ಕರಾವಳಿಯ ಮೌಲ್ಯಗಳ ಸಂಘರ್ಷಗಳು ಮತ್ತು ಮಹಿಳೆಯರ ಮೇಲಾಗುತ್ತಿರುವ ಪರಿಣಾಮಗಳು

Update: 2016-01-15 05:41 GMT

ಕರ್ನಾಟಕದ ಕರಾವಳಿಯ ತೀರ ಅತಿ ವಿಶಿಷ್ಟವಾದ ಭೌಗೋಳಿಕತೆ ಮತ್ತು ಸಾಂಸ್ಕೃತಿಕ ಅನನ್ಯತೆಯಿಂದ ಜಗತ್ತಿನೆಲ್ಲೆಡೆ ಗಮನ ಸೆಳೆದಿದೆ. ಕಾಡು ಮತ್ತು ಕಡಲಿನ ಮಧ್ಯಭಾಗದ ಭೂಮಿಯಲ್ಲಿ ಜನ ಜೀವನ ಹುಟ್ಟಿ, ಬೆಳೆದು, ಬಲಿತು, ಪಸರಿಸಿದ್ದು ಚರಿ್ರೆಯೇ ಆಗಿದೆ. ಅತ್ಯಂತ ದೀರ್ಘವಾದ ಕಡಲ ತೀರ ವ್ಯಾಪಾರಕ್ಕೆ ತೆರೆದ ಹೆಬ್ಬಾಗಿಲು ಆಗಿರುವಂತೆ, ಅತಿ ಎತ್ತರವಾಗಿ ನಿಂತ ಪಶ್ಚಿಮಗಳ ಘಟ್ಟಗಳ ಸಾಲು ಘಟ್ಟ ಇಳಿದು ಬರುವವರಿಗೆಲ್ಲ ತಡೆಗೋಡೆಯಾಗಿ ಗೋಚರಿಸಿದೆ. ಈ ಎರಡು ಭೌಗೋಳಿಕ ಸವಾಲುಗಳ ನಡುವೆಯೇ ಕರಾವಳಿ ಬಹು ಭಾಷೆ, ಧರ್ಮ, ಜಾತಿ, ಜನಾಂಗಗಳು ಬಾಳುವುದಕ್ಕೆ ಸಾಧ್ಯವಾಗಿತ್ತು. ಅತಿ ಹೆಚ್ಚು ಜನ ಸಮುದಾಯಗಳ ವಲಸೆಗೆ ಕಾರಣವಾಗಿ ಎಲ್ಲರೂ ಜತೆ ಸೇರಿ ಬಾಳಿ ಬದುಕಲು ಸಾಧ್ಯವಾಗಿದೆ. ಹತ್ತು ದಿಕ್ಕಿನಿಂದ ಬಂದವರನ್ನು ಕೈಚಾಚಿ ಕರೆದುಕೊಳ್ಳುತ್ತಾ ಎಲ್ಲರನ್ನು ಒಳಗೊಳ್ಳುವಂತೆ ಬಾಳಲು ಮತ್ತು ಬದುಕಿನ ಆ ಅವಕಾಶವನ್ನು ತೆರೆದು ತೋರಿದ ಹಿರಿಮೆ ಕರಾವಳಿ ಕರ್ನಾಟಕದಲ್ಲಿದೆ.

            ಸಹಬಾಳ್ವೆ ಮತ್ತು ಸಮಾನತೆಯ ತತ್ವದ ಬುಡಕಟ್ಟು ಸಂಸ್ಕ್ರತಿಯ ಬೇರುಗಳನ್ನು ಇಂದಿಗೂ ಅಳವಡಿಸಿಕೊಂಡಿರುವುದು ಕರಾವಳಿಯ ಬಹುದೊಡ್ಡ ಮೌಲ್ಯ. ಸಂಘರ್ಷಗಳು ಎದುರಾದಾಗಲೂ ಅದು ಜೀವಪರವಾಗಿ ಉಳಿಯುವಂತೆ ಮಾನವೀಯತೆಯ ಬಹುದೊಡ್ಡ ಗುಣವನ್ನು ಹೊಂದಿದೆ. ಸಹನೆ ಮತ್ತು ಸಾಮರಸ್ಯವನ್ನು ಜತೆ ಸೇರಿಸಿ ಬದುಕಿದವರು ತುಳುವರು. ಕಾಡು ಮತ್ತು ಕಡಲಿನೊಂದಿಗೆ ಸೆಣಸಾಡುತ್ತಲೇ ಬದುಕಿದ್ದರಿಂದ ಶ್ರಮ ಬದುಕಿನ ಧರ್ಮವಾಗಿತ್ತು. ಹೆಣ್ಣಿನ ಸ್ಥಾನ ಮಾನಗಳು ಆದರ್ಶಪ್ರಾಯವಾಗಿದ್ದು ಮಾತೃಪ್ರಧಾನ  ವ್ಯವಸ್ಥೆಯನ್ನು ಇಂದಿಗೂ ಹೊಂದಿದೆ. ತಮ್ಮ ಜೈವಿಕ ಮತ್ತು ವಾರ್ಷಿಕ ಆವರ್ತನದಲ್ಲಿ ನಡೆಸಿಕೊಂಡು ಬಂದಿರುವ ಆರಾಧನೆ, ಆಚರಣಾ ಪರಂಪರೆಗಳು ಇದನ್ನು ದಾಖಲುಗೊಳಿಸುತ್ತವೆ.

