ಮೂಢನಂಬಿಕೆಯಿಂದ ನಡೆಯುವ ಬಾಲ್ಯ ವಿವಾಹಕ್ಕೆ ಕಡಿವಾಣ ಬೀಳಲಿ: ನ್ಯಾ. ಬೋಪಯ್ಯ

Update: 2016-01-24 18:34 GMT

ಬೆಂಗಳೂರು, ಜ.24: ಅಜ್ಞಾನ ಮತ್ತು ಮೂಢನಂಬಿಕೆಯಿಂದ ನಡೆಯುವ ಬಾಲ್ಯ ವಿವಾಹ ಪದ್ಧತಿಗೆ ಕಡಿವಾಣ ಬೀಳಲಿ ಎಂದು ಹೆಚ್ಚುವರಿ ನಗರ ಸಿವಿಲ್ ನ್ಯಾಯಾಧೀಶ ವಿ.ಜಿ.ಬೋಪಯ್ಯ ಹೇಳಿದ್ದಾರೆ. ರವಿವಾರ ನಗರ ಸಿವಿಲ್ ನ್ಯಾಯಾಲಯದ ಸಭಾಂಗಣದಲ್ಲಿ ರಾಜ್ಯ ನ್ಯಾಯಾಂಗ ಅಕಾಡಮಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ರ ಕುರಿತ ಕಾರ್ಯಾಗಾರದಲ್ಲಿ ಉಪಸ್ಥಿತರಾಗಿ ಭಾಗವಹಿಸಿ ಅವರು ಮಾತನಾಡಿದರು.

ಸರಕಾರದ ಕಾಯ್ದೆ ಅನುಸಾರವಾಗಿ ಮದುವೆ ಯಾದರೆ ಇಬ್ಬರೂ ಸಮರ್ಥ ನಿರ್ಣಯಗಳನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ. ಅದೇ ಅಜ್ಞಾನ ಮತ್ತು ಮೂಢನಂಬಿಕೆಯಿಂದ ಬಾಲ್ಯ ವಿವಾಹವಾದರೆ ಇಬ್ಬರಿಗೂ ಸುಗಮ ಜೀವನ ನಡೆಸುವುದು ಹಾಗೂ ನಿರ್ಣಯಗಳನ್ನು ತೆಗೆದುಕೊಳ್ಳುವುದು ಕಷ್ಟಕರವಾಗುತ್ತದೆ ಎಂದು ಹೇಳಿದರು. ಹೆಚ್ಚುವರಿ ನಗರ ಸಿವಿಲ್ ನ್ಯಾಯಾಧೀಶ ಅಶ್ವಥ್‌ನಾರಾಯಣ ಮಾತನಾಡಿ, ಮಕ್ಕಳ ಬಾಲ್ಯವನ್ನು ಕಿತ್ತುಕೊಳ್ಳುವ ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಲು ಸಾರ್ವಜನಿಕರು ಕಾನೂನಿನೊಂದಿಗೆ ಕೈಜೋಡಿಸುವ ಕೆಲಸ ಮಾಡಬೇಕೆಂಬ ಸಲಹೆ ನೀಡಿದರು. ಬಾಲ್ಯ ವಿವಾಹಗಳು ಇದೇ ನಿರ್ದಿಷ್ಟ ಕಾರಣಕ್ಕೆ ನಡೆಯುತ್ತವೆಯೆಂದು ಹೇಳಲಾಗುವುದಿಲ್ಲವಾದರೂ ಅವುಗಳು ಆರ್ಥಿಕ, ಸಾಂಪ್ರದಾಯಿಕ, ರಾಜಕೀಯ, ಉದ್ಯೋಗ ಇನ್ನಿತರ ಕಾರಣಗಳಿಗೂ ಬಾಲ್ಯ ವಿವಾಹಗಳು ನಡೆಯಬಹುದೆಂಬ ಅಭಿಪ್ರಾಯಪಟ್ಟರು.

ವಕೀಲೆ ಬಿ.ವಿ.ವಿದ್ಯುಲ್ಲತಾ ಮಾತನಾಡಿ, ಮದುವೆ ಎನ್ನುವುದೆ ಹೆಣ್ಣು ಮಕ್ಕಳಿಗೊಂದು ಬಂಧನವಾಗಿದೆ. ಅದರಲ್ಲೂ ಆಟ ಆಡುವ ವಯಸ್ಸಿನಲ್ಲಿಯೆ ಬಾಲ್ಯ ವಿವಾಹವನ್ನು ಮಾಡಿದರೆ ಅವರಿಗೆ ಬಾಲ್ಯದ ಸಿಹಿ ಘಟನೆಗಳು ಕಹಿ ಘಟನೆಗಳಾಗಿ ಕಾಡಲಾರಂಭಿಸುತ್ತವೆ ಎಂದು ಹೇಳಿದರು. ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಸಾಕಷ್ಟು ಅವಕಾಶಗಳಿದ್ದು, ಅವುಗಳ ಸಹಾಯವನ್ನು ಪಡೆದು ಬಾಲ್ಯ ವಿವಾಹಗಳಿಗೆ ಕಡಿವಾಣ ಹಾಕಬೇಕು. ಅಲ್ಲದೆ, ಪೋಷಕರಿಗೆ ಹಾಗೂ ಜನರಿಗೆ ಬಾಲ್ಯ ವಿವಾಹದಿಂದಾಗುವ ದುಷ್ಟಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕೆಂಬ ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ರತ್ನಾ ಬಿ. ಕಲಂದಾನಿ ಮಾತನಾಡಿ, ಬಾಲ್ಯ ವಿವಾಹ ಪದ್ಧತಿಗೆ ಕಡಿವಾಣ ಹಾಕಲು ಬಾಲ್ಯ ವಿವಾಹ ನಿಷೇಧ- 2006-07ರ ಅಧಿನಿಯಮ ಜಾರಿಗೆ ತಂದಿದ್ದರೂ ಇಲ್ಲಿಯವರೆಗೆ ಕಾಯ್ದೆಯ ಅನುಸಾರವಾಗಿ ಬಾಲ್ಯ ವಿವಾಹ ಪದ್ಧತಿಯನ್ನು ಕಡಿವಾಣ ಹಾಕಲು ಸಾಧ್ಯವಾಗಿಲ್ಲ ಎಂದು ಹೇಳಿದರು. ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಸೇರಿ ಇನ್ನಿತರ ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲೂ ಬಾಲ್ಯ ವಿವಾಹ ಪದ್ಧತಿಗಳು ನಡೆಯುತ್ತಿದ್ದು, ಈ ಬಾಲ್ಯ ವಿವಾಹ ಪದ್ಧತಿಗಳಿಗೆ ಆರ್ಥಿಕ ಪರಿಸ್ಥಿತಿ, ಬಡತನ, ಉದ್ಯೋಗ ಇನ್ನಿತರ ಕಾರಣಗಳೂ ಇರಬಹುದೆಂಬ ಅಭಿಪ್ರಾಯಪಟ್ಟರು.

ಬಾಲ್ಯದಲ್ಲಿ ಮದುವೆಯಾದ ಮಕ್ಕಳು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನೂ ಪೂರೈಸಿರುವುದಿಲ್ಲ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಗರ ಸಿವಿಲ್ ನ್ಯಾಯಾಲಯದ ವಿಲೇಖನಾಧಿಕಾರಿ ಕೆ.ಎಂ.ರಾಧಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News