ಸಸ್ಯಾಹಾರ ಹೇರಲು ಹೊರಟವರು ಬಹುಸಂಖ್ಯಾತರ ಭಾವನೆಗಳನ್ನು ಗೌರವಿಸಲಿ

ಮಾಂಸಾಹಾರಿ ಅಂದರೆ ಯಾರು? ಅವರೇನು ಹುಲಿ, ಸಿಂಹಗಳಂತೆ ಮೀನು, ಮಾಂಸ ಮಾತ್ರ ತಿನ್ನುವವರೇ? ಅವರು ಸಸ್ಯಾಹಾರಿಗಳ ಆಹಾರವನ್ನು ತಿನ್ನುವುದೇ ಇಲ್ಲವೇ? ನಿಜವಾಗಿ ಮಾಂಸಾಹಾರಿಗಳೆಂದು ಗುರುತಿಸಲಾಗುವವರು, ಸಸ್ಯಾಹಾರಿಗಳು ತಿನ್ನುವ ಎಲ್ಲವನ್ನೂ ತಿನ್ನುತ್ತಾರೆ. ಮಾತ್ರವಲ್ಲ, ಅವರು ವರ್ಷವಿಡೀ ತಿನ್ನುವ ಪ್ರಧಾನ ಆಹಾರ ಸಸ್ಯಾಹಾರವೇ ಆಗಿರುತ್ತದೆ. ಇಷ್ಟಾಗಿಯೂ ಮೂಲತಃ ಸಸ್ಯಾಹಾರಿಗಳೇ ಆಗಿದ್ದು, ಕೇವಲ ವರ್ಷಕ್ಕೊಮ್ಮೆ ಮೀನು ಮಾಂಸ ತಿನ್ನುವವರನ್ನು ಕೂಡಾ, ತಿಂಗಳಿಗೊಮ್ಮೆ, ವಾರಕ್ಕೊಮ್ಮೆ ಅಥವಾ ಪ್ರತಿದಿನ ಮೀನು, ಮೊಟ್ಟೆ, ಮಾಂಸ ಇತ್ಯಾದಿಯನ್ನು ತಿನ್ನುವವರ ಸಾಲಲ್ಲಿ ನಿಲ್ಲಿಸಿ, ಅವರು ನಿತ್ಯವೂ ತಿನ್ನುವ ಅಷ್ಟೆಲ್ಲಾ ಸೊಪ್ಪು, ತರಕಾರಿ, ಧವಸಧಾನ್ಯಗಳನ್ನೆಲ್ಲ ಕಡೆಗಣಿಸಿ ಅವರ ಮೇಲೆ ಮಾಂಸಾಹಾರಿ ಎಂಬ ಸಗಟು ಬಿರುದನ್ನು ಅಂಟಿಸಿ ಬಿಡುವುದು ಎಲ್ಲಿಯ ನ್ಯಾಯ?;

Update: 2025-04-29 11:23 IST
Editor : Thouheed | Byline : ಶಂಬೂಕ
ಸಸ್ಯಾಹಾರ ಹೇರಲು ಹೊರಟವರು ಬಹುಸಂಖ್ಯಾತರ ಭಾವನೆಗಳನ್ನು ಗೌರವಿಸಲಿ
  • whatsapp icon

‘‘ನಾವೇನು ದಿನಕ್ಕೆ ಮೂರು ಬಾರಿ ಧೋಕ್ಲಾ ತಿಂದು, ಜೈಶ್ರೀ ರಾಮ್ ಎಂದು ಘೋಷಣೆ ಕೂಗುತ್ತಿರಬೇಕೇ?’’

ಮಾಂಸಾಹಾರದ ವಿರುದ್ಧ ಅಸಹಿಷ್ಣುತೆ ತೋರುವವರ ಬಗ್ಗೆ ಹೀಗೆಂದು ತಮ್ಮ ಆಕ್ರೋಶ ಪ್ರಕಟಿಸಿದವರು ಬಂಗಾಳಿ ಸಂಸದೆ ಮಹುವಾ ಮೊಯಿತ್ರಾ. ಕೆಲವು ವಾರಗಳ ಹಿಂದೆ ದಿಲ್ಲಿಯಲ್ಲಿ ನಡೆದ ಘಟನೆಯೊಂದರ ಬಗ್ಗೆ ಅವರು ಮಾತನಾಡುತ್ತಿದ್ದರು. ದಿಲ್ಲಿಯ ಚಿತ್ತರಂಜನ್ ಪಾರ್ಕ್‌ನ ಮಾರುಕಟ್ಟೆಯಲ್ಲಿ ಮೀನು ಮಾರುವ ಅಂಗಡಿಯೊಂದರ ಮೇಲೆ ದಾಳಿ ನಡೆಸಿದ ಕಾವಿಧಾರಿ ಪುಂಡರ ಗುಂಪೊಂದು, ಇಲ್ಲಿ ಸಮೀಪದಲ್ಲೇ ಒಂದು ಮಂದಿರವಿರುವುದರಿಂದ ಇಲ್ಲಿ ನೀವು ಮೀನು ಮಾರುವಂತಿಲ್ಲ. ತಕ್ಷಣ ಅಂಗಡಿ ಮುಚ್ಚಬೇಕು ಎಂದು ಆಗ್ರಹಿಸಿತು. ಅವರ ಆಗ್ರಹ, ಆದೇಶ ಮತ್ತು ಬೆದರಿಕೆಗಳ ರೂಪದಲ್ಲಿತ್ತು. ಬಂಗಾಳಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಆ ಪ್ರದೇಶದಲ್ಲಿ ಈ ಘಟನೆಯ ವಿರುದ್ಧ ವ್ಯಾಪಕ ಆಕ್ರೋಶ ಪ್ರಕಟವಾಯಿತು. ಈ ವೇಳೆ ಮೊಯಿತ್ರಾ ಗುಜರಾತಿಗಳ ನೆಚ್ಚಿನ ಸಿಹಿ ತಿಂಡಿ ‘ಧೋಕ್ಲಾ’ವನ್ನು ಪ್ರಸ್ತಾಪಿಸುವ ಮೂಲಕ, ಮೋದಿ-ಶಾ ಎಂಬ ಗುಜರಾತಿ ಜೋಡಿ ಅಧಿಕಾರಕ್ಕೆ ಬಂದಾಗಿನಿಂದ, ತಮ್ಮ ಸಂಸ್ಕೃತಿಯನ್ನು ಎಲ್ಲ ಭಾರತೀಯರ ಮೇಲೆ ಹೇರಲು ಹೊರಟಿದ್ದಾರೆಂಬುದನ್ನು ಸೂಚಿಸಿದ್ದರು.

