ಪ್ರತಿವರ್ಷ ಟಿಪ್ಪುಸುಲ್ತಾನ್ ಜಯಂತಿ ಆಚರಣೆ - ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2016-03-04 18:35 GMT

ಬೆಂಗಳೂರು, ಮಾ.4: ರಾಜ್ಯ ಸರಕಾರದ ವತಿ ಯಿಂದ ಪ್ರತಿವರ್ಷ ಟಿಪ್ಪು ಸುಲ್ತಾನ್ ಜಯಂತಿ ಯನ್ನು ಆಚರಣೆ ಮಾಡುತ್ತೇವೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.

 ಶುಕ್ರವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯುತ್ತಿದ್ದ ವೇಳೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಮಡಿಕೇರಿಯಲ್ಲಿ ಟಿಪ್ಪುಸುಲ್ತಾನ್ ಜಯಂತಿ ಆಚರಣೆ ಸಂದರ್ಭದಲ್ಲಿ ವಿಎಚ್‌ಪಿ ಮುಖಂಡ ಕುಟ್ಟಪ್ಪ ಸಾವನ್ನಪ್ಪಿದ ವಿಷಯ ಪ್ರಸ್ತಾಪಿಸಿದಾಗ ಮಧ್ಯಪ್ರವೇಶಿಸಿ ಅವರು ಮಾತನಾಡಿದರು.

ಟಿಪ್ಪುಸುಲ್ತಾನ್ ಅವರ ಇತಿಹಾಸವನ್ನು ಸರಿಯಾಗಿ ಓದಿಕೊಂಡು ಆನಂತರ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ. ಪೂರ್ವಗ್ರಹ ಪೀಡಿತರಾಗಿ ಸುಮ್ಮನೆ ಅವರ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಮಾಡಬೇಡಿ ಎಂದು ಬಿಜೆಪಿ ಸದಸ್ಯ ಬೋಪಯ್ಯ ಹಾಗೂ ಜಗದೀಶ್ ಶೆಟ್ಟರ್‌ಗೆ ಮುಖ್ಯಮಂತ್ರಿ ತಿರುಗೇಟು ನೀಡಿದರು.

ಟಿಪ್ಪುಸುಲ್ತಾನ್ ಓರ್ವ ದೇಶಪ್ರೇಮಿ. ಸ್ವಾತಂತ್ರಹೋರಾಟಗಾರ, ಬ್ರಿಟಿಷರ ವಿರುದ್ಧ ದೇಶದ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದವರು. ದೇಶಕ್ಕಾಗಿ ಅವರು ಮಾಡಿರುವ ತ್ಯಾಗ, ಬಲಿದಾನವನ್ನು ಸ್ಮರಿಸಿಕೊಂಡು ಅವರ ಜಯಂತಿಯನ್ನು ಪ್ರತಿ ವರ್ಷ ಆಚರಣೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಕೊಡಗು ಜಿಲ್ಲೆಯಲ್ಲಿ ಟಿಪ್ಪುಸುಲ್ತಾನ್ ದೇವಾಲಯಗಳನ್ನು ನಾಶ ಮಾಡಿದರು. ಬಲವಂತವಾಗಿ ಮತಾಂತರ ಮಾಡಿದರು ಎಂಬುದೆಲ್ಲ ಸತ್ಯಕ್ಕೆ ದೂರವಾದದ್ದು ಎಂದು ಮುಖ್ಯಮಂತ್ರಿ ತಿಳಿಸಿದರು.

ಇದರಿಂದ ಕೆರಳಿದ ಬಿಜೆಪಿ ಸದಸ್ಯ ಬೋಪಯ್ಯ, ನಿಮಗೆ ಅಗತ್ಯವಿದ್ದರೆ ಟಿಪ್ಪುಸುಲ್ತಾನ್ ಜಯಂತಿಯನ್ನು ಪ್ರತೀ ತಿಂಗಳು, ಪ್ರತೀ ದಿನ ಮಾಡಿಕೊಳ್ಳಿ ನಮ್ಮದೇನು ಅಭ್ಯಂತರವಿಲ್ಲ. ಆದರೆ, ಟಿಪ್ಪುಸುಲ್ತಾನ್ ಆಡಳಿತದಲ್ಲಿ ಕೊಡವರ 300 ದೇವಾಲಯಗಳನ್ನು ನಾಶಪಡಿಸಲಾಗಿದೆ. 80 ಸಾವಿರಕ್ಕೂ ಅಧಿಕ ಮಂದಿಯನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ. ನಮಗೆ ಆಗಿರುವ ಅನ್ಯಾಯದ ಬಗ್ಗೆಯೂ ಒಮ್ಮೆ ಆಲೋಚಿಸಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News