ಬಾಕಿ ಪ್ರಕರಣಗಳ ತ್ವರಿತ ವಿಲೇವಾರಿಗೆ ಡಿಸಿ ಸೂಚನೆ

Update: 2016-01-20 18:49 GMT

ಬೆಂಗಳೂರು, ಜ. 20: ಕಂದಾಯ ಇಲಾಖೆಯಲ್ಲಿ ಸುಮಾರು ದಿನಗಳಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎಸ್.ಪಾಲಯ್ಯ ತಹಶೀಲ್ದಾರ್‌ಗಳಿಗೆ ಸೂಚಿಸಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಸಿದ ಕಂದಾಯ ಅಧಿಕಾರಿಗಳ ಸಭೆಯಲ್ಲಿ ತಾಲೂಕುವಾರು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ಜನಸಾಮಾನ್ಯರು ಸಲ್ಲಿಸುವ ಮನವಿ ಹಾಗೂ ಅಹವಾಲುಗಳನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಸಾರ್ವಜನಿಕರನ್ನು ಕಾರಣವಿಲ್ಲದೆ ಕಚೇರಿಗಳಿಗೆ ಅಲೆಸಬಾರದೆಂದು ಸೂಚಿಸಿದರು.

ಜನ ಸಂಪರ್ಕ ಸಭೆಗಳ ಮೂಲಕ ಜನರ ಸಮಸ್ಯೆಗಳನ್ನು ಆಲಿಸುವುದು ಮತ್ತು ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕೆಂದು ತಿಳಿಸಿದರು.

ಸ್ಮಶಾನ ಭೂಮಿಗಾಗಿ ಅರ್ಜಿ ಸಲ್ಲಿಸಿರುವ ಗ್ರಾಮಗಳಿಗೆ ಸರಕಾರಿ ಭೂಮಿ ಲಭ್ಯವಿದ್ದಲ್ಲಿ ಕೂಡಲೇ ಮಂಜೂರು ಮಾಡುವ ಬಗ್ಗೆ, ಸರಕಾರಿ ಭೂಮಿ ಇಲ್ಲದ ಕಡೆ ಖಾಸಗಿ ಭೂಮಿಗಳನ್ನು ಗುರುತಿಸಿ ಮಂಜೂರು ಮಾಡುವ ಬಗ್ಗೆ ಕ್ರಮ ವಹಿಸಬೇಕೆಂದು ತಿಳಿಸಿದರು.

ಸಾಗುವಳಿ ಹಕ್ಕುಪತ್ರ ನೀಡುವವರಿಗೆ ಕೂಡಲೇ ಕಡತಗಳನ್ನು ಪರಿಶೀಲಿಸಿ ಹಕ್ಕುಪತ್ರಗಳನ್ನು ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಉಪಭಾಗಧಿಕಾರಿ ಎಂ.ಕೆ.ಜಗದೀಶ್, ದೊಡ್ಡಬಳ್ಳಾಪುರ ತಹಶೀಲ್ದಾರ್ ರಮೇಶ್, ನೆಲಮಂಗಲ ತಹಶೀಲ್ದಾರ್ ಎಂ.ಸಿ.ನರಸಿಂಹಮೂರ್ತಿ, ಹೊಸಕೋಟೆ ತಹಶೀಲ್ದಾರ್ ಪಿ.ಎಂ.ನಂದಿನಿ, ದೇವನಹಳ್ಳಿ ತಹಶೀಲ್ದಾರ್ ಕೇಶವಮೂರ್ತಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News