ಯಾವುದೇ ಸಮಾಜದಲ್ಲಿ ಅಲ್ಪಸಂಖ್ಯಾತರಾಗಿರು ವವರು ಆ ಸಮಾಜದ ಬಹುಸಂಖ್ಯಾತರ ವಿಷಯದಲ್ಲಿ ತುಂಬಾ ಸಂವೇದನಾ ಶೀಲರಾಗಿರಬೇಕು. ಅವರ ನಂಬಿಕೆಗಳನ್ನು ಗೌರವಿಸಬೇಕು. ಅವರ ಭಾವನೆಗಳಿಗೆ ಧಕ್ಕೆಯಾಗುವಂತಹ ಯಾವುದೇ ಕೆಲಸ ಮಾಡಬಾರದು - ಇದೆಲ್ಲಾ ನಮ್ಮಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು ಉದ್ದೇಶಿಸಿ ಪದೇ ಪದೇ ನೀಡಲಾಗುವ ಉಪದೇಶ. ಕೆಲವೆಡೆ ಇದು ಸುಗ್ರೀವಾಜ್ಞೆಯ ರೂಪ ತಾಳುವುದೂ ಉಂಟು. ಇದೀಗ ನಮ್ಮ ದೇಶದಲ್ಲಿ ಹಲವಾರು ಕಡೆ ಸಸ್ಯಾಹಾರಿ-ಮಾಂಸಾಹಾರಿಗಳ ನಡುವೆ ಘರ್ಷಣೆಯ ವಾತಾವರಣ ಏರ್ಪಟ್ಟಿರುವುದರಿಂದ ಆಹಾರಾಭ್ಯಾಸಗಳ ವಿಷಯದಲ್ಲಿ ಯಾರು, ಯಾರ ಭಾವನೆಗಳನ್ನು ಗೌರವಿಸಬೇಕು ಮತ್ತು ಯಾವ ಮಟ್ಟಿಗೆ ಗೌರವಿಸಬೇಕು ಎಂಬುದು ಒಂದು ದೊಡ್ಡ ಚರ್ಚಾರ್ಹ ವಿಷಯವಾಗಿ ಬಿಟ್ಟಿದೆ.

ಇಲ್ಲಿ ನಾಮಕರಣಕ್ಕೆ ಸಂಬಂಧಿಸಿದ ಸಮಸ್ಯೆಯೊಂದಿದೆ. ದನ, ಕತ್ತೆ ಕುದುರೆಗಳಂತೆ ಸಸ್ಯ, ಸೊಪ್ಪು, ತರಕಾರಿ, ಧವಸ ಧಾನ್ಯ ಇತ್ಯಾದಿಗಳನ್ನು ಮಾತ್ರ ತಿನ್ನುವ ಮನುಷ್ಯರನ್ನು ‘ಸಸ್ಯಾಹಾರಿ’ ಎಂದು ಕರೆಯುವುದು ತಾರ್ಕಿಕವಾಗಿ ಸರಿ. ಆದರೆ ಮಾಂಸಾಹಾರಿ ಅಂದರೆ ಯಾರು? ಅವರೇನು ಹುಲಿ, ಸಿಂಹಗಳಂತೆ ಮೀನು, ಮಾಂಸ ಮಾತ್ರ ತಿನ್ನುವವರೇ? ಅವರು ಸಸ್ಯಾಹಾರಿಗಳ ಆಹಾರವನ್ನು ತಿನ್ನುವುದೇ ಇಲ್ಲವೇ? ನಿಜವಾಗಿ ಮಾಂಸಾಹಾರಿಗಳೆಂದು ಗುರುತಿಸಲಾಗುವವರು, ಸಸ್ಯಾಹಾರಿಗಳು ತಿನ್ನುವ ಎಲ್ಲವನ್ನೂ ತಿನ್ನುತ್ತಾರೆ. ಮಾತ್ರವಲ್ಲ, ಅವರು ವರ್ಷವಿಡೀ ತಿನ್ನುವ ಪ್ರಧಾನ ಆಹಾರ ಸಸ್ಯಾಹಾರವೇ ಆಗಿರುತ್ತದೆ. ಇಷ್ಟಾಗಿಯೂ ಮೂಲತಃ ಸಸ್ಯಾಹಾರಿಗಳೇ ಆಗಿದ್ದು, ಕೇವಲ ವರ್ಷಕ್ಕೊಮ್ಮೆ ಮೀನು ಮಾಂಸ ತಿನ್ನುವವರನ್ನು ಕೂಡಾ, ತಿಂಗಳಿಗೊಮ್ಮೆ, ವಾರಕ್ಕೊಮ್ಮೆ ಅಥವಾ ಪ್ರತಿದಿನ ಮೀನು, ಮೊಟ್ಟೆ, ಮಾಂಸ ಇತ್ಯಾದಿಯನ್ನು ತಿನ್ನುವವರ ಸಾಲಲ್ಲಿ ನಿಲ್ಲಿಸಿ, ಅವರು ನಿತ್ಯವೂ ತಿನ್ನುವ ಅಷ್ಟೆಲ್ಲಾ ಸೊಪ್ಪು, ತರಕಾರಿ, ಧವಸಧಾನ್ಯಗಳನ್ನೆಲ್ಲ ಕಡೆಗಣಿಸಿ ಅವರ ಮೇಲೆ ಮಾಂಸಾಹಾರಿ ಎಂಬ ಸಗಟು ಬಿರುದನ್ನು ಅಂಟಿಸಿ ಬಿಡುವುದು ಎಲ್ಲಿಯ ನ್ಯಾಯ? ಎರಡೂ ವರ್ಗಗಳನ್ನು ಪ್ರತ್ಯೇಕವಾಗಿಯೇ ಗುರುತಿಸಬೇಕೆಂಬ ಹಠ ಉಳ್ಳವರು, ಒಬ್ಬರನ್ನು ಕಟ್ಟಾ ಸಸ್ಯಾಹಾರಿಗಳೆಂದು ಮತ್ತು ಇನ್ನೊಬ್ಬರನ್ನು ಮಾಂಸಸ್ಯಾಹಾರಿಗಳೆಂದು ಅಥವಾ ಮಿಶ್ರಾಹಾರಿಗಳೆಂದು ಅಥವಾ ಇನ್ನೂ ನಿಖರವಾಗಿ ಹೇಳಬೇಕೆಂದರೆ ಮೀನು ಮಾಂಸ ಕೂಡ ತಿನ್ನುವ ಸಸ್ಯಾಹಾರಿಗಳೆಂದು ಕರೆಯುವುದು ಹೆಚ್ಚು ನ್ಯಾಯೋಚಿತ.

