ಛಂದಸ್ಸುಇಲ್ಲದ ಅಕ್ಷರವಿಲ್ಲ: ಕೊರ್ಗಿ ಶಂಕರನಾರಾಯಣ

Update: 2016-02-21 18:36 GMT

ಬೆಂಗಳೂರು, ಫೆ.21: ಜನ ಸಾಮಾನ್ಯರು ಮಾತನಾಡುವ ಭಾಷೆಯಿಂದ ಹಿಡಿದು ಸಾಹಿತಿಗಳು ರಚಿಸುವ ಸಾಹಿತ್ಯವರೆಗೂ ಪ್ರತಿಯೊಂದರಲ್ಲೂ ಛಂದಸ್ಸು ಅಡಗಿರುತ್ತದೆ ಎಂದು ಹಿರಿಯ ವಿದ್ವಾಂಸ, ಲೇಖಕ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಇಂದಿಲ್ಲಿ ಅಭಿಪ್ರಾಯಿಸಿದ್ದಾರೆ.
ರವಿವಾರ ನಗರದ ಕಸಾಪ ಸಭಾಂಗಣದಲ್ಲಿ ಒಪ್ಪಣ್ಣ ನೆರೆಕೆರೆ ಪ್ರತಿಷ್ಠಾನದಿಂದ ಆಯೋಜಿಸಲಾಗಿದ್ದ ಲೇಖಕ ರಘು ಮುಳಿಯರ ‘ಹಾಡಾಯಿತು ಹಕ್ಕಿ’ ಛಂದೋಬದ್ಧ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಛಂದಸ್ಸನ್ನು ವ್ಯವಸ್ಥಿತವಾಗಿ ಜೋಡಿಸಿಕೊಂಡಾಗ ಕಾವ್ಯ ಆಗುತ್ತದೆ.
ಹೀಗೆ ಹೊರಬಂದ ಯಾವುದೇ ಕಾವ್ಯವನ್ನಾಗಲಿ ನಾವು ಆಸ್ವಾದಿಸುವುದರ ಮೂಲಕ ಅದರ ಸಾರವನ್ನು ಪಡೆಯಬೇಕು. ಆಗ ಅದರಲ್ಲಿರುವ ಸಾರ ಅರ್ಥವಾಗುತ್ತದೆ. ಆದುದರಿಂದಲೇ ನಾವು ಗದ್ಯ ಮತ್ತು ನಾಟಕಗಳನ್ನೂ ಕಾವ್ಯಕ್ಕೆ ಸೇರಿಸಲಾಗಿದೆ. ಆದರೆ, ಇದೇ ವೇಳೆಛಂದಸ್ಸು ಆವಶ್ಯಕತೆಯಿಲ್ಲ ಎಂದು ಪ್ರತಿಪಾದಿಸುವವರು ಹೆಚ್ಚಾಗುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ವೇದಗಳ ಕಾಲದಿಂದ ಬೆಳೆದುಬಂದಿರುವಂತಹ ಛಂದಸ್ಸಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ಹಿನ್ನೆಲೆಯಲ್ಲಿ ಛಂದಸ್ಸು ಬರೆಯುವುದು, ಓದುವುದು ಸ್ವಲ್ಪ ಕಷ್ಟವಾಗುತ್ತದೆ. ಛಂದಸ್ಸು ಹೆಚ್ಚಾಗಿ ಹಳಗನ್ನಡದಲ್ಲಿ ಬಳಕೆಯಾಗುತ್ತಿದ್ದು, ಭಾಷೆ ಬದಲಾದಂತೆಲ್ಲಾ ಛಂದಸ್ಸು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ ಎಂದು ಅವರು ಹೇಳಿದರು.ಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಿರಿಯ ವಿದ್ವಾಂಸ, ಅಷ್ಟಾವಧಾನಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಮಾತನಾಡಿ, ಯಾವುದೇ ಒಂದು ಸಾಹಿತ್ಯವನ್ನು ಅನುಭವಿಸುವಾಗ ಅದು ಪಂಚೇಂದ್ರೀಯಗಳಿಗೆ ಪ್ರಜ್ಞೆ ಮತ್ತು ಸ್ವರ್ಶವನ್ನು ನೀಡುತ್ತದೆ. ಸಾಹಿತ್ಯದಲ್ಲಿರುವ ಶಕ್ತಿ ಬೇರೆ ಎಲ್ಲಿಯೂ ಸಿಗುವುದಿಲ್ಲ. ಅದು ಯಾರು ಸಾಹಿತ್ಯವನ್ನು ಅನುಭವಿಸುತ್ತಾರೋ ಅವರಿಗೆ ಮಾತ್ರ ತಿಳಿಯುತ್ತದೆ ಎಂದು ವಿಶ್ಲೇಷಿಸಿದರು.
ಸಾಹಿತ್ಯ ಕ್ಷೇತ್ರದಲ್ಲಿ ಶಬ್ದ ಮತ್ತು ಅರ್ಥಕ್ಕೆ ಬಹಳ ವ್ಯತ್ಯಾಸವಿದ್ದು ಬೇರೆ-ಬೇರೆ ಅರ್ಥಗಳನ್ನು ಕೊಡುತ್ತದೆ. ಇದನ್ನು ಅನುಭವಿಸಿಕೊಂಡು ಹೋಗುವಂತಹ ಓದುಗರನ್ನು ಸಾಹಿತ್ಯ ವಿಶೇಷ ಲೋಕಕ್ಕೆ ಕೊಂಡೊಯ್ಯುತ್ತದೆ. ಹಾಗೆಯೇ ಸಾಹಿತ್ಯವನ್ನು ರಚಿಸುವಾಗ ಕವಿಗಳು ನಾದವನ್ನು ಪರಿಗಣಿಸಬೇಕಿದೆ. ಆ ಮೂಲಕ ಓದು ಬರದವನಿಗೂ ಸಹಜವಾಗಿ ನಮ್ಮ ಸಾಹಿತ್ಯವನ್ನು ನಾದದ ಮೂಲಕ ತಲುಪಿಸಲು ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಒಪ್ಪಣ್ಣ ನೆರೆಕೆರೆ ಪ್ರತಿಷ್ಠಾನದ ಟ್ರಸ್ಟಿ ತೆಕ್ಕುಂಜ ಕುಮಾರ ಸ್ವಾಮಿ, ಪುಸ್ತಕದ ಲೇಖಕ ರಘು ಮಳಿ, ಕೃಷ್ಣ ಶರ್ಮಾ ಹಳೆಮನೆ ಉಪಸ್ಥಿತರಿದ್ದರು.


 ‘ಆಧುನಿಕ ಕಾಲಘಟ್ಟದಲ್ಲಿ ಭಾವಗೀತೆಗಳು ಮರೆಯಾಗುತ್ತಿರುವುದು ಕನ್ನಡಕ್ಕೆ ಮಾಡಿದ ಅವಮಾನ. ಆದುದರಿಂದ ಮುಂಬರುವ ಕವಿಗಳು ಭಾವಗೀತೆಗಳ ಪ್ರಪಂಚವನ್ನು ನಿರ್ಮಿಸಲು ಮುಂದಾಗಬೇಕು’
    
    ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಹಿರಿಯ ವಿದ್ವಾಂಸ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News