ಬೆಂಗಳೂರು: ವಿದ್ಯಾಸಿರಿ ಯೋಜನೆಯಡಿ ವಸತಿ ಸೌಲಭ್ಯ ದೊರೆಯದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 1500 ರೂ - ಹೆಚ್.ಆಂಜನೇಯ
ಬೆಂಗಳೂರು.ಮಾ.17: ವಿದ್ಯಾಸಿರಿ ಯೋಜನೆಯಡಿ ವಸತಿ ಸೌಲಭ್ಯ ದೊರೆಯದ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 1500 ರೂ
ನೀಡುವುದಾಗಿ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಇಂದಿಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2014-15 ರಲ್ಲಿ 76 ಸಾವಿರ ವಿದ್ಯಾರ್ಥಿಗಳು ಹಾಗೂ 2015-16 ರಲ್ಲಿ 96 ಸಾವಿರ ವಿದ್ಯಾರ್ಥಿಗಳಿಗೆ ಈ ಸೌಲ
್ಯ ದೊರಕಿಸಿಕೊಡಲಾಗಿತ್ತು. 2014-15 ರಲ್ಲಿ ಐವತ್ತು ಸಾವಿರ ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ಒಂದೂವರೆ ಸಾವಿರ ರೂ ನೀಡಲು ನಿರ್ಧರಿಸಲಾಗಿತ್ತಾದರೂ ಕೊನೆಗೆ ಈ ಪ್ರಮಾಣ 76 ಸಾವಿರ ವಿದ್ಯಾರ್ಥಿಗಳಿಗೇರಿತ್ತು ಎಂದರು. ಇದೇ ರೀತಿ ಕಳೆದ ಸಾಲಿನಲ್ಲಿ ಎಪ್ಪತ್ತೈದು ಸಾವಿರ ವಿದ್ಯಾರ್ಥಿಗಳಿಗೆ ಈ ಸವಲತ್ತು ನೀಡಲು ತೀರ್ಮಾನಿಸಲಾಗಿತ್ತಾದರೂ ಕೊನೆಗೆ ಅದು ತೊಂಭತ್ತಾರು ಸಾವಿರ ವಿದ್ಯಾರ್ಥಿಗಳಿಗೆ ಲಭ್ಯವಾಗಿತ್ತು.
ಈ ಬಾರಿ ವಿದ್ಯಾಸಿರಿ ಯೋಜನೆಯಡಿ ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಮಾಸಿಕ ಸಾವಿರದ ಐದು ನೂರು ರೂಗಳನ್ನು ಒದಗಿಸಲು ನಿರ್ಧರಿಸಲಾಗಿದೆ ಎಂದ ಅವರು,ನಾವು ಮಾತನಾಡುವುದು ಕಡಿಮೆ.ಕೆಲಸ ಮಾಡುವುದು ಜಾಸ್ತಿ ಎಂಬುದಕ್ಕೆ ಇದು ಉದಾಹರಣೆ ಎಂದರು.
ನಮ್ಮ ಸರ್ಕಾರ ಬರುವ ಮುನ್ನ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ 1727 ವಿದ್ಯಾರ್ಥಿ ನಿಲಯಗಳಲ್ಲಿ 1,49,044 ವಿದ್ಯಾರ್ಥಿಗಳು ಸೌಲಭ್ಯ ಪಡೆಯುತ್ತಿದ್ದರು.ಆದರೆ ನಾವು ಬಂದ ನಂತರ 1797 ವಿಯಾರ್ಥಿ ನಿಲಯಗಳಲ್ಲಿ 1,75,482 ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ವಿವರಿಸಿದರು.
