ದಲಿತೋದ್ಧಾರಕ ಮಂಗಳೂರಿನ ಕುದ್ಮುಲ್ ರಂಗರಾವ್

Update: 2016-01-27 11:52 GMT

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಸರಿಸುಮಾರು ಏಳು ದಶಕಗಳು ಕಳೆದ ಬಳಿಕವೂ ಭಾರತದಲ್ಲಿ ದಲಿತರ ಸ್ಥಿತಿ ಈಗಲೂ ಚಿಂತಾಜನಕವಾಗಿದೆಯಾದರೆ, ಸುಮಾರು ಒಂದೂ ಕಾಲು ಶತಮಾನದ ಹಿಂದೆ ಅದು ಹೇಗಿದ್ದಿರಬಹುದು ಎನ್ನುವುದನ್ನು ಊಹಿಸುವುದು ಕಷ್ಟವೇನಲ್ಲ. ದಲಿತರು ಮೇಲ್ಜಾತಿಯವರ ಸರಿಸಮಾನವಾಗಿ ಬದುಕುವ ಮಾತು ಒತ್ತಟ್ಟಿಗಿರಲಿ, ಅವರು ಮೇಲ್ಜಾತಿಯವರ ಕಣ್ಣಿಗೂ ಬೀಳಬಾರದು ಎಂಬಂತಹ ನಿಕೃಷ್ಟ ಬದುಕು ಬದುಕುತ್ತಿದ್ದ ಕಾಲದಲ್ಲಿ ದಲಿತರ ಏಳಿಗೆಗಾಗಿ ಸಂಪೂರ್ಣ ಬದುಕನ್ನೇ ಮುಡಿಪಾಗಿಟ್ಟು ‘ಅಸ್ಪೃಶ್ಯ ಜನಾಂಗದವರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಪುನರುದ್ಧಾರದ ಕಾರ್ಯದಲ್ಲಿ ಕುದ್ಮುಲ್ ರಂಗರಾಯರು ನನಗೆ ಸ್ಫೂರ್ತಿ ಮತ್ತು ಮಾರ್ಗದರ್ಶಕರು, ಅವರು ನಿಜವಾಗಿಯೂ ನನ್ನ ಗುರುಗಳು’ ಎಂದು ಮಹಾತ್ಮಾ ಗಾಂಧೀಜಿಯವರಿಂದಲೇ ಪ್ರಶಂಸೆಗೊಳಗಾದವರು  ಕುದ್ಮುಲ್ ರಂಗರಾವ್ ಅವರು.

ರಂಗರಾವ್ ಕೇರಳದ ಕಾಸರಗೋಡಿನ ಸಮೀಪದಲ್ಲಿ ಕುದ್ಮುಲ್ ಎಂಬ ಹಳ್ಳಿಯ ಸಾರಸ್ವತ ಬ್ರಾಹ್ಮಣರ ಕುಟುಂಬದಲ್ಲಿ 1859ರ ಜೂನ್ 29 ರಂದು ಜನಿಸಿದರು. ಅವರ ಬಾಲ್ಯ ಕಡು ಬಡತನದಿಂದ ಕೂಡಿತ್ತು.  ಇನ್ನೇನು ಹದಿನಾರು ವರ್ಷ ವಯಸ್ಸಾಗಿದ್ದಾಗ ಅವರ ತಂದೆ ನಿಧನರಾದರು. ತಂದೆಯ ನಿಧನದಿಂದ  ನಿಂತ ನೆಲವೇ ಕುಸಿದ ಪರಿಸ್ಥಿತಿ ಅವರದ್ದಾಯಿತು. ಬಡತನದ ಕಷ್ಟಗಳು ರಂಗರಾಯರ ಮನಸಿನ ಮೇಲೆ ಗಾಢ ಪ್ರಭಾವ ಬೀರಿದವು.ರಂಗರಾಯರು ಬಹಳ ಕಷ್ಟಪಟ್ಟು ವಿದ್ಯಾರ್ಜನೆ ಮಾಡಿ ಎಫ್. ಎ. ಮುಗಿಸಿದರು. ಆದರೆ ಮುಂದೆ ಓದಲು ಅವರಿಗೆ ಮಾರ್ಗವೇ ಇರಲಿಲ್ಲ. ಆದ್ದರಿಂದ ಮಂಗಳೂರಿಗೆ ಬಂದು ಅಲ್ಲಿ ಒಂದು ಶಾಲೆಯಲ್ಲಿ ಶಿಕ್ಷಕನಾಗಿ ಸೇರಿಕೊಂಡರು. ಶಿಕ್ಷಕರಾಗಿದ್ದಾಗ ಅವರು ಜಾತಿಭೇದವನ್ನು ಕಟುವಾಗಿ ವಿರೋಧಿಸುತ್ತಿದ್ದ ಬ್ರಹ್ಮ ಸಮಾಜದ ಸಂಪರ್ಕಕ್ಕೆ ಬಂದರು. ಅಂದಿನಿಂದ ಅವರು ಸಮಾಜ ದೂರವಿಟ್ಟಿದ್ದ ದೀನದಲಿತರ ಮನೆಗಳಿಗೆಹೋಗಲಾರಂಭಿಸಿದರು. 

