* ಬಾಬರಿ ಮಸೀದಿ ಧ್ವಂಸಗೊಳಿಸುವುದನ್ನು ನಾನು ಬಲವಾಗಿ ವಿರೋಧಿಸಿದ್ದೆ.
- ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
-ಧ್ವಂಸ ಮಾಡಿದ ಬಳಿಕ, ನೀವು ವಿರೋಧಿಸಿದಿರಿ ಎಂದು ಕಾಣುತ್ತದೆ
. ..................................................
* ಉಪಚುನಾವಣೆಯಲ್ಲಿ ಯಾವ ಪಕ್ಷದೊಂದಿಗೂ ಹೊಂದಾಣಿಕೆಯಿಲ್ಲ.
- ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
-ಯಾರೂ ನಿಮ್ಮನ್ನು ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿಲ್ಲವೇ?
..................................................
* ಪ್ರಸ್ತುತ ದೇಶದ ವಾತಾವರಣ ಗಾಂಧೀಜಿಯನ್ನು ಕೊಂದ ಸ್ಥಿತಿಯಲ್ಲಿದೆ.
- ಗೊ.ರು.ಚೆನ್ನಬಸಪ್ಪ, ವಿದ್ವಾಂಸ
-ಗಾಂಧಿಯನ್ನು ಕೊಂದ ಸಂಭ್ರಮದಲ್ಲಿದೆ ಎಂದರೆ ಹೆಚ್ಚು ಪರಿಣಾಮಕಾರಿ.
..................................................
* ನಾನು ಹುಟ್ಟಿದ ಕರಾಚಿಯನ್ನು ಬಿಟ್ಟರೆ ನನಗೆ ಕರ್ನಾಟಕ ತುಂಬಾ ಅಚ್ಚುಮೆಚ್ಚು.
- ಎಲ್.ಕೆ. ಅಡ್ವಾಣಿ, ಬಿಜೆಪಿ ನಾಯಕ
-ಕರಾಚಿ ವಿಮಾನ ಹತ್ತಿಸಿ ಬಿಡಿ ಎಂದು ಮೋದಿಯವರು ಅಮಿತ್ ಶಾ ಕಿವಿಯಲ್ಲಿ ಉಸಿರಿದರಂತೆ.
..................................................
* ಪ್ರಧಾನಿ ನರೇಂದ್ರ ಮೋದಿಯವರ ಪಾಕಿಸ್ತಾನ ನೀತಿ ಸರಿಯಾಗಿದೆ..
- ಸುಬ್ರಹ್ಮಣ್ಯಸ್ವಾಮಿ, ಬಿಜೆಪಿ ಮುಖಂಡ
-ಪಠಾಣ್‌ಕೋಟ್‌ಉಗ್ರರ ದಾಳಿ ಈ ನೀತಿಯ ಫಲವೆ ಅಲ್ಲವೇ?
..................................................
* ದೇಶದ ಎಲ್ಲಾ ರೈಲುಗಳಲ್ಲಿ ಸಾಂಪ್ರದಾಯಿಕ ಆಹಾರ.
- ಸುರೇಶ್ ಪ್ರಭು, ಕೇಂದ್ರ ರೈಲ್ವೆ ಸಚಿವ
-ನಿಮ್ಮ ಸಂಪ್ರದಾಯದಲ್ಲಿ ಮಾಂಸಾಹಾರ ನಿಷೇಧವೆಂದು ಕಾಣುತ್ತದೆ.
..................................................
* ನನ್ನನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದವರು ಸೋನಿಯಾ ಗಾಂಧಿ.
- ದೇವೇಗೌಡ, ಮಾಜಿ ಪ್ರಧಾನಿ
-ನಿಮ್ಮನ್ನು ಮುಗಿಸಲು ನಿಮ್ಮ ಮಕ್ಕಳೇ ಸಾಕು.
..................................................
* ಪೇಜಾವರ ಪರ್ಯಾಯ ಅವಧಿಯಲ್ಲಿ ಗಂಗಾನದಿ ಶುದ್ಧೀಕರಣ ಪೂರ್ಣ.
- ಉಮಾಭಾರತಿ, ಗಂಗಾ ಶುದ್ಧೀಕರಣ ಸಚಿವೆ
-ಅಂದರೆ, ಮುಂದಿನ ಇನ್ನೂರು ವರ್ಷಗಳ ಕಾಲ ಪೇಜಾವರರ ಪರ್ಯಾಯ ಅವಧಿ ಮುಂದುವರಿಯುತ್ತದೆ ಎಂದಾಯಿತು.
..................................................
* ಎಲ್ಲ ಪಕ್ಷಗಳೂ ನನ್ನನ್ನು ಕರೆಯುತ್ತಿವೆ.
- ಶತ್ರುಘ್ನ ಸಿನ್ಹಾ, ಬಿಜೆಪಿ ಸಂಸದ
-ಬಿಜೆಪಿ ನೀವು ಹೋಗುವುದನ್ನು ಕಾಯುತ್ತಿದೆ.
..................................................
* ಪಕ್ಷಾತೀತ, ಜಾತ್ಯತೀತ, ರಾಜ್ಯಾತೀತ, ಧರ್ಮಾತೀತ ಅಂದರೆ ಪೇಜಾವರಶ್ರೀ.