ಸರಿ, ನಾಮಕರಣದಲ್ಲಿ ಆಗಿರುವ ಯಡವಟ್ಟನ್ನು ಸಹಿಸಿಕೊಳ್ಳೋಣ. ಮಾಂಸಾಹಾರವನ್ನು ಅಪರಾಧ ಅಥವಾ ಪಾಪಕೃತ್ಯ ಎಂಬಂತೆ ಚಿತ್ರಿಸುವುದು ಮತ್ತು ಮಾಂಸಾಹಾರಿಗಳೆಂಬ ಬಿರುದು ಅಂಟಿಸಲ್ಪಟ್ಟವರನ್ನು ಕಟಕಟೆಯಲ್ಲಿ ನಿಲ್ಲಿಸಿ ಅವರ ಮೇಲೆ ಅನಗತ್ಯ ನಿಷೇಧ, ನಿರ್ಬಂಧಗಳನ್ನು ಹೇರುವುದು-ಇದು ಖಂಡಿತ ಘೋರ ಅನ್ಯಾಯ. ಭಾರತದಲ್ಲಿಂದು ಈ ಅನ್ಯಾಯ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ, ರಾಜಾರೋಷವಾಗಿ ನಡೆಯುತ್ತಿದೆ, ಮಾತ್ರವಲ್ಲ, ಈ ಅನ್ಯಾಯದ ವೈಭವೀಕರಣವೂ ನಡೆಯುತ್ತಿದೆ. ಹಲವು ಕಡೆ ಈ ಅನ್ಯಾಯಕ್ಕೆ ವ್ಯವಸ್ಥೆಯ ಶ್ರೀರಕ್ಷೆ ಕೂಡಾ ಲಭ್ಯವಿದೆ. ವಿಪರ್ಯಾಸವೇನೆಂದರೆ, ಎಲ್ಲವೂ ಬಹುಸಂಖ್ಯಾತರ ಮರ್ಜಿ ಪ್ರಕಾರವೇ ನಡೆಯಬೇಕು ಮತ್ತು ಅಲ್ಪಸಂಖ್ಯಾತರು ಬಹುಸಂಖ್ಯಾತರ ಆದೇಶಗಳನ್ನು ಪಾಲಿಸುತ್ತಾ ಅವರಿಗೆ ವಿಧೇಯವಾಗಿ ಬದುಕಬೇಕು ಎಂಬ ದಬ್ಬಾಳಿಕೆಯ ಅಪಸ್ವರ ವ್ಯಾಪಕವಾಗಿರುವ ಸಮಾಜ ನಮ್ಮದು. ಇಂತಹ ಸಮಾಜದಲ್ಲಿ ಆಹಾರದ ವಿಷಯದಲ್ಲಿ ಮಾತ್ರ ಬಹುಸಂಖ್ಯಾತರು ಅಲ್ಪಸಂಖ್ಯಾತರ ಇಚ್ಛಾನುಸಾರ ಕುಣಿಯಬೇಕು ಎಂದು ಆಗ್ರಹಿಸಲಾಗುತ್ತಿದೆ. ಇಲ್ಲೊಂದು ಸಂಶಯ ಕಾಡುತ್ತಿದೆ. ಭಾರತದಲ್ಲಿ ಧರ್ಮ, ದೇವರುಗಳು ಮತ್ತು ಜನಸಾಮಾನ್ಯರ ಅಜ್ಞಾನವನ್ನು ಬಳಸಿಕೊಂಡು ಒಂದು ತೀರಾ ಸಣ್ಣ ಅಲ್ಪಸಂಖ್ಯಾತ ಗುಂಪಿನವರು, ತಾವು ಬಹುಸಂಖ್ಯಾತರ ಪ್ರತಿನಿಧಿಗಳೆಂಬಂತೆ ನಟಿಸುತ್ತಿದ್ದಾರೆಯೇ? ಬಹುಸಂಖ್ಯಾತರನ್ನು ಮೂರ್ಖರಾಗಿಸುತ್ತಿದ್ದಾರೆಯೇ? ಧಾರ್ಮಿಕ ಅಲ್ಪಸಂಖ್ಯಾತರನ್ನೆಲ್ಲ ಬದಿಗಿಟ್ಟು ಕೇವಲ ಹಿಂದೂ ಸಮಾಜವನ್ನೇ ನೋಡಿದರೂ ಅಲ್ಲೂ ಹೆಚ್ಚಿನವರು ಮಾಂಸಾಹಾರಿಗಳು. ಕಟ್ಟಾ ಸಸ್ಯಾಹಾರಿಗಳೆನ್ನಲಾಗುವ ಬ್ರಾಹ್ಮಣರಲ್ಲೂ, ಎಷ್ಟೋ ಮಂದಿ ಬಂಗಾಳದಂತಹ ಹಲವೆಡೆ ಅಧಿಕೃತವಾಗಿಯೇ ಮಾಂಸಾಹಾರಿಗಳು. ಮೀನು, ಮೊಟ್ಟೆಯನ್ನಂತೂ ಅವರು ತಿನ್ನುವುದು ಮಾತ್ರವಲ್ಲ ಅವುಗಳ ರುಚಿಕರ ಅಡುಗೆಯನ್ನೂ ಮಾಡುತ್ತಾರೆ. ಹೀಗಿರುವಾಗ ಸಸ್ಯಾಹಾರವನ್ನು ಎಲ್ಲರ ಮೇಲೆ ಹೇರುವ ಅನಾಗರಿಕ ದಬ್ಬಾಳಿಕೆ ಏಕೆ? ಈ ಅನ್ಯಾಯ ಮಾಡುತ್ತಿರುವವರು ಯಾರು?

ಭಾರತದಲ್ಲಿ ಬಹುಜನ ಸಮಾಜಕ್ಕೆ ಮೀಸಲಾತಿ ನೀಡುವ ಪ್ರಶ್ನೆ ಬಂದಾಗ ಇಲ್ಲಿನ ಧಾರ್ಮಿಕ ಅಲ್ಪ ಸಂಖ್ಯಾತರು ಮೀಸಲಾತಿಯನ್ನು ಬೆಂಬಲಿಸಿದ್ದರು. ಬಹುಜನರಿಗೆ ಮೀಸಲಾತಿ ನೀಡುವುದನ್ನು ಅತ್ಯುಗ್ರವಾಗಿ ವಿರೋಧಿಸಿದ್ದು, ಇಲ್ಲಿಯ ಧಾರ್ಮಿಕ ಬಹುಸಂಖ್ಯಾತರೊಳಗೆ ಅಡಗಿರುವ, ಮೇಲ್ಜಾತಿಗೆ ಸೇರಿದ ನೈಜ ಅಲ್ಪಸಂಖ್ಯಾತರು. ಅವರು ಯಾವ ಮಟ್ಟಿಗೆ ಹಿಂದೂ ಬಹುಸಂಖ್ಯಾತರ ಶತ್ರುಗಳೆಂಬುದು ಮೀಸಲಾತಿಯ ಸನ್ನಿವೇಶದಲ್ಲಿ ಬಟಾಬಯಲಾಗಿ ಬಿಟ್ಟಿತ್ತು. ಇದೀಗ ಬಹುಸಂಖ್ಯಾತರ ಮೇಲೆ ಸಸ್ಯಾಹಾರವನ್ನು ಹೇರುವ ಹುನ್ನಾರದಲ್ಲೂ ಅವರ ಮುಖವಾಡ ಕಳಚಿ ಬಿದ್ದಿದ್ದು ನೈಜ ಮುಖ ಬಹಿರಂಗವಾಗಿದೆ. ಹಿಂದೂ ಬಹುಸಂಖ್ಯಾತರ ವಿರುದ್ಧ ಅವರ ಜಿಗುಪ್ಸೆ, ತಾತ್ಸಾರಗಳೆಲ್ಲಾ ಅನಾವರಣಗೊಂಡಿವೆ.