ಅವರ ಮಕ್ಕಳನ್ನೂ ಶಾಲೆಗೆ ಬರಲು ಒತ್ತಾಯ ಮಾಡಿದರು. ಯಾವ ರೀತಿಯಲ್ಲಾದರೂ ಅಸ್ಪೃಶ್ಯರ ಸ್ಥಿತಿಗತಿಗಳನ್ನು ಉದ್ಧರಿಸಲೇಬೇಕು ಎಂಬ ಸಂಕಲ್ಪ ಮಾಡಿದರು. ತಾವು ನಂಬಿದ ಆದರ್ಶಕ್ಕೆ ಅನುಗುಣವಾಗಿ ನಡೆಯಲು ಅವಕಾಶವಿಲ್ಲ ಎನಿಸಿದಾಗ ಶಿಕ್ಷಕ ವೃತ್ತಿಗೆ

ರಾಜಿನಾಮೆಯನ್ನಿತ್ತರು. ರಂಗರಾಯರು ಅಚಲ ಪರಿಶ್ರಮದಿಂದ ಓದಿ ವಕೀಲ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮಂಗಳೂರಿನಲ್ಲಿ ವೃತ್ತಿಯನ್ನು ಆರಂಭಿಸಿದರು. ಬಡಜನರಿಗೆ ಸೇವೆ ಒದಗಿಸಿದಾಗ ಪ್ರತಿಫಲವಾಗಿ ಅವರು ಕಿಲುಬು ಕಾಸನ್ನೂ ತೆಗೆದು ಕೊಳ್ಳುತ್ತಿರಲಿಲ್ಲ. 19 ನೇ ಶತಮಾನದ ಉತ್ತರಾರ್ಧದಲ್ಲಿ ಸರಕಾರವು ದೀನ ದಲಿತರಿಗಾಗಿ ಮಂಗಳೂರಿನಲ್ಲಿ ಒಂದು ಶಾಲೆಯನ್ನು ನಡೆಸುತ್ತಿತ್ತು. ಈ ಶಾಲೆಯಲ್ಲಿ ನಾಲ್ಕನೆಯ ದರ್ಜೆಯ ತನಕ ಕಲಿತು ಒಬ್ಬ ದಲಿತ ವರ್ಗದ ಹುಡುಗ ಉತ್ತೀರ್ಣನಾದ. ಅವರ ಪ್ರಯತ್ನದಿಂದಲೇ ಅವನಿಗೆ ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿ ಪೇದೆಯ ಕೆಲಸ ಸಿಕ್ಕಿತು. ಆದರೆ ಅವನು ಕೆಲಸಕ್ಕೆ ಹಾಜರಾದ ದಿನವೇ ನ್ಯಾಯಾಲಯದಲ್ಲಿ ದೊಡ್ಡ ಕೋಲಾಹಲವಾಯಿತು. ಅವನು ಮುಟ್ಟಿದ ಕಾಗದ ಪತ್ರಗಳನ್ನು ನಾವು ಮುಟ್ಟುವುದಿಲ್ಲ, ನೌಕರರು ವಿರೋಧಿಸಿದರು. ಅವರೆಲ್ಲಾ ಕೆಲಸಕ್ಕೆ ಹಾಜರಾಗುವಂತೆ ಮಾಡಬೇಕಿದ್ದರೆ ಆ ವ್ಯಕ್ತಿಯನ್ನು ಕೆಲಸದಿಂದ ತೆಗೆಯಬೇಕಾಯಿತು. ಇದನ್ನು ನೋಡಿ ರಂಗರಾಯರ ಮನಸ್ಸು ಮರುಗಿತು. ಆಗ ಆಂಗ್ಲ ನ್ಯಾಯಾಧಿಕಾರಿಗಳಾಗಿದ್ದವರು ರಂಗರಾಯರನ್ನು ಬಳಿಗೆ ಕರೆದರು. “ಒಬ್ಬ ದಲಿತನು ಒಂದು ಕೆಲಸಕ್ಕೆ ಸೇರಿದ ಮಾತ್ರಕ್ಕೆ ಅಜ್ಞಾನದ ಬಾವಿಯಲ್ಲಿ ಮುಳುಗಿರುವ ಅವನ ಜಾತಿಯೇ ಉದ್ಧಾರವಾಗುವುದಿಲ್ಲ. ಅವರೆಲ್ಲರಿಗೂ ಶಿಕ್ಷಣ ಸಿಗಬೇಕು. ಅಂದರೆ ಅವರು ನಿರ್ಭಯರಾಗಿ ಸ್ವತಂತ್ರರಾಗಿ ಬಾಳಬಲ್ಲರು” ಎಂದು ಒತ್ತಿ ಹೇಳಿದರು. ಸಮಾಜದ ಪ್ರಬಲ ವಿರೋಧದ ಎದುರು ಬರೇ ಕಾನೂನುಗಳು ಹೋರಾಡಲಾರವೆಂಬುದನ್ನು ಅವರಿಗೆ ಮನದಟ್ಟುಮಾಡಿಕೊಟ್ಟರು.

