ಧಾರ್ಮಿಕ ಸ್ಥಳಗಳ ಮೇಲೆ ನಿಯಂತ್ರಣ ಕಾಯ್ದೆಗಳು: ಸತ್ಯ ಮತ್ತು ಮಿಥ್ಯೆ

ಪಾರದರ್ಶಕತೆಯನ್ನು ಮತ್ತು ದತ್ತಿಯ ಉದ್ದೇಶಗಳಿಗೆ ಅನುಗುಣವಾಗಿ ನಿಧಿಯನ್ನು ಬಳಸಲಾಗುತ್ತದೆ ಎನ್ನುವುದನ್ನು ಖಚಿತಪಡಿಸಲು ಧರ್ಮ ಭೇದವಿಲ್ಲದೆ ಎಲ್ಲ ಧಾರ್ಮಿಕ ದತ್ತಿಗಳಿಗೆ ನಿಯಂತ್ರಣಗಳು ಏಕರೂಪವಾಗಿ ಅನ್ವಯಗೊಳ್ಳುತ್ತವೆ ಎನ್ನುವುದು ಸರಿಯಾದ ನಿಲುವು. ಯಾವುದೇ ಸರಕಾರವು ತನ್ನ ಸ್ವಂತ ಬಳಕೆಗಾಗಿ ದತ್ತಿಗಳ ಹಣವನ್ನು ವಿನಿಯೋಗಿಸಲು ಸಾಧ್ಯವಿಲ್ಲ.
ಅಶ್ವಿನಿ ಉಪಾಧ್ಯಾಯರಂತಹ ವ್ಯಕ್ತಿಗಳಿಂದ ತಪ್ಪುದಾರಿಗೆಳೆಯುವ ಹೇಳಿಕೆಗಳು ಕೋಮು ಸೌಹಾರ್ದಕ್ಕೆ ಧಕ್ಕೆಯನ್ನುಂಟು ಮಾಡುತ್ತವೆ. ಭ್ರಾತೃತ್ವ ಮತ್ತು ಏಕತೆಯನ್ನು ಬೆಳೆಸಲು ಇಂತಹ ತಪ್ಪು ಪ್ರತಿಪಾದನೆಗಳಿಂದ ದೂರವಿರುವುದು ಅಗತ್ಯವಾಗಿದೆ.
ಸರ್ವೋಚ್ಚ ನ್ಯಾಯಾಲಯದಲ್ಲಿ ಹಲವಾರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ(ಪಿಐಎಲ್)ಗಳನ್ನು ದಾಖಲಿಸುವ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಆಗಾಗ ಬಿಜೆಪಿ ಮತ್ತು ಆರೆಸ್ಸೆಸ್ ಅಜೆಂಡಾಕ್ಕೆ ಅನುಗುಣವಾಗಿರುವ ಕಾನೂನು ಹೋರಾಟಗಳನ್ನು ಕೈಗೆತ್ತಿಕೊಳ್ಳುತ್ತಾರೆ.
ತನ್ನ ಪಿಐಎಲ್‌ಗಳಲ್ಲಿ ಅವರು ಧಾರ್ಮಿಕ ಮತಾಂತರಗಳಿಗೆ ನಿಷೇಧ, ಶಾಲೆಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ಹಾಗೂ ಪುರುಷರು ಮತ್ತು ಮಹಿಳೆಯರಿಗಾಗಿ ಏಕರೂಪ ಮದುವೆ ವಯಸ್ಸು ನಿಗದಿಯಂತಹ ಕ್ರಮಗಳನ್ನು ಕೋರಿದ್ದಾರೆ. ಆದರೆ ಅವರ ಹೆಚ್ಚಿನ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿದ್ದು, ನ್ಯಾಯಾಧೀಶರು ಇವು ಕ್ಷುಲ್ಲಕ ಅರ್ಜಿಗಳು ಎಂದು ಟೀಕಿಸಿದ್ದಾರೆ.
