ಎನ್ ಡಿಎ ಸರಕಾರವೋ? ಮೋದಿ 3.0 ಸರಕಾರವೋ?
ಭಾಗ - 2
ಆರೆಸ್ಸೆಸ್ ನ ವಾತ್ಸಲ್ಯದ ವಿರೋಧ
ಇನ್ನು ಆರೆಸ್ಸೆಸ್ ಗೂ ಬಿಜೆಪಿಗೂ ಇರಬಹುದಾದ ಸಂಘರ್ಷ. ಅದಕ್ಕೆ ಮೋದಿಯ ಪ್ರಚಾರ ಮತ್ತು ಮಣಿಪುರದ ಬಗ್ಗೆ ಮೊನ್ನೆ ಭಾಗವತ್ ಅವರು ಪರೋಕ್ಷವಾಗಿ ಮಾಡಿರುವ ಟೀಕೆ ಒಂದು ಉದಾಹರಣೆ.
ಆದರೆ ಭಾಗವತರೂ ಈ ಆಕ್ಷೇಪಣೆಗಳನ್ನು ಚುನಾವಣೆಯ ಸಂದರ್ಭದಲ್ಲಿ ಏಕೆ ಎತ್ತಲಿಲ್ಲ.?
ಅಲ್ಲದೆ ಮಣಿಪುರದಲ್ಲಿ ಅರಾಜಕ ಹಿಂಸಾಚಾರ ಸೃಷ್ಟಿ ಮಾಡುತ್ತಿರುವುದು ಆರೆಸ್ಸೆಸ್ನ ಗರಡಿಯಲ್ಲಿ ತಯಾರಾದ ಆರಂಭಾಯ್ ತೇಂಗೋಲ್ ಮತ್ತು ಮೈತೈ ಲೀಪುನ್ ಸಂಘಟನೆಗಳೇ ಆಗಿವೆ. ಹೀಗಾಗಿ ಆರೆಸ್ಸೆಸ್ ವಿರೋಧ ಸೋಗಲಾಡಿತನದ್ದು.
ಇನ್ನು ಮೋದಿಯ ಬಿಜೆಪಿಗೂ ಹಾಗೂ ಆರೆಸ್ಸೆಸ್ನ ನಾಯಕರ ನಡುವೆ ಕೆಲವು ವ್ಯಕ್ತಿಗತ ಸಂಘರ್ಷಗಳು ಇರಬಹುದಾದರೂ ಅದು ಬಿಜೆಪಿಯನ್ನು ಮುರಿಯುವಂತಹದ್ದಲ್ಲ. ಏಕೆಂದರೆ ಆರೆಸ್ಸೆಸ್ನ ಅಜೆಂಡಾಗಳನ್ನು ಜಾರಿ ಮಾಡುತ್ತಿರುವುದು ಮೋದಿಯ ಬಿಜೆಪಿಯೇ. ಆದ್ದರಿಂದ ಆರೆಸ್ಸೆಸ್ನ ಸಲಹೆಗಳು ಈ ಸಂವಿಧಾನ ವಿರೋಧಿ ಆರೆಸ್ಸೆಸ್ ಅಜೆಂಡಾಗಳನ್ನು ಜಾರಿಗೆ ತರಲು ಬಿಜೆಪಿಯನ್ನು ಇನ್ನಷ್ಟು ಪರಿಣಾಮಕಾರಿ ಸಾಧನ ಮಾಡುವ ವಾತ್ಸಲ್ಯದ ಆಕ್ಷೇಪಣೆಗಳಷ್ಟೇ ಆಗಿವೆ. ಈ ವೈರುಧ್ಯದಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ ಮತ್ತು ಈ ದೇಶದ ಜನರಿಗೆ ಯಾವುದೇ ಲಾಭವಿಲ್ಲ.
ಬಿಜೆಪಿಯ ಮತ್ತು ಮೋದಿಯ ಈ ಧಾರ್ಷ್ಟ್ಯಕ್ಕೆ ಕಾರಣವೇನು?
ಹಿಂದುತ್ವದ ಅಡಿಪಾಯ ಅಲುಗಾಡಿಲ್ಲ!