ರಂಗರಾಯರಿಗೆ ಈ ಮಾತಿನ ಸತ್ಯಅರಿವಾಯಿತು. ರಂಗರಾಯರು ವಕೀಲವೃತ್ತಿಯನ್ನು ತೊರೆದು ಹಿಂದುಳಿದವರಿಗೆ ಶಿಕ್ಷಣ ನೀಡುವ ಮಹತ್ಕಾರ್ಯಕ್ಕೆ ಬದುಕನ್ನು ಮೀಸಲಿಟ್ಟರು.ದಲಿತರು ಇತರರ ಶಾಲೆಗೆ ಹೋಗುವಂತಿರಲಿಲ್ಲ. ಆದುದರಿಂದ ರಂಗರಾಯರು 1892 ರಲ್ಲಿ ಮಂಗಳೂರಿನಲ್ಲಿ ಒಂದು ಶಾಲೆಯನ್ನು ಆರಂಭಿಸಿದರು. ಅಂಬೇಡ್ಕರ್ ಹುಟ್ಟಿದ್ದು 1890 ರಲ್ಲಿ. ಆದರೆ ರಂಗರಾಯರು ಅಷ್ಟರಲ್ಲಾಗಲೇ ದಲಿತರ ಪರ ಬಹಳಷ್ಟು ಕೆಲಸ ಮಾಡಿಯಾಗಿತ್ತು ಎಂಬುದನ್ನು ಗಮನಿಸಬೇಕು. ದಲಿತೋದ್ಧಾರ ಕಾರ್ಯಕ್ಕೆ ರಂಗರಾಯರು ಧುಮುಕಿದ್ದುದರಿಂದ ಸಮಾಜ ಅವರ ಮೇಲೆ ಕೆರಳಿತು. ಅವರನ್ನು ಜಾತಿಯಿಂದ ಹೊರಗೆ ಹಾಕಿದರು. ಅವರು ರಸ್ತೆಯಲ್ಲಿ ಹೋಗುವಾಗ ದೊಡ್ಡವರು ಮಕ್ಕಳಿಗೆ ಹೇಳಿಕೊಟ್ಟು ಕಲ್ಲು ಹೊಡೆಸುತ್ತಿದ್ದರು. ಇಂಥ ಕಷ್ಟಗಳನ್ನೂ ರಂಗರಾಯರು ಸಹನೆಯಿಂದ ಎದುರಿಸಿದರು. ಅವರ ಪರಿಶ್ರಮದ ಫಲವಾಗಿ ಕೋರ್ಟು ಗುಡ್ಡದಲ್ಲಿ ಪ್ರೌಢಶಾಲೆಯೂ ತಲೆಯೆತ್ತಿತು. ಅಲ್ಲದೆ ಅವರು ದಲಿತರ ಸೇವೆಗಾಗಿ ‘ಡಿಪ್ರೆಸ್ಡ್ ಕ್ಲಾಸ್ ಮಿಷನ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.

