ರಾಜಕಾರಣಿಗಳಲ್ಲಿ ಕುಸಿಯುತ್ತಿರುವ ನೈತಿಕ ವೌಲ್ಯ: ರಮೇಶ್

Update: 2016-01-10 19:01 GMT


  ಬೆಂಗಳೂರು, ಜ. 10: ರಾಜಕೀಯ ಕ್ಷೇತ್ರ ಹಾಗೂ ರಾಜಕಾರಣಿಗಳಲ್ಲಿನ ನೈತಿಕ ವೌಲ್ಯಗಳು ಕುಸಿಯುತ್ತಿವೆ ಎಂದು ಮಾಜಿ ಸ್ಪೀಕರ್, ಹಾಲಿ ಶಾಸಕ ರಮೇಶ್‌ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.
 

  ರವಿವಾರ ನಗರದ ಗಾಂಧಿಭವನದಲ್ಲಿ ಮಲೆನಾಡ ಮಿತ್ರವೃಂದ ಆಯೋಜಿಸಿದ್ದ ಮಾಜಿ ಶಿಕ್ಷಣ ಸಚಿವ ಗೋವಿಂದೇಗೌಡರಿಗೆ ನುಡಿ-ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯ ಕ್ಷೇತ್ರದಲ್ಲಿ ನೈತಿಕತೆ ಮರೆಯಾಗುತ್ತಿರುವುದರಿಂದ ಮತದಾರರೂ ಮತದಾನದಿಂದ ವಿಮುಖರಾಗುತ್ತಿದ್ದಾರೆ ಎಂದು ಅಭಿಪ್ರಾಯಿಸಿದರು. ರಾಜಕೀಯ ಕ್ಷೇತ್ರದಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡಿದವರಿಗೆ ಮಾನ್ಯತೆ ದೊರಕದಂತಾಗಿದೆ. ರಾಜಕಾರಣಿಗಳು ಚುನಾವಣೆಗಳಲ್ಲಿ ಕೋಟ್ಯಂತರ ರೂ.ಖರ್ಚು ಮಾಡಿ ಗೆಲ್ಲುತ್ತಾರೆ. ಆ ಹಣವನ್ನು ವಾಪಸ್ ಪಡೆಯಲು ಭ್ರಷ್ಟಾಚಾರಕ್ಕಿಳಿದರೂ ಅವರಿಗೆ ಶಿಕ್ಷೆಯಾಗುತ್ತಿಲ್ಲ ಎಂದು ಹೇಳಿದರು. ಪ್ರಸ್ತುತ ವಿಧಾನ ಪರಿಷತ್ ಚುನಾವಣೆಗೆ ಕೋಟ್ಯಂತರ ರೂ. ಖರ್ಚು ಮಾಡಿರುವ ಹಣವನ್ನು ಸಂಗ್ರಹಿಸಲು ಲಾಬಿಗಳನ್ನು ನಡೆಸುತ್ತಾರೆ. ಪರಿಣಾಮವಾಗಿ ಶಿಕ್ಷಣ ಕ್ಷೇತ್ರ, ವೈದ್ಯಕೀಯ ಕ್ಷೇತ್ರಗಳು ಸಾರ್ವಜನಿಕರಿಗೆ ದೂರವಾಗುವ ಬಗ್ಗೆ ಅನುಮಾನವೇ ಇಲ್ಲ. ಮುಂದಿನ ದಿನಗಳಲ್ಲಿ ರಾಜಕೀಯದ ಭವಿಷ್ಯದ ಹಾದಿ ಪ್ರಶ್ನಾತೀತವಾಗಲಿದೆ ಎಂದು ಪ್ರತಿಪಾದಿಸಿದರು.
