ಭಾರತ ರತ್ನದಲ್ಲೂ ‘ರಾಜಕಾರಣ’

ಭಾರತ ರತ್ನದ ವಿಷಯದಲ್ಲಂತೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾಂಗ್ರೆಸ್ ನಾಯಕರನ್ನು ಅನುಸರಿಸುತ್ತಿದ್ದಾರೆ. ಅಷ್ಟು ಮಾತ್ರವಲ್ಲ ಕಾಂಗ್ರೆಸ್ ನಾಯಕರನ್ನು ಮೀರಿ ಭಾರತ ರತ್ನದ ಗೌರವವನ್ನು ಮಣ್ಣು ಪಾಲು ಮಾಡುತ್ತಿದ್ದಾರೆ. ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಅವರ ಕಾರ್ಯವೈಖರಿಯನ್ನು ಟೀಕಿಸಿ ಟೀಕಿಸಿ ಮೋದಿಯವರು ಅವರಲ್ಲಿದ್ದ ಅವಗುಣಗಳನ್ನು ಆವಾಹಿಸಿಕೊಂಡು ಅವರ ಅಪರಾವತಾರ ಆಗುತ್ತಿದ್ದಾರೆ.

Update: 2024-02-17 04:34 GMT

ಭಾರತದ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಪರಂಪರೆಯಲ್ಲಿ ಪ್ರಶ್ನೆ, ವಾಗ್ವಾದ, ಸಂವಾದಗಳಿಗೆ ವಿಪುಲವಾದ ಅವಕಾಶಗಳಿದ್ದವು. ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರು ಮೌಢ್ಯ, ಕಂದಾಚಾರ, ರೂಢಿಗತ ಜೀವ ವಿರೋಧಿ ಆಚರಣೆಗಳ ವಿರುದ್ಧ ನಿರಂತರ ಹೋರಾಟ ಮಾಡಿ ಸಮ-ಸಮಾಜದ ಕನಸು ಕಂಡಿದ್ದರು. ಬುದ್ಧ ಗುರುವಿನ ಮೂಲ ಮಂತ್ರವೇ -‘‘ಪ್ರಶ್ನೆ ಮಾಡು. ಯಾರೋ ಹೇಳಿದರು ಅಂತ ಒಪ್ಪಿಕೊಳ್ಳಬೇಡ ನಿನ್ನ ಅಂತಃಸಾಕ್ಷಿಗೆ ಮನವರಿಕೆ ಆದರೆ ಮಾತ್ರ ಒಪ್ಪಿಕೋ’’ ಎಂಬುದಾಗಿತ್ತು. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಮರೆತಿದ್ದರಿಂದಲೇ ಈ ಹೊತ್ತು ದೇಶದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ದೇವನೊಬ್ಬ ನಾಮ ಹಲವು-ಬಹುತ್ವ ಭಾರತದ ನಂಬಿಕೆ. ಭಾರತದಲ್ಲಿ ಸಾವಿರಾರು ಮಂದಿರ, ಮಸೀದಿ, ಚರ್ಚ್, ಗುರುದ್ವಾರಗಳಿವೆ. ಆದರೆ ರಾಮಮಂದಿರ ನಿರ್ಮಾಣ ಗಾಥೆಯನ್ನು ವೈಭವೀಕರಿಸಲಾಗುತ್ತದೆ. ಭಾರತದಲ್ಲಿ ಅಸಂಖ್ಯಾತ ದೇವರಿದ್ದಾರೆ. ಆದರೆ ಶ್ರೀರಾಮಚಂದ್ರನನ್ನು ಮಾತ್ರ ವಿಜೃಂಭಿಸಲಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಒಂದು ರಾಷ್ಟ್ರ-ಒಂದು ದೇವರು-ಒಂದು ಧರ್ಮ-ಒಂದು ಚುನಾವಣೆ-ಒಬ್ಬ ನಾಯಕ ಎಂಬ ತತ್ವವನ್ನು ಮುನ್ನೆಲೆೆಗೆ ತರುತ್ತಿದ್ದಾರೆ. ನಮ್ಮ ಚುನಾವಣಾ ರಾಜಕಾರಣಕ್ಕೆ ದೇವರು, ಧರ್ಮ, ಮಂದಿರ ಸೇರಿದಂತೆ ಎಲ್ಲಾ ಧಾರ್ಮಿಕ ನಂಬಿಕೆಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಸಾಲದೆಂಬಂತೆ ಈಗ ‘ಭಾರತ ರತ್ನ’ವನ್ನೂ ಉಪಯೋಗಿಸುತ್ತಿದ್ದಾರೆ.

