ಬಾಡಿಗೆ ಪಾವತಿಸದ ಐದು ಮಳಿಗೆಗಳಿಗೆ ಬಿಬಿಎಂಪಿ ಬೀಗಮುದ್ರೆ

Update: 2016-01-23 18:14 GMT

ಬೆಂಗಳೂರು, ಜ. 23: ಇಲ್ಲಿನ ಯಶವಂತಪುರ ವಾಣಿಜ್ಯ ಸಂಕೀರ್ಣದಲ್ಲಿನ ಐದು ಮಳಿಗೆಗಳು ಕೆಎಂಸಿ ಕಾಯ್ದೆಯನ್ವಯ ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ಐದು ಮಳಿಗೆಗಳಿಗೆ ಬೀಗ ಮುದ್ರೆ ಹಾಕಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಬಿಬಿಎಂಪಿ ಮಾರುಕಟ್ಟೆ ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ.ಗಾಯತ್ರಿ ನೇತೃತ್ವದಲ್ಲಿ ವಾಣಿಜ್ಯ ಸಂಕೀರ್ಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪಾಲಿಕೆಯ ಆರ್ಥಿಕ ಹಿತದೃಷ್ಟಿಯಿಂದ ಐದು ಮಳಿಗೆಗಳಿಗೆ ಈಗಾಗಲೇ ಕೆಎಂಸಿ ಕಾಯ್ದೆಯನ್ವಯ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಲಾಗಿದೆ.

 ಈ ಸಂದರ್ಭದಲ್ಲಿ ಮಳಿಗೆದಾರರೊಬ್ಬರು ಬೀಗ ಮುದ್ರೆ ಹಾಕಿದ ನಂತರ 98 ಸಾವಿರ ರೂ.ವೌಲ್ಯದ ಚೆಕ್‌ಗಳನ್ನು ನೀಡಿದರು. ಇನ್ನೊಬ್ಬರು ನಗದು ಪಾವತಿಸಲು ಮುಂದಾದಾಗ ಸೋಮವಾರ ಬ್ಯಾಂಕಿನಿಂದ ಡಿಡಿ ಪಡೆದು ಬಿಬಿಎಂಪಿಗೆ ಸಲ್ಲಿಸುವಂತೆ ಸೂಚಿಸಲಾಯಿತು.

ವಾಣಿಜ್ಯ ಸಂಕೀರ್ಣದಲ್ಲಿ ಒಟ್ಟು ಮಳಿಗೆ 115 ಮಳಿಗೆಗಳಿದ್ದು, ಮಳಿಗೆಗಳ ದಾಖಲೆಗಳನ್ನು ಪರಿಶೀಲಿಸಿದಾಗ ಬಹುತೇಕ ಮಳಿಗೆಗಳ ಮಳಿಗೆದಾರರು ಐದು ವರ್ಷಕ್ಕಿಂತ ಹೆಚ್ಚು ಅವಧಿವರೆಗೂ ಮಾಸಿಕ ಪರವಾನಿಗೆ/ಗುತ್ತಿಗೆ ಮೊತ್ತವನ್ನು ಪಾಲಿಕೆಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವುದು ಸಮಿತಿಯ ಗಮನ ಬಂದಿದೆ.

ಮಳಿಗೆದಾರರು ಪಾಲಿಕೆಯು ನಿಗದಿಪಡಿಸುವ ಮಾಸಿಕ ಗುತ್ತಿಗೆ ಮೊತ್ತವನ್ನು ಪ್ರತಿ ತಿಂಗಳು ಸರಿಯಾಗಿ ಪಾವತಿಸುತ್ತಾ ಬಂದಲ್ಲಿ ವಾಣಿಜ್ಯ ಸಂಕೀರ್ಣವನ್ನು ಸರಿಯಾಗಿ ನಿರ್ವಹಣೆ ಮಾಡಿ ಪಾಲಿಕೆಯು ಕಟ್ಟಡದ ಸುಸ್ಥಿತಿಯನ್ನು ಕಾಪಾಡಲು ಹಾಗೂ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಲಾಗಿದೆ. ವಾಣಿಜ್ಯ ಸಂಕೀರ್ಣದ ಅವರಣದಲ್ಲಿ ಪಾರ್ಕಿಂಗ್ ನಿರ್ವಹಣೆಯನ್ನು ಕಚೇರಿ ಸಿಬ್ಬಂದಿಯಿಂದ ನಡೆಸುತ್ತಿದ್ದು, ಪ್ರತಿದಿನ ಸುಮಾರು 2 ಸಾವಿರ ರೂ.ನಿಂದ 2,500 ರೂ.ವಸೂಲಿ ಮಾಡಿ ಪಾಲಿಕೆಗೆ ಜಮಾ ಮಾಡುತ್ತಿರುವುದಾಗಿ ಅಧಿಕಾರಿಗಳು ಸಮಿತಿಗೆ ತಿಳಿಸಿದರು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಮಿತಿ, ಇದರಿಂದ ಪಾಲಿಕೆ ನಷ್ಟವಾಗುತ್ತಿದ್ದು, ಕೂಡಲೇ ಟೆಂಡರ್ ಕರೆಯುವಂತೆ ಸೂಚಿಸಲಾಯಿತು. ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲ್ಲ ಪಾಲಿಕೆಯ ಮಾರುಕಟ್ಟೆಗಳು ಹಾಗೂ ವಾಣಿಜ್ಯ ಸಂಕೀರ್ಣಗಳಲ್ಲಿರುವ ಮಳಿಗೆಗಳ ಮಳಿಗೆದಾರರು ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಜರೂರಾಗಿ ಪಾಲಿಕೆಗೆ ಪಾವತಿಸತಕ್ಕದ್ದು. ಹಾಗೂ ಮಳಿಗೆಗಳ ಪರವಾನಿಗೆ/ಗುತ್ತಿಗೆಯನ್ನು ಅಗತ್ಯ ದಾಖಲೆಗಳನ್ನು ಪಾಲಿಕೆಗೆ ಸಲ್ಲಿಸಿ ನವೀಕರಣ/ವರ್ಗಾವಣೆಯನ್ನು ಕೂಡಲೇ ಮಾಡಿಸಿಕೊಂಡು ಕ್ರಮಬದ್ಧಗೊಳಿಸಿಕೊಳ್ಳತಕ್ಕದ್ದು.ತಪ್ಪಿದ್ದಲ್ಲಿ ಯಾವುದೇ ಅವಕಾಶ ನೀಡದೆ ಕಾನೂನು ರೀತಿಯಲ್ಲಿ ಮಳಿಗೆಗಳಿಗೆ ಬೀಗ ಹಾಕಿ ಮಳಿಗೆಗಳನ್ನು ಪಾಲಿಕೆಯ ವಶಕ್ಕೆ ತೆಗೆದುಕೊಳ್ಳಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷೆ ಗಾಯತ್ರಿ ಅಧಿಕಾರಿಗಳಿಗೆ ಸೂಚಿಸಿದ್ದು, ಈ ನಿಟ್ಟಿನಲ್ಲಿ ಚುರುಕಾಗಿ ಕಾರ್ಯನಿರ್ವಹಿಸಬೇಕೆಂದು ಹೇಳಿದರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News