ನ್ಯೂಯಾರ್ಕ್‌ನ ಆ ಎರಡು ಸ್ಮಾರಕಗಳ ಬಳಿ...

Update: 2016-01-15 17:55 GMT

ಮೆರಿಕದ ವಾಣಿಜ್ಯ ರಾಜಧಾನಿಯಾದ ನ್ಯೂಯಾರ್ಕ್ ಅತ್ಯಂತ ಜನಸಂದಣೀಯ ನಗರ. ವಾಹನಗಳ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ರಸ್ತೆಗಳಲ್ಲಿ ವಾಹನಗಳು ಮುಂದಕ್ಕೆ ಹೋಗುವುದು ಕಷ್ಟ. ಇಂಥದ್ದರಲ್ಲಿ ಪಾರ್ಕಿಂಗ್ ಸಮಸ್ಯೆ ಎಷ್ಟು ತೀವ್ರವಾಗಿರುತ್ತದೆಂದು ಊಹಿಸಿಕೊಳ್ಳಬಹುದು. ಇದರ ಮಧ್ಯೆ ಲಿಬರ್ಟಿ ಪ್ರತಿಮೆಯ ಅಪರೂಪದ ಪ್ರದೇಶವನ್ನು ನೋಡುತ್ತಿರುವಾಗ, ಆಫ್ರಿಕನ್-ಅಮೆರಿಕನ್ ಪ್ರತಿಭಾವಂತ ಹುಡುಗರು ಎಲ್ಲೆಂದರಲ್ಲಿ ಚಮತ್ಕಾರಪೂರ್ಣವಾಗಿ ತಮ್ಮ ಆಟಗಳನ್ನು ತೋರಿಸುತ್ತಿದ್ದರು. ಇದು ಅಮೆರಿಕದ ಉದ್ದಗಲಕ್ಕೂ ಮಾಮೂಲಿಯಾದರೂ, ನ್ಯೂಯಾರ್ಕ್‌ನಲ್ಲಿಯೂ ಎಲ್ಲೆಂದರಲ್ಲಿ ನೋಡಬಹುದು. ದೇಹದ ಚಲನವಲನವನ್ನು ಹಾಗೂ ಮಾತನ್ನು ನಿಜವಾಗಿಯೂ ಮಾರಾಟ ಮಾಡುತ್ತಿದ್ದಾರೆ. ಅಚ್ಚರಿಯ ಸಂಗತಿಯೆಂದರೆ ಇವರೊಡನೆ ಒಬ್ಬ ಹುಡುಗಿಯೂ ಇರುವುದಿಲ್ಲ. ನಾನು ಸುಮ್ಮನೆ ಕುತೂಹಲಕ್ಕೆ ಕೇಳಿದ್ದಕ್ಕೆ; ಅವರು ಅಷ್ಟೊಂದು ಇಷ್ಟಪಡುವುದಿಲ್ಲ ಎಂದು ಹೇಳಿದ್ದರು. ಯಾಕೆ ಎಂದು ಕೇಳಲು ಹೋಗಲಿಲ್ಲ. ಸಾಮಾಜಿಕವಾಗಿ ಎಂತೆಂಥದೋ ಸ್ಥಿತ್ಯಂತರಗಳನ್ನು ಎದುರಿಸುತ್ತಿರುವ ದೇಶ. ಅದರಲ್ಲೂ ‘ಅಮೆರಿಕನ್-ಆಫ್ರಿಕನ್ಸ್’ ಎಂಬುದಂತೂ ಒಂದು ವಿಧವಾದ ಸಂಕೀರ್ಣತೆಯ ನಡುವೆಯೇ ಅಸ್ತಿತ್ವದ ನೆಲೆಗಳು ವಿಸ್ತಾರಗೊಳ್ಳುತ್ತಿರುವುದು. ಆದರೆ ಇಷ್ಟೆಲ್ಲದರ ಮಧ್ಯೆ ನೈಸರ್ಗಿಕ ಪರಿಸರವನ್ನು ಕಾಪಾಡಿಕೊಂಡಿರುವ ಕ್ರಮವೇ ಅಪೂರ್ವವಾದದ್ದು. ಹಾಗೆ ನೋಡಿದರೆ ಲಿಬರ್ಟಿ ಸ್ಟಾಚ್ಯುವಿನ ಸುತ್ತಮತ್ತಲಿನ ವಿಶಾಲ ಪ್ರದೇಶದಲ್ಲಿ ಒಂದು ಲಕ್ಷಕ್ಕೂ ಮೇಲ್ಪಟ್ಟು ಜನ ದಟ್ಟಣೆಯಿದ್ದರೂ ಸ್ವಚ್ಛತೆಗೆ ಕೊಟ್ಟಿರುವ ಪ್ರಾಧಾನ್ಯತೆ ಮೆಚ್ಚವಂಥದ್ದು.

