ನಮ್ಮ ಅಸ್ತಿತ್ವದ ಘೋರ, ಕರಾಳ ಆಯಾಮ

Update: 2025-04-21 09:57 IST
ನಮ್ಮ ಅಸ್ತಿತ್ವದ ಘೋರ, ಕರಾಳ ಆಯಾಮ
  • whatsapp icon

ಇದು ಎಲ್ಲಿಯದ್ದೋ ಸುದ್ದಿ ಸಮಾಚಾರವಲ್ಲ. ಯಾವುದನ್ನು ನಾವು ‘ನಾವು’ ಅನ್ನುತ್ತೇವೋ ಅದರ ಅವಿಭಾಜ್ಯ ಭಾಗ ಇದು. ನಾವೆಷ್ಟು ಹೆಣಗಿದರೂ ಕೊಡವಿಕೊಳ್ಳಲಾಗದ, ಸಾಕ್ಷಾತ್ ನಮ್ಮ ಅಸ್ತಿತ್ವಕ್ಕೆ ನಾವೇ ಅಂಟಿಸಿಕೊಂಡಿರುವ ಕಳಂಕ. ನಮ್ಮದೇ ಕರಾಳ ಸತ್ಯ. ಇದನ್ನರಿಯಲು ತನಿಖೆ ಸಂಶೋಧನೆಗಳ ಅಗತ್ಯವೇನಿಲ್ಲ. ಸರಕಾರಿ ಅಂಕಿಅಂಶಗಳು, ನರಮೇಧಗಳ ಇತಿಹಾಸ, ಪುರಾಣ ಮತ್ತು ಪವಿತ್ರಗ್ರಂಥಗಳ ಕರಾಳ ಪುಟಗಳು ಯಾವುದನ್ನೂ ಹುಡುಕಾಡಬೇಕಾಗಿಲ್ಲ. ದಲಿತರ ಸನ್ನಿವೇಶವನ್ನು ಪ್ರತಿನಿಧಿಸುವ ನೂರಾರು ಕರಾಳ

ದೃಶ್ಯಗಳು ನಮ್ಮ ನಿತ್ಯಜೀವನದಲ್ಲಿ ನಮ್ಮ ಅಕ್ಕಪಕ್ಕದಲ್ಲೇ ಅಲ್ಲಲ್ಲಿ ಆಗಾಗ ವಿವಿಧ ಸ್ವರೂಪಗಳಲ್ಲಿ ಅನಾವರಣಗೊಳ್ಳುತ್ತಲೇ ಇರುತ್ತವೆ.

ಮುಸಲ್ಮಾನರಿಗೆ ಪಾಠಕಲಿಸಿದ್ದೇವೆಂಬ ಸಂಭ್ರಮ ಮತ್ತು ಇನ್ನಷ್ಟು ಪಾಠ ಕಲಿಸಬೇಕು ಎಂಬ ಜಿದ್ದು ಇವುಗಳಲ್ಲೇ ನಾವು ಮೈಮರೆತಿರುವಾಗ ನಮ್ಮದೇ ಅಕ್ಕಪಕ್ಕದ, ನೇರವಾಗಿ ನಮಗೆ ಸಂಬಂಧಿಸಿದ ಮತ್ತು ನಮ್ಮ ತುರ್ತು ಗಮನಕ್ಕೆ ಅರ್ಹವಾದ ಎಷ್ಟೋ ಘೋರ ಸತ್ಯಗಳ ಬಗ್ಗೆ ನಾವು ಕಿವುಡರೂ ಕುರುಡರೂ ಮೂಗರೂ ಆಗಿಬಿಟ್ಟಿರುತ್ತೇವೆ. ಉದಾ: ನಾವು ನಮ್ಮದೆನ್ನುವ ಸಮಾಜದಲ್ಲಿ ದಲಿತರೆಂದು ಗುರುತಿಸಲಾಗುವ ಮಾನವ ವರ್ಗವೊಂದು ಯಾವ ಸ್ಥಿತಿಯಲ್ಲಿದೆ? ಪ್ರತಿದಿನ ಎಂತೆಂತಹ ಅಪಮಾನ, ದೌರ್ಜನ್ಯಗಳನ್ನು ಎದುರಿಸುತ್ತಿದೆ? ಇದು ಎಲ್ಲಿಯದ್ದೋ ಸುದ್ದಿ ಸಮಾಚಾರವಲ್ಲ. ಯಾವುದನ್ನು ನಾವು ‘ನಾವು’ ಅನ್ನುತ್ತೇವೋ ಅದರ ಅವಿಭಾಜ್ಯ ಭಾಗ ಇದು. ನಾವೆಷ್ಟು ಹೆಣಗಿದರೂ ಕೊಡವಿಕೊಳ್ಳಲಾಗದ, ಸಾಕ್ಷಾತ್ ನಮ್ಮ ಅಸ್ತಿತ್ವಕ್ಕೆ ನಾವೇ ಅಂಟಿಸಿಕೊಂಡಿರುವ ಕಳಂಕ. ನಮ್ಮದೇ ಕರಾಳ ಸತ್ಯ. ಇದನ್ನರಿಯಲು ತನಿಖೆ ಸಂಶೋಧನೆಗಳ ಅಗತ್ಯವೇನಿಲ್ಲ. ಸರಕಾರಿ ಅಂಕಿಅಂಶ ಗಳು, ನರಮೇಧಗಳ ಇತಿಹಾಸ, ಪುರಾಣ ಮತ್ತು ಪವಿತ್ರಗ್ರಂಥಗಳ ಕರಾಳ ಪುಟಗಳು ಯಾವುದನ್ನೂ ಹುಡುಕಾಡಬೇಕಾಗಿಲ್ಲ. ದಲಿತರ ಸನ್ನಿವೇಶವನ್ನು ಪ್ರತಿನಿಧಿಸುವ ನೂರಾರು ಕರಾಳ ದೃಶ್ಯಗಳು ನಮ್ಮ ನಿತ್ಯಜೀವನದಲ್ಲಿ ನಮ್ಮ ಅಕ್ಕಪಕ್ಕದಲ್ಲೇ ಅಲ್ಲಲ್ಲಿ ಆಗಾಗ ವಿವಿಧ ಸ್ವರೂಪಗಳಲ್ಲಿ ಅನಾವರಣಗೊಳ್ಳುತ್ತಲೇ ಇರುತ್ತವೆ.

