2017 - 18 ನೇ ಸಾಲಿನಿಂದ ಒಂದರಿಂದ ಪಿಯುಸಿವರೆಗೆ ರಾಜ್ಯದಲ್ಲಿ ಹೊಸ ಪಠ್ಯಕ್ರಮ ಜಾರಿ: ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್

Update: 2016-01-21 12:46 GMT

ಬೆಂಗಳೂರು.ಜ.21: ಬರುವ 2017 - 18 ನೇ ಸಾಲಿನಿಂದ ಒಂದರಿಂದ ಪಿಯುಸಿವರೆಗೆ ರಾಜ್ಯದಲ್ಲಿ ಹೊಸ ಪಠ್ಯಕ್ರಮ ಜಾರಿಯಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಇಂದಿಲ್ಲಿ ತಿಳಿಸಿದರು.

ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ರಚಿಸಲಾಗಿರುವ ಪಠ್ಯ ಕ್ರಮ ಪರಿಷ್ಕರಣಾ ಸಮಿತಿ ಶೀಘ್ರದಲ್ಲೇ ವರದಿ ನೀಡಲಿದ್ದು, ವರದಿಯ ಶಿಫಾರಸ್ಸುಗಳ ಆಧಾರದ ಮೇಲೆ ಪಠ್ಯಕ್ರಮ ಪರಿಷ್ಕರಣೆಯಾಗಲಿದೆ ಎಂದರು.

ಎನ್.ಸಿ.ಆರ್.ಟಿ ನಿಯಮಗಳಂತೆ ಇಡೀ ದೇಶದಲ್ಲಿ ಏಕರೂಪ ಶಿಕ್ಷಣ ಪದ್ಧತಿ ಜಾರಿಗೆ ತರಬೇಕಾಗಿದೆ. ಈ ಸಂಬಂಧ 2009ರಲ್ಲೇ ಕಾನೂನು ಜಾರಿಗೆ ಬಂದಿದೆ. ಅಖಿಲ ಭಾರತ ಮಟ್ಟದಲ್ಲಿ ವೃತ್ತಿ ಶಿಕ್ಷಣ ಮತ್ತಿತರ ಶಿಕ್ಷಣಿಕ ವ್ಯವಸ್ಥೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ನೀತಿ ಜಾರಿಗೆ ತಂದಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ಒಂದೇ ಮಾದರಿಯ ಶಿಕ್ಷಣ, ಜ್ಞಾನ ಇರಬೇಕು ಎನ್ನುವುದು ಕೇಂದ್ರ ಸರ್ಕಾರದ ನಿರ್ಧಾರವಾಗಿದೆ. ಇದರನ್ವಯ ಪಠ್ಯ ಕ್ರಮ ಪರಿಷ್ಕರಣೆಯಾಗಲಿದೆ ಎಂದು ಹೇಳಿದರು.

ಶಿಕ್ಷಣದಲ್ಲಿನ ಕೇಸರೀಕರಣವನ್ನು ತೆಗೆದುಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೇಸರೀಕರಣಗೊಳಿಸಿರುವ ಅಂಶಗಳಿಗೆ ಕತ್ತರಿ ಹಾಕಲಾಗುತ್ತಿದೆ. ಇಡೀ ಪಠ್ಯಕ್ರಮವನ್ನು ಬದಲಾವಣೆ ಮಾಡುತ್ತಿಲ್ಲ ಎಂದು ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರ ಪಠ್ಯ ಕ್ರಮದಲ್ಲಿರಬಾರದು ಎಂದು ಕೆಲ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿರುವ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಯಿಸಿದ ಅವರು, ಇದು ನಮ್ಮ ವ್ಯಾಪ್ತಿಗೆ ಒಳಪಡುವುದಿಲ್ಲ. ಪಠ್ಯ ಕ್ರಮ ಪರಿಷ್ಕರಣಾ ಸಮಿತಿ ನೀಡುವ ವರದಿ ಆಧಾರದ ಮೇಲೆ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಲಿದೆ ಎಂದರು.

ಕಡ್ಡಾಯ ಶಿಕ್ಷಣ ಕಾಯ್ದೆಯಡಿ ಸರ್ಕಾರ ಪ್ರತಿವರ್ಷ ಒಂದು ಸಾವಿರದಿಂದ 1,500 ಕೋಟಿ ರೂ ವರೆಗೆ ವೆಚ್ಚ ಮಾಡುತ್ತಿದ್ದು, ಈ ಹಣ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾಗುತ್ತಿದೆ. ಇದರ ಬದಲಿಗೆ ಈ ಹಣವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸಬಹುದು ಎನ್ನುವ ಅಭಿಪ್ರಾಯ ಕೇಳಿ ಬಂದಿದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿ ನಿರ್ಧಾರ ಕೈಗೊಳ್ಳಬೇಕಾಗಿದೆ. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು.

