ಮುಷ್ಕರ ಹಿಂಪಡೆದು ಕ್ಷಮಾಪಣೆ ಕೋರಿದ ದಾದಿಯರು

Update: 2016-01-16 18:34 GMT

ಬೆಂಗಳೂರು, ಜ.16: ಸೇವೆಯನ್ನು ಖಾಯಂ ಗೊಳಿಸುವಂತೆ ಒತ್ತಾಯಿಸಿ ಆಡಳಿತ ಮಂಡಳಿ ವಿರುದ್ಧ ಬೀದಿಗಿಳಿದಿದ್ದ ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ ಸಂಸ್ಥೆ(ಕಿಮ್ಸ್)ಯ ನರ್ಸ್‌ಗಳು ಇದೀಗ ಮುಷ್ಕರ ನಡೆಸಿದ್ದಕ್ಕೆ ಕ್ಷಮಾಪಣೆ ಕೋರಿದ್ದಾರೆ. ಶನಿವಾರ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ನರ್ಸ್ ಸುಷ್ಮಾ ಮಾತನಾಡಿ, ಮುಷ್ಕರದಲ್ಲಿ ನಿರತರಾಗಿದ್ದ 150 ನರ್ಸ್‌ಗಳ ಪೈಕಿ 14 ನರ್ಸ್‌ಗಳನ್ನು ಕಿಮ್ಸ್ ಆಡಳಿತ ಮಂಡಳಿ ಇನ್ನೂ ಸೇವೆಗೆ ಸೇರಿಸಿಕೊಂಡಿಲ್ಲ. ನರ್ಸ್‌ಗಳು ಮುಷ್ಕರ ನಡೆಸಿದ್ದಕ್ಕಾಗಿ ಕ್ಷಮೆ ಕೋರಿದ್ದು, ತಮ್ಮ ಅಮಾನತು ಆದೇಶ ಹಿಂಪಡೆದು ಮತ್ತೆ ಮೊದಲಿನಂತೆ ಕಾರ್ಯ ನಿರ್ವಹಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಮುಷ್ಕರದ ವೇಳೆ ತಮ್ಮಿಂದ ಕೆಲವೊಂದು ತಪ್ಪುಗಳಾಗಿದ್ದು, ಅವುಗಳನ್ನು ಮನ್ನಿಸಿ ತಮ್ಮ ಸೇವೆಯನ್ನು ಆಡಳಿತ ಮಂಡಳಿಯು ಮುಂದುವ ರಿಸಬೇಕು. ಸುದೀರ್ಘ ಅವಧಿಯಿಂದ ಕಿಮ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರತಿಭಟನೆಯ ಹಾದಿ ತುಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

 ಪ್ರತಿಭಟನೆ ವೇಳೆ ಸಂಸ್ಥೆಯು ಅಮಾ ನತು ಆದೇಶ ಹೊರಡಿಸಿದೆ. ಇದನ್ನು ಹಿಂಪಡೆ ಯಬೇಕು. ಜ.19ರಂದು ಆಡಳಿತ ಮಂಡಳಿಯ ಕಾರ್ಯಕಾರಿ ಸಮಿತಿ ನಡೆಯಲಿದ್ದು, ಈ ಸಭೆಯಲ್ಲಿ ತಮಗೆ ಮರುನೇಮಕ ಮಾಡಿರುವ ಆದೇಶದ ಪ್ರತಿ ಲಭ್ಯವಾಗುವ ವಿಶ್ವಾಸ ಇದೆ. ಈ ಹಿಂದೆ ನಡೆಸಿದ ಮುಷ್ಕರದಿಂದ ಸಂಸ್ಥೆಯ ಗೌರವಕ್ಕೆ ಧಕ್ಕೆ ಬರುವಂತಾಗಿದೆ. ಹೀಗಾಗಿ ಒಕ್ಕಲಿಗರ ಸಂಘದ ಮುಖಂಡರಲ್ಲಿ ಕ್ಷಮೆ ಕೋರಲಾಗುತ್ತಿದೆ. ಮುಂದಿನ ದಿನದಲ್ಲಿ ಮುಷ್ಕರಕ್ಕೆ ಇಳಿಯದೆ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತೇವೆ ಎಂದು ಹೇಳಿದರು. ನರ್ಸ್ ರೂಪಾ ಮಾತನಾಡಿ, ಶುಶ್ರೂಷಕ ವೃತ್ತಿಯು ಅತ್ಯಂತ ಗೌರವಾನ್ವಿತ ವೃತ್ತಿಯಾಗಿದೆ. ರೋಗಿಗಳ ಸೇವೆ ನಮ್ಮ ಮೊದಲ ಆದ್ಯತೆ. ಈ ಸೇವಾ ಮನೋಭಾವಕ್ಕೆ ಮನ್ನಣೆ ನೀಡಿ ಆಡಳಿತ ಮಂಡಳಿ ತಮಗೆ ಮತ್ತೆ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಕೋರಿದರು. 2015ರ ಸೆಪ್ಟಂಬರ್ ತಿಂಗಳಲ್ಲಿ ಖಾಯಂ ಗೊಳಿಸುವಂತೆ ಒತ್ತಾಯಿಸಿ 150 ನರ್ಸ್‌ಗಳು ಸುಮಾರು ಒಂದು ತಿಂಗಳ ಕಾಲ ಮುಷ್ಕರ ಕೈಗೊಂಡಿದ್ದರು. ಖಾಯಂಗೊಳಿಸುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಕೊನೆಗೆ ಕಿಮ್ಸ್‌ಆಡಳಿತ ಮಂಡಳಿಯು ಮೊದಲು ವೇತನ ಹೆಚ್ಚಳ ಮಾಡುವುದಾಗಿ ಹೇಳಿ ನಂತರ ಖಾಯಂಗೊಳಿಸುವ ಭರವಸೆ ನೀಡಿತ್ತು. ಬಳಿಕ ಮುಷ್ಕರವನ್ನು ಕೈಬಿಡಲಾಗಿತ್ತು. ಆದರೆ, ಕಾರಣಾಂತರಗಳಿಂದ 14 ಮಂದಿಯನ್ನು ಸೇವೆಗೆ ಸೇರಿಸಿಕೊಳ್ಳಲು ಒಪ್ಪಿಕೊಂಡಿರಲಿಲ್ಲ. ಹೀಗಾಗಿ ಮುಷ್ಕರ ನಡೆಸಿದ್ದಕ್ಕೆ ನರ್ಸ್‌ಗಳು ಕ್ಷಮೆ ಕೇಳಿದ್ದು, ಅಮಾನತು ಆದೇಶ ಹಿಂಪಡೆದು ಸೇವೆಗೆ ಸೇರಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ನರ್ಸ್‌ಗಳಾದ ಕೌಶಲ್ಯ, ಸ್ಮಿತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News