ಉದಾ:

► ಕಳೆದ ವರ್ಷ ನಮ್ಮ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಅಪ್ರಾಪ್ತ ವಯಸ್ಸಿನ ದಲಿತ ಹೆಣ್ಣೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯಿತು. ಹೆಣ್ಣಿನ ಹೆತ್ತವರು ಆರೋಪಿಯ ವಿರುದ್ಧ ದೂರು ದಾಖಲಿಸಿದರು. ಮೇಲ್ಜಾತಿಗೆ ಸೇರಿದ್ದ ಆರೋಪಿಯ ಬಂಧನವಾದೊಡನೆ ಕೋಲಾಹಲ ಆರಂಭವಾಯಿತು. ದೂರು ಹಿಂಪಡೆದುಕೊಳ್ಳಬೇಕೆಂದು ಹೆಣ್ಣಿನ ಹೆತ್ತವರ ಮೇಲೆ ಭಾರೀ ಒತ್ತಡ ಹಾಕಲಾಯಿತು. ಅವರು ಒಪ್ಪದೇ ಇದ್ದಾಗ ಸವರ್ಣೀಯರು ಆ ಊರಿನ ಸುಮಾರು 250ರಷ್ಟು ಸದಸ್ಯರಿರುವ ಎಲ್ಲ 50 ದಲಿತ ಕುಟುಂಬಗಳ ವಿರುದ್ಧ ಸಾಮಾಜಿಕ ಬಹಿಷ್ಕಾರ ಹೇರಿಬಿಟ್ಟರು. ದಿನಸಿ ಖರೀದಿಸಲು ಹೋದ ದಲಿತರಿಗೆ ಅಂಗಡಿಗಳಲ್ಲಿ ದಿನಸಿ ನಿರಾಕರಿಸಲಾಯಿತು. ಆರಂಭದಲ್ಲಿ ಆ ಊರಲ್ಲಿ ಇಂತಹ ಪರಿಸ್ಥಿತಿ ಇದೆ ಎಂಬುದನ್ನೇ ನಿರಾಕರಿಸಿದ ಅಧಿಕಾರಿಗಳು, ಕ್ರಮೇಣ ಮಾಧ್ಯಮಗಳಲ್ಲಿ ಈ ಕುರಿತು ಚರ್ಚೆ ಆರಂಭವಾದಾಗ ಮತ್ತು ದಲಿತ ಸಂಘಟನೆಗಳು ಪ್ರತಿಭಟನೆಗೆ ಇಳಿದಾಗ, ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಸುಧಾರಿಸಲು ಶ್ರಮಿಸಿದರು. (ಸೆಪ್ಟಂಬರ್ 2024)

► ಕಳೆದ ತಿಂಗಳು, ಪಶ್ಚಿಮ ಬಂಗಾಳದ ಗಿಧಾಗ್ರಾಮ್‌ನಲ್ಲಿ ಸ್ಥಳೀಯ ಶಿವ ಮಂದಿರಕ್ಕೆ ದಲಿತರ ಪ್ರವೇಶವು ಸಾಂಪ್ರದಾಯಿಕವಾಗಿ ನಿಷಿದ್ಧವಾಗಿತ್ತು. ಮಹಾಶಿವರಾತ್ರಿಯಂದು ಕೆಲವು ದಲಿತ ಕುಟುಂಬಗಳ ಸದಸ್ಯರು ಶಿವ ಮಂದಿರಕ್ಕೆ ಭೇಟಿ ನೀಡಲು ನಿರ್ಧರಿಸಿದರು. ಸುದ್ದಿ ತಿಳಿದಂತೆ ಊರೆಲ್ಲ ಉದ್ವಿಗ್ನತೆ ಉಂಟಾಯಿತು. ಭಾರೀ ಪ್ರತಿರೋಧ ಎದುರಾಯಿತು. ಕೊನೆಗೆ ಭಾರೀ ಪೊಲೀಸ್ ರಕ್ಷಣೆಯಲ್ಲಿ, ಕೆಲವು ದಲಿತರಿಗೆ ಮಾತ್ರ ಆ ಮಂದಿರವನ್ನು ಪ್ರವೇಶಿಸಲು ಸಾಧ್ಯವಾಯಿತು. (ಮಾರ್ಚ್ 2025)

► ಈ ರೀತಿ ದಲಿತರು ಬಹಳಷ್ಟು ಪ್ರಯಾಸಪಟ್ಟು ಇಂತಹ ಮಂದಿರಗಳನ್ನು ಪ್ರವೇಶಿಸಿದರೂ ಮುಂದೇ ನಾಗುತ್ತದೆ ಎಂಬುದನ್ನು ರಾಜಸ್ಥಾನದ ಅಲ್ವಾರ್‌ನಲ್ಲಿರುವ ರಾಮಮಂದಿರದವರು ತೋರಿಸಿಕೊಟ್ಟರು. ಅಲ್ಲಿ ಒಬ್ಬ ಸಾಮಾನ್ಯ ದಲಿತನಲ್ಲ, ದಲಿತ ಸಮಾಜದ ಓರ್ವ ಗೌರವಾನ್ವಿತ ನಾಯಕ, ಶಾಸಕ ಮತ್ತು ರಾಜಸ್ಥಾನ ವಿಧಾನಸಭೆಯಲ್ಲಿ ವಿಪಕ್ಷನಾಯಕರಾಗಿರುವ ಟೀಕಾ ರಾಮ್ ಜೂಲಿಯವರು ರಾಮನವಮಿಯಂದು ರಾಮಮಂದಿರಕ್ಕೆ ಭೇಟಿ ನೀಡಿದ್ದರು. ಅದರ ಬೆನ್ನಿಗೇ, ಬಿಜೆಪಿಯ ಮಾಜಿ ಶಾಸಕ ಜ್ಞಾನದೇವ್ ಆಹುಜಾ ಅವರು, ‘‘ಮಲಿನ ಜನರ ಪ್ರವೇಶದಿಂದಾಗಿ ಮಂದಿರವೇ ಮಲಿನವಾಗಿ ಬಿಟ್ಟಿದೆ’’ ಎಂದು ಘೋಷಿಸಿ, ಮಂದಿರವನ್ನು ಗಂಗಾಜಲದಿಂದ ತೊಳೆದು ಶುದ್ಧೀಕರಿಸುವ ಏರ್ಪಾಟು ಮಾಡಿದರು. (ಎಪ್ರಿಲ್ 2025)

► ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಮದುವೆಗಳ ಸಂದರ್ಭದಲ್ಲಿ ಮದುಮಗನನ್ನು ಕುದುರೆಯ ಮೇಲೆ ಅಥವಾ ಕುದುರೆ ಗಾಡಿಯಲ್ಲಿ ಕೂರಿಸಿ ಮೆರವಣಿಗೆ ನಡೆಸುವುದು ಸಾಮಾನ್ಯ ಸಂಪ್ರದಾಯ. ಆದರೆ, ಆ ರೀತಿ ಕುದುರೆಯ ಮೇಲೇರಿ ಮಂಟಪಕ್ಕೆ ಬರುವ ಹಕ್ಕಿರುವುದು ಮೇಲ್ಜಾತಿಯವರಿಗೆ ಮಾತ್ರ. ಯಾವ ದಲಿತ ಮದುಮಗನೂ ತನ್ನ ಮದುವೆಯ ಸಂದರ್ಭದಲ್ಲಿ ಕುದುರೆಯ ಸವಾರನಾಗಿ ಮಂಟಪಕ್ಕೆ ಬಂದ ದಾಖಲೆ ಇರಲಿಲ್ಲ. ಆ ಜಿಲ್ಲೆಯ ಗಣಿಯಾರಿ ಗ್ರಾಮದಲ್ಲಿ ದಿಲೀಪ್ ಅಹಿರ್ವಾರ್ ಎಂಬ ದಲಿತ ಯುವಕ ತನ್ನ ಮದುವೆಯ ವೇಳೆ ಒಂದು ಹೊಸ ದಾಖಲೆ ನಿರ್ಮಿಸಲು ಹೊರಟಿದ್ದ. ಆತ ತಾನು ಮೆರವಣಿಗೆಯಲ್ಲಿ ಕುದುರೆ ಸವಾರನಾಗಿ ಮಂಟಪಕ್ಕೆ ಬರುವುದಾಗಿ ಘೋಷಿಸಿದ. ದಿಲೀಪ್ ನ ನಿರ್ಧಾರದಿಂದಾಗಿ ಊರಲ್ಲಿ ಉದ್ವಿಗ್ನತೆ ತಲೆದೋರಿತು. ವಿವಿಧ ಬಗೆಯ ಬೆದರಿಕೆಗಳು ಬರತೊಡಗಿದವು. ಆತನ ಮನೆಯ ಮೇಲೆ ಕಲ್ಲೆಸೆತವೂ ನಡೆಯಿತು. ದಿಲೀಪ್ ಮತ್ತವನ ಬಂಧುಗಳು ಪೊಲೀಸರ ರಕ್ಷಣೆ ಕೋರಿದರು. ಕೊನೆಗೆ ಪೊಲೀಸರ ರಕ್ಷಣೆಯಲ್ಲಿ ದಿಲೀಪ್‌ನ ಮದುವೆ ಮೆರವಣಿಗೆ ಹೊರಡುತ್ತಿದ್ದಂತೆ, ಮೇಲ್ಜಾತಿಗೆ ಸೇರಿದ ನೂರಕ್ಕೂ ಹೆಚ್ಚು ಮಂದಿ ಇದ್ದ ಗೂಂಡಾಗಳ ಪಡೆಯೊಂದು ಆತನ ಮನೆಯ ಮೇಲೆ ದಾಳಿ ನಡೆಸಿ ಮನೆಗೆ ಮತ್ತು ವಾಹನಗಳಿಗೆ ಹಾನಿ ಮಾಡಿತು. ಮಾತ್ರವಲ್ಲ, ಮನೆಯ ಸದಸ್ಯರ ಮೇಲೂ ತೀವ್ರ ಹಲ್ಲೆ ನಡೆಸಿತು. ಈ ಮೂಲಕ ಅವರು, ಮುಂದೆಂದೂ ದಲಿತರು ಇಂತಹ ಸಾಹಸಕ್ಕೆ ಇಳಿಯದಂತೆ ನೋಡಿಕೊಂಡರು. (ಜನವರಿ 2022)

