ಕರಾವಳಿಗೆ ಕ್ರೈಸ್ತರ ಕೊಡುಗೆ

Update: 2016-01-28 14:55 GMT

1799 ರಲ್ಲಿ ಟಿಪ್ಪೂ ಸುಲ್ತಾನನು ಮಡಿದ ಆನಂತರ ಕರಾವಳಿಗೆ ಆಗಮಿಸಿದ ಕ್ರೈಸ್ತ ಮಿಶನರಿಗಳು ಕರಾವಳಿಯ ದಿಶೆಯನ್ನೇ ಬದಲಿಸಿದರು. ಅವರ ಆರಂಭಿಕ ಕೆಲಸಗಳು ಮತಾಂತರದ ಪರವಾಗಿದ್ದರೂ ಅವರ ಒಟ್ಟು ಚಟುವಟಿಕೆಗಳು ಕರಾವಳಿಯನ್ನು ಇಡೀ ದೇಶದ ಮುಂದುವರಿದ ಪ್ರದೇಶಗಳಲ್ಲಿ ಒಂದಾಗಿ ಪರಿವರ್ತಿಸಿದ್ದಲ್ಲದೆ ಅದಕ್ಕೆ ಅಂತಾರಾಷ್ಟ್ರೀಯ ಮಹತ್ವವನ್ನೂತಂದುಕೊಟ್ಟಿತು.

ಅವರು ಕನ್ನಡದ ಮೊದಲ ಪತ್ರಿಕೆ ಎಂದು ಖ್ಯಾತಿ ಪಡೆದ ‘ಮಂಗಳೂರು ಸಮಾಚಾರ’ ಪತ್ರಿಕೆಯನ್ನು ಆರಂಭಿಸಿ ಮೊದಲ ಬಾರಿಗೆ ಜ್ಞಾನವು ಎಲ್ಲರಿಗೂ ತಲುಪುವಂತೆ ಮಾಡಿದರು. ನಶಿಸಿ ಹೋಗುತ್ತಿದ್ದ ಅನೇಕ ಹಸ್ತಪ್ರತಿಗಳನ್ನು ಸಂಗ್ರಹಿಸಿ, ರಕ್ಷಿಸಿದ್ದಲ್ಲದೆ, ಅನೇಕವನ್ನು ಪ್ರಕಟಿಸಿ ಜನರಿಗೆ ತಲುಪಿಸಿದರು. ತುಳು ಪಾಡ್ದನಗಳ ಸಂಗ್ರಹ, ಕನ್ನಡಕ್ಕೊಂದು ನಿಘಂಟು..ಇತ್ಯಾದಿಗಳೆಲ್ಲ ಕ್ರೈಸ್ತ ವಿದ್ವಾಂಸರ ಕೆಲಸಗಳು. ರೈಲು ಮಾರ್ಗ ಮತ್ತು ರಸ್ತೆಗಳನ್ನು ನಿರ್ಮಿಸಿ ಕರಾವಳಿಯಾದ್ಯಂತ ಜನರು ಸುಲಭವಾಗಿ ಓಡಾಡುವಂತೆ ಮಾಡಿದರು. ಹಂಚಿನ ಕಾರ್ಖಾನೆಯೇ ಮೊದಲಾದ ಅನೇಕ ಕೈಗಾರಿಕೆಗಳನ್ನು ಸ್ಥಾಪಿಸಿ, ಜನರಿಗೆ ಕೆಲಸ ಕೊಡಿಸಿ, ಸಾಮಾನ್ಯ ಜನರ ಬದುಕನ್ನು ಸುಧಾರಿಸಿದರು.