ಸರಕಾರ ನೀಡಿದ ಖಾಲಿ ಸ್ಥಳಗಳಲ್ಲಿ ದಲಿತರಿಗಾಗಿ ಶಾಲೆಗಳನ್ನು ಆರಂಭಿಸಿದರು, ಆಶ್ರಮಗಳನ್ನು ತೆರೆದರು, ಉಚಿತ ವಿದ್ಯಾರ್ಥಿ ನಿಲಯಗಳನ್ನು ಕಟ್ಟಿಸಿದರು. ರಂಗರಾಯರ ಶಾಲೆಗಳಲ್ಲಿ ಅಧ್ಯಾಪಕರಾಗಲು ಬೇರೆ ಯಾವ ಜಾತಿಯವರೂ ಒಪ್ಪದಿದ್ದಾಗ ಅವರು ಬೇರೆ ಶಾಲೆಗಳಲ್ಲಿ ಕಲಿತಿದ್ದ ದೀನದಲಿತ ಯುವಕರನ್ನೇ ಆರಿಸಿ ಕೊಂಡರು. ಅವರಿಗೆ ತರಬೇತಿ ಇತ್ತು ಅಧ್ಯಾಪಕರನ್ನಾಗಿ ನೇಮಿಸಿದರು. ಶಾಲೆಗಳನ್ನು ಆರಂಭಿಸಿದ ಸಮಯದಲ್ಲಿ ರಂಗರಾಯರು ಎದುರಿಸಿದ ಸಮಸ್ಯೆಗಳು ಅಷ್ಟಿಷ್ಟಲ್ಲ. ಕೈಯಲ್ಲಿ ಹಣವಿರಲಿಲ್ಲ. ಕೆಲವು ಸಲವಂತೂ ವಿದ್ಯಾರ್ಥಿಗಳು ಉಪವಾಸವೇ ಇರಬೇಕಾದ ಪರಿಸ್ಥಿತಿಯೂ ಒದಗಿತು. ರಂಗರಾಯರು ಎದೆಗುಂದಲಿಲ್ಲ. ಮುಂಬೈ, ಮದರಾಸು, ಕಲ್ಕತ್ತ ಮೊದಲಾದ ಪರ ಊರುಗಳಲ್ಲಿ ವಾಸಿಸುತ್ತಿದ್ದ ಸಹೃದಯಿಗಳಾದ ಮಹನೀಯರಿಗೆ ತಮ್ಮ ಸಿದ್ಧಿ ಸಾಧನೆಗಳನ್ನೆಲ್ಲಾ ವಿವರಿಸಿ ಸಾಧ್ಯವಿರುವಷ್ಟು ಸಹಾಯ ನೀಡುವಂತೆ ಯಾಚಿಸಿ ಪತ್ರ ಬರೆದರು. ಈ ಕ್ರಮದಿಂದ ಹಣದ ತಾಪತ್ರಯ ಕಡಿಮೆಯಾಗತೊಡಗಿತು. ದೂರದ ಪಟ್ಟಣಗಳಲ್ಲಿ ವಾಸಿಸುತ್ತಿದ್ದ ಕಾರ್ನಾಡು ಸದಾಶಿವರಾವ್, ಬೆನಗಲ್ ಶಿವರಾಯರಂತಹ ಅನೇಕ ಆಮಹನೀಯರು ಹಣ ಕಳುಹಿಸುತ್ತಿದ್ದರು. ಅನೇಕ ವ್ಯಾಪಾರ ಸಂಸ್ಥೆಗಳೂ ನೆರವಿನ ಹಸ್ತ ಚಾಚಿದವು. ರಂಗರಾಯರ ಸೇವಾ ಮನೋಭಾವವನ್ನು ಮೆಚ್ಚಿದ ಅನೇಕ ಭಾರತೀಯ ಮತ್ತು ಆಂಗ್ಲ ಉಚ್ಚ ಅಧಿಕಾರಿಗಳೂ ರಂಗರಾಯರ ವಿದ್ಯಾಸಂಸ್ಥೆಗಳಿಗೆ ಪ್ರತಿ ತಿಂಗಳು ನಿಯಮಿತವಾಗಿ ಹಣವನ್ನು ಕಳುಹಿಸಿದರು.

