ಉಳ್ಳಾಲದ ಅಬ್ಬಕ್ಕನ ಪರ ಹೋರಾಡಿದವರು ಮಾಪಿಳ್ಳೆಗಳು ಮತ್ತು ಮೊಗವೀರರು
ಧಾರ್ಮಿಕ ಸಾಮರಸ್ಯ ತುಳುನಾಡಿಗೆ ಹೊಸ ವಿಷಯವೇನಲ್ಲ. ನೂರಾರು ವರ್‍ಷಗಳ ಹಿಂದಿನಿಂದಲೂ ಇದು ಧರ್ಮಸಮನ್ವಯದ ನಾಡು. ಹಾಗೆಯೇ ಮತಧರ್ಮ, ಸಂಸ್ಕೃತಿ, ಭಾಷೆ ಮೊದಲಾದ ದೃಷ್ಟಿಯಿಂದ ವೈವಿಧ್ಯದ ನಾಡು, ವೈಶಿಷ್ಟ್ಯದ ನಾಡು. ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ ಹೀಗೆ ನಾನಾ ಮತಧರ್ಮಗಳಿಗೆ ಸೇರಿದ ಜನ ಇಲ್ಲಿ ಕಾಲ ಕಾಲಾಂತರದಿಂದ ಸಾಮರಸ್ಯದಿಂದ ಬದುಕಿದ್ದಾರೆ. ತುಳು, ಕನ್ನಡ, ಬ್ಯಾರಿ, ಕೊಂಕಣಿ, ಉರ್ದು, ಶಿವಳ್ಳಿ, ಹವ್ಯಕ, ಮರಾಠಿ, ನವಾಯತ ಹೀಗೆ ನಾನಾ ಭಾಷೆಗಳು ಇಲ್ಲಿ ಜತೆಯಾಗಿಯೇ ಬದುಕಿವೆ. ಅತ್ಯಂತ ವಿಶಿಷ್ಟವಾದ ಕರಾವಳಿಯ ಈ ಪ್ರದೇಶವನ್ನು ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ವಾಣಿಜ್ಯಾತ್ಮಕವಾಗಿ ಕಟ್ಟಿಬೆಳೆಸುವುದಕ್ಕೆ ಈ ಎಲ್ಲ ಸಮುದಾಯದವರೂ ತಮ್ಮ ಪಾಲಿನ ಕೊಡುಗೆ ನೀಡಿದ್ದಾರೆ.
ಈ ಪ್ರದೇಶವನ್ನು ವಿದೇಶೀ ಆಕ್ರಮಣಗಳಿಂದ ರಕ್ಷಿಸುವ ಪ್ರಶ್ನೆ ಬಂದಾಗಲೂ ಇಲ್ಲಿನ ಜನ ಮತಧರ್ಮ ದ ಭೇದವಿಲ್ಲದೆ ಹೆಗಲಿಗೆ ಹೆಗಲು ನೀಡಿ ಪ್ರಾಣದ ಹಂಗು ತೊರೆದು ಹೋರಾಡಿದ್ದಾರೆ. ಇದಕ್ಕೆ ಚರಿತ್ರೆಯಲ್ಲಿ ಅಪಾರ ನಿದರ್ಶನಗಳು ಲಭ್ಯವಿದ್ದು ಅಂಥ ಒಂದು ನಿದರ್ಶನವೆಂದರೆ ಮಂಗಳೂರಿನ ಬಳಿಯ ಉಳ್ಳಾಲದ ರಾಣಿ ಅಬ್ಬಕ್ಕನ ಸಾಹಸದ ಚರಿತ್ರೆ.