 ಬೆನಿನಾತ್ ಬೇಲೆ ತಿನಿನಾತ್ ನುಪ್ಪು ಇತ್ತಿ ರಾಜ್ಯ ಓಲುಂಡು (ದುಡಿಯುವಷ್ಟು ಕೆಲಸ, ಉಣ್ಣುವಷ್ಟು ಅನ್ನ ಇರುವ ರಾಜ್ಯ ಎಲ್ಲಿದೆ) ಎಂಬ ನಾಣ್ಣುಡಿಯಂತೆ ದುಡಿದರೆ ಉಣ್ಣಬಹುದು ಎಂಬ ತೆಂಬೆಯ ದನಿಗೆ ಪರ್ಯಾಯವಾಗಿ ಬಾಳಿ ಬದುಕಿದವರು. ವಲಸೆ ಬರುವವರಿಗೆಲ್ಲ ಮೇಲ್ಪಂಕ್ತಿಯ ಕಿವಿಮಾತಾಗಿರುವ ತುಪ್ಪ ಅಶನೆ ಉಂಬಲೆ ತುಳುನಾಡಿಗೋಯಿಕ್ಕು ಎಂಬ ಹವಿಗನ್ನಡದ ನುಡಿ ಮರೆಯಾಗಲು ಸಾಧ್ಯವಾಗಿದೆಯೇ ಎಂದು ಇಂದು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

 ಧರ್ಮ ಸಾಮರಸ್ಯದ ಮತ್ತು ಸಮನ್ವತೆಗೆ ಸಾಕ್ಷಿಪ್ರಜ್ಞೆಗಳಾಗಿ ಬಾಳುತ್ತಿದ್ದ ತುಳುವರ ಬದುಕಿನಲ್ಲಿ ಇಂದು ಏನಾಗುತ್ತಿದೆ? ಸಂಘರ್ಷಗಳಿಲ್ಲದೆ ಬಾಳುತ್ತಿದ್ದುದ್ದು ಕರಾವಳಿಯ ಅತೀ ದೊಡ್ಡ ಮೌಲ್ಯ. ವಿಶ್ವದಾದ್ಯಂತ ಜನಾಂಗೀಯ ಸಂಘರ್ಷಗಳು ತಾಂಡವ ಆಡುತ್ತಿರುವಾಗ ಕರಾವಳಿಯೂ ಇದಕ್ಕೆ ಹೊರತಾಗಿಲ್ಲ. ಧರ್ಮ, ಜನಾಂಗ, ಭಾಷೆ, ಜಾತೀಯ ಹೆಸರಿನಲ್ಲಿ ಅಲ್ಲಲ್ಲಿ ಕಿಡಿ ಹಚ್ಚುವ ದ್ವೇಷದ ಕೆನ್ನಾಲನೆಗಳು ಗಲಭೆಗಳಾಗಿ ಪರಿವರ್ತನೆ ಹೊಂದುತ್ತವೆ. ಈ ರೀತಿಯ ಬದಲಾವಣೆಗೆ ಕಾರಣವೇನು ಎಂದು ಪ್ರಶ್ನಿಸಿಕೊಂಡರೆ ದೊರೆಯುವ ಉತ್ತರವೇ ಕರಾವಳಿಯ ಮೌಲ್ಯಗಳ ಸಂಘರ್ಷಗಳ ಮತ್ತು ಈ ಚಟುವಟಿಕೆಗಳೆಲ್ಲ ಪಲ್ಲಟಗೊಂಡ ಮೌಲ್ಯಗಳ ವಕ್ರೀಭವನ ಪರಿವರ್ತನೆಗಳು ಮುಂಚಲನೆಗಳಾಗಿ ಗೋಚರಿಸುತ್ತವೆ.