ದೇಶ ವಿದೇಶಗಳ ಬರಹಗಾರರು ಪ್ರಕಾಶಕರು ಕಳುಹಿಸಿಕೊಟ್ಟ ಪುಸ್ತಕಗಳನ್ನು ಒಟ್ಟುಗೂಡಿಸಿ ರಾಯರು ಗ್ರಂಥಾಲಯವನ್ನು ಸ್ಥಾಪಿಸಿದರು. ಹಿರಿಯರೊಬ್ಬರು ಕೊಟ್ಟ ದತ್ತಿಯಿಂದ ಅನಾಥಾಲಯ ಮತ್ತು ವಸತಿಗೃಹವನ್ನು ನಿರ್ಮಿಸಿದರು. ಕುದ್ಮುಲ್ ರಂಗರಾಯರ ಮನಸ್ಸನ್ನು ಇನ್ನೊಂದು ಕಹಿ ಘಟನೆ ಕೊರೆಯುತ್ತಿತ್ತು. ಹಿಂದೂ ಸಮಾಜದಲ್ಲಿ ಚಾಲ್ತಿಯಲ್ಲಿದ್ದ ಬಾಲ್ಯ ವಿವಾಹ. ಆಡುವ ಹುಡುಗಿಯಾಗಿದ್ದಾಗಲೇ ಹೆಣ್ಣಿಗೆ ಮದುವೆ ಮಾಡಲಾಗುತ್ತಿತ್ತು ಆಗ. ಮದುವೆಯಾದ ಮೇಲೂ ಹೆಣ್ಣಿನ ಕಷ್ಟಗಳು ಮುಗಿಯಲಿಲ್ಲ. ಹೆಣ್ಣಿನ ತಲೆಯ ಕೂದಲನ್ನು ಕತ್ತರಿಸಿ ವಿರೂಪಗೊಳಿಸುತ್ತಿದ್ದರು. ಸಮಾಜದ ಶುಭಕಾರ್ಯಗಳಿಗೆಲ್ಲ ಅವಳು ಬರಲಾಗದು. ಕಣ್ಣೀರಿನಲ್ಲಿ ಕೊರಗಿ ಆಕೆ ಸಾಯಬೇಕು ಅಷ್ಟೆ. ರಂಗರಾಯರು ಅನಾಥರಾದ ಮಹಿಳೆಯರಿಗೆ ಮತ್ತು ವಿಧವೆಯರಿಗಾಗಿ ಒಂದು ಆಶ್ರಮವನ್ನು ಕಟ್ಟಿಸಿದರು. ವಿಧವೆಯರಂಥದೇ ಸಮಸ್ಯೆ ದೇವದಾಸಿಯರದು ಕೂಡಾ. ಅವರು ಮದುವೆಯಾಗಬಾರದು, ವೇಶ್ಯೆಯರಾಗಿಯೇ ಬಾಳಬೇಕು ಎನ್ನುತ್ತಿತ್ತು ಸಮಾಜ. ಆದರೆ ರಂಗರಾಯರು ಅವರನ್ನೂ ಆಶ್ರಮಕ್ಕೆ ಕರೆದು ತಂದರು. ಮರ್ಯಾದೆಯಿಂದ ಬಾಳಲು ಕಲ್ಪಿಸಿಕೊಟ್ಟರು.

