ಜಾತಿ ಗಣತಿ ವರದಿ ಬಗೆಗಿನ ಎಲ್ಲ ಗೊಂದಲಗಳನ್ನು ಎದುರಿಸಿ ಜಾರಿ ಮಾಡುವ ಧೈರ್ಯವನ್ನು ಸಿದ್ದರಾಮಯ್ಯ ತೋರುವರೇ?

ರಾಜ್ಯದಲ್ಲಿ ಜಾತಿಗಣತಿ ಈಗ ರಾಜಕೀಯವಾಗಿ ಕಿಚ್ಚು ಹಚ್ಚಿದೆ. ಅದರಲ್ಲೂ ವರದಿ ವಿಚಾರವಾಗಿ ಕಾಂಗ್ರೆಸ್‌ನಲ್ಲೇ ಭಿನ್ನ ಅಭಿಪ್ರಾಯಗಳಿದ್ದು, ಜಾತಿ ಗಣತಿ ವಿರುದ್ಧದ ಹೋರಾಟ ಕೊನೆಗೆ ಸಿದ್ದರಾಮಯ್ಯ ವಿರುದ್ಧದ ಮಸಲತ್ತಾಗಿ ಬದಲಾದರೂ ಆಶ್ಚರ್ಯವಿಲ್ಲ.
ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಬೇಕು ಎಂದು ಬಯಸುತ್ತಿರುವ ಎಲ್ಲಾ ಪಕ್ಷಗಳ ಪ್ರಭಾವೀ ಜಾತಿಗಳ ನಾಯಕರಿಗೆ ಇದೊಂದು ಸುವರ್ಣಾವಕಾಶವಾಗಿ ಒದಗಿ ಬರಬಹುದು.
ಸಿದ್ದರಾಮಯ್ಯ ಇದನ್ನೆಲ್ಲ ಹೇಗೆ ಬಗೆಹರಿಸಲಿದ್ದಾರೆ ಎಂಬುದು ರಾಜ್ಯದ ಅಸಂಖ್ಯಾತ ಜನರ ಮುಂದಿರುವ ಪ್ರಶ್ನೆಯಾಗಿದೆ.
ಜಾತಿ ಗಣತಿ ವರದಿ ಸಂಬಂಧ ವಿವರವಾಗಿ ಚರ್ಚಿಸಲು ಎಪ್ರಿಲ್ 17ರಂದು ಮತ್ತೆ ಸಚಿವ ಸಂಪುಟ ಸಭೆ ನಡೆಯಲಿದೆ.
ಈ ವರದಿ ಎಪ್ರಿಲ್ 11ರಂದು ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಯಿತು, ರಾಜ್ಯ ಸರಕಾರ ವರದಿ ಕುರಿತಾಗಿ ಮಹತ್ವದ ತೀರ್ಮಾನ ತೆಗೆದುಕೊಳ್ಳಬಹುದು ಎನ್ನಲಾಗಿತ್ತು.ಆದರೆ ಸಂಪುಟ ಸಭೆಯಲ್ಲಿ ಈ ಕುರಿತಾಗಿ ಸುದೀರ್ಘ ಚರ್ಚೆಗಳು ನಡೆದಿಲ್ಲ. ಹೀಗಾಗಿ, ಎಪ್ರಿಲ್ 17ರಂದು ವಿಶೇಷ ಸಂಪುಟ ಸಭೆ ನಡೆಯಲಿದೆ. ಜಾತಿ ಗಣತಿ ವಿಚಾರವಾಗಿ ಈ ದಿನ ಸರಕಾರ ಸ್ಪಷ್ಟ ತೀರ್ಮಾನ ಕೈಗೊಳ್ಳುವುದೇ ಎಂಬುದು ಈಗಿನ ಪ್ರಶ್ನೆ.
