ಮೇನಕಾ ಗಾಂಧಿಯವರ ಭ್ರೂಣ ಲಿಂಗ ಪತ್ತೆ ನಿಷೇಧ ಪ್ರಸ್ತಾಪಕ್ಕೆ ಜನವಾದಿ ಮಹಿಳಾ ಸಂಘಟನೆಯಿಂದ ಖಂಡನೆ
ಬೆಂಗಳೂರು.ಫೆ.3: ಹೆಣ್ಣುಮಕ್ಕಳನ್ನೇ ಇಲ್ಲವಾಗಿಸಲು ಹೊರಟಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಮೇನಕಾ ಗಾಂಧಿಯವರ ಪ್ರಸ್ತಾಪಕ್ಕೆ ಜನವಾದಿ ಮಹಿಳಾ ಸಂಘಟನೆ ತೀವ್ರ ಖಂಡನೆ.
ಸಂಘಟನೆ ಅಧ್ಯಕ್ಷೆ ವಿ.ಗೀತಾ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಎಸ್. ಲಕ್ಷ್ಮಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ಅವರು ಲಿಂಗ ಆಯ್ಕೆಯನ್ನು ತಡೆಯಲು ಲಿಂಗಪತ್ತೆಯನ್ನು ಕಡ್ಡಾಯಗೊಳಿಸಲು ಹೊರಟಿರುವ ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಚಿವರಾದ ಮೇನಕಾ ಗಾಂಧಿಯವರ ಈ ಪ್ರಸ್ತಾಪ ಮತ್ತಷ್ಟು ಹೆಣ್ಣುಭ್ರೂಣ ಹತ್ಯೆಗೆ ಅವಕಾಶ ಮಾಡಿಕೊಡಲಿದೆ. ಸತತವಾಗಿ ಲಿಂಗಾನುಪಾತ ಕುಸಿಯುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಪಾಲಿಗೆ ಇದು ಮರಣಶಾಸನವೇ ಆಗಿದೆ. ಇದನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕರ್ನಾಟಕ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.
ಆರಂಭದಲ್ಲೇ ಲಿಂಗ ಪತ್ತೆ ಮಾಡಿ, ಹೆಣ್ಣುಭ್ರೂಣ ಹತ್ಯೆಯಾಗಲಾರದಂತೆ ನಿಗಾವಹಿಸಿ ಹೆಣ್ಣುಭ್ರೂಣಗಳನ್ನು ರಕ್ಷಿಸಬಹುದೆಂಬ ಕೇಂದ್ರ ಸಚಿವರ ಪ್ರಸ್ತಾಪ, ಅನಧಿಕೃತ,ಅಕ್ರಮ,ಹೆಣ್ಣು ಭ್ರೂಣ ಹತ್ಯೆಗೆ ಅವಕಾಶಮಾಡಿಕೊಡಲಿದೆ. ಪುರುಷ ಪ್ರಧಾನ ವ್ಯವಸ್ಥೆಯೊಳಗೆ ಗಂಡು ಮಗು ಕುರಿತು ಇರುವ ವ್ಯಾಮೋಹ, ಹೆಣ್ಣಿನ ಕುರಿತು ಇರುವ ತಿರಸ್ಕಾರ ಮೊದಲೇ ಲಿಂಗಪತ್ತೆ ಮಾಡುವುದರಿಂದ ಗರ್ಭಿಣಿಯ ಮೇಲೆ ಕುಟುಂಬದ ಒತ್ತಡ, ಹಿಂಸೆ ಹೆಚ್ಚಾಗಲಿದ್ದೂ ಆಕೆಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.
ಪಿ.ಸಿ ಅಂಡ್ ಪಿಎನ್‌ಡಿಟಿ ಕಾನೂನನ್ನು ಉಲ್ಲಂಘಿಸುತ್ತಿರುವ, ಮತ್ತು ಪ್ರತಿರೋಧ ಒಡ್ಡುತ್ತಿರುವ ಖಾಸಗೀ ಕಾರ್ಪೋರೇಟ್ ಪ್ರೇರಿತ ಈ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಈ ಕೂಡಲೇ ಕೈ ಬಿಡಬೇಕು, ಪಿ.ಸಿ ಅಂಡ್ ಪಿಎನ್‌ಡಿಟಿ ಕಾನೂನನ್ನು ಬಲಪಡಿಸಿ ಸಮರ್ಪಕ ಜಾರಿಗಾಗಿ ಕ್ರಮಕೈಗೊಳ್ಳಬೇಕು. ಹೆಣ್ಣು ಮಗುವನ್ನು ಉಳಿಸಿ, ಹೆಣ್ಣು ಮಗುವನ್ನು ಓದಿಸಿ ಎನ್ನುವ ಘೋಷಣೆಯನ್ನು ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ, ಹೆಣ್ಣು ಮಕ್ಕನ್ನೇ ಇಲ್ಲವಾಗಿಸಲು ಹೊರಟಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.