ಅಷ್ಟೇ ಅಲ್ಲ ‘ವಿಧವೆಯರನ್ನು, ದೇವದಾಸಿಯರನ್ನು ವಿವಾಹವಾಗಿ ಅವರನ್ನು ಉದ್ಧರಿಸಬೇಕು, ಕಣ್ಣೀರಿನ ಕಡಲಿನಿಂದ ಅವರನ್ನು ಪಾರುಮಾಡಬೇಕು’ ಎಂದು ಯುವಕರಿಗೆ ಕರೆಯಿತ್ತರು. ರಂಗರಾಯರು ಈ ತೆರನ ವಿವಾಹಕ್ಕಾಗಿ ಪ್ರಯತ್ನ ಮಾಡುತ್ತಿದ್ದಾಗ, “ಇವರಿಗೆ ಬೇರೆಯವರ ಮಕ್ಕಳ ಮದುವೆ ಚಿಂತೆ ಏಕೆ? ತಮ್ಮ ಮಗಳನ್ನೇ ಬೇರೆ ಜಾತಿಯವನಿಗೆ ಕೊಟ್ಟು ಮದುವೆ ಮಾಡ ಬಹುದಲ್ಲ?’ ಎಂದು ಯಾರೋ ಆಡಿದ ಕುಹಕನುಡಿ ರಂಗರಾಯರ ಕಿವಿಗೆ ಬಿತ್ತಂತೆ. ರಾಯರು ತಮ್ಮ ಮಗಳನ್ನು ಬೇರೆ ಜಾತಿಯ ಹುಡುಗನಿಗೆ ಕೊಟ್ಟು ಮದುವೆ ಮಾಡಿಯೇ ಬಿಟ್ಟರು. ತಮ್ಮ ಎರಡನೆಯ ಮಗಳಾದ ರಾಧಮ್ಮನನ್ನಂತೂ ಅಸ್ಪೃಶ್ಯ ಪಂಗಡಕ್ಕೆ ಸೇರಿದವನೊಬ್ಬನಿಗೆ ಮದುವೆ ಮಾಡಿಕೊಟ್ಟರು.