ಸುಮಾರು 400 ವರ್ಷಗಳ ಹಿಂದೆ ಅಂದರೆ 16 ನೆ ಶತಮಾನದ ಕೊನೆ ಭಾಗದಲ್ಲಿ ಉಳ್ಳಾಲದ ರಾಣಿಯಾಗಿದ್ದ ಅಬ್ಬಕ್ಕ ವಸಾಹತುಶಾಹಿ ಶಕ್ತಿಯ ವಿರುದ್ಧ ಹೋರಾಡಿದ ಪ್ರಥಮ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರಳಾದವಳು. ಕ್ರಿಸ್ತಪೂರ್‍ವ ಕಾಲದಿಂದಲೂ ಕರಾವಳಿಯ ಈ ಪ್ರದೇಶ ಪಶ್ಚಿಮದ ದೇಶಗಳೊಂದಿಗೆ ವ್ಯಾಪಾರ ವಹೀವಾಟುಗಳಿಗೆ ಹೆಸರುವಾಸಿಯಾಗಿದ್ದು, ವಾಣಿಜ್ಯ ವ್ಯಾಪಾರದ ದೃಷ್ಟಿಯಿಂದ ತುಂಬ ಆಯಕಟ್ಟಿನ ಜಾಗದಲ್ಲಿದ್ದ ಕಾರಣ ಈ ಪ್ರದೇಶದ ಮೇಲೆ ಧಾಳಿಕೋರರಿಗೆ ಸದಾ ಕಣ್ಣಿರುತ್ತಿತ್ತು. ಇದೇ ಹಿನ್ನೆಲೆಯಲ್ಲಿ ಪೋರ್ಚುಗೀಸರು ಕರಾವಳಿಯ ಈ ಉಳ್ಳಾಲ ಪ್ರದೇಶವನ್ನು ಕೈವಶಮಾಡಿಕೊಳ್ಳಲು ಶತಾಯಗತಾಯ ಯತ್ನಿಸುತ್ತಲೇ ಇದ್ದರು. ಆದರೆ ಇದಕ್ಕೆ ಸುಲಭದಲ್ಲಿ ಅವಕಾಶ ಕೊಡದ ಅಬ್ಬಕ್ಕ ಕಡಲಿನಲ್ಲಿ ಪೋರ್ಚುಗೀಸ್ ನೌಕಾ ಪಡೆಗಳ ಮೇಲಣ ಅಸಾಧಾರಣ ಧಾಳಿಯೊಂದಿಗೆ 1567 -80 ರ ನಡುವೆ ಪೋರ್ಚುಗೀಸ್ ಪಡೆಗಳಿಗೆ ನೀಡಿದ ದಿಟ್ಟ ಪ್ರತಿರೋಧ, ಅವರ ಸೈನ್ಯವನ್ನು ಕಾಡಿಸಿದ ಪರಿ ಚಾರಿತ್ರಿಕವಾದುದು. ಇದೇ ಕಾರಣಕ್ಕೆ ವಿದೇಶದಲ್ಲಿಯೂ ಆಕೆಯ ಸಾಹಸ ಹೆಸರಾಗಿತ್ತು. ಇಟಲಿಯ ಪ್ರವಾಸಿ ಪಿಯೆತ್ರೋ ಆ ಕಾಲದಲ್ಲಿ ಉಳ್ಳಾಲಕ್ಕೆ ಭೇಟಿ ನೀಡಿ ಅಂದಿನ ಉಳ್ಳಾಲದ ಬಗ್ಗೆ ತನ್ನ ಪುಸ್ತಕದಲ್ಲಿ ವಿವರವಾಗಿ ಬರೆದಿದ್ದಾನೆ.
ಅಂದ ಹಾಗೆ ಈ ಚಾರಿತ್ರಿಕ ಹೋರಾಟದಲ್ಲಿ ಅಬ್ಬಕ್ಕನ ಸೇನೆಯಲ್ಲಿ ಹೆಗಲಿಗೆ ಹೆಗಲು ಕೊಟ್ಟು, ಪ್ರಾಣದ ಹಂಗು ತೊರೆದು ಹೋರಾಡಿದವರು ಮಾಪಿಳ್ಳೆಗಳು ಮತ್ತು ಮೊಗವೀರರು. ಇದು ಈ ನೆಲದ ಮೂಲ ಸಂಸ್ಕೃತಿ. ನಾವು ಇಲ್ಲಿನವರು ನೀವು ಹೊರಗಿನವರು ಎಂದು ಮಾತನಾಡುವ ಮತಾಂಧರು ಇದನ್ನು ಮೊದಲಾಗಿ ಇಲ್ಲಿನ ಚರಿತ್ರೆಯನ್ನು ತಿಳಿದುಕೊಳ್ಳುವ ಅಗತ್ಯವಿದೆ.