ಹೀಗೆ ಸುತ್ತಾಡುತ್ತ ಗಮನಿಸುವಾಗ ಅಮೆರಿಕದ ಅಸ್ತಿತ್ವಕ್ಕೆ ಮೆರುಗಿನ ರೀತಿಯಲ್ಲಿದ್ದ ಅವಳಿ ವಾಣಿಜ್ಯ ಕೇಂದ್ರಗಳನ್ನು ಧ್ವಂಸ ಮಾಡಿದ ಪರಿಯೇ ವಿಚಿತ್ರವಾದದ್ದು. ಜಗತ್ತಿನ ಮೂಲೆಮೂಲೆಯಲ್ಲಿ ಮುಚ್ಚಿಟ್ಟಿರುವ ಕೆಲವು ಸೂಕ್ಷ್ಮಗಳನ್ನು ಯಂತ್ರಗಳ ಮೂಲಕ ಗ್ರಹಿಸುವಷ್ಟು ತಂತ್ರಜ್ಞಾನವನ್ನು ಬೆಳೆಸಿಕೊಂಡಿರುವ ಅಮೆರಿಕ ಎರಡು ಅವಳಿ ವಾಣಿಜ್ಯ ಕೇಂದ್ರಗಳು ಧ್ವಂಸವಾದಾಗ, ಗಾಬರಿಯಿಂದ ನಾವೆಲ್ಲಿದ್ದೀವಿ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುತ್ತಲೇ, ಸ್ವಾಭಿಮಾನಕ್ಕೂ ಆಘಾತವಾದಂತೆ ಮಾನಸಿಕವಾಗಿ ನರಳಿದರು. ಅಮೆರಿಕದಿಂದ ಸಾವಿರಾರು ಮೈಲಿ ದೂರದಲ್ಲಿರುವ ನಮ್ಮಂಥವರು ಹೀಗೂ ಆಗಲು ಸಾಧ್ಯವೇ? ಎಂಬ ಪ್ರಶ್ನೆಯು ಮುಖಾಮುಖಿಯಾಗ ತೊಡಗಿತ್ತು. ಇದರಿಂದ ಒಂದಂತೂ ಮನವರಿಕೆಯಾಗುವುದು: ಭಯೋತ್ಪಾದಕರು ಯೋಜನಾ ಬದ್ಧವಾಗಿಯೇ ತಮ್ಮ ಕ್ರೌರ್ಯಕ್ಕೆ ತಂತ್ರಗಾರಿಕೆಯ ಎಲ್ಲೆಮೂಲೆಗಳನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆಂಬುದರಲ್ಲಿ ಎರಡನೆಯ ಮಾತಿಲ್ಲ. ಆದರೆ ಯಾಕೆ ಹೀಗಾಗುತ್ತಿದೆ? ಇದಕ್ಕೆ ಕೊನೆಗೂ ಯಾವ ಯಾವ ವಿಧವಾದ ಪರಿಹಾರ ಸೂಕ್ತ ಎಂಬುದರ ಕಡೆಗೆ ಗಾಢವಾಗಿ ಚಿಂತಿಸುವಂತೆ ಆಗುತ್ತಿದೆ. ಅದೇನೆ ಆಗಿರಲಿ. ಆ ವಿಶ್ವ ವಾಣಿಜ್ಯ ಕೇಂದ್ರಗಳಿದ್ದ ಜಾಗವು, ಎಷ್ಟೊಂದು ವಿಧದಲ್ಲಿ ಸುದ್ದಿಯಲ್ಲಿದ್ದವು. ಅಮೆರಿಕಕ್ಕೆೆ ಹೋಗಿ ಬಂದವರೆಲ್ಲ ನ್ಯೂಯಾರ್ಕ್, ವಾಷಿಂಗ್ಟನ್, ಲಾಸ್‌ಏಂಜಲೀಸ್, ನಯಾಗರ ಫಾಲ್ಸ್ ಬಗ್ಗೆ ಹೇಳಿಕೊಂಡು ಸಂಭ್ರಮ ಪಡದಿದ್ದರೆ, ಅವರಿಗೆ ಅಮೆರಿಕ ಪ್ರವಾಸ ಪರಿಪೂರ್ಣ ಅನ್ನಿಸುತ್ತಿರಲಿಲ್ಲ. ಅದೇ ಸಮಯಕ್ಕೆ ಆ ವಿಶ್ವ ವಾಣಿಜ್ಯ ಕೇಂದ್ರಗಳನ್ನು ಕುರಿತು ರಂಜನೀಯವಾಗಿ ವರ್ಣಿಸದಿದ್ದರೆ, ತೃಪ್ತಿಯೇ ಆಗುತ್ತಿರಲಿಲ್ಲ. ಅಷ್ಟರಮಟ್ಟಿಗೆ ಪ್ರವಾಸಿಗರಲ್ಲಿ ಗ್ಲಾಮರನ್ನು ಬೆಳೆಸಿದ್ದ ಕೇಂದ್ರಗಳವು. ಅಂಥದರಲ್ಲಿ ಇಂಥ ಬಣ್ಣಬಣ್ಣದ ಮಿಥ್‌ಗಳನ್ನು ತುಂಬಿಕೊಂಡಿದ್ದನ್ನು ಮುರಿಯಬೇಕಾದರೆ; ಅವರ ಅಂತರಂಗದ ಆಕಾಂಕ್ಷೆಗಳೇನಿದ್ದವು? ಎಂಬುದು ಗೊತ್ತಿಲ್ಲ. ಇದನ್ನು ಹುಡುಕುವುದು ಕಷ್ಟ. ಇದರ ಜೊತೆಗೆ ಇವೆರಡೂ ವಿಶ್ವವಿಖ್ಯಾತ ಕೇಂದ್ರಗಳು ಧ್ವಂಸವಾಗುವ ಸಮಯದಲ್ಲಿ ಮೂರು ಸಾವಿರದ ಏಳು ನೂರಕ್ಕೂ ಹೆಚ್ಚಿನ ಮಂದಿ ತಮ್ಮ ಪ್ರಾಣಗಳನ್ನು ಕಳೆದುಕೊಳ್ಳಬೇಕಾಯಿತು. ಅವರ ಕನಸುಗಳು, ಅವರ ಮೇಲೆ ಅವಲಂಬನೆಯಾದವರು ಎಂತೆಂಥವರೋ ಆಗಿರುತ್ತಾರೆ. ಅಂಥವರ ಮಾನಸಿಕ ವೇದನೆ, ವಿಷಾದ ಹಾಗೂ ಬೇರೆ ವಿಧವಾದ ಸಂಕಷ್ಟಗಳು ಎಷ್ಟು ಆಘಾತಕಾರಿಯಾಗಿರುತ್ತವೆ. ಸುಮ್ಮನೆ ಕಲ್ಪಿಸಿಕೊಂಡರೂ ಗಾಬರಿಯಾಗುತ್ತದೆ. ಈ ದೃಷ್ಟಿಯಿಂದ ಇದನ್ನು ಬರೆಯುವ ಕಾಲಕ್ಕೆ ಖ್ಯಾತ ಗಾಯಕರಾದ ಹಾಗೂ ಅತ್ಯಂತ ಸಜ್ಜನರಾದ ಶಿವಮೊಗ್ಗದ ಸುಬ್ಬಣ್ಣನವರು ದೂರವಾಣಿಯಲ್ಲಿ ಕರೆ ಮಾಡಿದರು. ಈ ವರ್ಷದಲ್ಲಿ ನಿಮ್ಮ ಜೊತೆ ಇನ್ನೂ ಮಾತಾಡಿಲ್ಲ ಎಂಬ ಪ್ರೀತಿಯ ನುಡಿಯ ಜೊತೆಗೆ ಯಾವುದಾದರೂ ಅಪೂರ್ವ ಭಾವಗೀತೆಯನ್ನು ಹಾಡುವರು. ಈ ಬಾರಿ ಅವರು ಹಾಡಿದ್ದ ನುಡಿಯ ಧ್ವನಿಪೂರ್ಣತೆ ಹೀಗಿದೆ: ‘‘ಮಾನವನೆದೆಯಲ್ಲಿ ಆರದೇ ಉರಿಯಲಿ ದೇವರು ಹಚ್ಚಿದ ದೀಪ’’ ಹಾಗೆ ನೋಡಿದರೆ, ಸುಬ್ಬಣ್ಣನವರು ಹೀಗೆ ಯಾರ್ಯಾರನ್ನೋ ನೆನಪು ಮಾಡಿಕೊಂಡು ತಮಗೆ ಪ್ರಿಯವಾದ ಗೀತೆಗಳನ್ನು ಹಾಡಿ ಸಂತೋಷ ಪಡುವರು. ನೆನಪು ಸ್ವಲ್ಪ ಕ್ಷೀಣಿಸುತ್ತಿರುವುದರಿಂದ ಮತ್ತೆ ಮತ್ತೆ ಸಂಪರ್ಕಿಸಿದರೂ, ಕವಿತೆಯ ಸಾಲುಗಳಂತೂ ನೆನಪಿನ ಸಮಸ್ಯೆಯಿಂದ ವಂಚಿತವಾಗುವುದಿಲ್ಲ. ಆದರೆ ‘‘ಮಾನವನೆದೆಯಲ್ಲಿ ಆರದೇ ಉರಿಯಲಿ ದೇವರು ಹಚ್ಚಿದ ದೀಪ’’ ಈ ಧ್ವನಿಯನ್ನೇ ತುಂಬಿಕೊಂಡು, ಆ ನ್ಯೂಯಾರ್ಕಿನ ದ್ವಂಸವಾದ ವಾಣಿಜ್ಯ ಕ್ರೇಂದ್ರಗಳ ಜಾಗದಲ್ಲಿ ಈಗ ಸದಾ ನೀರಿನ ತರಂಗವೂ ವೈವಿಧ್ಯಮಯವಾಗಿ ವ್ಯಾಪಿಸಿಕೊಂಡು ಬಿಟ್ಟಿದೆ. ಅದನ್ನು ಎಷ್ಟು ಮನಮೋಹಕವಾಗಿ ಎರಡು ಕೊಳಗಳ ರೂಪದಲ್ಲಿ ಕಲಾತ್ಮಕವಾಗಿ ಆಕಾರ ಕೊಟ್ಟಿದ್ದಾರೆ. ಮಡಿದವರೆಲ್ಲರ ಹೆಸರುಗಳನ್ನು ಆ ಕಪ್ಪು ಶಿಲೆಯ ಮೇಲೆ ಕೆತ್ತಿದ್ದಾರೆ.
