ಬಹುತ್ವಗಳ ಸಹಬಾಳ್ವೆ ಭಾರತ ಪ್ರಜಾತಂತ್ರದ ಶಕ್ತಿ ಮತ್ತು ಸೌಂದರ್ಯ

Update: 2016-01-29 09:32 GMT

ಭಾರತಕ್ಕೆ ಬಹುತ್ವ ಮತ್ತು ಸಹಬಾಳ್ವೆ ಯಾಕೆ ಬೇಕು? ಇದರಿಂದ ಈ ದೇಶಕ್ಕೆ ಏನು ಲಾಭವಿದೆ? ಇವತ್ತು ಬಹುತ್ವ ಮತ್ತು ಆ ಬಹುತ್ವಗಳ ನಡುವಿನ ಸಹಬಾಳ್ವೆಗೆ ಒದಗಿರುವ ಆಪತ್ತು ಏನು? ಇದರಿಂದ ಉಂಟಾಗುವ ನಷ್ಟವೇನು? ಇವುಗಳು ಇಂದು ನಾವು ಕೇಳಿಕೊಳ್ಳಬೇಕಾದ ಬಹಳ ಮುಖ್ಯವಾದ ಪ್ರಶ್ನೆಗಳಾಗಿದೆ.

    

ಸಮಾನ ಸಂಸ್ಕೃತಿ, ಜನಾಂಗ, ಪರಂಪರೆ, ಭಾಷೆಯನ್ನು ಮಾತನಾಡುವವರು ಒಂದು ರಾಷ್ಟ್ರವಾಗಿ ಆಳಿಕೊಳ್ಳಬಹುದು ಎನ್ನುವ ರಾಷ್ಟ್ರ ಪರಿಕಲ್ಪನೆಯನ್ನು ನಾವು ಯುರೋಪ್‌ನಿಂದ ಪಡೆದುಕೊಂಡೆವು. ಆದರೆ, ಭಾರತದಲ್ಲಿ ಈ ರೀತಿಯಲ್ಲಿ ಏಕರೂಪದ ಒಂದೇ ಭಾಷೆ ಸಂಸ್ಕೃತಿ, ಜನಾಂಗ, ಜಾತಿ, ಪ್ರದೇಶಗಳ ಸ್ಥಿತಿಗತಿ ಇಲ್ಲ.

ಭಾರತ ಹಲವು ಜಾತಿ ಜನಾಂಗ ಭಾಷೆ ಸಂಸ್ಕೃತಿಗಳ ಒಂದು ಬಹುರೂಪಿ ದೇಶ. ಹೀಗಿದ್ದ ದೇಶವನ್ನು ಎಲ್ಲರೂ ಒಟ್ಟಿಗೆ ಒಂದಾಗಿ ಬದುಕುವ ರಾಷ್ಟ್ರವಾಗಿ ಕಟ್ಟಲು ನಮ್ಮ ರಾಷ್ಟ್ರೀಯ ಹೋರಾಟಗಾರರು ಅಪಾರವಾಗಿ ಶ್ರಮಿಸಿದರು. ಈ ತಮ್ಮ ಮಹತ್ವದ ಕೆಲಸದಲ್ಲಿ ಅವರು ಬಹುತ್ವವುಳ್ಳ ಭಾರತವನ್ನು ಸಹಬಾಳ್ವೆಯಲ್ಲಿ ಒಂದಾಗಿ ಬದುಕಲು ಸಾಧ್ಯವಿರುವ ರಾಷ್ಟ್ರವಾಗಿ ಕಲ್ಪಿಸಿದರು.

ಬಹುತ್ವವನ್ನು ನಂಬಿದ ಪ್ರೀತಿಸಿದ ಮತ್ತು ಅದೊಂದು ಸಮಸ್ಯೆಯೆಂದು ಭಾವಿಸದ ನಮ್ಮ ರಾಷ್ಟ್ರ ನಾಯಕರು ಭಾರತವನ್ನು ವೈವಿಧ್ಯತೆಗಳ ದೇಶ ಮಾತ್ರವಲ್ಲ ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸುವ ರಾಷ್ಟ್ರವಾಗಿ ಪರಿಕಲ್ಪಿಸಿದ್ದಾರೆ. ಹೀಗೆ ರೂಪುಗೊಂಡ ಭಾರತದಲ್ಲಿ ಪ್ರತಿಯೊಂದು ಜಾತಿ ಜನಾಂಗವೂ ಸಂಸ್ಕೃತಿಯೂ ಇದು ನನ್ನ ರಾಷ್ಟ್ರ ಎಂದು ಭಾವಿಸುತ್ತದೆ.

