ಫಲಿತಾಂಶ: ಗೆಲುವಿನಂತಹ ಸೋಲು, ಸೋಲಿನಂತಹ ಗೆಲುವು

ಈಗ ಸಾಪೇಕ್ಷವಾಗಿ ನೈತಿಕವಾಗಿ ಸೋತಿರುವ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಸಾಕಷ್ಟು ನಾಟಕವಾಡುವ ಎಲ್ಲಾ ಸಾಧ್ಯತೆ ಇದೆ. ಮಿತ್ರಪಕ್ಷಗಳೊಂದಿಗೆ ಅಧಿಕಾರ ಹಂಚಿಕೊಂಡು ಗೊತ್ತಿಲ್ಲದ ಮೋದಿ ಈಗ ಅನಿವಾರ್ಯವಾಗಿರುವ ಸಂದರ್ಭದಲ್ಲಿ ಪ್ರಧಾನಿಯಾಗಬಲ್ಲರೇ? ಮೋದಿ ಪ್ರಧಾನಿಯಾಗದಿದ್ದರೆ ಬರಲಿರುವ ಸಾಲು ಸಾಲು ರಾಜ್ಯ ಶಾಸನಾ ಸಭಾ ಚುನಾವಣೆಗಳಲ್ಲಿ ಮೋದಿ ಬಿಜೆಪಿ ಗೆಲ್ಲುವುದೇ? ಅಥವಾ ‘ಇಂಡಿಯಾ’ ಕೂಟ ಅಧಿಕಾರ ರಚಿಸಲು ಬಿಟ್ಟು ಕೆಲವೇ ತಿಂಗಳಲ್ಲಿ ‘ಇಂಡಿಯಾ’ ಒಕ್ಕೂಟದೊಳಗೆ ತಿಕ್ಕಾಟ ತಂದು, ‘ಇಂಡಿಯಾ ಒಕ್ಕೂಟ ಉರುಳುವಂತೆ ಮಾಡಿ ಹೊಸ ಚುನಾವಣೆಯನ್ನು ಸ್ಥಿರ ಸರಕಾರದ ಹೆಸರಲ್ಲಿ ಎದುರಿಸಿ ಪೂರ್ಣ ಹಾಗೂ ಹೆಚ್ಚು ಬಹುಮತದೊಂದಿಗೆ ಅಧಿಕಾರಕೆ ಬರುವ ಷಡ್ಯಂತ್ರ ರೂಪಿಸುವುದೇ? ಇಂಡಿಯಾ ಒಕ್ಕೂಟ ಅದಕ್ಕೆ ಬಲಿಯಾಗುವುದೇ?

Update: 2024-06-05 02:42 GMT
Editor : Safwan | Byline : ಶಿವಸುಂದರ್

ಮೋದಿಯ ಪರ ಮತ್ತು ವಿರೋಧದ ಅದರಲ್ಲೂ ಮೋದಿಯ ಪರವಾದ ಉತ್ಪ್ರೇಕ್ಷಿತ ಹಾಗೂ ಪ್ರಾಯೋಜಿತವಾದ ಸಕಲ ಎಕ್ಸಿಟ್ ಪೋಲ್ ಮತ್ತು ಒಪಿನಿಯನ್ ಪೋಲ್ಗಳ ಸಮೀಕ್ಷೆಯನ್ನೂ ಭಾರತೀಯ ಮತದಾರರು ಸುಳ್ಳು ಮಾಡಿ ಫ್ಯಾಶಿಸ್ಟ್ ಸರ್ವಾಧಿಕಾರಿ ನರೇಂದ್ರ ಮೋದಿಯ ಗರ್ವಭಂಗ ಮಾಡಿದ್ದಾರೆ.

ಮೋದಿ ಮತ್ತವರ ಪಟಾಲಂ ಈ ಬಾರಿ ಎನ್ಡಿಎ ಒಕ್ಕೂಟ 400ರ ಗಡಿಯನ್ನು ದಾಟುತ್ತದೆಂದೂ, ಬಿಜೆಪಿಯೊಂದೇ 370 ಸೀಟುಗಳನ್ನು ಪಡೆದುಕೊಳ್ಳುತ್ತದೆಂದೂ ಕೊಚ್ಚಿಕೊಳ್ಳುತ್ತಿದರೂ, ಈ ಲೇಖನ ಬರೆಯುತ್ತಿರುವ ವೇಳೆಗೆ ಬಿಜೆಪಿ ಬಹುಮತಕ್ಕೆ ಬೇಕಿರುವ 272ರ ಗಡಿಯನ್ನೂ ಕೂಡ ಮುಟ್ಟಲಾಗದೆ 240-245 ಸೀಟುಗಳ ಆಸುಪಾಸಿನಲ್ಲಿ ತೇಕುತ್ತಿದೆ. ಅದರ ಮಿತ್ರಪಕ್ಷಗಳು ವಿವಿಧ ರಾಜ್ಯಗಳಲ್ಲಿ 40-50 ಸೀಟುಗಳನ್ನು ಪಡೆದುಕೊಳ್ಳಲು ಹರಸಾಹಸ ಮಾಡುತ್ತಿವೆ.