► ಕೆಲವೇ ವರ್ಷ ಹಿಂದೆ, ಉತ್ತರಾಖಂಡದ ಚಂಪಾವತ್ ಜಿಲ್ಲೆಯ ಸುಖಿದಂಗ್ ಪಟ್ಟಣದ ಸರಕಾರೀ ಶಿಕ್ಷಣ ಸಂಸ್ಥೆಯೊಂದರಲ್ಲಿ ವಿದ್ಯಾರ್ಥಿಗಳಿಗಾಗಿ ಮಧ್ಯಾಹ್ನದ ಊಟ ತಯಾರಿಸಲು ಸುನಿತಾ ದೇವಿ ಎಂಬ ಒಬ್ಬ ಮಹಿಳೆಯನ್ನು ನೇಮಿಸಲಾಗಿತ್ತು. ಆಕೆ ದಲಿತ ಜಾತಿಗೆ ಸೇರಿದವಳೆಂಬುದು ಗೊತ್ತಾದ ತಕ್ಷಣ ಶಾಲೆಯಲ್ಲಿದ್ದ, ಮೇಲ್ಜಾತಿಗೆ ಸೇರಿದ ವಿದ್ಯಾರ್ಥಿಗಳು ಮಧ್ಯಾಹ್ನದ ಊಟವನ್ನು ಬಹಿಷ್ಕರಿಸಿದರು. ದಲಿತ ಮಹಿಳೆ ತಯಾರಿಸಿದ ಊಟವನ್ನು ತಾವು ಮುಟ್ಟುವುದಿಲ್ಲ ಎಂಬುದು ಆ ವಿದ್ಯಾರ್ಥಿಗಳ ಸ್ಪಷ್ಟ ನಿಲುವಾಗಿತ್ತು. ಸುದ್ದಿ ಹಬ್ಬಿತು. ಪ್ರದೇಶದ ಶಿಕ್ಷಣಾಧಿಕಾರಿಗಳು ಮಧ್ಯಪ್ರವೇಶಿಸಿದರು. ಅವರು ಈ ಸಮಸ್ಯೆಯನ್ನು ಬಗೆಹರಿಸಿದ್ದು ಹೇಗೆ ಗೊತ್ತೇ? ಸುನಿತಾ ದೇವಿಯ ನಿಯುಕ್ತಿಯ ವೇಳೆ ಸೂಕ್ತ ನಿಯಮಗಳನ್ನು ಪಾಲಿಸಲಾಗಿರಲಿಲ್ಲ ಎಂಬ ಸಬೂಬು ನೀಡಿ, ಡಿಸೆಂಬರ್ 13ರಂದು ನಿಯುಕ್ತಳಾಗಿದ್ದ ಆ ಮಹಿಳೆಯನ್ನು ಅವರು ಡಿಸೆಂಬರ್ 21ರಂದು ಕೆಲಸದಿಂದ ವಜಾಗೊಳಿಸಿ ಬಿಟ್ಟರು. ‘ಸಮಸ್ಯೆ’ ಬಗೆಹರಿಯಿತು. (ಡಿಸೆಂಬರ್ 2021)

► ರಾಜಸ್ಥಾನದ ಜಾಲೋರ್ ಜಿಲ್ಲೆಯ ಸುರನ ಗ್ರಾಮದ ಸರಸ್ವತಿ ವಿದ್ಯಾಮಂದಿರದಲ್ಲಿ 3ನೇ ಕ್ಲಾಸಿನಲ್ಲಿ ಕಲಿಯುತ್ತಿದ್ದ 9ರ ಹರೆಯದ ದಲಿತ ವಿದ್ಯಾರ್ಥಿಯೊಬ್ಬ ಶಾಲೆಯಲ್ಲಿದ್ದ ನೀರಿನ ಮಡಿಕೆಯಿಂದ ನೀರು ಕುಡಿದಿದ್ದ. ಈ ಘೋರ ಅಪರಾಧಕ್ಕಾಗಿ ಆ ಶಾಲೆಯ ಮೇಲ್ಜಾತಿಗೆ ಸೇರಿದ ಚೈಲ್ ಸಿಂಗ್ ಎಂಬ ಶಿಕ್ಷಕ ಆ ಹುಡುಗನಿಗೆ ಎಷ್ಟು ತೀವ್ರವಾಗಿ ಥಳಿಸಿದನೆಂದರೆ, ಗಂಭೀರ ಗಾಯಗೊಂಡ ಹುಡುಗನನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು. ಚಿಕಿತ್ಸೆ ಫಲಿಸದೆ ಮರುದಿನ ಆ ಹುಡುಗ ಮೃತನಾದ. (ಆಗಸ್ಟ್ 2022)