ಕಡ್ಡಾಯ ಶಿಕ್ಷಣ ಕಾಯ್ದೆಯಡಿ ನರ್ಸಿರಿ ಶಿಕ್ಷಣಕ್ಕೂ ಪ್ರವೇಶ ಕಲ್ಪಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ರಾಜ್ಯ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ತೆರವುಗೊಂಡಿದೆ. ಸರ್ಕಾರದ ನಿಲುವನ್ನು ನ್ಯಾಯಾಲಯ ಎತ್ತಿಹಿಡಿದಿರುವುದರಿಂದ ಬರುವ ಶೈಕ್ಷಣಿಕ ವರ್ಷದಿಂದ ಎಲ್.ಕೆ.ಜಿ ಮತ್ತು ಯು.ಕೆ.ಜಿಗೂ ಆರ್.ಟಿ.ಇ ಅಡಿ ಪ್ರವೇಶ ದೊರೆಕಿಸಿಕೊಡಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಇಲಾಖೆಯಲ್ಲಿ ಖಾಲಿಯಿರುವ ಶಿಕ್ಷಕರ ಭರ್ತಿಗೆ ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ಮೊದಲ ಹಂತದಲ್ಲಿ 9,511 ಶಿಕ್ಷಕರ ನೇಮಕಾತಿ ಪಟ್ಟಿ ನಾಳೆ ಪ್ರಕಟಗೊಳ್ಳಲಿದೆ. ನಂತರ ಅಗತ್ಯವಿರುವ ಕಡೆಗಳಿಗೆ ಶಿಕ್ಷಕರನ್ನು ನಿಯೋಜಿಸಲಾಗುವುದು ಎಂದು ಹೇಳಿದರು.

ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಒದಗಿಸುವ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲ್ಲೇ ವಿತರಣೆ ಮಾಡಲು ನಿರ್ಧರಿಸಲಾಗಿದೆ. ಶಾಲಾ ಅಭಿವೃದ್ಧಿ ಸಮಿತಿಗಳ ಮೂಲಕ ಶೂ ಮತ್ತು ಸಾಕ್ಸ್‌ಗಳನ್ನು ಸ್ಥಳೀಯವಾಗಿ ಖರೀದಿಸಿ ವಿತರಿಸಲು ನಿರ್ಧರಿಸಿದ್ದು, ಇದಕ್ಕೆ ತಗಲುವ ಹಣವನ್ನು ಸಮಿತಿಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ. ಈಗಾಗಲೇ ಶೇ 50 ರಷ್ಟು ಸಮಿತಿಗಳಿಗೆ ಹಣ ಒದಗಿಸಲಾಗಿದೆ ಎಂದರು.

ಬೇಕಿದ್ದರೆ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಮಕ್ಕಳಿಗೆ ಹೆಚ್ಚುವರಿಯಾಗಿ ಶೂ ಮತ್ತು ಸಾಕ್ಸ್ ಒದಗಿಸಲು ಆಸಕ್ತಿ ತೋರಿದರೆ ಸರ್ಕಾರದ ಅಭ್ಯಂತರವಿಲ್ಲ. ಆದರೆ ಸರ್ಕಾರ ಹೆಚ್ಚುವರಿಯಾಗಿ ಹಣ ಒದಗಿಸುವುದಿಲ್ಲ. ಏನೇ ಆದರೂ ಮೂರು ತಿಂಗಳ ಒಳಗಾಗಿ ಖರೀದಿ ಮಾಡಿದ ಬಿಲ್‌ಗಳನ್ನು ಇಲಾಖೆಗೆ ಕಳುಹಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.

ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷಾ ಪದ್ಧತಿಯಲ್ಲಿ ಸಧ್ಯಕ್ಕೆ ಬದಲಾವಣೆ ತರುವ ಆಲೋಚನೆ ಸರ್ಕಾರಕ್ಕಿಲ್ಲ. ಇದು ರಾಷ್ಟ್ರಮಟ್ಟದಲ್ಲಿ ಆಗಬೇಕಾದ ನಿರ್ಧಾರವಾಗಿದೆ. ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ ತಜ್ಞರ ಸಮಿತಿ ವರದಿ ಸಲ್ಲಿಸಲಿದ್ದು, ನಂತರ ಏನಾದರೂ ಬದಲಾವಣೆಗಳಾಗಬಹುದು ಎಂದರು.

ಮಲೆನಾಡಿನ ಗಾಂಧಿ ಎಂದೇ ಗುರುತಿಸಿಕೊಂಡಿದ್ದ ಹಾಗೂ ಶಿಕ್ಷಣ ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿದ್ದ ಎಚ್.ಜಿ. ಗೋವಿಂದೇಗೌಡರ ಹೆಸರಿನಲ್ಲಿ ಗ್ರಂಥಾಲಯ ಇಲ್ಲವೆ ಬೇರೆ ಯಾವುದಾದರೂ ಸ್ಮಾರಕ ನಿರ್ಮಿಸಲು ಸರ್ಕಾರ ಉದ್ದೇಶಿದ್ದು, ಅವರಿಗೆ ಪ್ರಿಯವಾದ ಸ್ಥಳ ಗುರುತಿಸಿ ಮಾಹಿತಿ ನೀಡುವಂತೆ ಅವರ ಕುಟುಂಬ ಸದಸ್ಯರಿಗೆ ಸೂಚಿಸಲಾಗಿದೆ. ಅಂತಹ ಸ್ಥಳದಲ್ಲಿ ಸ್ಮಾರಕ ನಿರ್ಮಾಣವಾಗಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News