ಕುಟ್ಟ ಬ್ಯಾರಿಯ ಪುಟ್ಟ ಕತೆ

Update: 2016-01-20 08:12 GMT

..................................................................................................................................................

1960 ರ ದಶಕದ ಆರಂಭದ ದಿನಗಳವು. ಅಪ್ಪ ಅಮ್ಮ ವಾಟೆಕಜೆ ಬಿಟ್ಟು ಬಿಳಿಮಲೆ ಸೇರಿದ್ದರು. ಈ ಬಿಳಿಮಲೆ ಹೆಸರು ಹೇಗೆ ಬಂತೋ ತಿಳಿಯದು. ಸಾಹಸೀ ಸ್ವಭಾವದ ನಮ್ಮ ಅಜ್ಜ ಕರಿಮಲೆಯ ಕಾಡನ್ನು ಸವರಿ, ಅಲ್ಲಿ ನೆಲಕ್ಕೆ ಬೆಳಕು ಬೀಳುವ ಹಾಗೆ ಮಾಡಿ, ಬಿಳಿಮಲೆ ಎಂದು ಹೆಸರಿಟ್ಟಿರಬೇಕು ಎಂದು ನನ್ನ ಊಹೆ. ಪಶ್ಚಿಮಘಟ್ಟಗಳ ಭಾಗವಾದ ಬಿಳಿಮಲೆಯಲ್ಲಿ ನಮ್ಮದು ಕೇವಲ ಐದು ಮನೆಗಳು, ಒಂದೇ ಮನೆಯಿದ್ದ ವಾಟೆಕಜೆಯಿಂದ ಎಷ್ಟೋ ವಾಸಿ. ಬಂಟಮಲೆಯನ್ನು ರಕ್ಷಿತಾರಣ್ಯವೆಂದು ಸರಕಾರ ಘೋಷಿಸಿದ ಕಾರಣ ಮತ್ತೆ ಅಲ್ಲಿ ಹೆಚ್ಚು ಮನೆಗಳು ಹುಟ್ಟಿಕೊಳ್ಳಲಾರದಾದುವು. ಏನಾದರೂ ವಸ್ತುಗಳು ಬೇಕಾದರೆ ಇಲ್ಲಿಂದ ಸುಮಾರು ಹತ್ತು ಕಿ.ಮೀ. ದೂರದ ಪಂಜ ಪೇಟೆಗೆ ಹೋಗಿ ಬರಬೇಕು. ಆ ಕೆಲಸವನ್ನು ಅಪ್ಪ ಮಾತ್ರ ಮಾಡುತ್ತಿದ್ದರು. ಉಳಿದಂತೆ ನಾವು ಕೆಲವರು ವರುಷಕ್ಕೊಮ್ಮೆ ನಡೆಯುವ ಪಂಜ ಜಾತ್ರೆಯಲ್ಲಿ ಮಾತ್ರ ಹೊಸ ಮನುಷ್ಯರನ್ನು ಕಾಣುತ್ತಿದ್ದೆವು. ಜೊತೆಗೆ, ಪಂಜ ಜಾತ್ರೆಯಲ್ಲಿ ನೋಡಲು ಸಿಗುತ್ತಿದ್ದ ಸಣ್ಣ ದೊಡ್ಡ ಕನ್ನಡಿಗಳು, ವಿವಿಧ ದೇವರುಗಳ ಭಾವ ಚಿತ್ರಗಳು, ಧ್ವನಿವರ್ಧಕದ ಮೂಲಕ ಜೋರಾಗಿ ಕೇಳುತ್ತಿದ್ದ ಬಗೆಬಗೆಯ ಹಾಡುಗಳು, ಹತ್ತು ಪೈಸೆಗೆ ದೇಶ ತೋರಿಸುತ್ತಿದ್ದ ಮಾಂತ್ರಿಕ ದಂಡ, ಇತ್ಯಾದಿಗಳು ನಮಗೆ ಮುಂದಿನ ಒಂದು ವರುಷಕ್ಕೆ ಬೇಕಾದ ರೋಮಾಂಚನವನ್ನು ಒದಗಿಸುತ್ತಿದ್ದವು. ಪಂಜ ಜಾತ್ರೆ ನಮಗೆಲ್ಲ ಆಧುನಿಕತೆಗೆ ಒಂದು ಕಿಟಿಕಿಯಾಗಿತ್ತು.