ಕಳೆದ ಬಾರಿ ಬಿಜೆಪಿಗೆ 303 ಸೀಟುಗಳು ಮತ್ತು ಎನ್ಡಿಎ ಒಕ್ಕೂಟಕ್ಕೆ 353 ಸೀಟುಗಳು ಬಂದಿದ್ದವು. ಹೀಗಾಗಿ ಬಿಜೆಪಿ ಮತ್ತು ಎನ್ಡಿಎ ಒಕ್ಕೂಟ 2019ಕ್ಕೆ ಹೋಲಿಸಿದರೆ 2024ರಲ್ಲಿ 50ಕ್ಕೂ ಹೆಚ್ಚು ಸೀಟುಗಳನ್ನು ಕಳೆದುಕೊಂಡಿದೆ. 2019ರಲ್ಲಿ ಶೇ. 37.36ರಷ್ಟು ಮತಗಳನ್ನು ಪಡೆದುಕೊಂಡಿದ್ದರೆ ಈ ಬಾರಿ ಅದಕ್ಕಿಂತ ಹೆಚ್ಚು ಮತಗಳನ್ನು ಪಡೆದುಕೊಂಡಿಲ್ಲ. ಈ ಮೂಲಕ ಮೋದಿ ಸರಕಾರದ ಜನವಿರೋಧಿ ನೀತಿಗಳ ಬಗ್ಗೆ ತಮಗಿರುವ ಅಸಮಾಧಾನವನ್ನು ಮತ್ತು ಅಸಮ್ಮತಿಯನ್ನು ಮತ್ತು ಚುನಾವಣೆಯ ಉದ್ದಕ್ಕೂ ಮೋದಿ ನೇತೃತ್ವದಲ್ಲಿ ಇಡೀ ಬಿಜೆಪಿ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ತೋರಿದ ಉಪೇಕ್ಷೆ ಮತ್ತು ಜನರ ಬಗ್ಗೆ ತೋರಿದ ದುರಹಂಕಾರಕ್ಕೆ ಭಾರತದ ಜನತೆ ಬಲವಾದ ಎಚ್ಚರಿಕೆಯನ್ನು ಹಾಗೂ ಗುದ್ದನ್ನು ಕೊಟ್ಟಿದ್ದಾರೆ. ಹೀಗಾಗಿ ಅಂತಿಮವಾಗಿ ಸಾಂವಿಧಾನಿಕ ಅಂಕಗಣಿತದ ಪ್ರಕಾರ ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟವೇ ಮೂರನೇ ಬಾರಿ ಮೋದಿ ನೇತೃತ್ವದಲ್ಲಿ ಸರಕಾರ ರಚಿಸಿದರೂ ಈ ಫಲಿತಾಂಶ ಮಾತ್ರ ವೈಯಕ್ತಿಕವಾಗಿ ಮೋದಿಗೆ ಮತ್ತು ಬಿಜೆಪಿಗೆ ಒಂದು ನೈತಿಕ ಮತ್ತು ರಾಜಕೀಯ ಸೋಲೆಂಬುದರಲ್ಲಿ ಎರಡು ಮಾತಿಲ್ಲ.

ಅದರಲ್ಲೂ ವಿಶೇಷವಾಗಿ ಮಸೀದಿ ಕೆಡವಿದ ಜಾಗದಲ್ಲಿ ಅವಸರವಾಗಿ ಅರೆಬರೆ ನಿರ್ಮಾಣಗೊಂಡಿದ್ದ ರಾಮಮಂದಿರ ಉದ್ಘಾಟನೆ ಮಾಡಿಯಾದ ಮೇಲೆ ಏನಿಲ್ಲವೆಂದರೂ ಇಡಿ ಉತ್ತರ ಭಾರತದಲ್ಲಿ ಗೆಲುವು ನಿಶ್ಚಿತ ಎಂದು ಬಿಜೆಪಿ ಭಾವಿಸಿತ್ತು. ಆದರೆ ಉತ್ತರ ಪ್ರದೇಶದಲ್ಲಿ 2014ರಲ್ಲಿ 72 ಸೀಟುಗಳನ್ನು, 2019ರಲ್ಲಿ 63 ಸೀಟುಗಳನ್ನು ಪಡೆದಿದ್ದ ಎನ್ಡಿಎ ಈ ಬಾರಿ 35ಕ್ಕಿಂತಲೂ ಕಡಿಮೆ ಸೀಟುಗಳನ್ನು ಪಡೆಯುತ್ತಿದೆ. ರಾಮಮಂದಿರ ಇರುವ ಅಯೋಧ್ಯೆಯ ಲೋಕಸಭಾ ಕ್ಷೇತ್ರವಾದ ಫೈಝಾಬಾದಿನಲ್ಲೂ ಬಿಜೆಪಿ ಅಭ್ಯರ್ಥಿ ಸೋತಿದ್ದಾರೆ. ನಿರಂತರ ಮುಸ್ಲಿಮ್ ದೂಷಣೆ ಮತ್ತು ಸಂವಿಧಾನ ಬದಲಾವಣೆಯ, ಕ್ರಮೇಣವಾಗಿ ಮೀಸಲಾತಿ ರದ್ದತಿಯ ಯೋಜನೆಗಳು ಉತ್ತರ ಪ್ರದೇಶದ ದಲಿತರು, ಮುಸ್ಲಿಮರು ಹಾಗೂ ಅತಿ ಹಿಂದುಳಿದವರಲ್ಲಿ ಭಯವನ್ನೇ ಹುಟ್ಟುಹಾಕಿತ್ತು. ಸ್ಥಳೀಯವಾಗಿ ಯುವಜನತೆಯ ನಿರುದ್ಯೋಗ, ಅಗ್ನಿವೀರ್ ಯೋಜನೆ, ರೈಲ್ವೆ ಭರ್ತಿಯಲ್ಲಿ ಮೋಸ ಇತ್ಯಾದಿಗಳು ತೀವ್ರವಾದ ಅಸಮಾಧಾನವನ್ನೇ ಹುಟ್ಟಿಹಾಕಿದಂತೆ ಕಾಣುತ್ತದೆ. ಆದ್ದರಿಂದ ಉತ್ತರ ಪ್ರದೇಶ ಒಂದರಲ್ಲೇ 2019ಕ್ಕೆ ಹೋಲಿಸಿದರೆ ಬಿಜೆಪಿಗೆ 20-25 ಸೀಟುಗಳ ನಷ್ಟವಾಗಿದೆ. ಅದಕ್ಕೆ ಪ್ರತಿಯಾಗಿ ಸಂವಿಧಾನ ರಕ್ಷಣೆ, ಜಾತಿ ಜನಗಣತಿ, ಸರಕಾರಿ ಉದ್ಯೋಗಗಳ ಭರ್ತಿ, ಇತ್ಯಾದಿಗಳ ಭರವಸೆಯನ್ನು ಇತ್ತ ಕಾಂಗ್ರೆಸ್-ಎಸ್ಪಿ ‘ಇಂಡಿಯಾ’ ಒಕ್ಕೂಟಕ್ಕೆ ಉತ್ತರ ಪ್ರದೇಶದ ಜನತೆ 43ಕ್ಕೂ ಹೆಚ್ಚು ಸೀಟುಗಳನ್ನು ನೀಡುತ್ತಿದ್ದಾರೆ.