ಭಾರತ ರತ್ನದ ವಿಷಯದಲ್ಲಂತೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾಂಗ್ರೆಸ್ ನಾಯಕರನ್ನು ಅನುಸರಿಸುತ್ತಿದ್ದಾರೆ. ಅಷ್ಟು ಮಾತ್ರವಲ್ಲ ಕಾಂಗ್ರೆಸ್ ನಾಯಕರನ್ನು ಮೀರಿ ಭಾರತ ರತ್ನದ ಗೌರವವನ್ನು ಮಣ್ಣು ಪಾಲು ಮಾಡುತ್ತಿದ್ದಾರೆ. ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಅವರ ಕಾರ್ಯವೈಖರಿಯನ್ನು ಟೀಕಿಸಿ ಟೀಕಿಸಿ ಮೋದಿಯವರು ಅವರಲ್ಲಿದ್ದ ಅವಗುಣಗಳನ್ನು ಆವಾಹಿಸಿಕೊಂಡು ಅವರ ಅಪರಾವತಾರ ಆಗುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಹಲವು ತಪ್ಪು ನಡೆಯಿಂದಲೇ ಆ ಪಕ್ಷ ಇಂದು ದುಃಸ್ಥಿತಿಯಲ್ಲಿದೆ. ಭಾರತ ರತ್ನದ ಗೌರವ ಕೊಡುವಲ್ಲಿಯಾದರೂ ಮೋದಿ ಅವರು ತಮ್ಮದೇ ಪಕ್ಷದ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಅನುಸರಿಸಬೇಕಿತ್ತು. ಹಾಗೆ ನೋಡಿದರೆ ಕೇಂದ್ರದಲ್ಲಿ ಅಧಿಕಾರ ನಡೆಸಿದ ಎಲ್ಲ ಸರಕಾರಗಳು-ಪ್ರಧಾನಿಗಳು ಭಾರತ ರತ್ನವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ನೀಡಿದ್ದಾರೆ. ಆದರೆ ಅಲ್ಲಿ ತಾತ್ವಿಕ-ಸೈದ್ಧಾಂತಿಕ ಕಾರಣಗಳು ಎದ್ದು ಕಾಣುತ್ತಿದ್ದವು. ಭಾರತ ರತ್ನದ ಗೌರವ ನೀಡುವ ಮೂಲಕ ಸರಕಾರ ಬದಲಾವಣೆ ಮಾಡಿದ, ಪಕ್ಷಾಂತರ ಮಾಡಿಸಿದ ನಿದರ್ಶನ ಎಲ್ಲೂ ದೊರೆಯುವುದಿಲ್ಲ. ಭಾರತ ರತ್ನ ನೀಡುವಲ್ಲಿ ಜಾತಿ ಪ್ರಧಾನ ಪಾತ್ರ ವಹಿಸಿದ್ದು ಗಮನಿಸಬಹುದು, ಆದರೆ ನೇರ ಚುನಾವಣೆ ರಾಜಕೀಯಕ್ಕೆ ಬಳಸಿಕೊಂಡದ್ದು ಇದೇ ಮೊದಲು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತ ರತ್ನ ಗೌರವವನ್ನು ಚುನಾವಣೆಗೂ ಮುಂಚೆ ‘ಬಾಣಗಳಂತೆ’ ಬಳಸಿಕೊಂಡಿದ್ದಾರೆ. ಯಾವ ಬಾಣ ಎಲ್ಲಿ ತಾಗಬಹುದು, ಯಾವ ಫಲ ನೀಡಬಹುದು ಎಂಬ ಲೆಕ್ಕಾಚಾರದಲ್ಲಿ.

