‘ಸಹಬಾಳ್ವೆ ಸಾಗರ’ ಉದ್ಘಾಟಿಸಲಿರುವ ಬರಗೂರು ರಾಮಚಂದ್ರಪ್ಪ
ಬಂಡಾಯ ದಲಿತ ಸಾಹಿತ್ಯ ಚಳವಳಿಯು ಪ್ರಬಲವಾಗಿ ಕಾಣಿಸಿಕೊಂಡದ್ದು 1970 ರ ದಶಕದ ಉತ್ತರಾರ್ಧದಲ್ಲಿ. ಆ ದಶಕದಲ್ಲಿ ನಡೆದ ಅನೇಕ ಘಟನೆಗಳು ಅಂಥದ್ದೊಂದು ಸಾಹಿತ್ಯ ಹುಟ್ಟಿಕೊಳ್ಳಲು ಕಾರಣವಾಯಿತು. ಪ್ರಬಲಗೊಂಡ ಮಾರ್ಕ್ಸ್ ವಾದ, ಜನಪ್ರಿಯವಾಗುತ್ತಿದ್ದ ಲೋಹಿಯಾವಾದ, ದಲಿತರ ಕಣ್ತೆರೆಸಿದ ಅಂಬೇಡ್ಕರ್‌ವಾದಗಳ ಜೊತೆಗೆ ಅನೇಕ ಜನಪರ ಚಳುವಳಿಗಳೂ ಪ್ರಗತಿಪರ ಸಾಹಿತ್ಯದ ಹುಟ್ಟಿಗೆ ಕಾರಣವಾದವು. 1969ರಲ್ಲಿ ದೇವರಾಜು ಅರಸರು ಮುಖ್ಯಮಂತ್ರಿಯಾಗಿದ್ದಾಗ ಎಲ್. ಜಿ ಹಾವನೂರರು ಮಂಡಿಸಿದ ಹಾವನೂರ ವರದಿ ಹಿಂದುಳಿದವರಲ್ಲಿ ಹೊಸ ಎಚ್ಚರ ಮೂಡಿಸಿತು. 1973ರಲ್ಲಿ ನಡೆದ ಬಸವಲಿಂಗಪ್ಪನವರ ಬೂಸಾ ಪ್ರಕರಣ ಬಗೆ ಬಗೆಯ ವೈಚಾರಿಕ ಚರ್ಚೆಗಳಿಗೆ ನಾಂದಿ ಹಾಡಿತು. ತಲೆಯಲ್ಲಿ ಮಲ ಹೊರುವ ಪದ್ಧತಿಯ ನಿಷೇಧವು ದಲಿತರ ಆತ್ಮಾಭಿಮಾನವನ್ನು ಬಡಿದೆಬ್ಬಿಸಿತು. 1973ರ ಆಗಸ್ಟ್ 25-26ರಂದು ಮೈಸೂರಿನಲ್ಲಿ ನಡೆದ ಜಾತಿ ವಿನಾಶ ಸಮ್ಮೇಳನವು ಬೇರೆ ಬೇರೆ ಜಾತಿಯ ಜನರನ್ನು ಹತ್ತಿರ ತಂದದ್ದಲ್ಲದೆ, ಅಂತರ್ಜಾತೀಯ ವಿವಾಹಗಳಿಗೆ ಪ್ರೇರಣೆ ನೀಡಿತು. 1974ರ ಎಪ್ರಿಲ್ 20-21ರಂದು ಮತ್ತೆ ಮೈಸೂರಿನಲ್ಲಿ ರಚನೆಯಾದ ಬರಹಗಾರ ಮತ್ತು ಕಲಾವಿದರ ಒಕ್ಕೂಟ, ಈ ಒಕ್ಕೂಟದ ಉದ್ಘಾಟನೆಯಲ್ಲಿ ಕುವೆಂಪು ಮಾಡಿದ ವಿಚಾರಪೂರಿತ ಭಾಷಣ, ಅದೇ ವರ್ಷ ಭದ್ರಾವತಿಯಲ್ಲಿ ಹುಟ್ಟಿಕೊಂಡ ದಲಿತ ಸಂಘರ್ಷ ಸಮಿತಿ, ನಾವೆಲ್ಲ ಉತ್ಸಾಹದಿಂದ ಭಾಗವಹಿಸುತ್ತಿದ್ದ ಸಮುದಾಯ ಮತ್ತು ಅದರ ಬೀದಿ ನಾಟಕಗಳು, ಪರಿಣಾಮಕಾರಿಯಾಗಿ ಜಾರಿಗೆ ಬಂದ ಭೂಮಸೂದೆ ಮತ್ತಿತರ ಅನೇಕ ಘಟನೆಗಳು ಕನ್ನಡದಲ್ಲಿ ಜನಪರ ಸಾಹಿತ್ಯವೊಂದನ್ನು ಹುಟ್ಟು ಹಾಕಿದವು. ತೆಲುಗಿನ ದಿಗಂಬರ ಸಾಹಿತ್ಯ ಮತ್ತು ಮರಾಠಿಯ ದಲಿತರ ಆತ್ಮ ಚರಿತ್ರೆಗಳು ನನ್ನಂಥ ಹಲವರನ್ನು ಬೆಚ್ಚಿಬೀಳಿಸಿದ್ದವು. ಈ ಪ್ರಗತಿಪರ ಚಳವಳಿಯ ಮುಂಚೂಣಿಯಲ್ಲಿ ಅನೇಕ ಬರಹಗಾರರಿದ್ದು ಅವರಲ್ಲಿ ಇಬ್ಬರು ಆಗ ನಮ್ಮ ಕಣ್ಮಣಿಗಳಾಗಿದ್ದರು, ಒಬ್ಬರು ಚಂದ್ರಶೇಖರ ಪಾಟೀಲರು ಮತ್ತು ಇನ್ನೊಬ್ಬರು ಬರಗೂರು ರಾಮಚಂದ್ರಪ್ಪನವರು. ದಲಿತ ಬರಹಗಾರರಲ್ಲಿ ಸಿದ್ದಲಿಂಗಯ್ಯ ಮತ್ತು ದೇವನೂರ ಮಹಾದೇವ ಅವರು ನಮಗೆಲ್ಲ ಮಾರ್ಗದರ್ಶಕರಾಗಿದ್ದರು. ಈ ನಾಲ್ವರಲ್ಲಿ ಬರಗೂರು ರಾಮಚಂದ್ರಪ್ಪಅವರು ನಾವು ಕರೆದಲ್ಲಿಗೆಲ್ಲಾ ಬಂದು, ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಅವರ ಸರಳ, ನೇರ ಮತ್ತು ಸ್ಪಷ್ಟ ನುಡಿಗಳಿಂದ ಇಡೀ ಕರ್ನಾಟಕ ಅವರೆಡೆಗೆ ನೋಡುವಂತಾಗಿತ್ತು. ಈ ಅರ್ಥದಲ್ಲಿ 1970ರ ದಶಕದ ಕೊನೆಯಲ್ಲಿ ಆರಂಭವಾದ ಬಂಡಾಯ ಚಳವಳಿಯ ಮುಂಚೂಣಿಯಲ್ಲಿ ನಿಂತು ಕರ್ನಾಟಕವನ್ನು ಪ್ರಗತಿ ಪಥದತ್ತ ನಡೆಸಿದ ಕೆಲವು ಹಿರಿಯರಲ್ಲಿ ಬರಗೂರು ರಾಮಚಂದ್ರಪ್ಪ ಪ್ರಮುಖರು. 1946ರ ಅಕ್ಟೋಬರ್ 16ರಂದು ತುಮಕೂರು ಜಿಲ್ಲೆಯ ಸಿರಾ ಬಳಿಯ ಬರಗೂರಿನಲ್ಲಿ ಜನಿಸಿದ ಅವರು ಕಷ್ಟಗಳ ಅನೇಕ ಮೆಟ್ಟಲೇರುತ್ತಾ ಬಂದು ಕೊನೆಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಇದೀಗ ನಿವೃತ್ತಿ ಹೊಂದಿದ್ದಾರೆ. ಸಂಘಟಕ, ಪ್ರಾಧ್ಯಾಪಕ ಮತ್ತು ಚಿತ್ರ ನಿರ್ದೇಶಕರಾಗಿ ಬರಗೂರು ಪ್ರಸಿದ್ಧಿ ಪಡೆದಿದ್ದಾರೆ. ಸುಂಟರಗಾಳಿ, ಒಂದು ಊರಿನ ಕಥೆಗಳು, ಕನ್ನಡಾಭಿಮಾನ, ಕಪ್ಪುನೆಲದ ಕೆಂಪು ಕಾಯಿ, ಮರಕುಟಿಕ, ರಾಜಕಾರಣಿ, ಸುಂಟರಗಾಳಿ, ಸೂತ್ರ, ಕಾಂಟೆಸ್ಸಾ ಕಾವ್ಯ, ಸಂಸ್ಕೃತಿ, ಶ್ರಮ ಮತ್ತು ಸೃಜನಶೀಲತೆ, ನೆತ್ತರಲ್ಲಿ ನೆಂದ ಹೂ ಮತ್ತು ಗುಲಾಮನ ಗೀತೆ ಇವರ ಪ್ರಮುಖ ರಚನೆಗಳು. ಬರಗೂರು ಅವರು ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕರ್ನಾಟಕದ ಉಪೇಕ್ಷಿತ ಸಮುದಾಯಗಳ ಬಗೆಗೆ ಅನೇಕ ಪುಸ್ತಕಗಳನ್ನು ಬರೆಯಿಸಿ ಪ್ರಕಟಿಸಿ ನಾಡಿನ ಕಣ್ಣು ತೆರೆಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಆಡಳಿತದಲ್ಲಿ ಕನ್ನಡ ಅನುಷ್ಠಾನಗೊಳಿಸಲು ವಿಶೇಷವಾಗಿ ಕೆಲಸ ಮಾಡಿದ್ದರು. ಅವರು ನಿರ್ದೇಶಿಸಿದ ಹಗಲುವೇಷ, ಶಾಂತಿ, ಭಾಗೀರಥಿ, ಬರ ಮೊದಲಾದ ಚಿತ್ರಗಳು ಸದಭಿರುಚಿಯ ಚಿತ್ರಗಳೆಂದು ಹೆಸರು ಪಡೆದದ್ದಲ್ಲದೆ ಅನೇಕ ಪ್ರಶಸ್ತಿಗಳನ್ನೂ ಬಾಚಿಕೊಂಡವು. ‘ಸಹಬಾಳ್ವೆ ಸಾಗರ’ ಕಾರ್ಯಕ್ರಮ್ಲದಲ್ಲಿ ತಾನೇಕೆ ಭಾಗವಹಿಸುತ್ತಿದ್ದೇನೆ ಎನ್ನುತ್ತಾ, ‘‘ನಾವಿಂದು ಕಷ್ಟಕಾಲದಲ್ಲಿದ್ದೇವೆ. ಇಪ್ಪತ್ತನೆ ಶತಮಾನದ ಕೊನೆಯ ದಶಕದ ಆರಂಭದಲ್ಲೆ ಆಗಮಿಸಿದ ಜಾಗತೀಕರಣ ಮತ್ತು ದೇಗುಲೀಕರಣ ಪ್ರಕ್ರಿಯೆ ಇಂದು ಆಕ್ರಮಣಶೀಲವಾಗಿ ದಾಳಿ ಮಾಡುತ್ತಿದೆ. ಜಾಗತೀಕರಣವು ಮುಕ್ತ ಮಾರುಕಟ್ಟೆ ನೀತಿಯಿಂದ ಆರ್ಥಿಕ ಅವಿವೇಕವನ್ನು ಬೆಳೆಯುತ್ತಿದ್ದರೆ, ದೇಗುಲೀಕರಣವು ಸಾಮಾಜಿಕ ವಿವೇಕವನ್ನು ಕಳೆಯುತ್ತಿದೆ. ಜಾತಿವಾದ ಮತ್ತು ಕೋಮುವಾದಗಳು ಒಟ್ಟಿಗೇ ವ್ಯಾಪಿಸುತ್ತಾ ಸಾಮರಸ್ಯಕ್ಕೆ ಸಂಕೋಲೆಯನ್ನು ತೊಡಿಸಿವೆ; ಜಾತಿಗಳು ಜೈಲುಗಳಾಗುತ್ತಿವೆ; ಧರ್ಮಗಳು ದ್ವೇಷದೀಪಗಳಾಗುತ್ತಿವೆ. ಜಾತಿ ಜೈಲುಗಳಿಂದ ಹೊರಬಂದು ಬಯಲು ಮನವಾಗುವ ಕನಸು ಕಂಗೆಟ್ಟಿದ್ದರೆ, ಧರ್ಮದ್ವೇಷವನ್ನು ದಾಟುವ ಮನಸು ಮಂಕಾಗುತ್ತಿದೆ. ರಾಜಕೀಯ ಬಹುಮತವೆನ್ನುವುದು