ಆದರೆ ಜನವಿರೋಧಿ ಕಾರ್ಪೊರೇಟ್ ವಾದಿ ಆರ್ಥಿಕ ನೀತಿಗಳ ಜನಕನಾದ ಕಾಂಗ್ರೆಸ್ ಈ ಆಶಯಗಳನ್ನು ಈಡೇರಿಸಬಲ್ಲದೇ? ಈಡೇರಿಸದಿದ್ದರೆ ಕಾಂಗ್ರೆಸ್ ಬಗೆಗಿನ ಸಮಾಧಾನ ಬಿಜೆಪಿಗೆ ಬಳಕೆೆಯಾಗುವುದಿಲ್ಲವೇ? ಜಗತ್ತಿನಾದ್ಯಂತ ಇಂತಹ ಫ್ಯಾಶಿಸ್ಟ್ ಶಕ್ತಿಗಳು ಬೆಳೆದಿರುವುದೇ ಕಾಂಗ್ರೆಸ್ ಮತ್ತು ಎಡಶಕ್ತಿಗಳ ವೈಫಲ್ಯ ಮತ್ತು ಭ್ರಷ್ಟಾಚಾರಗಳನ್ನು ಆಧರಿಸಿಯಲ್ಲವೇ?

ಮೋದಿಯ ಗರ್ವಭಂಗವಾದ ಸಂತೋಷದಲ್ಲಿ ಈ ಪ್ರಶ್ನೆಗಳು ನೀಡುವ ಐತಿಹಾಸಿಕ ಎಚ್ಚರವನ್ನು ಮರೆತರೆ ಮತ್ತೊಮ್ಮೆ ಹೊಸ ಮೋದಿ ಹೊಸ ಮೋಸದ ಶಕ್ತಿಯೊಂದಿಗೆ ಉದ್ಭವವಾಗುತ್ತಾರೆ.

ಉಳಿದಂತೆ ಪ. ಬಂಗಾಳದಲ್ಲೂ ಬಿಜೆಪಿ ಅತಿ ದೊಡ್ಡ ಮುಖಭಂಗವನ್ನು ಅನುಭವಿಸಿದೆ. ಹಾಗೆಯೇ ಹರ್ಯಾಣದಲ್ಲಿ ಮತ್ತು ರಾಜಸ್ಥಾನದಲ್ಲೂ ಜನರು ಮೋದಿ ಆಡಳಿತದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿರುವುದು 2019ಕ್ಕೆ ಹೋಲಿಸಿದಲ್ಲಿ ಬಿಜೆಪಿ ಅರ್ಧಕ್ಕರ್ಧ ಸ್ಥಾನಗಳನ್ನು ಆ ರಾಜ್ಯಗಳಲ್ಲಿ ಕಳೆದುಕೊಳ್ಳುತ್ತಿರುವುದರಲ್ಲಿ ಸ್ಪಷ್ಟವಾಗಿದೆ. ಅದೇರೀತಿ ಶತಾಯಗತಾಯ ಅಧಿಕಾರವನ್ನು ಪಡೆದುಕೊಳ್ಳಲು ಮಹಾರಾಷ್ಟ್ರದಲ್ಲಿ ಪಕ್ಷಗಳನ್ನು ಒಡೆದು ಪರಮ ಭ್ರಷ್ಟಾಚಾರಿಗಳನ್ನು ಸೇರಿಸಿಕೊಂಡು ಸರಕಾರ ರಚಿಸಿದ ಅನೈತಿಕತೆಯ ಬಗ್ಗೆಯೂ ಜನತೆ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದಾರೆ.

ಈ ಬಾರಿ ಚುನಾವಣೆಯಲ್ಲಿ ಮೋದಿಯ ಬಗ್ಗೆ ರಾಷ್ಟ್ರದ ಅಸಮ್ಮತಿಯನ್ನು ಪ್ರಧಾನವಾಗಿ ಮತ್ತು ಸ್ಪಷ್ಟವಾಗಿ ವ್ಯಕ್ತಪಡಿಸಿರುವುದು ಈ ರಾಜ್ಯಗಳೇ. ಈ ರಾಜ್ಯಗಳಲ್ಲೇ ಮೋದಿ ಮತ್ತು ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡು 400 ಗಡಿ ದಾಟುವ ಕನಸನ್ನು ಕಂಡಿದ್ದರು.

ಇವಿಷ್ಟು ಈ ಫಲಿತಾಂಶ ಒದಗಿಸುವ ತಾತ್ಕಾಲಿಕ ನಿರಾಳ.

ವಿವರಗಳಲ್ಲಿ ಉಸಿರಾಡುತ್ತಿರುವ ಹಿಂದುತ್ವ-ಹೊಸ ಹುತ್ತಗಳು

ಆದರೆ ಈ ಫಲಿತಾಂಶವು ಫ್ಯಾಶಿಸಂ ಉಳಿದಂತೆ ತನ್ನ ನೆಲೆಯನ್ನು ಗಟ್ಟಿಗೊಳಿಸುತ್ತಿರುವುದನ್ನೂ ಹಾಗೂ ಹೊಸಹುತ್ತಗಳಿಗೆ ವಿಸ್ತರಿಸುತ್ತಿರುವುದನ್ನೂ ಎತ್ತಿ ತೋರಿಸುತ್ತಿದೆ.

