ಪ್ರಖರ ರಾಜಕೀಯ ವಿಶ್ಲೇಷಕ ಪ್ರೊ. ಯೋಗೇಂದ್ರ ಯಾದವ್
ಮಂಗಳೂರು : ಇದೇ ಜನವರಿ 30 ರಂದು ಮಂಗಳೂರಿನಲ್ಲಿ ನಡೆಯಲಿರುವ ‘ಸಹಬಾಳ್ವೆ ಸಾಗರ’ ರಾಷ್ಟ್ರೀಯ ಸಮಾವೇಶದಲ್ಲಿ ಸಮಾರೋಪ ಭಾಷಣ ಮಾಡಲಿರುವ ಪ್ರೊ. ಯೋಗೇಂದ್ರ ಯಾದವ್ ಅವರು ಭಾರತದ ಪ್ರಖ್ಯಾತ ರಾಜಕೀಯ ಮತ್ತು ಚುನಾವಣಾ ವಿಶ್ಲೇಷಕರಲ್ಲೊಬ್ಬರು. ಅವರು ಮೂಲತಃ ಹರಿಯಾಣದವರು. ಅವರ ಹುಟ್ಟು ಹೆಸರು ಸಲೀಮ್. ಸರೀಕರ ಉಪಟಳ ತಾಳಲಾರದೆ ಐದನೇ ತರಗತಿಯಲ್ಲಿ ಅದನ್ನು ಯೋಗೇಂದ್ರ ಎಂದು ಬದಲಾಯಿಸಿಕೊಂಡರಂತೆ. ಅವರ ತಂದೆ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಇದೀಗ ನಿವೃತ್ತರಾಗಿದ್ದಾರೆ. ಅಜ್ಜ ಶಾಲಾ ಮಾಸ್ತರರಾಗಿದ್ದರು. 1936ರಲ್ಲಿ ನಡೆದ ಕೋಮು ಗಲಭೆಯಲ್ಲಿ ಅವರ ಅಜ್ಜತೀರಿಕೊಂಡರಂತೆ. ಯಾದವ್ ಅವರ ಪತ್ನಿ ಮಧುಲಿಕಾ ಬ್ಯಾನರ್ಜಿ ಈಗ ದೆಹಲಿ ವಿವಿಯಲ್ಲಿ ಸಹಾಯಕ ಪ್ರಾಧ್ಯಾಪಕರು. ರಾಜಸ್ಥಾನ ವಿಶ್ವವಿದ್ಯಾಲಯದಿಂದ ಬಿ ಎ ಪದವಿ ಪಡೆದ ಅವರು ದೆಹಲಿಯ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದಿಂದ ರಾಜಕೀಯ ಶಾಸ್ತ್ರದಲ್ಲಿ ಎಂ ಎ ಪದವಿಯನ್ನೂ ಚಂಡೀಗರದ ಪಂಜಾಬ್ ವಿಶ್ವವಿದ್ಯಾಲಯದಿಂದ ಎಂ.ಫಿಲ್ ಪದವಿಯನ್ನೂ ಪಡೆದರು. 1985ರಿಂದ 1993 ರ ವರೆಗೆ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಶಾಸ್ತ್ರವನ್ನು ಬಿ ಎ ವಿದ್ಯಾರ್ಥಿಗಳಿಗೆ ಪಾಠಮಾಡಿದ ಅವರು 1995ರಲ್ಲಿ ದೆಹಲಿಯ ಪ್ರಖ್ಯಾತವಾದ ಅಭಿವೃದ್ಧಿಶೀಲ ಸಮಾಜಗಳ ಅಧ್ಯಯನಕೇಂದ್ರ (Centre for the Study of Developing Societies - CSDS) ಸೇರಿದರು. ಈ ಕೇಂದ್ರವು ಭಾರತದ ಅತ್ಯುನ್ನತ ಚಿಂತಕರನ್ನು ಒಳಗೊಂಡ ಶ್ರೇಷ್ಠ ಶೈಕ್ಷಣಿಕ ಸಂಸ್ಥೆ. ಪ್ರೊ.ಅಶೀಶ್ ನಂದಿ, ಅಭಯಕುಮಾರ ದುಬೆ, ರಾಜೀವ ಭಾರ್ಗವ, ರವಿ ಸುಂದರಂ, ಆದಿತ್ಯ ನಿಗಂ, ಅನನ್ಯ ವಾಜಪೇಯಿ ಮೊದಲಾದ ಚಿಂತಕರ ತಂಡವೇ ಇಲ್ಲಿದೆ. ಇಲ್ಲಿ ತನ್ನ ಕೆಲವು ಪರಿಕಲ್ಪನೆಗಳನ್ನು ಹರಿತಗೊಳಿಸಿಕೊಂಡ ಪ್ರೊ. ಯಾದವ್ ಅವರು 1995 ರಲ್ಲಿ ಸಿ ಎಸ್ ಡಿ ಎಸ್ ನಲ್ಲಿ ಲೋಕನೀತಿ ನೆಟ್ ವರ್‍ಕ್ ಎಂಬ ಸಣ್ಣ ಅಧ್ಯಯನ ವರ್ತುಲವನ್ನು ಸ್ಥಾಪಿಸಿ 2005ರ ವರೆಗೆ ಅದರ ಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಿದರು. ಈ ಅಧ್ಯಯನ ವರ್ತುಲದ ಮುಖ್ಯ ಉದ್ದೇಶ ಜಗತ್ತಿನ ಪ್ರಜಾಸತ್ತಾತ್ಮಕ ರಾಷ್ಟ್ರಗಳ ತೌಲನಿಕ ಅಧ್ಯಯನ ನಡೆಸುವುದು. ಈ ಕೆಲಸ ಯೋಗೇಂದ್ರಯಾದವ್ ಅವರ ಪ್ರಜಾಪ್ರಭುತ್ವದ ಬಗೆಗಣ ತಿಳಿವಳಿಕೆಯನ್ನು ಇನ್ನಷ್ಟು ವಿಸ್ತರಿಸಿತು. 2004 ರಿಂದ ಅವರು ಸಿ ಎಸ್‌ಡಿಎಸ್ ನಲ್ಲಿ ಹಿರಿಯ ಫೆಲೋ ಆಗಿ ಕಾರ್‍ಯ ನಿರ್ವಹಿಸುತ್ತಿದ್ದು 2014ರ ದೆಹಲಿ ಚುನಾವಣೆಯ ಆನಂತರದಿಂದ ಸುದೀರ್ಘ ರಜೆಯಲ್ಲಿದ್ದಾರೆ. ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಸದಸ್ಯರಾಗಿದ್ದ ಅವರನ್ನು ಅವರ ರಾಜಕೀಯ ಚಟುವಟಿಕೆಗಳ ಕಾರಣವಾಗಿ 2014ರಲ್ಲಿ ಬಿಡುಗಡೆ ಮಾಡಲಾಯಿತು.
ತುಂಬಾ ಪ್ರತಿಭಾವಂತ ವಿದ್ವಾಂಸರಾಗಿರುವ ಪ್ರೊ. ಯಾದವ್ ಅವರು ಪ್ರಜಾಪ್ರಭುತ್ವದ ಕುರಿತಾದ ಸಿದ್ಧಾಂತಗಳು, ಚುನಾವಣಾ ಪರಿಣಾಮಗಳ ವಿಶ್ಲೇಷಣೆ, ರಾಜಕೀಯ ಸಿದ್ಧಾಂತಗಳು ಮತ್ತು ಆಧುನಿಕ ಭಾರತದ ರಾಜಕೀಯ ಬೆಳವಣಿಗೆಗಳು ಹಾಗೂ ಭಾರತೀಯ ಸಮಾಜವಾದದ ಬಗ್ಗೆ ಅಧಿಕೃತವಾಗಿ ಮಾತಾಡಬಲ್ಲರು. ದಕ್ಷಿಣ ಏಷಿಯಾದಲ್ಲಿ ಪ್ರಜಾಪ್ರಭುತ್ವ (2008) ಮತ್ತು ಭಾರತದ ಚುನಾವಣಾ ರಾಜಕೀಯ ( 2009) ಅವರಿಗೆ ಹೆಸರು ತಂದುಕೊಟ್ಟ ಪುಸ್ತಕಗಳು. ಬಹು ರಾಷ್ಟ್ರೀಯ ಕಂಪೆನಿಗಳಿರುವ ಸಮಾಜದಲ್ಲಿನ ಪ್ರಜಾಪ್ರಭುತ್ವದ ರೀತಿಗಳು ಅವರ ಬಹು ಚರ್ಚಿತ ಕೃತಿ. ಇದಲ್ಲದೆ ಅವರು ಸಮಕಾಲೀನ ಭಾರತದ ರಾಜಕೀಯ ವಿದ್ಯಮಾನಗಳ ಬಗೆಗೆ 200ಕ್ಕೂ ಹೆಚ್ಚು ಲೇಖಗಳನ್ನು ದೇಶವಿದೇಶದ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಅಸಾಮಾನ್ಯ ಹಿಡಿತವಿರುವ ಯೋಗೇಂದ್ರ ಯಾದವರಿಗೆ ವೈರಿಗಳೂ ಕೂಡಾ ತಲೆದೂಗಿಸುವಂತೆ ಮಾತಾಡುವ ಶಕ್ತಿಯಿದೆ.
2011 ರಲ್ಲಿ ದೆಹಲಿಯಲ್ಲಿ ಕಾಣಿಸಿಕೊಂಡ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡ ಯಾದವ್ ಮುಂದೆ ಶೈಕಣಿಕ ಕ್ಷೇತ್ರದಿಂದ ಹೊರ ಬಂದು ಸಕ್ರಿಯ ರಾಜಕಾರಣದಲ್ಲಿ ಕ್ರಿಯಾಶೀಲರಾದರು.
ದೆಹಲಿ ಚುನಾವಣೆಯ ಸಂದರ್ಭದಲ್ಲಿ ಕೇಜ್ರಿವಾಲ್ ನೇತೃತ್ವದಲ್ಲಿ ನಡೆದ ಸುಮಾರು 110 ಗ್ರಾಮ ಸಭಾಗಳಲ್ಲಿ ಪಾಲ್ಗೊಂಡು ಜನರೊಡನೆ ನೇರ ಸಂಪರ್ಕ ಸಾಧಿಸಿದ್ದ ಯಾದವ್ ಅವರು ಆಪ್ ನ ಗೆಲುವಿಗೆ ಗಮನಾರ್ಹ ಕಾಣಿಕೆ ನೀಡಿದ್ದರು. ಚುನಾವಣೆಯ ಗೆಲುವಿನ ಆನಂತರ ರಾಜಕೀಯ ಮತಬೇಧಗಳಿಂದಾಗಿ ಆಪ್ ಅವರನ್ನು ಹೊರಹಾಕಿತು. ಇದೀಗ ಅವರು ಪ್ರಶಾಂತ್ ಭೂಷಣ್ ಅವರ ಜೊತೆ ಸೇರಿಕೊಂಡು ಸ್ವರಾಜ್ ಅಭಿಯಾನವನ್ನು ಆರಂಭಿಸಿ ಅದರ ಪ್ರಚಾರಕ್ಕಾಗಿ ದೇಶದಾದ್ಯಂತ ಪ್ರವಾಸ ಮಾಡುತ್ತಿದ್ದಾರೆ.