ಹಾಗೆ ನೋಡಿದರೆ; ಭಾರತ ರತ್ನ ನೀಡುವಲ್ಲಿ ಜಾತಿ, ಧರ್ಮ, ಅಧಿಕಾರ, ಅಂತಸ್ತು ಮೀರಿ ಪ್ರತಿಭಾ ನ್ಯಾಯ ಪರಿಗಣಿಸಬೇಕೆಂಬ ಆಶಯವೇನೋ ಹೊಂದಿದೆ. ಆದರೆ ಕಳೆದ 70 ವರ್ಷಗಳಲ್ಲಿ ‘ಸಾಧನೆ’ ಮಾತ್ರ ಪರಿಗಣಿಸುವ ಗೋಜಿಗೆ ಯಾರೂ ಹೋಗಿಲ್ಲ. ಮೋದಿಯವರು ಹಿಂದಿನ ಪ್ರಧಾನ ಮಂತ್ರಿಗಳಿಗಿಂತ ಮತ್ತಷ್ಟು ಹೆಚ್ಚು ತಪ್ಪು ಮಾಡುವ ಸಂಕಲ್ಪ ಮಾಡಿದಂತಿದೆ. ಭಾರತ ರತ್ನಕ್ಕೆ ಕಳೆದ ಹತ್ತು ವರ್ಷಗಳಲ್ಲಿ ಅವರು ಪರಿಗಣಿಸಿರುವ ಹೆಸರುಗಳನ್ನು ನೋಡಿದರೆ ಮೋದಿಯವರ ಇರಾದೆ ಸ್ಪಷ್ಟವಾಗುತ್ತದೆ. ನೆಹರೂ ಮನೆತನಕ್ಕಿಂತಲೂ ತಾನು ಭಿನ್ನ-ವಿಶಿಷ್ಟ ಎಂಬುದನ್ನು ರುಜುವಾತು ಪಡಿಸಲು ಮೋದಿಯವರಿಗೆ ‘ಭಾರತ ರತ್ನ’ ಗೌರವ ಬಹುದೊಡ್ಡ ಅವಕಾಶವಾಗಿತ್ತು. ಅಧಿಕಾರದಾಹಿ ಯಾವತ್ತೂ ಸಂವೇದನಾಶೀಲವಾಗಿ ನಡೆದುಕೊಳ್ಳಲಾರ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಹಲವು ತಪ್ಪುಗಳ ಹೊರತಾಗಿಯೂ ‘ಭಾರತ ರತ್ನ’ ಗೌರವ ಅಷ್ಟೋ ಇಷ್ಟೋ ಘನತೆ ಉಳಿಸಿಕೊಂಡಿತ್ತು. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತ ರತ್ನ ಗೌರವವನ್ನು ರಾಜಕೀಯ ಉದ್ದೇಶಕ್ಕೆ ಬಳಸಿ ಅದರ ಘನತೆಯನ್ನು ಸಂಪೂರ್ಣ ಕುಗ್ಗಿಸಿದ್ದಾರೆ, ಅಪಮೌಲ್ಯಗೊಳಿಸಿದ್ದಾರೆ.

ಜನವರಿ 2, 1954ರಲ್ಲಿ ‘ಭಾರತ ರತ್ನ’ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಆರಂಭದಲ್ಲಿ ಭಾರತ ರತ್ನವನ್ನು ಕಲೆ,ಸಾಹಿತ್ಯ, ವಿಜ್ಞಾನ ಮತ್ತು ಸಾರ್ವಜನಿಕ ಸೇವೆ ಸಲ್ಲಿಸಿದ ಮಹಾನ್ ಸಾಧಕರಿಗೆ ಮಾತ್ರ ಪ್ರಶಸ್ತಿ ನೀಡಲು ನಿರ್ಧರಿಸಲಾಗಿತ್ತು. ಆದರೆ 2011ರಲ್ಲಿ ಎಲ್ಲಾ ಕ್ಷೇತ್ರದ ಸಾಧಕರಿಗೆ ನೀಡಬಹುದೆಂದು ತಿದ್ದುಪಡಿ ಮಾಡಲಾಯಿತು. 1966ಕ್ಕೂ ಮುಂಚೆ ಭಾರತ ರತ್ನವನ್ನು ಮರಣೋತ್ತರವಾಗಿ ನೀಡುತ್ತಿರಲಿಲ್ಲ. ಆದರೆ 1966ರಲ್ಲಿ ನಿಯಮಗಳಿಗೆ ತಿದ್ದುಪಡಿ ಮಾಡಿ ಅದೇ ವರ್ಷ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಭಾರತರತ್ನವನ್ನು ಮರಣೋತ್ತರವಾಗಿ ನೀಡಲಾಯಿತು. 