ಮೊದಲನೆಯದಾಗಿ ಬಿಜೆಪಿಯ ಒಟ್ಟಾರೆ ಸೀಟುಗಳ ಸಂಖ್ಯೆ ಕಡಿಮೆಯಾಗಿದ್ದರೂ ಅದರ ವೋಟು ಪ್ರಮಾಣ ಕಡಿಮೆಯಾಗಿಲ್ಲ. 2019ರಲ್ಲಿ ಶೇ. 67ರಷ್ಟು ಮತದಾನವಾಗಿತ್ತು. ಅಂದರೆ 61 ಕೋಟಿ ಜನ ಮತದಾನ ಮಾಡಿದ್ದರು. ಅದರಲ್ಲಿ ಬಿಜೆಪಿ ಎಲ್ಲಾ ಪಕ್ಷಗಳಿಗಿಂತ ಅತಿ ಹೆಚ್ಚು ಶೇ. 37.36ರಷ್ಟು ವೋಟುಗಳನ್ನು ಅಂದರೆ 22 ಕೋಟಿ ಮತದಾರರ ಬೆಂಬಲವನ್ನು ಪಡೆದುಕೊಂಡಿತ್ತು. 2024ರಲ್ಲಿ ಅಂದಾಜು 64 ಕೋಟಿ ಮತದಾರರು ವೋಟು ಹಾಕಿದ್ದಾರೆ. ಈ ಬಾರಿಯೂ ಬಿಜೆಪಿ ಹೆಚ್ಚೂ ಕಡಿಮೆ ಅಷ್ಟೇ ಮತಗಳನ್ನು ಅಂದರೆ ಶೇ. 37ರಷ್ಟು ಮತಗಳನ್ನು ಪಡೆದುಕೊಂಡಿದೆ. ಈ ಲೇಖನ ಬರೆಯುವ ವೇಳೆಗೆ ಇನ್ನು ಕೆಲವೇ ಕೋಟಿಗಳಷ್ಟು ಮತಗಳ ಎಣಿಕೆ ಬಾಕಿಯಿದ್ದರೂ ಈಗಾಗಲೇ ಬಿಜೆಪಿ 23 ಕೋಟಿಯಷ್ಟು ಮತಗಳನ್ನು ದಾಖಲಿಸಿದೆ. ಅಂದರೆ ಈಗಲೂ ಬಿಜೆಪಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿರುವ ಏಕೈಕ ಪಕ್ಷವಾಗಿದೆ.

ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಹರ್ಯಾಣದಂತಹ ರಾಜ್ಯಗಳಲ್ಲಿ ಬಿಜೆಪಿ ಸ್ಥಾನ ಹಾಗೂ ಮತಗಳ ನಷ್ಟ ಅನುಭವಿಸುತ್ತಿದ್ದರೂ ಪೂರ್ವದ ರಾಜ್ಯಗಳಲ್ಲಿ ಮತ್ತು ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದ ರಾಜ್ಯಗಳೆಂದು ಹೆಸರು ಪಡೆದಿರುವ ದಕ್ಷಿಣದ ರಾಜ್ಯಗಳಲ್ಲಿ ಪ್ರಬಲವಾಗಿ ವಿಸ್ತರಿಸುತ್ತಿದೆ.

ಪೂರ್ವ ಭಾರತ-ಹಿಂದುತ್ವದ ಬದಲು ರಾಜಧಾನಿ?

ಬಿಹಾರದಲ್ಲಿ ಹಿಂದುತ್ವ ರಾಜಕಾರಣಕ್ಕೆ ಬಲವಾದ ಸವಾಲು ಹಾಕಿದ್ದ ಆರ್ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳ ಕೂಟ ನಿರೀಕ್ಷಿತ ಸಾಧನೆಯನ್ನು ಮಾಡಿಲ್ಲ. ವಾಸ್ತವವಾಗಿ ಜೆಡಿಯುನ ನಿತೀಶ್ ಕುಮಾರ್ ‘ಇಂಡಿಯಾ’ ಒಕ್ಕೂಟ ತೊರೆದು ಎನ್ಡಿಎ ಸೇರಿದ ಮೇಲೆ ಜನರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದೇ ಭಾವಿಸಲಾಗಿತ್ತು. ಕಳೆದ ಬಾರಿ ನಿತೀಶ್ ಮತ್ತು ಬಿಜೆಪಿಯ ಬಿಹಾರದ ಎನ್ಡಿಎ 40ರಲ್ಲಿ 39 ಸ್ಥಾನಗಳನ್ನು ಪಡೆದುಕೊಂಡಿತ್ತು. ಆದರೆ ಈ ಬಾರಿ ಅದು 25ರ ಗಡಿದಾಟುವುದಿಲ್ಲ ಎಂದು ಭಾವಿಸಲಾಗಿತ್ತು. ಆದರೆ ಈ ಬಾರಿ 30 ಸ್ಥಾನಗಳನ್ನು ದಾಟುವ ಸಂಭವ ಕಾಣುತ್ತಿದೆ. ‘ಇಂಡಿಯಾ’ ಹತ್ತರ ಗಡಿ ದಾಟಲು ಹರಸಾಹಸ ಪಡುತ್ತಿದೆ.

ಅತ್ಯಂತ ಆಶ್ಚರ್ಯಜನಕವಾಗಿರುವುದು ಬಿಜೆಪಿ ತನ್ನ ಕೋಮುವಾದಿ ಹಿಂದುತ್ವ ರಾಜಕಾರಣದ ಮೂಲಕ ಒಡಿಶಾವನ್ನು ಆವರಿಸುತ್ತಿರುವ ರೀತಿ. 2019ರಲ್ಲಿ ಒಡಿಶಾದ 21 ಲೋಕಸಭಾ ಸೀಟುಗಳಲ್ಲಿ 12 ಒಡಿಶಾದ ಪ್ರಾದೇಶಿಕ ಪಕ್ಷವಾಗಿರುವ ಬಿಜು ಜನತಾದಳದ ಪಾಲಾಗಿದ್ದರೆ, 8 ಬಿಜೆಪಿಯ ಪಾಲಾಗಿತ್ತು. ಒಂದು ಕಾಂಗ್ರೆಸ್. 2024ರಲ್ಲಿ ಈ ಲೇಖನವನ್ನು ಬರೆಯುವ ವೇಳೆಗೆ ಬಿಜೆಪಿ 19 ಸ್ಥಾನಗಳನ್ನು ಮತ್ತು ಬಿಜು ಜನತಾ ದಳ ಮತ್ತು ಕಾಂಗ್ರೆಸ್ ತಲಾ ಒಂದೊಂದು ಸ್ಥಾನವನ್ನು ಮಾತ್ರ ಪಡೆದುಕೊಂಡಿದೆ. ಅಷ್ಟು ಮಾತ್ರವಲ್ಲ ಲೋಕಸಭಾ ಚುನಾವಣೆಯೊಂದಿಗೆ ನಡೆದ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲೂ 147 ಸ್ಥಾನಗಳಲ್ಲಿ ಬಿಜೆಪಿ 78 ಸ್ಥಾನಗಳನ್ನು ಪಡೆದುಕೊಂಡು ಅಧಿಕಾರಕ್ಕೆ ಬರುತ್ತಿದೆ. ಈ ಹಿಂದೆ ಬಿಜೆಡಿ ಮತ್ತು ಬಿಜೆಪಿ ಮೈತ್ರಿಯಲ್ಲಿತ್ತು. ಆದರೆ 2008ರಲ್ಲಿ ಬಿಜೆಪಿ ಒಡಿಶಾದ ಕ್ರೈಸ್ತ ಆದಿವಾಸಿಗಳ ಮೇಲೆ ನಡೆಸಿದ ಕೋಮುವಾದಿ ಹತ್ಯಾಕಾಂಡವನ್ನು ಖಂಡಿಸಿ ಬಿಜೆಡಿ ಬಿಜೆಪಿಯೊಂದಿಗೆ ತನ್ನ ಮೈತ್ರಿಯನ್ನು ಮುರಿದುಕೊಂಡಿತ್ತು. ಆದರೆ ಒಡಿಶಾದ ಗಣಿಧಣಿಗಳೇ ಬಿಜೆಪಿ ಮತ್ತು ಬಿಜೆಡಿಯ ಪೋಷಕರೂ ಅಗಿರುವುದರಿಂದ ಲೋಕಸಭೆಯಲ್ಲಿ ಬಿಜೆಪಿಗೆ ಬಿಜೆಡಿಯ ಅನೌಪಚಾರಿಕ ಬೆಂಬಲ ಬೇಷರತ್ತಾಗಿ ಮುಂದುವರಿದಿತ್ತು. ಈಗ ಬಿಜೆಡಿಯನ್ನು ಹಂತಹಂತವಾಗಿ ನಿವಾರಿಸಿಕೊಂಡಿರುವ ಬಿಜೆಪಿಗೆ ಒಡಿಶಾ ಕಾರ್ಪೊರೇಟ್ ಹಿಂದುತ್ವವಾದಿ ರಾಜಕಾರಣಕ್ಕೆ ಅಡೆತಡೆಯಿಲ್ಲದ ನೆಲೆಯಾಗಲಿದೆ.

ಬಿಜೆಪಿಯ-ಹಿಂದುತ್ವದ

ದಕ್ಷಿಣ ದಂಡಯಾತ್ರೆ ಗೆಲ್ಲುತ್ತಿದೆಯೇ?

ಆಂಧ್ರಪ್ರದೇಶದಲ್ಲಿ 2019ರಲ್ಲಿ ಬಿಜೆಪಿಗೆ NOTAಗಿಂತಲೂ ಕಡಿಮೆ ವೋಟುಗಳು ಬಂದಿದ್ದವು. ಈಗ ಟಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡು ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದುಕೊಂಡಿದೆ. ಬಿಜೆಪಿಯೊಂದಿಗೆ ಟಿಡಿಪಿ ಮೈತ್ರಿ ಮಾಡಿಕೊಂಡಿರುವುದು ಭವ್ಯ ಅಧುನಿಕ ಅಭಿವೃದ್ಧಿ ಹೊಂದಿದ ಹಿಂದೂ ರಾಷ್ಟ್ರಕ್ಕಾಗಿ ಎಂದು ಟಿಡಿಪಿಯ ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ. 1999ರಲ್ಲಿ ಬಿಜೆಪಿಯೊಂದಿಗೆ ಮೈತ್ರಿಯಲ್ಲಿದ್ದ ಟಿಡಿಪಿ ಗುಜರಾತ್ ನರಮೇಧವನ್ನೇನೂ ವಿರೋಧಿಸಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇಡೀ ಪ್ರಭುತ್ವವನ್ನು ಹೇಗೆ ಕಾರ್ಪೊರೇಟ್ಗಳ ಪರವಾಗಿ ಸೇವೆಗಿಡಬಹುದು ಎಂಬುದಕ್ಕೆ ನಾಯ್ಡು ಆಡಳಿತ ಒಂದು ಮಾದರಿಯಾಗಿತ್ತು.

ತೆಲಂಗಾಣದಲ್ಲಿ ಶಾಸನ ಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಬಿಆರ್ಎಸ್ ಅನ್ನು ಸೋಲಿಸಿ ಭರ್ಜರಿ ಜಯ ಸಾಧಿಸಿತ್ತು. ಆದರೆ ಆ ಶಾಸನ ಸಭೆಯ ಚುನಾವಣೆಯಲ್ಲೂ ಬಿಜೆಪಿ ತನ್ನ ವೋಟು ಶೇರನ್ನು ಶೇ. 6ರಿಂದ ಶೇ. 12ಕ್ಕೆ ಏರಿಸಿಕೊಂಡಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ 17 ಸ್ಥಾನಗಳಲ್ಲಿ 4 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈಗ 2024ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮ್ ಜನಸಂಖ್ಯೆ ಸಾಪೇಕ್ಷವಾಗಿ ಹೆಚ್ಚಿರುವ ಇಡೀ ಉತ್ತರ ತೆಲಂಗಾಣದಲ್ಲಿ ಬಿಜೆಪಿ ಅಲೆಯೋಪಾದಿಯಲ್ಲಿ 8 ಸ್ಥಾನಗಳನ್ನು ಗೆದ್ದಿದೆ. ವಿಶೇಷವಾಗಿ ಕೋಮು ಧ್ರುವೀಕರಣದ ರಾಜಕಾರಣದ ಮೂಲಕ ಹಾಗೂ ಗೆಲುವಿನ ಅಂತರ ಐದು ಕ್ಷೇತ್ರಗಳಲ್ಲಿ ಒಂದೂವರೆ ಲಕ್ಷಕ್ಕಿಂತ ಹೆಚ್ಚು.

ಕರ್ನಾಟಕದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸೀಟು ಮಾತ್ರ ಪಡೆದಿತ್ತು. ಆದರೆ 2023ರಲ್ಲಿ ಬಿಜೆಪಿ 223 ಶಾಸನಾ ಸಭಾ ಸೀಟುಗಳಲ್ಲಿ 135 ಸೀಟುಗಳನ್ನು ಗೆದ್ದಿತ್ತು. ಶೇ. 43ರಷ್ಟು ವೋಟು ಶೇರುಗಳನ್ನು ಪಡೆದಿತ್ತು. ಆದರೆ ಆಗಲೂ ಬಿಜೆಪಿ ಶೇ. 36ರಷ್ಟು ವೋಟು ಶೇರುಗಳನ್ನು ಪಡೆದಿತ್ತು. ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಯೋಜನೆ ಇತ್ಯಾದಿ ಯೋಜನೆಗಳ ಜನಪ್ರಿಯತೆಯಿಂದಾಗಿ ಕಾಂಗ್ರೆಸ್ ಈ ಬಾರಿ ಬಿಜೆಪಿಗಿಂತ ಅಧಿಕ ಸೀಟುಗಳನ್ನು ಲೋಕಸಭಾ ಚುನಾವಣೆಯಲ್ಲಿ ಪಡೆಯಬಹುದು ಎಂದು ಹಲವು ಸರ್ವೇಗಳು ಹೇಳಿದ್ದವು. ಆದರೆ ಅಂತಿಮವಾಗಿ ಎಲ್ಲರ ನಿರೀಕ್ಷೆಯೂ ತಲೆಕೆಳಗಾಗಿ ಬಿಜೆಪಿ-ಜೆಡಿಎಸ್ ಒಕ್ಕೂಟಕ್ಕೆ 19 ಸೀಟುಗಳು ಮತ್ತು ಕಾಂಗ್ರೆಸ್ಗೆ ಕೇವಲ 9 ಸೀಟುಗಳು ಮಾತ್ರ ಬಂದಿವೆ. ಬಿಜೆಪಿ-ಜೆಡಿಎಸ್ ಮೈತ್ರಿ ಕೂಟದ ವೋಟು ಶೇರು ಶೇ. 51ಕ್ಕಿಂತ ಜಾಸ್ತಿ ಇದೆ. ಸೂರ್ಯ, ಕಾಗೇರಿ, ಶೋಭಾ, ಶೆಟ್ಟರ್ರಂತಹ ಕೂಗುಮಾರಿಗಳು 2 ಲಕ್ಷಕ್ಕಿಂತಲೂ ಅಂತರದಿಂದ ಈ ಬಾರಿಯೂ ಗೆದ್ದಿದ್ದಾರೆ. ಲಿಂಗಾಯತ ಮತ್ತು ಒಕ್ಕಲಿಗ ಬಲಿಷ್ಠ ಜಾತಿಗಳ ಮತಗಳು ಹಿಂದೂ ರಾಷ್ಟ್ರವೆಂಬ ಕೋಮುವಾದಿ ಅಜೆಂಡಾದಡಿ ಒಂದುಗೂಡಿರುವುದರಿಂದ ಚಾಮರಾಜನಗರ ಮತ್ತು ಹಾಸನ ಹೊರತು ಪಡಿಸಿ ಇಡೀ ದಕ್ಷಿಣ ಕರ್ನಾಟಕ ಮತ್ತು ಮುಂಬೈ ಕರ್ನಾಟಕಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಹಿಂದುತ್ವದ ನೆಲೆಯಲ್ಲಿ ಗಟ್ಟಿಯಾಗುತ್ತಿರುವ ಈ ಬಲಿಷ್ಠ ಜಾತಿ ಮೈತ್ರಿಗಳು ಹಿಂದುತ್ವ ಫ್ಯಾಶಿಸಂಗೆ ಕರ್ನಾಟಕದಲ್ಲಿ ಅಭೇದ್ಯ ನೆಲೆ ಒದಗಿಸುವ ಹುನ್ನ್ನಾರದಲ್ಲಿವೆ. ಅದು ಅಪಾಯಕಾರಿ.

ಇನ್ನು ದಕ್ಷಿಣದಲ್ಲಿ ತಮಿಳುನಾಡಿನಲ್ಲಿ ಬಿಜೆಪಿಗೆ ಯಾವುದೇ ಸೀಟುಗಳು ಬರದಿದ್ದರೂ ಎನ್ಡಿಎ ಮೈತ್ರಿಕೂಟದಲ್ಲಿದ್ದ ಪಿಕೆಎಂಗೆ ಒಂದು ಸ್ಥಾನ ದಕ್ಕಿದೆ. ಎಲ್ಲಕ್ಕಿಂತ ಹೆಚ್ಚಾಗಿ 2019ರಲ್ಲಿ ಕೇವಲ ಶೇ. 3ರಷ್ಟು ಮತಗಳನ್ನು ಮಾತ್ರ ಪಡೆದಿದ್ದ ಬಿಜೆಪಿ ಈಗ ಶೇ. 11ರಷ್ಟು ಮತಗಳನ್ನು ಪಡೆದುಕೊಂಡಿದೆ. ಹಾಗೂ ಐದು ಕ್ಷೇತ್ರಗಳಲ್ಲಿ ಎಐಡಿಎಂಕೆಯನ್ನು ಹಿಂದಿಕ್ಕಿ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಕಳೆದೊಂದು ದಶಕದವರೆಗೆ ಬಿಜೆಪಿಯ ಹೆಸರೇ ಇರದಿದ್ದ ತಮಿಳುನಾಡಿನಲ್ಲಿ ಬರಲಿರುವ ವಿಧಾನ ಸಭಾ ಚುನಾವಣೆಯಲ್ಲಿ ದ್ರಾವಿಡ ರಾಜಕಾರಣವನ್ನು ಭೇದಿಸಿ ಎರಡನೇ ಸ್ಥಾನಕ್ಕೇರುವ ಕೋಮುವಾದಿ ಅಜೆಂಡಾದ ಬಿಜೆಪಿ ಯೋಜನೆ ಫಲಿಸುತ್ತಿರುವುದು ಈ ಫಲಿತಾಂಶವು ಸಾರುತ್ತಿದೆ.

ಕೇರಳದಲ್ಲಿ ಬಿಜೆಪಿ ಈವರೆಗೆ ಒಂದು ಸ್ಥಾನವನ್ನೂ ಪಡೆದುಕೊಂಡಿರಲಿಲ್ಲ. ಆದರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಪಡೆದುಕೊಂಡು ಖಾತೆ ತೆರೆದಿದೆ ಹಾಗೂ ಕನಿಷ್ಠ ಇನ್ನೆರೆಡು ಕ್ಷೇತ್ರಗಳಲ್ಲಿ ಎರಡನೆ ಸ್ಥಾನದಲ್ಲಿದೆ. ಒಟ್ಟಾರೆಯಾಗಿ 2024ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇ. 16ರಷ್ಟು ವೋಟು ಶೇರು ಪಡೆದುಕೊಂಡಿದೆ. ಒಂದು ಕಡೆ ನಾಯರ್ ಸಮುದಾಯವನ್ನು ಗೆದ್ದುಕೊಳ್ಳುವ, ಈಳವ ಸಮುದಾಯವನ್ನು ಓಲೈಸುವ ಹಾಗೂ ಮುಸ್ಲಿಮ್ ವಿರೋಧಿ ಮನೋಭಾವವುಳ್ಳ ಕ್ರೈಸ್ತ ಸಮುದಾಯವನ್ನು ಆಕರ್ಷಿಸುತ್ತಾ ತನ್ನ ಹಿಂದುತ್ವ ರಾಜಕಾರಣಕ್ಕೆ ನಿಧಾನವಾಗಿ ಬಲವಾದ ಸಾಮಾಜಿಕ ನೆಲೆಯನ್ನು ಗಟ್ಟಿ ಮಾಡಿಕೊಳ್ಳುತ್ತಿದೆ.

ಪ.ಬಂಗಾಳದಲ್ಲಿ ಎಲ್ಲರ ನಿರೀಕ್ಷೆಯನ್ನು ತಲೆಕೆಳಗಾಗಿಸಿ ಮಮತಾ ಬ್ಯಾನರ್ಜಿಯ ಟಿಎಂಸಿ 48ರಲ್ಲಿ 31 ಸ್ಥಾನಗಳನ್ನು ಪಡೆದುಕೊಂಡಿದ್ದು, 2019ರಲ್ಲಿ 18 ಸ್ಥಾನಗಳನ್ನು ಪಡೆದುಕೊಂಡಿದ್ದ ಬಿಜೆಪಿಗೆ ಕೇವಲ 12 ಸ್ಥಾನಗಳು ಮಾತ್ರ ಸಿಗುವಂತೆ ಮಾಡಿದ್ದರೂ ಬಿಜೆಪಿಯ ಕೋಮುವಾದಿ ರಾಜಕಾರಣ ಅತ್ಯಂತ ವಿಸ್ತೃತವಾಗಿ ಆದಿವಾಸಿಗಳಲ್ಲಿ, ದಲಿತರಲ್ಲಿ ಮತ್ತು ಹಿಂದುಳಿದ ಹಿಂದೂ ಸಮುದಾಯಗಳಲ್ಲಿ ಬೇರುಬಿಡುತ್ತಿದೆ ಮತ್ತು ಪ. ಬಂಗಾಳ ರಾಜಕಾರಣದಲ್ಲಿ 2011ಕ್ಕೆ ಮುಂಚೆ ಹೆಸರಿಲ್ಲದಿದ್ದ ಬಿಜೆಪಿ ಈಗ ಕಾಂಗ್ರೆಸ್ ಮತ್ತು ಎಡಪಕ್ಷಗಳನ್ನು ಹಿಂದಿಕ್ಕಿ ಎರಡನೇ ಸ್ಥಾನವನ್ನು ಪಡೆದಿದೆ. ನಿಧಾನವಾಗಿ ಒಂದನೇ ಸ್ಥಾನವನ್ನು ಆಕ್ರಮಿಸುವುದು ಅದರ ಯೋಜನೆ. ಮಮತಾ ಬ್ಯಾನರ್ಜಿಯ ಅಧಿಕಾರಶಾಹಿ ರಾಜಕಾರಣ ಬಿಜೆಪಿಯ ದಾರಿಯನ್ನು ದೀರ್ಘಾವಧಿಯಲ್ಲಿ ಸುಗಮಗೊಳಿಸಲಿದೆ.

ಚುನಾವಣೆಯ ಮೂಲಕ ಫ್ಯಾಶಿಸಂನ್ನು ಸೋಲಿಸಬಹುದೇ?

ಒಟ್ಟಾರೆಯಾಗಿ ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತರದಲ್ಲಿ ತಾತ್ಕಾಲಿಕವಾಗಿ ಸ್ಥಾನಗಳನ್ನು ಕಳೆದುಕೊಂಡಿರುವುದು ಸಮಾಧಾನಕರ ಸಂಗತಿಯಾಗಿದ್ದರೂ ದಕ್ಷಿಣ ಮತ್ತು ಪೂರ್ವಗಳಲ್ಲಿ ಈ ಹಿಂದುತ್ವ ಸರ್ಪ ಹೊಸ ಹುತ್ತಗಳನ್ನು ಕಂಡುಕೊಂಡಿದೆ. ಗಟ್ಟಿ ಮಾಡಿಕೊಳ್ಳುತ್ತಿದೆ.

ಈಗ ಸಾಪೇಕ್ಷವಾಗಿ ನೈತಿಕವಾಗಿ ಸೋತಿರುವ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಸಾಕಷ್ಟು ನಾಟಕವಾಡುವ ಎಲ್ಲಾ ಸಾಧ್ಯತೆ ಇದೆ. ಮಿತ್ರಪಕ್ಷಗಳೊಂದಿಗೆ ಅಧಿಕಾರ ಹಂಚಿಕೊಂಡು ಗೊತ್ತಿಲ್ಲದ ಮೋದಿ ಈಗ ಅನಿವಾರ್ಯವಾಗಿರುವ ಸಂದರ್ಭದಲ್ಲಿ ಪ್ರಧಾನಿಯಾಗಬಲ್ಲರೇ? ಮೋದಿ ಪ್ರಧಾನಿಯಾಗದಿದ್ದರೆ ಬರಲಿರುವ ಸಾಲು ಸಾಲು ರಾಜ್ಯ ಶಾಸನಾ ಸಭಾ ಚುನಾವಣೆಗಳಲ್ಲಿ ಮೋದಿ ಬಿಜೆಪಿ ಗೆಲ್ಲುವುದೇ?