► ರಾಜಸ್ಥಾನದ ಕೋಟ್ ಫುಟ್ಲಿ - ಬೆಹ್ರೂರ್ ಜಿಲ್ಲೆಯ ಪ್ರಾಗ್ಪುರ ಪಟ್ಟಣದ ಜವಾಹರ್ ನವೋದಯ ವಿದ್ಯಾಲಯದ 10ನೇ ಕ್ಲಾಸಿನ ದಲಿತ ವಿದ್ಯಾರ್ಥಿಯೊಬ್ಬ, ತನ್ನ ಶಾಲೆಯ ಇಬ್ಬರು ಶಿಕ್ಷಕರು ತನ್ನನ್ನು ಹಿಂಸಿಸುತ್ತಿದ್ದಾರೆ ಮತ್ತು ಜಾತಿಯ ಹೆಸರಲ್ಲಿ ತನ್ನನ್ನು ನಿಂದಿಸುತ್ತಾರೆ ಎಂದು ತನ್ನ ಮನೆಯವರ ಬಳಿ ಹಲವು ಬಾರಿ ದೂರಿಕೊಂಡಿದ್ದ. ಮನೆಯವರು ಆತನ ದೂರನ್ನು ಶಾಲೆಯ ಆಡಳಿತ ಮಂಡಳಿಯವರಿಗೆ ತಲುಪಿಸಿದ್ದರು. ಆದರೆ ಆಡಳಿತ ಮಂಡಳಿ ಯಾವುದೇ ಕ್ರಮಕೈಗೊಳ್ಳಲಿಲ್ಲ. ಕೆಲವು ದಿನಗಳ ಬಳಿಕ ಹುಡುಗ ನಾಪತ್ತೆಯಾದ. ಕೊನೆಗೆ ಅವನ ಶವ ಅದೇ ಶಾಲೆಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಯಿತು. ಪ್ರಸ್ತುತ ಶಿಕ್ಷಕರೇ ಆತನನ್ನು ಕೊಂದು ತಮ್ಮ ಅಪರಾಧವನ್ನು ಮುಚ್ಚಲಿಕ್ಕಾಗಿ ಈ ರೀತಿ ನೇಣಿಗೆ ಹಾಕಿದ್ದಾರೆ ಎಂದು ಆತನ ಮನೆಯವರು ಆರೋಪಿಸಿದ್ದಾರೆ. (ಆಗಸ್ಟ್ 2023)

► ತಮಿಳುನಾಡಿನ ಉದುಮಲೈ ಜಿಲ್ಲೆಯ ಮತಟ್ಟುಕುಲಂ ಪಟ್ಟಣಕ್ಕೆ ಸಮೀಪದ 2 ಗ್ರಾಮಗಳಲ್ಲಿ, ಅರುಂದತಿಯ್ಯರ್ ಎಂಬ ದಲಿತ ಜಾತಿಗೆ ಸೇರಿದವರೇ ಬಹುಸಂಖ್ಯಾತರು. ಅವರಲ್ಲಿ ಹೆಚ್ಚಿನವರು ಹೊಲ, ತೋಟಗಳಲ್ಲಿ ದಿನಗೂಲಿ ಕಾರ್ಮಿಕರು. ಅವರು ದಲಿತರೆಂಬ ಕಾರಣಕ್ಕಾಗಿ ಅವರು ಚಪ್ಪಲಿ ಧರಿಸಿ ಬೀದಿಗೆ ಬರಬಾರದು ಎಂಬ ನಿರ್ಬಂಧವನ್ನು ಊರಿನ ಮೇಲ್ಜಾತಿಯವರು ಅವರ ಮೇಲೆ ಹೇರಿದ್ದರು. ಅಲ್ಲಿಯ ಹಲವು ಹೋಟೆಲುಗಳಲ್ಲಿ ಮೇಲ್ಜಾತಿಯವರಿಗೆ ಮತ್ತು ದಲಿತರಿಗೆ ಪ್ರತ್ಯೇಕ ಪಾತ್ರೆಗಳು ಮೀಸಲಾಗಿದ್ದವು. ದಲಿತರಿಗೆ ಚಹಾವನ್ನು ಕಾಗದದ ಕಪ್‌ಗಳಲ್ಲಿ ಮಾತ್ರ ನೀಡಲಾಗುತ್ತಿತ್ತು. ಈ ನೀತಿಯನ್ನು ಕೆಲವು ಯುವಕರು ವಿರೋಧಿಸಿದಾಗ ಊರಲ್ಲಿ ಉದ್ವಿಗ್ನತೆ ತಲೆದೋರಿತು. ವಿರೋಧ ಪ್ರಕಟಿಸಿದವರು ಮೇಲ್ಜಾತಿಯವರಿಂದ ಬೆದರಿಕೆ ಮಾತ್ರವಲ್ಲ ಹಲ್ಲೆಗಳನ್ನೂ ಎದುರಿಸಬೇಕಾಗಿ ಬಂತು. ಈ ವಿಷಯ ಊರಹೊರಗಿನವರಿಗೆ ತಲುಪಿದಾಗ ದ್ರಾವಿಡ ವಿದ್ಯುತಲೈ ಕಳಗಂ ಮತ್ತು ತಮಿಳ್ ಪುಳಿಗೈ ಕಚ್ಚಿ ಎಂಬ ಎರಡು ಸಂಘಟನೆಗಳು ಪರಿಸ್ಥಿತಿಯ ಅಧ್ಯಯನಕ್ಕಾಗಿ ಪ್ರಸ್ತುತ ಗ್ರಾಮಗಳಿಗೆ ತಮ್ಮ ನಿಯೋಗವೊಂದನ್ನು ಕಳಿಸಿದರು. ಈ ನಿಯೋಗದ ಮೂಲಕ ಆ 2 ಗ್ರಾಮಗಳ ದಲಿತರ ವ್ಯಥೆ ಮಾಧ್ಯಮಗಳ ಗಮನಕ್ಕೆ ಬಂತು. ಮಾನವರ ಮಾನವೀಯತೆಯನ್ನು ಎತ್ತಿಹಿಡಿದು ಪೌರೋಹಿತ್ಯ ಮತ್ತು ಜಾತೀಯತೆಯ ವಿರುದ್ಧ ಯುದ್ಧ ಸಾರಿದ್ದ ಪೆರಿಯಾರ್ ಅವರ ನಾಡಲ್ಲಿ ಮತ್ತು ಅವರ ತತ್ವಾದರ್ಶವನ್ನು ಪ್ರತಿನಿಧಿಸುತ್ತಿದ್ದೇವೆ ಎಂದು ಹೇಳಿಕೊಳ್ಳುವ ಪಕ್ಷವೊಂದು ಅಧಿಕಾರದಲ್ಲಿರುವ ರಾಜ್ಯದಲ್ಲಿ ಇಂತಹ ಸ್ಥಿತಿ ಇದ್ದರೆ, ಇತರೆಡೆಗಳ ಅವಸ್ಥೆ ಏನು? (ಡಿಸೆಂಬರ್ 2023)