ಎಪ್ರಿಲ್ 2022ರಲ್ಲಿ ವಕ್ಫ್ ಕಾಯ್ದೆ 1995ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿತ್ತು. ನಂತರ ಡಿಸೆಂಬರ್ 2022ರಲ್ಲಿ ಸಾಮೂಹಿಕ ಮತಾಂತರಗಳನ್ನು ಆರೋಪಿಸಿ ಉಪಾಧ್ಯಾಯ ಸಲ್ಲಿಸಿದ್ದ ಪಿಐಎಲ್‌ನ ಪರಿಶೀಲನೆ ಸಂದರ್ಭದಲ್ಲಿ ಅಲ್ಪಸಂಖ್ಯಾತ ಧರ್ಮಗಳ ವಿರುದ್ಧ ಮಾಡಿದ್ದ ಅವಹೇಳನಕಾರಿ ಹೇಳಿಕೆಗಳಿಗೆ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿತ್ತು. ಐತಿಹಾಸಿಕ ಸ್ಥಳಗಳು ಮತ್ತು ನಗರಗಳ ಮರುನಾಮಕರಣವನ್ನು ಪ್ರತಿಪಾದಿಸಿ ಅವರು ಸಲ್ಲಿಸಿದ್ದ ಇನ್ನೊಂದು ಪಿಐಎಲ್ ಕೂಡ ವಜಾಗೊಂಡಿತ್ತು.
ಈ ಹಿಂದಿನ ವಕ್ಫ್ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಉಪಾಧ್ಯಾಯ, ಅದನ್ನು ಅಸಾಂವಿಧಾನಿಕ ಮತ್ತು ಪಕ್ಷಪಾತಿ ಎಂದು ಬಣ್ಣಿಸಿದ್ದರು. ಒಂದು ವೀಡಿಯೊದಲ್ಲಿ ಅವರು ಸಂವಿಧಾನವು ‘ವಕ್ಫ್’ ಪದವನ್ನು ಉಲ್ಲೇಖಿಸಿಲ್ಲ, ಆದರೂ ವಕ್ಫ್ ಮಂಡಳಿಗಳು ಅಸ್ತಿತ್ವದಲ್ಲಿವೆ ಎಂದು ವಾದಿಸಿದ್ದರು, ಆದರೆ ದೇವಸ್ಥಾನ ಟ್ರಸ್ಟ್‌ಗಳನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿಲ್ಲ ಎನ್ನುವುದನ್ನು ಅವರು ಕಡೆಗಣಿಸಿದ್ದರು. ಸಂವಿಧಾನದ ವಿಧಿ 26 ಎಲ್ಲ ಧರ್ಮಗಳ ಧಾರ್ಮಿಕ ಸಂಸ್ಥೆಗಳಿಗೆ ರಕ್ಷಣೆ ನೀಡುತ್ತದೆ.
ದೇವಸ್ಥಾನಗಳ ಆಡಳಿತ ಕುರಿತು ಉಪಾಧ್ಯಾಯರ ಹೇಳಿಕೆಗಳು ತಪ್ಪುಗಳಿಂದ ಕೂಡಿವೆ. ಹಿಂದೂ ದೇವಸ್ಥಾನಗಳು ಹಲವಾರು ಕಾನೂನುಗಳಿಂದ ನಿಯಂತ್ರಿತವಾಗಿವೆ, ಆದರೆ ವಕ್ಫ್ ಆಸ್ತಿಗಳು ಏಕ ನಿಯಂತ್ರಣಕ್ಕೆ ಒಳಪಟ್ಟಿವೆ ಎನ್ನುವುದು ಅವರ ವಾದವಾಗಿದೆ. ಹಿಂದೂ ದೇವಸ್ಥಾನಗಳಲ್ಲಿ ಸಂಗ್ರಹವಾಗುವ ಕಾಣಿಕೆಗಳನ್ನು ರಾಜ್ಯ ಸರಕಾರಗಳು ವಶಪಡಿಸಿಕೊಳ್ಳುತ್ತವೆ, ಆದರೆ ಮಸೀದಿಗಳು ಮತ್ತು ಚರ್ಚ್‌ಗಳ ಗೋಜಿಗೆ ಹೋಗುವುದಿಲ್ಲ ಎಂದು ವಾದಿಸಿರುವ ಅವರು, ಮುಂಬೈನ ಸಿದ್ಧಿವಿನಾಯಕ ಮಂದಿರ, ರಾಜಸ್ಥಾನದ ಪುಷ್ಕರ ಮಂದಿರ, ಕಾಶ್ಮೀರದ ವೈಷ್ಣೋದೇವಿ ಮಂದಿರ ಮತ್ತು ತಿರುಪತಿ ದೇವಸ್ಥಾನದಂತಹ ನಿದರ್ಶನಗಳನ್ನು ನೀಡುತ್ತಾರೆ.