ನಿರೀಕ್ಷೆಗಿಂತ ವೋಟು ಮತ್ತು ಸೀಟುಗಳು ಕಡಿಮೆ ಬಂದರೂ, ಸರಕಾರಕ್ಕೆ ಇತರ ಪಕ್ಷಗಳನ್ನು ಆಧರಿಸಬೇಕಾಗಿ ಬಂದರೂ ಬಿಜೆಪಿ ಮತ್ತು ಮೋದಿ ತೋರಿಸುತ್ತಿರುವ ಈ ದುರಹಂಕಾರಕ್ಕೆ ಕಾರಣಗಳೇನು?
ಇದಕ್ಕೆ ಪ್ರಧಾನವಾದ ಕಾರಣ ಈ ಚುನಾವಣೆಯಲ್ಲಿ ಮೋದಿಗೆ ಮತ್ತು ಹಿಂದುತ್ವಕ್ಕೆ ಜನಬೆಂಬಲ ಬಿಜೆಪಿಯ ನಿರೀಕ್ಷೆಯಷ್ಟು ಏರಿಕೆಯಾಗಿಲ್ಲ ಆದರೆ ಹೇಳಿಕೊಳ್ಳುವಷ್ಟು ಕಡಿಮೆಯೂ ಆಗಿಲ್ಲ. ಅದಕ್ಕೆ ಹಲವಾರು ಕಾರಣಗಳಿವೆ.
ಬಿಜೆಪಿ ಈ ಬಾರಿ 370 ಸೀಟುಗಳನ್ನು ಮತ್ತು ಎನ್ಡಿಎ 400 ಸೀಟುಗಳನ್ನು ಪಡೆದುಕೊಳ್ಳುತ್ತದೆ ಎಂದು ಪ್ರಚಾರ ಮಾಡಿಕೊಂಡಿದ್ದರಿಂದ ಅದರ ಸಾಧನೆಯ ಹೋಲಿಕೆಯೂ 400 ಸೀಟುಗಳ ಗುರಿಯೊಂದಿಗೆ ನಡೆಯುತ್ತಿದೆ. ಆದರೆ 2019ರಲ್ಲಿ ಅದು ಪಡೆದುಕೊಂಡ ಸೀಟು 303 ಮತ್ತು ವೋಟು ಶೇರು ಶೇ. 37. ಅದಕ್ಕೆ ಹೋಲಿಸಿದಲ್ಲಿ ಬಿಜೆಪಿ ಈ ಬಾರಿ ಪಡೆದುಕೊಂಡ ವೋಟು ಶೇರು ಶೇ. 36.56. ಅಂದರೆ ವೋಟುಗಳ ಪ್ರಮಾಣ ಕಡಿಮೆ ಆಗಿರುವುದು ಕೇವಲ ಶೇ. 0.6. ಪ್ರಮಾಣದಲ್ಲಿ ಈಗಲೂ 64 ಕೋಟಿ ಮತದಾರರಲ್ಲಿ 24 ಕೋಟಿ ಜನ ಬಿಜೆಪಿಗೆ ವೋಟು ಹಾಕಿದ್ದಾರೆ. ಇದಕ್ಕೆ ಕಾರಣ ಬಿಜೆಪಿಯ ಅಧಿಕಾರ ಬಲ, ಸಂಪನ್ಮೂಲ, ಮೀಡಿಯಾ ಬಲ ಮತ್ತು ಅಧಿಕಾರ ದುರ್ಬಳಕೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದೇನೂ ಇಲ್ಲದೆ ವಿರೋಧ ಪಕ್ಷಗಳು 232 ಸೀಟುಗಳನ್ನು ಪಡೆದುಕೊಂಡಿರುವುದು ಸಾಧನೆಯೇ. ಅದೇನೇ ಇದ್ದರೂ ಬಿಜೆಪಿ ಮತ್ತು ವಿರೋಧ ಪಕ್ಷಗಳ ಬೆಂಬಲದ ತಳಹದಿಯ ನಡುವೆ ಈಗಲೂ ದೊಡ್ಡ ಅಂತರವಿದೆ/ ಈ ಬಾರಿ ಕೇವಲ ಶೇ. 1ರಷ್ಟು ಮತಗಳನ್ನು ಕಳೆದುಕೊಂಡ ಬಿಜೆಪಿ ಕಳೆದುಕೊಂಡ ಸೀಟುಗಳು ಮಾತ್ರ 63. ಆದರೆ ಕಾಂಗ್ರೆಸ್ ಕಳೆದ ಬಾರಿಗಿಂತ ಹೆಚ್ಚಿಸಿಕೊಂಡ ಮತಗಳು ಕೇವಲ ಶೇ. 2. ಆದರೆ ಹೆಚ್ಚಿಸಿಕೊಂಡ ಸೀಟುಗಳು 47! ಹೀಗಾಗಿ ವೋಟು ಪ್ರಮಾಣದ ಸಂಖ್ಯೆಯಲ್ಲಿ ಬಿಜೆಪಿ ಕಾಂಗ್ರೆಸ್ಗಿಂತ ಈಗಲೂ ಎರಡು ಪಟ್ಟು ಹೆಚ್ಚಿದೆ.