► ಅದೇ ತಮಿಳುನಾಡಿನಲ್ಲಿ ಎರಡು ವರ್ಷಗಳ ಹಿಂದೆ ಅಲ್ಲಿನ ಮುಖ್ಯಮಂತ್ರಿಗಳು ರಾಜ್ಯದ ಪ್ರಾಥಮಿಕ ಶಾಲೆಗಳ 15.75 ಲಕ್ಷ ಮಕ್ಕಳಿಗೆ ಉಚಿತವಾಗಿ ಬೆಳಗ್ಗಿನ ಉಪಾಹಾರ ಒದಗಿಸುವ ಯೋಜನೆಯನ್ನು ಉದ್ಘಾಟಿಸಿದರು. ಮುಂದಿನ ತಿಂಗಳಲ್ಲಿ ಕರೂರು ಜಿಲ್ಲೆಯ ಶಾಲೆಯೊಂದರಲ್ಲಿ 15 ಮಂದಿ ವಿದ್ಯಾರ್ಥಿಗಳು ಉಪಾಹಾರವನ್ನು ಬಹಿಷ್ಕರಿಸತೊಡಗಿದರು. ಉಪಾಹಾರ ತಯಾರಿಸುತ್ತಿರುವುದು ಒಬ್ಬ ದಲಿತ ಮಹಿಳೆ ಎಂಬುದೇ ಅವರ ಬಹಿಷ್ಕಾರಕ್ಕೆ ಕಾರಣವಾಗಿತ್ತು. ವಿಷಯ ಜಿಲ್ಲಾಧಿಕಾರಿಗಳ ಗಮನಕ್ಕೂ ಬಂತು. ಅವರು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಪೋಷಕರನ್ನು ಕರೆಸಿ ಮಾತನಾಡಿ ಅವರ ಮನವೊಲಿಸಲು ಪ್ರಯತ್ನಿಸಿದರು. ಇದೇ ನೀತಿಯನ್ನು ಮುಂದುವರಿಸಿದರೆ ತಪ್ಪಿತಸ್ಥರ ವಿರುದ್ಧ ಜಾತಿ ದೌರ್ಜನ್ಯ ಸಂಬಂಧಿ ಕೇಸು ದಾಖಲಿಸುವುದಾಗಿ ಎಚ್ಚರಿಕೆಯನ್ನೂ ನೀಡಿದರು. ಇಷ್ಟಾಗಿಯೂ 15 ಬಹಿಷ್ಕಾರಿಗಳ ಪೈಕಿ ಇಬ್ಬರು ಮಾತ್ರ ಉಪಾಹಾರ ಸ್ವೀಕರಿಸಲು ಸಿದ್ಧರಾದರು. ಇತರ ಮಕ್ಕಳ ಹೆತ್ತವರು ತಾವು ತಮ್ಮ ಮಕ್ಕಳಿಗೆ ಬೇರೆ ಶಾಲೆಗಳಲ್ಲಿ ದಾಖಲಾತಿ ಕೊಡಿಸುವುದಾಗಿ ಘೋಷಿಸಿದರು. (ಸೆಪ್ಟಂಬರ್ 2023)

► ತಮಿಳುನಾಡಿನ ತಿರುನಲ್ವೇಲಿ ಸಮೀಪದ ತಾಮಿರಬರಣಿ ನದಿದಡದಲ್ಲಿ ಇಬ್ಬರು ಸ್ಥಳೀಯ ದಲಿತರು ಸ್ನಾನ ಮಾಡಲು ಹೊರಟಿದ್ದಾಗ, ಅವರಿಗೆ ಅಲ್ಲಿ ಸ್ನಾನ ಮಾಡುವ ಹಕ್ಕಿಲ್ಲವೆಂದು ವಾದಿಸಿದ ಗುಂಪೊಂದು ಅವರ ಮೇಲೆ ತೀವ್ರ ಸ್ವರೂಪದ ಹಲ್ಲೆ ನಡೆಸಿ, ಅವರ ಮೇಲೆ ಮೂತ್ರ ವಿಸರ್ಜಿಸಿ, ಅವರಿಗೆ ವಿವಿಧ ಬಗೆಯ ಚಿತ್ರಹಿಂಸೆ ನೀಡಿ, ಅವರ ಬಳಿ ಇದ್ದ ನಗದು, ಮೊಬೈಲ್ ಇತ್ಯಾದಿಗಳನ್ನು ದೋಚಿತ್ತು. ಗಂಭೀರ ಗಾಯಗೊಂಡ ಯುವಕರು ಆಸ್ಪತ್ರೆಯಲ್ಲಿ ದಾಖಲಾಗಿ ಹಲವು ದಿನ ಚಿಕಿತ್ಸೆ ಪಡೆಯಬೇಕಾಯಿತು. (ನವೆಂಬರ್ 2023)

► ಕೆಲವು ಸಮಯದ ಹಿಂದೆ ಗುಜರಾತಿನ ಬಾವಿಲಾ ತಾಲೂಕಿನ ಕವಿತಾ ಗ್ರಾಮದಲ್ಲಿ ಕೆಳಜಾತಿಗೆ ಸೇರಿದ್ದ ಸಂಜಯ್ ಮಕ್ವಾನಾ ಎಂಬ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿ, ಅವನನ್ನು ಇರಿದು ಕೊಲ್ಲುವ ಶ್ರಮ ನಡೆಯಿತು. ಇರಿತದಿಂದ ಗಂಭೀರ ಗಾಯಗೊಂಡ ಮಕ್ವಾನಾ, ಆಸ್ಪತ್ರೆಯಲ್ಲಿ ಪೊಲೀಸರಿಗೆ ತಿಳಿಸಿದ ಪ್ರಕಾರ ಆತ ಮೀಸೆ ಬೆಳೆಸಿಕೊಂಡ ಬಗ್ಗೆ ದರ್ಬಾರ್ ಎಂಬ ಸ್ಥಳೀಯ ಮೇಲ್ಜಾತಿಯ ಕೆಲವರು ಆಕ್ಷೇಪ ಪ್ರಕಟಿಸಿದ್ದರು. ಆತ ಬರ್ಮುಡಾ ಶಾರ್ಟ್ಸ್ ಧರಿಸಿ ಕಾಣಿಸಿಕೊಂಡಾಗ ಮತ್ತೆ ಆಕ್ಷೇಪ ಬಂತು. ದರ್ಬಾರ್ ಜಾತಿಯ ಕೆಲವರು, ನೀನು ಕೆಳಜಾತಿಯವನಾದ್ದರಿಂದ ಮೀಸೆ ಬೆಳೆಸಿಕೊಳ್ಳಬಾರದು ಮತ್ತು ಶಾರ್ಟ್ಸ್ ಧರಿಸಿ ಕಾಣಿಸಿಕೊಳ್ಳಬಾರದು ಎಂದು ಅವನಿಗೆ ಎಚ್ಚರಿಕೆ ನೀಡಿದ್ದರು, ಬೆದರಿಕೆಯನ್ನೂ ಒಡ್ಡಿದ್ದರು. ಆತ ಅವರನ್ನು ಕಡೆಗಣಿಸಿದಾಗ ದರ್ಬಾರ್ ಜಾತಿಯ ಏಳು ಮಂದಿಯ ತಂಡವೊಂದು ಆತನ ಮೇಲೆ ಗಂಭೀರ ಹಲ್ಲೆ ನಡೆಸಿತು. ಆತನ ತಂದೆ ವಿನು ಮಕ್ವಾನಾ ಆತನ ರಕ್ಷಣೆಗೆ ಬಂದಾಗ ಕಿಡಿಗೇಡಿಗಳು ಹರಿತವಾದ ಆಯುಧಗಳಿಂದ ಆತನ ಮೇಲೂ ಹಲ್ಲೆ ನಡೆಸಿ ಆತನನ್ನೂ ಗಾಯಗೊಳಿಸಿದರು. (ಆಗಸ್ಟ್ 2018)

