ಗ್ರಾಮೀಣ ಭಾಗದ ಸಂಗೀತ ಕಲೆ ನಗರವನ್ನು ಮೀರಿಸುವಂತಿದೆ: ಡಾ.ಎಲ್.ಹನುಮಂತಯ್ಯ
ಬೆಂಗಳೂರು, ಫೆ.7: ಗ್ರಾಮಾಂತರ ಪ್ರದೇಶದಲ್ಲಿ ಪ್ರತಿಭಾನ್ವಿತ ಪ್ರತಿಭೆಗಳಿದ್ದು, ನಗರ ಪ್ರದೇಶದವರನ್ನು ಮೀರಿಸುವಂತಹ ಸಂಗೀತ ವೈವಿಧ್ಯ ಗ್ರಾಮೀಣ ಪ್ರದೇಶದಲ್ಲಿ ಹರಡಿಕೊಂಡಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಎಲ್. ಹನುಮಂತಯ್ಯ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಕಸಾಪ ರಂಗಸಂಸ್ಥಾನ ಆಯೋಜಿಸಲಾಗಿದ್ದ ಕನ್ನಡ ಗಾನಯಾನ-2015 ಗೀತಗಾಯನ ವೈವಿಧ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ನೂರಾರು ಪ್ರತಿಭಾನ್ವಿತ ಪ್ರತಿಭೆಗಳಿದ್ದು ಸರಿಯಾದ ಅವಕಾಶಗಳು ಸಿಗದೇ ಅವು ಸೊರಗುತ್ತಿವೆ. ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಸಂಗೀತ ಕಲೆಯನ್ನು ಉಳಿಸಿ ಬೆಳೆಸಬೇಕಾಗಿದೆ. ಅಂತಹ ಕೆಲಸವನ್ನು ರಂಗಸಂಸ್ಥಾನ ಮಾಡುತ್ತಿರುವುದು ಅಭಿನಂದನೀಯ ಎಂದು ಶ್ಲಾಘಿಸಿದರು.
ಶಾಸ್ತ್ರೋಕ್ತವಾಗಿ ಸಂಗೀತ ಅಭ್ಯಾಸ ಮಾಡಲು ಎಲ್ಲರಿಗೂ ಅವಕಾಶಗಳಿದ್ದರೂ, ಹಲವು ಕಾರಣಗಳಿಂದ ದೂರವಾಗುತ್ತಾರೆ. ಇದರಿಂದಾಗಿ ಸಂಗೀತ ಕಲಿಯಲು ಆಸಕ್ತಿ ಇರುವವರನ್ನು ಗುರುತಿಸಿ ಅಂತಹವರನ್ನು ಪ್ರೋತ್ಸಾಹಿಸಲು ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ಕೆಲಸ ಮಾಡಬೇಕಿದೆ ಎಂದು ಕಿವಿಮಾತು ಹೇಳಿದರು.
ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಕನ್ನಡ ಸಾಹಿತ್ಯವನ್ನು, ಕವಿಗಳ ಪರಿಚಯವನ್ನು ನಿರಂತರವಾಗಿ ತಲುಪಿಸುವಂತಹ ಕೆಲಸ ಸಂಗೀತದಿಂದ ಸಾಧ್ಯವಾಗಿದೆ. ಇದೇ ರೀತಿಯಾಗಿ ಹಳ್ಳಿಗಾಡಿನ ಜನಪದ ಕಲೆಯನ್ನು ಸಂಗೀತ ಜೊತೆಗೆ ಮುಂದಕ್ಕೆ ಕೊಂಡೊಯ್ಯಬೇಕು. ಆ ಮೂಲಕ ಗ್ರಾಮಾಂತರ ಪ್ರತಿಭೆಗಳನ್ನು ಪ್ರೋತ್ಸಾಹಿಸುವಂತಹ ಕೆಲಸ ಮಾಡಬೇಕೆಂದು ತಿಳಿಸಿದರು.
ಕರ್ನಾಟಕ ರಾಜ್ಯವು ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಅತೀ ಹೆಚ್ಚು ಅನುದಾನವನ್ನು ವಿನಿಯೋಗಿಸುವುದರ ಮೂಲಕ ಗ್ರಾಮೀಣ ಪ್ರತಿಭೆಗಳನ್ನು ಬೆಳಕಿಗೆ ತರುವ ಕೆಲಸ ಮಾಡಲಾಗುತ್ತಿದೆ ಎಂದು ಹನುಮಂತಯ್ಯ ಹೇಳಿದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಮಾಜಿ ಮೇಯರ್ ಹುಚ್ಚಪ್ಪ, ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಹರಿಕುಮಾರ್, ಪತ್ರಕರ್ತ ಅನಿಲ್ ಕುಮಾರ್, ರಂಗಸಂಸ್ಥಾನ ಅಧ್ಯಕ್ಷ ಬಂಡ್ಲಹಳ್ಳಿ ವಿಜಯ್‌ಕುಮಾರ್ ಭಾಗವಹಿಸಿದ್ದರು.