ರಾಷ್ಟ್ರ ಎನ್ನುವ ಆಳು ಕಲ್ಪನೆಯಲ್ಲಿ ಪ್ರತಿಯೊಂದು ಜನಾಂಗ ಸಂಸ್ಕೃತಿ ಭಾಷೆ ತನ್ನ ಸ್ಥಾನಮಾನವನ್ನು ನಿರೀಕ್ಷಿಸುತ್ತದೆ. ಮತ್ತು ತನ್ನ ಚರಿತ್ರೆ, ಸಂಸ್ಕೃತಿ ನಿರೂಪಣೆಯ ಮೂಲಕ ತಾನು ಒಂದು ರಾಷ್ಟ್ರ ಅಥವಾ ರಾಷ್ಟ್ರದ ಸಮಾನವಾದ ಭಾಗ ಎನ್ನವುದನ್ನು ಪ್ರತಿಪಾದಿಸುತ್ತದೆ. ಅಂದರೆ ಪ್ರಜಾತಂತ್ರದ ಗಣರಾಜ್ಯ ವ್ಯವಸ್ಥೆಯಲ್ಲಿ ಎಲ್ಲ ಜನಾಂಗ ಜಾತಿ ಭಾಷೆ ಸಂಸ್ಕೃತಿಗಳನ್ನು ಸಮಾನ ಸ್ಥಾನಮಾನ ಗೌರವಗಳಿಂದ ಕಂಡಾಗ ಮಾತ್ರ ಪ್ರತಿಯೊಂದು ಜನಾಂಗ ಶಾಂತಿಯಿಂದ ಇರುತ್ತದೆ.

ಇಲ್ಲಿನ ಜನಾಂಗ ಸಂಸ್ಕೃತಿಗಳ ನಡುವೆ ಶ್ರೇಷ್ಠ ಕನಿಷ್ಠ, ಸ್ವಮತ್ತು ಅನ್ಯಎನ್ನುವ ಭಾವನೆಯನ್ನು ತೋರದೆ ಸಹಬಾಳ್ವೆಗೆ ಅನುವು ಮಾಡಿಕೊಡಬೇಕಾದುದು ಅಗತ್ಯ. ಬಹುತ್ವವನ್ನು ಹೊಂದಿರುವ ಭಾರತವನ್ನು ರಾಷ್ಟ್ರದ ಅವಸ್ಥೆಗೆ ತರುವಾಗ ಇಲ್ಲಿದ್ದ ಜಾತೀಯ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಅಸಮಾನತೆಗಳನ್ನು ನಿವಾರಣೆ ಮಾಡುವ ನೆಲೆಯಲ್ಲಿ ಜಾತ್ಯಾತೀತೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಕಲ್ಪನೆಗಳನ್ನು ರಾಷ್ಟ್ರದ ಜೊತೆಗೆ ಬೆಸೆಯಲಾಯಿತು.

ಇದರಿಂದ ಬಹುತ್ವವನ್ನು ಸಮಾನವಾಗಿ ಕಾಣಬೇಕು ಮತ್ತು ಅವುಗಳ ನಡುವೆ ಅಸಮಾನತೆಯ ತರತಮವನ್ನು ಹೋಗಲಾಡಿಸಬೇಕು ಎನ್ನುವ ನಿಲುವುಗಳು ಒಡಮೂಡಿದವು. ಅದಕ್ಕೆ ಪೂರಕವಾದ ಕಾನೂನು, ಆರ್ಥಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸಬೇಕು ಎನ್ನುವ ನಿಲುವು ಕೂಡಾ ಬೆಳೆದುಬಂತು. ಬಹುತ್ವವನ್ನು ಉಳಿಸುವುದು ಎಂದರೆ ಬಹುಸಂಸ್ಕೃತಿಗಳನ್ನು ಗೌರವಿಸುವುದು ಎಂದು ಮಾತ್ರ ಅರ್ಥವಲ್ಲ, ಅವುಗಳ ನಡುವೆ ಸಮಾನತೆಯನ್ನು ಸಾಧಿಸಬೇಕು ಎನ್ನುವ ಅರ್ಥವೂ ಅಂತರ್ಗತವಾಗಿದೆ.

ಇದರಿಂದ ಭಾರತ ರಾಷ್ಟ್ರದಲ್ಲಿ ಎಲ್ಲ ಧರ್ಮ, ಸಂಸ್ಕೃತಿಗಳನ್ನು ಸಮಭಾವದಿಂದ ನೋಡುವ ದೃಷ್ಟಿಕೋನ ಬೆಳೆದುಬಂತು. ಮಾತ್ರವಲ್ಲ ಹಿಂದುಳಿಸಲ್ಪಟ್ಟ ಜನರನ್ನು ಮೇಲೆತ್ತುವ ಪ್ರಯತ್ನಗಳು ನಡೆದವು. ಈ ಕೆಲಸಗಳು ಬಹಳ ಸುಲಭದಲ್ಲಿ ಆಯಿತು ಎಂದು ಹೇಳುವಂತಿಲ್ಲ. ನಮ್ಮ ರಾಷ್ಟ್ರ ನಿರ್ಮಾತೃಗಳಾದ ಮಹಾತ್ಮ ಫುಲೆ, ಪೆರಿಯಾರ್, ನಾರಾಯಣ ಗುರು, ಗಾಂಧಿ, ಅಂಬೇಡ್ಕರ್, ಲೋಹಿಯಾ, ನೆಹರು ಮುಂತಾದವರು ಈ ದಿಸೆಯಲ್ಲಿ ಪ್ರಯತ್ನ ಪಟ್ಟರು.