ಶ್ರಮ ಬದುಕಿನ ಧರ್ಮವಾಗಿತ್ತು. ಇಂದಿನ ಬದುಕಿನ ಧರ್ಮ ಶ್ರಮವಲ್ಲ ಐಷಾರಾಮ. ಮೊನ್ನೆ ಮೊನ್ನೆಯವರೆಗೂ ದೇಹದ ಕೊಬ್ಬು ಇಳಿಸಲು ಹಳ್ಳಿಯ ಗಲ್ಲಿಗಳಲ್ಲಿ ಜಿಮ್ ಇರಲಿಲ್ಲ. ವಿಸ್ತಾರವಾದ ಗದ್ದೆ ಬಯಲುಗಳಲ್ಲಿ ಬೆವರು ಸುರಿಸಿ ದುಡಿಯುವುದಷ್ಟೇ ಮುಖ್ಯವಾಗಿತ್ತು. ಹೇಗೆ ದುಡಿಯಬೇಕು ಎನ್ನುವುದಷ್ಟೇ ಮುಖ್ಯವಾಗಿತ್ತೇ ಹೊರತು, ದೇಹ ಸೌಂದರ್ಯದ ಬಗ್ಗೆ ಗುನಹರಿಸುವುದು ಆಗಿರಲಿಲ್ಲ. ದೇಹ  ಬೆಳೆಸುವುದು ಯಾಕೆ? ದೇಹವನ್ನೇನು ಮನೆಯ ತೊಲ ಮಾಡಲಿದೆಯೇ? ಎನ್ನುವುದು ರೂಢಿಯ ಮಾತು. ಇಂದು ದೇಹ ಬೆಳೆಸಿಕೊಂಡು ದೇಹದ ಬೊಜ್ಜು ಇಳಿಸಲು ನಡೆಸುವ ವ್ಯಾಯಾಮಗಳು, ಸಿಕ್ಸ್ ಪ್ಯಾಕ್‌ಗಳು, ಜೀರೋ ಸೈಜ್‌ಗಳಿಗೆ ಗಮನ ಕೇಂದ್ರಿಕರಿಸಿವೆ. ಹಾಗಾಗಿ ಕರಾವಳಿ ಮತ್ತೆ ಮತ್ತೆ ಸುದ್ದಿಯಾಗುವುದು ಮಿಸ್‌ವರ್ಲ್ಡ್ ಮತ್ತು ಅಂಡರ್‌ವರ್ಲ್ಡ್ ಜಗತ್ತಿನಿಂದ ಎಂಬುದನ್ನು ಮರೆಯುವಂತಿಲ್ಲ.

ಒಂ ಟಿ ಮನೆಗಳು ಮತ್ತು ಅದರ ಸಮೀಪದಲ್ಲಿ ಇರುವ ಗದ್ದೆ ಬಯಲುಗಳು, ಎತ್ತರವಾದ ಕಟ್ಟಡಗಳಿಂದ ಕೂಡಿದ ಗ್ರಾಮದ ಪರಿಕಲ್ಪನೆಯೇ ಇಂದು ಬದಲಾಗಿದೆ. ಗ್ರಾಮ ಮತ್ತು ವಿಶ್ವ ನಮ್ಮ ಬೆರಳತುದಿಯ ಸ್ಮಾರ್ಟ್ ಫೋನ್‌ನಲ್ಲಿದೆ. ಗ್ರಾಮದ ಚಿಂತನೆ ಸ್ವರಾಜ್ಯ ಸ್ವಾವಲಂಬನೆಯಿಂದ ಕೂಡಿತ್ತು. ಕೃಷಿ ಜಗತ್ತಿನ ಪಾಳೇಗಾರಿಕೆ ಮತ್ತು ಊಳಿಗಮಾನ್ಯತೆಗಳ ನಡುವೆಯೂ ಉಣ್ಣುವ ಅನ್ನವನ್ನು ತಾವೇ ಬೆಳೆಯುವುದು ಮನೆ ಮುಂದಿನ  ತುಪ್ಪೆಯಲ್ಲಿ ಭತ್ತವನ್ನು ಸಂಗ್ರಹಿಸಿಡುವ ಕ್ರಮವೂ ಇತ್ತು. ಹಾಗಾಗಿ ಚಾವಡಿಯಲ್ಲಿ ಸಂಪತ್ತಿನ ಸಂಕೇತವಾಗಿ ಕಲೆಂಬಿ ಇದ್ದರೆ ಅಡಿಗೆ ಮನೆಯ ಮೂಲೆಯಲ್ಲಿ ಉಪ್ಪಿನ ಮರೆಯಿಯೂ ಇತ್ತು. ಇಂದು ಎರಡೂ ಆಯ ಸ್ಥಳಗಳಲ್ಲಿ ಕರಾವಳಿಯ ಮೌಲ್ಯಗಳ ಪಲ್ಲಟಕ್ಕೆ ಪ್ರತೀಕವಾಗಿದೆ. ಕೃಷಿ ಕಾಣೆಯಾಗುತ್ತ ಕೃಷಿ ಕುಟುಂಬಗಳು ನಗರಕ್ಕೆ ವಲಸೆ ಹೋಗಲು ಆರಂಭಿಸಿದ್ದು ಮಾತ್ರವಲ್ಲ, ಅವಿಭಕ್ತ ಕುಟುಂಬಗಳಲ್ಲಿ ವಿಭಕ್ತವಾಗಿದೆ.  ಮನೆಯ ಸ್ವರೂಪ ಕುಟುಂಬದ ಪರಿಕಲ್ಪನೆಯ ಚಿಂತನೆಯೂ ಬದಲಾಗಿದೆ. ಆಹಾರ ಕ್ರಮ ಜೀವನ ಕ್ರಮಗಳು ವ್ಯತ್ಯಾಸವಾದಂತೆ ಸ್ಥಿರ ಮೌಲ್ಯಗಳೊಂದಿಗೆ, ಚಲನಶೀಲ ಮೌಲ್ಯಗಳೂ ಬದಲಾಗಲೂ ಕಾರಣವಾಯಿತೇ ಎಂಬ ಗಂಭೀರ ಪ್ರಶ್ನೆ ಎದುರಾಗುತ್ತೆ. ಇಂದಿನ ಮಾಲ್ ಸಂಸ್ಕೃತಿಯಲ್ಲಿ ಬದುಕಿನ ಸುಖವೆಂಬ ಮರೀಚಿಕೆಯ ಬೆನ್ನು ಹತ್ತಲು ದುಡ್ಡು ಬೇಕು. ಎಲ್ಲಕ್ಕೂ ಹಣಕಾಸಿನ ಅಗತ್ಯವಿರುವುದರಿಂದ ಾನ್ಯವನ್ನು ಬೆಳೆದು ರಾಶಿ ಹಾಕಿದಂತೆ, ದುಡ್ಡನ್ನು ಗುಡ್ಡೆ ಹಾಕುವ ಪರಂಪರೆಯೇ ಪ್ರಮುಖ ಮೌಲ್ಯವಾಗಿದೆ.