► ಈ ಹಿಂದೆ ಇದೇ ಗುಜರಾತ್ ರಾಜ್ಯದ ಭದ್ರನ್ಯ ಗ್ರಾಮದಲ್ಲಿ ನವರಾತ್ರಿಯ ಸಂದರ್ಭದಲ್ಲಿ ದಲಿತ ಯುವಕರ ತಂಡವೊಂದು ಗರ್ಬಾ ನೃತ್ಯ ನೋಡಲು ಬಂದರೆಂಬ ಕಾರಣಕ್ಕಾಗಿ ಪಟೇಲ್ ಎಂಬ ಮೇಲ್ಜಾತಿಗೆ ಸೇರಿದ ಕೆಲವು ಕಿಡಿಗೇಡಿಗಳು ಅವರ ಮೇಲೆ ಹಲ್ಲೆ ನಡೆಸಿ ಅವರಲ್ಲೊಬ್ಬನ ಹತ್ಯೆಯ ದುರ್ಘಟನೆ ನಡೆದಿತ್ತು. ಜಯೇಶ್ ಸೋಲಂಕಿ ಎಂಬ 20ರ ಹರೆಯದ ದಲಿತ ಯುವಕ ಬೆಳಗ್ಗೆ 4 ಗಂಟೆಗೆ ಸ್ಥಳೀಯ ದೇವಸ್ಥಾನದ ಬಯಲಿನಲ್ಲಿ ನಡೆಯುವ ಗರ್ಬಾ ನೃತ್ಯವನ್ನು ವೀಕ್ಷಿಸಲು ತನ್ನ ಕೆಲವು ಮಿತ್ರರ ಜೊತೆ ತೆರಳಿದ್ದ. ಮುಂದೆ ಆತನ ಮಿತ್ರರು ಪೊಲೀಸರಿಗೆ ತಿಳಿಸಿದ ಪ್ರಕಾರ, ಅವರು ಮೈದಾನದ ಒಂದು ಮೂಲೆಯಲ್ಲಿ ನಿಂತಿದ್ದಾಗ ಸಂಜಯ್ ಪಟೇಲ್ ಎಂಬಾತ ಅವರ ಬಳಿಗೆ ಬಂದು ‘‘ನೀವು ಇಲ್ಲೇನು ಮಾಡುತ್ತಿದ್ದೀರಿ?’’ ಎಂದು ಪ್ರಶ್ನಿಸಿದ. ‘‘ನಾವು ಗರ್ಬಾ ನೋಡಲು ಬಂದಿದ್ದೇವೆ’’ ಎಂದಾಗ ‘‘ನೀವು ‘ಡೇರಾ’ಗಳು (ಡೇರಾ ಎಂಬುದು ಅಲ್ಲಿ ದಲಿತರನ್ನು ನಿಂದಿಸಲು ಬಳಸುವ ಪದ). ಗರ್ಬಾ ಇರುವುದು ನಿಮ್ಮಂಥವರಿಗಲ್ಲ. ಈಗಲೇ ಇಲ್ಲಿಂದ ತೊಲಗಿ’’ ಎಂದು ನಿಂದಿಸುತ್ತಾ ಹೊರಟು ಹೋದ. ಆ ಬಳಿಕ ಆತ ತನ್ನ ಏಳು ಮಂದಿ ಮಿತ್ರರ ಜೊತೆ ಮರಳಿ ಬಂದ. ಅವನ ತಂಡ ಜಯೇಶ್ ಮತ್ತು ಆತನ ಮಿತ್ರರ ಮೇಲೆ ಹಲ್ಲೆ ಆರಂಭಿಸಿತು. ಜಯೇಶ್‌ನ ಎಲ್ಲ ಮಿತ್ರರೂ ಗಾಯಗೊಂಡಿದ್ದರು. ಜಯೇಶ್ ತೀವ್ರ ಗಾಯಗೊಂಡು ಅಲ್ಲೇ ಕುಸಿದು ಬಿದ್ದಿದ್ದ. ಮುಂದೆ ಆಸ್ಪತ್ರೆಯಲ್ಲಿ ಆತನನ್ನು ಮೃತನೆಂದು ಘೋಷಿಸಲಾಯಿತು. (ಅಕ್ಟೊಬರ್ 2017)

► ಕಳೆದ ತಿಂಗಳಷ್ಟೇ ಉತ್ತರ ಪ್ರದೇಶದ ಮೀರತ್ ಸಮೀಪ ಕಾಲಿಂದಿ ಗ್ರಾಮದಲ್ಲಿ ದಲಿತರು ಮದುವೆ ಮೆರವಣಿಗೆಯೊಂದರಲ್ಲಿ ಹೊರಟಿದ್ದಾಗ ಅವರ ವಾಹನದಿಂದ ಸಂಗೀತದ ಶಬ್ದ ಬಂತೆಂಬ ಕಾರಣಕ್ಕೆ ಊರಿನ ಮೇಲ್ಜಾತಿಗೆ ಸೇರಿದವರ ಪುಂಡರ ಪಡೆಯೊಂದು ಮೆರವಣಿಗೆಯಲ್ಲಿದ್ದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹಲವರನ್ನು ಗಾಯಗೊಳಿಸಿತ್ತು. (ಮಾರ್ಚ್ 2025)

► ಇದಕ್ಕಿಂತ ಮುನ್ನ ಅದೇ ಉತ್ತರ ಪ್ರದೇಶದ ಬುಲಂದ್ ಶಹರ್‌ನಲ್ಲಿ ದಲಿತರ ಮದುವೆ ಮೆರವಣಿಗೆಯ ಮೇಲೆ ಮೇಲ್ಜಾತಿಯ ಸಶಸ್ತ್ರ ಗೂಂಡಾ ಪಡೆಗಳು ಹಿಂಸಾತ್ಮಕ ದಾಳಿ ನಡೆಸಿ ಮದುಮಗನನ್ನು ಕುದುರೆಯಿಂದ ಎಳೆದು ಕೆಳಹಾಕಿ, ಇತರರ ಮೇಲೆ ಹಲ್ಲೆ ನಡೆಸಿ ಹಲವರನ್ನು ಗಾಯಗೊಳಿಸಿದ್ದವು. ಮುಂದೆಂದೂ ನಮ್ಮೂರಲ್ಲಿ ನಿಮ್ಮ ಮೆರವಣಿಗೆ ನಡೆಯಬಾರದು ಎಂಬ ಎಚ್ಚರಿಕೆ ನೀಡಿ ಮೆರವಣಿಗೆಯಲ್ಲಿದ್ದವರನ್ನು ಓಡಿಸಿದ್ದರು. ಹಲ್ಲೆಯಲ್ಲಿ ಆರು ಮಂದಿಗೆ ಗಂಭೀರ ಗಾಯಗಳಾಗಿದ್ದವು. (ಫೆಬ್ರವರಿ 2025)

► ಇತ್ತೀಚೆಗೆ ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಮೇಲಪಿಡವೂರು ಎಂಬ ಗ್ರಾಮದಲ್ಲಿ ಅಯ್ಯಸಾಮಿ ಎಂಬ 20ರ ಹರೆಯದ ದಲಿತ ತರುಣನೊಬ್ಬ ತನ್ನ ಖಾಸಗಿ ಬುಲೆಟ್ ಬೈಕ್‌ನಲ್ಲಿ ತನ್ನ ಊರಲ್ಲಿ ಸಂಚರಿಸುತ್ತಿದ್ದಾಗ ಮೇಲ್ಜಾತಿಯವರ ಕಡೆಯಿಂದ ಅದಕ್ಕೆ ಆಕ್ಷೇಪ ವ್ಯಕ್ತವಾಯಿತು. ಬುಲೆಟ್‌ನಲ್ಲಿ ಸಂಚರಿಸುವ ಅಧಿಕಾರ ಕೆಳಜಾತಿಯವರಿಗಿಲ್ಲ ಎಂಬುದು ಮೇಲ್ಜಾತಿಯವರ ಆಕ್ಷೇಪವಾಗಿತ್ತು. ಅಯ್ಯಸಾಮಿ ಬುಲೆಟ್‌ನಲ್ಲಿ ಹೋಗುತ್ತಿದ್ದಾಗಲೇ ತೇವರ್ ಜಾತಿಯ ಕೆಲವರು ಆತನ ಮೇಲೆ ಹಲ್ಲೆ ನಡೆಸಿ ಆತನನ್ನು ಗಂಭೀರವಾಗಿ ಗಾಯಗೊಳಿಸಿದರು. (ಫೆಬ್ರವರಿ 2025)