ಕಾಡೊಳಕ್ಕೆ ಇರುವ ನಮ್ಮ ಮನೆಗೆ ಸಾಮಾನ್ಯವಾಗಿ ಆಗಾಗ ಬರುತ್ತಿದ್ದವನೆಂದರೆ ಒಬ್ಬ ಬ್ಯಾರಿ. ಅವನ ನಿಜವಾದ ಹೆಸರೇನೆಂದು ಯಾರಿಗೂ ತಿಳಿದಿಲ್ಲ. ಆತನ ತಲೆ ನುಣ್ಣಗಾಗಿದ್ದು, ಅದರಲ್ಲಿ ಒಂದೂ ಕೂದಲಿರಲಿಲ್ಲವಾದ್ದರಿಂದ ನಾವು ಅವನನ್ನು ಕುಟ್ಟ ಬ್ಯಾರಿ ಎಂದು ಕರೆಯುತ್ತಿದ್ದೆವು. ಪಂಚೆ ಉಟ್ಟು, ಮಾಸಿದ ಅಂಗಿ ತೊಟ್ಟು, ತಲೆಯಲ್ಲಿ ಒಂದು ಗೋಣಿ ಚೀಲ ಹೊತ್ತುಕೊಂಡು, ಆತ ಬಂಟಮಲೆಯೊಳಕ್ಕೆ ಪ್ರವೇಶಿಸುತ್ತಿದ್ದ. ಬಂದವನೇ ಯಜಮಾನ ಉಂಟೋ ಅಂತ ಕೇಳುತ್ತಿದ್ದ. ಇಲ್ಲ ಅಂದರೆ ಅಂಗಳ ದಾಟಿ ಮುಂದಿನ ಮನೆಗೆ ಮಾತಿಲ್ಲದೇ ಹೋಗುತ್ತಿದ್ದ. ಇದ್ದಾರೆ ಅಂದರೆ, ಅಪ್ಪ ಬರುವವರೆಗೆ ಕಾದು ಅಪ್ಪನ ಮುಖ ಕಾಣುತ್ತಲೇ ನಮಸ್ಕಾರ ಅಂತ ಹೇಳಿ, ಜಗಲಿಯ ಮೇಲೆ ಕುಳಿತು ಕಾಲನ್ನು ಅಂಗಳದತ್ತ ಇಳಿಬಿಡುತ್ತಿದ್ದ. ತಾಳಮದ್ದಳೆ ಅರ್ಥಧಾರಿಯಾಗಿದ್ದ ಅಪ್ಪ ಆತನ ಮುಂದೆ ಕಾಲುಮಡಚಿ ಕುಳಿತು ತಮ್ಮದೇ ಹರಕು ಮುರುಕು ಬ್ಯಾರಿ ಭಾಷೆಯಲ್ಲಿ ಮಾತಾಡುತ್ತಾ ಸುದೀರ್ಘ ಪಟ್ಟಾಂಗಕ್ಕೆ ಸಿದ್ಧವಾಗುತ್ತಿದ್ದರು. ಬಿರು ಬಿಸಿಲಲ್ಲಿ ಬೆವರೊರಸಿಕೊಳ್ಳುತ್ತಾ ಮನೆಯೊಳಕ್ಕೆ ಬಂದ ಕುಟ್ಟ ಬ್ಯಾರಿಗೆ ಕಾರಣವಿಲ್ಲದೆ ಸುಮ್ಮನೆ ಒಂದೆರಡು ಬೈಯುವ ಅಮ್ಮ ಕೊನೆಗೆ ಎರಡು ಬೆಲ್ಲದ ತುಂಡುಗಳ ಜೊತೆ ತಂಬಿಗೆ ನೀರು ತಂದು ಕೊಡುತ್ತಿದ್ದಳು.