ಹಣವೇ ನಿನ್ನಯ ಗುಣವಾಎನ್ನುವ ಗಾದೆ ಮಾತು ತಿಳಿದಿದ್ದರೂ ದುಡ್ಡನ್ನು ಸಂಗ್ರಹಿಸುವುದಾದರೂ ಹೇಗೆ? ಬೆವರಿಳಿಸಿ ದುಡಿಯಬೇಕು ಅಲ್ಲಿ ಕೈಯಿಂದ ಕೆಲಸವಿಲ್ಲ ತಲೆಯಿಂದ ಕೆಲಸ ಮಾಡುವ ವ್ಯವಹಾರಗಳು ಹೆಚ್ಚಾದವು. ದುಡಿಮೆಯ ಅರ್ಥ ಸುಖದ ಪರಿಕಲ್ಪನೆಗಳು ಬದಲಾದಂತೆಲ್ಲ ಮನೆಯ ಚಿಂತನೆಯ ಅರ್ಥವೂ ಪರಂಪರೆಯ ಆಸರೆ ಅಥವಾ ನೆರಳು ಆಗಿ ಉಳಿದಿಲ್ಲ. ಹಕ್ಕಿ ತನ್ನ ಮರಿಯ ಬೆಚ್ಚನೆಯ ರಕ್ಷಣೆಗಾಗಿ ಇರುವ ಹಕ್ಕಿ ಗೂಡಿನ ಕಲ್ಪನೆ ಇಲ್ಲ. ಮನೆಯೆಂ ರೆ ಒಂದೋ ಬಂಗಲೆ, ಅಪಾರ್ಟ್‌ಮೆಂಟ್, ಕೊಳಗೇರಿಗಳು ಮತ್ತು ಕಾಲನಿಗಳಾಗಿವೆ. ಆಯಾ ಜನವರ್ಗದ ದುಡ್ಡಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಈ ಶ್ರೇಣೀಕರಣವಿದೆ. ಮನೆಯೆಂದರೆ ಭವ್ಯತೆ, ಅಕ್ಕರೆ ಆಸರೆಗಳೆಲ್ಲ ಕಾಣೆಯಾಗಿ ಶಾಂತಿಯ ತಾಣವಾಗಿದೆ. ದುಡಿದು ಬಂದಾಗ ಒಂದಿಷ್ಟು ವಿರಾಮ ಮಾತ್ರಕ್ಕಾಗಿ ಇದೆ. ಮನೆ ತುಂಬಾ ಜನ ಮಾತು-ಗಲಾಟೆ ಬೊಬ್ಬೆಯಿಂದ ಕೂಡಿದ ಗುಡಿಸಲೇ ಆಗಿರಲಿ, ಆಯಕಟ್ಟಿನ ಮನೆಗಳೇ ಆಗಿರಲಿ ಸಂಭ್ರಮ ಸಡಗರದಿಂದ ಕೂಡಿತ್ತು. ಇಂದು ಮನೆಯಲ್ಲಿ ಹೆಚ್ಚು ಎಂದರೆ ನಾಲ್ಕು ಜನ ಅವರೆಲ್ಲರಿಗೂ ಒಂದೊಂದು ಕೋಣೆ, ಆ ಗೋಡೆಗಳು ಮಾತನಾಡುತ್ತಿಲ್ಲ. ಆ ಸುಭಿಕ್ಷೆಯ ಪರಿಕಲ್ಪನೆಯಾಗಿದೆ. ಆದರ್ಶ ಸಂಸಾರದ ಮನೆಗಳಾಗಿವೆ.