ಸಸ್ಯಾಹಾರಿ ಇರಲಿ, ಮಾಂಸಸ್ಯಾಹಾರಿ ಇರಲಿ, ನಮ್ಮ ದೇಶದ ಜನಸಾಮಾನ್ಯನನ್ನು ನಿತ್ಯ ಕಾಡುವುದು, ಇಂದು ನಾನು ಮತ್ತು ನನ್ನ ಮಕ್ಕಳಿಗೆ ತಿನ್ನಲು ಏನು ಲಭ್ಯವಿದೆ? ಎಂಬ ಮಹಾ ಪ್ರಶ್ನೆ. ಅವನ ದೈನಂದಿನ ಆಹಾರ ಅವನಿಗೆ ಸಿಕ್ಕಿ ಬಿಟ್ಟರೆ ಸಾಕು, ಅವನು ನೆಮ್ಮದಿಯಾಗಿರುತ್ತಾನೆ. ಇನ್ನೊಬ್ಬರ ಮನೆಯಲ್ಲಿ ಯಾವ ಅಡುಗೆ ತಯಾರಾಗುತ್ತಿದೆ ಎಂಬ ಬಗ್ಗೆ ಚಿಂತಿಸುವುದಕ್ಕೆ ಬೇಕಾದಷ್ಟು ಲಗ್ಸುರಿ ಪುರುಸೊತ್ತು ಅವನ ಬಳಿ ಇರುವುದಿಲ್ಲ. ಇನ್ನೊಬ್ಬರ ಅಡುಗೆಮನೆ, ಫ್ರಿಡ್ಜು, ಪ್ಲೇಟುಗಳ ಕಡೆಗೆ ಪತ್ತೇದಾರಿ ದೃಷ್ಟಿ ಬೀರುವ ಪುರುಸೊತ್ತಿರುವುದು ಹೊಟ್ಟೆಯಲ್ಲಿ ಕೊಬ್ಬು, ತಲೆಯಲ್ಲಿ ಕೆಸರು ತುಂಬಿ ಕೊಂಡಿರುವ ಕೆಲವು ಸಮಾಜ ವಿರೋಧಿ ಪುಂಡರಿಗೆ ಮಾತ್ರ. ಯಾವುದೇ ಊರಲ್ಲಿ ಇವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಇರುತ್ತದೆ. ಆದರೆ ವ್ಯವಸ್ಥೆ ತಮ್ಮ ಬೆಂಬಲಕ್ಕಿದೆ ಮತ್ತು ತಾವು ಜನಸಾಮಾನ್ಯರನ್ನು ಮಾನಸಿಕವಾಗಿ ತಮ್ಮ ದಾಸರಾಗಿಸುವಲ್ಲಿ ಯಶಸ್ಸು ಸಾಧಿಸಿದ್ದೇವೆಂಬ ನಂಬಿಕೆ ಅವರಿಗೆ ಅತಿಯಾದ ಆತ್ಮ ವಿಶ್ವಾಸ ನೀಡಿದೆ. ಅವರು ಜಗತ್ತಿನ ಎಲ್ಲಾ ಕಟ್ಟಾ ಸಸ್ಯಾಹಾರಿಗಳನ್ನು, ಮಾತ್ರವಲ್ಲ, ಅವರ ಧರ್ಮ, ದೇವರು, ಮಂದಿರ, ಭಾವನೆಗಳು ಇತ್ಯಾದಿ ಎಲ್ಲವನ್ನೂ ತಾವೇ ಪ್ರತಿನಿಧಿಸುವುದಾಗಿ ಸುಳ್ಳುಹೇಳುತ್ತಾ ಅಲೆಯುತ್ತಿರುತ್ತಾರೆ. ಈ ಬಗೆಯ ಹೇಡಿಗಳು ನಮ್ಮ ದೇಶದಲ್ಲಿ ಪದೇಪದೇ ಮಾಡಿದ ಪುಂಡಾಟಗಳ ಸರಮಾಲೆಯನ್ನು ನೋಡಿದರೆ, ಅವರನ್ನಿನ್ನೂ ಸಹಿಸಿಕೊಂಡಿರುವ ದೇಶದ ಬಹುಜನರ ಸಂವೇದನಾಶೀಲತೆ ಅಥವಾ ಅದರ ಅನುಪಸ್ಥಿತಿಯ ಬಗ್ಗೆ ಮರುಕ ಹುಟ್ಟುತ್ತದೆ.

* ಸರಕಾರೀ ಸಮಾವೇಶ, ಕ್ರೀಡೋತ್ಸವ, ಸಾಹಿತ್ಯ ಸಮ್ಮೇಳನ ಇತ್ಯಾದಿ ಸಂದರ್ಭಗಳಲ್ಲಿ, ಶಾಲೆ, ಕಾಲೇಜುಗಳಲ್ಲಿ ಕಟ್ಟುನಿಟ್ಟಾಗಿ ಸಸ್ಯಾಹಾರಿ ಭೋಜನ ಮಾತ್ರ ನೀಡಬೇಕು ಎಂಬ ಬೇಡಿಕೆ ಅಲ್ಲಲ್ಲಿ ಆಗಾಗ ಕೇಳಿಬರುತ್ತಿದೆ.

* ಮಧ್ಯಪ್ರದೇಶದ ಮೈಹಾರ್ ನಗರಪಾಲಿಕೆಯಲ್ಲಿ ಈ ವರ್ಷ ನವರಾತ್ರಿ ಪ್ರಯುಕ್ತ ಮಾರ್ಚ್ 30ರಿಂದ ಎಪ್ರಿಲ್ 7 ತನಕ ಯಾವುದೇ ಬಗೆಯ ಮಾಂಸ, ಮೀನು, ಮೊಟ್ಟೆಗಳ ಖರೀದಿ ಮತ್ತು ಮಾರಾಟವನ್ನು ನಿಷೇಧಿಸಲಾಗಿತ್ತು.

* ಉತ್ತರಪ್ರದೇಶದ ವಾರಣಾಸಿಯಲ್ಲಿ, ನವರಾತ್ರಿ ಹಬ್ಬದ ಸಂದರ್ಭದಲ್ಲಿ ಎಲ್ಲ ಮಾಂಸದ ಅಂಗಡಿಗಳನ್ನು ಕಡ್ಡಾಯವಾಗಿ ಮುಚ್ಚಿಡಬೇಕೆಂದು ಸ್ಥಳೀಯ ಮುನಿಸಿಪಲ್ ಕಾರ್ಪೊರೇಷನ್ ನವರು ಆದೇಶ ಹೊರಡಿಸಿದರು.

* ಉತ್ತರಪ್ರದೇಶದಲ್ಲಿ ನವರಾತ್ರಿಯ ಸಂದರ್ಭದಲ್ಲಿ ಎಲ್ಲ ದೇವಸ್ಥಾನಗಳ ಅರ್ಧ ಕಿ.ಮೀ. ವ್ಯಾಪ್ತಿಯಲ್ಲಿ ಮಾಂಸ ಮತ್ತು ಮಾಂಸಾಹಾರ ಮಾರಾಟದ ಮೇಲೆ ನಿಷೇಧ ಹೇರಲಾಗಿತ್ತು. ಈ ಕುರಿತು ಮಾತನಾಡುತ್ತ ಆಪ್ ಪಕ್ಷದ ಸಂಸದ ಸಂಜಯ್ ಸಿಂಗ್, ಇದೇ ನವರಾತ್ರಿಯ ದಿನಗಳಲ್ಲಿ ಉತ್ತರ ಪ್ರದೇಶದ ಮದ್ಯದಂಗಡಿಗಳಲ್ಲಿ ‘ಒಂದು ಬಾಟಲಿ ಖರೀದಿಸಿದರೆ ಇನ್ನೊಂದು ಬಾಟಲಿ ಉಚಿತ’ ಉತ್ಸವ ನಡೆಯುತ್ತಿದೆ, ಆದ್ದರಿಂದ ಎಲ್ಲ ಮದ್ಯದಂಗಡಿಗಳ ಹೊರಗೆ ಜನ ಸಾಲುಗಟ್ಟಿ ನಿಂತಿದ್ದಾರೆ - ಇದೆಲ್ಲಿಯ ಧರ್ಮ ಸೇವೆ? ಎಂದು ಲೇವಡಿ ಮಾಡಿದ್ದರು.

