ಸಖಿ ಉತ್ಸವ ಸಂಚಾರ ಮಾರಾಟ ಆರಂಭ

Update: 2016-01-18 18:19 GMT

ಬೆಂಗಳೂರು, ಜ. 18: ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ವತಿಯಿಂದ ಗ್ರಾಮೀಣ ಭಾಗದಲ್ಲಿ ಸ್ವಸಹಾಯ ಗುಂಪುಗಳು ಉತ್ಪಾದಿಸುವ ವಸ್ತುಗಳನ್ನು ಎಲ್ಲ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ಸಖಿ ಉತ್ಸವ ಸಂಚಾರ ಮಾರಾಟವನ್ನು ಪ್ರಾರಂಭಿಸಲಾಗಿದೆ.

ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಮಾತನಾಡಿ, ಗ್ರಾಮೀಣ ಪ್ರದೇಶದ ಉತ್ಪನ್ನಗಳನ್ನು ಸಂಚಾರಿ ಮಳಿಗೆ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ಆನ್‌ಲೈನ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ನಮ್ಮ ಸಂಸ್ಥೆಯು www.homemadeonline.in ಆನ್‌ಲೈನ್ ಸಂಸ್ಥೆಯೊಂದಿಗೆ ಸೇರಿ ಸಖಿ ಉತ್ಸವ ಸಂಚಾರ ಮಳಿಗೆ ಪ್ರಾರಂಭಿಸಲಾಗಿದೆ. ಮೊಳಕಾಲ್ಮೂರು, ಶಿಗ್ಗಿ, ಇಳಕಲ್‌ಗಳಲ್ಲಿನ ಸ್ವಸಹಾಯ ಗುಂಪುಗಳು ಸಿದ್ಧಪಡಿಸಿರುವ ನೇಯ್ಗೆ ಬಟ್ಟೆ, ಸೀರೆ, ಖಾದಿ ಬಟ್ಟೆ, ಗ್ರಾಮೀಣ ಮಹಿಳೆಯರು ತಯಾರಿಸಿದ ಆಹಾರ ಪದಾರ್ಥ, ಉಪ್ಪಿನಕಾಯಿ, ಕುರುಕಲು ತಿಂಡಿಗಳು, ಜ್ಯೂಸ್ ಮತ್ತಿತರ ಉತ್ಪನ್ನಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ ಎಂದು ಹೇಳಿದರು.

ಈ ಮೂಲಕ ಗಾಂಧೀಜಿಯವರು ಕಂಡ ಮಹಿಳೆಯರ ಸ್ವಾವಲಂಬನೆ ಕನಸನ್ನು ನನಸು ಮಾಡಲು ಪ್ರಯತ್ನಿಸುತ್ತಿದ್ದೇವೆ. ಗ್ರಾಮೀಣ ಭಾಗದ ಉತ್ಪನ್ನಗಳಿಗೆ ಮಾರುಕಟ್ಟೆ ಸಿಗುವುದಿಲ್ಲ. ಅವರ ನಿರೀಕ್ಷೆಗೆ ತಕ್ಕ ದರ ಸಿಗುವುದಿಲ್ಲ. ಮಧ್ಯವರ್ತಿಗಳ ಪಾಲಾಗುತ್ತಿದೆ. ಹಾಗಾಗಿ ಈ ಯೋಜನೆಯನ್ನು ಹಮ್ಮ್ಮಿಕೊಂಡಿದ್ದೇವೆ ಎಂದರು.

ದಕ್ಷಿಣ ಕನ್ನಡ, ಹಾವೇರಿ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ 10 ಘಟಕಗಳನ್ನು ತೆರೆದು 400 ಮಹಿಳೆಯರು ಕೆಲಸ ನಿರ್ವಹಿಸಲಿದ್ದಾರೆ. ಈ ಉತ್ಪನ್ನಗಳಿಗೆ ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ಮಾಡಬಹುದಾಗಿದೆ. ಹೆಚ್ಚಿನ ವಿವರಗಳಿಗೆ 9972587965 ಸಂಪರ್ಕಿಸಬಹುದು ಎಂದು ಮಂಜುನಾಥ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News