ಇವರುಗಳಿಂದ ನಮ್ಮ ದೇಶದ ರಾಷ್ಟ್ರ ಪರಿಕಲ್ಪನೆಗೆ ಒಂದು ರೂಪ ಒಡಮೂಡಿತು, ಪ್ರಜಾತಂತ್ರದ ಕಲ್ಪನೆ ವಿಸ್ತಾರಗೊಂಡಿತು, ಬಹುತ್ವಗಳ ಅಗತ್ಯವನ್ನು ಅರಿಯುವಂತಾಯಿತು. ಇದರಿಂದಾಗಿ ಭಾರತದ ಕೆಳವರ್ಗದ ಶೂದ್ರರು ದಲಿತರು ಮಹಿಳೆಯರು ಸಾಮಾಜಿಕವಾಗಿ ಆರ್ಥಿಕವಾಗಿ ತಕ್ಕಮಟ್ಟಿಗೆ ಪ್ರಗತಿಯ ದಾರಿಯನ್ನು ತುಳಿಯುವಂತಾಯಿತು.

ಹಲವಾರು ಏರುಪೇರುಗಳ ನಡುವೆಯೂ ಭಾರತದ ಪ್ರಜಾತಂತ್ರ ರಾಷ್ಟ್ರದ ಸೌಂದರ್ಯ ಗೋಚರವಾಗತೊಡಗಿತು. ತುಳುನಾಡು ಕೂಡಾ ಜಾತಿಶ್ರೇಣಿಕೃತ ವ್ಯವಸ್ಥೆಯಾಗಿದ್ದು ಇಲ್ಲಿ ಹಲವಾರು ಶೋಷಿತ ಜಾತಿಗಳಿವೆ. ಇಲ್ಲಿ ಇರುವ ದೇವಾಡಿಗ, ಮಡಿವಾಳ, ಜೋಗಿ, ಮೊಗವೀರ, ಕುಂಬಾರ ಈ ಮುಂತಾದ ಜಾತಿಗಳು ಜನಸಂಖ್ಯೆಯಲ್ಲಾಗಲಿ ಅಥವಾ ಆರ್ಥಿಕವಾಗಿಯಾಗಲಿ ಪ್ರಬಲ ಜಾತಿಗಳಲ್ಲ. ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯಿಂದ ಈ ಜಾತಿಗಳಿಗೆ ಅನುಕೂಲವಾಗಿದೆ.

ಮಾತ್ರವಲ್ಲ ಭಾರತದ ಜಾತ್ಯಾತೀತ ಸಿದ್ಧಾಂತದಿಂದ ಈ ಎಲ್ಲ ಜಾತಿಗಳ ಶೋಷಣೆಯ ಸ್ತರವನ್ನು ಚರ್ಚಿಸಲು ಅವಕಾಶವಾಗಿದೆ. ಈಗಲೂ ಕೂಡಾ ತುಳುನಾಡಿನ ಈ ಕೆಲವು ಸಮುದಾಯಗಳ ಹಲವಾರು ಜನರು ಆಧುನಿಕ ನಾಗರಿಕ ಸಮಾಜದ ಫಲಾನುಭವಿಗಳಾಗುವ ಸಾಮರ್ಥ್ಯವನ್ನು ಗಳಿಸಿಕೊಳ್ಳಬೇಕಾಗಿದೆ.

ಮಾತ್ರವಲ್ಲ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಮತ್ತು ಸಾಂಸ್ಕೃತಿಕ ಗೌರವವನ್ನು ಗಳಿಸಿಕೊಳ್ಳಲು ಈ ಶೂದ್ರ ಸಮುದಾಯಗಳಿಗೆ ಬಹುತ್ವ ಮತ್ತು ಜಾತ್ಯಾತೀತ ಸಾಮಾಜಿಕ ನ್ಯಾಯದ ಸಿದ್ಧಾಂತದ ದಾರಿಯಲ್ಲಿ ಮುನ್ನಡೆಯುವ ಅಗತ್ಯವಿದೆ. ಅವುಗಳನ್ನು ಬಹುತ್ವದ ಸಿದ್ಧಾಂತದಡಿಯಲ್ಲಿ ಗುರುತಿಸಿದಾಗ ಏಕರೂಪದ ಸಿದ್ಧಾಂತದಿಂದ ಪ್ರಬಲರ ಜೊತೆಗೆ ಇವರನ್ನು ಒಂದೇ ಎಂದು ಗುರುತಿಸುವ ಅಪಾಯ ತಪ್ಪುತ್ತದೆ.