* ಇತ್ತೀಚೆಗೆ ಸ್ವತಃ ನಮ್ಮ ಬೆಂಗಳೂರಲ್ಲೂ ಇಂತಹದೇ ದುರ್ಘಟನೆ ನಡೆಯಿತು. ಸಣ್ಣ ಮನಸ್ಸಿನ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಪಶುಸಂಗೋಪನಾ ವಿಭಾಗದವರು ರಾಮನವಮಿಯ ಪ್ರಯುಕ್ತ ಎಪ್ರಿಲ್ 6ರಂದು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಎಲ್ಲೂ ಯಾವುದೇ ಮಾಂಸದಂಗಡಿಯಲ್ಲಿ ಪ್ರಾಣಿವಧೆ ಮಾಡಬಾರದು ಮತ್ತು ಎಲ್ಲೂ ಮಾಂಸ ಮಾರಾಟ ಮಾಡಬಾರದು ಎಂಬ ಆದೇಶವನ್ನು ಹೊರಡಿಸಿದರು.

* ಭೂಮಿಯ ಮೇಲೆ ಯಾರಾದರೂ ಮಾಂಸಾಹಾರ ತಿಂದರೆ ಆಕಾಶದಲ್ಲಿ ಹಾರುವ ವಿಮಾನಗಳಿಗೆ ಏನಾದರೂ ಸಮಸ್ಯೆ ಇದೆ ಎಂದು ಈತನಕ ಯಾವ ವಿಜ್ಞಾನವೂ ಹೇಳಿದ್ದಿಲ್ಲ. ಆದರೂ ಈ ವರ್ಷ ನಮ್ಮ ಬೆಂಗಳೂರಿನಲ್ಲಿ ‘ಏರೋ ಇಂಡಿಯಾ ಷೋ’ ಸಂದರ್ಭದಲ್ಲಿ ಬಿಬಿಎಂಪಿ ಯಲಹಂಕಾ ವಲಯದ ಜಾಯಿಂಟ್ ಕಮಿಷನರ್ ಅವರು ಜನವರಿ 17ರಂದು ಹಿಟ್ಲರ್‌ನನ್ನು ನಾಚಿಸುವ ಆದೇಶವೊಂದನ್ನು ಹೊರಡಿಸಿದರು. ಜನವರಿ 23ರಿಂದ ಫೆಬ್ರವರಿ 17ರ ತನಕ ಯಲಹಂಕಾ ಏರ್ ಫೋರ್ಸ್ ಸ್ಟೇಷನ್‌ನ ಸುತ್ತ ಮುತ್ತಲ 13 ಕಿ.ಮೀ. ವ್ಯಾಪ್ತಿಯಲ್ಲಿ ಮೀನು, ಚಿಕನ್ ಮತ್ತು ಮಾಂಸ ಮಾರುವ ಎಲ್ಲ ಅಂಗಡಿಗಳನ್ನು ಮುಚ್ಚಿಡಬೇಕು ಮತ್ತು ಈ ಅವಧಿಯಲ್ಲಿ ಪ್ರಸ್ತುತ ಪ್ರದೇಶದಲ್ಲಿ ಯಾವುದೇ ಮಾಂಸಾಹಾರಿ ಖಾದ್ಯವನ್ನು ಮಾರಬಾರದು, ಒಂದು ವೇಳೆ ಈ ನಿಷೇಧವನ್ನು ಯಾರಾದರೂ ಉಲ್ಲಂಘಿಸಿದರೆ, 2020ರ ಬಿಬಿಎಂಪಿ ಆಕ್ಟ್, ರೂಲ್ 91 ಮತ್ತು 1937ರ ಇಂಡಿಯನ್ ಏರ್ ಕ್ರಾಫ್ಟ್ ನಿಯಮಗಳ ಅನುಸಾರ ದಂಡನಾಕ್ರಮಗಳು ಅನ್ವಯಿಸುವವು ಎಂದು ಆದೇಶದಲ್ಲಿ ತಿಳಿಸಲಾಗಿತ್ತು.

* 2021ರಲ್ಲಿ ಗುಜರಾತ್ ಸರಕಾರವು ರಸ್ತೆ ಬದಿಯ ಹೋಟೆಲು, ಸ್ಟಾಲುಗಳಲ್ಲಿ ಮಾಂಸಾಹಾರ ಮಾರುವುದನ್ನು ನಿಷೇಧಿಸಿತ್ತು.

* ಗುಜರಾತ್‌ನ ಪಾಲಿತಾನಾ ನಗರದಲ್ಲಿ 2014ರಲ್ಲೇ ಮೊಟ್ಟೆ, ಮೀನು, ಚಿಕನ್ ಮತ್ತು ಮಾಂಸ ಸಮೇತ ಎಲ್ಲ ಬಗೆಯ ಮಾಂಸಾಹಾರದ ಬಳಕೆ ಮತ್ತು ಮಾರಾಟದ ಮೇಲೆ ಶಾಶ್ವತ ನಿಷೇಧ ಹೇರಲಾಗಿತ್ತು. ಇಂತಹ ಸಾಧನೆ ಮಾಡಿದ ಜಗತ್ತಿನ ಪ್ರಥಮ ನಗರ ಅದೆಂದು ಹಲವರು ಬೀಗುತ್ತಲೂ ಇದ್ದರು.

* ದಿಲ್ಲಿಯ ಬಿಜೆಪಿ ಸಂಸದ ಪರ್ವೇಶ್ ವರ್ಮಾ, ನವರಾತ್ರಿಯ 9 ದಿನ ಎಲ್ಲ ಮಾಂಸದಂಗಡಿಗಳನ್ನು ಮುಚ್ಚಿಡಬೇಕು ಎಂಬ ದಕ್ಷಿಣ ದಿಲ್ಲಿ ಮುನಿಸಿಪಲ್ ಕಾರ್ಪೊರೇಶನ್ (SDMC) ಮೇಯರ್ ಅವರ ಆದೇಶವನ್ನು ಸಮರ್ಥಿಸಿದ್ದು ಮಾತ್ರವಲ್ಲ, ನವರಾತ್ರಿಯ ವೇಳೆ ದೇಶದೆಲ್ಲೆಡೆ ಇಂತಹ ನಿಷೇಧ ಹೇರಬೇಕು ಎಂದು ಆಗ್ರಹಿಸಿದ್ದರು.

* ಸಿಕ್ಕಿದ್ದೆಲ್ಲವನ್ನೂ ತಿನ್ನುವವರು ಮತ್ತು ಕುಡಿಯುವವರೆಂಬ ಖ್ಯಾತಿಯುಳ್ಳ ಬಿಜೆಪಿ ಸಂಸದ, ವೃದ್ಧ ನಟ ಶತ್ರುಘನ್ ಸಿನ್ಹಾ, ಕೇವಲ ತನ್ನ ಪಕ್ಷದ ನಾಯಕರನ್ನು ಮೆಚ್ಚಿಸಲಿಕ್ಕಾಗಿ, ಇನ್ನೂ ಒಂದು ಹೆಜ್ಜೆ ಮುಂದೆ ಹೋದರು. ದೇಶದಲ್ಲಿ ಎಲ್ಲೆಡೆ ಮಾಂಸಾಹಾರದ ಮೇಲೆ ನಿಷೇಧ ಹೇರಬೇಕು ಎಂದು ಅವರು ಬಹಿರಂಗ ಕರೆ ನೀಡಿದ್ದರು.