ಜಾತಿ ಜನಗಣತಿ ಬಗ್ಗೆ ಬಿಜೆಪಿ ವಿರೋಧದ ಮಾತು ಹಾಗಿರಲಿ, ಕಾಂಗ್ರೆಸ್‌ನೊಳಗೇ ಅದು ಎಷ್ಟೊ ನಾಯಕರಿಗೆ, ಸಚಿವರುಗಳಿಗೆ ಬೇಡವಾಗಿದೆ. ಎಲ್ಲರೂ ತಮ್ಮ ತಮ್ಮ ಸಮುದಾಯಗಳನ್ನು ಮೆಚ್ಚಿಸುವ, ಸಮುದಾಯಗಳ ಆಗ್ರಹಕ್ಕೆ ಅನುಸಾರವಾಗಿ ನಡೆಯುವ ಒತ್ತಡದಲ್ಲಿದ್ದಾರೆ. ವೈಜ್ಞಾನಿಕವಾಗಿ ಜಾತಿ ಗಣತಿ ನಡೆದಿಲ್ಲ ಎಂಬ ವಾದ ಮುಂದಿಡುವ ತಯಾರಿ ನಡೆದಿದೆ.ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಜಾತಿ ಗಣತಿ ವೈಜ್ಞಾನಿಕವಾಗಿಯೇ ನಡೆದಿದ್ದು, ಖಂಡಿತವಾಗಿಯೂ ಜಾರಿ ಮಾಡುತ್ತೇವೆ ಎಂಬ ಮಾತನ್ನು ಹೇಳಿಕೊಂಡೇ ಬಂದಿದ್ದಾರೆ.
ಆದರೆ ಅವರು ತಮ್ಮ ಪಕ್ಷದೊಳಗೇ ಇರುವ ವಿರೋಧ ಮತ್ತು ಒತ್ತಡವನ್ನು ಹೇಗೆ ನಿಭಾಯಿಸಬಲ್ಲರು? ಹೈಕಮಾಂಡ್ ಈ ವಿಚಾರವಾಗಿ ಸಿದ್ದರಾಮಯ್ಯ ಬೆನ್ನಿಗೆ ನಿಲ್ಲುವುದೇ ಅಥವಾ ಪ್ರಬಲ ಎನ್ನಿಸಿಕೊಂಡ ಸಮುದಾಯಗಳ ಒತ್ತಡಕ್ಕೆ ಸಿಲುಕಿ ಬೇರೆ ಆಲೋಚನೆ ಮಾಡಲಿದೆಯೇ? ಚುನಾವಣೆ ದೂರದಲ್ಲಿರುವುದರಿಂದ ಎಲ್ಲ ವಿರೋಧಗಳನ್ನೂ ಎದುರಿಸಿ ಜಾರಿ ಮಾಡುವ ಧೈರ್ಯವನ್ನು ಸಿದ್ದರಾಮಯ್ಯ ಮಾಡುವರೇ? ಇಂಥ ಹಲವಾರು ಕುತೂಹಲಗಳು ಈ ಸಂದರ್ಭದಲ್ಲಿ ಎದ್ದಿವೆ.
ಸಾಮಾಜಿಕ ನ್ಯಾಯ ನೀಡುವ ನಿಟ್ಟಿನಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2015 ಎಂಬ ಹೆಸರಿನಲ್ಲಿ 2015ರಲ್ಲಿ ಜಾತಿ ಗಣತಿ ವರದಿ ಸಿದ್ಧಪಡಿಸಿತು.
ಎಚ್. ಕಾಂತರಾಜು ಅಧ್ಯಕ್ಷತೆಯ ಆಯೋಗ ಈ ವರದಿ ಸಿದ್ಧಪಡಿಸಿತ್ತು. ಕಾಂತರಾಜು ಆಯೋಗ ಒಟ್ಟು 54 ಮಾನದಂಡಗಳನ್ನು ಮುಂದಿಟ್ಟುಕೊಂಡು ಸಮೀಕ್ಷೆ ನಡೆಸಿದೆ.ರಾಜ್ಯದ ಪ್ರತಿಯೊಂದು ಕುಟುಂಬದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಪ್ರಾತಿನಿಧ್ಯ ಮತ್ತು ಔದ್ಯೋಗಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಲಿಂಗಾಯತರು, ಒಕ್ಕಲಿಗರು, ಹಿಂದುಳಿದ ತಳ ಸಮುದಾಯ, ಮುಸ್ಲಿಮರು ಸೇರಿದಂತೆ ಇತರ ಹಿಂದುಳಿದ ಜಾತಿಗಳ ಪಟ್ಟಿಯಲ್ಲಿರುವ ಮೀಸಲಾತಿಯನ್ನು ಮರು ವರ್ಗೀಕರಣ ಮಾಡಬೇಕು ಮತ್ತು ಆಯಾ ಜಾತಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚಳ ಮಾಡಬೇಕು ಎಂದು ಜಾತಿಗಣತಿ ವರದಿಯಲ್ಲಿ ಶಿಫಾರಸು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಆಯೋಗದ ಅಧ್ಯಕ್ಷರಾಗಿದ್ದ ಎಚ್. ಕಾಂತರಾಜು ಮತ್ತು ಸದಸ್ಯರುಗಳ ಅವಧಿ 2019ರಲ್ಲಿ ಮುಕ್ತಾಯಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸರಕಾರಕ್ಕೆ ಸಲ್ಲಿಸಲು ಆಗಿರಲಿಲ್ಲ. ನಂತರ ಕೆ. ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷರಾಗಿ ಸಿದ್ಧಪಡಿಸಿದ್ದ ದತ್ತಾಂಶ ಅಧ್ಯಯನ ವರದಿ-2024 ಅನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗಿತ್ತು.
ರಾಜ್ಯದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎನ್ನುವ ಅಂಶ ಈಗ ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ವರದಿಯಲ್ಲಿನ ಅಂಕಿ ಅಂಶಗಳನ್ನು ಅಧಿಕೃತವಾಗಿ ಸರಕಾರ ಜನರ ಮುಂದೆ ಇರಿಸಿಲ್ಲವಾದರೂ, ಅದರ ಪ್ರತಿಗಳನ್ನು ಸಚಿವರಿಗೆ ನೀಡಲಾಗಿರುವುದರಿಂದ ಮಾಹಿತಿ ಬಯಲಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನೊಂದೆಡೆ, ಅಂಕಿಅಂಶಗಳ ಬಗ್ಗೆ ರಾಜಕೀಯ ಕಾರಣಗಳಿಗಾಗಿ ವಿರೋಧ ಪಕ್ಷಗಳು ಬೇಕಾಬಿಟ್ಟಿ ಮಾತಾಡುತ್ತಿವೆ ಎಂತಲೂ ಹೇಳಲಾಗಿದೆ. ಜಾತಿ ಗಣತಿ ವರದಿ ಬಗ್ಗೆ ಪರ ಹಾಗೂ ವಿರುದ್ಧವಾದ ಅಭಿಪ್ರಾಯಗಳಿವೆ.
ಜಾತಿ ಗಣತಿ ಸಮೀಕ್ಷೆಯೇ ಸಮರ್ಪಕವಾಗಿ ನಡೆದಿಲ್ಲ ಎಂದು ಆರೋಪಿಸಲಾಗುತ್ತಿದೆ. ಇದೊಂದು ಅವಾಸ್ತವಿಕ ಹಾಗೂ ಅವೈಜ್ಞಾನಿಕ ಸಮೀಕ್ಷೆ ಎಂದು ಪ್ರಬಲ ಸಮುದಾಯಗಳು ಆಕ್ಷೇಪ ಎತ್ತುತ್ತಿವೆ. ಪರಿಶಿಷ್ಟ ಜಾತಿ ಒಳಮೀಸಲಿಗೆ ಮಾನದಂಡವಾಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ದತ್ತಾಂಶ ವರದಿ ಬೇರೆ ಸಮುದಾಯಗಳ ವಸ್ತುನಿಷ್ಠ ಮಾಹಿತಿ ಆಗಲು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಎತ್ತಲಾಗಿದೆ. ಬಹಳಷ್ಟು ಸಚಿವರುಗಳು ಈ ವಾದವನ್ನೇ ಮುಂದಿಟ್ಟು, ವರದಿಯನ್ನು ವಿರೋಧಿಸಲು ತಯಾರಿ ನಡೆಸಿದ್ದಾರೆ. ವೈಜ್ಞಾನಿಕ ಮಾನದಂಡದಲ್ಲಿ ಹೊಸ ಸಮೀಕ್ಷೆಗೆ ಆಗ್ರಹಿಸುವ ಮೂಲಕ, ಈ ವರದಿ ಬದಿಗೆ ಸರಿಯುವಂತೆ ಮಾಡುವ ಯತ್ನಗಳು ನಡೆದಿವೆ.