ದಲಿತವರ್ಗದವರಿಗಾಗಿ ಸದಾ ಪರಿಶ್ರಮ ಮಾಡುತ್ತಿದ್ದ ರಂಗರಾಯರು ಅವರನ್ನು ಕುರಿತು ತುಂಬಾ ಮಹತ್ತ್ವಾಕಾಂಕ್ಷೆಗಳನ್ನು ಹೊಂದಿದ್ದರು. “ನನ್ನ ಶಾಲೆಯಲ್ಲಿ ಕಲಿತ ಒಬ್ಬ ದಲಿತ ಜನಾಂಗದ ಹುಡುಗ ಸರಕಾರಿ ನೌಕರಿಗೆ ಸೇರಿ ನಮ್ಮೂರ ರಸ್ತೆಯಲ್ಲಿ ಕಾರಿನಲ್ಲಿ ಓಡಾಡಬೇಕು; ಆಗ ಎದ್ದ ಧೂಳು ನನ್ನ ತಲೆಗೆ ತಾಕಬೇಕು, ಆಗ ನನ್ನ ಜನ್ಮ ಸಾರ್ಥಕ” ಎಂದು ಅವರು ಅನ್ನುತ್ತಿದ್ದರು. ಈ ಕನಸು ಅವರು ಬದುಕಿರುವಾಗ ಈಡೇರಲಿಲ್ಲವಾದರೂ ಮುಂದೆ ದಲಿತ ವರ್ಗಗಳ ಸಾವಿರಾರು ಮಂದಿ ಜನರು ಅವರ ವಿದ್ಯಾಸಂಸ್ಥೆಗಳಿಂದ ವಿದ್ಯೆಯನ್ನು ಗಳಿಸಿದರು. ವೈದ್ಯರಾದರು, ಸೇನೆಯಲ್ಲಿ ದೊಡ್ಡ ಪದವಿಗಳನ್ನು ಪಡೆದರು. ಜಿಲ್ಲಾಧಿಕಾರಿಗಳಾದರು. ಪೋಲೀಸ್ ಅಧಿಕಾರಿಗಳಾದರು. ರಾಜಕೀಯದಲ್ಲೂ ಮುಂದೆ ಬಂದರು. ದಲಿತ ವರ್ಗಗಳ ಮಹಿಳೆಯರೂ ಅವರ ವಿದ್ಯಾ ಸಂಸ್ಥೆಗಳಿಂದ ವಿದ್ಯೆ ಕಲಿತರು. ಉನ್ನತ ಪದವಿಗಳನ್ನು ಪಡೆದರು.

