1923ರ ನೇತ್ರಾವತಿ ‘ಮಾರಿಬೊಲ್ಲ’ಕ್ಕೆ 100 ವರ್ಷ
ನೇತ್ರಾವತಿ ನದಿಯಲ್ಲಿ ದಾಖಲಾದ ಅತ್ಯಂತ ದೊಡ್ಡ ನೆರೆಗೆ ಆಗಸ್ಟ್ 7ರಂದು (ಇಂದು) ವರ್ಷ ತುಂಬುತ್ತದೆ. 1923ರಲ್ಲಿ ಈ ಮಹಾನೆರೆ ಬಂದಿತ್ತು. ಇದರಿಂದಾಗಿ ನದಿ ಹರಿವಿನ ಬಹುತೇಕ ಭಾಗ ನೀರಿನಲ್ಲಿ ಮುಳುಗಿ ಸಾವಿರಾರು ಮನೆ, ಗುಡಿಸಲುಗಳು ನಾಶವಾಗಿ ಅಪಾರ ನಷ್ಟ ಉಂಟಾಗಿತ್ತು. ಇದು ‘ಮಾರಿ ಬೊಲ್ಲ’ ಎಂದು ಇಂದಿಗೂ ಒಂದು ತಲೆಮಾರಿನ ತಲೆಯಲ್ಲಿ ಉಳಿದಿದೆ.
ಆಗ ಜನಸಂಖ್ಯೆ ಹಾಗೂ ಮನೆಗಳು ತೀರಾ ವಿರಳವಾಗಿದ್ದುದರಿಂದ ನಂತರ ಬಂದ 1974ರ ಮಹಾನೆರೆಯಲ್ಲಿ ಉಂಟಾದ ಮನೆಗಳ ನಾಶಕ್ಕೆ ಹೋಲಿಸಿದಾಗ 1923ರ ವಿನಾಶ ಕಡಿಮೆ ಎಂದು ಹೇಳಬಹುದಾದರೂ, ಬ್ರಿಟಿಷ್ ಕಾಲದಲ್ಲಿ ಸರಕಾರಿ ನೆರವು ಇಲ್ಲದ ಕಾರಣದಿಂದ ಹಲವಾರು ಶ್ರೀಮಂತರೂ, ಜಮೀನ್ದಾರರೂ ಭಾರೀ ನಷ್ಟದಿಂದ ದುರ್ಗತಿ ಅನುಭವಿಸಿದರು. ಈ ನೆರೆಯಲ್ಲಿ ಉಪ್ಪಿನಂಗಡಿ, ಬಂಟ್ವಾಳ, ಪಾಣೆಮಂಗಳೂರು ಪೇಟೆ ಬಹುತೇಕ ನಾಶವಾಗಿ ವ್ಯಾಪಾರಿಗಳ ಆಹಾರ ಧಾನ್ಯ, ದಿನಸಿ, ಬಟ್ಟೆ ಇತ್ಯಾದಿ ವಸ್ತುಗಳು ಸಂಪೂರ್ಣ ನಾಶವಾಗಿದ್ದವು. ಆದರೂ 1974ರ ಹಾನಿ ದೊಡ್ಡದು. ನಾವೀಗ ಕಾಣುವ ಜನತಾ ಕಾಲನಿ, ನೆಹರೂ ನಗರಗಳು ಮನೆ ಕಳೆದುಕೊಂಡವರಿಗೆ ಸರಕಾರ ಆಗ ಕಟ್ಟಿಸಿಕೊಟ್ಟ ಮನೆಗಳು.