► ಇದೇ ವರ್ಷ ಜನವರಿಯಲ್ಲಿ, ನಮ್ಮ ರಾಜ್ಯದ ಬೀದರ್ ಜಿಲ್ಲೆಯ ಕುಶನೂರಿನಲ್ಲಿ 18ರ ಹರೆಯದ ಸುಮಿತ್ ಕುಮಾರ್ ಎಂಬ ದಲಿತ ತರುಣನೊಬ್ಬ ಮೇಲ್ಜಾತಿಯ ತರುಣಿಯೊಬ್ಬಳ ಜೊತೆ ಪ್ರೇಮ ಸಂಬಂಧ ಇಟ್ಟುಕೊಂಡಿದ್ದನೆಂದು ಆರೋಪಿಸಿ ತರುಣಿಯ ಬಂಧುಗಳು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು. ತೀವ್ರ ಜಖಂ ಗೊಂಡಿದ್ದ ತರುಣ, ಚಿಕಿತ್ಸೆ ಫಲಿಸದೆ ಎರಡು ದಿನಗಳ ಬಳಿಕ ಆಸ್ಪತ್ರೆಯಲ್ಲಿ ಮೃತನಾದ. (ಜನವರಿ 2025)

► ಇದೇ ವರ್ಷ ಜನವರಿ ತಿಂಗಳಲ್ಲಿ, ಮತ್ತೆ ನಮ್ಮದೇ ರಾಜ್ಯದ ವಿಜಯಪುರ ಹೂರವಲಯದ ಗಾಂಧಿನಗರದ ಸ್ಟಾರ್ ಚೌಕ್ ಬಳಿ ಇರುವ ಇಟ್ಟಿಗೆ ಭಟ್ಟಿಯಲ್ಲಿ ನಡೆದ ಒಂದು ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಭಟ್ಟಿ ಮಾಲಕ ಖೇಮು ರಾಠೋಡ್ ಮತ್ತವನ ಸಹವರ್ತಿಗಳು ಮೂವರು ಕಾರ್ಮಿಕರಿಗೆ, ಪೈಪ್‌ಗಳಿಂದ ಬಹಳ ಕ್ರೂರವಾಗಿ ಸತತ ಹೊಡೆಯುತ್ತಿರುವ ಮತ್ತು ಆ ಕಾರ್ಮಿಕರು ಕ್ಷಮೆಗಾಗಿ ಅಂಗಲಾಚುತ್ತಿರುವ ದೃಶ್ಯವನ್ನು ವೀಡಿಯೊದಲ್ಲಿ ದಾಖಲಿಸಲಾಗಿತ್ತು. ಮುಂದೆ ತಿಳಿದುಬಂದಂತೆ, ಆ ಮೂರು ಮಂದಿ ಬಾಗಲಕೋಟೆಯ ಜಮಖಂಡಿ ತಾಲೂಕಿನ ದಲಿತ ಕಾರ್ಮಿಕರಾಗಿದ್ದರು. ಭಟ್ಟಿ ಮಾಲಕರಿಂದ ಮುಂಗಡ ಹಣ ಪಡೆದಿದ್ದ ಆ ಕಾರ್ಮಿಕರು ಹಬ್ಬಕ್ಕೆಂದು ತಮ್ಮ ಊರಿಗೆ ಹೋದವರು ಬರುವಾಗ ತಡವಾಯಿತು ಎಂಬುದೇ ಹಲ್ಲೆಗೆ ಕಾರಣವಾಗಿತ್ತು. ಪ್ರಸ್ತುತ ಮೂರೂ ಮಂದಿ ದಲಿತ ಸಮುದಾಯದವರಾದ್ದರಿಂದ ಧಣಿಗಳು ಅವರ ಮೇಲೆ ಈ ಬಗೆಯ ಅಮಾನುಷ ಹಲ್ಲೆ ನಡೆಸುವ ಧೈರ್ಯ ತೋರಿದ್ದರು. ಹಲ್ಲೆಯಲ್ಲಿ ತೀವ್ರ ಗಾಯಗೊಂಡಿದ್ದ ಕಾರ್ಮಿಕರು ಹಲವು ದಿನ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯಬೇಕಾಯಿತು. (ಜನವರಿ 2025)

►ನಮ್ಮದೇ ಯಾದಗಿರಿ ಜಿಲ್ಲೆಯಲ್ಲಿ ಇತೀಚೆಗೆ ಸರಕಾರಿ ಶಾಲೆಯೊಂದರ ಮುಖ್ಯ ಶಿಕ್ಷಕಿ ನಿರ್ಮಲಾ ಡಾಂಗೆ, ಶಾಲೆಯಲ್ಲಿ ಗಣರಾಜ್ಯೋತ್ಸವ ದಿನದ ಸಮಾರಂಭಕ್ಕೆ ನಗರದ ದಲಿತ ಸಮುದಾಯಕ್ಕೆ ಸೇರಿದ ಮಹನೀಯರೊಬ್ಬರನ್ನು ಅತಿಥಿಯಾಗಿ ಆಮಂತ್ರಿಸಿದ್ದರು. ಈ ತಪ್ಪಿಗಾಗಿ ಡಾಂಗೆಯವರು ಎಲ್ಲ ಬಗೆಯ ಟೀಕೆ, ನಿಂದನೆಗಳನ್ನೂ ಮಾತ್ರವಲ್ಲ, ಕೊಲೆ ಬೆದರಿಕೆಯನ್ನೂ ಎದುರಿಸಬೇಕಾಯಿತು. (ಫೆಬ್ರವರಿ 2025)

► ಉತ್ತರ ಪ್ರದೇಶದ ಮೇನ್‌ಪುರಿ ಜಿಲ್ಲೆಯ ಹರಿಪುರ್ ಗ್ರಾಮದಲ್ಲಿ 11ನೇ ತರಗತಿಯ ವಿದ್ಯಾರ್ಥಿಯೊಬ್ಬ ಶಾಲೆಯಲ್ಲಿ ತನಗೆ ಬಾಯಾರಿದಾಗ, ತನ್ನ ಮುಂದಿನ ಮೇಜಿನ ಮೇಲಿದ್ದ ಬಾಟಲಿಯಿಂದ ಸ್ವಲ್ಪ ನೀರು ಕುಡಿದಿದ್ದ. ಇದನ್ನು ಕಂಡ ಶಾಲೆಯ ಶಿಕ್ಷಕ ಮಂಗಲ್ ಸಿಂಗ್ ಧಾವಿಸಿ ಬಂದು, ‘‘ನಿನಗೆ ನನ್ನ ನೀರಿನ ಬಾಟಲಿ ಮುಟ್ಟುವ ಧೈರ್ಯ ಎಲ್ಲಿಂದ ಬಂತು? ನೀನು ಮುಟ್ಟಿದ ಬಳಿಕ ಆ ಬಾಟಲಿಯೇ ಮಲಿನವಾಗಿ ಬಿಟ್ಟಿತು. ಇನ್ನು ನಾನು ಆ ನೀರನ್ನು ಬಳಸುವಂತಿಲ್ಲ’’ ಎಂದು ಗದರಿಸಿದ್ದಾನೆ. ಸಾಲದ್ದಕ್ಕೆ ಕ್ಲಾಸು ಮುಗಿದ ಬಳಿಕ ಆಹುಡುಗನನ್ನು ಒಂದು ಕೊಠಡಿಗೆ ಕೊಂಡುಹೋಗಿ ಆತನಿಗೆ ತೀವ್ರವಾಗಿ ಥಳಿಸಿದ್ದಾನೆ. ಗಾಯಗೊಂಡ ವಿದ್ಯಾರ್ಥಿ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದಾಗ ಆತನಿಗೆ ಅಲ್ಲಿ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಕೊನೆಗೆ ವಿಷಯವು ಮೇಲಧಿಕಾರಿಗಳ ಗಮನಕ್ಕೆ ಬಂದ ಬಳಿಕ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. (ಎಪ್ರಿಲ್ 2025)