1992ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನವನ್ನು ಪ್ರಕಟಿಸಲಾಯಿತು. ಆದರೆ ವಿರೋಧ ವ್ಯಕ್ತವಾದ ಕಾರಣ ಬೋಸ್ ಕುಟುಂಬದವರು ಭಾರತ ರತ್ನದ ಬಗ್ಗೆ ವಿಶೇಷ ಆಸಕ್ತಿ ತೋರಿಸಲಿಲ್ಲ. 1997ರಲ್ಲಿ ಬೋಸ್ ಅವರಿಗೆ ನೀಡಿದ ‘ಭಾರತ ರತ್ನ’ವನ್ನು ರದ್ದುಪಡಿಸಲಾಯಿತು. ಪ್ರಶಸ್ತಿ ಪ್ರಕಟಿಸಿ ನೀಡದಿರುವುದು ಇದೇ ಮೊದಲ ಪ್ರಕರಣ. ಈ ಸಂಬಂಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಕೂಡ ದಾಖಲಾಗಿತ್ತು. ಸಾಮ್ರಾಟ ಅಶೋಕ, ಮೊಗಲ ದೂರೆ ಅಕ್ಬರ್, ಶಿವಾಜಿ ಮಹಾರಾಜ್, ಕವಿ ರವೀಂದ್ರನಾಥ್ ಠಾಗೋರ್, ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂಧಿ, ಬಾಲಗಂಗಾಧರ್ ತಿಲಕ್ ಅವರಿಗೂ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಬೇಡಿಕೆ ಇತ್ತು. ಕೆಲವರು ನ್ಯಾಯಾಲಯದ ಮೆಟ್ಟಲು ಹತ್ತಿದ್ದರು. ಇಂತಹ ಬೇಡಿಕೆಗಳಿಗೆ ಎಲ್ಲೋ ಮನ್ನಣೆ ದೊರೆಯಲಿಲ್ಲ. ಇಲ್ಲಿಯವರೆಗೆ ಒಟ್ಟು 53 ಜನರಿಗೆ ‘ಭಾರತ ರತ್ನ’ ಗೌರವ ನೀಡಲಾಗಿದೆ. 1954ರಲ್ಲಿ ಮೊದಲ ಬಾರಿಗೆ ಮೂರು ಜನ ಸಾಧಕರಿಗೆ ಭಾರತ ರತ್ನ ಪ್ರಕಟಿಸಲಾಯಿತು. ಮೂವರು ಒಂದೇ ಸಮುದಾಯಕ್ಕೆ ಮತ್ತು ತಮಿಳುನಾಡಿಗೆ ಸೇರಿದವರಾಗಿದ್ದರು. ಆ ಮೂವರಲ್ಲಿ ಕಲೆ-ಸಾಹಿತ್ಯ ಕ್ಷೇತ್ರವನ್ನು ಪ್ರತಿನಿಧಿಸುವ ಒಬ್ಬರೂ ಇರಲಿಲ್ಲ. ಸಿ. ರಾಜಗೋಪಾಲಾಚಾರಿ ರಾಜಕಾರಣಿಯಾಗಿದ್ದರು, ಸರ್ವಪಲ್ಲಿ ರಾಧಾಕೃಷ್ಣ ಶಿಕ್ಷಣ ತಜ್ಞ ಮತ್ತು ರಾಜಕಾರಣಿಯಾಗಿದ್ದರು, ಸಿ.ವಿ. ರಾಮನ್ ಅವರು ವಿಜ್ಞಾನ ಕ್ಷೇತ್ರದ ಸಾಧಕರಾಗಿದ್ದರು. ಭಾರತದ ಮೊದಲ ಕಾನೂನು ಮಂತ್ರಿ ಭಾರತದ ಸಂವಿಧಾನದ ಡ್ರಾಫ್ಟಿಂಗ್ ಕಮಿಟಿ ಅಧ್ಯಕ್ಷರಾಗಿದ್ದ ಅರ್ಥಶಾಸ್ತ್ರಜ್ಞ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಭಾರತ ರತ್ನ ಗೌರವಕ್ಕೆ ಪರಿಗಣಿಸಬೇಕೆಂಬುದು ಆಗ ಯಾರಿಗೂ ಅನಿಸಲೇ ಇಲ್ಲ. 1954ರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಮಂತ್ರಿಯೂ ಆಗಿರಲಿಲ್ಲ. ಕೇವಲ ಸಂಸತ್ ಸದಸ್ಯರಾಗಿದ್ದರು. ಆಗ ನೆಹರೂ ಅವರ ಸುತ್ತುವರಿದ ಸ್ವಜಾತಿ ಕೂಟಕ್ಕೆ ಅಂಬೇಡ್ಕರ್ ಅವರ ಸಾಧನೆ ಕಣ್ಣಿಗೆ ಕಂಡರೂ ಭಾರತ ರತ್ನಕ್ಕೆ ಅರ್ಹರಲ್ಲ ಎಂದೇ ಕಡೆಗಣಿಸಿದರು.

ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಭಾರತ ರತ್ನಕ್ಕೆ ಪರಿಗಣಿಸಲೇ ಇಲ್ಲ. ಕಾಂಗ್ರೆಸ್ ನಲ್ಲಿರುವ ಒಂದು ಜಾತಿವಾದಿ ಗುಂಪು ಭಾರತ ರತ್ನ ಮತ್ತು ಇನ್ನಿತರ ಪದ್ಮ ಪುರಸ್ಕಾರಗಳನ್ನು ನಿರ್ಧರಿಸುತ್ತಿತ್ತು ಎನಿಸುತ್ತದೆ. 1988ರಲ್ಲಿ ಪ್ರಧಾನಿ ರಾಜೀವ್ ಗಾಂಧಿ ಅವರು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನವನ್ನು ಪ್ರಕಟಿಸಿದರು. ಆ ಹೊತ್ತಿನಲ್ಲಿಯೂ ಕಾಂಗ್ರೆಸ್ ನಾಯಕರಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರು ನೆನಪಾಗಲಿಲ್ಲ. 1990ರಲ್ಲಿ ವಿ.ಪಿ.ಸಿಂಗ್ ಅವರು ಪ್ರಧಾನಮಂತ್ರಿಯಾಗಿದ್ದಾಗ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಲಾಯಿತು. ಅದೇ ವರ್ಷ ದಕ್ಷಿಣ ಆಫ್ರಿಕಾದ ಹೋರಾಟಗಾರ, ಗಾಂಧಿವಾದಿ ನೆಲ್ಸನ್ ಮಂಡೇಲಾ ಅವರಿಗೂ ಭಾರತ ರತ್ನವನ್ನು ಪ್ರದಾನ ಮಾಡಲಾಯಿತು. ವಿ.ಪಿ. ಸಿಂಗ್ ಅವರು ರಾಜಕಾರಣಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಭಾವಿಸಿದರೂ ಅದು ತಾತ್ವಿಕ ನೆಲೆಯ ರಾಜಕಾರಣವಾಗಿತ್ತು. ಇಲ್ಲಿಯವರೆಗೆ ಒಟ್ಟು 53 ಜನರಿಗೆ ಭಾರತ ರತ್ನ ಗೌರವ ನೀಡಲಾಗಿದೆ; ಪ್ರಧಾನಿ ನರೇಂದ್ರ ಮೋದಿಯವರ ಅಧಿಕಾರಾವಧಿ ಸೇರಿ. ಭಾರತ ರತ್ನ ಗೌರವಕ್ಕೆ ಭಾಜನರಾದ ವರ ಪಟ್ಟಿಯ ಮೇಲೆ ಕಣ್ಣಾಡಿಸಿದರೆ ಭಾರತದ ಜಾತಿ ವ್ಯವಸ್ಥೆಯ ವಿರಾಟ್ ಸ್ವರೂಪ ಕಣ್ಣೆದುರು ನಿಲ್ಲುತ್ತದೆ. ಭಾರತ ರತ್ನ ಸಮಗ್ರ ಭಾರತವನ್ನು ಪ್ರತಿನಿಧಿಸಿಲ್ಲ ಎಂಬ ಸತ್ಯವೂ ಗೋಚರಿಸುತ್ತದೆ.

ಮೊದಲೇ ಹೇಳಿದಂತೆ; 1954ರಲ್ಲಿ ಸಿ. ರಾಜಗೋಪಾಲಾಚಾರಿ, ಸರ್ವಪಲ್ಲಿ ರಾಧಾಕೃಷ್ಣ, ಸಿ.ವಿ. ರಾಮನ್ ಭಾರತ ರತ್ನಕ್ಕೆ ಭಾಜನರಾಗಿದ್ದರು. ಮೂವರು ಒಂದೇ ಸಮುದಾಯಕ್ಕೆ ಸೇರಿದವರು ಎಂಬುದು ಗಮನಾರ್ಹ. 1955ರಲ್ಲಿ ಮತ್ತೆ ಮೂರು ಜನರಿಗೆ ಭಾರತ ರತ್ನ ನೀಡಲಾಗುತ್ತದೆ. ಆ ಮೂವರಲ್ಲಿ ಜವಾಹರಲಾಲ್ ನೆಹರೂ ಅವರ ಹೆಸರೂ ಇರುತ್ತದೆ. ಕರ್ನಾಟಕದ ಎಂ. ವಿಶ್ವೇಶ್ವರಯ್ಯ, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಕುಲಪತಿ ಭಗವಾನ್ ದಾಸ್ ಭಾರತರತ್ನಕ್ಕೆ ಭಾಜನರಾದ ಇನ್ನಿಬ್ಬರು. ಮೂವರೂ ಒಂದೇ ಸಮುದಾಯಕ್ಕೆ ಸೇರಿದವರು. ಆಗಲೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರು ನೆನಪಾಗುವುದಿಲ್ಲ. 1957ರಲ್ಲಿ ಗೋವಿಂದ ವಲ್ಲಭ ಪಂತ ಅವರೊಬ್ಬರಿಗೆ ಭಾರತ ರತ್ನ ನೀಡಲಾಗುತ್ತದೆ. 1958ರಲ್ಲಿ ದೊಂಡೋ ಕೇಶವ ಕರ್ವೆ ಅವರಿಗೆ ಭಾರತ ನೀಡುತ್ತಾರೆ. ಕರ್ವೆ ಅವರು ಮಹಾರಾಷ್ಟ್ರ ಮೂಲದ ಸಮಾಜ ಸುಧಾರಕರು. ಅದೇ ಮಹಾರಾಷ್ಟ್ರದ ಮಹಾನ್ ಸುಧಾರಕ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಪರಿಗಣಿಸುವುದಿಲ್ಲ. 1961ರಲ್ಲಿ ಇಬ್ಬರಿಗೆ ಭಾರತ ರತ್ನ ಪ್ರಕಟಿಸುತ್ತಾರೆ. ಒಬ್ಬರು ಬಿದನ್ ಚಂದ್ರ ರಾಯ್, ಇನ್ನೊಬ್ಬರು ಹಿಂದಿಗಾಗಿ ಹೋರಾಟ ಮಾಡಿದ ಪುರುಷೋತ್ತಮ ದಾಸ್ ಟಂಡನ್.