1923ರ ನೆರೆಯ ಕುರಿತು ಹೇಳಬಲ್ಲವರು ಯಾರೂ ಈಗ ಬದುಕಿ ಉಳಿದಿಲ್ಲ. ಈ ನೆರೆಯ ಹೆಚ್ಚಿನ ದಾಖಲೆಗಳು ಇಲ್ಲದಿರುವುದರಿಂದ ಈ ಕುರಿತು ಈಗಲೂ ಚಾಲ್ತಿಯಲ್ಲಿರುವ ದಂತಕತೆಗಳನ್ನೇ ಅವಲಂಬಿಸಬೇಕು. 1923ರ ನೆರೆ, 1974ರ ನೆರೆಗಿಂತ ಬಹಳ ದೊಡ್ಡದು ಎಂದು ಹೇಳಲಾಗುತ್ತದೆ. ನೇತ್ರಾವತಿ ನದಿಯ ಅಪಾಯದ ಮಟ್ಟ ಪಾಣೆಮಂಗಳೂರು ಹಳೆ ಸೇತುವೆಯ ಬಳಿ 8.5 ಮೀಟರ್ ಇದ್ದು, 1974ರ ಜುಲೈ 24ರಂದು ಬಂದ ನೆರೆಯ ಮಟ್ಟ 11.4 ಮೀಟರ್ ಇತ್ತೆಂದು ದಾಖಲೆಯಿದೆ. ನಂತರ 2018ರ ಆಗಸ್ಟ್ 10ರ ನೆರೆಯ ಮಟ್ಟ ದಾಖಲೆ ಪ್ರಕಾರ 11.9 ಮೀಟರ್ ಇದ್ದರೂ, ಪ್ರತ್ಯಕ್ಷದರ್ಶಿಗಳ ಪ್ರಕಾರ 1974ರ ನೆರೆ ಒಳಪ್ರದೇಶಗಳಲ್ಲಿ ಕನಿಷ್ಠ ಒಂದು ಮೀಟರ್ ಹೆಚ್ಚಿತ್ತು. 1974ರ ನೆರೆಯಲ್ಲಿ ಹಳೆಸೇತುವೆಯ ಒಂದು ಕಡೆಯಿಂದ ನೀರು ಹರಿದುಹೋಗಿತ್ತು. 2018ರಲ್ಲಿ ಹಾಗಾಗಿರಲಿಲ್ಲ. 1923ರ ನೆರೆಯಲ್ಲಿ ಈ ಸೇತುವೆ ಸಂಪೂರ್ಣ ಮುಳುಗಿತ್ತು. 1923ರ ನೆರೆ ಇದಕ್ಕಿಂತಲೂ ಬಹಳ ದೊಡ್ಡದಾಗಿತ್ತು ಎಂಬುದಕ್ಕೆ ಆಧಾರಗಳಿವೆ. ಬಂಟ್ವಾಳದಲ್ಲಿ ಮತ್ತು ಪಾಣೆಮಂಗಳೂರು ಪೇಟೆಯ ಅಂಗಡಿಯೊಂದರ ಮುಂದೆ 1923ರ ನೆರೆ ಇಲ್ಲಿಯ ತನಕ ಬಂದಿತ್ತು ಎಂದು ಸಿಮೆಂಟು ಫಲಕದಲ್ಲಿ ಕೊರೆದು ಗೆರೆ ಎಳೆಯಲಾಗಿದೆ. ಇದಕ್ಕೆ ಹೋಲಿಸಿದಾಗ 1974ರ ನೆರೆಯ ಮಟ್ಟ ಕನಿಷ್ಠ ಒಂದು ಮೀಟರ್ ಕಡಿಮೆಯಿದೆ. 2018ರ ಮಟ್ಟ ಹತ್ತಿರಕ್ಕೂ ಬರುವುದಿಲ್ಲ. ಅಧಿಕೃತ ಅಂಕಿ-ಅಂಶದಲ್ಲಿ ದೋಷವಿರುವುದು ಖಂಡಿತ. ಈಗ ನೇತ್ರಾವತಿ ಮತ್ತು ಕುಮಾರಧಾರ ಹರಿವಿನಲ್ಲಿ ಸರಪಾಡಿ, ತುಂಬೆ ಸಹಿತ ಹಲವಾರು ಚೆಕ್ ಡ್ಯಾಂಗಳೂ ಸಾಕಷ್ಟು ದೊಡ್ಡ ಅಣೆಕಟ್ಟುಗಳೂ ಇವೆ. ಆದುದರಿಂದ ನಿಯಂತ್ರಿತ ನೀರಿನ ಹರಿವು ಸಾಧ್ಯ. ಈಗ ಈ ಅಣೆಕಟ್ಟುಗಳಲ್ಲಿ ನೀರು ಬಿಟ್ಟಾಗ ಸೈರನ್ ವ್ಯವಸ್ಥೆ ಇದೆ. ಅಳಿವೆ ಬಾಗಿಲಲ್ಲಿ ಮರಳು ತೆಗೆಯಲು ಡ್ರೆಜ್ಜಿಂಗ್ ವ್ಯವಸ್ಥೆ ಇದೆ. ಆಗ ಇರಲಿಲ್ಲ. ಏನಿದ್ದರೂ, ಜನಪದರಲ್ಲಿ ಬಹುಕಾಲ ಮಲ್ಲ ಬೊಲ್ಲೊಡ್ದು ಅಥವಾ ಮಾರಿ ಬೊಲ್ಲೊಡ್ದು ದುಂಬು, ಬೊಕ್ಕ (ಮಹಾ ನೆರೆಗೆ ಮೊದಲು, ನಂತರ) ಎಂದು ವರ್ಷಗಳ ಲೆಕ್ಕ ಹಾಕಿಸಿದ ಆ ಮಹಾ ವಿನಾಶಕಾರಿ ನೆರೆ ಮತ್ತೆ ಬರದಿರಲಿ.