ಬಿಬಿಎಂಪಿ ಕಚೇರಿಗಳಲ್ಲಿನ ಭ್ರಷ್ಟಾಚಾರ ತಡೆಯಲು ಸರಕಾರ ಮುಂದಾಗಲಿ: ಎಎಪಿ
ಬೆಂಗಳೂರು, ಫೆ.8: ಬಿಬಿಎಂಪಿ ಕಚೇರಿಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮಗಳು ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟಲು ರಾಜ್ಯ ಸರಕಾರ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಸಹ ಸಂಚಾಲಕ ಶಿವಕುಮಾರ್ ಚೆಂಗಲರಾಯ ಮಾತನಾಡಿ, ಆಮ್ ಆದ್ಮಿ ಪಾರ್ಟಿ ಕೆಲ ತಿಂಗಳ ಹಿಂದೆ ಆರಂಭಿಸಿದ ಲಂಚ ಮುಕ್ತ ಅಭಿಯಾನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಬಿಬಿಎಂಪಿ ಕಚೇರಿಗಳಲ್ಲಿ ಅಧಿಕಾರಿಗಳು ನಡೆಸುವ ಅಕ್ರಮ ಮತ್ತು ವಾಮ ಮಾರ್ಗಗಳನ್ನು ದೂರವಾಣಿ ಮುಖಾಂತರ ತಿಳಿಸುತ್ತಿದ್ದಾರೆ ಎಂದು ಹೇಳಿದರು.
ಬಿಬಿಎಂಪಿ ಕಚೇರಿಗಳಲ್ಲಿ ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ನೀಡಲು ಲಂಚಕ್ಕೆ ಬೇಡಿಕೆ ಕೇಳಿಬರುತ್ತಿದೆ. ಈ ರೀತಿಯಾದ ಸಣ್ಣ ಕೆಲಸಗಳಿಗೂ ಲಂಚಕ್ಕೆ ಬೇಡಿಕೆಯಿಡುವುದು ಅಧಿಕಾರಿಗಳಿಗೆ ಸರ್ವೇ ಸಾಮಾನ್ಯವಾಗಿದೆ.ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಜನ ಪ್ರತಿನಿಧಿಗಳು ಪರೋಕ್ಷವಾಗಿ ಬೆಂಬಲ ಸೂಚಿಸುತ್ತಿರುವ ಪರಿಣಾಮ ಪರಿಸ್ಥಿತಿ ಇನ್ನು ಉಲ್ಬಣಗೊಂಡಿದೆ. ಪರಿಣಾಮ ನಾಗರಿಕರು ಹಲ್ಲಿಲ್ಲದ ಹಾವಿನಂತೆ ಜೀವನವನ್ನು ಸಾಗಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಟಿ.ಡಿ.ರಂಗನಾಥ್ ವಜಾಕ್ಕೆ ಆಗ್ರಹ: ಬಿಬಿಎಂಪಿ ಕಂದಾಯ ಅಧಿಕಾರಿ ಖಾತೆ ಬದಲಿಸಲು ವಿಜ್ಞಾನನಗರದ ನಿವಾಸಿ ಜೋ ಕ್ರಾಸ್ಟಾರ ಬಳಿ ಎಂಟು ಸಾವಿರಕ್ಕೆ ಲಂಚಕ್ಕೆ ಆಮಿಷ ಒಡ್ಡ್ಡಿ ಲಂಚವನ್ನು ಸ್ವೀಕರಿಸುವಾಗ ಆಮ್ ಆದ್ಮಿ ಲಂಚಮುಕ್ತ ಅಭಿಯಾನದ ಸಂಚಾಲಕರ ಕೈಗೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಈ ಭ್ರಷ್ಟಾಧಿಕಾರಿಯನ್ನು ಕೂಡಲೇ ಸರಕಾರ ಸೇವೆಯಿಂದ ವಜಾಗೊಳಿಸಬೇಕು. ಈ ಮೂಲಕ ಬಿಬಿಎಂಪಿ ಕಚೇರಿಗಳಲ್ಲಿನ ಭ್ರಷ್ಟಾಧಿಕಾರಿಗಳಿಗೆ ಎಚ್ಚರಿಕೆ ಹಂಟೆ ರವಾನಿಸಬೇಕು ಎಂದು ಒತ್ತಾಯಿಸಿದ ಅವರು, ರಾಜ್ಯ ಸರಕಾರ ಮತ್ತು ಬಿಬಿಎಂಪಿ ಕಚೇರಿಗಳಲ್ಲಿ ಭ್ರಷ್ಟ ಮುಕ್ತ ವಾತಾವರಣವನ್ನು ಸೃಷ್ಟಿಸಲು ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಅರುಣ್ ಕುಮಾರ್, ಮೋಹನ್ ದಾಸರಿ,ಬಸವಂತ್ ರಾವ್ ಉಪಸ್ಥಿತರಿದ್ದರು.