ಮುಂಬೈನ ಸಿದ್ಧಿವಿನಾಯಕ ಮಂದಿರವು ಬಾಂಬೆ ಪಬ್ಲಿಕ್ ಟ್ರಸ್ಟ್ಸ್ ಆ್ಯಕ್ಟ್, 1950ರಡಿ ನೋಂದಾಯಿತ ಶ್ರೀ ಸಿದ್ಧಿ ವಿನಾಯಕ ಗಣಪತಿ ಟೆಂಪಲ್ ಟ್ರಸ್ಟ್‌ನಡಿ ಕಾರ್ಯನಿರ್ವಹಿಸುತ್ತದೆ. 1980ರಲ್ಲಿ ಮಹಾರಾಷ್ಟ್ರ ಸರಕಾರವು ‘ಶ್ರೀ ಸಿದ್ಧಿ ವಿನಾಯಕ ಗಣಪತಿ ಟೆಂಪಲ್ ಟ್ರಸ್ಟ್(ಪ್ರಭಾದೇವಿ) ಕಾಯ್ದೆಯನ್ನು ತಂದಿದ್ದು, ಅದು 1980, ಅ.11ರಂದು ಜಾರಿಗೊಂಡಿತ್ತು. ಟ್ರಸ್ಟ್‌ನ ವ್ಯಾಪಕ ಆಸ್ತಿಗಳು ಮತ್ತು ನಿರಂತರ ದಾವೆಗಳಿಂದಾಗಿ ಹೆಚ್ಚುತ್ತಿರುವ ತನ್ನ ಆದಾಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಅದರ ಅಸಾಮರ್ಥ್ಯವನ್ನು ಉಲ್ಲೇಖಿಸಿ ಮಹಾರಾಷ್ಟ್ರ ಸರಕಾರವು ಕಾಯ್ದೆಯನ್ನು ಜಾರಿಗೊಳಿಸಿದ್ದನ್ನು ಸಮರ್ಥಿಸಿಕೊಂಡಿತ್ತು. ಟ್ರಸ್ಟ್‌ನ ಪುನರ‌್ರಚನೆ ಮತ್ತು ಹೆಚ್ಚುವರಿ ಹಣಕಾಸನ್ನು ಬಳಸಿಕೊಂಡು ಭಕ್ತಾದಿಗಳಿಗೆ ಸೌಲಭ್ಯಗಳನ್ನು ಹೆಚ್ಚಿಸಲು ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸರಕಾರದ ಮೇಲ್ವಿಚಾರಣೆಯಡಿ ಆಡಳಿತ ಸಮಿತಿಯ ಸ್ಥಾಪನೆ ನೂತನ ಕಾಯ್ದೆಯ ಉದ್ದೇಶವಾಗಿತ್ತು.
