ಯುವ ಸಮೂಹ ದೇಶದ ಆಸ್ತಿ: ನಟ ಪುನೀತ್‌ರಾಜ್‌ಕುಮಾರ್

Update: 2016-03-13 18:35 GMT

ಬೆಂಗಳೂರು, ಮಾ.13: ದೇಶವನ್ನು ಸಮರ್ಥವಾಗಿ ಮುನ್ನಡೆಸಲು ಯುವ ಸಮೂಹದ ಬೆಂಬಲ, ಸಹಕಾರ ಅತ್ಯಗತ್ಯ ಎಂದು ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ತಿಳಿಸಿದ್ದಾರೆ.

ನಗರದ ಕೆ.ಆರ್.ಪುರದಲ್ಲಿರುವ ಕೇಂಬ್ರಿಡ್ಜ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ‘ಚಿಗುರು-2016’ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯುವಕರು ದೇಶದ ಆಸ್ತಿಯಾಗಿದ್ದು, ಅವರನ್ನು ಸರಿಯಾದ ಮಾರ್ಗದಲ್ಲಿ ಕರೆದೊಯ್ಯಬೇಕು ಎಂದರು.

ಶಾಲೆ ಹಾಗೂ ಕಾಲೇಜು ದಿನಗಳಲ್ಲಿ ನಾವುಗಳಿಸುವ ಸ್ನೇಹ ಸಂಬಂಧ ಅತ್ಯಂತ ಪವಿತ್ರವಾದದ್ದು. ಸ್ನೇಹಿತರು ನಮ್ಮ ಪ್ರತಿಬಿಂಬವಿದ್ದಂತೆ. ಆದುದರಿಂದ, ಜೀವನದ ಅಂತ್ಯದವರೆಗೆ ಸ್ನೇಹ ಸಂಬಂಧವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು ಎಂದು ಅವರು ಸಲಹೆ ನೀಡಿದರು.

ಚಲನಚಿತ್ರರಂಗ ಸೇರಿದಂತೆ ಯಾವುದೇ ಕ್ಷೇತ್ರಗಳಿರಲಿ ಎಲ್ಲೆಡೆಯೂ ಸ್ನೇಹ ಸಂಬಂಧಕ್ಕೆ ಮಹತ್ವವಿದೆ. ನಮ್ಮ ವ್ಯಕ್ತಿತ್ವದ ವಿಕಸನದಲ್ಲಿಯೂ ಸ್ನೇಹ ಮಹತ್ವದ ಪಾತ್ರ ವಹಿಸುತ್ತಿದೆ. ಸ್ನೇಹಕ್ಕೆ ಇಡೀ ವಿಶ್ವವನ್ನೆ ಗೆಲ್ಲುವ ಶಕ್ತಿಯಿದೆ. ಅಂತಹ ಶಕ್ತಿಯನ್ನು ನಾವು ಎಂದಿಗೂ ನಮ್ಮಿಂದ ದೂರ ಮಾಡಿಕೊಳ್ಳಬಾರದು ಎಂದು ಅವರು ಕರೆ ನೀಡಿದರು.

ಕೇಂಬ್ರಿಡ್ಜ್ ಕಾಲೇಜು ಅತ್ಯುತ್ತಮ ಗುಣಮಟ್ಟದ ಶಿಕ್ಷಣಕ್ಕೆ ಖ್ಯಾತಿಯನ್ನು ಹೊಂದಿದೆ. ಈ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದಂತಹ ಅನೇಕ ಪ್ರತಿಭಾವಂತರು ದೇಶ, ವಿದೇಶಗಳಲ್ಲಿ ನಮ್ಮ ರಾಜ್ಯ ಹಾಗೂ ದೇಶದ ಹೆಸರನ್ನು ಉಜ್ವಲಗೊಳಿಸುತ್ತಿದ್ದಾರೆ ಎಂದು ಪುನೀತ್‌ರಾಜ್‌ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಪತ್ರಕರ್ತ ರವಿಬೆಳಗೆರೆ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪಠ್ಯಕ್ರಮದೊಂದಿಗೆ ಸಾಹಿತ್ಯ ಕೃತಿಗಳನ್ನು ಅಧ್ಯಯನ ಮಾಡುವುದನ್ನು ರೂಢಿಸಿಕೊಳ್ಳಬೇಕು. ಪಠ್ಯಕ್ರಮದ ಅಧ್ಯಯನ ಪರೀಕ್ಷೆಗೆ ಸಹಕಾರಿಯಾದರೆ, ಸಾಹಿತ್ಯದ ಅಧ್ಯಯನ ವ್ಯಕ್ತಿಯ ಬೆಳವಣಿಗೆಗೆ ಪೂರಕವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.

 ಈ ಸಂದರ್ಭದಲ್ಲಿ ಶಾಸಕ ಭೈರತಿ ಬಸವರಾಜ್, ಬಾಲ ಭವನದ ಅಧ್ಯಕ್ಷೆ ಭಾವನಾ ರಾಮಣ್ಣ, ಚಲನಚಿತ್ರ ನಟ ಟೆನ್ನಿಸ್ ಕೃಷ್ಣ, ಕೇಂಬ್ರಿಡ್ಜ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಿ.ಕೆ.ಮೋಹನ್‌ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News