- ಸಿ.ಎಂ. ಇಬ್ರಾಹೀಂ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ
-ಲಜ್ಜಾತೀತ ಎಂದರೆ ಇಬ್ರಾಹೀಮರೇ ಇರಬೇಕು.
..................................................
* ಸಿಎಂ ಸಿದ್ದರಾಮಯ್ಯ ನಮಗೆ ಕ್ಯಾಪ್ಟನ್ ಇದ್ದಂತೆ.
- ಡಾ.ಜಿ. ಪರಮೇಶ್ವರ್, ಗೃಹಸಚಿವ
-ಸೋಲನ್ನೆಲ್ಲ ಕ್ಯಾಪ್ಟನ್ ತಲೆಗೆ ಕಟ್ಟುವ ಹುನ್ನಾರ.
..................................................
* ಪಟ್ಟಭದ್ರ ಹಿತಾಸಕ್ತಿಗಳು ವಿವೇಕಾನಂದರ ಚಿಂತನೆಗಳನ್ನು ತಿರುಚುತ್ತಿವೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ
-ಚಕ್ರವರ್ತಿ ಸೂಲಿಬೆಲೆಯಿಂದ ವಿವೇಕಾನಂದರ ಕುರಿತಂತೆ ವಿಧಾನಸಭೆಯಲ್ಲೊಂದು ಉಪನ್ಯಾಸ ಮಾಡಿಸಿ.
..................................................
* ಪಕ್ಷಾತೀತ ಕಾಮಗಾರಿಗಳಿಂದ ಅಭಿವೃದ್ಧಿ ಸಾಧ್ಯ.
- ಆರ್.ವಿ. ದೇಶಪಾಂಡೆ, ಸಚಿವ
-ಕಾಮದ ವಿಷಯದಲ್ಲಿ ರಾಜಕಾರಣಿಗಳು ಸದಾ ಪಕ್ಷಾತೀತ.
..................................................
* ಮೋದಿ ಆಡಳಿತಕ್ಕೆ ವಿಶ್ವದ 32 ದೇಶಗಳು ಮೆಚ್ಚುಗೆ ವ್ಯಕ್ತಪಡಿಸಿವೆ.
- ವೆಂಕಯ್ಯನಾಯ್ಡು, ಕೇಂದ್ರ ಸಚಿವ
-ಭಾರತ ಒಂದನ್ನು ಬಿಟ್ಟು. ..................................................
* ರೋಹಿತ್ ವೇಮುಲಾ ಆತ್ಮಹತ್ಯೆಗೂ ದಲಿತ ವಿಚಾರಕ್ಕೂ ಸಂಬಂಧವಿಲ್ಲ.
- ಸ್ಮತಿ ಇರಾನಿ, ಕೇಂದ್ರ ಸಚಿವೆ
-ಪ್ರಶ್ನೆ ಇರುವುದು, ನಿಮಗೂ ಆ ಆತ್ಮಹತ್ಯೆಗೂ ಸಂಬಂಧವಿದೆಯೇ ಎನ್ನುವುದು.
..................................................
* ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಲು ನಾನು ಅಡ್ಡಗೋಡೆಯಾಗಿಲ್ಲ.
- ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ
-ಮುಖ್ಯಮಂತ್ರಿಯಾಗುವುದಕ್ಕೆ ಮಾತ್ರ ಅಂತ ಕಾಣುತ್ತದೆ.
..................................................
* ಪಶ್ಚಿಮ ಬಂಗಾಳದಲ್ಲಿ ಮಹಿಳೆಯರು, ಜನರು, ಅಷ್ಟೇಏಕೆ ಪೊಲೀಸರೂ ಕೂಡಾ ಸುರಕ್ಷಿತರಾಗಿಲ್ಲ.
- ರಾಜನಾಥ್ ಸಿಂಗ್, ಕೇಂದ್ರ ಗೃಹಸಚಿವ
-ದೇಶದಲ್ಲಿ ಸುರಕ್ಷತೆಯ ಬಗ್ಗೆ ಶಂಕೆಯಿರುವುದರಿಂದಲೇ ಪ್ರಧಾನಿಯವರು ವಿದೇಶಗಳಲ್ಲಿ ಓಡಾಡುತ್ತಿರುವುದು.
..................................................
* ಯಡಿಯೂರಪ್ಪ ಖಾಲಿ ಮಡಿಕೆ.
- ಮುದ್ದ ಹನುಮೇಗೌಡ, ಸಂಸದ
-ಒಡೆದ ಮಡಿಕೆ ಎನ್ನುವುದು ಅನಂತಕುಮಾರ್‌ಹೇಳಿಕೆ.
..................................................
* ಮೇ ಅಂತ್ಯದ ವರೆಗೆ ವಿದ್ಯುತ್ ಸಮಸ್ಯೆ ಇಲ್ಲ.
- ಡಿ.ಕೆ. ಶಿವಕುಮಾರ್, ಇಂಧನ ಸಚಿವ
-ವಿದ್ಯುತ್‌ಸಚಿವರೇ ಸದ್ಯಕ್ಕೆ ಸಮಸ್ಯೆ.