‘ಸಬ್ ಅರ್ಬನ್’ ರೈಲ್ವೆ ಯೋಜನೆ ಜಾರಿಗೆ ಕ್ರಮ:ಸಚಿವ ಜಾರ್ಜ್

Update: 2016-02-15 18:30 GMT

ಬೆಂಗಳೂರು, ಫೆ.15: ನಗರದಲ್ಲಿನ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ 9ಸಾವಿರ ಕೋಟಿ ರೂ.ವೆಚ್ಚದಲ್ಲಿ ಉಪನಗರ ರೈಲ್ವೆ (ಸಬ್ ಅರ್ಬನ್) ಯೋಜನೆ ಜಾರಿಗೆ ತೀರ್ಮಾನಿಸಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸಮಿತಿ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯದಿಂದ ಕೆಂಗೇರಿ, ತುಮಕೂರಿನಿಂದ ಯಶವಂತಪುರ ಹಾಗೂ ವೈಟ್‌ಫೀಲ್ಡ್‌ನಿಂದ ಬೈಯಪ್ಪನಹಳ್ಳಿ ವರೆಗೆ ಉಪನಗರ ರೈಲ್ವೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.ರೈಲ್ವೆ ಯೋಜನೆಗೆ ಮೊದಲ ಹಂತದಲ್ಲಿ 1ಸಾವಿರ ಕೋಟಿ ರೂ.ವೆಚ್ಚವಾಗಲಿದ್ದು, ಈಗಾಗಲೇ ಈ ಸಂಬಂಧ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಜತೆ ಸಮಾಲೋಚನೆ ನಡೆಸಿದ್ದು, ರೈಲ್ವೆ ಆಯವ್ಯಯದಲ್ಲಿ ಉದ್ದೇಶಿತ ಯೋಜನೆ ಸೇರ್ಪಡೆ ಗೊಳಿಸಲು ಕೋರಲಾಗಿದೆ ಎಂದು ಅವರು ತಿಳಿಸಿದರು. ಪ ನಗರ ರೈಲ್ವೆ ಯೋಜನೆ ಯನ್ನು ರೈಲ್ವೆ ಇಲಾಖೆಯಿಂದ ಕೈಗೆತ್ತಿಕೊಳ್ಳುವಂತೆ ಕೋರಿದ್ದು, ವೆಚ್ಚವಾಗುವ ಅನುದಾನವನ್ನು ಭರಿಸುವಂತೆ ಮನವಿ ಮಾಡಲಾಗಿದೆ. ಈ ಯೋಜನೆಗೆ ರಾಜ್ಯ ಸರಕಾರವೂ ಹಣವನ್ನು ಭರಿಸಲು ಸಿದ್ಧವಿದೆ ಎಂದು ಜಾರ್ಜ್ ಇದೇ ವೇಳೆ ತಿಳಿಸಿದರು.
ಮಲೇಷ್ಯಾ ಬೀದಿ ದೀಪ: ಬೀದಿ ದೀಪಗಳನ್ನು ಎಲ್‌ಇಡಿಗೆ ಬದಲಾಯಿಸಲು ಮಲೇಷ್ಯಾ ಮೂಲದ ಕಂಪೆನಿಯೊಂದು ಮುಂದೆ ಬಂದಿದ್ದು ಈ ಬಗ್ಗೆ ಚರ್ಚಿಸಲಾಗಿದೆ. ಬೀದಿ ದೀಪಗಳ ಪರಿವರ್ತನೆಯಿಂದ ಶೇ.80ರಷ್ಟು ವಿದ್ಯುತ್ ಉಳಿ ತಾಯವಾಗಲಿದೆ. ವಿದ್ಯುತ್ ಕಂಬಗಳ ಮೇಲೆ ಕಂಪೆನಿಯೂ ಡಿಜಿಟಲ್ ತಂತ್ರಜ್ಞಾನದ ಜಾಹೀ ರಾತು ಫಲಕಗಳನ್ನು ಹಾಕಲು ಅನುಮತಿ ಕೋರಿದೆ ಎಂದು ಅವರು ವಿವರಿಸಿದರು.ಾಹೀರಾತು ಫಲಕ ಹಾಕುವುದರಿಂದ ಬಿಬಿಎಂಪಿಗೂ ಆದಾಯ ಬರಲಿದ್ದು, ಈ ಸಂಬಂಧ ಸೂಕ್ತ ತೀರ್ಮಾನ ಕೈಗೊಳ್ಳಲು ಹಿರಿಯ ಅಧಿಕಾರಿ ವಿಜಯ ಭಾಸ್ಕರ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದ ಅವರು, ಬೀದಿ ದೀಪಗಳ ಪರಿವರ್ತನೆ ಸಂಬಂಧ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ನಗರದಲ್ಲಿನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಂಡಿದ್ದು, ಕಸ ವಿಲೇವಾರಿ ಘಟಕಗಳನ್ನು ಸ್ಥಾಪಿಸಲು ಹಸಿರು ವಲಯಗಳಲ್ಲಿ ಅನಧಿಕೃತ ಬಡಾವಣೆ ನಿರ್ಮಿಸುತ್ತಿರುವ ರಿಯಲ್ ಎಸ್ಟೇಟ್ ಉದ್ಯಮಿಗಳು ಗೊಂದಲ ಸೃಷ್ಟಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಕಸ ವಿಲೇವಾರಿಗೆ ಈಗಾಗಲೇ ಹಲವು ಕಂಪೆನಿಗಳು ಮುಂದೆ ಬಂದಿವೆ. ಈ ಮಧ್ಯೆ ಕಸದಿಂದ ವಿದ್ಯುತ್ ಉತ್ಪಾದನೆಗೆ ಪೋಲ್ಯಾಂಡ್, ಜರ್ಮನಿ ಸೇರಿ ಹಲವು ವಿದೇಶಿ ಕಂಪೆನಿಗಳೂ ಆಸಕ್ತಿ ವಹಿಸಿದ್ದು, ಈ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.