ಸರಕಾರವು ಎಲ್ಲ ದೇಣಿಗೆಗಳನ್ನು ವಶಪಡಿಸಿಕೊಳ್ಳುತ್ತದೆ ಎಂಬ ಆರೋಪಗಳಿಗೆ ವ್ಯತಿರಿಕ್ತವಾಗಿ ಈ ಕಾಯ್ದೆಯು ಕಲಂ 5ರಡಿ ನಿರ್ವಹಣಾ ಸಮಿತಿಯನ್ನು ಒದಗಿಸುತ್ತದೆ. ವಾರ್ಷಿಕ ಬಜೆಟ್‌ಗಳ ಸಿದ್ಧತೆ, ಲೆಕ್ಕ ಪರಿಶೋಧನೆ ಹಾಗೂ ಟ್ರಸ್ಟ್‌ನ ಆಸ್ತಿಗಳು ಮತ್ತು ವ್ಯವಹಾರಗಳ ಸೂಕ್ತ ನಿರ್ವಹಣೆ ಮತ್ತು ಆಡಳಿತವನ್ನು ಖಚಿತ ಪಡಿಸುವ ಹೊಣೆಗಾರಿಕೆಯನ್ನು ಈ ಸಮಿತಿಯು ಹೊಂದಿದೆ. ಕಲಂ 17ರಡಿ ಸ್ಥಾಪನೆಯಾಗಿರುವ ‘ಶ್ರೀ ಸಿದ್ಧಿ ವಿನಾಯಕ ಗಣಪತಿ ಮಂದಿರ ಟ್ರಸ್ಟ್ ಫಂಡ್’ನ್ನು ಸಮಿತಿಯ ಅಧಿಕೃತ ಸದಸ್ಯರು ಅಥವಾ ಅಧಿಕಾರಿಗಳು ನಿರ್ವಹಿಸುತ್ತಾರೆ. ಕಲಂ 18 ನಿಧಿಯನ್ನು ದೇವಸ್ಥಾನದ ನಿರ್ವಹಣೆ, ಆಚರಣೆಗಳು, ಸಮಾರಂಭಗಳು, ಉತ್ಸವಗಳು ಮತ್ತು ಭಕ್ತಾದಿಗಳಿಗೆ ಸೌಲಭ್ಯಗಳನ್ನು ಒದಗಿಸಲು ಬಳಸಿಕೊಳ್ಳಲು ಅವಕಾಶವನ್ನು ನೀಡುತ್ತದೆ. ಈ ನಿಬಂಧನೆಗಳು ದೇಣಿಗೆ ಹಣವನ್ನು ಯಾತ್ರಿಕರ ಸೌಕರ್ಯಕ್ಕಾಗಿ ಬಳಸಲಾಗುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ತೋರಿಸುತ್ತವೆ ಮತ್ತು ಸರಕಾರವು ವಶಪಡಿಸಿಕೊಳ್ಳುತ್ತದೆ ಎಂಬ ಪ್ರತಿಪಾದನೆಗಳನ್ನು ತಳ್ಳಿ ಹಾಕುತ್ತದೆ.
ಮಹಾರಾಷ್ಟ್ರ ವಕ್ಫ್ ಮಂಡಳಿಯಿಂದ ವಕ್ಫ್ ಆಗಿ ಅಧಿಸೂಚಿಸಲ್ಪಟ್ಟ ಹಾಜಿ ಅಲಿ ದರ್ಗಾ ಈ ಕ್ರಮವನ್ನು ಪ್ರಶ್ನಿಸಿತ್ತು ಮತ್ತು ಈ ಸ್ಥಳವನ್ನು ಬಾಂಬೆ ಪಬ್ಲಿಕ್ ಟ್ರಸ್ಟ್ ಕಾಯ್ದೆಯಡಿ ನೋಂದಾಯಿಸಲಾಗಿದೆ ಎಂದು ವಾದಿಸಿತ್ತು. ಈ ವಿವಾದವು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿತ್ತು, ಆದರೆ ಅದು ವಿವಾದವನ್ನು ವಕ್ಫ್ ಮಂಡಳಿಗೆ ಮರಳಿಸಿತ್ತು. ಈ ವಿವಾದ ಇನ್ನೂ ಬಗೆಹರಿದಿಲ್ಲ. ಅದೇನೇ ಇರಲಿ, ಬಾಂಬೆ ಪಬ್ಲಿಕ್ ಟ್ರಸ್ಟ್ ಕಾಯ್ದೆಯು ದತ್ತಿ ಆಯುಕ್ತರ ಮೇಲ್ವಿಚಾರಣೆಯಡಿ ಎಲ್ಲ ಟ್ರಸ್ಟ್ ಗಳಿಗೆ ಹೆಚ್ಚಿನ ಉತ್ತರದಾಯಿತ್ವವನ್ನು ಖಚಿತಪಡಿಸುತ್ತದೆ. ಟ್ರಸ್ಟಿ ಗಳು ನಿಯಮಿತವಾಗಿ ಲೆಕ್ಕಪತ್ರಗಳನ್ನು ನಿರ್ವಹಿಸುವುದು ಮತ್ತು ವಾರ್ಷಿಕ ಲೆಕ್ಕ ಪರಿಶೋಧನೆಗೆ ಒಳಪಡಿಸುವುದು ಕಡ್ಡಾಯವಾಗಿದೆ. ಪಾರದರ್ಶಕತೆ ಮತ್ತು ಸೂಕ್ತ ಆಡಳಿತವನ್ನು ಖಚಿತಪಡಿಸಲು ಲೆಕ್ಕ ಪರಿಶೋಧಕರು ಯಾವುದೇ ಅವ್ಯವಹಾರಗಳು, ಕಾನೂನುಬಾಹಿರ ವೆಚ್ಚಗಳು ಅಥವಾ ದುರ್ವರ್ತನೆಯನ್ನು ವರದಿ ಮಾಡಬೇಕಾಗುತ್ತದೆ.