* ಕೆಲವು ಬಾಲಿವುಡ್ ನಟರು, ತಾವು ಮಾಂಸಾಹಾರವನ್ನು ಸಂಪೂರ್ಣ ತ್ಯಜಿಸಿದ್ದೇವೆ ಎಂದು ಘೋಷಿಸಿದ್ದಾರೆ. ಕೆಲವರು ಮತ್ತಷ್ಟು ಮಡಿವಂತಿಕೆ ಮೆರೆಯುತ್ತಾ ತಾವು ‘ವೇಗನ್’ಗಳೆಂದು (ಮೀನು, ಮೊಟ್ಟೆ, ಮಾಂಸ ಮಾತ್ರವಲ್ಲ, ಹಾಲು, ಬೆಣ್ಣೆ, ತುಪ್ಪ ಮುಂತಾದ ಪ್ರಾಣಿಮೂಲದಿಂದ ಬರುವ ಯಾವುದೇ ಆಹಾರವನ್ನು ಸೇವಿಸದವರೆಂದು) ಘೋಷಿಸಿದ್ದಾರೆ. ನಿಜವಾಗಿ ಅವರೇನು ತಿನ್ನುತ್ತಾರೆ ಎಂದು ಯಾರೂ ಅವರನ್ನು ಕೇಳಿರಲಿಲ್ಲ. ಮಾಂಸಾಹಾರವನ್ನು ಅಪರಾಧೀಕರಿಸುವ ಅಭಿಯಾನದ ಅಂಗವಾಗಿ ಅವರ ಈ ಹೇಳಿಕೆ ಪ್ರಕಟವಾಗಿತ್ತು.

* ‘ಅನ್ನಪೂರಣಿ’ ಎಂಬ ತಮಿಳು ಚಿತ್ರದಲ್ಲಿ, ಅಡುಗೆಯನ್ನೇ ವಂಶವೃತ್ತಿಯಾಗಿಸಿಕೊಂಡಿದ್ದ ಅಡುಗೆ ಭಟ್ಟರೊಬ್ಬರ ಮಗಳು, ಮಾಂಸಾಹಾರಿ ಖಾದ್ಯ ತಯಾರಿಸುವ ಕಲೆಯಲ್ಲಿ ಆಸಕ್ತಿ ವಹಿಸಿ ಕೊನೆಗೆ ಅದನ್ನೇ ತನ್ನ ವೃತ್ತಿಯಾಗಿಸಿದ ಕಥೆಯಿದೆ ಎಂಬ ಕಾರಣಕ್ಕಾಗಿ ಆ ಸಿನೆಮಾದ ವಿರುದ್ಧ ಭಾರೀ ಪ್ರತಿಭಟನೆ ನಡೆಸಲಾಗಿತ್ತು. ನೆಟ್‌ಫ್ಲಿಕ್ಸ್‌ನಲ್ಲಿ ಅದರ ಪ್ರದರ್ಶನಕ್ಕೆ ತಡೆ ಹಾಕಲಾಯಿತು.

* ಶಾಲಾ ಮಕ್ಕಳಿಗೆ ನೀಡಲಾಗುವ ಉಚಿತ ಆಹಾರದ ಜೊತೆ ಮೊಟ್ಟೆಯನ್ನು ಸೇರಿಸಿದ್ದಕ್ಕೆ ಹಲವೆಡೆ ವಿರೋಧ, ಬಹಿಷ್ಕಾರ, ಹಲ್ಲೆ ಎಲ್ಲಾ ನಡೆದಿತ್ತು.

* ಎಷ್ಟೋ ಕಡೆ ನಿವೇಶನಗಳ ಮಾಲಕರು ತಾವು ಮಾಂಸಾಹಾರಿಗಳಿಗೆ ನಿವೇಶನ ಮಾರುವುದಿಲ್ಲ ಅಥವಾ ಬಾಡಿಗೆಗೆ ಕೊಡುವುದಿಲ್ಲ ಎಂಬ ನಿಯಮ ಮಾಡಿದ್ದಾರೆ. ಎಷ್ಟೋ ಹೌಸಿಂಗ್ ಸೊಸೈಟಿಗಳಲ್ಲಿ ಮಾಂಸಾಹಾರಿಗಳಿಗೆ ನಿವೇಶನ ನಿಷಿದ್ಧವಾಗಿದೆ.

* ಸಸ್ಯಾಹಾರಿಗಳ ಒಂದು ವರ್ಗ, ಕೇವಲ ತಾವು ಸಸ್ಯಾಹಾರಿಗಳೆಂಬ ಕಾರಣಕ್ಕೆ ಇತರರಿಗಿಂತ ಶ್ರೇಷ್ಠರು ಎಂದು ಹೇಳಿಕೊಂಡದ್ದು ಸಾಲದ್ದಕ್ಕೆ, ತಾವು (ಮೊಟ್ಟೆಯನ್ನೂ ತಿನ್ನದ) ‘ಶುದ್ಧ ಸಸ್ಯಾಹಾರಿಗಳು’ (ಪ್ಯೂರ್ ವೆಜಿಟೇರಿಯನ್) ಎನ್ನುವ ಮೂಲಕ ಮಡಿವಂತಿಕೆಯ ಇನ್ನೊಂದು ಗರಿಯನ್ನು ಧರಿಸಿ ಬೀಗತೊಡಗಿದ್ದಾರೆ. ನಿಜವಾಗಿ ಇದು, ನಾವು ಇತರ ಸಸ್ಯಾಹಾರಿಗಳಿಗಿಂತಲೂ ಶ್ರೇಷ್ಠರು ಎಂದು ಸಾಧಿಸುವ ಶ್ರಮವಾಗಿತ್ತು.