1962ರಲ್ಲಿ ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರಿಗೆ ಭಾರತ ರತ್ನ ನೀಡಲಾಗುತ್ತದೆ. 1963ರಲ್ಲಿ ಇಬ್ಬರಿಗೆ ಭಾರತ ರತ್ನ ಪ್ರಕಟಿಸಲಾಗುತ್ತದೆ. ಅವರಲ್ಲಿ ಒಬ್ಬರು ಮೊದಲ ಬಾರಿಗೆ ಮುಸ್ಲಿಮ್ಸಮುದಾಯ ಸಾಧಕರನ್ನು ಗುರುತಿಸುತ್ತಾರೆ. ಝಾಕಿರ್ ಹುಸೈನ್ ಅವರೇ ಮೊದಲ ಭಾರತ ರತ್ನ ಗೌರವಕ್ಕೆ ಪಾತ್ರರಾದ ಬ್ರಾಹ್ಮಣೇತರ ವ್ಯಕ್ತಿ. ಅವರೊಂದಿಗೆ ಮಹಾರಾಷ್ಟ್ರ ಮೂಲದ ಸಂಸ್ಕೃತ ಪಂಡಿತ ಪಿ.ವಿ. ಕಾಣೆಯವರಿಗೆ ಭಾರತ ರತ್ನ ನೀಡಲಾಗುತ್ತದೆ. 1956 ಡಿಸೆಂಬರ್ 6ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಮಹಾ ಪರಿನಿರ್ವಾಣ ಹೊಂದುತ್ತಾರೆ. ಮರಣೋತ್ತರದಲ್ಲೂ ಅವರನ್ನು ಭಾರತರತ್ನಕ್ಕೆ ಪರಿಗಣಿಸುವುದಿಲ್ಲ 1966ರವರೆಗೆ ಭಾರತ ರತ್ನವನ್ನು ಮರಣೋತ್ತರವಾಗಿ ನೀಡುವ ಪರಿಪಾಠ ಇರುವುದಿಲ್ಲ. ಲಾಲ್ ಬಹದೂರ್ ಶಾಸ್ತ್ರಿ ಅವರಿಗೆ ನೀಡಲೆಂದೇ ನಿಯಮಗಳಿಗೆ ತಿದ್ದುಪಡಿ ಮಾಡಿ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಕಟಿಸಲಾಗುತ್ತದೆ. 1971ರಲ್ಲಿ ಇಂದಿರಾ ಗಾಂಧಿಯವರಿಗೆ ಭಾರತ ರತ್ನ ನೀಡಲಾಗುತ್ತದೆ. 1975ರಲ್ಲಿ ವಿ.ವಿ. ಗಿರಿ, 1976ರಲ್ಲಿ ಕೆ. ಕಾಮರಾಜ್, 1980ರಲ್ಲಿ ಮದರ್ ತೆರೇಸಾ ಅವರಿಗೆ ಭಾರತ ರತ್ನ ದೊರೆಯುತ್ತದೆ. ಭಾರತ ರತ್ನಕ್ಕೆ ಭಾಜನರಾದ ಮೊದಲ ಕ್ರಿಶ್ಚಿಯನ್ ಸಾಧಕಿ ಮದರ್ ತೆರೇಸಾ. 1979ರಲ್ಲಿ ಮದರ್ ತೆರೇಸಾ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. 1983ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭೂದಾನ ಚಳವಳಿಯ ನೇತಾರ ವಿನೋಬಾಭಾವೆ ನೆನಪಾಗಿ ಭಾರತ ರತ್ನ ನೀಡುತ್ತದೆ. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಗಡಿನಾಡ ಗಾಂಧಿ ಪಾಕಿಸ್ತಾನದ ಅಬ್ದುಲ್ ಗಪ್ಫಾರ್ ಖಾನ್ ಅವರಿಗೆ ಭಾರತ ರತ್ನ ನೀಡುತ್ತಾರೆ. ಆಗ ವಿ.ಪಿ. ಸಿಂಗ್ ಇನ್ನೂ ಕಾಂಗ್ರೆಸ್ ತೊರೆದಿರಲಿಲ್ಲ. 1988ರಲ್ಲಿ ಭಾರತ ರತ್ನಕ್ಕೆ ನಟ, ರಾಜಕಾರಣಿ ಎಂ.ಜಿ. ರಾಮಚಂದ್ರನ್ ಅವರನ್ನು ಆಯ್ಕೆ ಮಾಡುತ್ತಾರೆ. 1989ರಲ್ಲಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತ ರತ್ನ ನೀಡಲಾಗಿದೆಯೆಂಬ ಟೀಕೆಗಳು ಕೇಳಿ ಬರುತ್ತವೆ. 1989ರ ಚುನಾವಣೆಯಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ನೆಲ ಕಚ್ಚುತ್ತದೆ.