ದಲಿತರ ಶಿಕ್ಷಣ, ಅವರ ಉದ್ಧಾರದ  ಈ ಸಾಮಾಜಿಕ ಕ್ರಾಂತಿಗಾಗಿ ಅವರು ನಿರಂತರರ ಮೂವತ್ತು ವರ್ಷ  ಕಾಲ ದುಡಿದರು. ಪ್ರತಿಷ್ಠಿತರು ರಂಗರಾಯರ ತತ್ವಗಳನ್ನು ದ್ವೇಷಿಸಿದರು. ಅವರ ಸಂಸ್ಥೆಗಳ ವಿರುದ್ಧ ಹೋರಾಡಿದರು. ಆದರೂ ರಂಗರಾಯರು ಹಿಡಿದ ಹಠ ಬಿಡಲಿಲ್ಲ. ಅವರ ಪ್ರಯತ್ನದಿಂದ ಜಿಲ್ಲಾ ಬೋರ್ಡಿನಲ್ಲಿ ಮಂಗಳೂರು ಪುರಸಮಿತಿಯಲ್ಲಿ ದಲಿತ ವರ್ಗದವರಿಗೂ ಪ್ರಾತಿನಿಧ್ಯ ಸಿಗುವಂತಾಯಿತು.ಎಲ್ಲೋ ಕಾಡಿನ ಮೂಲೆಯಲ್ಲಿದ್ದವರ ಬಾಳಿನಲ್ಲಿ ಹೊಸ ಬೆಳಕು ಮೂಡಿತು. ಅವರ ಸಮಾಜೋದ್ಧಾರ ಕಾರ್ಯಗಳಲ್ಲಿ ಅವರ ಪತ್ನಿ ರುಕ್ಮಿಣಿ ಅಮ್ಮಾ ಮತ್ತು ಮಕ್ಕಳು ನೀಡಿದ ಸಹಕಾರ ಅಪಾರ ವಾದುದು. ರಂಗರಾಯರು ಮೂವತ್ತು ವರ್ಷ ಕಾಲ ತಮ್ಮ ಈ ವಿವಿಧ ಶಿಕ್ಷಣ ಸಂಸ್ಥೆಗಳನ್ನು ನಡೆಸಿದರು. ತಮ್ಮ ಅನಂತರವೂ ಈ ಸಂಸ್ಥೆಗಳು ಅಳಿಯಬಾರದು, ಹೀಗೇ ನಡೆಯಬೇಕೆಂಬ ಇಚ್ಛೆ ಅವರಲ್ಲಿ ಬಲವತ್ತರವಾಗಿತ್ತು. ಆದ್ದರಿಂದ ಅವರು ತಮ್ಮ ವೃದ್ಧಾಪ್ಯದಲ್ಲಿ ಈ ವಿದ್ಯಾಸಂಸ್ಥೆಗಳನ್ನೆಲ್ಲಾ ‘ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ’ಯ ಯಜಮಾನಿಕೆಗೆ ಒಪ್ಪಿಸಿದರು. ಸಂನ್ಯಾಸ ಸ್ವೀಕರಿಸಿ, ಬದುಕಿನ ಕೊನೆಯ ಕ್ಷಣಗಳನ್ನು ದೈವಚಿಂತನೆಯಲ್ಲೇ ಕಳೆಯಬೇಕೆಂದು ನಿಶ್ಚಯಿಸಿದ ಅವರು 1927ರಲ್ಲಿ ಸುವಿಚಾರಾನಂದ ಸ್ವಾಮಿಯವರಿಂದ ಸಂನ್ಯಾಸ ದೀಕ್ಷೆಯನ್ನು ಪಡೆದರು. ಅವರಿಗೆ ‘ಈಶ್ವರಾನಂದ’ ಎಂದು ನಾಮಕರಣ ಮಾಡಲಾಯಿತು. ಅದೇ ದಿನ ಅವರು ಹಿಂದೆ ಅವರಿಗೆ ಸರ್ಕಾರ ಕೊಟ್ಟಿದ್ದ ‘ರಾವ್ ಸಾಹೇಬ್’ ಎಂಬ ಬಿರುದಿನ ಪದಕವನ್ನೂ ಪತ್ರವನ್ನೂ ಹೋಮಕುಂಡಕ್ಕೆಅರ್ಪಿಸಿದರು.

1928 ಜನವರಿ 30 ರಂದು ಸ್ವಾಮಿ ಈಶ್ವರಾನಂದರು ಅರ್ಥಾತ್ ಕುದ್ಮುಲ್ ರಂಗರಾಯರು 69 ವರ್ಷಗಳತುಂಬು ಜೀವನವನ್ನು ಸಾರ್ಥಕವಾಗಿ ಮುಗಿಸಿ ಇಹಲೋಕ ತ್ಯಜಿಸಿದರು. ‘ನಾನು ಸತ್ತಮೇಲೆ ಅಸ್ಪೃಶ್ಯ ಜನಾಂಗದಲ್ಲೇ ಅತೀ ಹಿಂದುಳಿದ ಜಾಡಮಾಡಲಿಗಳು ಮಾತ್ರ ನನ್ನ ಪಾರ್ಥಿವ ಶರೀರವನ್ನು ಮುಟ್ಟಿ ಶವಸಂಸ್ಕಾರ ಮಾಡಬೇಕು’ ಎಂದು ವಿಲ್ ಬರೆದಿದ್ದರು. ಇದೇ ರೀತಿ ಅವರ ಅಂತ್ಯಸಂಸ್ಕಾರ ನೆರವೇರಿತು.

-----

Writer - ಶ್ರೀನಿವಾಸ ಕಾರ್ಕಳ

contributor

Editor - ಶ್ರೀನಿವಾಸ ಕಾರ್ಕಳ

contributor