* ಇನ್ಫೋಸಿಸ್‌ನ ಸುಧಾಮೂರ್ತಿ ತಾನು ಪ್ಯೂರ್ ಸಸ್ಯಾಹಾರಿ ಎಂದು ಕೊಚ್ಚಿಕೊಂಡದ್ದು ಮಾತ್ರವಲ್ಲ, ‘‘ವಿದೇಶ ಪ್ರವಾಸಗಳಿಗೆ ಹೋಗುವಾಗ, ನನ್ನ ಆಹಾರವನ್ನು ನಾನು ಒಯ್ಯುತ್ತೇನೆ. ಸಸ್ಯಾಹಾರಿಗಳು ಮತ್ತು ಮಾಂಸಾಹಾರಿಗಳಿಬ್ಬರೂ ಬಳಸಿದ ಸ್ಪೂನ್ ಗಳನ್ನೂ ನೀಡುತ್ತಾರೆಂಬುದು ವಿದೇಶ ಪ್ರವಾಸಗಳ ವೇಳೆ ನನಗಿರುವ ಅತಿದೊಡ್ಡ ಭಯ’’ ಎಂದೂ ಹೇಳಿದರು. ಇದಕ್ಕೆ ಭಾರೀ ಅಸಮಾಧಾನದ ಪ್ರತಿಕ್ರಿಯೆಗಳೂ ಪ್ರಕಟವಾದವು. ‘‘ನಿಮ್ಮ ಮಗಳ ಗಂಡ, ನಾನ್ ವೆಜ್ ರಿಶಿ ಸುನಕ್ (ಬ್ರಿಟನ್‌ನ ಮಾಜಿ ಪ್ರಧಾನಿ)ರನ್ನು ನೀವು ಮುಟ್ಟುತ್ತೀರಾ?’’ ಎಂದು ಕೆಲವರು ಪ್ರಶ್ನಿಸಿದರೆ, ಮತ್ತೆ ಕೆಲವರು ‘‘ಜಗತ್ತಿನ ಯಾವುದೇ ಭಾಗದಲ್ಲಿ ನೀವು ಉಸಿರಾಡುವ ಗಾಳಿಯಲ್ಲಿ, ಮಾಂಸಾಹಾರಿಗಳು ಬಿಟ್ಟ ಶ್ವಾಸ ಕೂಡಾ ಸೇರಿರುತ್ತದೆ. ಆದ್ದರಿಂದ ನೀವು ನಿಮ್ಮ ಮಡಿ ಪಾತ್ರೆಗಳ ಜೊತೆ ಆಕ್ಸಿಜನ್ ಸಿಲಿಂಡರ್‌ಗಳನ್ನೂ ಹೊತ್ತುಕೊಂಡು ಹೋಗುತ್ತೀರಾ?’’ ಎಂದು ಕೇಳಿದ್ದರು.

* ದೇಶದಲ್ಲಿ ಈರುಳ್ಳಿಯ ಬೆಲೆ ಹೆಚ್ಚುತ್ತಾ ಪ್ರತೀ ಕಿಲೋಗೆ ನೂರು ರೂಪಾಯಿಯ ಗಡಿಯನ್ನೂ ದಾಟಿದಾಗ ಆ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಯಿತು. ಆ ಸಂದರ್ಭದಲ್ಲಿ ದೇಶದ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್, ಈರುಳ್ಳಿಯ ಬೆಲೆ ಇಳಿಸುವ ಕ್ರಮಗಳ ಕುರಿತು ಮಾತನಾಡುವ ಬದಲು, ‘‘ನಾನು ಈರುಳ್ಳಿ ತಿನ್ನುವುದಿಲ್ಲ’’ ಎನ್ನುವ ಮೂಲಕ ಆ ಸನ್ನಿವೇಶವನ್ನು ಕೂಡಾ ತನ್ನ ಮಡಿವಂತಿಕೆ ಮತ್ತು ಹಿರಿಮೆಯನ್ನು ಸಾಧಿಸುವುದಕ್ಕೆ ಬಳಸಿಕೊಂಡರು.

ಇದೆಲ್ಲಾ, ವೈಷ್ಣವ ಬ್ರಾಹ್ಮಣ ವ್ಯವಸ್ಥೆ ದೇಶದಲ್ಲಿ ಸ್ಥಾಪಿತವಾಗಿ ಬಿಟ್ಟಿದೆ ಎಂಬ ಮತ್ತು ಬಹುಜನರ ಮೇಲೆ ತಾವು ಸಂಪೂರ್ಣ ಸ್ವಾಮ್ಯವನ್ನು ಸಾಧಿಸಿದ್ದೇವೆಂಬ ಕೆಲವರ ಮೂಢನಂಬಿಕೆಯಿಂದ ಪ್ರೇರಿತ ಅಹಂಭಾವದ ಪ್ರದರ್ಶನವೇ ಹೊರತು ಇದಕ್ಕೆ ಸಾತ್ವಿಕತೆಯೊಂದಿಗಾಗಲಿ, ಪ್ರಾಣಿದಯೆಯೊಂದಿಗಾಗಲಿ ಯಾವ ಸಂಬಂಧವೂ ಇಲ್ಲ.

ಸಸ್ಯಾಹಾರಿಗಳಲ್ಲಿನ ಒಂದು ಸಣ್ಣ ವರ್ಗದ ಪ್ರಸ್ತುತ ದುರಹಂಕಾರಿ ವರ್ತನೆಯನ್ನು ಮತ್ತು ಅವರ ವಿಪರೀತ ನಿರೀಕ್ಷೆಗಳನ್ನು, ಬಹುಸಂಖ್ಯಾತರ ಮೇಲೆ ಅಲ್ಪಸಂಖ್ಯಾತರ ದಬ್ಬಾಳಿಕೆ ಎಂದೇ ಕರೆಯಬೇಕಾಗುತ್ತದೆ. ಏಕೆಂದರೆ ಇದೆಲ್ಲಾ ನಡೆಯುತ್ತಿರುವ ಭಾರತದ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಪೈಕಿ, ಕಟ್ಟಾ ಸಸ್ಯಾಹಾರಿಗಳು ಶೇ. 50ಕ್ಕಿಂತ ಅಧಿಕ ಸಂಖ್ಯೆಯಲ್ಲಿರುವುದು 5 ರಾಜ್ಯಗಳಲ್ಲಿ ಮಾತ್ರ. ರಾಜಸ್ಥಾನ, ಹರ್ಯಾಣ, ಪಂಜಾಬ್, ಗುಜರಾತ್ ಮತ್ತು ಮಧ್ಯಪ್ರದೇಶ ಎಂಬ ಪ್ರಸ್ತುತ 5 ರಾಜ್ಯಗಳಲ್ಲಿ ಕಟ್ಟಾ ಸಸ್ಯಾಹಾರಿಗಳ ಸಂಖ್ಯೆ ಶೇ. 50ರಿಂದ ಶೇ. 75 ರಷ್ಟಿದೆ. ಉಳಿದಂತೆ ಉತ್ತರಪ್ರದೇಶ, ಮಹಾರಾಷ್ಟ್ರ, ದಿಲ್ಲಿ, ಉತ್ತರಾಖಂಡ, ಕರ್ನಾಟಕ ಮತ್ತು ಅಸ್ಸಾಮ್ ಎಂಬ 6 ಪ್ರದೇಶಗಳಲ್ಲಿ ಕಟ್ಟಾ ಸಸ್ಯಾಹಾರಿಗಳ ಸಂಖ್ಯೆ 20ರಿಂದ 47ರಷ್ಟು ಮಾತ್ರವಿದ್ದು ಈ 6 ರಾಜ್ಯಗಳಲ್ಲೂ ಕಟ್ಟಾ ಸಸ್ಯಾಹಾರಿಗಳು ಅಲ್ಪಸಂಖ್ಯಾತರಾಗಿದ್ದಾರೆ ಮತ್ತು ಮಾಂಸಾಹಾರಿಗಳು ಬಹುಸಂಖ್ಯಾತರಾಗಿದ್ದಾರೆ. ದೇಶದ ಉಳಿದೆಲ್ಲ ಭಾಗಗಳಲ್ಲಿ ಮಾಂಸಾಹಾರಿಗಳ ಪ್ರಮಾಣ ಶೇ. 75ರಿಂದ ಶೇ. 95ರಷ್ಟಿದೆ. ಈಶಾನ್ಯ ಭಾರತದ 6 ರಾಜ್ಯಗಳಲ್ಲಂತೂ ಮಾಂಸಾಹಾರಿಗಳ ಪ್ರಮಾಣ ಶೇ. 98ಕ್ಕಿಂತ ಅಧಿಕವಿದೆ. ಈ ದೃಷ್ಟಿಯಿಂದ, ಭಾರತ ಮಾಂಸಾಹಾರ ಪ್ರಧಾನ ದೇಶ ಎನ್ನುವುದಕ್ಕೆ ಯಾವುದೇ ಅಳುಕಿನ ಅಗತ್ಯವಿಲ್ಲ.