 ಈ ಎಲ್ಲದರ ಮಧ್ಯೆ ಕರಾವಳಿಯ ಮಹಿಳೆ ಏನಾಗಿದ್ದಾಳೆ? ಕುಟುಂಬದ ಕೇಂದ್ರಬಿಂದುವಾಗಿ, ಮನೆಯ ಗಂಡನ ಪ್ರತೀಕ ಮುಂದಾಳುವಾಗಿ ಮಾತೃಮುಖೀಯ ಕುಟುಂಬ ವ್ಯವಸ್ಥೆಯನ್ನು ಹೊಂದಿ ಬಾಳಿದವಳು ಹೇಗಿದ್ದಾಳೆ? ಗದ್ದೆ ಕೆಲಸಕ್ಕೆ ಬೇಕಾದ ಮಕ್ಕಳನ್ನು ಹೆರುವವಳು ಹೆಣ್ಣು ಮಾತ್ರವಲ್ಲ ಅವಳು ಮೂಲದಿಂದಲೇ ಕುಟುಂಬ ಗುರುತಿಸಲ್ಪಟ್ಟಿದೆ. ತನ್ನ ದೇಹದ ರಚನೆಯಲ್ಲಿ ಸೃಷ್ಟಿ, ಪೋಷಣೆ, ಧಾರಣೆಯ ಗುಣವನ್ನು ಹೊಂದಿದ ಆಕೆಯ ಶರೀರವೇ ಇಂದು ಆಕೆಯನ್ನು ನಿಗ್ರಹಿಸುವ ಆಯಾಮವಾಗಿದೆ. ಹೆಣ್ಣಿನ ಸ್ತನ, ಗರ್ಭ,  ಯೋನಿಗಳು ಆಕೆಯ ಶೋಷಣೆಯ ಅಸ್ತ್ರವಾಗಿ ಬಳಕೆಯಾಗುತ್ತದೆ. ಪರಿಣಾಮ ಆಕೆಯನ್ನು ನಿಗ್ರಹಿಸುವ, ನಿಯಂತ್ರಿಸುವ ಆಯಾಮಗಳೊಂದಿಗೆ ಶೋಷಿಸುವ ಕೆಲಸಗಳೆಲ್ಲ ನಿರಂತರವಾಗಿ ನಡೆಯುತ್ತಿವೆ. ಹೆಣ್ಣಿನ ಚಲನೆಯನ್ನು ನಿರ್ಬಂಧಿಸುವ ನೂರಾರು ಕಾರ್ಯಗಳು ನಡೆಯುತ್ತಿವೆ. ಆಕೆ ಏನು ನೋಡಬೇಕು, ಮಾಡಬೇಕು, ಉಣ್ಣಬೇಕು, ಕುಡಿಯಬೇಕು ಎಂಬುವುದರೊಂದಿಗೆ ಅವಳ ನಡೆಯನ್ನು ನಿಗ್ರಹಿಸುವ ಕಾಯಕಗಳು ನಿರಂತರವಾಗಿ ನಡೆಯುತ್ತಿವೆ. ಪರಿಣಾಮವಾಗಿ ಕೃಷಿ ಸಂಸ್ಕ್ರತಿಯ ನಾಶದೊಂದಿಗೆ ಹುಟ್ಟಿಕೊಂಡ ಕೋಮುವಾದ ಅದರ ಭಾಗವಾಗಿ ನೈತಿಕ ಪೋಲಿಸ್‌ಗಿರಿ, ಹೆಣ್ಣು ಮಕ್ಕಳ ಸಾರ್ವಜನಿಕ ಬದುಕಿನ ಸ್ವಾತಂತ್ರ್ಯವನ್ನು ಕಸಿದಿವೆ. ಜನರು ಅಕ್ಷರ ಪ್ರಪಂಚಕ್ಕೆ ಕಾಲಿಡದೆ ಇದ್ದ ಹೊತ್ತಲ್ಲಿ ಸುಶಿಕ್ಷಿತರಾಗುವುದೇ ಮುಂದುವರಿಕೆ ಹೆಣ್ಣಿನ ಸಬಲೀಕರಣವಾಗಿತ್ತು. ಆ ನಿಟ್ಟಿನಲ್ಲಿ ಕರಾವಳಿಯ ಹೆಣ್ಣುಮಕ್ಕಳು ಹೆಚ್ಚು ಸುಶಿಕ್ಷಿತರಾಗಿದ್ದಾರೆ.