ಪಾಲಿಕೆ ಆಸ್ತಿಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆದ ತೆರಿಗೆ ಪಾವತಿಸದೆ ಅನಧಿಕೃತವಾಗಿ ಅನುಭೋಗದಲ್ಲಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದ ಅವರು, ಅಧಿಕಾರಿಗಳ ಕೆಲಸ-ಕಾರ್ಯಗಳಲ್ಲಿ ಯಾವುದೇ ಸಂದರ್ಭದಲ್ಲಿಯೂ ಸರಕಾರ ಮಧ್ಯೆ ಪ್ರವೇಶ ಮಾಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು.ಮಲೇಷ್ಯಾ ಮೂಲದ ಸಂಸ್ಥೆಯೊಂದು ನಗರದಲ್ಲಿ ಕನ್‌ವೆನ್ಷನ್ ಸೆಂಟರ್ ನಿರ್ಮಾಣ ಮಾಡಲು ಆಸಕ್ತಿ ವಹಿಸಿದ್ದು, ಅಗತ್ಯ ಭೂಮಿ ನೀಡಲು ಕ್ರಮ ಕೈಗೊಳ್ಳ ಲಾಗುತ್ತಿದೆ ಎಂದ ಅವರು, ನಗರದಲ್ಲಿನ ರಸ್ತೆ, ಒಳಚರಂಡಿ, ತ್ಯಾಜ್ಯ ವಿಲೇವಾರಿ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಬಿಬಿಎಂಪಿ ಮೇಯರ್ ಮಂಜುನಾಥ ರೆಡ್ಡಿ, ಉಪ ಮೇಯರ್ ಹೇಮಲತಾ ಗೋಪಾಲಯ್ಯ ಸೇರಿದಂತೆ ಪಾಲಿಕೆ ಹಿರಿಯ ಅಧಿಕಾರಿಗಳು ಸುದ್ಧಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News