ಇಲ್ಲಿ ಇನ್ನೊಂದು ಅಂಶವೂ ಗಮನಾರ್ಹ. ಕಟ್ಟಾ ಸಸ್ಯಾಹಾರಿಗಳು ಯಾರೂ ತಾವು ಮಾಂಸಾಹಾರಿಗಳೆಂದು ಹೇಳಿಕೊಳ್ಳುವುದಿಲ್ಲ. ಆದರೆ ಮನೆಯ ಹೊರಗೆ, ಹೋಟೆಲುಗಳಲ್ಲಿ ಮತ್ತು ಮಿತ್ರರ ಮನೆಗಳಲ್ಲಿ ಮಾತ್ರ ಮಾಂಸಾಹಾರ ಸೇವಿಸುವ ಎಷ್ಟೋ ಮಂದಿ ಜಾತಿ, ಧರ್ಮ, ಸಮಾಜ, ಸಂಪ್ರದಾಯ ಇತ್ಯಾದಿಗಳಿಗೆ ಅಂಜಿ ಮಾಂಸಾಹಾರದ ಜೊತೆ ತಮಗಿರುವ ಆಪ್ತ ನಂಟನ್ನು ಗುಟ್ಟಾಗಿಟ್ಟು ತಾವು ಸಸ್ಯಾಹಾರಿಗಳೆಂದೇ ಹೇಳಿಕೊಳ್ಳುತ್ತಾರೆ. ಈ ಗುಪ್ತಾಹಾರಿಗಳಿಂದಾಗಿ ಕಟ್ಟಾ ಸಸ್ಯಾಹಾರಿಗಳ ಸಂಖ್ಯೆಯಲ್ಲಿ ಸಾಕಷ್ಟು ಕೃತಕ ಹೆಚ್ಚಳವಾಗಿ ಬಿಡುತ್ತದೆ.

ಇತ್ತೀಚೆಗೆ ಭಾರತದಲ್ಲಿ ಬಾಬಾಗಳ ಹಾವಳಿ ಹೆಚ್ಚಿದೆ. ಹಲವಾರು ವಿಲಾಸಿ ಕೇಸರಿ ಬಾಬಾಗಳು ಧರ್ಮ, ಆಧ್ಯಾತ್ಮಿಕತೆ ಇತ್ಯಾದಿಗಳ ಹೆಸರಲ್ಲಿ ಕಟ್ಟಾ ಸಸ್ಯಾಹಾರದ ಪರ ಅಬ್ಬರದ ಪ್ರಚಾರ ನಡೆಸಿದ್ದಾರೆ. ಸಾತ್ವಿಕ ಹಾಗೂ ತಾಮಸಿಕ ಎಂಬ ಪದಗಳನ್ನೆಲ್ಲ ಬಳಸಿ, ಸಸ್ಯಾಹಾರವನ್ನು ಸಜ್ಜನಿಕೆಯ ಜೊತೆ ಹಾಗೂ ಮಾಂಸಾಹಾರವನ್ನು ದುಷ್ಟತೆಯ ಜೊತೆ ಜೋಡಿಸಿ ಮಾಂಸಾಹಾರದ ವಿರುದ್ಧ ವ್ಯಾಪಕ ಅಭಿಯಾನ ಸಂಘಟಿಸಿದ್ದಾರೆ. ಮದ್ಯಪಾನದ ವಿರುದ್ಧ ಎಂದೂ ಎಲ್ಲೂ ಕಂಡುಬಂದಿಲ್ಲದ ಇವರ ಭಾವಾವೇಶ ಮಾಂಸಾಹಾರದ ವಿರುದ್ಧ ಎಲ್ಲೆಡೆ ಉತ್ತುಂಗದಲ್ಲಿರುತ್ತದೆ. ಜೊತೆಗೆ ಬ್ರಾಹ್ಮಣ್ಯ ಮತ್ತು ಅದರಲ್ಲೂ ವೈಷ್ಣವ ಪಂಥದ ಪ್ರತಿಪಾದಕರಾದ ಸಂಘ ಪರಿವಾರದವರು ಕೂಡಾ ದೇಶದೆಲ್ಲೆಡೆ ತಮ್ಮ ದಾಲ್, ಚಟ್ನಿ, ಸಾಂಬಾರ್ ಸಂಸ್ಕೃತಿಯ ಪರ ದಟ್ಟ ಪ್ರಚಾರ ಮಾಡಿದ್ದಾರೆ. ಆದರೆ ಇಷ್ಟಾಗಿಯೂ, ದೇಶದಲ್ಲಿ ಮಾಂಸಸ್ಯಾಹಾರಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ ಮತ್ತು ಕಟ್ಟಾ ಸಸ್ಯಾಹಾರಿಗಳ ಸಂಖ್ಯೆ ಕ್ರಮೇಣ ಕುಸಿಯುತ್ತಿದೆ.

ಮಾಂಸಸ್ಯಾಹಾರಿಗಳು ತುಂಬಾ ಸಹನಶೀಲರು. ಅವರು ತಮ್ಮ ಆಹಾರ ಪದ್ಧತಿಯನ್ನು ಇತರರ ಮೇಲೆ ಹೇರಲು ಪ್ರಯತ್ನಿಸಿದ್ದಿಲ್ಲ. ತರಕಾರಿ ಮಾರುವವರು ಗುಟ್ಟಾಗಿ ಮಾರಬೇಕೆಂದು ಆಗ್ರಹಿಸಿದ್ದಿಲ್ಲ. ಮಾಂಸಸ್ಯಾಹಾರಿಗಳು ತಮ್ಮ ಹಬ್ಬಗಳನ್ನು ಆಚರಿಸುವ ದಿನಗಳಲ್ಲಿ ತರಕಾರಿ ಅಂಗಡಿಯವರು ತಮ್ಮ ಅಂಗಡಿಗಳನ್ನು ಮುಚ್ಚಬೇಕು ಎಂದು ಒತ್ತಾಯಿಸಿದ್ದಿಲ್ಲ. ಅವರ ಈ ಸಹಿಷ್ಣುತೆ ಕಟ್ಟಾ ಸಸ್ಯಾಹಾರಿಗಳ ಪಾಲಿಗೆ ಅನುಕರಣೀಯ. ಅವರ ಸಹನೆಯ ಕಟ್ಟೆ ಒಡೆಯುವ ಮುನ್ನ ‘ಹೇರಿಕೆ’ ಸಂಸ್ಕೃತಿಯವರು ತಮ್ಮನ್ನು ತಿದ್ದಿಕೊಳ್ಳುವುದೊಳ್ಳೆಯದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಂಬೂಕ

contributor

Similar News