ವಕ್ಫ್ ಕಾಯ್ದೆ, 1995 ವಕ್ಫ್ ಮಂಡಳಿಗಳಿಗೆ ನಿರಂಕುಶ ಅಧಿಕಾರಗಳನ್ನು ನೀಡುವುದಿಲ್ಲ. ಏಕೈಕ ರಾಷ್ಟ್ರೀಯ ಮಂಡಳಿ ಎಂಬ ಹೇಳಿಕೆಗೆ ವ್ಯತಿರಿಕ್ತವಾಗಿ ಪ್ರತಿಯೊಂದೂ ರಾಜ್ಯವು ತನ್ನದೇ ಆದ ವಕ್ಫ್ ಮಂಡಳಿಯನ್ನು ಹೊಂದಿದೆ. ವಕ್ಫ್ ಆಸ್ತಿಗಳು ಸಂಬಂಧಿಸಿದ ವಕ್ಫ್ ಮಂಡಳಿಯ ಒಡೆತನದಲ್ಲಿದ್ದು, ಮುತವಲ್ಲಿಗಳು ಅಥವಾ ಸಮಿತಿಗಳಿಂದ ನಿರ್ವಹಿಸಲ್ಪಡುತ್ತವೆ. ಕಾಯ್ದೆಯ ಕಲಂ 44ರ ಪ್ರಕಾರ ಮುತವಲ್ಲಿಗಳು ವಾರ್ಷಿಕ ಬಜೆಟ್‌ಗಳನ್ನು ತಯಾರಿಸುವುದು, ವಕ್ಫ್ ಉದ್ದೇಶಗಳಿಗಾಗಿ ನಿಧಿ ಹಂಚಿಕೆ ಮತ್ತು ಆಸ್ತಿಗಳನ್ನು ನಿರ್ವಹಿಸುವುದು ಅಗತ್ಯವಾಗಿದೆ. ಬಜೆಟ್ ಐಟಮ್‌ಗಳು ವಕ್ಫ್ ಉದ್ದೇಶಗಳಿಗೆ ಅಥವಾ ಕಾನೂನು ನಿಬಂಧನೆಗಳಿಗೆ ವ್ಯತಿರಿಕ್ತವಾಗಿದ್ದರೆ ಮಂಡಳಿಯು ಬಜೆಟ್‌ನಲ್ಲಿ ಬದಲಾವಣೆಗಳಿಗೆ ಆದೇಶಿಸಬಹುದು. ಈ ನಿಬಂಧನೆಗಳು ವಕ್ಫ್ ಆಸ್ತಿಗಳು ಮತ್ತು ಅವುಗಳ ಆದಾಯಗಳ ಮೇಲೆ ಯಾವುದೇ ವಿಶೇಷ ಹಕ್ಕುಗಳಿವೆ ಎಂಬ ಹೇಳಿಕೆಗಳನ್ನು ಅಲ್ಲಗಳೆಯುತ್ತವೆ.
ದರ್ಗಾ ಖ್ವಾಜಾ ಸಾಹೇಬ್ ಕಾಯ್ದೆ, 1955 ಅಜ್ಮೀರ್ ದರ್ಗಾ ಮತ್ತು ಅದರ ದತ್ತಿಯ ಆಡಳಿತವನ್ನು ನಿಯಂತ್ರಿಸುತ್ತದೆ. ಕಲಂ 4 ಕೇಂದ್ರ ಸರಕಾರದಿಂದ ನೇಮಕಗೊಂಡ 5ರಿಂದ 9 ಹನಫಿ ಮುಸ್ಲಿಮರನ್ನೊಳಗೊಂಡ ದರ್ಗಾ ಸಮಿತಿಯ ಸ್ಥಾಪನೆಗೆ ಅವಕಾಶ ಕಲ್ಪಿಸಿದೆ. ದರ್ಗಾದ ಆಡಳಿತವನ್ನು ನಿರ್ವಹಿಸುವ ಸಮಿತಿಯು ಸೂಕ್ತ ನಿರ್ವಹಣೆ ಮತ್ತು ದಾನಿಗಳ ಇಷ್ಟದಂತೆ ಹಣ ಹಂಚಿಕೆಯನ್ನು ಮಾಡುತ್ತದೆ. ಪಾರದರ್ಶಕತೆಯನ್ನು ಖಚಿತಪಡಿಸಲು ವಾರ್ಷಿಕ ಲೆಕ್ಕಪರಿಶೋಧನೆ ವರದಿಗಳನ್ನು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಲಾಗುತ್ತದೆ.
ವೈಷ್ಣೋದೇವಿ ಮಂದಿರವು ಆರಂಭದಲ್ಲಿ ಮಹಾರಾಜ ಗುಲಾಬ ಸಿಂಗ್ ಅವರು 1846ರಲ್ಲಿ ಸ್ಥಾಪಿಸಿದ್ದ ಧರ್ಮರಥ ಟ್ರಸ್ಟ್‌ನಿಂದ ನಿರ್ವಹಿಸಲ್ಪಡುತ್ತಿತ್ತು. 1987ರಲ್ಲಿ ಬಂದ ಜಮ್ಮು-ಕಾಶ್ಮೀರ ಶ್ರೀ ಮಾತಾ ವೈಷ್ಣೋದೇವಿ ಮಂದಿರ ಕಾಯ್ದೆ, 1988 ಮಂದಿರದ ಆಡಳಿತವನ್ನು ಉಪ ರಾಜ್ಯಪಾಲರು ಮತ್ತು ಗರಿಷ್ಠ 10 ಹಿಂದೂ ಸದಸ್ಯರನ್ನು ಒಳಗೊಂಡ ಮಂಡಳಿಗೆ ವರ್ಗಾಯಿಸಿತ್ತು. ಕಲಂ 18 ಯಾತ್ರಿಕರ ಕಲ್ಯಾಣಕ್ಕಾಗಿ ಕೆಲಸ ಮಾಡುವುದನ್ನು, ಮಂದಿರವನ್ನು ನಿರ್ವಹಿಸುವುದನ್ನು ಮತ್ತು ನಿಧಿ ರಕ್ಷಣೆಯನ್ನು ಮಂಡಳಿಗೆ ಕಡ್ಡಾಯಗೊಳಿಸಿದೆ.
ಕಾಶ್ಮೀರದ ಶ್ರೀನಗರದಲ್ಲಿರುವ ಹಝರತ್ ಬಾಲ್ ದರ್ಗಾ ವಕ್ಫ್ ಎಂದು ಗೊತ್ತುಪಡಿಸಲಾಗಿದ್ದು, ವಕ್ಫ್ ಕಾಯ್ದೆ ಅಡಿ ಉತ್ತರದಾಯಿಯಾಗಿದೆ.
ತಿರುಪತಿ ದೇವಸ್ಥಾನವು ಆಂಧ್ರಪ್ರದೇಶ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಕಾಯ್ದೆ, 1987ರಡಿ ಕಾರ್ಯ ನಿರ್ವಹಿಸುತ್ತದೆ. ಕಮಿಷನರ್ ಮತ್ತು ತಿರುಮಲ ತಿರುಪತಿ ದೇವಸ್ಥಾನಮ್ಸ್ ಮೇಲ್ವಿಚಾರಣೆಯಡಿ ಮಂದಿರದ ಆಡಳಿತವು ನಡೆಯುತ್ತದೆ. ಕಲಂ 111 ದೇವಸ್ಥಾನದ ನಿಧಿಯನ್ನು ನಿರ್ವಹಣೆ, ಆಚರಣೆಗಳು ಹಾಗೂ ಹಿಂದೂ ಸಂಸ್ಕೃತಿ ಮತ್ತು ಶಿಕ್ಷಣವನ್ನು ಉತ್ತೇಜಿಸಲು ಬಳಸುವುದನ್ನು ಕಡ್ಡಾಯಗೊಳಿಸಿದೆ. ಉತ್ತರದಾಯಿತ್ವ ಖಾತರಿಪಡಿಸಲು ನಿಯಮಿತ ಆಡಿಟಿಂಗ್ ನಡೆಯುತ್ತದೆ.
ದೇವಸ್ಥಾನ ನಿಯಂತ್ರಣ ಕುರಿತು ಬಿಜೆಪಿ ನಿಲುವು ಅಸಮಂಜಸವಾಗಿದೆ. ಉತ್ತರಾಖಂಡದಲ್ಲಿ ಬದರೀನಾಥ, ಕೇದಾರನಾಥ, ಗಂಗೋತ್ರಿ ಹಾಗೂ ಯಮುನೋತ್ರಿಯ ಚತುರ್ಧಾಮಗಳು ಮತ್ತು ಇತರ 49 ದೇವಸ್ಥಾನಗಳನ್ನು ಮುಖ್ಯಮಂತ್ರಿ ಮತ್ತು ಧಾರ್ಮಿಕ ವ್ಯವಹಾರಗಳ ಸಚಿವರ ನೇತೃತ್ವದ ಮಂಡಳಿಯಡಿ ತರಲು ಬಿಜೆಪಿಯು ಚತುರ್ಧಾಮ ದೇವಸ್ಥಾನಂ ಆಡಳಿತ ಕಾಯ್ದೆ, 2019ನ್ನು ಜಾರಿಗೊಳಿಸಿತ್ತು. ಆದರೆ ಅರ್ಚಕರ ಪ್ರತಿಭಟನೆಗಳಿಂದಾಗಿ ಈ ಕಾಯ್ದೆಯನ್ನು ಹಿಂದೆಗೆದುಕೊಳ್ಳಲಾಯಿತು.
ಸರ್ವೋಚ್ಚ ನ್ಯಾಯಾಲಯವು ಪಾರ್ಸಿ ರೆರಾಸ್ಟ್ರಿಯನ್ ಅಂಜುಮನ್ ವಿರುದ್ಧ ಉಪವಿಭಾಗಾಧಿಕಾರಿ/ಸಾರ್ವಜನಿಕ ಟ್ರಸ್ಟ್‌ಗಳ ರಿಜಿಸ್ಟ್ರಾರ್ ಪ್ರಕರಣದಲ್ಲಿ ನೀಡಿದ ತೀರ್ಪಿನ 27ನೇ ಪ್ಯಾರಾದಲ್ಲಿ ‘ನಮ್ಮ ದೇಶದಲ್ಲಿ (ಧಾರ್ಮಿಕ ಅಥವಾ ಸಾಮಾಜಿಕ) ದತ್ತಿಗಳ ಮೇಲೆ ಸಾರ್ವಜನಿಕ ನಿಯಂತ್ರಣವನ್ನು ಶತಮಾನಕ್ಕೂ ಹೆಚ್ಚು ಕಾಲದಿಂದ ಗುರುತಿಸಲಾಗಿದೆ. ಧಾರ್ಮಿಕ ದತ್ತಿಯಲ್ಲಿ ಸರಿಯಾದ ಲೆಕ್ಕಪತ್ರ, ದತ್ತಿಗಳ ಉದ್ದೇಶಕ್ಕೆ ಅನುಗುಣವಾಗಿ ನಿಧಿಯ ವೆಚ್ಚ ಇತ್ಯಾದಿಗಳಿಗಾಗಿ ಸಾರ್ವಜನಿಕ ನಿಯಂತ್ರಣ ಅಗತ್ಯವಾಗಿದೆ. ಇಲ್ಲದಿದ್ದರೆ ಸಾರ್ವಜನಿಕ ದೇಣಿಗೆ ಅಥವಾ ಉಡುಗೊರೆ ಮೂಲಕ ಬಂದಿರುವ ನಿಧಿ ಬೇರೆಡೆಗೆ ತಿರುಗಿಸಲ್ಪಡುವ ಸಾಧ್ಯತೆ ಇದೆ. ಅದಕ್ಕಾಗಿ ನಿಯೋಜಿತ ಆಯುಕ್ತ/ರಿಜಿಸ್ಟ್ರಾರ್‌ರಂತಹ ಸರಕಾರಿ ಅಧಿಕಾರಿಗಳು ಲೆಕ್ಕಪತ್ರ ಸರಿಯಾಗಿದೆ ಹಾಗೂ ನಿಧಿಯನ್ನು ಘೋಷಿತ ಧ್ಯೇಯ ಹಾಗೂ ಉದ್ದೇಶಗಳಿಗಾಗಿ ಬಳಸಲಾಗಿದೆ ಹಾಗೂ ಧಾರ್ಮಿಕ ಆಚರಣೆಯನ್ನು ಸರಿಯಾಗಿ ಪಾಲಿಸಲಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಆದರೆ ಇಂತಹ ನಿಯಂತ್ರಣವು ದತ್ತಿಗೆ ನ್ಯಾಯಯುತವಾಗಿ ಸೇರಿದ ಹಣವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಸರಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಪಾರದರ್ಶಕತೆಯನ್ನು ಮತ್ತು ದತ್ತಿಯ ಉದ್ದೇಶಗಳಿಗೆ ಅನುಗುಣವಾಗಿ ನಿಧಿಯನ್ನು ಬಳಸಲಾಗುತ್ತದೆ ಎನ್ನುವುದನ್ನು ಖಚಿತಪಡಿಸಲು ಧರ್ಮ ಭೇದವಿಲ್ಲದೆ ಎಲ್ಲ ಧಾರ್ಮಿಕ ದತ್ತಿಗಳಿಗೆ ನಿಯಂತ್ರಣಗಳು ಏಕರೂಪವಾಗಿ ಅನ್ವಯಗೊಳ್ಳುತ್ತವೆ ಎನ್ನುವುದು ಸರಿಯಾದ ನಿಲುವು. ಯಾವುದೇ ಸರಕಾರವು ತನ್ನ ಸ್ವಂತ ಬಳಕೆಗಾಗಿ ದತ್ತಿಗಳ ಹಣವನ್ನು ವಿನಿಯೋಗಿಸಲು ಸಾಧ್ಯವಿಲ್ಲ.
ಅಶ್ವಿನಿ ಉಪಾಧ್ಯಾಯರಂತಹ ವ್ಯಕ್ತಿಗಳಿಂದ ತಪ್ಪುದಾರಿಗೆಳೆಯುವ ಹೇಳಿಕೆಗಳು ಕೋಮು ಸೌಹಾರ್ದಕ್ಕೆ ಧಕ್ಕೆಯನ್ನುಂಟು ಮಾಡುತ್ತವೆ. ಭ್ರಾತೃತ್ವ ಮತ್ತು ಏಕತೆಯನ್ನು ಬೆಳೆಸಲು ಇಂತಹ ತಪ್ಪು ಪ್ರತಿಪಾದನೆಗಳಿಂದ ದೂರವಿರುವುದು ಅಗತ್ಯವಾಗಿದೆ.
- ಎಸ್.ಎ.ಎಚ್. ರಝ್ವಿ,
ನ್ಯಾಯವಾದಿ, ಬೆಂಗಳೂರು.