ಮಾ.1ರಿಂದ ರಾಜ್ಯಾದ್ಯಂತ ಜಿಪಂ ಕಚೇರಿಗಳ ಮುಂದೆ ಧರಣಿ

Update: 2016-02-08 18:21 GMT
  • whatsapp icon

ಬೆಂಗಳೂರು, ಫೆ.8: ಗ್ರಾಮ ಪಂಚಾಯತ್ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾ.1ರಿಂದ ರಾಜ್ಯಾದ್ಯಂತ ಜಿಲ್ಲಾ ಪಂಚಾಯತ್ ಕಚೇರಿಗಳ ಮುಂದೆ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ತಿಳಿಸಿದ್ದಾರೆ.

ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯತ್ ನೌಕರರಿಗೆ ಕನಿಷ್ಠ ವೇತನ ನಿಗದಿ ಮಾಡಿ ಆದೇಶ ಹೊರಡಿಸಿ ಹಲವು ವರ್ಷಗಳಾದರೂ ನೌಕರರಿಗೆ ಸರಿಯಾದ ವೇತನ ಸಿಗುತ್ತಿಲ್ಲ. ಇಂದಿಗೂ ಹಲವು ಪಂಚಾಯತ್‌ಗಳಲ್ಲಿ ನೌಕರರಿಗೆ ಕೇವಲ 1,500ರಿಂದ 2,000 ರೂ. ನೀಡಲಾಗುತ್ತಿದೆ. ಇಎಸ್‌ಐ, ಪಿಎಫ್, ರಜೆ ಇತ್ಯಾದಿ ಯಾವುದೇ ಸೌಲಭ್ಯಗಳನ್ನು ನೀಡದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.

ಸರಕಾರ ನಿಗದಿಪಡಿಸಿರುವ ವೇತನ ಹಾಗೂ ತುಟ್ಟಿಭತ್ತೆಯನ್ನು ಪ್ರತೀತಿಂಗಳು ಪ್ರತಿಯೊಬ್ಬ ಸಿಬ್ಬಂದಿಗೂ ನೀಡಬೇಕು, 2014, ಸೆ.10ರಂದು ಸರಕಾರದ ಆದೇಶಕ್ಕೆ ಸೂಕ್ತ ತಿದ್ದುಪಡಿ ತಂದು ಸೇವೆಗೆ ಸೇರಿದ ದಿನಾಂಕದಿಂದ ಅನುಮೋದನೆ ಪರಿಗಣಿಸಬೇಕು. ಈಗಾಗಲೇ ನೇಮಕಗೊಂಡ ಹೆಚ್ಚುವರಿ ಕರ ವಸೂಲಿಗಾರ, ಗುಮಾಸ್ತ, ಕಿರು ನೀರು ಸರಬರಾಜು ನೀರಗಂಟಿಗಳಿಗೆ ಅನುಮೋದನೆ ನೀಡಬೇಕು ಎಂದು ಆಗ್ರಹಿಸಿದರು.

 ನೌಕರರಿಗೆ ನಿವೃತ್ತಿ ವೇತನ ಹಾಗೂ ಗ್ರಾಚುಟಿಗಾಗಿ ಒಂದು ಟ್ರಸ್ಟ್ ರಚನೆ ಮಾಡಬೇಕು. ಸರಕಾರ ರಚಿಸಿರುವ ಎಂ.ಎಸ್. ಸ್ವಾಮಿ ಹಾಗೂ ಸಾಲಪ್ಪ ವರದಿಯ ಶಿಫಾರಸುಗಳನ್ನು ಜಾರಿಮಾಡಬೇಕು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಗೋಪಾಲಕೃಷ್ಣ ಅರಳಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News