ರಾಜ್ಯಾದ್ಯಂತ ಪಡಿತರ ವಿತರಣೆ
ಬೆಂಗಳೂರು, ಫೆ.16: ರಾಜ್ಯದಲ್ಲಿ ಸಾರ್ವಜನಿಕ ವಿತರಣಾ ಪದ್ಧತಿಯಡಿಯಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಚೀಟಿದಾರರಿಗೆ ವಿತರಿಸಲು ಫೆಬ್ರವರಿ ತಿಂಗಳ ಆಹಾರಧಾನ್ಯಗಳನ್ನು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ.
ಎಎವೈ ಮತ್ತು ಬಿಪಿಎಲ್ ಪಡಿತರ ಚೀಟಿಗಳಿಗೆ ಉಚಿತವಾಗಿ ಆಹಾರಧಾನ್ಯ ವಿತರಣೆಯಾಗುತ್ತಿದ್ದು, ಬಾಗಲಕೋಟೆ, ಬೆಳಗಾಂ, ಬಳ್ಳಾರಿ, ಬೀದರ್, ವಿಜಯಪುರ, ಧಾರವಾಡ, ಗದಗ, ಕಲಬುರಗಿ, ಹಾವೇರಿ, ಕೊಪ್ಪಳ, ರಾಯಚೂರು, ಉತ್ತರ ಕನ್ನಡ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ದಾವಣಗೆರೆ, ಕೊಡಗು, ಉಡುಪಿ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ಬೆಂಗಳೂರು ಆಹಾರ ಪಡಿತರ ಪ್ರದೇಶದ ಎಎವೈ ಪಡಿತರ ಚೀಟಿಗಳಿಗೆ 29 ಕೆಜಿ ಅಕ್ಕಿ ಹಾಗೂ 6 ಕೆಜಿ ಗೋಧಿ ಹಾಗೂ ಬಿಪಿಎಲ್ ಪಡಿತರ ಚೀಟಿಯ ಪ್ರತೀ ಘಟಕಕ್ಕೆ 3 ಕೆಜಿ ಅಕ್ಕಿ ಹಾಗೂ 2 ಕೆಜಿ ಗೋಧಿ ವಿತರಣಾ ಪ್ರಮಾಣ ನಿಗದಿಪಡಿಸಲಾಗಿದೆ.
ಬೆಂಗಳೂರು ನಗರ, ಹಾಸನ, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳ ಎಎವೈ ಪಡಿತರ ಚೀಟಿಗಳಿಗೆ 35 ಕೆಜಿ ಅಕ್ಕಿ ಹಾಗೂ ಬಿಪಿಎಲ್ ಪಡಿತರ ಚೀಟಿಯ ಪ್ರತೀ ಸದಸ್ಯನಿಗೆ 5 ಕೆಜಿ ಅಕ್ಕಿ ವಿತರಣಾ ಪ್ರಮಾಣ ನಿಗದಿಪಡಿಸಲಾಗಿದೆ.
ನೋಂದಣಿಯಾದ ಎಪಿಎಲ್ ಪಡಿತರ ಚೀಟಿಯ ಏಕ ಸದಸ್ಯ ಕುಟುಂಬಕ್ಕೆ 5 ಕೆ.ಜಿ. ಆಹಾರಧಾನ್ಯವನ್ನು 3 ಕೆ.ಜಿ. ಅಕ್ಕಿ ಮತ್ತು 2 ಕೆ.ಜಿ. ಗೋಧಿ ಹಾಗೂ ಒಂದಕ್ಕಿಂತ ಹೆಚ್ಚು ಸದಸ್ಯರಿರುವ ಕುಟುಂಬಕ್ಕೆ 10 ಕೆ.ಜಿ. ಆಹಾರಧಾನ್ಯವನ್ನು (5ಕೆ.ಜಿ. ಅಕ್ಕಿ, 5 ಕೆ.ಜಿ. ಗೋಧಿ) ಪ್ರತಿ ಕೆ.ಜಿ. ಅಕ್ಕಿಗೆ ರೂ. 15 ಹಾಗೂ ಪ್ರತಿ ಕೆ.ಜಿ. ಗೋಧಿಗೆ 10 ರೂ.ದರದಲ್ಲಿ ಹಂಚಿಕೆ ನೀಡಲಾಗಿದೆ.
ಎಎವೈ ಮತ್ತು ಬಿಪಿಎಲ್‌ನ ಏಕ ಸದಸ್ಯರ ಮತ್ತು ದ್ವಿ ಸದಸ್ಯ ಅನಿಲ ರಹಿತ ಪಡಿತರ ಚೀಟಿಗಳಿಗೆ 3 ಲೀಟರ್‌ನಂತೆ, ಮೂರು ಮತ್ತು ಹೆಚ್ಚಿನ ಸದಸ್ಯರಿರುವ ಪಡಿತರ ಚೀಟಿಗಳಿಗೆ 5 ಲೀಟರ್‌ನಂತೆ ಹಾಗೂ ಗ್ರಾಮಾಂತರ ಪ್ರದೇಶದ ಎಪಿಎಲ್ ಅನಿಲ ರಹಿತ ಪಡಿತರ ಚೀಟಿಗಳಿಗೆ 2 ಲೀಟರ್‌ನಂತೆ ಕೆರೋಸಿನ್ ವಿತರಣೆ ಪ್ರಮಾಣವನ್ನು ನಿಗದಿಪಡಿಸಲಾಗಿದೆ.