ಜಾತಿ ಗಣತಿ ವರದಿಗೆ ಪ್ರಬಲ ವಿರೋಧ ವ್ಯಕ್ತವಾಗುತ್ತಿರುವುದೇ, ರಾಜಕೀಯವಾಗಿ ಪ್ರಬಲ ಸಮುದಾಯಗಳೆನ್ನಿಸಿಕೊಂಡಿರುವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಜನಸಂಖ್ಯೆಗಿಂತ ಪರಿಶಿಷ್ಟರು ಮತ್ತು ಮುಸ್ಲಿಮ್ ಸಮುದಾಯಗಳ ಜನಸಂಖ್ಯೆ ಹೆಚ್ಚಿದೆ ಎಂಬ ವಿಚಾರಕ್ಕೆ.
ಬಿಜೆಪಿ ವಿರೋಧ ಬೇರೆ ಮಾತು. ಆದರೆ, ಕಾಂಗ್ರೆಸ್‌ಲ್ಲಿಯೇ ವರದಿ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಕಡೆಗೆ ಇದು ಸರಕಾರಕ್ಕೇ ತಿರುಗುಬಾಣವಾಗಬಹುದೇ ಎನ್ನುವಂತಹ ಸನ್ನಿವೇಶವೂ ಸೃಷ್ಟಿಯಾಗಬಹುದಾದ ಸೂಚನೆಗಳು ಕಾಣಿಸುತ್ತಿವೆ.
ವರದಿ ಜಾರಿಯಾದರೆ ಲಿಂಗಾಯತರು ಹಾಗೂ ಬ್ರಾಹ್ಮಣರನ್ನು ಜೊತೆಗೆ ಸೇರಿಸಿ ಕರ್ನಾಟಕ ಬಂದ್ ಮಾಡುವುದಾಗಿ ಹೇಳಿರುವ ಒಕ್ಕಲಿಗರ ಸಂಘ, ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವ ಬೆದರಿಕೆಯನ್ನೂ ಹಾಕಿದೆ.
ಸರಕಾರದಲ್ಲಿರುವ ಸಮುದಾಯದ ಸಚಿವರು ಇದನ್ನು ವಿರೋಧಿಸಬೇಕು ಎಂದು ಕರೆ ಕೊಟ್ಟಿರುವ ಒಕ್ಕಲಿಗರ ಸಂಘ ತಾನು ಜಾತಿ ಗಣತಿ ಮಾಡಿಸುವುದಾಗಿ ಹೇಳಿದೆ. ಅದಕ್ಕಾಗಿ ಸಾಫ್ಟ್ ವೇರ್ ಸಿದ್ಧಪಡಿಸುವುದಾಗಿ ಹೇಳಿದೆ.
101 ಉಪಜಾತಿ ಒಳಗೊಂಡ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲು ನಿಗದಿಗೆ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಮಾತ್ರವಲ್ಲದೆ ರಾಜ್ಯದ ನಾನಾ ಭಾಗಗಳಲ್ಲಿ ಸಮಾನಾಂತರ ಹೆಸರುಗಳ ಗೊಂದಲವಿದೆ. ಹಾಗಾಗಿ ಒಳ ಮೀಸಲು ನಿರ್ಧಾರಕ್ಕಾಗಿ ಹೊಸ ಸಮೀಕ್ಷೆಯ ಹೊಣೆಯನ್ನು ನ್ಯಾ.ನಾಗಮೋಹನದಾಸ್ ಆಯೋಗಕ್ಕೆ ನೀಡಲಾಗಿದೆ. ಇದನ್ನೇ ಈಗ ಪ್ರಬಲ ಸಮುದಾಯಗಳು ವಿರೋಧಕ್ಕೆ ಪ್ರಮುಖ ನೆಪವಾಗಿ ತೆಗೆದುಕೊಳ್ಳುತ್ತಿವೆ.