ತುಳುನಾಡಿನ ದಲಿತರು ಜನಸಂಖ್ಯೆಯಲ್ಲಿ ಸಣ್ಣ ಸಣ್ಣ ಜಾತಿಗಳಾಗಿದ್ದು ಬಹುತೇಕ ಭೂರಹಿತರಾಗಿದ್ದಾರೆ. ಪಂಬದ, ಪರವ, ನಲಿಕೆ, ಮುಂಡಾಲ, ಕೊರಗ, ಮನ್ಸ, ಬಾಕುಡ, ಮೇರ, ಬತ್ತಡ, ಗೊಡ್ಡ ಈ ಮುಂತಾದ ಜಾತಿಗಳು ಇಲ್ಲಿ ವಿವಿಧ ಕುಲಕಸುಬುಗಳನ್ನು ಮಾಡಿಕೊಂಡು ಬಂದಿರುವ ಜೊತೆಗೆ ಭೂಜಮೀನ್ದಾರರ ಮನೆಗಳಲ್ಲಿ ಹೊಲಗದ್ದೆಗಳಲ್ಲಿ ಕೆಲಸ ಮಾಡಿಕೊಂಡು ಬಂದಿದ್ದಾರೆ.

ಇವರು ಜೀತ ಪದ್ಧತಿಯಲ್ಲಿ ದುಡಿದವರು. ಆಧುನಿಕ ಶಿಕ್ಷಣದಿಂದ ಈ ಜನರು ಸಾಮಾಜಿಕವಾಗಿ ಸ್ವಲ್ಪ ಸುಧಾರಣೆ ಕಾಣುವಂತೆ ಆಯಿತು. ತಮ್ಮ ಸಾಂಪ್ರದಾಯಿಕ ಜೀತ ಮತ್ತು ಬಿಟ್ಟಿ ಚಾಕರಿಗಳಿಂದ ಕೆಲವರು ಬಿಡುಗಡೆ ಪಡೆದು ಆಧುನಿಕ ಉದ್ಯೋಗಗಳಿಗೆ ಸೇರಿಕೊಳ್ಳತೊಡಗಿದಾಗ ಅವರ ಅಸ್ಮಿತೆಗಳು ಗೋಚರವಾಗತೋಡಗಿತು.

ಶಿಕ್ಷಕ, ಬ್ಯಾಂಕ್, ಫ್ಯಾಕ್ಟರಿಗಳು, ಕೆಲವು ಸರಕಾರಿ ಹುದ್ದೆಗಳಲ್ಲಿ ಅವಕಾಶ ಪಡೆದರು. ಈ ಸಮುದಾಯಗಳು ತಮ್ಮ ಶೋಷಿತ ಸ್ಥಿತಿಯಿಂದ ಬಿಡಿಸಿಕೊಂಡು ತಮ್ಮ ಸ್ವತಂತ್ರ ಅಸ್ಮಿತೆಯನ್ನು ತೋರಿಸಲು ಈ ಬಹುತ್ವ ಮತ್ತು ಸಾಮಾಜಿಕ ನ್ಯಾಯ ಪ್ರತಿಪಾದನೆಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ತಕ್ಕಮಟ್ಟಿಗೆ ಸಾಧ್ಯವಾಯಿತು.

ಇದು ಅವರಿಗೆ ಮೊದಲ ಭಾರಿಗೆ ಕೊಂಚ ಸ್ವಾತಂತ್ರ್ಯದ ಅನುಭವವನ್ನು ನೀಡಿದವು. ತುಳುನಾಡಿನ ದೈವಿಕ ನಂಬಿಕೆ ಮತ್ತು ಆರಾದನಾ ಪರಂಪರೆ ಮೂಲತ ದುಡಿಮೆಯ ಮೂಲದ ಜನಪದೀಯ ಮತ್ತು ಆದಿವಾಸಿ ನೆಲೆಯಿಂದ ಹುಟ್ಟಿಕೊಂಡದ್ದು. ದ್ರಾವಿಡ ಮೂಲದ ಈ ದೈವರಾಧನೆ ಒಂದು ವಿಶಿಷ್ಟ ರೂಪ.

ಅದು ಜಾತಿ ವ್ಯವಸ್ಥೆಯನ್ನು ಪೋಷಿಸಿಕೊಂಡು ಬಂದಿದ್ದರೂ, ಅದರ ಆರಾಧನೆ ಕ್ರಮ, ಪರಿಕಲ್ಪನೆ ಮತ್ತು ಕಲಾತ್ಮಕತೆ ಒಂದು ಅವೈದಿಕ ನೆಲೆಯದ್ದಾಗಿದೆ. ಆಗಮ ಪರಂಪರೆಯಂತಲ್ಲದೇ ಇಲ್ಲಿ ಹುಟ್ಟುಪಡೆಯುವ ದೈವಗಳ ಕಲ್ಪನೆ ಹಿರಿಯರ ಅಥವ ಪಿತೃಗಳ ಆರಾಧನೆಯಿಂದ ಬಂದದ್ದು.