ಅಪ್ಪನ ಜೊತೆ ಪಟ್ಟಾಂಗ ಆರಂಭಿಸುವ ಮುನ್ನ ಕುಟ್ಟ ಬ್ಯಾರಿಗೆ ಒಂದು ಬೀಡಿ ಏರಿಸಲೇಬೇಕು. ಅಪ್ಪ ಸಾಮಾನ್ಯವಾಗಿ ಬೀಡಿ ಸೇದುವ ಚಟದವರಲ್ಲ. ಆದರೂ ಕುಟ್ಟ ಬ್ಯಾರಿಯ ಬೀಡಿ ಸೇದುವ ಶೈಲಿಗೆ ಮರುಳಾಗಿದ್ದ ಅವರು ನನಗೂ ಒಂದು ಬೀಡಿ ಕೊಡು ಎಂದು ಹೇಳಿದಾಗ ಕುಟ್ಟ ಬ್ಯಾರಿ ಅದೆಲ್ಲಿಂದಲೋ ಒಂದು ಸಾಧು ಬೀಡಿ ತೆಗೆದು ಅಪ್ಪನ ಕೈಗಿಡುತ್ತಿದ್ದ. ಆದರೆ ಯಾವ ಕಾರಣಕ್ಕೂ ಬೆಂಕಿ ಕಡ್ಡಿ ಮಾತ್ರ ಕೊಡುತ್ತಿರಲಿಲ್ಲ, ಒಲೆಯಿಂದ ಉರಿಸಿಕೊಳ್ಳಿ ಅಂತ ಹೇಳಿದಾಗ ಬೀಡಿ ನೇರವಾಗಿ ನನ್ನ ಕೈಗೆ ಬರುತ್ತಿತ್ತು. ನಾನು ಛಂಗನೆ ಜಿಗಿದು, ಅಡುಗೆ ಮನೆ ಸೇರಿ, ಬೀಡಿ ಉರಿಸಿ, ಒಂದು ದಮ್ಮು ಸೇದಿ, ಮರುಕ್ಷಣದಲ್ಲಿ ಬೀಡಿಯನ್ನು ಅಪ್ಪನ ಕೈಯಲ್ಲಿಡುತ್ತಿದ್ದೆ. ಅಷ್ಟರಲ್ಲಿ ಅವರಿಬ್ಬರ ನಡುವೆ ಪಟ್ಟಾಂಗ ಆರಂಭವಾಗುತ್ತಿತ್ತು. ಅದೊಂದು ರಮ್ಯಾದ್ಭುತಲೋಕ.

ಆ ಕಾಲದಲ್ಲಿಯೇ ಕುಟ್ಟ ಬ್ಯಾರಿ ಪುತ್ತೂರು, ಬಂಟ್ವಾಳ, ಮಂಗಳೂರು ವರೆಗೆ ಹೋಗಿಬರುತ್ತಿದ್ದನಾದ್ದರಿಂದ ಅವನ ಅನುಭವಲೋಕ ಅಪಾರವಾಗಿತ್ತು. ಅವನು ಭೇಟಿ ಮಾಡುತ್ತಿದ್ದ ಬಗೆಬಗೆಯ ಜನಗಳು, ಮಂಗಳೂರು ಬಂದರಿನಲ್ಲಿ ಅವನು ಬಾಳೆಕಾಯಿ ಮಾರಲು ಪಟ್ಟ ಶ್ರಮ, ಹಿಂದೆ ಬರುವಾಗ ಪಾಣೆಮಂಗಳೂರು ಸೇತುವೆ ಬಳಿ ಉಂಟಾದ ಸಣ್ಣ ಅಪಘಾತ, ಇತ್ಯಾದಿಗಳನ್ನು ಆತ ಸೊಗಸಾಗಿ ವರ್ಣನೆ ಮಾಡುತ್ತಿದ್ದ. ಜೊತೆಗೆ, ಅಡಿಕೆ ಧಾರಣೆಯಲ್ಲಿ ಉಂಟಾದ ಏರಿಳಿತ, ಕಾಳುಮೆಣಸಿಗೆ ಬಂದ ಆಪತ್ತು ಇತ್ಯಾದಿಗಳ ಬಗೆಗೂ ಆತ ವಿವರ ನೀಡುತ್ತಿದ್ದ. ಅವನ ಬಂಧುಗಳ್ಯಾರೋ ಕೇರಳದಲ್ಲಿ ಸತ್ತು ಹೋದದ್ದು, ಹುಡುಗನೊಬ್ಬ ಬೊಂಬಾಯಿಗೆ ಓಡಿ ಹೋದದ್ದು ಕೂಡಾ ಅವನ ವಿವರಣೆಯಲ್ಲಿ ಕೇಳಿಬರುತ್ತಿತ್ತು. ಕುಟ್ಟ ಬ್ಯಾರಿಯ ವಿಶಾಲವಾದ ಅನುಭವಲೋಕಕ್ಕೆ ತೆರೆದುಕೊಳ್ಳುತ್ತಿದ್ದಂತೆ, ಆತನ ಬಗ್ಗೆ ನನಗೆ ಅತೀವ ಗೌರವ ಉಂಟಾಗುತ್ತಿತ್ತು. ರೇಡಿಯೋ, ವರ್ತಮಾನ ಪತ್ರಿಕೆಗಳಿಲ್ಲದ ಬಂಟಮಲೆಗೆ ಕುಟ್ಟ ಬ್ಯಾರಿ ಎಲ್ಲವೂ ಆಗಿದ್ದ.