ಬಿಜೆಪಿಯ ಈ ಮತಶಕ್ತಿ ಇರುವುದು ಅದರ ಸಾಮಾಜಿಕ ಪ್ರಭಾವದಲ್ಲಿ. ಅದನ್ನು ಪಡೆದುಕೊಳ್ಳಲು ಅದು 365 ದಿನಗಳೂ ಮಾಡುವ ಸಾಂಸ್ಕೃತಿಕ ರಾಜಕಾರಣದಲ್ಲಿ. ಕಾಂಗ್ರೆಸ್ನ ಬಳಿ ಇದಕ್ಕೆ ಪರ್ಯಾಯವಿಲ್ಲ. ಅದೇ ಬಿಜೆಪಿಯ ದುರಭಿಮಾನದ ಮೂಲ ಕೂಡ. ಉದಾಹರಣೆಗೆ ಬಿಜೆಪಿಗೆ ಅತಿ ಹೆಚ್ಚು ನಷ್ಟವಾಗಿರುವುದು ಉತ್ತರ ಪ್ರದೇಶದಲ್ಲಿ. ಅಲ್ಲಿ ಅದು 2019ರಲ್ಲಿ 63 ಸೀಟುಗಳನ್ನು ಪಡೆದುಕೊಂಡಿದ್ದರೆ ಈ ಬಾರಿ ಕೇವಲ 33 ಸೀಟುಗಳನ್ನು ಪಡೆದಿದೆ. ಅಂದರೆ 30 ಸೀಟುಗಳ ನಷ್ಟ. ಆದರೆ 2019ರಲ್ಲಿ ಬಿಜೆಪಿಯ ವೋಟು ಪ್ರಮಾಣ ಶೇ. 49. ಈ ಬಾರಿ ಅದರ ವೋಟು ಪ್ರಮಾಣ ಶೇ. 41. ಒಟ್ಟಾರೆ ಎನ್ಡಿಎ ಒಕ್ಕೂಟದ ವೋಟು ಪ್ರಮಾಣ ಶೇ. 46. ಇಲ್ಲಿ ಪ್ರಧಾನವಾಗಿ ದಲಿತರು ಸಂವಿಧಾನ ಬದಲಾವಣೆಯ ಘೋಷಣೆಗಳನ್ನು ಕೇಳಿ ಎಸ್ಪಿ ಕಡೆ ಸರಿದರು ಹಾಗೂ ಯಾದವ ಮತ್ತು ಅತಿ ಹಿಂದುಳಿದ ಜಾತಿಗಳ ಮತದಾರರೂ ಈ ಬಾರಿ ಎಸ್ಪಿ-ಕಾಂಗ್ರೆಸ್ ‘ಇಂಡಿಯಾ’ ಕೂಟಕ್ಕೆ ಮತ ಚಲಾಯಿಸಿದರು. ಕಾಂಗ್ರೆಸ್-ಎಸ್ಪಿ ಮೈತ್ರಿ ಕೂಟಕ್ಕೆ ಶೇ. 43 ಮತಗಳು ಬಂದಿವೆ. ಇದೊಂದು ದೊಡ್ದ ಸಾಧನೆಯೇ. ಆದರೂ ಇಲ್ಲಿ ಮತ ಹಾಕಿದ ಬಹುಪಾಲು ಜನ ಮೋದಿಯನ್ನು ಮೆಚ್ಚಿಕೊಂಡರೂ ಸ್ಥಳೀಯ ಸಂಸದರ ವಿರುದ್ಧ ಮತ ಚಲಾಯಿಸಿದ್ದಾರೆ. ಕೊನೆಯ ಹಂತದ ವೇಳೆಗೆ ಉ.ಪ್ರದೇಶದಲ್ಲಿ ಪ್ರಧಾನಿ ಹುದ್ದೆಗೆ ಮೋದಿಗಿಂತ ಹೆಚ್ಚು ಜನರು ರಾಹುಲ್ ಗಾಂಧಿಯನ್ನು ಆಯ್ಕೆ ಮಾಡಿದರು ಎಂದು ಸಿಎಸ್ಡಿಎಸ್ ಸರ್ವೇಯ ವರದಿ ಹೇಳುತ್ತದೆ. ಇದೆಲ್ಲದರ ನಡುವೆಯೂ ಹತ್ತು ವರ್ಷಗಳ ನಂತರವೂ ಬಿಜೆಪಿಗೆ ಶೇ. 41ರಷ್ಟು ಮತಗಳು ಗಟ್ಟಿಯಾಗಿವೆ.