ಇಲ್ಲಿ ಮನುಷ್ಯ ಕಾಯ ಬಿಟ್ಟು ಮಯಕದ ದೈವವಾಗುತ್ತಾನೆ, ಪ್ರಾಣಿಗಳು, ಪ್ರಕೃತಿಗಳು ದೈವಗಳಾಗುತ್ತವೆ. ಆ ದೈವಗಳು ಮನುಷ್ಯನೊಂದಿಗೆ ಮತನಾಡುತ್ತವೆ. ದು:ಖ ದುಮ್ಮಾನಗಳನ್ನು ಆಲಿಸುತ್ತವೆ. ಆಭಯ ನೀಡುತ್ತವೆ. ಈ ಬಗೆಯ ಆರಾಧನಾ ಮತ್ತು ಕಲಾತ್ಮಕ ಪರಂಪರೆಯನ್ನು ಕಟ್ಟಿದವರು ಶೂದ್ರ ಮತ್ತು ದಲಿತರ ವರ್ಗದವರು. ಇಲ್ಲಿ ಜಾತಿಗೆ ಅನುಗುಣವಾಗಿ ದಲಿತರನ್ನು ಕೀಳಾಗಿಸುವ ನಂಬಿಕೆ, ಪದ್ಧತಿಗಳು ಬೆಳೆದುಬಂದರೂ ಇಲ್ಲಿನ ಭೂತಾರಾಧನೆಯ ವೇಷಭೂಷಣ, ನೃತ್ಯಗಳು ಆ ಜನವರ್ಗಗಳ ಪ್ರತಿಭಾ ಕೌಶಲ್ಯ ಮತ್ತು ಕಲಾತ್ಮಕ ಪ್ರಜ್ಞೆಗೆ ಸಾಕ್ಷಿಯಾಗಿವೆ.

ಜಾತ್ರೆ ಮತ್ತು ಕೋಲಗಳಲ್ಲಿ ತಯಾರಿಸುವ ತೆಂಗಿನ ಸಿರಿಯ ಅಣಿ ಪ್ರಭಾವಳಿ ಮತ್ತಿತರ ಹಲವಾರು ವಿವಿಧ ಬಗೆಯ ವಸ್ತುಗಳನ್ನು ಗಮನಿಸಬಹುದು. ಭೂತರಾಧನೆ ಮತ್ತು ಶ್ರಮದ ಸಂದರ್ಭಗಳಲ್ಲಿ ಹಾಡುವ ಪಾದ್ಡನಗಳು ಅವರ ಸಂಗೀತ ಪ್ರಜ್ಞೆಗೆ ಸಾಕ್ಷಿ. ಡೋಲು, ಕೊಲಲು, ತೆಂಬರೆ, ಚೆಂಡೆ, ತಾಸೆ ಮುಂತಾದ ವಾದ್ಯ ಪರಿಕರಗಳ ಸೃಷ್ಟಿ ಇಲ್ಲಿ ಶೂದ್ರ ಮತ್ತು ದಲಿತ ಜನವರ್ಗದ ಪ್ರತಿಭೆಯನ್ನು ನಮ್ಮ ಮುಂದಿಡುತ್ತವೆ. ಗಗ್ಗರ, ವಿವಿಧ ಬಗೆಯ ಮುಖವರ್ಣಿಕೆಗಳು ಅವರ ಪ್ರತಿಭೆಯ ಸೃಷ್ಟಿಯಾಗಿದೆ.

ಜಾತಿಯಿಂದ ಶೋಷಿತ ಜಾತಿಗಳು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಸಾಮಾಜಿಕ ನ್ಯಾಯವನ್ನು ಬೇಡುವ ಅವಕಾಶಗಳನ್ನು ಉಳಿಸಿಕೊಳ್ಳಬೇಕೇ? ಬೇಡವೇ? ತುಳುನಾಡಿನ ಅವೈಧಿಕ ಭೂತಾರಾಧನೆ ತನ್ನ ಸ್ವರೂಪದಲ್ಲಿ ಉಳಿಯಬೇಕೇ? ಬೇಡವೇ? ತುಳುನಾಡಿನಲ್ಲಿರುವ ಜಾನಪದೀಯ ಕಲಾತ್ಮಕ ವೇಷ, ನೃತ್ಯ, ವಾದ್ಯ ಪರಂಪರೆಗಳು ಉಳಿಯುವುದು ಬೇಡವೇ? ಅವುಗಳು ನಮ್ಮ ಜನರ ಸಮುದಾಯಗಳ ಸಾಂಸ್ಕೃತಿಕ ಅಸ್ತಿತ್ವ ಅಲ್ಲವೇ? ಅವುಗಳು ನಾಶವಾದರೆ ನಮ್ಮ ಅಸ್ತಿತ್ವವನ್ನು ನಾವೇ ಕಳೆದುಕೊಂಡಂತೆ ಅಲ್ಲವೇ? ಒಂದು ಸಮುದಾಯದ ನಾಶವೆಂದರೆ ಅದರ ಸಂಸ್ಕೃತಿಯ ನಾಶ ಅಲ್ಲವೇ? ಶೋಷಿತ ಸಮುದಾಯಗಳ ಬಗ್ಗೆ ಹೋರಾಟ ಮತ್ತು ಚಿಂತನೆಗಳನ್ನು ನಡೆಸಿದ ಫುಲೆ ಪೆರಿಯಾರ್ ಅಂಬೇಡ್ಕರ್ ಈ ಮುಂತಾದವರು ಒಂದು ಜನಾಂಗದ ನಾಶವೆಂದರೆ ಒಂದು ಸಂಸ್ಕೃತಿಯ ನಾಶವೆಂದು ಹೇಳಿದ್ದಾರೆ.