ಪರಿಶಿಷ್ಟರ ಉಪಜಾತಿಗಳ ದತ್ತಾಂಶ ಸಮರ್ಪಕ ಇಲ್ಲ ಎಂದಾದರೆ ಲಿಂಗಾಯತ, ವೀರಶೈವ, ಒಕ್ಕಲಿಗ ಮತ್ತಿತರ ಸಮುದಾಯಗಳಲ್ಲಿನ ಉಪಜಾತಿಗಳ ದತ್ತಾಂಶದ ವಸ್ತುನಿಷ್ಠತೆ ಹಾಗೂ ಪ್ರಸ್ತುತತೆಯನ್ನೇ ಪ್ರಮುಖವಾಗಿ ಆಕ್ಷೇಪಿಸಲು ಆ ಸಮುದಾಯದ ಸಚಿವರು ಸಮಾಲೋಚನೆ ನಡೆಸುತ್ತಿದ್ದಾರೆ ಎನ್ನಲಾಗಿದೆ
ವಿಶೇಷವಾಗಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಸಚಿವರುಗಳು ಸಮುದಾಯದ ಮಠ, ಸಂಘಟನೆಗಳ ಒತ್ತಡದಂತೆ ಒಟ್ಟುಗೂಡಿ ಸಮಾಲೋಚನೆ ನಡೆಸಿವೆ ಎನ್ನಲಾಗಿದೆ. ವೈಜ್ಞಾನಿಕ ಮಾನದಂಡದಲ್ಲಿ ಹೊಸದಾಗಿ ಸಮೀಕ್ಷೆ ನಡೆಯಲಿ ಎಂದು ಪಟ್ಟು ಹಿಡಿಯಲು ಅವರು ತಯಾರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಉಪ ಜಾತಿಗಳ ದಾಖಲಾತಿ ಸಮರ್ಪಕ ರೀತಿಯಲ್ಲಿ ಆಗಿಲ್ಲ. ಹಾಗಾಗಿ ಹಾಲಿ ಸಮೀಕ್ಷಾ ವರದಿಯನ್ನು ಒಪ್ಪಲು ತಯಾರಿಲ್ಲ ಎಂಬ ವಾದ ಮುಂದಿಡುವುದು ಅವರ ಉದ್ದೇಶವಾಗಿದೆ. ಹಾಗಾಗಿಯೇ, ಎಪ್ರಿಲ್ 17ರ ವಿಶೇಷ ಸಂಪುಟ ಸಭೆಯಲ್ಲಿ ಏನು ನಡೆಯಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.ಅದರ ಬಗ್ಗೆ ವಿವರವಾದ ಚರ್ಚೆ ನಡೆಯುವ ಸಾಧ್ಯತೆಗಳಿವೆ.
ಈಗ ಪ್ರಬಲ ಸಮುದಾಯಗಳ ದೊಡ್ಡ ವಿರೋಧ ವ್ಯಕ್ತವಾಗಿರುವುದೇ ಜಾತಿ ಗಣತಿ ವರದಿಯಲ್ಲಿ ಇರುವ ಅಂಕಿ ಸಂಖ್ಯೆಗಳ ಬಗ್ಗೆ. ವಿವಿಧ ನಾಯಕರು ಅದರ ಬಗ್ಗೆ ಭಿನ್ನ ನಿಲುವು ವ್ಯಕ್ತಪಡಿಸಿದ್ದಾರೆ. ಈಗ ವರದಿಯಲ್ಲಿ ಇದೆಯೆನ್ನಲಾದ ಅಂಕಿ ಸಂಖ್ಯೆಗಳು ಬಹಿರಂಗವಾಗಿರುವ ಪ್ರಕಾರ, ಪ್ರಮುಖ ಸಮುದಾಯಗಳ ಜನಸಂಖ್ಯೆ ಎಷ್ಟಿದೆ ಎಂದು ನೋಡುವುದಾದರೆ,
ಪರಿಶಿಷ್ಟ ಜಾತಿ 1.08 ಕೋಟಿ, ಪರಿಶಿಷ್ಟ ಪಂಗಡ 42 ಲಕ್ಷ, ಮುಸ್ಲಿಮ್ 74 ಲಕ್ಷ, ಲಿಂಗಾಯತ 73 ಲಕ್ಷ, ಒಕ್ಕಲಿಗ 70 ಲಕ್ಷ, ಕುರುಬ 45 ಲಕ್ಷ.
