ಧಾರ್ಮಿಕ ಶೋಷಣೆ ತಪ್ಪಿಸಲು ವೈಚಾರಿಕ ಸಬಲೀಕರಣ ಅಗತ್ಯ:ಚಂಪಾ

Update: 2016-01-30 10:34 GMT

ಮಂಗಳೂರು: ಧಾರ್ಮಿಕ ಶೋಷಣೆ ತಪ್ಪಿಸಲು ಜನರನ್ನು ಭೌದ್ದಿಕವಾಗಿ, ವೈಚಾರಿಕವಾಗಿ ಸಬಲೀಕರಣ ಮಾಡಲು ಪ್ರಯತ್ನಿಸಬೇಕು ಎಂದು ಸಾಹಿತಿ ಚಂದ್ರಶೇಖರ್ ಪಾಟೀಲ್ ಹೇಳಿದರು.


    ಕರ್ನಾಟಕ ಕೋಮು ಸೌಹಾರ್ದ ವೇದಿಕೆಯಿಂದ ನಗರದ ಪುರಭವನದಲ್ಲಿ ನಡೆದ ಸಹಬಾಳ್ವೆ ಸಾಗರ ಕಾರ್ಯಕ್ರಮದಲ್ಲಿ ನಾರಾಯಣ ಗುರು ವೇದಿಕೆಯಲ್ಲಿ ಜಾತ್ಯಾತೀತ ಸಮಾಜ- ಧಾರ್ಮಿಕ ಸಹಬಾಳ್ವೆ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.ಧರ್ಮದ ಹೆಸರಿನಲ್ಲಿ ಜನರಿಗೆ ಮೋಸ ಮಾಡುವುದು ಗೊತ್ತಿದ್ದರೂ ನಾವು ಯಾಕೆ ಮೋಸ ಹೋಗಬೇಕು ಎಂಬ ಚಿಂತನೆ ನಡೆಸಬೇಕು. ಎಂದು ಹೇಳಿದರು.


ಜನರನ್ನು ಮೋಸ ಮಾಡುತ್ತಿರುವ ಧರ್ಮದ ಉಸಾಬರಿಗೆ ಹೋಗುವುದು ವ್ಯರ್ಥ ಕಾಲಹರಣ . ಇಡೀ ಜಗತ್ತು ನಾಸ್ತಿಕಮಾರ್ಗ, ಬುದ್ದನ ಮಾರ್ಗದತ್ತ ಒಲವು ತೋರಿಸುತ್ತಿರುವಾಗ ಅದನ್ನು ನಮ್ಮ ಬುದ್ದಿಶಕ್ತಿ ಉಪಯೋಗಿಸಿ ಸರ್ವಜನಾಂಗದ ಶಾತಿಯ ಬೀಡು ಕಟ್ಟಲು ಶ್ರಮಿಸಬೇಕಾಗಿದೆ ಎಂದು ಹೇಳಿದರು.


 ಹಿಂದೆ ಜಾತ್ಯಾತೀತರ ಮೂಲವೈರಿಗಳು ಸಾಹಿತ್ಯ, ಧರ್ಮಗ್ರಂಥದ ಮೂಲಕ ಸಮರ ಸಾರುತ್ತಿದ್ದರೆ ಪ್ರಸಕ್ತ ಆ ಶಕ್ತಿಗಳು ಪ್ರಭುತ್ವದ ಶಕ್ತಿ ಪಡೆದುಕೊಂಡು ದೈತ್ಯಾಕಾರವಾಗಿ ನೃತ್ಯ ಮಾಡುತ್ತಿದೆ. ಇದನ್ನು ಎದುರಿಸಲು ಕ್ರೀಯಾಶೀಲರಾಗಿ ಹೋರಾಟ ಮುಂದುವರಿಸಬೇಕು . ನಿರಂತರ ಕ್ರೀಯಾಶೀಲತೆ ಹೋರಾಟಗಾರರಲ್ಲಿ ಇರಬೇಕು ಎಂದು ಹೇಳಿದರು.


     ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹೊಸದುರ್ಗದ ಸಾಣೆಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ ಮಾತನಾಡಿ ದೇವಸ್ಥಾನ, ಮಸೀದಿ, ಮಂದಿರಗಳು ಸೌಹಾರ್ದ ಕದಡುವ ಕೇಂದ್ರವಾಗಿದ್ದು ಪ್ರಸಕ್ತ ತಳಬುಡವಿಲ್ಲದೆ ಆಸ್ತಿಕಪಂಥ ಬೆಳೆಯುತ್ತಿದೆ. ದೇವಾಲಯ, ಮಸಿದಿ ಚರ್ಚುಗಳಿಗಿಂತ ಇಂದು ಶೌಚಾಲಯಗಳು ಕಟ್ಟುವುದು ಶ್ರೇಷ್ಠ ಕೆಲಸ. ಆದರೆ ಆರೋಗ್ಯದ ದೃಷ್ಟಿಯಿಂದ ಬೇಕಾದ ಶೌಚಾಲಯ ಕಟ್ಟಲು ಯಾರು ಮುಂದೆ ಬರುತ್ತಿಲ್ಲ ಎಂದು ಹೇಳಿದರು.


 ಧಾರ್ಮಿಕ ವರ್ಗದಲ್ಲಿರುವವರು ಮತ್ತು ರಾಜಕೀಯ ಕ್ಷೇತ್ರದಲ್ಲಿರುವವರು ಇಂದು ಜಾತೀಯ ವರ್ಗವನ್ನು ಬೆಳೆಸುತ್ತಿದ್ದಾರೆ. ಧರ್ಮ ಎನ್ನುವುದು ಸೂಜಿಯ ಹಾಗೆ ಹೊಲಿಯುವ ಕೆಲಸ ಮಾಡುತ್ತದೆ ಜಾತಿ ಎನ್ನುವುದು ವಿಭಜಿಸುವ ರೀತಿಯಲ್ಲಿ ಕತ್ತರಿಯ ಕೆಲಸ ಮಾಡುತ್ತಿದೆ ಎಂಬ ಅಭಿಪ್ರಾಯವಿತ್ತು. ಆದರ ಇಂದು ಜಾತಿ, ಧರ್ಮದ ನಡುವೆ ಅಂತರವಿಲ್ಲ. ಎರಡು ಕೂಡ ಕತ್ತರಿಯ ಕೆಲಸ ಮಾಡುತ್ತಿದೆ ಎಂದು ಹೇಳಿದರು.


 ನಾವುಗಳು ಯೋಚನಾ ಸಾಮರ್ಥ್ಯ ಕಳೆದುಕೊಂಡಿರುವುದರಿಂದ , ಬದುಕಿನಲ್ಲಿ ಬದ್ದತೆ ಇಲ್ಲದಿರುವುದರಿಂದ ಇವತ್ತು ಜಾತೀ ವಿಜೃಂಭಿಸುತ್ತಿದೆ.ಸಹಬಾಳ್ವೆ ಕಳೆದುಹೋಗುತ್ತಿದೆ. ಮಾನವನು ಮೃಗದ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾನೆ ಎಂದು ಹೇಳಿದರು.


  ಕಾರ್ಯಕ್ರಮದಲ್ಲಿ ಮಾತನಾಡಿದ ಚೊಕ್ಕಬೆಟ್ಟು ಕೃಷ್ಣಾಪುರದ ಧರ್ಮಗುರು ವೌಲನಾ ಅಬ್ದುಲ್ ಅಜೀಜ್ ದಾರಿಮಿ ಮಸೀದಿ ಮಂದಿರಗಳಲ್ಲಿ ಹಿಂದಿನಿಂದಲೂ ಸಹಬಾಳ್ವೆ ಇತ್ತು. ಆದರೆ ಧರ್ಮವು ರಾಜಕೀಯ ಉದ್ದೇಶಕ್ಕೆ ಬಳಸಲ್ಪಟ್ಟ ನಂತರ ಜಾತಿ ವೈಷಮ್ಯ, ಸಂಘರ್ಷ ಜಾಸ್ತಿಯಾಗಿದೆ. ಬ್ರಿಟಿಷರು ಭಾರತೀಯರನ್ನು ಹಿಂದು ಮುಸ್ಲಿಂ ವಿಭಜಿಸಲು ಪ್ರಯತ್ನಿಸಿದರು ಹಿಂದು ಮುಸ್ಲಿಂರು ಅದನ್ನು ಒಟ್ಟಾಗಿ ಎದುರಿಸಿದರು. ಭಾರತ ವಿಭಜನೆಯಾದ ನಡೆದ ಸಂಘರ್ಷಗಳನ್ನು ಮೆಟ್ಟಿ ನಿಲ್ಲಲು ಸಾಧ್ಯವಾಯಿತು. ಆದರೆ ಧರ್ಮವನ್ನು ರಾಜಕೀಯ ಉದ್ದೇಶಕ್ಕೆ ಬಳಸಿದ ನಂತರ ಸಹಬಾಳ್ವೆ ಕದಡಿದೆ ಎಂದು ಹೇಳಿದರು.