1991ರಲ್ಲಿ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹರಾವ್ ಅವರು ರಾಜೀವ್ ಗಾಂಧಿ, ವಲಭಭಾಯಿ ಪಟೇಲ್ ಮತ್ತು ಮೊರಾರ್ಜಿ ದೇಸಾಯಿ ಅವರಿಗೆ ಭಾರತ ರತ್ನ ನೀಡುತ್ತಾರೆ. ಆಗ ಮೊರಾರ್ಜಿ ದೇಸಾಯಿ ಇನ್ನೂ ಬದುಕಿರುತ್ತಾರೆ. 1990ರ ನಂತರವೇ ನಿಜವಾದ ಸಾಧಕರಿಗೆ ಭಾರತ ರತ್ನ ಲಭಿಸಿದ್ದು. ಎಪಿಜೆ ಅಬ್ದುಲ್ ಕಲಾಂ, ಜೆ.ಆರ್.ಡಿ. ಟಾಟಾ, ಸತ್ಯಜಿತ್ ರೇ, ಮೌಲಾನಾ ಅಬುಲ್ ಕಲಾಂ ಆಝಾದ್, ಗುಲ್ಜಾರಿ ಲಾಲ್ ನಂದಾ, ಅರುಣಾ ಆಸಿಫ್ ಅಲಿ, ಎಂ.ಎಸ್. ಸುಬ್ಬುಲಕ್ಷ್ಮೀ, ಸಿ.ಸುಬ್ರಮಣ್ಯಂ, ಜಯಪ್ರಕಾಶ್ ನಾರಾಯಣ್, ಅಮರ್ತ್ಯ ಸೇನ್, ಗೋಪಿನಾಥ್, ಪಂ. ರವಿಶಂಕರ್, ಲತಾ ಮಂಗೇಶ್ಕರ್, ಬಿಸ್ಮಿಲ್ಲಾ ಖಾನ್ ಅವರಿಗೆ ಭಾರತರತ್ನ ನೀಡಿದಾಗ ಒಳ್ಳೆಯ ಆಯ್ಕೆ ಎನಿಸಿತ್ತು. ಭೀಮಸೇನ್ ಜೋಶಿ, ಸಿ.ಎನ್.ಆರ್. ರಾವ್, ಸಚಿನ್ ತೆಂಡುಲ್ಕರ್ ಅವರನ್ನು ಕಾಂಗ್ರೆಸ್ ಸರಕಾರ ಭಾರತ ರತ್ನಕ್ಕೆ ಆಯ್ಕೆಮಾಡಿದಾಗ ವಿವಾದಕ್ಕೆ ಅವಕಾಶವಾಗಿತ್ತು. ಕಾಂಗ್ರೆಸ್ ನಲ್ಲಿನ ಜಾತಿವಾದಿ ಶಕ್ತಿಗಳು ಮೇಲುಗೈ ಸಾಧಿಸಿದ್ದರು. ಸಚಿನ್ ತೆಂಡುಲ್ಕರ್ ಬದಲಿಗೆ ಹಾಕಿ ಮಾಂತ್ರಿಕ ಧ್ಯಾನ್ಚಂದ್ ಅವರ ಆಯ್ಕೆಯಾಗಿದ್ದರೆ ಒಳ್ಳೆಯದಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು. ಸಿ.ಎನ್.ಆರ್. ರಾವ್ ಹೆಸರು ಕೃತಿಚೌರ್ಯ ವಿವಾದದಲ್ಲಿ ಸಿಲುಕಿಕೊಂಡಿತ್ತು. ಇಸ್ರೋ ಸ್ಥಾಪನೆಗೆ ಕಾರಣರಾದ ಹೋಮಿ ಭಾಭಾ, ವಿಕ್ರಂ ಸಾರಾಭಾಯಿ ಹೆಚ್ಚು ಅರ್ಹರು ಎಂಬ ಮಾತು ಮುನ್ನೆಲೆಗೆ ಬಂದಿದ್ದವು. ಸಂಗೀತ ಕ್ಷೇತ್ರದಲ್ಲೂ ಕುಮಾರ ಗಂಧರ್ವ, ಮನ್ಸೂರ, ಗಂಗೂಬಾಯಿ ಹಾನಗಲ್ರಲ್ಲಿ ಒಬ್ಬರಿಗಾದರೂ ಭಾರತ ರತ್ನ ಸಿಗಬೇಕಿತ್ತು ಎಂದು ಆಡಿಕೊಂಡಿದ್ದರು.