ಅಥವಾ ‘ಇಂಡಿಯಾ’ ಕೂಟ ಅಧಿಕಾರ ರಚಿಸಲು ಬಿಟ್ಟು ಕೆಲವೇ ತಿಂಗಳಲ್ಲಿ ‘ಇಂಡಿಯಾ’ ಒಕ್ಕೂಟದೊಳಗೆ ತಿಕ್ಕಾಟ ತಂದು, ‘ಇಂಡಿಯಾ’ ಒಕ್ಕೂಟ ಉರುಳುವಂತೆ ಮಾಡಿ ಹೊಸ ಚುನಾವಣೆಯನ್ನು ಸ್ಥಿರ ಸರಕಾರದ ಹೆಸರಲ್ಲಿ ಎದುರಿಸಿ ಪೂರ್ಣ ಹಾಗೂ ಹೆಚ್ಚು ಬಹುಮತದೊಂದಿಗೆ ಅಧಿಕಾರಕೆ ಬರುವ ಷಡ್ಯಂತ್ರ ರೂಪಿಸುವುದೇ? ಇಂಡಿಯಾ ಒಕ್ಕೂಟ ಅದಕ್ಕೆ ಬಲಿಯಾಗುವುದೇ?

ಹಾಗೆ ನಡೆಯದಿದ್ದರೂ ಹಿಂದುತ್ವ ಫ್ಯಾಶಿಸಂ ಅನ್ನು ರಾಜಿಯಿಲ್ಲದೆ ಸಾಂಸ್ಕೃತಿಕವಾಗಿ ಮತ್ತು ಸೈದ್ಧಾಂತಿಕವಾಗಿ ಮತ್ತು ಸಾಮಾಜಿಕವಾಗಿ ಎದುರಿಸುವ ತಯಾರಿ ಮಾಡಿಕೊಳ್ಳದೆ ಕೇವಲ ಯಶಸ್ವಿ ಚುನಾವಣಾ ವಿರೋಧದ ಮೂಲಕ ‘ಇಂಡಿಯಾ’ ಬಿಜೆಪಿಯನ್ನು ಮಣಿಸಬಲ್ಲದೇ?

ಏಕೆಂದರೆ ಹಿಂದುತ್ವವೆಂದರೆ ಕೇವಲ ಚುನಾವಣಾ ರಾಜಕೀಯವಲ್ಲ. ಹಿಂದುತ್ವ ಫ್ಯಾಶಿಸಂ ಎನ್ನುವುದು ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಆಯಾಮಗಳೊಂದಿಗೆ ಕಾರ್ಪೊರೇಟ್ ಸೇವೆ ಮಾಡುವ ಆರ್ಥಿಕ ಆಯಾಮವನ್ನುಳ್ಳ ರಾಜಕಾರಣ. ಸರ್ವಾಧಿಕಾರದಂತಲ್ಲದೆ ಈ ಫ್ಯಾಶಿಸಂಗೆ ಸಮಾಜದಲ್ಲಿ ಸೈನ್ಯ ಮತ್ತು ಬೆಂಬಲದ ನೆಲೆಯಿರುತ್ತದೆ. ಎಲ್ಲಿಯತನಕ ಅದನ್ನು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ರಾಜಕೀಯವಾಗಿ ಸಮಗ್ರವಾಗಿ ಸೋಲಿಸಲಾಗದೋ ಅಲ್ಲಿಯವರೆಗೆ ಚುನಾವಣೆಯಲ್ಲಿ ಅದರ ಸೋಲು ಕೇವಲ ತಾತ್ಕಾಲಿಕ.

ಹೀಗಾಗಿ ಬಿಜೆಪಿ ಮತ್ತು ಮೋದಿ ಅಬ್ಬರದ ಗೆಲುವನ್ನು ಪಡೆಯದಂತೆ ಲಗಾಮು ಹಾಕಿರುವ ಜನರ ವಿವೇಕ ಗಳಿಸಿಕೊಟ್ಟ ಈ ಫಲಿತಾಂಶವನ್ನು ಸಂತೋಷದಿಂದ ಸ್ವೀಕರಿಸುತ್ತಲೇ ಅಂತರ್ಗತವಾಗಿ ಹೆಚ್ಚುತ್ತಿರುವ ಅಪಾಯಗಳ ಬಗ್ಗೆ ಮೈಮರೆಯದೇ ಇರುವುದು ಇಂದಿನ ಅತ್ಯಗತ್ಯ. ಅಷ್ಟೆ ಅಲ್ಲ. ಬಿಜೆಪಿಯ ಈ ತಾತ್ಕಾಲಿಕ ಸೋಲು ತಾತ್ಕಾಲಿಕ ನಿರಾಳ ಕೊಡಬೇಕೆಂದರೂ ಫ್ಯಾಶಿಸಂ ವಿರೋಧಿ ಜನಚಳವಳಿ ಬೀದಿಯಲ್ಲಿ ಗಟ್ಟಿಯಾಗಬೇಕು. ಕಾರಣ ಕಾಂಗ್ರೆಸ್ ಜನರ ಧ್ವನಿಯಲ್ಲ.

ಏಕೆಂದರೆ ಇತಿಹಾಸದಲ್ಲಿ ಫ್ಯಾಶಿಸಂ ಚುನಾವಣೆಯ ಮೂಲಕ ಅಧಿಕಾರಕ್ಕೆ ಬಂದಿರುವ ಉದಾಹರಣೆಯಿದೆಯೇ ಹೊರತು ಚುನಾವಣೆಯ ಮೂಲಕ ಸೋತ-ಸತ್ತ ಉದಾಹರಣೆಯಿಲ್ಲ.

Writer - ವಾರ್ತಾಭಾರತಿ

contributor

Editor - Safwan

contributor

Byline - ಶಿವಸುಂದರ್

contributor

Similar News