  ನಮ್ಮ ದೇಶದಲ್ಲಿ ಹಿಂದು ಮುಸ್ಲಿಂರು ಸಂಕಟ ಬಂದಾಗ ಒಂದಾಗುತ್ತಾರೆ. ಆದರೆ ಸಂತಸದಲ್ಲಿರುವ ಸಂದರ್ಭದಲ್ಲಿಯೂ ಒಂದಾಗಬೇಕು ಎಂದು ಹೇಳಿದರು.
  ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾತದ ಧರ್ಮಗುರು ಫಾ.ವಿಲಿಯಂ ಮಾರ್ಟಿಸ್ ಅವರು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ರೆ.ಫಾ. ಅಲೋಶಿಯಸ್ ಡಿಸೋಜ ಅವರ ಸಂದೇಶವನ್ನು ವಾಚಿಸಿದರು.


  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಪ್ರಸಕ್ತ ಹಾದಿಬೀದಿಗಳಲ್ಲಿ ದೇವಸ್ಥಾನಗಳು ಹೆಚ್ಚಾಗಿದೆ. ಜನರ ಮನಸ್ಸಿನಲ್ಲಿರುವ ವೌಢ್ಯವನ್ನು ಬದಲಾಯಿಸಲು ಪ್ರಯತ್ನಿಸಬೇಕು. ಒಳ್ಳೆಯದಕ್ಕೆಂದು ಸ್ಥಾಪನೆಯಾದ ಧರ್ಮ ಇಂದು ವ್ಯಾಪಾರಿಕರಣಗೊಂಡಿದೆ ಎಂದು ಅಭಿಪ್ರಾಯಿಸಿದರು.


 ಕಾರ್ಯಕ್ರಮದಲ್ಲಿ ಎಂ. ಆರ್.ಬೇರಿ, ರಾಯಚೂರು, ಮಾನವ ಬಂಧುತ್ವ ವೇದಿಕೆಯ ವಿಲ್ಪ್ರೆಡ್ ಡಿಸೋಜ, ಕರಿಯಪ್ಪ ಗುಡಿಮನೆ ಬಳ್ಳಾರಿ, ದಾನಪ್ಪ ಸಿ.ನಿಲೋಗಲ್, ರಾಯಚೂರು, ಅನೀಸ್ ಪಾಷಾ ದಾವಣಗೆರೆ, ಕೆ.ರಮೇಶ್ ಅಂಕೋಲ, ಪ್ರೊ.ಶಿವರಾಮಯ್ಯ ಬೆಂಗಳೂರು, ಕೆ.ಆರ್.ವಿದ್ಯಾಧರ್,ಮಡಿಕೇರಿ, ಇಸ್ಮಾಯಿಲ್ ದೊಡ್ಡಮನಿ, ದಾವಣಗೆರೆ,ಜೆ.ಎಂ.ವೀರಸಂಗಯ್ಯ, ಪೂರ್ಣಿಮಾ ಮಂಡ್ಯ, ದೇವನಂದ್ ಜಗಾಪುರ್ ಧಾರವಾಡ, ಪ್ರವೀಣ್ ಎಸ್ ಶೆಟ್ಟಿ, ಪಂಪಾರೆಡ್ಡಿ ಅರಳಹಳ್ಳಿ,ಕಾರಟಗಿ, ದಸಂಸದ ಗಣೇಶ್ ಚಿಕ್ಕಮಗಳೂರು, ಶುಭದ್ ರಾವ್ ಕಾರ್ಕಳ ಉಪಸ್ಥಿತರಿದ್ದರು.


 ಕೆ.ಫಣಿರಾಜ್ ಪ್ರಾಸ್ತವಿಕ ಮಾತುಗಳನ್ನಾಡಿದರು, ಬೆಂಗಳೂರು, ಫೆಡಿನಾ ಸೆಬಾಸ್ಟಿಯನ್ ದೇವರಾಜ್ ಸ್ವಾಗತಿಸಿದರು. ಶಿವಮೊಗ್ಗದ ಕೆ.ಪಿ.ಶ್ರೀಪಾಲ್ ಕಾರ್ಯಕ್ರಮ ನಿರೂಪಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor