ನಗರದಲ್ಲಿ ಮಾರ್ಗ ಬದಲಾವಣೆ

Update: 2016-03-14 18:21 GMT

ಬೆಂಗಳೂರು, ಮಾ. 14: ನಗರದಲ್ಲಿ ಮಾ.15ರಂದು ವಿವಿಧ ಸಂಘಟನೆಗಳು ಪ್ರತಿಭಟನೆ ಹಾಗೂ ರ್ಯಾಲಿಗಳನ್ನು ಆಯೋಜಿಸಿರುವ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆ ಮಾರ್ಗಗಳಲ್ಲಿ ಬದಲಾವಣೆಯಾಗಿದೆ.

ನಗರದ ರೈಲು ನಿಲ್ದಾಣ, ಆನಂದರಾವ್ ವೃತ್ತ ಹಾಗೂ ಶೇಷಾದ್ರಿ ರಸ್ತೆಗಳಲ್ಲಿ ಸಂಚಾರ ವ್ಯತ್ಯಯವಾಗಬಹುದು. ಹೀಗಾಗಿ, ರಾಜಾಜಿನಗರ, ವಿಜಯನಗರ, ಮಲ್ಲೇಶ್ವರಂ ಮಾರ್ಗದಿಂದ ಬರುವ ವಾಹನ ಸವಾರರು ಆನಂದರಾವ್ ಫ್ಲೈ ಓವರ್ ಮೂಲಕ ನಗರದ ವಿವಿಧ ಕಡೆ ಸಂಚರಿಸಲು ಮಲ್ಲೇಶ್ವರಂ ಲಿಂಕ್ ರಸ್ತೆ ಮೂಲಕ ಶೇಷಾದ್ರಿಪುರಂ-ಬಸವೇಶ್ವರ ವೃತ್ತ, ಕೆ.ಆರ್.ವೃತ್ತ ಹಾಗೂ ಮಹಾರಾಣಿ ವೃತ್ತಗಳಿಗೆ ಸೇರಬಹುದಾಗಿದೆ.

 ಮಾಗಡಿ ರಸ್ತೆ ಓಕಳಿಪುರಂ ಜಂಕ್ಷನ್ ಮಾರ್ಗದಿಂದ ಬಂದು ಆನಂದರಾವ್ ಫೈಓವರ್ ಮೂಲಕ ನಗರದ ವಿವಿಧ ಮಾರ್ಗಗಳಿಗೆ ಹೋಗುವ ವಾಹನ ಸವಾರರು, ಇಲ್ಲಿನ ಹುಣಸೇಮರ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಬಿನ್ನಿಮಿಲ್-ಶಿರಸಿ, ಸರ್ಕಲ್-ಸಿಟಿ, ಮಾರ್ಕೆಟ್-ಟೌನ್‌ಹಾಲ್ ಮೂಲಕ ಹೋಗಬಹುದು. ಬಸವೇಶ್ವರ ಸರ್ಕಲ್‌ನಿಂದ ರೇಸ್‌ಕೋರ್ಸ್ ರಸ್ತೆ ಹಾಗೂ ಆನಂದರಾವ್ ವೃತ್ತದಿಂದ ನಗರದ ವಿವಿಧ ಸ್ಥಳಗಳಿಗೆ ಸಂಚರಿಸುವ ವಾಹನ ಸವಾರರು, ಬಸವೇಶ್ವರ ವೃತ್ತದ ಬಳಿ ಬಲ ತಿರುವು ಪಡೆದು ಪ್ಯಾಲೇಸ್ ರಸ್ತೆ-ಕೆ.ಆರ್.ವೃತ್ತದ ಮಾರ್ಗದಿಂದ ಸಾಗಬಹುದು. ಈ ಸಂಚಾರ ವ್ಯವಸ್ಥೆ ತಾತ್ಕಾಲಿಕವಾಗಿ ಜಾರಿಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News