ಮುಖ್ಯವಾಗಿ ಗಮನಿಸಬೇಕಿರುವುದು, ಮುಸ್ಲಿಮ್ ಜನಸಂಖ್ಯೆ ರಾಜಕೀಯವಾಗಿ ಪ್ರಬಲ ಸಮುದಾಯಗಳೆನ್ನಿಸಿಕೊಂಡಿರುವ ಲಿಂಗಾಯತ ಮತ್ತು ಒಕ್ಕಲಿಗರಿಗಿಂತ ಹೆಚ್ಚಿದೆ ಎನ್ನುವುದು.
ಆದರೆ, ಲಿಂಗಾಯತರ ಜನಸಂಖ್ಯೆ 1 ಕೋಟಿ ಇದೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿಕೆ ನೀಡಿದ್ದಾರೆ.
ಇನ್ನು ಶಾಮನೂರು ಶಿವಶಂಕರಪ್ಪ ಅವರು ನೇರವಾಗಿ ವರದಿಗೆ ವಿರೋಧ ಸೂಚಿಸಿದ್ದಾರೆ. ಅವರ ಪುತ್ರ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಕೂಡ ವರದಿಯನ್ನು ಒಪ್ಪಿಲ್ಲ.
ಸಿದ್ದರಾಮಯ್ಯ ಸಂಪುಟದಲ್ಲಿ ಪ್ರಮುಖ ಸಚಿವರೇ ಜಾತಿ ಗಣತಿ ವರದಿಗೆ ವಿರುದ್ಧವಿದ್ದಾರೆ. ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ್, ಎಸ್.ಎಸ್. ಮಲ್ಲಿಕಾರ್ಜುನ, ಈಶ್ವರ ಖಂಡ್ರೆ, ಶಿವಾನಂದ ಪಾಟೀಲ್, ಶರಣ ಪ್ರಕಾಶ್ ಪಾಟೀಲ್, ಶರಣ ಬಸಪ್ಪ ದರ್ಶನಾಪುರ, ಲಕ್ಷ್ಮೀ ಹೆಬ್ಬಾಳ್ಕರ್ ಜಾತಿ ಗಣತಿ ವರದಿಗೆ ವಿರುದ್ಧವಿರುವುದಾಗಿ ವರದಿಗಳು ಹೇಳುತ್ತಿವೆ.
ಆದರೆ ಡಿ.ಕೆ. ಶಿವಕುಮಾರ್ ನೇರವಾಗಿ ವಿರೋಧ ವ್ಯಕ್ತಪಡಿಸುತ್ತಿಲ್ಲ. ಅವರು ಎಚ್ಚರಿಕೆಯ ನಡೆಯನ್ನು ಅನುಸರಿಸುತ್ತಿದ್ದಾರೆ. ಹೇಳಿಕೆಗಳನ್ನು ನೀಡುವಾಗಲೂ ಅವರು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಆದರೆ ಅವರು ಮಾತಾಡುವ ರೀತಿಯಲ್ಲಿಯೇ ಅವರ ನಿಲುವು ಏನಿದೆ ಎಂಬುದು ಗೊತ್ತಾಗುತ್ತದೆ. ಸಂದರ್ಭ ಸಿಕ್ಕಾಗೆಲ್ಲ ಅವರು ಪರೋಕ್ಷವಾಗಿ ವರದಿ ಬಗ್ಗೆ ತಮ್ಮ ಅಸಮಾಧಾನ ಹೊರ ಹಾಕುವುದು ಸ್ಪಷ್ಟವಿದೆ.
ಜಾತಿ ಗಣತಿ ಕುರಿತಾಗಿ ಅಹಿಂದ ವರ್ಗದ ಸಚಿವರು, ಶಾಸಕರು ಮೆಚ್ಚುಗೆ ಮಾತನ್ನಾಡುತ್ತಿದ್ದಾರೆ. ಈ ವರದಿಯ ಅಗತ್ಯದ ಬಗ್ಗೆ ಅವರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.
