ಪಾಲಿಕೆಯಲ್ಲಿ ಕೋಟ್ಯಂತರ ರೂ.ಅವ್ಯವಹಾರಕ್ಕೆ ಕಾಂಗ್ರೆಸ್ ಕಾರಣ: ಪದ್ಮನಾಭರೆಡ್ಡಿ

Update: 2016-03-19 18:24 GMT

ಬೆಂಗಳೂರು, ಮಾ. 19: ಬಿಬಿಎಂಪಿ ವ್ಯಾಪ್ತಿಯ ಕಸ ವಿಲೇವಾರಿಯಲ್ಲಿ ಕೋಟ್ಯಂತರ ರೂ.ಗಳ ಅವ್ಯವಹಾರಕ್ಕೆ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ದೂರಿದ್ದಾರೆ.

ಶನಿವಾರ ನಗರದ ಬಿಬಿಎಂಪಿ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕಸ ವಿಲೇವಾರಿಗೆ ಟೆಂಡರ್ ಪ್ರಕ್ರಿಯೆ ಚಾಲೂ ಮಾಡಬೆೇಕು. ಆದರೆ, ಪಾಲಿಕೆಯಲ್ಲಿ ಡಿಸಿ ಬಿಲ್ ಮೂಲಕ ಪ್ರತಿ ತಿಂಗಳು 37 ಕೋಟಿ ರೂ. ಬಿಡುಗಡೆಯಾಗುತ್ತಿದ್ದು, ಇದರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಕೂಡಲೇ ಪ್ರಕರಣ ಕುರಿತಂತೆ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಕಸ ವಿಲೇವಾರಿಯ 95 ಪ್ಯಾಕೇಜ್‌ಗಳಿಗೆ ಮೂರು ತಿಂಗಳ ಹಿಂದೆ ಟೆಂಡರ್ ಕರೆಯಲಾಗಿತ್ತು. ಇದರಲ್ಲಿ 30 ಪ್ಯಾಕೇಜ್‌ಗಳಿಗೆ 20 ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಬಿಡ್ ದರ ಹೆಚ್ಚಾಗಿದೆ ಎಂದು ಅವರಿಗೆ ಟೆಂಡರ್ ನೀಡದೆ ಡಿಸಿ ಬಿಲ್ ಮೂಲಕ ಹಣ ಬಿಡುಗಡೆ ಮಾಡುತ್ತಿರುವುದು ಕೆಪಿಟಿಟಿ ಕಾಯ್ದೆ ಪ್ರಕಾರ ಅಕ್ಷಮ್ಯ ಎಂದು ಆರೋಪಿಸಿದರು.

ಕಾಂಗ್ರೆಸ್‌ನ ದುರಾಡಳಿತದಿಂದ ನಗರದ ಒಂದು ಕೆ.ಜಿ. ಕಸ ಸಾಗಿಸಲು 10 ರೂ. ನೀಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲಿ ಉತ್ಪತ್ತಿಯಾಗುತ್ತಿರುವ ನಾಲ್ಕೂವರೆ ಸಾವಿರ ಟನ್ ಕಸದಲ್ಲಿ ಕೇವಲ 2ರಿಂದ ಎರಡೂವರೆ ಸಾವಿರ ಟನ್ ಕಸವನ್ನು ಮಾತ್ರ ಸಾಗಿಸಲಾಗುತ್ತಿದೆ. ಉಳಿದ ಎರಡು ಸಾವಿರ ಟನ್ ಕಸವನ್ನು ರಸ್ತೆಬದಿಗಳಲ್ಲಿ, ರಾಜಕಾಲುವೆಗಳಲ್ಲಿ, ತೆರೆದ ಪ್ರದೇಶಗಳಲ್ಲಿ ಸುರಿಯಲಾಗುತ್ತಿದೆ ಎಂದು ಹೇಳಿದರು.

ಈ ಕೂಡಲೇ ರಾಜ್ಯ ಸರಕಾರ ಕಸ ವಿಲೇವಾರಿಯಲ್ಲಿ ಆಗುತ್ತಿರುವ ಕೋಟ್ಯಂತರ ನಷ್ಟ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಪ್ರಕರಣ ಕುರಿತಂತೆ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News