     ಮಾಜಿ ಸಚಿವ ಗೋವಿಂದೇಗೌಡರ ಬಗ್ಗೆ ಮಾತನಾಡಿದ ಅವರು, ಗೋವಿಂದೇಗೌಡರ ಅಗಲಿಕೆಯಿಂದ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದಷ್ಟು ನಷ್ಟವುಂಟಾಗಿದೆ. ಅವರು ಶಿಕ್ಷಣ ಸಚಿವರಾಗಿದ್ದಾಗ ಏಕಕಾಲದಲ್ಲಿ ಒಂದು ಲಕ್ಷ ಶಿಕ್ಷಕರನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ನೇಮಕ ಮಾಡುವ ಮೂಲಕ ನಿರುದ್ಯೋಗಿಗಳಿಗೆ ಕೆಲಸ ನೀಡಿದ್ದರು. ಅಲ್ಲದೆ ಶಿಕ್ಷಣ ಇಲಾಖೆಯಲ್ಲಿನ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕುವ ಮೂಲಕ ಸರಕಾರಿ ಶಾಲಾ-ಕಾಲೇಜುಗಳು ಮತ್ತು ಶಿಕ್ಷಕರ ಸ್ಥಾನಮಾನಗಳನ್ನು ಗಣನೀಯವಾಗಿ ಸುಧಾರಿಸಿದ್ದರು ಎಂದು ಬಣ್ಣಿಸಿದರು.
    ಗೋವಿಂದೇಗೌಡರು ಯಾವುದೇ ಆಮಿಷ, ಪ್ರಚಾರಕ್ಕೆ ಒಳಗಾಗದೆ ಸಮಾಜಮುಖಿಯಾಗಿ ದಕ್ಷತೆಯಿಂದ ರಾಜಕೀಯದಲ್ಲಿ ಆಡಳಿತ ನಡೆಸಿದ್ದರು. ಅವರ ಸಾಧನೆ ಮತ್ತು ವಿಚಾರಗಳನ್ನು ಇಂದಿನ ರಾಜಕಾರಣಿಗಳು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದ ರಮೇಶ್ ಕುಮಾರ್, ಈ ನಿಟ್ಟಿನಲ್ಲಿ ಗೋವಿಂದೇಗೌಡರ ಸಾಧನೆಗಳ ಬಗ್ಗೆ ವಿಚಾರಗೋಷ್ಠಿಗಳನ್ನು ಹೆಚ್ಚಾಗಿ ಆಯೋಜಿಸಬೇಕು ಎಂದು ಒತ್ತಾಯಿಸಿದ್ದರು.
   ಕಾರ್ಯಕ್ರಮದಲ್ಲಿ ಸಾಹಿತಿ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ಹಿರಿಯ ರಾಜಕಾರಣಿಗಳಾದ ಎಚ್.ಡಿ.ದೇವೇಗೌಡ, ಎಸ್.ಎಂ.ಕೃಷ್ಣ, ರಾಮಕೃಷ್ಣ ಹೆಗಡೆ ಮತ್ತು ಕಡಿದಾಳ ಮಂಜಪ್ಪನವರ ಸಾಲಿಗೆ ನಿಲ್ಲುವಂತ ವ್ಯಕ್ತಿತ್ವ ಗೋವಿಂದೇಗೌಡರಲ್ಲಿತ್ತು. ಇವರಲ್ಲಿ ಆದರ್ಶತನದ ಗಟ್ಟಿತನವಿತ್ತು ಎಂದು ತಿಳಿಸಿದರು.
      ಭಯೋತ್ಪಾದನೆ ಮತ್ತು ಮತಾಂಧತೆಯಿಂದ ಇಂದು ಮಲೆನಾಡು ನಲುಗಿ ಹೋಗಿದೆ. ಅಲ್ಲದೆ ಕರಾವಳಿ ಪ್ರದೇಶದ ಯುವಕರು ಗೋವಿಂದೇಗೌಡರ ಆದರ್ಶಗಳನ್ನು ಬೆಳೆಸಿಕೊಂಡು ಅಸಹಿಷ್ಣತೆ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಕರೆ ನೀಡಿದರು.
 ಕಾರ್ಯಕ್ರಮದಲ್ಲಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News