ಸಚಿವರಾದ ಡಾ. ಜಿ. ಪರಮೇಶ್ವರ್, ಎಚ್.ಸಿ. ಮಹದೇವಪ್ಪ, ಭೈರತಿ ಸುರೇಶ್, ಶಿವರಾಜ್ ತಂಗಡಗಿ, ಪ್ರಿಯಾಂಕ್ ಖರ್ಗೆ, ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಸತೀಶ್ ಜಾರಕಿಹೊಳಿ, ಝಮೀರ್ ಅಹ್ಮದ್ ಖಾನ್, ಆರ್.ಬಿ. ತಿಮ್ಮಾಪುರ, ಸಂತೋಷ್ ಲಾಡ್, ಕೆ.ಎನ್. ರಾಜಣ್ಣ ಸೇರಿದಂತೆ ಬಹುತೇಕ ಸಚಿವರು ವರದಿಯ ಪರವಾಗಿದ್ದಾರೆ.
ಕೆಲವು ಸಚಿವರು ವಿರೋಧವನ್ನೂ ವ್ಯಕ್ತಪಡಿಸದೆ, ಪರವಾಗಿಯೂ ನಿಲ್ಲದೆ ಇರುವುದು ಕೂಡ ಕುತೂಹಲ ಮೂಡಿಸಿದೆ. ಇವೆಲ್ಲವೂ ಏನನ್ನು ಸೂಚಿಸುತ್ತವೆ?
ಹಿಂದುಳಿದ ವರ್ಗಗಳಿಗೆ ನ್ಯಾಯ ನೀಡುವ ನಿಟ್ಟಿನಲ್ಲಿ ಈ ವರದಿಯ ಅಗತ್ಯ ಇದೆ ಎಂಬುದು ಇದರ ಪರವಾಗಿರುವವರ ಅಭಿಪ್ರಾಯವಾದರೆ, ವರದಿ ಅವೈಜ್ಞಾನಿಕ ಎಂಬ ಅಭಿಪ್ರಾಯವನ್ನು ವಿರೋಧಿಗಳು ವ್ಯಕ್ತಪಡಿಸುತ್ತಿದ್ದಾರೆ.
ವರದಿಗೆ ವೀರಶೈವ ಮಹಾಸಭಾ ವಿರೋಧ ವ್ಯಕ್ತಪಡಿಸಿರುವುದನ್ನು ಡಿ.ಕೆ. ಶಿವಕುಮಾರ್ ಪರೋಕ್ಷವಾಗಿ ಸಮರ್ಥಿಸಿ ಮಾತಾಡಿರುವುದನ್ನು ಗಮನಿಸಬೇಕು.
‘‘ವೀರಶೈವ ಮಹಾಸಭಾದವರು ಅವರ ಸಮಾಜ ರಕ್ಷಣೆ ಮಾಡಿಕೊಳ್ಳಲು ಹೊರಟಿದ್ದು, ಅವರನ್ನು ನಾವು ಏಕೆ ಟೀಕೆ ಮಾಡಬೇಕು? ಪ್ರಜಾಪ್ರಭುತ್ವ, ಸಂವಿಧಾನದ ಪ್ರಕಾರವಾಗಿ ಅವರು ತಮ್ಮ ನಿಲುವುಗಳನ್ನು ಪ್ರತಿಪಾದಿಸಲಿ’’ ಎಂದಿದ್ದಾರೆ.
ಡಿ.ಕೆ. ಶಿವಕುಮಾರ್ ಅವರ ನಿಲುವು ಕೂಡ ಒಕ್ಕಲಿಗ ಸಮುದಾಯದ ವಿಚಾರದಲ್ಲಿ ಹೀಗೆಯೇ ಇದೆ. ಅವರು ತಮ್ಮ ಸಮುದಾಯದ ರಕ್ಷಣೆ ಮಾಡಿಕೊಳ್ಳಲು ಹೊರಟಿದ್ದಾರೆ ಎಂಬುದನ್ನು ಬೇರೆ ಹೇಳಬೇಕಿಲ್ಲ.
ಇನ್ನು ವಿಪಕ್ಷವಂತೂ, ಇದು ಸಿದ್ದರಾಮಯ್ಯ ಹೇಳಿ ಬರೆಯಿಸಿದ ವರದಿ ಎನ್ನುವಂತೆ ಮಾತಾಡುತ್ತಿದೆ.
