‘ಕನ್ನಡ ಪುಸ್ತಕಗಳ ಮಾರಾಟಕ್ಕೆ ಮಳಿಗೆಗಳ ಕೊರತೆ’

Update: 2016-03-20 18:02 GMT

ಬೆಂಗಳೂರು, ಮಾ. 20: ರಾಜ್ಯಗಳಿಲ್ಲಿ ಕನ್ನಡ ಪುಸ್ತಕಗಳನ್ನು ಮಾರಾಟ ಮಾಡಲು ಮಳಿಗೆಗಳ ಕೊರತೆ ಇದೆ. ಈ ಪರಿಣಾಮ ಲೇಖಕರ ಮತ್ತು ಪ್ರಕಾಶಕರಿಗೆ ಆರ್ಥಿಕವಾಗಿ ಹಿನ್ನಡೆಯಾಗುತ್ತಿದೆ ಎಂದು ಹಿರಿಯ ಪತ್ರಕರ್ತ ಜೋಗಿ ಆತಂಕ ವ್ಯಕ್ತಪಡಿಸಿದ್ದಾರೆ.

ರವಿವಾರ ಬನ್ನೇರುಘಟ್ಟ ರಸ್ತೆಯಲ್ಲಿನ ರಾಯಲ್ ಮೀನಾಕ್ಷಿ ಮಾಲ್ ಸಪ್ನ ಬುಕ್ ಹೌಸ್‌ನಲ್ಲಿರುವ ತನ್ನ ಮಳಿಗೆಯಲ್ಲಿ ಆಯೋಜಿಸಿದ್ದ ಲೇಖಕ ಡಾ.ಕೆ.ಬಿ. ಶ್ರೀಧರ್ ರಚಿಸಿರುವ ‘ಪಂಚಮುಖಿ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಇಂದು ಕೇವಲ ಅಕಾಡಮಿಕ್ ಕ್ಷೇತ್ರದವರಿಗೆ ಮಾತ್ರ ಸೀಮಿತವಾಗಿಲ್ಲ. ವೈದ್ಯರು, ನಿರ್ವಾಹಕರು, ಆಟೋರಿಕ್ಷಾ ಚಾಲಕರು ಸೇರಿದಂತೆ ಸಾಹಿತ್ಯ ರಂಗದ ಕಡೆ ಮುಖ ಮಾಡಿದ್ದಾರೆ. ಪರಿಣಾಮ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವರ್ಷವೊಂದಕ್ಕೆ ಸರಿ ಸುಮಾರು ಎಂಟು ಸಾವಿರ ಪುಸ್ತಕಗಳು ಪ್ರಕಟಗೊಳ್ಳುತ್ತಿವೆ ಎಂದರು.

ಆದರೆ, ಈ ಪ್ರಮಾಣದ ಪುಸ್ತಕಗಳನ್ನು ಮಾರಾಟ ಮಾಡಲು ರಾಜ್ಯದಲ್ಲಿ ಮಳಿಗೆಗಳ ಕೊರತೆಯಿದೆ. ಅಲ್ಲದೆ ಹಳೆಯ ಪುಸ್ತಕ ಮಳಿಗೆಗಳು ಮುಚ್ಚಿರುವ ಪರಿಣಾಮ ಲೇಖಕರು ಮತ್ತು ಪ್ರಕಾಶಕರು ಮುದ್ರಿಸಿರುವ ಪುಸ್ತಕಗಳನ್ನು ತಮ್ಮಲ್ಲಿಯೇ ಇರಿಸಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ ಎಂದು ಆತಂಕಪಟ್ಟರು. ಲೇಖಕರು ಪ್ರಥಮ ಪ್ರಯತ್ನದಲ್ಲೇ ಉತ್ತಮ ಪುಸ್ತಕವನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಈ ಪುಸ್ತಕದಲ್ಲಿ ಬಾಲ್ಯದ ನೆನಪು, ಯೌವನದ ತೊಳಲಾಟಗಳನ್ನು ಬಿಚ್ಚಿಟ್ಟಿದ್ದಾರೆ. ಅಲ್ಲದೆ ವಿಶೇಷವಾಗಿ ಮೇಲ್ವರ್ಗದ ದಬ್ಬಾಳಿಕೆಯ ವಿರುದ್ಧ ನಾಲ್ವರು ಯುವ ಕ್ರಾಂತಿಕಾರಿಗಳ ಹೋರಾಟವನ್ನು ಅಕ್ಷರ ರೂಪದಲ್ಲಿ ಚಿತ್ರಿಸಿದ್ದಾರೆ ಎಂದು ಜೋಗಿ ಕೃತಿಯ ಕೃತಿ ಉಲ್ಲೇಖಿಸಿದರು. ಕಾರ್ಯಕ್ರಮದಲ್ಲಿ ಲೇಖಕ ಡಾ.ಕೆ.ಬಿ. ಶ್ರೀಧರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News