ಇದೇ ರೀತಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನಮ್ಮ ಸರ್ಕಾರ ಬರುವ ಮುನ್ನ 1972 ವಿದ್ಯಾರ್ಥಿ ನಿಲಯಗಳಲ್ಲಿ 1,32,232 ವಿದ್ಯಾರ್ಥಿಗಳು ಸೌಲಭ್ಯ ಪಡೆಯುತ್ತಿದ್ದರು.ಆದರೆ ಈಗ 2408 ವಿದ್ಯಾರ್ಥಿ ನಿಲಯಗಳಲ್ಲಿ 1,75,482 ಮಂದಿ ವಿದ್ಯಾರ್ಥಿಗಳು ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಅದೇ ರೀತಿ ಪರಿಶಿಷ್ಟ ಜಾತಿ, ಪಂಗಡದವರ ಕಲ್ಯಾಣಕ್ಕಾಗಿ ಕಳೆದ ಬಾರಿ ಹದಿನಾರು ಸಾವಿರ ಕೋಟಿ ರೂಗಳಿಗಿಂತ ಅಧಿಕ ಹಣವನ್ನು ಮೀಸಲಿಡಲಾಗಿತ್ತು. ಈ ಪೈಕಿ ಶೇಕಡಾ ಐವತ್ತರಷ್ಟು ಹಣವನ್ನು ವೆಚ್ಚ ಮಾಡಲಾಗಿದೆ.
ಮಾರ್ಚ್ ಅಂತ್ಯದ ವೇಳೆಗೆ ಶೇಕಡಾ ಎಂಭತ್ತರಷ್ಟು ಹಣವನ್ನು ವೆಚ್ಚ ಮಾಡಲಾಗಿದೆ.ಉಳಿದಂತೆ ಪರಿಶಿಷ್ಟಜಾತಿ,ಪಂಗಡದ ಕಾನೂನಿನ ಪ್ರಕಾರ ಬಾಕಿ ಉಳಿಯುವ ಶೇಕಡಾ ಇಪ್ಪತ್ತರಷ್ಟು ಹಣ (1818 ಕೋಟಿ ರೂ)ವನ್ನು ಮುಂದಿನ ವರ್ಷ ಬಳಸಿಕೊಳ್ಳಬಹುದು ಎಂದರು.
ನೆರೆಯ ಆಂಧ್ರಪ್ರದೇಶದಲ್ಲೂ ಪರಿಶಿಷ್ಟ ಜಾತಿ,ವರ್ಗದವರಿಗಾಗಿ ಹಣ ಮೀಸಲಿಡಲಾಗಿದೆ.ಆದರೆ ನಾವು ಒಂದು ಹೆಜ್ಜೆ ಮುಂದೆ ಹೋಗಿ ಒಂದು ವರ್ಷದಲ್ಲಿ ಖರ್ಚಾಗದೆ ಉಳಿದ ಹಣವನ್ನು ಮುಂದಿನ ವರ್ಷವೂ ಬಳಸಿಕೊಳ್ಳುವ ಕ್ಯಾರಿ ಓವರ್ ಪದ್ಧತಿಯನ್ನು ಜಾರಿಗೆ ತಂದಿದ್ದೇವೆ.
ಇದು ದೇಶದಲ್ಲೇ ಪ್ರಥಮ.ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಪರಿಶಿಷ್ಟ ಜಾತಿ,ಪಂಗಡದವರಿಗಾಗಿ ಮೀಸಲಿಟ್ಟ ಹಣವನ್ನು ಅವರಿಗಾಗಿಯೇ ವೆಚ್ಚ ಮಾಡಬೇಕು ಎಂದು ತೀರ್ಮಾನಿಸಿರುವುದು ಐತಿಹಾಸಿಕ ಎಂದು ಸಚಿವರು ಬಣ್ಣಿಸಿದರು.
ಸರ್ಕಾರ ಅಧಿಕಾರಕ್ಕೆ ಬಂದ ಮೂರು ವರ್ಷಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ 36 ಸಾವಿರ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. 25 ಸಾವಿರಕ್ಕೂ ಹೆಚ್ಚು ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ ಎಂದರು.