ಒಂದು ಜನಾಂಗ ಎದ್ದು ನಿಲ್ಲಬೇಕಾದರೆ ಆ ಜನಾಂಗಕ್ಕೆ ಸಾಂಸ್ಕೃತಿಕ ಸ್ವಾಭಿಮಾನ ಬೇಕು ಎಂದಿದ್ದಾರೆ. ಇಂದು ತುಳುನಾಡಿನ ಜನರು ಸಂಸ್ಕೃತಾನುಕರಣ ಪ್ರಕ್ರಿಯೆಗೆ ಒಳಗಾಗುತ್ತಿದ್ದಾರೆ. ಈ ಜನರ ಮಧ್ಯೆ ಸಂಸ್ಕೃತ ಪರಂಪರೆಯ ಪಠ್ಯಗಳನ್ನು ಪರಿಚಯಿಸುವ ಕೆಲಸಗಳು ನಡೆಯುತಿವೆ. ಶ್ಲೋಕ ಬೋಧಿಸುವುದು ಮತ್ತು ಉಚ್ಚರಿಸುವುದು, ವೈದಿಕ ಕಟ್ಟುಪಾಡುಗಳನ್ನು ಅಳವಡಿಸಿಕೊಳ್ಳುವುದು, ಶುದ್ಧಾಚಾರವನ್ನು ಅನುಸರಿಸುವುದು, ಮಾಂಸಾಹಾರವನ್ನು ತ್ಯಜಿಸುವುದು ಈ ಮುಂತಾದ ನಡಾವಳಿಕೆಗಳು ಕಂಡುಬರುತ್ತಿವೆ. ದೈವಸ್ಥಾನಗಳಲ್ಲಿ ಬ್ರಹ್ಮಕಳಸಗಳ ಮೂಲಕ ದೈವವನ್ನ ಪ್ರತಿಷ್ಠಾಪಿಸುವುದು ಮತ್ತು ಓಂ ಸಂಕೇತದ ಬಳಕೆ, ಭೂತಗಳ ಹೆಸರುಗಳನ್ನು ಸಂಸ್ಕೃತೀಕರಿಸುವುದು, ದೈವಸ್ಥಾನಗಳಲ್ಲಿ ಭಗವಧ್ವಜಗಳನ್ನು ಹಾಕುವುದು ಕಂಡುಬರುತಿದೆ.

ಭೂತಾರಾಧನೆಯಲ್ಲಿ ಭಾಗವಹಿಸುವವರು ಮತ್ತು ದೈವದ ಕೆಲಸ ಮಾಡುವವರು ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸುವುದು. ಈ ಎಲ್ಲಾ ಪ್ರಕ್ರಿಯೆಗಳು ಅವೈದಿಕ ಆದಿವಾಸಿ ಮೂಲದ ದ್ರಾವಿಡ ಸಂಸ್ಕೃತಿಯನ್ನು ಹಿಂದುಕರಿಸುವುದಾಗಿದೆ. ಮುಖ್ಯವಾಗಿ ಶಿವನ ಗಣಗಳೆಂದು ಭಾವಿಸಲಾದ ದೈವಗಳನ್ನು ಶಿವನ ವೈದಿಕ ಮೂಲದ ಕಥನಗಳಿಗೆ ಜೋಡಿಸುವುದು.

ಇದು ಒಟ್ಟಾರೆಯಾಗಿ ತುಳುನಾಡಿನ ಬಂಟ ಸಮುದಾಯದಿಂಧ ಹಿಡಿದು ಎಲ್ಲಾ ಸಮುದಾಯಗಳ ಮೂಲ ಸಂಸ್ಕೃತಿಯನ್ನು ವೈದಿಕಕ್ಕೆ ಮತಾಂತರಿಸುವ ಪ್ರಕ್ರಿಯೆಯಾಗಿದೆ. ಭಿನ್ನ ಮತಧರ್ಮಗಳಿಂದ ತೊಂದರೆಯಾಗುತ್ತಿದೆಯೆನ್ನುವವರು ಇನ್ನೊಂದು ಕಡೆಗೆ ಬಹಳ ಉಪಾಯದಿಂದ ತು ಳುವರನ್ನು ಒಂದೇ ಹಿಂದು ಧರ್ಮಕ್ಕೆ ಮತಾಂತರಿಸುತ್ತಿರುವ ಕೆಲಸ ಮಾಡುತ್ತಿರುವುದನ್ನು ಗಮನಿಸಬೇಕು.