ಎಲ್ಲದಕ್ಕಿಂತ ಮಿಗಿಲಾಗಿ ಕೆಲವೇ ಕೆಲವು ಜನರಿಗೆ ಸೀಮಿತವಾಗಿದ್ದ ವಿದ್ಯೆಯನ್ನು, ಅಲ್ಲಲ್ಲಿ ಶಾಲೆಗಳನ್ನು ತೆರೆದು ಎಲ್ಲರಿಗೂ ಹಂಚಿದರು. ಸಮಾಜದ ಎಲ್ಲ ವರ್ಗದ ಜನರಿಗೆ ವಿದ್ಯೆ ದೊರಕಬೇಕಾದರೆ ಕರಾವಳಿಯ ಜನರು ಕ್ರೈಸ್ತರು ಬರುವಲ್ಲಿವರೆಗೆ ಕಾಯಬೇಕಾಯಿತು. ಅವರು ಆರಂಭಿಸಿದ ಶಾಲೆಗಳಲ್ಲಿ ಮೊದಲ ಬಾರಿಗೆ ಮಹಿಳೆಯರು ಮತ್ತು ದಲಿತರು ಓದು ಕಲಿತರು ಎಂಬುದು ಸಣ್ಣ ಸಂಗತಿಯೇನಲ್ಲ. ಮಹಿಳೆಯರು ಮೇಲ್ವಸ್ತ್ರತೊಡಬಾರದೆಂಬ ನಿಷೇಧವಿದ್ದ ಕಡೆ ಅದನ್ನು ನಿಲ್ಲಿಸಿ, ಮಹಿಳೆಯರ ಮಾನ ಕಾಪಾಡುವ ಕೆಲಸವನ್ನೂ ಅವರು ಮಾಡಿದರು. ಜೊತೆಗೆ ನಮ್ಮಲ್ಲಿ ಪಾರಂಪರಿಕವಾಗಿ ದೊರೆಯುತ್ತಿದ್ದ ವಿದ್ಯೆಯೂ ಬಹುಮಟ್ಟಿಗೆ ಪರಾ ವಿದ್ಯೆಯಾಗಿದ್ದು ಲೌಕಿದ ಬಗೆಗಣ ನಮ್ಮ ತಿಳವಳಿಕೆಯನ್ನು ಹೆಚ್ಚಿಸುತ್ತಿರಲಿಲ್ಲ. ಕ್ರೈಸ್ತ ಮಿಶನರಿಗಳು ಚಾಲ್ತಿಗೆ ತಂದ ಅಪರಾ ವಿದ್ಯೆಯು ವಿಜ್ಞಾನ, ಸಮಾಜ ಶಾಸ್ತ್ರ, ಗಣಿತ ಮೊದಲಾದ ವಿಷಯಗಳನ್ನು ಒಳಗೊಂಡು ಕರಾವಳಿಯ ಪ್ರಗತಿಗೆ ನಾಂದಿ ಹಾಡಿತು.

ಮಿಶನರಿ ವೈದ್ಯರುಗಳು ಕರಾವಳಿಗೆ ಸಲ್ಲಿಸಿದ ಸೇವೆಯನ್ನು ನಾವು ಮರೆಯುವಂತಿಲ್ಲ. ಘೋರ ಅಸ್ಪೃಶ್ಯತೆಯನ್ನುಆಚರಿಸುತ್ತಿದ್ದ ಸಮಾಜದ ನಡುವೆ ನಿಂತು ದಲಿತರನ್ನು ಮುಟ್ಟಿ ಶುಶ್ರೂಷೆ ಮಾಡಿದ ಅಸಾಮಾನ್ಯ ಕೆಲಸ ಮಾಡಿದವರು ಅವರು. ಬಹುಶ: ಕ್ರೈಸ್ತರು ಬಾರದೇ ಹೋಗಿದ್ದರೆ ಇಂದಿನ ಕರಾವಳಿ ಈಗಣಿಗಿಂತ ಸುಮಾರು 200 ವರ್ಷ ಹಿಂದೆ ಇರುತ್ತಿತ್ತು.ಇದನ್ನುಅರ್ಥ ಮಾಡಿಕೊಳ್ಳದ ಜನರು ಕರಾವಳಿಯ ಸಮಾಜವನ್ನು ಮತ್ತೆ 300 ವರ್ಷ ಹಿಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ.

ಬನ್ನಿ, ಜನವರಿ 30 ರಂದು ಮಂಗಳೂರಿನಲ್ಲಿ ನಡೆಯಲಿರುವ ಸಹಬಾಳ್ವೆ ಸಾಗರದಲ್ಲಿ ಕರಾವಳಿಯನ್ನು ಪ್ರಗತಿಗಾಮಿಯಾಗಿಸಿದ ಜನರನ್ನುಗೌರವಿಸೋಣ.

Writer - ಡಾ. ಪುರುಷೋತ್ತಮ ಬಿಳಿಮಲೆ

contributor

Editor - ಡಾ. ಪುರುಷೋತ್ತಮ ಬಿಳಿಮಲೆ

contributor