಲಿ ಜನಸಾಮಾನ್ಯರನ್ನಿಟ್ಟು, ಬೆಲೆಏರಿಕೆಯಲ್ಲಿ ಬೇಯಿಸಿ, ಕೇವಲ ಸಾಲ ವಸೂಲಾತಿಯ ಬಗ್ಗೆ ಕಠಿಣ ಕ್ರಮಗಳನ್ನು ತೆಗೆದುಕೊಂಡ ಮಾತ್ರಕ್ಕೆ, ಬಡವರ ನೆತ್ತಿಯ ಮೇಲೆ ತೂಗುವ ಸಾಲದ ಶೂಲದ ಇರಿತವನ್ನು ತಪ್ಪಿಸಿದಂತಾಗುತ್ತದೆಯೇ?
ಇಂದು ಸರಕಾರಗಳು ಸಮಸ್ಯೆಯ ಮೂಲವನ್ನು ಅರಿತು, ಪರಿಹಾರವನ್ನು ಕಂಡುಕೊಳ್ಳುವ ದಿಕ್ಕಿನಲ್ಲಿ ದಾಪುಗಾಲು ಹಾಕಬೇಕಿದೆ. ಸಾರ್ವಜನಿಕ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಬಲವರ್ಧನೆ, ದುಡಿಯುವ ಕೈಗಳಿಗೆ ಕೆಲಸ ಖಾತ್ರಿಪಡಿಸಿ, ಗೌರವಯುತ ಜೀವನಕ್ಕೆ ಯೋಗ್ಯ ಸಂಬಳವನ್ನು ದೊರಕಿಸಬೇಕಿದೆ. ಕೃಷಿಗೆ ಹೆಚ್ಚು ಅನುದಾನ, ಗ್ರಾಮೀಣ ಪ್ರದೇಶದಲ್ಲಿ ನರೇಗಾ ಕೂಲಿಕಾರರಿಗೆ ವೇತನ ಹೆಚ್ಚಿಸಬೇಕಿದೆ. ರೈತನ ಬೆಳೆ ನಷ್ಟವಾದರೂ ಅವನಿಗೆ ಜೀವನ ಯೋಗ್ಯ ಭದ್ರತೆಯನ್ನು ಖಾತ್ರಿಪಡಿಸುವ ನಿಯಮಗಳು ಜಾರಿಗೆ ತರಬೇಕಿದೆ, ಜನಸಾಮಾನ್ಯರ ಮೇಲೆ ಹೇರುವ ಜಿಎಸ್‌ಟಿ ತೆರಿಗೆಗೆ ಕಡಿವಾಣ ಹಾಕಬೇಕಾಗಿದೆ. ಇಂತಹ ಜನರ ಸಾಮಾಜಿಕ ಹಾಗೂ ಆರ್ಥಿಕ ಜೀವನವನ್ನು ಹಸನುಗೊಳಿಸುವಂತಹ ಪೂರಕ ಕ್ರಮಗಳನ್ನು ಕಂಡುಕೊಳ್ಳದೆ ಹೋದರೆ, ಇಂದು ಒಂದು ತಿಂಗಳ ಮಗುವನ್ನು ವಸೂಲಿಗಾರರು ಮನೆಯಿಂದ ಹೊರಹಾಕಿದಂತೆ, ಮುಂದೊಂದು ದಿನ ಆರ್ಥಿಕ ಸಮಸ್ಯೆಗೆ ಜರ್ಜರಿತವಾಗಿ ಹೆರುವ ಕೈಗಳೇ ಮಗುವಿನ ಪ್ರಾಣವನ್ನು ಚಿವುಟಿಬಿಡಬಹುದೇನೋ!