 ಈ ಚಾಣಾಕ್ಷತನದ ಸಾಂಸ್ಕೃತಿಕ ರಾಜಕಾರಣದ ಒಳಗನ್ನು ನಾವು ಗಮನಿಸಬೇಕು. ಇದರಿಂದ ಭಾರತದ ಪ್ರಜಾತಂತ್ರದಲ್ಲಿ ಏಳಿಗೆಯ ದಾರಿಯನ್ನು ಕಂಡುಕೊಳ್ಳಬಯಸುವವರಿಗೆ ಎರಡು ತೊಂದರೆಗಳಿವೆ: 1. ತಮ್ಮ ವಿಭಿನ್ನವಾದ ಸಂಸ್ಕೃತಿ, ಪರಂಪರೆಯನ್ನು ಕಳಕೊಳ್ಳುವ ಮೂಲಕ ತಮ್ಮ ಸ್ವವನ್ನು ಕಳಕೊಳ್ಳುತ್ತಾರೆ. 2. ಜಾತ್ಯಾತೀತ ರಾಷ್ಟ್ರ ಪರಿಕಲ್ಪನೆಯ ಜೊತೆಗಿರುವ ಜಾತಿ ವರ್ಗ ಅಸಮಾನತೆಗಳನ್ನು ಹೋಗಲಾಡಿಸಲಿರುವ ಸಂವಾದಗಳು ಶಕ್ತಿಯನ್ನು ಕಳೆದುಕೊಳ್ಳುತ್ತವೆ.

ಹಾಗಾಗಿ ಇದರಿಂದ ಜನರ ಶಕ್ತಿ ಕುಂಟಿತವಾಗುತ್ತದೆ. ಹಾಗಾಗಿಯೇ ಹಿಂದುತ್ವ ಶಕ್ತಿಗಳು ಅಧಿಕಾರಕ್ಕೆ ಬಂದಾಗ ಅಭಿವೃದ್ಧಿಯನ್ನು ಸಾಮಾಜಿಕ ನ್ಯಾಯದ ನೆಲೆಯಲ್ಲಿ ವಿವರಿಸಿಕೊಳ್ಳುವುದಿಲ್ಲ. ಜಾಗತೀಕರಣ, ಉದಾರಿಕರಣ, ಖಾಸಾಗೀಕರಣ ನೆಲೆಗಟ್ಟಿನ ಅಭಿವೃದ್ಧಿಗೂ ಸಾಂಸ್ಕೃತಿಕ ರಾಜಕಾರಣಕ್ಕೂ ಇರುವ ನಂಟನ್ನು ಗಮನಿಸಬಹುದು.


ಹಾಗಾಗಿ ಕೋಮುವಾದ ಮತ್ತು ಮೂಲಭೂತವಾದಗಳು ನಮ್ಮ ಬಹುತ್ವ ಸಹಬಾಳ್ವೆ ಜಾತ್ಯಾತೀತತೆ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಪ್ರಜಾತಾಂತ್ರಿಕ ಚರ್ಚೆಗಳಿಗೆ ದೊಡ್ಡ ಬಿಕ್ಕಟನ್ನು ಉಂಟುಮಾಡುವುದರಿಂದ ಅದರ ಬಗ್ಗೆ ಜನರು ಜಾಗೃತರಾಗಬೇಕು. ಈ ಯಾವುದೇ ಉದ್ವೇಗಗಳಿಗೆ ಬಲಿಬೀಳದೆ ನಮ್ಮ ಚಿಂತನೆಗಳನ್ನು ನಮ್ಮ ವಾಸ್ತವ ಸಮಸ್ಯೆಗಳ ಆಧಾರದಲ್ಲಿ ಮಾಡಬೇಕು. ಯಾವುದೇ ಜನರು ಉದ್ರೇಕಕಾರಿ ಚಿಂತನೆಗಳಿಗೆ ಒಳಗಾಗಿ ತಮ್ಮ ಬದುಕನ್ನು ವಿಛಿದ್ರಕಾರಿ ಶಕ್ತಿಗಳ ಕೈಗೆ ಕೊಟ್ಟು ಬಲಿಪಶುಗಳಾಗಬಾರದು.
  
  
ಮೇಲೆ ಗುರುತಿಸಿದ ಧಾರ್ಮಿಕ ರಾಜಕಾರಣದಿಂದ ಜನಸಮುದಾಯಗಳು ತಮ್ಮ ಸಾಮಾಜಿಕ ನ್ಯಾಯದ ಅವಕಾಶವನ್ನು ಕುಂಟಿತಗೊಳಿಸಿಕೊಳ್ಳುತ್ತವೆ. ಮತ್ತು ತಮ್ಮ ಬಹುರೂಪಿ ಸಂಸ್ಕೃತಿಯನ್ನು ನಾಶಪಡಿಸಿಕೊಳ್ಳುತ್ತವೆ. ಬಹುತ್ವ ಮತ್ತು ಸಹಬಾಳ್ವೆಯ ಬದುಕಿನಲ್ಲಿ ಈ ಕಲಾತ್ಮಕ ಸೃಷ್ಟಿಗಳು ಹಾಗೆ ಬದುಕುತ್ತವೆ.