► ಕಳೆದ ವರ್ಷ ನಮ್ಮ ದೊಡ್ಡಬಳ್ಳಾಪುರ ಜಿಲ್ಲೆಯ ಹದನೂರು ಗ್ರಾಮದಲ್ಲಿ ಕೆಲವು ಕ್ಷೌರದಂಗಡಿಗಳಲ್ಲಿ ದಲಿತರಿಗೆ ಕ್ಷೌರ ನಿರಾಕರಿಸಲಾಗಿತ್ತು. ಇದರ ವಿರುದ್ಧ ದಲಿತ ಸಂಘಟನೆಗಳು ಪ್ರತಿಭಟಿಸಿ, ವಿಷಯವು ಮಾಧ್ಯಮಗಳಲ್ಲಿ ವರದಿಯಾದಾಗ ಅಧಿಕಾರಿಗಳು ಪರಿಸ್ಥಿತಿಯನ್ನು ಸರಿಪಡಿಸುವ ಶ್ರಮ ಆರಂಭಿಸಿದರು. (ಫೆಬ್ರವರಿ 2024)

ಈ ಮುನ್ನ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಲ್ಲಾರೆ ಗ್ರಾಮದಲ್ಲಿ ಮಲ್ಲಿಕಾರ್ಜುನ ಶೆಟ್ಟಿ ಎಂಬವರು ತಮ್ಮ ಸೆಲೂನ್‌ನಲ್ಲಿ ದಲಿತರಿಗೆ ಕ್ಷೌರ ಸೇವೆ ಒದಗಿಸಿದ್ದಕ್ಕಾಗಿ ಊರವರ ಕೆಂಗಣ್ಣಿಗೆ ತುತ್ತಾಗಬೇಕಾಗಿ ಬಂದಿತ್ತು. ದಲಿತರಿಗೆ ಕ್ಷೌರ ಸೇವೆ ಒದಗಿಸಬಾರದೆಂಬ ಹಳೆಯ ಸಂಪ್ರದಾಯವನ್ನು ಮುರಿದುದಕ್ಕಾಗಿ ಊರವರು ಶೆಟ್ಟಿಯವರ ಮೇಲೆ ಸಾಮಾಜಿಕ ಬಹಿಷ್ಕಾರ ಹೇರಿದರು. (ನವೆಂಬರ್ 2020)

► ಕಳೆದ ವರ್ಷ ಉತ್ತರಾಖಂಡ ಚಮೋಲಿ ಜಿಲ್ಲೆಯ ಸುಭಾಯ್ ಎಂಬ ಗ್ರಾಮದಲ್ಲಿ ಅಲ್ಲಿಯ ದಲಿತ ಕುಟುಂಬಗಳ ಮೇಲೆ ಗ್ರಾಮಸ್ಥರು ಕಠಿಣ ಸ್ವರೂಪದ ಸಾಮಾಜಿಕ ಬಹಿಷ್ಕಾರ ಹಾಕಿದ ಘಟನೆ ನಡೆಯಿತು. ಅಲ್ಲಿಯ ದೇವಸ್ಥಾನದ ಹೊರಗೆ ತಮ್ಮಟೆ ಬಾರಿಸುವ ಹೊಣೆ ದಲಿತರದ್ದಾಗಿತ್ತು. ಒಂದು ಉತ್ಸವದ ದಿನ, ತಮ್ಮಟೆ ಬಾರಿಸಬೇಕಾಗಿದ್ದ ಪುಷ್ಕರ್ ಲಾಲ್ ಎಂಬ ದಲಿತ ಕಾರ್ಮಿಕ ಅನಾರೋಗ್ಯದ ಕಾರಣ ಕರ್ತವ್ಯಕ್ಕೆ ಹಾಜರಾಗಲಿಲ್ಲ. ಇದಕ್ಕೆ ಪ್ರತೀಕಾರವಾಗಿ ಅವನ ಮೇಲೆ ಮಾತ್ರವಲ್ಲ ಗ್ರಾಮದಲ್ಲಿದ್ದ ಎಲ್ಲ ದಲಿತ ಕುಟುಂಬಗಳ ಮೇಲೆ ಬಹಿಷ್ಕಾರ ಹೇರಲಾಯಿತು. ಅವರು ಊರಿನ ನೀರನ್ನು ಬಳಸಬಾರದು, ಕಾಡನ್ನು ಬಳಸಬಾರದು, ಊರಲ್ಲಿ ವಾಹನಗಳಲ್ಲಿ ತಿರುಗಾಡಬಾರದು, ಊರಿನ ಅಂಗಡಿಗಳಿಂದ ಏನನ್ನೂ ಖರೀದಿಸಬಾರದು, ಮದಿರಗಳನ್ನು ಸಂದರ್ಶಿಸಬಾರದು- ಇವೆಲ್ಲಾ ಬಹಿಷ್ಕಾರದ ಭಾಗಗಳಾಗಿದ್ದವು. (ಜುಲೈ 2024)

ಇವೆಲ್ಲಾ ಒಂದು ದಟ್ಟ ಅರಣ್ಯದಿಂದ ಹೆಕ್ಕಿದ ಕೇವಲ ಬೆರಳೆಣಿಕೆಯ ಕೆಲವು ಪ್ರಾತಿನಿಧಿಕ ಕಪ್ಪು ಎಲೆಗಳು ಮಾತ್ರ. ನಮಗೆ ನಿತ್ಯವೂ ಹೊಸಹೊಸ ರೂಪದಲ್ಲಿ ಹಿಂದೂ-ಮುಸ್ಲಿಮ್ ಎಂಬ ಅಮಲನ್ನು ಉಣಿಸುವವರ ಕಪಿಮುಷ್ಟಿಯಿಂದ ನಾವು ತಪ್ಪಿಸಿಕೊಂಡ ದಿನ ನಮಗೆ ಪ್ರಸ್ತುತ ಸನ್ನಿವೇಶದ ಬಗ್ಗೆ ಗಮನ ಹರಿಸಿ, ನಾಚಿ ತಲೆ ತಗ್ಗಿಸಿಕೊಳ್ಳಲಿಕ್ಕಾದರೂ ಪುರುಸೊತ್ತಾಗಬಹುದು.

Writer - ವಾರ್ತಾಭಾರತಿ

contributor

Editor - Ismail

contributor

Byline - ಶಂಬೂಕ, ಪಂಪ್‌ವೆಲ್

contributor

Similar News

ಹೊಣೆಗಾರಿಕೆ