ಹಾಗೆಯೇ ಬಿಜೆಪಿಗೆ ಆಗಿರುವ ಮತ್ತೊಂದು ಮಹಾನಷ್ಟ ಮಹಾರಾಷ್ಟ್ರದಲ್ಲಿ. ಅಲ್ಲಿ 2019ರಲಿ 23 ಸೀಟುಗಳನ್ನು ಪಡೆದುಕೊಂಡಿದ್ದ ಬಿಜೆಪಿ ಈ ಬಾರಿ ಕೇವಲ 9 ಸೀಟುಗಳನ್ನು ಪಡೆದುಕೊಂಡಿದೆ. ಆದರೆ 2019ರಲ್ಲಿ ಶೇ. 27.84 ಮತಗಳನ್ನು ಪಡೆದುಕೊಂಡಿದ್ದ ಬಿಜೆಪಿ ಈ ಬಾರಿ 26.18 ವೋಟುಗಳಷ್ಟು ಪಡೆದುಕೊಂಡಿದೆ. ಅಂದರೆ ಸೀಟುಗಳು ಎರಡು ಪಟ್ಟು ಕಡಿಮೆಯಾಗಿದ್ದರೂ ವೋಟುಗಳು ಕಡಿಮೆಯಾಗಿರುವುದು ಕೇವಲ ಶೇ. 1.6.
ಈ ಸೀಟು ಮತ್ತು ವೋಟುಗಳ ಪ್ರಮಾಣಗಳ ತಾಳಮೇಳವಿಲ್ಲದ ವ್ಯತ್ಯಾಸಕ್ಕೆ ಕಾರಣ ಭಾರತದ ಇದ್ದವರಲ್ಲಿ ಹೆಚ್ಚು ಮತ ಪಡೆದವರು ಗೆಲ್ಲುವ ಪದ್ಧತಿ. ಇದು ಅಧಿಕಾರವನ್ನು ಯಾರು ಪಡೆಯುತ್ತಾರೆ ಎಂಬುದನ್ನು ನಿರ್ಧರಿಸಿದರೂ, ಸಮಾಜದಲ್ಲಿ ಯಾರು ಎಷ್ಟು ಬೆಂಬಲವನ್ನು ಪಡೆದುಕೊಂಡಿದ್ದಾರೆ ಎಂಬುದನ್ನು ತಿಳಿಸುವುದಿಲ್ಲ. ಅದನ್ನು ತಿಳುಸುವುದು ವೋಟು ಶೇರು. ಅದರ ಲೆಕ್ಕದಲ್ಲಿ ನೋಡಿದರೆ ಬಿಜೆಪಿಯ ಸಾಮಾಜಿಕ ತಳಹದಿಗೆ ಮುಕ್ಕಾಗಿಲ್ಲ.