ಗಂಟೆಗಟ್ಲೆ ಮಾತಾಡಿದ ಆನಂತರ ಕುಟ್ಟ ಬ್ಯಾರಿ ವಿಷಯಕ್ಕೆ ಬರುತ್ತಿದ್ದ. ಏನಾದರೂ ಇದ್ರೆ ಕೊಡಿ ಅಂತ ದುಂಬಾಲು ಬೀಳುತ್ತಿದ್ದ. ಕೊನೆಗೆ ಅಪ್ಪ ಸ್ವಲ್ಪ ಅಡಿಕೆ, ಗೇರು ಬೀಜ ಮತ್ತು ಬಾಳೆಗೊನೆ ಕೊಟ್ಟರೆ ಅದಕ್ಕೆ ಒಂದಷ್ಟು ದುಡ್ಡು ಕೊಟ್ಟು ಮುಂದೆ ಸಾಗುತ್ತಿದ್ದ. ಅಪ್ಪನಲ್ಲಿ ಕೊಡಲು ಏನೂ ಇಲ್ಲದಿದ್ದರೂ ಆತನಿಗೇನೂ ಬೇಸರವಿರಲಿಲ್ಲ. ಅಪ್ಪ ಕೇಳಿದರೆ ಒಂದೈದು ರೂಪಾಯಿ ಅವರ ಕೈಗಿತ್ತು, ಇರಲಿ ಯಜಮಾನ್ರೇ, ಮುಂದೆ ನೋಡೋಣ ಅಂತ ಹೇಳಿ ಅಪ್ಪನನ್ನೇ ಸಮಾಧಾನ ಪಡಿಸುತ್ತಿದ್ದ.

ಕುಟ್ಟ ಬ್ಯಾರಿಯ ತಲೆಯ ಮೇಲಿರುತ್ತಿದ್ದ ಗೋಣಿ ಚೀಲ ಒಂದು ಪುಟ್ಟ ವಿಶ್ವಕೋಶ. ಒಣ ಮೀನುಗಳು, ಮೆಣಸಿನಕಾಯಿ, ಅಕ್ಕಿ, ಓಲೆಬೆಲ್ಲ, ನೀರುಳ್ಳಿ ಹೀಗೆ ಇನ್ನೇನೋ.  ಆತ ಊರು ಸುತ್ತುವಾಗ, ಯಾರ್‍ಯಾರಿಗೋ ಏನೇನೋ ತಂದುಕೊಡುತ್ತೇನೆ ಅಂದದ್ದನ್ನು ನೆನಪಿಟ್ಟುಕೊಂಡು ಕೊಟ್ಟು ಹೋಗುತ್ತಿದ್ದ. ಒಮ್ಮೆ ಕೇರಳದಿಂದ ತಂದ ಓಲೆಬೆಲ್ಲದ ಕಟ್ಟನ್ನು ಉಚಿತವಾಗಿ ಅಪ್ಪನ ಕೈಗಿಟ್ಟು ನಿಮ್ಮದು ಯಕ್ಷಗಾನ ಮಾಡಿ ಬಂದಾಗ ಈ ಬೆಲ್ಲ ಹಾಕಿ ಚಾಯ ಕುಡಿರಿ, ಪಿತ್ತ ಎಲ್ಲ ಇಳಿಯುತ್ತದೆ ಅಂದಿದ್ದ. ಆ ದಿನ  ಅಮ್ಮನ ಕೈಯಿಂದ ಒಂದು ತುಂಡು ಬೆಲ್ಲ ಉಚಿತವಾಗಿ ತಿನ್ನಲು ಸಿಕ್ಕಾಗ ಕುಟ್ಟ ಬ್ಯಾರಿಯ ಬಗೆಗೆ ಅಪಾರವಾದ ಪ್ರೀತಿ ಉಂಟಾಗಿತ್ತು.

ಅಪ್ಪನ ಜೊತೆಗೆ ಕುಳಿತು, ಆತನ ಪಟ್ಟಾಂಗಕ್ಕೆ ಕಿವಿಗೊಡುವ ನನ್ನ ಬಗೆಗೆ ಕುಟ್ಟ ಬ್ಯಾರಿಗೆ ವಿಶೇಷ ಪ್ರೀತಿ. ಒಮ್ಮೊಮ್ಮೆ ನಾನು ಪಂಜದಲ್ಲಿ ಯಕ್ಷಗಾನ ನೋಡಲು ಹೋಗುತ್ತಿದ್ದಾಗ ಆತ ಆಟ ಸುರುವಾಗುವ ಮುನ್ನ ಟೆಂಟ್ ಬಳಿ ಪ್ರತ್ಯಕ್ಷನಾಗುತ್ತಿದ್ದ. ಬನ್ನಿ ಯಜಮಾನ್ರೇ ಅಂತ ಹೇಳಿ ಅಲ್ಲೆಲ್ಲೋ ಕರೆದುಕೊಂಡು ಹೋಗಿ, ಚಹಾ ಕುಡಿಸಿ, ಮತ್ತೆಲ್ಲೋ ಕಾಣೆಯಾಗಿಬಿಡುತ್ತಿದ್ದ. ಕುಟ್ಟ ಬ್ಯಾರಿಯ ಚಹಾದಿಂದಾಗಿ ಕಿಸೆಯಲ್ಲಿಯೇ ಉಳಿದ ನಾಲ್ಕಾಣೆಯಿಂದ ಇನ್ನೊಂದು ಯಕ್ಷಗಾನ ನೋಡಲು ಸಾಧ್ಯವಾಗುತ್ತಿತ್ತು ಮತ್ತು ಅದಕ್ಕಾಗಿ ಅಪ್ಪನನ್ನು ಗೋಗರೆಯುವುದು ತಪ್ಪುತ್ತಿತ್ತು. 

ಕಾಲಾನಂತರ ನಾನು ಕಾಲೇಜು ಸೇರಿದ್ದೆ. ರಜೆಯಲ್ಲಿ ಊರಿಗೆ ಹೋಗಿದ್ದಾಗ ಒಮ್ಮೆ ಕುಟ್ಟ ಬ್ಯಾರಿ ಸಿಕ್ಕಿದ್ದರು. ಮುಖ ಬಾಡಿತ್ತು, ಸುಸ್ತಾದವರಂತೆ ಕಾಣುತ್ತಿದ್ದರು. ನನ್ನನ್ನು ನೋಡಿ ಒಂದು ಉಪಕಾರ ಆಗಬೇಕಲ್ಲ ಯಜಮಾನರೇ ಅಂದರು. ಏನು ಹೇಳಿ? ಅಂದೆ. ಸರಕಾರ ಬಡವರಿಗೆ ಐದು ಸೆಂಟ್ಸ್ ಜಾಗ ಕೊಡುತ್ತದೆ ಅಂತಲ್ಲ? ನನಗೆ ಒಂದು ಅರ್ಜಿ ಬರೆದುಕೊಡಿ, ಹಾಗೆ ಯಾರಿಗಾದರೂ ಹೇಳಿ, ನನಗೆ ಇದೇ ಊರಲ್ಲಿ ಸಾಯಬೇಕು ಅಂತ ಆಸೆ ಅಂದರು. ನಾನು ಅರ್ಜಿಯೇನೋ ಬರೆದುಕೊಟ್ಟೆ, ಆದರೆ ಕಾರಣಾಂತರಗಳಿಂದ ಅವರಿಗೆ ಐದು ಸೆಂಟ್ಸ್ ಜಾಗ ಕೊನೆವರೆಗೂ ದೊರೆಯಲೇ ಇಲ್ಲ, ಆ ದುಃಖದಲ್ಲಿಯೇ ಅವ ತೀರಿಕೊಂಡ ಅಂತ ಅಪ್ಪ ಹೇಳಿದಾಗ ನಾನು ಕುಸಿದುಹೋಗಿದ್ದೆ.

ಈಗ ಹಿಂದೂ ಕೋಮುವಾದಿಗಳು ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಅಟ್ಟಬೇಕೆಂದು ಬೊಬ್ಬಿರಿಯುತ್ತಿರುವಾಗ, ಈ ಪುಣ್ಯಭೂಮಿ ಭರತಖಂಡದಲ್ಲಿ ಐದು ಸೆಂಟ್ಸ್ ಜಾಗದ ಕನಸು ಕಾಣುತ್ತಾ, ಕೊನೆಗೆ ಕನಸುಗಳಿಲ್ಲದ ಹಾದಿಯಲ್ಲಿ ಮರೆಯಾದ ಕುಟ್ಟ ಬ್ಯಾರಿ ತೀವ್ರವಾಗಿ ನೆನಪಾಗುತ್ತಾರೆ.

Writer - ಡಾ. ಪುರುಷೋತ್ತಮ ಬಿಳಿಮಲೆ

contributor

Editor - ಡಾ. ಪುರುಷೋತ್ತಮ ಬಿಳಿಮಲೆ

contributor