ಪ್ರೊ. ಯೋಗೇಂದ್ರ ಯಾದವ್ ಅವರು ದೇಶದ ಅತ್ಯುನ್ನತ ರಾಜಕೀಯ ಚಿಂತಕರಲ್ಲಿ ಒಬ್ಬರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಸಕ್ರಿಯ ರಾಜಕಾರಣದ ವಿಷಯಕ್ಕೆ ಬಂದಾಗ ಅವರು ಸ್ವಲ್ಪ ದುಡುಕಿದಂತೆ ಭಾಸವಾಗುತ್ತದೆ. ಆಪ್ ನ ಗೆಲುವಿಗೆ ಇಡೀ ದೆಹಲಿಯೇ ದುಡಿದಿದೆ. ಮುಖ್ಯವಾಗಿ ಇಲ್ಲಿನ ಮೂರೂ ವಿಶ್ವವಿದ್ಯಾಲಯಗಳ (ದೆಹಲಿ ವಿವಿ, ಜೆಎನ್‌ಯು ಮತ್ತು ಜಾಮಿಯಾ ಮಿಲಿಯಾ ವಿವಿ) ಸಾವಿರಾರು ವಿದ್ಯಾರ್ಥಿಗಳು ಚುನಾವಣಾ ಸಂದರ್ಭದಲ್ಲಿ ಸ್ವಯಂ ಸೇವಕರಾಗಿ ದುಡಿದಿದ್ದಾರೆ. ಚುನಾವಣೆಯ ದಿನ ಪ್ರತಿಯೊಂದು ಬೂತ್‌ಗಳಲ್ಲಿ ನಿಂತು ಕೆಲಸ ಮಾಡಿದವರು ಇಂಥ ಯುವಕರು. ಜೊತೆಗೆ ಆಪ್ ಹುಟ್ಟಿಕೊಂಡದ್ದೇ ದೆಹಲಿ ಕೇಂದ್ರಿತ ಚಿಂತನಾಕ್ರಮದಲ್ಲಿ. ಇದನ್ನು ದೇಶವ್ಯಾಪಿಗೊಳಿಸುವ ವಿಷಯದಲ್ಲಿ ಸಹಜವಾಗಿ ಭಿನ್ನಾಭಿಪ್ರಾಯಗಳಿದ್ದುವು. ದೆಹಲಿಯನ್ನು ಯಶಸ್ವಿಗೊಳಿಸಿ ಮುಂದಡಿಯಿಡೋಣ ಎಂದು ಕೇಜ್ರಿವಾಲ್ ವಾದಿಸಿದರೆ, ಇಲ್ಲ ಈ ವಿಜಯದ ಫಲವನ್ನು ವಿಸ್ತರಿಸಿಕೊಳ್ಳೋಣ ಎಂಬುದು ಯಾದವ್ ವಾದವಾಗಿತ್ತು. ಫಲವಾಗಿ 2015ರ ಚುನಾವಣೆಯಲ್ಲಿ ಆಪ್ ದೇಶದಾದ್ಯಂತ ಸ್ಪರ್ಧಿಸಿ ಹೀನಾಯವಾಗಿ ಸೋತಿತು. ಆಪ್ ನ ಬೂತ್ ಗಳಲ್ಲಿ ನಿಲ್ಲಲು ಜನಗಳೇ ಇರಲಿಲ್ಲ. ಸ್ವತಃ ಯೋಗೇಂದ್ರ ಯಾದವರೇ ಗುರ್ಗಾಂವ್ ನಿಂದ ಸ್ಪರ್ಧಿಸಿ ಠೇವಣಿ ಸಹಾ ಕಳಕೊಂಡರು.
ಇಷ್ಟೆಲ್ಲಾ ಆದರೂ ಯೋಗೇಂದ್ರ ಯಾದವರ ಹೃದಯ ಮಾತ್ರ ಪ್ರಜಾಪ್ರಭುತ್ವದ ಅತ್ಯುನ್ನತ ಮೌಲ್ಯಗಳಿಗಾಗಿ ತುಡಿಯುತ್ತಿದೆ ಎಂಬ ವಿಷಯದಲ್ಲಿ ಎರಡು ಮಾತಿಲ್ಲ. ಬಹು ಸಂಸ್ಕೃತಿಯ ಭಾರತ ದೇಶದಲ್ಲಿ ಪ್ರಜಾಪ್ರಭುತ್ವ ಹೇಗೆ ಕಾರ್ಯ ನಿರ್ವಹಿಸಬೇಕೆಂಬುದರ ಬಗ್ಗೆ ಅವರ ವಿಚಾರಗಳು ತುಂಬ ಮೌಲಿಕವಾಗಿವೆ.