ಸಾರ್ವಜನಿಕರಿಂದಲೇ ರೈಲ್ವೆ ಅಂಡರ್‌ಪಾಸ್ ಸಂಚಾರಕ್ಕೆ ಮುಕ್ತ
ಬೆಂಗಳೂರು, ಜ. 15: ಬಹುದಿನಗಳಿಂದ ಉದ್ಘಾಟನೆಯಾಗದೆ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದ್ದ ಕೆಆರ್ ಪುರ ರೈಲ್ವೆ ನಿಲ್ದಾಣ ಸಮೀಪದ ಅಂಡರ್ ಪಾಸ್‌ನ್ನು ಸಾರ್ವಜನಿಕರೇ ಸಂಚಾರಕ್ಕೆ ಮುಕ್ತಗೊಳಿಸಿದ ಘಟನೆ ಶುಕ್ರವಾರ ನಡೆಯಿತು.
ಕೆಆರ್ ಪುರದಿಂದ ವೈಟ್‌ಫೀಲ್ಡ್ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಈ ಅಂಡರ್ ಪಾಸ್ ಕಾಮಗಾರಿಯನ್ನು ಎರಡು ವರ್ಷಗಳ ಹಿಂದೆ ಆರಂಭಿಸಲಾಗಿತ್ತು. ಈಗಾಗಲೇ ಕಾಮಗಾರಿ ಪೂರ್ಣಗೊಂಡಿದ್ದು, ಸಂಪರ್ಕ ರಸ್ತೆಯನ್ನು ಅಭಿವೃದ್ಧಿಗೊಳಿಸುವುದಷ್ಟೇ ಬಾಕಿಯಿದೆ ಎಂದು ವಿಜಿನಾಪುರ ಕ್ಷೇಮಾಭಿವೃದ್ಧಿ ಸಂಘದ ಮುಖ್ಯಸ್ಥ ಕೆ.ಶಿವರಾಜ್ ತಿಳಿಸಿದರು.
ಅಂಡರ್‌ಪಾಸ್‌ನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಪದೇಪದೇ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ, ಯಾವುದೇ ಪ್ರಯೋಜನವಾಗಲಿಲ್ಲ. ಈ ಹಿಂದೆಯೂ ಅಂಡರ್‌ಪಾಸ್‌ಗಾಗಿ ಏಳು ದಿನ ಧರಣಿಯನ್ನು ಮಾಡಲಾಗಿತ್ತು. ಸರಕಾರ ಹಾಗೂ ಪಾಲಿಕೆಯ ವಿಳಂಬ ಧೋರಣೆಯಿಂದ ಬೇಸತ್ತು ಇಂದು ಸಾರ್ವಜನಿಕರಿಗೆ ಈ ಅಂಡರ್‌ಪಾಸ್‌ನ್ನು ಉದ್ಘಾಟಿಸಿದ್ದೇವೆ ಎಂದು ಅವರು ಹೇಳಿದರು.
ಕೆಆರ್ ಪುರದಿಂದ ವೈಟ್‌ಫೀಲ್ಡ್‌ಗೆ ಹೋಗಲು ಕನಿಷ್ಠ ಎರಡರಿಂದ ಮೂರು ಗಂಟೆಗಳು ಬೇಕಾಗುತ್ತದೆ. ಟಿನ್‌ಫ್ಯಾಕ್ಟರಿ ಜಂಕ್ಷನ್ ಬಳಿ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗುತ್ತಿದೆ. ಈ ಅಂಡರ್‌ಪಾಸ್ ಪಕ್ಕದಲ್ಲಿ ಮಳೆ ನೀರು ಹರಿಯಲು ಇರುವಂತಹ ಚಿಕ್ಕ ಕಿಂಡಿಯಲ್ಲೆ ಸಾರ್ವಜನಿಕರು ಸಂಚರಿಸುತ್ತಿದ್ದರು. ಆದುದರಿಂದ, ಇದೀಗ ಅಂಡರ್‌ಪಾಸ್‌ನ್ನು ನಾವು ಸಂಚಾರಕ್ಕೆ ಮುಕ್ತಗೊಳಿಸಿದ್ದೇವೆ ಎಂದು ಅವರು ತಿಳಿಸಿದರು.