ಆದರೆ ಅವರಿಗೆ ಸ್ವಾತಂತ್ರ್ಯವಿದೆಯೇ ಎಂದು ಕೇಳಿದರೆ ಉತ್ತರಿಸುವುದು ಕಷ್ಟ. ಹೆಣ್ಣುಮಕ್ಕಳು ವಿದ್ಯಾವಂತರಾಗಬೇಕು, ಆರ್ಥಿಕವಾಗಿ ಸ್ವಾತಂತ್ರರಾಗಬೇಕಾದರೆ ಉದ್ಯೋಗವನ್ನು ದಕ್ಕಿಸಿಕೊಳ್ಳಬೇಕು. ಶಿಕ್ಷಣ, ಆರ್ಥಿಕತೆ ಹುದ್ದೆ ಅಧಿಕಾರ ಆಕೆಗೆ ಸ್ವಾಯುತ್ತತೆ ಮತ್ತು ಸ್ವಾತಂತ್ರ್ಯವನ್ನು ನೀಡಿದೆ ಯೇ? ಬದಲಾದ ಕುಟುಂಬ ಜೀವನದಲ್ಲಿ ಮನೆಯ ಒಳಗೆ ಮತ್ತು ಹೊರಗೆ ದುಡಿಯುವ ಆಕೆಯ ಹೆಗಲ ಮೇಲಿನ ಭಾರ ಇನ್ನಷ್ಟು ಹೆಚ್ಚಾಗಿದೆ. ಕುಟುಂಬದ ಪೋಷಣೆ ಮಾತ್ರವಲ್ಲ, ಧಾರಣೆಯಲ್ಲೂ ಸಂತಾನ ನಿಯಂತ್ರಣಕ್ಕೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಆಕೆಯೇ ಮಾಡಿಕೊಳ್ಳಬೇಕಾಗಿದೆ. ಹೆಣ್ಣಿನ ಜೈವಿಕ ಜವಾಬ್ದಾರಿಗಳು ಹೇಗೂ ಕಡಿಮೆಯಾಗಿಲ್ಲ ವರ್ಗಾಯಿಸುವಂತಿಲ್ಲ ಕೌಟುಂಬಿಕ ಔದ್ಯೋಗಿಕ ಹೊಣೆಗಾರಿಕೆಗಳೇ ಹೆಚಾ್ಚಗಿದೆ. ಆದರ್ಶ ಹೆಣ್ಣಾಗಬೇಕು ಎಂಬ ಕನಸಿನಲ್ಲಿ ಮಗಳು, ಪತ್ನಿ, ಸೋದರಿ, ತಾಯಿ, ಅತ್ತೆ ಅಜ್ಜಿಯಾಗುವ ಭರದಲ್ಲಿ ತಾನು ತಾನಾಗಿಯೇ ಬದುಕುವ ಸ್ವಂತಿಕೆಯನ್ನು ಹೆಣ್ಣು ಕಳೆದುಕೊಳ್ಳುತ್ತಿದ್ದಾಳೆ.

ಮಾತೃಮೂಲೀಯ ಮೌಲ್ಯಗಳೆಲ್ಲ ಪಲ್ಲಟಗೊಂಡು ಪಿತೃಪ್ರಧಾನತೆ ಮತ್ತು ನವಪಿತೃ ಪ್ರಧಾನತೆಯ ಮೌಲ್ಯಗಳೇ ಮುನ್ನಡೆಗೆ ಬಂದು ಅತಿಕ್ರಮಣ ವಾಡುತ್ತಿವೆ. ಅಭಿವೃದ್ಧಿ ಮತ್ತು ಆಧು ನಿಕತೆಯ ಹೆಸರಿನಲ್ಲಿ ಹೆಣ್ಣಿನ ಮೇಲೆ ನಡೆಯುತ್ತಿರುವ ದಬ್ಬಾಳಿಕೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿ ವೆ. ಬೇರೆಬೇರೆ ಆಯಾಮಗಳಿಂದ ಸೂಕ್ಷ್ಮವಾಗುತ್ತಿದೆ. ಹೆಣ್ಣಿಗೆ ತನ್ನ ದೇಹದ ಘನತೆ, ಗೌರವಗಳು ಮಣ್ಣು ಪಾಲಾಗಿ ಸ್ವಂತಿಕೆಯನ್ನು ಕಳೆದುಕೊಂಡು  ಆಕೆಯ ದೇಹ ಬಂಡವಾಳ ಹೂಡದೇ ಸಿಗುವ ಸರಕಾಗಿ ಪರಿವರ್ತನೆ ಹೊಂದಿದೆ ಹೆಚ್ಚುತ್ತಿರುವ ಹೆಣ್ಣು ಭ್ರೂಣಹತ್ಯೆ ಏರುಪೇರಾದ ಲಿಂಗಾನುಪಾತಗಳೊಂದಿಗೆ ಕಾಣೆಯಾಗುತ್ತಿರುವ ಹೆಣ್ಣುಮಕ್ಕಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆಧುನಿಕತೆಗೆ ಬಹಳ ಬೇಗನೇ ತೆರೆದುಕೊಳ್ಳುವ ಕರಾವಳಿಯ ಜನತೆಗೆ ಕೇಂದ್ರ ಸ್ಥಾನದಲ್ಲಿದ್ದ ಹೆಣ್ಣು ಪಕ್ಕಕ್ಕೆ ಸರಿದಿದ್ದಾಳೆ. ಹೆಚ್ಚುತ್ತಿರುವ ವ್ಯಾಪಾರ ಸರಕು ಸಾಗಾಟಗಳೊಂದಿಗೆ ಹೆಣ್ಣು ಸರಕಿನಂತೆ ವ್ಯಾಪಾರಕ್ಕೆ ಬಳಕೆಯಾಗುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ.

