ದೇಶದ ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ಕಳೆದುಕೊಂಡ ದೇಶಭಕ್ತ ಕಾರ್ನಾಡ್ ಸದಾಶಿವ ರಾಯರು

Update: 2016-01-28 14:58 GMT

ಬೆಂಗಳೂರಿನಲ್ಲಿ ಸದಾಶಿವ ನಗರ ಎಂಬ ಹೆಸರಿನ ಪ್ರದೇಶವನ್ನು ಕೇಳದವರಿರಲಿಕ್ಕಿಲ್ಲ. ಆದರೆ ಸ್ವಾತಂತ್ರ್ಯ ಹೋರಾಟಗಾರ ಕಾರ್ನಾಡ್ ಸದಾಶಿವ ರಾವ್ ಅವರ ನೆನಪಿನಲ್ಲಿ ಆ ಹೆಸರನ್ನು ಇಡಲಾಗಿದೆ ಎನ್ನುವುದು ಮಾತ್ರ ಅನೇಕರಿಗೆ ಗೊತ್ತಿರಲಿಕ್ಕಿಲ್ಲ (1960 ರಷ್ಟು ಹಿಂದೆಯೇ ಈ ಹೆಸರಿಡಲಾಯಿತು). ಈ ಕಾರ್ನಾಡ್ ಸದಾಶಿವ ರಾಯರು (1881-1937) ಮಂಗಳೂರಿನವರು.

ಮಂಗಳೂರಿನ ಆಢ್ಯ, ಶ್ರೀಮಂತ ವಕೀಲರ ಕಾರ್ನಾಡ್ ಸದಾಶಿವರಾಯರು, ಗಾಂಧೀಜಿಯವರ ಪ್ರಭಾವಕ್ಕೊಳಗಾಗಿ ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗಮಾಡಿದ ದೇಶಭಕ್ತ. 1923 ರ ನೆರೆಹಾವಳಿಯ ಸಂದರ್ಭ ಆರ್ತರಿಗೆ ಅನ್ನ, ಬಟ್ಟೆ, ಔಷಧಿ ಒದಗಿಸಿದವರು. ಬ್ರಹ್ಮ ಸಮಾಜ, ಹರಿಜನ ಸೇವೆ, ವಿಧವಾ ವಿವಾಹ, ಖಾದಿ ಮುಂತಾದವುಗಳಲ್ಲಿ ಶ್ರಮಿಸಿದವರು. ತಿಲಕವಿದ್ಯಾಲಯ, ಸಾಧಕಾಶ್ರಮಗಳನ್ನು ನಡೆಸಿದವರು. ಉಪ್ಪಿನ ಸತ್ಯಾಗ್ರಹ, ಸಿದ್ದಾಪುರದ ಪ್ರಸಿದ್ಧ ಕರನಿರಾಕರಣ ವಳುವಳಿಯಲ್ಲಿ ಭಾಗವಹಿಸಿದವರು.

ಸದಾಶಿವ ರಾಯರು ಓದಿದ್ದು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ. ಲಾ ಓದಿದ್ದು ಮುಂಬೈಯಲ್ಲಿ. ಮುಂದೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ರಾಯರು ಮುಲ್ಕಿ ಮಂಗಳೂರುಗಳಲ್ಲಿ ಹೋಂರೂಲ್ ಲೀಗಿನ ಚಟುವಟಿಕೆಗಳನ್ನು ಆರಂಭಿಸಿ  1917 ರಲ್ಲಿಯೇ, ‘ಈ ಘನ ಹೋರಾಟಕ್ಕೆ ತಾವು ನಮ್ಮ ನಾಯಕತ್ವ ವಹಿಸಿ ನಮಗೆ ಮಾರ್ಗದರ್ಶನ ನೀಡಬೇಕು’ ಎಂದು ಕೋರಿ ಗಾಂಧೀಜಿಗೆ ಪತ್ರ ಬರೆದಿದ್ದರು. 1919 ರಲ್ಲಿ ರೌಲಟ್ ಕಾಯಿದೆ ಪ್ರತಿಭಟನೆಯ ಕಾಲಕ್ಕೆ ಮುಂಬಯಿಗೆ ಹೋಗಿ ಸತ್ಯಾಗ್ರಹ ಪ್ರತಿಜ್ಞಾಪತ್ರಕ್ಕೆ ಸಹಿ ಹಾಕಿದ ಕರ್ನಾಟಕದ ಮೊದಲ ಸತ್ಯಾಗ್ರಹಿ ಇವರು. ಮುಂದೆ ಮಂಗಳೂರಿನಲ್ಲಿ ಈ ಸಂಬಂಧದ ಹರತಾಳದ ನೇತೃತ್ವವನ್ನೂ ವಹಿಸಿದರು. 1920 ರಲ್ಲಿ ಕಲ್ಕತ್ತಾ ಕಾಂಗ್ರೆಸ್ ನ ವಿಶೇಷಾಧಿವೇಶನಕ್ಕೆ ಹೋಗಿಬಂದರು. 1920 ರ ಡಿಸೆಂಬರ್ ನಲ್ಲಿ ನಾಗಪುರ ಕಾಂಗ್ರೆಸ್ ಅಧಿವೇಶನ ಅಸಹಕಾರದ ಅಧಿಕೃತ ನಿರ್ಣಯ ಕೈಗೊಂಡಾಗ ಅನೇಕರ ಜತೆಯಲ್ಲಿ ಕಾರ್ನಾಡರೂ ವಕೀಲಿ ವೃತ್ತಿ ತ್ಯಜಿಸಿದರು. 1930 ರ ಎಪ್ರಿಲ್ ನಲ್ಲಿ ಅಂಕೋಲ ದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಬಂಧನಕ್ಕೊಳಗಾದರು. 1934 ರಲ್ಲಿ ಮೂರನೆ ಬಾರಿ ವೈಯಕ್ತಿಕ ಸತ್ಯಾಗ್ರಹ ಮಾಡಿ ಕಾರ್ನಾಡರು ಬಂಧಿತರಾದರು. ಕಾಂಗ್ರೆಸ್ ಪಕ್ಷದ ಪ್ರಧಾನ ಸದಸ್ಯರಾಗಿದ್ದ ಇವರಿಂದಾಗಿ ಕರ್ನಾಟಕದಲ್ಲಿ ಪಕ್ಷ ವಿಸ್ತರಣೆಗೊಳ್ಳಲು ಸಾಧ್ಯವಾಯಿತು. 1936 ರಲ್ಲಿ ಅವರು ಫೈಝಾಪುರ ಕಾಂಗ್ರೆಸ್ ಅಧಿವೇಶನದಲ್ಲಿ ಪಾಲ್ಗೊಂಡರು. ಕೈಯಲ್ಲಿ ಬಿಡಿಗಾಸಿಲ್ಲದೆ ಅವರು ಸೋರುವ ಟೆಂಟಿನಲ್ಲಿ ಉಳಿದುಕೊಂಡಿದ್ದರು. ಪರಿಣಾಮವಾಗಿ ಶೀತ ಮತ್ತು ಜ್ವರದ ಬಾಧೆಗೊಳಗಾದರು. ಪರಿಸ್ಥತಿ ಚಿಂತಾಜನಕವಾಗಿದ್ದರೂ ಯಾರಿಗೂ ಹೇಳದೆ ಮುಂಬೈಗೆ ಪ್ರಯಾಣಿಸಿದರು. ಮಾರ್ಗಮಧ್ಯೆ 1937 ಜನವರಿ 9 ರಂದು ಅವರು ಮುಂಬೈಯಲ್ಲಿ ತೀರಿಕೊಂಡರು.

ಆಗರ್ಭ ಶ್ರೀಮಂತರಾಗಿದ್ದ ಕಾರ್ನಾಡರು ಸ್ವಾತಂತ್ರ್ಯ ಹೋರಾಟದಲ್ಲಿ ಸರ್ವಸ್ವವನ್ನೂ ಕಳೆದುಕೊಂಡು ಕೊನೆಗೆ ಅಂತ್ಯಸಂಸ್ಕಾರಕ್ಕೂ ಹಣವಿಲ್ಲದ ಪರಿಸ್ಥಿತಿ ತಲಪಿದ್ದರು. ಅವರ ಸ್ಮಶಾನಯಾತ್ರೆಯಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದರು. ಇದು ಅವರ ಜನಪ್ರಿಯತೆಯ ದ್ಯೋತಕವಾಗಿತ್ತು.  ಅವರ ಪತ್ನಿ ಶಾಂತಾಬಾಯಿ ಮಹಿಳಾ ಸಭೆಯ ಮೂಲಕ ಸಮಾಜಸೇವೆ ಸಲ್ಲಿಸಿದ್ದಾರೆ.

ಇಂತಹ ಅನೇಕ ಮಹಾನ್ ಚೇತನಗಳ ತ್ಯಾಗದಿಂದಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಎನ್ನುವುದನ್ನು ಮರೆಯದಿರೋಣ. ಕಾರ್ನಾಡರಂತಹ ದೇಶಭಕ್ತರಿಂದ ತ್ಯಾಗಜೀವಿಗಳಿಂದ ದಕ್ಷಿಣಕನ್ನಡ ಜಿಲ್ಲೆಗೆ ಹೆಸರು ಬಂತು. ಆ ಹೆಸರನ್ನು ಹಾಳುಮಾಡದಂತೆ ನೋಡಿಕೊಳ್ಳಬೇಕಾಗಿದೆ. ಸಹಬಾಳ್ವೆಯ ಸಾಗರ ಸಮಾವೇಶ ಸಂದರ್ಭದಲ್ಲಿ ಕಾರ್ನಾಡರ ತ್ಯಾಗವನ್ನೂ ಒಂದುಕ್ಷಣ ನೆನಪಿಸಿಕೊಳ್ಳೋಣ.

--------

Writer - ಶ್ರೀನಿವಾಸ ಕಾರ್ಕಳ

contributor

Editor - ಶ್ರೀನಿವಾಸ ಕಾರ್ಕಳ

contributor