ಭೂತಾರಾಧನೆ ಹಿಂದುಧರ್ಮವಲ್ಲ. ಇದನ್ನು ಧರ್ಮ ಎನ್ನುವ ಚೌಕಟ್ಟಿನಲ್ಲಿ ನೋಡಲು ಸಾಧ್ಯವಿಲ್ಲ. ಇವುಗಳು ಮಣ್ಣಿನಲ್ಲಿ ಬದುಕು ಸಾಗಿಸಿಕೊಂಡು ಬಂದ ಜನ ಪ್ರಕೃತಿ ಮತ್ತು ತಮ್ಮ ನಡುವೆ ಕಟ್ಟಿಕೊಂಡ ಆರಾಧನಾ ಲೋಕಗಳು. ಇವುಗಳನ್ನು ಹಿಂದುತ್ವದಲ್ಲಿ ಏಕರೂಪಗೊಳಿಸಿದರೆ ಆ ವಿಶಿಷ್ಟ ನಂಬಿಕೆಯ ಲೋಕ ಮತ್ತು ಕಲಾತ್ಮಕ ಸೃಷ್ಟಿ ತನ್ನ ಸ್ವರೂಪದಲ್ಲಿ ಉಳಿಯಲು ಸಾಧ್ಯವೇ? ಇದನ್ನೆಲ್ಲಾ ಏಕಾಕಾರಗೊಳಿಸಲು ಸಾಧ್ಯವೇ? ಹಿಂದುತ್ವದಲ್ಲಿ ಗುರುತಿಸಿಕೊಳ್ಳಬಯಸುವ ಜನರು ತಮ್ಮ ಸ್ವದ ಸಾಂಸ್ಕೃತಿಕ ಗುರುತನ್ನು ಕೈಬಿಡಲು ತಯಾರಿದ್ದಾರೆಯೇ? ತಮ್ಮ ಸ್ವಂತಿಕೆ ಉಳಿಯಬೇಕಾದರೆ ಬಹುರೂಪಿ ಸಮಾಜ ಉಳಿಯಬೇಕಲ್ಲವೇ? ಪ್ರಬಲ ಸಮುದಾಯಗಳು ತಮ್ಮ ಅಧಿಕಾರ, ಸ್ಥಾನಮಾನವನ್ನು ಮರುಗಳಿಸಿಕೊಳ್ಳುವ, ಗಟ್ಟಿಗೊಳಿಸಿಕೊಳ್ಳುವ ಉದೇಶದಿಂದ ಇಂಥ ರಾಜಕಾರಣವನ್ನು ಸೃಷ್ಟಿಸುತ್ತವೆ.

ಹಾಗಾಗಿ ಇಂಥ ರಾಜಕಾರಣದಲ್ಲಿ, ರಾಜಕಾರಣದ ಕಾರಣಗಳನ್ನು ನೇರವಾಗಿ ಹೇಳಿಕೊಳ್ಳುವುದಿಲ್ಲ. ಇದರಿಂದಲೇ ಹಸಿವು, ಬಡತನ, ಜಾತಿ, ಲಿಂಗಬೇಧ, ವಸತಿ, ಅನಾರೋಗ್ಯ, ಶಿಕ್ಷಣ ಈ ಮುಂತಾದ ಚರ್ಚಿಸಬೇಕಾದ ವಿಚಾರಗಳನ್ನು ಬಿಟ್ಟು ಧರ್ಮದ ವಿಷಯ ಮುಖ್ಯವಾಗುತ್ತದೆ. ಇದನ್ನು ಸಾಂಸ್ಕೃತಿಕ ರಾಜಕಾರಣವೆಂದು ವಿದ್ವಾಂಸರು ಗುರುತಿಸಿದ್ದಾರೆ. ಇಲ್ಲಿ ಹಸಿವು ಕಷ್ಟಗಳ ಬದಲು ಧರ್ಮ ಮುಖ್ಯವಾಗುತ್ತದೆ. ಅಸಮಾನತೆಗಳ ಬದಲಿಗೆ ಏಕಸಂಸ್ಕೃತಿಮಾತ್ರ ಮುಖ್ಯವಾಗುತ್ತದೆ.

ಜನರನ್ನು ಧಾರ್ಮಿಕ ಪ್ರಚೋಧನೆಯಿಂದ ಒಳಗೊಳ್ಳುವುದರಿಂದ ಮತ್ತು ಜನರ ಕಷ್ಟ, ಅಸಹಾಯಕತೆಗಳಿಗೆ ಪ್ರಭುತ್ವ ಮಿಡಯದೇ ಹೋಗುವುದರಿಂದ ಇಂಥ ರಾಜಕಾರಣಗಳಲ್ಲಿ ಜನರು ದಾರುಣತೆಯನ್ನು ಅನುಭವಿಸುತ್ತಾರೆ. ಹಾಗಾಗಿ ಬಹುರೂಪಿ ಜನ ಸಂಸ್ಕೃತಿಗಳು ಮತ್ತು ಅವುಗಳ ನಡುವೆ ಸಹಬಾಳ್ವೆಯ ಬದುಕು ಈ ರಾಷ್ಟ್ರಕ್ಕೆ ಬಹಳ ಅಗತ್ಯ. ಇದು ನಷ್ಟವಾದರೆ ಭಾರತ ಉಳಿಲಾರದು. ಈ ದಿಸೆಯಲ್ಲಿ ಸಹಬಾಳ್ವೆಯ ಸಾಗರ ಜನಸಮಾವೇಶವನ್ನು ಬೆಂಬಲಿಸೋಣ.

Writer - ಡಾ. ವಾಸುದೇವ ಬೆಳ್ಳೆ

contributor

Editor - ಡಾ. ವಾಸುದೇವ ಬೆಳ್ಳೆ

contributor