          ತೆರ ಪದ್ಧತಿ ಮತ್ತು ಕನ್ಯಾಶುಲ್ಕದಿಂದ ವಿವಾಹ ಂಸ್ಥೆಯಲ್ಲಿ ಆಯ್ಕೆಯ ಸ್ವಾತಂತ್ರ್ಯವನ್ನು ಹೊಂದಿದ್ದ ಹೆಣ್ಣು ಇಂದು ಮದುವೆ ಮಾರುಕಟ್ಟೆಯಲ್ಲಿ ವರದಕ್ಷಿಣೆಯಿಂದ ಗಂಡನ್ನು ಖರೀದಿಸಿಯೂ ತನ್ನ ಬೆನ್ನ ಮೆೀಲಾಡುವ ಚಾಟಿಯ ಮುಷ್ಠಿಯನ್ನು ಗಂಡನ ಕೈಗೆ ನೀಡಿದ್ದಾಳೆ. ಬೀಸುತ್ತಿರುವ ಚಾಟಿಗೆ ಕಾಲ, ದೇಶ, ಧರ್ಮಗಳ ಗೋಡೆಗಳಿಲ್ಲದೆ ರಕ್ಷಿಸಿಕೊಳ್ಳುವುದು ಸಾಧ್ಯವಾಗಿಲ್ಲ ಕುಟುಂಬದಲ್ಲಿ ಹೆಣ್ಣಿಗೆ ಅಣ್ಣ, ಮಾವ, ತಮೆರಿಯಾಗಿ ನಿಲ್ಲಬೇಕಾಗಿತ್ತು. ಇಂದು ತಮೆರಿಯೂ ಇಲ್ಲ, ಕುಟುಂಬವೂ ಇಲ್ಲ. ಆರಾಧನಾ ಪರಂಪರೆಯ ಬಹಳಷ್ಟು ಖರ್ಚು ವೆಚ್ಚದ ನಾಗ, ಭೂತ, ಆಲಡೆ, ಕುಟುಂಬ ಎಲ್ಲ ಹೆಣ್ಣಿಗೆ. ಆಸ್ತಿ ಮಾತ್ರ ಗಂಡಿನ ಪಾಲಿನದಾಗಿದೆ.

ಹೆಣ್ಣುಮಕ್ಕಳ ಸ್ವಾಯತ್ವತೆಯನ್ನು ಕಸಿದುಕೊಂಡು ಆಕೆಗೆ ತಮರಿಯಾಗಿ ನಿಲ್ಲದಿರುವ ಗಂಡು ಆಕೆಯನ್ನು ನಿಯಂತ್ರಿಸಬಲ್ಲಷ್ಟು ಪರಿಣಾಮ ಬೀರುತ್ತಾನೆ. ಏರುತ್ತಿರುವ ಮದುವೆ ವಯಸ್ಸಿನ ಹೆಣ್ಣುಮಕ್ಕಳು, ಅವಿವಾಹಿತೆಯರು, ಒಂಟಿ ಹೆಣ್ಣುಮಕ್ಕಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈ ಅನುಲೋಮ- ವಿಲೋಮ ಬೆಳವಣಿಗೆಯ ನಡೆ ಆರೋಗ್ಯಕರ ಸಮಾಜದ ಲಕ್ಷಣವೂ ಅಲ್ಪ. ಕಣ್ಣಿಗೆ ರಾಚುವಂತೆ ಕಾಣುವ ಲಿಂಗ ತಾರತಮ್ಯ ಅಸಮಾನ ಸಂಪತ್ತಿನ ಹಂಚಿಕೆ, ಮುರಿದು ಬೀಳುತ್ತಿರುವ ವೈವಾಹಿಕ ಸಂಬಂಧಗಳು, ಹೆಚ್ಚಿರುವ ಒಂಟಿ ತಾಯಂದಿರು, ಬಾಡಿಗೆ ತಾಯ್ತನ, ಲೈಂಗಿಕ ಕಾರ್ಯಕರ್ತೆಯರು, ಹೀಗೆ ಪಟ್ಟಿ ಬೆಳೆಸುತ್ತಾ ಹೋಗುವುದರ ಮೂಲಕ ಸಮಸ್ಯೆಯ ಸುಳಿಗಳು ಸಿಕ್ಕು ಸಿಕ್ಕಾಗಿ ಆವರಿಸಿಕೊಳ್ಳುತ್ತವೆ.