ಆ ಹೆಸರುಗಳಿಗೆ ಸಂಬಂಧಪಟ್ಟವರೆಲ್ಲ ವರ್ಷಕ್ಕೊಮ್ಮೆ ಯಾವುದಾದರೂ ಒಂದು ರೂಪದಲ್ಲಿ ಒಂದು ಹೆಸರಿನ ಮುಂದೆ ಅಲಂಕಾರ ಮಾಡುವರು. ದೀಪ ಹಚ್ಚುವರು. ಆಗ ಈ ನೆನಪೆಂಬುದು ಸದಾ ಉರಿಯುತ್ತಿರಲಿ, ಯಾವ ಕಾರಣಕ್ಕೂ ಆರದೆ ಎಂಬುದನ್ನು ಎಷ್ಟು ಬಾರಿ ಕೇಳಿಕೊಂಡು ಬದುಕಬಹುದು ಅನ್ನಿಸಿದೆ. ಸುಮ್ಮನೆ ಹೀಗೆಯೇ ಆ ಹೆಸರುಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುವಾಗ ಅದರಲ್ಲಿ ಭಾರತದ ಮಂದಿಯೂ ಸಾಕಷ್ಟು ಇದ್ದರು. ಅವರು ಯಾವುದೇ ದೇಶದವರಾಗಿರಲಿ, ಕಳೆದು ಹೋಗಿರುವುದಂತೂ ನಿಜ. ವಿಷಾದದ ಮೊತ್ತವನ್ನು ವಿಸ್ತರಿಸಿ ಹೋಗಿರುವುದಂತೂ ನಿಜ. ಹೀಗೆಯೇ ಯೋಚಿಸುತ್ತಾ ಹೋದಂತೆಲ್ಲ, ಈ ಹೆಸರುಗಳ ಸಂಬಂಧಿಕರು ಎಷ್ಟು ವರ್ಷ ಬಂದು ನೋಡಿಕೊಂಡು ಹೋಗಲು ಸಾಧ್ಯ. ಕೊನೆಗೆ ಆ ಕುಟುಂಬಗಳ ಕೆಲವರಾದರೂ ತಮ್ಮ ದಿನಚರಿಗಳಲ್ಲಿ, ಹೀಗೆ ಇಂಥವರು ಕಾಲವಾದರು ಎಂದು ಬರೆದಿಟ್ಟು ಹೋಗಬಹುದು. ಜೊತೆಗೆ ಅಮೆರಿಕದ ಸರಕಾರ ಚಾರಿತ್ರಿಕ ಕಾರಣಗಳಿಗಾಗಿ ಆ ಹೆಸರುಗಳ ಅಕ್ಷರಗಳ ಮೇಲೆ ಬೆಲೆಬಾಳುವ ಬಿಳಿಯ ಬಣ್ಣದಿಂದ ಬಳಿಯಲೂಬಹುದು. ಯಾವುದಕ್ಕೂ ದೀರ್ಘ ಕಾಲವೆಂಬುದು ಇರುವು ದಿಲ್ಲ. ಪ್ರಕೃತಿಯ ಏಳು ಬೀಳುಗಳ ಮಧ್ಯೆ ಏನೇನೋ ಆಗಿ ಬಿಡಬಹುದು. ಅದು ಅಷ್ಟು ದುಃಖದಾಯಕವಾಗಿರುವುದಿಲ್ಲ. ನಾಶ ಮಾಡುವುದಕ್ಕಾಗಿಯೇ ಕೆಲವರು ಹುಟ್ಟಿಕೊಂಡಾಗ ಅದರ ವಿಷಾದದ ಮೊತ್ತ ತೀವ್ರವಾಗುತ್ತಲೇ ಹೋಗುತ್ತಿರುತ್ತದೆ.