ಏಕಮತ ಹುನ್ನಾರವಾಗುತ್ತ ಬಹುತ್ವವನ್ನು ಬಂಧಿಸಲು ಹವಣಿಸುತ್ತಿದೆ. ದೊಡ್ಡ ಪರಂಪರೆಯ ಮಾತನಾಡುತ್ತಲೇ ಸಹಿಷ್ಣುತೆಯನ್ನು ಸಹಿಸದ ಒಕ್ಕಣ್ಣ ನೋಟದ ವಿಕೃತಿ ವಿಜೃಂಭಿಸುತ್ತಿದೆ. ಭಯೋತ್ಪಾದನೆ ಮತ್ತು ಯುದ್ಧೋತ್ಪಾದನೆ, ಒಟ್ಟಾಗಿ ವಿಶ್ವದ ಸಮಚಿತ್ತಕ್ಕೆ ಹುತ್ತವನ್ನು ಉಣಿಸುತ್ತಿರುವಾಗ ನಮ್ಮ ದೇಶವೂ ಅದಕ್ಕೆ ಕಾಣಿಕೆ ಸಲ್ಲಿಸುತ್ತಿದೆ. ವಿವಿಧ ಪ್ರಮಾಣದಲ್ಲಿ ನಡೆಯುವ ಇಂತಹ ಪ್ರಕ್ರಿಯೆಯ ಆಕ್ರಮಣಶೀಲ ಅಸಹನೆಯನ್ನೇ ನೀತಿಯಾಗಿಸುತ್ತಿದೆ. ನೀತಿಯೇ ಭೀತಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಾವೇನು ಮಾಡಬೇಕು? ಅಮಾನವೀಯ ಅಸಹನೆಗೆ ಪ್ರತಿಕ್ರಿಯಿಸಿದರೆ ಸಾಕೇ? ಪ್ರತಿಕ್ರಿಯೆಯ ಜೊತೆಗೆ ಸಕಾರಾತ್ಮಕ ಕ್ರಿಯೆಯಲ್ಲಿ ತೊಡಗಿ ಬಾಳಿನ ಸಹಯಾನದ ಮಹತ್ವವನ್ನು ಪ್ರತಿಪಾದಿಸಬೇಕೇ? ಈ ಪ್ರಶ್ನೆಗಳು ನಮ್ಮನ್ನು ಕಾಡಿಸಬೇಕು. ಕೇವಲ ಪ್ರತಿಕ್ರಿಯೆಗಷ್ಟೇ ಸೀಮಿತವಾಗದೆ ಸಕಾರಾತ್ಮಕ ಕ್ರಿಯೆಯನ್ನು ಕಟ್ಟಬೇಕು. ಹೀಗೆ ಕಟ್ಟುವ ಕ್ರಿಯೆಯ ರಚನಾತ್ಮಕ ಹಾಗೂ ಸಕಾರಾತ್ಮಕ ಕಾರ್ಯಕ್ರಮ ‘ಸಹಬಾಳ್ವೆ ಸಾಗರ’. ಈ ಕಾರಣದಿಂದ ನಾನು ‘ಸಹಬಾಳ್ವೆ ಸಾಗರ’ ಕಾರ್ಯಕ್ರಮದ ಭಾಗವಾಗುತ್ತಿದ್ದೇನೆ; ಭಾಗವಹಿಸುತ್ತಿದ್ದೇನೆ’’ ಎನ್ನುತ್ತಾರೆ ಬರಗೂರು ಅವರು.
ತಮ್ಮ ಬರಹ, ಮಾತು ಮತ್ತು ಸಂಘಟನಾತ್ಮಕ ಕೆಲಸಗಳಿಂದ ನಮಗೆಲ್ಲ ಆಪ್ತರಾಗಿರುವ ಬರಗೂರು ಅವರು ಎಂದೂ ತಮ್ಮ ಜನಪರ ನಿಲುವುಗಳಿಂದ ದೂರ ಸರಿದವರಲ್ಲ. ಹಿಂದುಳಿದ ವರ್ಗಗಳ ಅಭಿವೃದ್ಧಿಯ ವಿಷಯದಲ್ಲಿ ಅವರದು ಸದಾ ದಿಟ್ಟ ನಿಲುವು. ಅವರು ಮಂಗಳೂರಿನಲ್ಲಿ ನಡೆಯಲಿರುವ ಸಹಬಾಳ್ವೆ ಸಾಗರದಲ್ಲಿ ಭಾಗವಹಿಸುತ್ತಿರುವುದು ಸಂತೋಷದ ವಿಷಯ.