ಅಭಿವೃದ್ಧಿ ಎನ್ನುವುದು ಮಾರುಕಟ್ಟೆ ಸಂಸ್ಕೃತಿಯ ಹೊಸ ಪರಿಭಾಷೆಯಾಗಿ ಬೆಳೆಯುತ್ತ ಬದುಕಿನ ಮೌಲ್ಯಗಳನ್ನು ಜನಜೀವನ ಗ್ರಹಿಕೆಗಳನ್ನು ನಿಧಾನವಾಗಿ ನಾಶಮಾಡುತ್ತಾ ಸಾಗುತ್ತಿದೆ ಆಧುನಿಕತೆಯ ಸವಲತ್ತುಗಳು ಎಲ್ಲರಿಗೂ ಬೇಕು. ಅಪಾಯದ ಕರೆಗಂಟೆ ಮೊಳಗುತ್ತಿದ್ದರೂ ಯಾವುದನ್ನು ಒಪ್ಪಿಕೊಳ್ಳಬೇಕು, ಯಾವುದನ್ನು ಧಿಕ್ಕರಿಸಬೇಕು ಎನ್ನುವ ದ್ವಂದ್ವ ವರ್ತಮಾನದಲ್ಲಿ ಮತ್ತೆ ಮತ್ತೆ ಕಾಡುತ್ತಿದೆ. ಮಾನವ ಸಮಾಜ ತಾನು ಸುಖಿಯಾಗುವ ಭರದಲ್ಲಿ, ಕಳೆದು ಹೋಗುತ್ತಿರುವ ಕಾಲದ ಮಧ್ಯೆ ಸುಖವನ್ನು ಸೂರೆಗೊಳ್ಳಬೇಕು ಎಂಬ ಇರಾದೆಯಲ್ಲಿದೆ. ಮಾನವೀಯತೆಯ ಮುಖಗಳನ್ನೇ ಮರೆಯುತ್ತ ತನ್ನ ಸಹಜೀವಿಯಾಗಿ ಸಹವರ್ತಿಯಾಗಿರುವ ಹೆಣ್ಣನ್ನು ನಿಗ್ರಹಿಸಲು ಶೋಷಣೆಯ ಹೊಸದಾರಿಗಳನ್ನು ಹುಡುಕುತ್ತಾ ಪಿತೃ ಪ್ರಧಾನತೆಯ ಮೌಲ್ಯಗಳನ್ನು ಅವಳ ಮೇಲೆ ಹೇರಲಾಗುತ್ತಿದೆ. ಸನಾತನ ವ್ಯವಸ್ಥೆಗೆ ಒಗ್ಗಿಕೊಂಡ ಮನಸ್ಸುಗಳು ಆಡಳಿತದಲ್ಲೂ ನ್ಯಾಯಾಂಗ ವ್ಯವಸ್ಥೆಯಲ್ಲೂ ಅಂತರ್ಗತವಾಗಿ ಹೋಗಿ ಆಕೆಯ ಸ್ವಾಯತ್ತತೆಂುನ್ನು ಕಸಿದುಕೊಳ್ಳುತ್ತಿವೆ. ಜೀವಪರವಾಗಿದ್ದ ಬದುಕಿನ ರೀತಿ ನೀತಿಗಳು ಜೀವ ವಿರೋಧಿಯಾಗುತ್ತ ವಿನಾಶದ ಅಂಚಿಗೆ ಜಾರುತ್ತಿರುವುದು ಅತ್ಯಂತ ಖೇದದ ಸಂಗತಿಯಾಗಿದೆ. ಯಾವುದೇ ಸ್ಥಿತ್ಯಂತರಗಳು ಅಂತಿಮವಾಗಿ ಹೆಣ್ಣುಮಕ್ಕಳ ವೈಯಕ್ತಿಕ ಮತ್ತು ಸಾಮಾಜಿಕ ಬದುಕನ್ನು ಕಸಿಯುವುದು ಅಪಾಯಕಾರಿಯಾದ ಬೆಳವಣಿಗೆಯಾಗಿದೆ. ಇವೆಲ್ಲದರಿಂದ ಪಾರಾಗಬೇಕಾದರೆ ಅಸಮಾನ ೋರಣೆಯ ಅರಿವು ಹೆಣ್ಣುಮಕ್ಕಳಿಗೆ ಮೊದಲಿಗೆ ಅರ್ಥವಾಗಬೇಕು. ತಾವು ಬಲಿಪಶುಗಳಾಗುತ್ತಿದ್ದೇವೆ ಎನ್ನುವುದಕ್ಕೆ ಜಾಗೃತಿಯ ಪ್ರತಿರೋಧದ ತಂತ್ರೋಪಾಯಗಳನ್ನು ನಾವು ಹೆಣ್ಣು ಮಕ್ಕಳೇ ಕಂಡುಕೊಳ್ಳಬೇಕಿದೆ.

ಸಹಬಾಳ್ವೆ ಮತ್ತು ಸಮಾನತೆಯ ತತ್ವದ ಬುಡಕಟ್ಟು ಸಂಸ್ಕೃತಿಯ ದೀರ್ಘ ಪರಂಪರೆ ಹೊಂದಿರುವ ಹಾಗೂ ಸಹನೆ ಮತ್ತು ಸಾಮರಸ್ಯವನ್ನು ಜತೆ ಸೇರಿಸಿ ಬದುಕಿದ ತುಳುವರಿರುವ ಕರಾವಳಿಯ ಹೊಸ ಕಾಲದ ಕೆಲ ತಲ್ಲಣಗಳನ್ನು ಅನುಭವಿಸುತ್ತಿರುವ ಹೊತ್ತಿನಲ್ಲಿಯೇ “ ಸಹಬಾಳ್ವೆ ಸಾಗರ’ ರಾಷ್ಟ್ರೀಯ ಸಮಾವೇಶ ಇಲ್ಲಿ ನಡೆಯುತ್ತಿರುವುದು ಅತ್ಯಂತ ಔಚಿತ್ಯಪೂರ್ಣವಗಿದೆ

Writer - ಜ್ಯೋತಿ ಚೇಳಾರು

contributor

Editor - ಜ್ಯೋತಿ ಚೇಳಾರು

contributor