ಈ ಮಧ್ಯೆ ಕೆಲವರು ಸಿನಿಕತನದಿಂದ ಹೇಳಿದರು, ‘‘ಅಲ್ಲಿ ಹಾಗೆ ಸತ್ತವರಲ್ಲಿ ಯಾರೂ ಮುಸ್ಲಿಮರಿಲ್ಲ’’ ಎಂದು. ಆಗ ನಾನು ಯಾವ ರೀತಿಯ ಸಿಟ್ಟಿನಿಂದ ಪ್ರತಿಕ್ರಿಯಿಸಬೇಕೋ ಗೊತ್ತಾಗಲಿಲ್ಲ. ಅವರು ಮೂರ್ಖರಾದರೆ, ನಾನೇಕೆ ಅವರಂತೆ ಆಗಲಿ ಎಂದು ಯೋಚಿಸಿ ನನ್ನ ಬಳಿ ಕ್ಯಾಮರಾದಲ್ಲಿ ಕ್ಲಿಕ್ ಮಾಡಿದ್ದ ಕೆಲವು ಹೆಸರುಗಳನ್ನು ತೋರಿಸಿದೆ. ಅಲ್ಲಿ ಮುಸ್ಲಿಮರ ಹೆಸರುಗಳಿದ್ದವು. ಅದಕ್ಕೆ ನಾಟಕೀಯವಾಗಿ ಬೇರೇನೋ ಮತಾಡಲು ಹೋದರು. ನಾನು ಅದನ್ನು ಕೇಳಿಸಿಕೊಳ್ಳಲು ಮನಸ್ಸಿಲ್ಲದೆ, ಅಲ್ಲಿಯೇ ಪೂಜ್ಯ ರೂಪದಲ್ಲಿದ್ದ ಒಂದು ವೃಕ್ಷದ ಬಳಿ ಹೋದೆ. ಅದು ಈಗ ಸಾಕಷ್ಟು ದೊಡ್ಡದಾಗಿ ಬೆಳೆದಿದೆ. ಆ ಎರಡು ವಾಣಿಜ್ಯ ಕೇಂದ್ರಗಳು ಧ್ವಂಸವಾದಾಗ, ಸಾಕ್ಷಿ ಪ್ರಜ್ಞೆಯ ರೀತಿಯಲ್ಲಿ ಉಳಿದದ್ದು ಅದು ಒಂದೇ. ಆದ್ದರಿಂದ ಯಾರೇ ವಿದೇಶಿ ಗಣ್ಯರು ಬಂದರೂ ಆ ವೃಕ್ಷಕ್ಕೆ ನಮಸ್ಕರಿಸಿ, ತಾವು ತಂದಿರುವ ಹೂವಿನ ಗುಚ್ಛವನ್ನು ಅದರ ಬಳಿ ಇಡುವರು. ಒಂದು ನಿಮಿಷ ವೌನದಿಂದ ಇದ್ದು ಶ್ರದ್ಧಾಂಜಲಿಯನ್ನು ಅರ್ಪಿಸಿ ಹೋಗುವರು. ಹೋಗುವ ಮುನ್ನ ನಾವೆಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡಬೇಕು. ಅದನ್ನು ನಿರ್ಮೂಲ ಮಾಡಲು ಕಂಕಣ ಬದ್ಧರಾಗಬೇಕು ಎಂಬ ಪ್ರಮಾಣ ಸೂತ್ರವನ್ನು ಮುಂದಿಟ್ಟು ಹೋಗುವರು. ಮರ ಎಲ್ಲವನ್ನು ವಿಷಾದದಿಂದ ಕೇಳಿಸಿಕೊಳ್ಳುವುದು. ಯಾಕೆಂದರೆ ಅದರ ಬುಡಕ್ಕೂ ತೀವ್ರವಾಗಿ ಪೆಟ್ಟು ಬಿದ್ದು ಪೊಟರೆ ರೀತಿಯಲ್ಲಿ ಆಗಿ ಬಿಟ್ಟಿದೆ. ಅದಕ್ಕೆ ಅದರದೇ ಆದ ನೋವು ಇದ್ದೇ ಇರುತ್ತದೆ. ನಾವು ಅಲ್ಲಿಗೆ ಹೋದ ಹಿಂದಿನ ದಿವಸ ಪೋಪ್ ಫ್ರಾನ್ಸಿಸ್ ಅವರು ಆ ವೃಕ್ಷದ ಬಳಿ ಕೂತು ಪ್ರಾರ್ಥನೆ ಸಲ್ಲಿಸಿದ್ದರಂತೆ ಮತ್ತು ನಿಧನರಾದ ಎಲ್ಲರಿಗೂ ಶ್ರದ್ಧಾಂಜಲಿಯನ್ನು ಅರ್ಪಿಸಿ ಪಕ್ಕದಲ್ಲಿಯೇ ಇದ್ದ ಮ್ಯೂಸಿಯಂಗೆ ಹೋಗಿ ತಮ್ಮ ವೇದನೆಯ ನುಡಿಗಳನ್ನು ದಾಖಲಿಸಿ ಹೋಗಿದ್ದರು.