ಅದೇ ರೀತಿ ಭಾರತದ ಪ್ರತಿಷ್ಟಿತ ಅಧ್ಯಯನ ಸಂಸ್ಥೆಯಾಗಿರುವ ಸಿಎಸ್ಡಿಎಸ್ ನಡೆಸಿರುವ ಚುನಾವಣೋತ್ತರ ಸಾಮಾಜಿಕ ಅಧ್ಯಯನಗಳು ಕೂಡಾ ಬಿಜೆಪಿಯ ಸಾಮಾಜಿಕ ತಳಹದಿಗೆ ಭಂಗ ಬಂದಿಲ್ಲವೆಂಬುದನ್ನೇ ಸಾಬೀತುಪಡಿಸುತ್ತದೆ.
ಉತ್ತರ ಪ್ರದೇಶವನ್ನು ಹೊರತುಪಡಿಸಿದರೆ ಒಟ್ಟಾರೆ ಭಾರತದಲ್ಲಿ ಬಿಜೆಪಿಯು ಗ್ರಾಮೀಣ ಭಾರತದಲ್ಲಿ, ಅರೆ ಪಟ್ಟಣ ಮತ್ತು ಪಟ್ಟಣಗಳಲ್ಲಿ, ಶ್ರೀಮಂತರಲ್ಲಿ ಮಾತ್ರವಲ್ಲದೆ ಮಧ್ಯಮ ಹಾಗೂ ಕಾರ್ಮಿಕ ವರ್ಗದಲ್ಲಿ, ಮೇಲ್ಜಾತಿ ಮಾತ್ರವಲ್ಲದೆ ಅತ್ಯಂತ ಹಿಂದುಳಿದ ಜಾತಿಗಳಲ್ಲಿ ‘ಇಂಡಿಯಾ’ ಒಕ್ಕೂಟಕ್ಕೆ ಹೋಲಿಸಿದಲಿ ಶೇ. 10ಕ್ಕಿಂತಲ್ಲೂ ಹೆಚ್ಚಿನ ಬೆಂಬಲವನ್ನು ಈಗಲೂ ಪಡೆದುಕೊಂಡಿರುವುದನ್ನು ಸಿಎಸ್ಡಿಎಸ್ ಸರ್ವೇ ಸೂಚಿಸುತ್ತದೆ.
ಹೀಗಾಗಿ ಈ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ಹಿಂದುತ್ವವನ್ನು ತಿರಸ್ಕರಿಸಿಲ್ಲ. ಬದಲಿಗೆ ಎಚ್ಚರಿಸಿದ್ದಾರೆ. ವಿರೋಧ ಪಕ್ಷಗಳನ್ನು ಬೆಂಬಲಿಸಿದ್ದಾರೆ. ಆದರೆ ಅಧಿಕಾರಕ್ಕೆ ಬರುವಷ್ಟಲ್ಲ. ಹೀಗಾಗಿ ಈಗ ಬಿಜೆಪಿ ಮತ್ತು ವಿರೋಧ ಪಕ್ಷಗಳೆರಡಕ್ಕೂ ತಿದ್ದುಕೊಳ್ಳುವ ಅವಕಾಶವನ್ನು ಜನರು ಒದಗಿಸಿದ್ದಾರೆ. ಆದರೆ ಇತಿಹಾಸದಲ್ಲಿ ಬಿಜೆಪಿ ಈ ವಿಷಯದಲ್ಲಿ ಕಾಂಗ್ರೆಸ್ಗಿಂತ ಹೆಚ್ಚು ಪರಿಣಿತ. ಅದರ ಭಾಗವಾಗಿಯೇ ಮೋದಿ ಅಧಿಕಾರ ಸ್ವೀಕರಿಸುವ ಮುನ್ನ ಸಂವಿಧಾನವನ್ನು ತಲೆ ಮೇಲೆ ಹೊತ್ತು ನಾಟಕವಾಡಿದ್ದು. ಇದರ ಉದ್ದೇಶ ಕಳೆದುಕೊಂಡ ದಲಿತ ಮತ್ತು ಅತಿ ಹಿಂದುಳಿದ ಮತಗಳ ಬೇಟೆಯೇ. ಆದರೆ ಅದನ್ನು ಮೋದಿ ಮೋಡಿಯಲ್ಲಿರುವ ಜನರಿಗೆ ವಿವರಿಸಿ ಹೇಳುವಷ್ಟು ಸಂಘಟನಾ ಶಕ್ತಿ, ಬದ್ಧತೆ ವಿರೋಧ ಪಕ್ಷಗಳಿಗೆ ಇದೆಯೇ?