ನರೇಂದ್ರ ಮೋದಿಯವರು ಅಟಲ್ ಬಿಹಾರಿ ವಾಜಪೇಯಿ, ಮದನಮೋಹನ ಮಾಳವೀಯ, ನಾನಾಜಿ ದೇಶಮುಖ್ ಅವರಿಗೆ ಭಾರತ ರತ್ನ ನೀಡಿದಾಗಲೂ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಕಾಂಗ್ರೆಸ್ ಮುಖಂಡ ಪ್ರಣವ್ ಮುಖರ್ಜಿಗೆ ಭಾರತ ರತ್ನ ನೀಡಿದಾಗಲೇ ಮೋದಿಯವರ ರಾಜಕಾರಣಿ ಬುದ್ಧಿ ತಿಳಿದಿತ್ತು. ಗಾಯಕಿ ಭೂಪೇನ್ ಹಜಾರಿಕಾ, ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡಿದಾಗ ವಿರೋಧಿಗಳೂ ಮೆಚ್ಚಿಕೊಂಡಿದ್ದರು. ಎಲ್.ಕೆ. ಅಡ್ವಾಣಿ, ಪಿ.ವಿ. ನರಸಿಂಹರಾವ್, ಚೌಧರಿ ಚರಣ್ ಸಿಂಗ್, ಎಂ.ಎಸ್. ಸ್ವಾಮಿನಾಥನ್ ಅವರಿಗೆ ಭಾರತ ರತ್ನ ನೀಡಿ ಅದರ ಗೌರವ ಮಣ್ಣು ಪಾಲು ಮಾಡಿದರು. ಬಾಬರಿ ಮಸೀದಿಯನ್ನು ಕಾನೂನು ಬಾಹಿರವಾಗಿ ಧ್ವಂಸಗೊಳಿಸಿದ ಅಡ್ವಾಣಿ, ಆ ಘಟನೆಗೆ ಮುಖ್ಯಸಾಕ್ಷಿಯಾಗಿದ್ದ ಪಿ.ವಿ. ನರಸಿಂಹರಾವ್ ಜನತಂತ್ರಕ್ಕೇ ಕಳಂಕ. ಕರ್ಪೂರಿ ಠಾಕೂರ್, ಚೌಧರಿ ಚರಣ್ ಸಿಂಗ್ ಅವರು ಭಾರತ ರತ್ನಕ್ಕೆ ಯೋಗ್ಯರಿದ್ದರೂ, ಅವರಿಗೆ ಭಾರತ ರತ್ನ ನೀಡುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಮಸಿ ಬಳಿದಂತೆ.

ಭಾರತ ರತ್ನ ಒಂದೆರಡು ಜಾತಿಗಳಿಗೆ ಸೀಮಿತವಾಗಿದ್ದು. ದೇಶದ 14 ರಾಜ್ಯಗಳ ಗಣ್ಯರು ಮಾತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅತಿ ಹೆಚ್ಚು ಜನ ಅಂದರೆ 10 ಜನ ಉತ್ತರಪ್ರದೇಶದವರಿದ್ದರೆ, ತಮಿಳುನಾಡು 9, ಮಹಾರಾಷ್ಟ್ರ 8, ಬಿಹಾರ 4, ಕರ್ನಾಟಕ 3, ಗುಜರಾತ್, ಬಿಹಾರ, ಅಸ್ಸಾಮ್, ತೆಲಂಗಾಣ ತಲಾ ಎರಡು, ದಿಲ್ಲಿ, ಪಂಜಾಬ್, ಮಧ್ಯಪ್ರದೇಶ, ಒಡಿಶಾದ ತಲಾ ಒಬ್ಬರು ಭಾರತ ರತ್ನಕ್ಕೆ ಭಾಜನರಾಗಿದ್ದಾರೆ. ಕೇರಳ ಸೇರಿ ದೇಶದ ಅರ್ಧಕ್ಕೂ ಹೆಚ್ಚು ರಾಜ್ಯಗಳ ಸಾಧಕರು ಭಾರತ ರತ್ನಕ್ಕೆ ಕಾಣಲೇ ಇಲ್ಲ. ಭಾರತ ಬಹುತ್ವಕ್ಕೆ ಅಪಮಾನ ಮಾಡಿದಂತಿದೆ. ಚುನಾವಣಾ ರಾಜಕಾರಣಕ್ಕೆ ಬಳಸಿದ ಮೋದಿ ಭಾರತ ರತ್ನದ ಅಳಿದುಳಿದ ಮೌಲ್ಯವನ್ನು ಕಳೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News

ಸಂವಿಧಾನ -75