‘‘ಇದು ಸಿದ್ದರಾಮಯ್ಯ ಪ್ರಾಯೋಜಕತ್ವದ ಅವೈಜ್ಞಾನಿಕ ವರದಿ. ಸಿದ್ದರಾಮಯ್ಯ ಅವರು ಆಗಿನ ಹಿಂದುಳಿದ ಆಯೋಗದ ಅಧ್ಯಕ್ಷ ಕಾಂತರಾಜು ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು, ಜಾತಿಗಣತಿ ವರದಿ ಸಿದ್ಧಪಡಿಸಿದ್ದಾರೆ. ಜಾತಿ, ಜಾತಿಗಳನ್ನು, ಧರ್ಮ ಧರ್ಮಗಳನ್ನು ಒಡೆಯುವ ವರದಿ ಇದಾಗಿದೆ. ಸಿದ್ದರಾಮಯ್ಯ ಜಾತಿ, ಧರ್ಮಗಳ ಮಧ್ಯೆ ಒಡಕು ತರುತ್ತಿದ್ದಾರೆ’’ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಒಡೆಯುವುದನ್ನೇ ಮಾಡಿಕೊಂಡು ಬಂದಿರುವ ಪಕ್ಷ, ಸಿದ್ದರಾಮಯ್ಯ ಅವರು ಜಾತಿ ಧರ್ಮ ಒಡೆಯಲು ನಿಂತಿದ್ದಾರೆ ಎಂದು ಹೇಳುತ್ತಿರುವುದೇ ದೊಡ್ಡ ವಿಡಂಬನೆಯಾಗಿದೆ.
ಇದೆಲ್ಲದರ ಹಿನ್ನೆಲೆಯಲ್ಲಿ ಎಪ್ರಿಲ್ 17ರ ಸಚಿವ ಸಂಪುಟ ಸಭೆ ಮಹತ್ವದ್ದಾಗಿದೆ.
ರಾಜ್ಯದಲ್ಲಿ ಜಾತಿಗಣತಿ ಈಗ ರಾಜಕೀಯವಾಗಿ ಕಿಚ್ಚು ಹಚ್ಚಿದೆ.
ಅದರಲ್ಲೂ ವರದಿ ವಿಚಾರವಾಗಿ ಕಾಂಗ್ರೆಸ್‌ನಲ್ಲೇ ಭಿನ್ನ ಅಭಿಪ್ರಾಯಗಳಿದ್ದು, ಜಾತಿ ಗಣತಿ ವಿರುದ್ಧದ ಹೋರಾಟ ಕೊನೆಗೆ ಸಿದ್ದರಾಮಯ್ಯ ವಿರುದ್ಧದ ಮಸಲತ್ತಾಗಿ ಬದಲಾದರೂ ಆಶ್ಚರ್ಯವಿಲ್ಲ.
ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಬೇಕು ಎಂದು ಬಯಸುತ್ತಿರುವ ಎಲ್ಲಾ ಪಕ್ಷಗಳ ಪ್ರಭಾವೀ ಜಾತಿಗಳ ನಾಯಕರಿಗೆ ಇದೊಂದು ಸುವರ್ಣಾವಕಾಶವಾಗಿ ಒದಗಿ ಬರಬಹುದು.
ಸಿದ್ದರಾಮಯ್ಯ ಇದನ್ನೆಲ್ಲ ಹೇಗೆ ಬಗೆಹರಿಸಲಿದ್ದಾರೆ ಎಂಬುದು ರಾಾಜ್ಯದ ಅಸಂಖ್ಯಾತ ಜನರ ಮುಂದಿರುವ ಪ್ರಶ್ನೆಯಾಗಿದೆ.
ಮುಖ್ಯವಾಗಿ ಕಾಂಗ್ರೆಸ್ ಹೈಕಮಾಂಡ್ ಕೂಡ ಸಿದ್ದರಾಮಯ್ಯ ಅವರಿಗೆ ಈ ವಿಚಾರದಲ್ಲಿ ಬಲವಾಗಿ ನಿಲ್ಲಬಹುದು. ಆದರೆ ರಾಜಕೀಯ ಲೆಕ್ಕಾಚಾರಗಳು ಎಲ್ಲಿಂದ ಎಲ್ಲಿಗೆ ಹೋಗಲಿವೆ ಎಂಬುದು ಕುತೂಹಲಕಾರಿ.