ಪ್ರತಿವರ್ಷ ಸೆಪ್ಟಂಬರ್ ಹನ್ನೊಂದರಂದು ಇಡೀ ಅಮೆರಿಕದ ಉದ್ದಗಲಕ್ಕೂ ಇಲ್ಲಿ ಮಡಿದವರಿಗಾಗಿ ಶ್ರದ್ಧಾಂಜಲಿಯನ್ನು ಅರ್ಪಿಸು ವರು. ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಇಳಿಸುವರು. ಅಂಥ ಸೆಪ್ಟಂಬರ್ ಹನ್ನೊಂದರಂದು ವಾಷಿಂಗ್ಟನ್‌ನ ಅಬ್ರಾಹಂ ಲಿಂಕನ್ ಅವರ ಮ್ಯೂಸಿಯಂ ನಲ್ಲಿದ್ದೆ. ಆ ಕಲಾತ್ಮಕ ಪ್ರತಿಮೆಯ ವೈಭವಕ್ಕೆ ಮನ ಸೋತಿದ್ದೆ. ನನ್ನ ಹಾಗೆ ನಿಂತ ಮಧ್ಯ ವಯಸ್ಸನ್ನೂ ಮೀರಿದ ವ್ಯಕ್ತಿಯೊಬ್ಬರು ವೌನವಾಗಿ ಪ್ರತಿಮೆಯ ಮುಂದೆ ನಿಂತು, ‘‘ಡಿಯರ್ ಲಿಂಕನ್. ಆಲ್‌ವೇಸ್ ಸೆಲ್ಯೂಟ್ ಯು ಥ್ರೂ ಮೈ ಹಾರ್ಟ್ ಆ್ಯಂಡ್ ಆಸ್ಕ್ ಮೈಸೆಲ್ಫ್ ಟು ವರ್ಕ್ ಟುಗೆದರ್. ಆಲ್ ದಿ ನೇಷನ್ಸ್ ಫಾರ್ ದಿ ಸೇಕ್ ಆಫ್ ಗುಡ್‌ನೆಸ್ ಆ್ಯಂಡ್ ಯು ಆರ್ ಈಕ್ವಲ್ ಟು ಗಾಡ್. ಪ್ಲೀಸ್ ಬ್ಲೆಸ್ ಮಿ’’. ಈ ನುಡಿಗಳು ನನ್ನನ್ನು ರೋಮಾಂಚನಗೊಳಿಸಿದ್ದವು. ತಕ್ಷಣ ನನ್ನ ಜೇಬಿನಲ್ಲಿದ್ದ ಚಿಕ್ಕ ಲೆಟರ್ ಪ್ಯಾಡ್‌ನಲ್ಲಿ ಗುರುತು ಹಾಕಿಕೊಂಡಿದ್ದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News